ಹಸಿರ ಹುಚ್ಚು ತುಸು ಹೆಚ್ಚು

ಮೈಯಲ್ಲಿ ದೆವ್ವ ಹೊಕ್ಕವಳಂತೆ ಕೈತೋಟದಲ್ಲಿ ನೆಲ ಅಗೆದು ಗಿಡ ನೆಡುತ್ತಿದ್ದೆ. ಹೊತ್ತು ಮುಳುಗುವುದರೊಳಗೆ ಗೆಳತಿಯ ಮನೆಯಿಂದ ತಂದ ಗಿಡಗಳ ಕಟಿಂಗ್‍ಗಳನ್ನೆಲ್ಲ ನೆಟ್ಟು ಮುಗಿಸ ಬೇಕಿತ್ತು. ಮಗ ಅಮ್ಮಾ ಹಸಿವು ..ಎರಡನೆಯ ಬಾರಿಗೆ ಕೂಗಿದ.ಕರೆದಿದ್ದು ಕೇಳಿದರೂ ಕೇಳದಂತೆ, ಹೆತ್ತ ಕರುಳು ಚುರುಗುಟ್ಟಿದರೂ ಅಲಕ್ಷಿಸಿ ಎಲ್ಲ ಗಿಡಗಳನ್ನು ನೆಟ್ಟು ಮನೆಯೊಳಗೆ ಸೇರಿದೆ.’ನಿನಗೆ ನನಗಿಂತಾ ಗಿಡದ ಮೇಲೆ ಹೆಚ್ಚು ಪ್ರೀತಿ’ಎಂದುಮಗ ಕೆನ್ನೆ ಉಬ್ಬಿಸಿ ಕೃತಕ ಸಿಟ್ಟು ತೋರಿದ.ಸರಬರನೇ ಅಡುಗೆ ಮಾಡುವಾಗ ಆಯಿಯ ಮಾತುಗಳು ನೆನಪಾದವು.

‘ಮಳೆಗಾಲದಲ್ಲಿ ಹಿತ್ಲ ಕೆಲಸಾ ಮಾಡಲ್ಲೆ ಎಷ್ಟ ಚೊಲೋ ಆಗ್ತು.ಮಳೆ ನೀರು ಕುಡ್ದು  ನೆಲಾ ಮೆತ್ತಗಾಗಿರ್ತು.ಅಗೆದು ಗಿಡಾ ನೆಡಲ್ಲೆ ಸಸಾರಾ. ಆಳಗಕ್ಕಿಗೆ ಗಂಡಂಗೆ ಹೊಂಡಾ ಹೊಡಕೊಡಿ ಹೇಳಿ ದಮ್ಮಯ್ಯಾ ಇಕ್ಕ ಕೆಲಸಿಲ್ಲೆ, ನಾವೇ ಆರಾಮಾಗಿ ಅಗೆದು ಹುಗದುಗಿಡಾ ನೆಡಲಕ್ಕು.ಇಡೀ ದಿನಾ ಹಿತ್ಲಲ್ಲೇ ಬೇಕಾದ್ರೆ ಕಳಿಲಕ್ಕು.ಅಡುಗೆ ಮಾಡಲ್ಲೆ ಬೇಜಾರು.ಅಷ್ಟಷ್ಟು ಹೊತ್ತಿಗೆ ಹಶಿವಾತು ಹೇಳಿ ಬೊಬ್ಬೆ ಹಾಕುವ ಮನೆ ಜನರನ್ನೆಲ್ಲದನಾ ಬೆರಿಶಿದ ಹಾಗೆ ಮೇವಿಗೆ ಹೊಡ್ದು ಕಳಸಲ್ಲೆ ಬರಕ್ಕಾಗಿತ್ತು ಅಲ್ಲದನೇ ಮಗಳೆ’ ಎಂದು ಆಯಿ ಕಿಲಿಕಿಲಿ ನಗುತ್ತಿದ್ದಳು.  ಮಳೆಗಾಲದಲ್ಲಿ ಮಲೆನಾಡಿನಲ್ಲಿ ಹೇರಳವಾಗಿ ಸಿಗುವ  ಹಲಸಿನ ಹಣ್ಣು ನೇರಳೆ, ಸಳ್ಳೆಹಣ್ಣುಗಳನ್ನು ತಿಂದು ಕೊಂಡಿರಬಹುದಲ್ಲ ಎಂದು ಬಾಲಕಿಯಾದ ನಾನು( ಕಾಡು ಹಣ್ಣಿನ ಮರುಳಿ) ವಿಚಾರ ಮಾಡುತ್ತಿದ್ದೆ. ಆದರೆ ದೊಡ್ಡವರು ಹಾಗೆಲ್ಲ ತಿಂದುಕೊಂಡು ಇರಲಿಕ್ಕುಂಟೇ? ಅದರಲ್ಲಿಯೂ ಗಂಟೆಗೊಮ್ಮೆ ಚಹಾ ಕುಡಿಯುವ ಅಪ್ಪಯ್ಯ?ಇಡೀ ದಿನಾ ಹಿತ್ಲಲ್ಲಿ ಕಾಲ ಕಳೆಯುವ ಆಸೆಯ ಹಸಿರುಮಳ್ಳಿ ಆಯಿಯದ್ದು ಯಾವಾಗಲೂ ಹಗಲು ಕನಸೇ ಆಗುತ್ತಿತ್ತು..

ಆಯಿಯಂತೆಯೇ ಮಲೆನಾಡ ಹೆಂಗಸರಿಗೆಲ್ಲರಿಗೂ ಗಿಡ ನೆಡುವ ಉತ್ಸಾಹ ಆನುವಂಶಿಕವಾದದ್ದೇ ಇರಬೇಕು ಎನ್ನುವುದು ನನಗಿರುವ ಗುಮಾನಿ..ಬೇಸಿಗೆಯಲ್ಲಿ ಅಡಿಕೆ ಒಣಗಿಸುವ ಅಂಗಳದ ಯಜಮಾನಿಕೆ ಗಂಡಸರದ್ದಾಗಿದ್ದರೆ ಮಳೆಗಾಲ ಶುರುವಾದಾಗ ಅದೇ ಅಂಗಳದ ಯಜಮಾನಿಕೆ ಹೆಂಗಸರದ್ದಾಗಿ ಬದಲಾಗುತ್ತದೆ.ಅಂಗಳದ ತುಂಬ ಗೇಣೆತ್ತರದ ಓಳಿಯಲ್ಲಿ ಬೆಂಡೆ ಬೀನ್ಸ ಬಿತ್ತುತ್ತಾರೆ. ಮೊಳದೆತ್ತಕ್ಕೇರಿಸಿದ ಮಣ್ಣಿನ ಓಳಿಯಲ್ಲಿ ಡೇರೆ ಗಿಡ ನೆಡುವ ಸಂಭ್ರಮ.ಮರಳ ಚೀಲದಲ್ಲಿಅಡಗಿಕೊಂಡ ಮಗುವಿನಂತಹ ಡೇರೆ ಗಡ್ಡೆಗಳು ಮಣ್ಣಿಗೆ ಬಿದ್ದು ಮಳೆನೀರುಂಡು ಸೊಕ್ಕಿ ಚಿಗಿತುಎದ್ದು ಹಸಿರಾಗುವುದನ್ನು ನೋಡಿ ಹೆಂಗಸರ ಕಣ್ಣಲ್ಲಿ ಹೂವಿನಂತಹ ಕನಸು.ಇದು ನಕ್ಷತ್ರ ಕಡ್ಡಿ, ಇದು ಲಿಲ್ಲಿಪುಟ್ಟು, ಅದು ಹಂಡಬಂಡಾ, ಹಳದಿ ಕೊಟ್ಟೆ, ಎಂದುಗಿಡದ ಎಲೆ, ಮೊಗ್ಗೆಯಾಕಾರದ ಆಧಾರದಲ್ಲಿಯೇ ವೀಕ್ಷಕ ವಿವರ ನೀಡುತ್ತಾರೆ. ನೂರಾರು ಬಗೆಯ ಡೇರೆ ಗಿಡದ ಸಂಗ್ರಹಕಾರ್ತಿಯರು  ಮಲೆನಾಡಿನಲ್ಲಿ ಸಿಗುತ್ತಾರೆ. ಯಾವುದೇ ನಗರದ ಪುಷ್ಪ ಪ್ರದರ್ಶನವನ್ನು ಮೀರಿಸುವ ವೈವಿಧ್ಯ ಮಲೆನಾಡಿನ ಮನೆಯಂಗಳಗಳಲ್ಲಿ ಕಾಣಸಿಗುತ್ತದೆ! ಅತ್ಗೆ ಆನು ಈ ಗಿಡಾ ನಿಂಗೆ ಕೊಡ್ತಿ.  ನಿಮ್ಮನೆಲಿ ಇದ್ದಿದ್ದ ಆ ಗಿಡಾಯಂಗೆ ಕೊಡು ಅಕಾ.. ಹೀಗೆ ವಿನಿಮಯದಲ್ಲಿಯೇ ಸಸ್ಯ ವೈವಿಧ್ಯ ಕಾಪಾಡುವ ಮಾನಿನಿಯರು ಅವರು..

ಬಳುಕು ಗಿಡಗಳಿಗೆ ಆಧಾರಕ್ಕೆ ಕೋಲು ಹಗರು ದಬ್ಬೆಯ ಆಸರೆ ಕೊಡಲು ಗಂಡಸರ ಮನ ಒಲಿಸುವುದೇನು ಸಣ್ಣ ಕೆಲಸ ಅಲ್ಲವೇ ಅಲ್ಲ. ಹೋಯ್ ಇವಿಷ್ಟ ಗಿಡಕ್ಕೆ ಗೂಟ ಕಡಿಸಿ ಕೊಡ್ರೋ, ಒಂದ ಹನಿ ಓಳಿ ಮಾಡಿ ಕೊಡಿನೋಡ್ವಾ, ಚಪ್ಪರ ಹಾಕಿ ಕೊಡ್ರೋ ಎಂದೆಲ್ಲದಮ್ಮಯದ ಗುಡ್ಡೆ ಹಾಕುವ ಕೋಮಲ ದ್ವನಿಗೆಎಂತಕ್ಕೆ ಬೇಕಪ್ಪಾಇಷ್ಟೊಂದು ಹೂವಿನ ಗಿಡಾ?ಗೊಬ್ಬರಾ ಆಳಲೆಕ್ಕಾ ಎಲ್ಲಾ ಹಾಳು, ಒಂದಷ್ಟುತರಕಾರಿ ಬೆಳದ್ರೆ ದುಡ್ಡಾರೂ ಉಳಿತಿತ್ತು. ಗಿಡಾ ಬೆಳಿಯದು ಫೋಟೋ ತೆಗಿಯದು ಫೇಸ್ಬುಕ್ಕಿಗೆ ಹಾಕದುಎಲ್ಲಾ ಮಳ್ಳೆಯಾ ಕವಳ ತುಂಬಿದ ಮೊಗ ಕೊಂಚ ಮೇಲೆತ್ತಿ ಹೇಳುವ ಗಡಸುದನಿಯ ಪ್ರತಿಕ್ರಿಯೆ! ಇದು ಮನೆ ಮನೆಯಲ್ಲಿ ನಡೆಯುವ ಜೋಗುಲ್ಬಂದಿ!(ಜಗಳಬಂದಿ.)(ಈ ವಿಷಯದಲ್ಲಿ ಹೆಂಡತಿಗೆ ಸಂಪೂರ್ಣ ಮನಸ್ಸಿನಿಂದ ಸಹಾಯ ಸಹಕಾರ ನೀಡುವ ಗಂಡಸರು ಅಲ್ಲಲ್ಲಿ ತೀರಾ ವಿರಳವಾಗಿ ಕಾಣ ಸಿಗುತ್ತಾರೆ)

ಗದ್ದೆ ಕೊಯ್ಲಾದ ಮೇಲೆ ಒಣ ಹುಲ್ಲು ತುಂಬಿಕೊಂಡು ಲಾರಿಗಳು ಸಂಚರಿಸಿದರೆ ಮಳೆಗಾಲದಲ್ಲಿ ಹೊರೆ ಹೂವಿನ ಗಿಡವನ್ನು ಹೊತ್ತ ನಾರಿಮಣಿಯರನ್ನು ಊರಿಂದೂರಿಗೆ ಸಾಗಿಸುವ ಪುಣ್ಯದ ಕೆಲಸವನ್ನು ಬಸ್ಸುಗಳು ಮಾಡುತ್ತವೆ. ಈ ಹೂವಿನ ಗಿಡಗಾತಿಯರ ಜೊತೆಯಲ್ಲಿ ಓಡಾಡುವವರಿಗೆ ಗುಲಾಬಿ ಮುಳ್ಳಿನ ಗೀರುಗಳು ಉಚಿತ! ಸಮಾನ ಮನಸ್ಕ ಹೆಂಗಸರು ಒಬ್ಬರ ಚೀಲದೊಳಗೊಬ್ಬರು ಇಣುಕಿ ನೋಡಿ ಸ್ನೇಹ ಬೆಳೆಸಿ ಬಸ್ಸಿನಲ್ಲೇ ಗಿಡ ವಿನಿಮಯ ಮಾಡುವುದೂ ಸಾಮಾನ್ಯ. ಮಲೆನಾಡು ಮಳೆನಾಡಾದಾಗ ಹೆಂಗಸರ ಬಾಯಲ್ಲಿ ಬರೀ ಗಿಡ ನೆಡುವ ಮಾತುಗಳೇ.

   ‘ಮದ್ದು ಹೊಡ್ದಾಜಿಲ್ಲೆ, ಕೊಳೆ ರೋಗ ಬಂದು ಅಡಿ ಕೆಉದುರಿರೆ ಜೀವ್ನಾ ಮಾಡದು ಹ್ಯಾಂಗನ ಹೇಳಿ ಒಂದು ಚೂರು ಚಿಂತಿಲ್ಲೆ ಈ ಹೆಂಗಸರಿಗೆ ಗಿಡಾ ನೆಡದೇ ಕಸುಬು ತ್ವಾಟಕ್ಕೆ ಹಾಕಲ್ಲೆ ಹೇಳಿ ರಾಶಿ ಹೊಡದಿಟ್ಟ ಗೊಬ್ರಾ ಎಲ್ಲ ಹೂವಿನ  ಗಿಡದ ಬುಡಕ್ಕೆ ಹಾಕಿಬಿಡ್ತ’ ಎಂಬ ಗಂಡಸರ ಕೊಟಕೊಣ ಮಾತುಗಳಿಗೆ ಜಾಣಕಿವುಡು ಪ್ರದರ್ಶಿಸುವ ಕಲೆಯಲ್ಲಿ ಹೆಂಗಸರು ಪರಿಣತಿ ಪಡೆದವರಂತಿರುತ್ತಾರೆ.

ಇಂಥವರ ಒಡನಾಟದಲ್ಲಿಯೇ ಬೆಳೆದ ನಾವಾದರೂ ಏನು ಕಡಿಮೆ?ಯಾವ ಪೇಟೆ ಪಟ್ಟಣ ನಗರ ಸೇರಲಿ ಒಂಚೂರು ಜಾಗ ಕಂಡರೆ ಸಾಕು. ಮಲೆನಾಡಿನ ಮರುಸೃಷ್ಟಿಗೆ ಟೊಂಕಕಟ್ಟಿ ನಿಲ್ಲುವೆವು. ನೆಲವಾದರೇನು ತಾರ್ಸಿಆದರೇನು..ಎಂದು ಹಾಡುತ್ತ ತಂಬ್ಳಿಗೆ ಬೇಕಾದ  ಎಲವರಿಗೆ ಸೊಪ್ಪು, ಚಕ್ರಮುನಿ, ಒಂದೆಲಗ, ಕನ್ನೆಕುಡಿ, ಸಂಬಾರ ಸೊಪ್ಪು,ಬಸಳೆ ಸೊಪ್ಪು.. ದೇವ್ರ ಪೂಜೆಗೆ ಬೇಕೆಂದು ಸೇವಂತಿಗೆ, ಮಲ್ಲಿಗೆ, ದಾಸವಾಳ, ಗುಲಾಬಿ, ತುಳಸಿ ಹೋಗೆ ಹತ್ತು ಹಲವು ಗಿಡಬೆಳೆಸಿ ನಿಮ್ಮಿಂದಾಗಿ ನಮ್ಮ ಬಡಾವಣೆಗೆ ಮಂಗ ಹಾವು ಚೇಳು ಜೇನ್ನೋಣ ಎಲ್ಲಾ  ಬರಲಾರಂಭಿಸಿವೆ..ಎಂಬೆಲ್ಲ ಬಡಾವಣೆಯ ಜನರ ದೂರುಗಳಿಗೆ ಕಿವಿ ಕಿವುಡಾಗಿಸಿಕೊಂಡು ಮುಗುಳ್ನಗುವ ಕಲೆ ರೂಢಿಸಿಕೊಂಡು ಬಿಡುತ್ತೇವೆ…ನಮ್ಮಂಗಳದ ಗಿಡ ನೋಡಿಯೇ ನೀವು ಮಲೆನಾಡಿನವರಿರ ಬೇಕು ಅಲ್ವಾ ಎಂದು ಅದೆಷ್ಟೋ ಜನ ಕೇಳಿ ಹಸಿರೈಡೆಂಟಿಟಿ  ಕೊಟ್ಟಿದ್ದಾರೆ. ನಾನು  ದೇವ ಲೋಕದಿಂದ ಸುರ ಪಾರಿಜಾತವನ್ನು ತಂದುಕೊಡು ಎಂದು ಕೃಷ್ಣನಲ್ಲಿ ಕೇಳುವ ಸತ್ಯಭಾಮೆಯಂತಾಗಲಾರೆ. ಸೌಗಂಧಿಕಾ ಪುಷ್ಟ ತಂದುಕೊಡು ಎಂದು ಭೀಮನಲ್ಲಿ ಹಠ ಹಿಡಿಯುವ ದ್ರೌಪದಿಯಂತಾಗಲಾರೆ.ಆದರೂ ಕಲಿಗಾಲಕ್ಕೆ ತಕ್ಕಂತೆ ಬೇಡಿಕೆ ಇಡುವೆ…ರ್ರೀ ಈ ಮಳೆಗಾಲದಲ್ಲಿ ನರ್ಸರಿಯಿಂದ ನಾಲ್ಕು ಚೆಂದದ ಗಿಡಗಳೂ……

 ಹಸಿರ ಹುಚ್ಚು ತುಸು ಹೆಚ್ಚೋ ಕಡಿಮೆಯೋ ಇರುವುದು ಒಳ್ಳೆಯದೇ..ಈ ವಿಷಯದಲ್ಲಿ ಸಂಶಯವಿದ್ದರೆ  ನಿವಾರಣೆಗೆ ಮಳೆಗಾಲದಲ್ಲಿ ಒಮ್ಮೆ ಮಲೆನಾಡಿಗೆ ಹೋಗಿ  ಬನ್ನಿ

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter