ಲಕ್ಷ್ಮಣ ಮತ್ತು ಸರೋಜ ತಮ್ಮ ತುಂಬು ಕುಟುಂಬದ ಬಂಧುಗಳನ್ನೂ ಮತ್ತು ಹುಟ್ಟಿ ಬೆಳೆದ ಊರನ್ನೂ ನಟ್ಟಿರುಳಿನಲ್ಲಿ ತೊರೆದು ನೂತನ ಬದುಕನ್ನರಸುತ್ತ ಹೊರಟಿದ್ದರು. ಅಡ್ಡಪಡ್ಪುವಿನಿಂದ ಕಾಸರಪೇಟೆಯವರೆಗಿನ ಸುಮಾರು ಹತ್ತು ಮೈಲು ದೂರದ ಕಾಲು ದಾರಿಯು ಲಕ್ಷ್ಮಣನಿಗೆ ಚಿರಪರಿಚಿತವಿತ್ತು. ಹಿಂದೆಲ್ಲಾ ಅದೆಷ್ಟೋ ಬಾರಿಆಟ, ಕೋಲ ಮತ್ತು ನಾಟಕ ನೋಡಲುಇದೇ ದಾರಿಯಲ್ಲಿ ಅವನು ಎಂತಹ ಅಪರಾತ್ರಿಯಲ್ಲೂಅಳುಕಿಲ್ಲದೆ ಒಂಟಿಯಾಗಿ ಹೋಗಿ ಬರುತ್ತಿದ್ದ. ಆದರೆ ಅಂದಿನ ಆ ಉತ್ಸಾಹ ಮತ್ತುಧೈರ್ಯಇಂದೇಕೋ ತಾನು ಸರೋಜಾಳೊಡನೆ ನಡೆಯುತ್ತಿರುವಾಗ ಸಂಪೂರ್ಣ ಕೈಕೊಟ್ಟಿರುವುದು ಅವನ ಗಮನಕ್ಕೆ ಬರುತ್ತಿತ್ತು. ಹಾಗಾಗಿ ತನ್ನ ಕಂಗೆಟ್ಟ ಮನಸ್ಸಿಗೆ ಹಿಂದಿನ ಕೆಚ್ಚನ್ನುಮರಳಿ ತುಂಬಲು ಪ್ರಯತ್ನಿಸುತ್ತ ಸಾಗುತ್ತಿದ್ದ.
ಕಾರಿರುಳಿನದೆವ್ವದಂತೆ ದಾರಿಯುದ್ದಕ್ಕೂ ಮಲಗಿದ್ದ ಕುರುಚಲು ಕಾಡುಗುಡ್ಡೆ,ಹೊಲಗದ್ದೆಗಳ ನಡುವೆ ಮತ್ತು ಮುರಗಲ್ಲಿನ ಒರಟು ನೆಲದ ಮೇಲೆ ಮಸುಕಾದ ತಿಂಗಳ ಬೆಳಕು ಹರಡಿತ್ತು.ಆ ಸರಿರಾತ್ರಿಯಲ್ಲಿ ತನ್ನ ಪ್ರಿಯಕರನೊಂದಿಗೆ ವಿಚಲಿತ ಮನಸ್ಸಿನಿಂದ ಹೆಜ್ಜೆ ಹಾಕುತ್ತಿದ್ದ ಸರೋಜಅಲ್ಲಲ್ಲಿ ಎಡವುತ್ತ, ಏದುಸಿರು ಬಿಡುತ್ತ ನಡೆಯುತ್ತಿದ್ದಳು ತೀರ ಆಯಾಸಗೊಂಡಿದ್ದಳು.ರಾತ್ರಿ ಸುಮಾರು ಎರಡು ಗಂಟೆಯವರೆಗೆ ಒಂದೇಸಮನೆ ನಡೆದವಳಿಗೆ ನಂತರ ಬಳಲಿಕೆಯಿಂದಲೂ, ನಿದ್ದೆಯಿಂದಲೂ ಮುಂದೆ ಸಾಗಲು ತ್ರಾಣವೇ ಉಳಿಯಲಿಲ್ಲ. ಯಾವತ್ತೂ ಅಷ್ಟೊಂದು ನಲುಗದಿದ್ದವಳ ಕೋಮಲ ಪಾದಗಳು ಇಂದು ಪ್ರತಿ ಹೆಜ್ಜೆಗೂ ನರಳುತ್ತಿದ್ದವು. ಹಾಗಾಗಿ,‘ಲಕ್ಷ್ಮಣ, ನನಗೆ ಸಾಕಾಯಿತನಾ.ಇನ್ನು ಮುಂದೆ ನಡೆಯಲು ಸಾಧ್ಯವಿಲ್ಲವಾ. ಇಲ್ಲೇ ಎಲ್ಲಾದರೂ ಸ್ವಲ್ಪಹೊತ್ತು ಕುಳಿತು ಸುಧಾರಿಸಿಕೊಂಡು ಹೋಗುವನಾ…!’ ಎಂದು ಒತ್ತರಿಸಿ ಬಂದ ದುಃಖವನ್ನು ಹತ್ತಿಕ್ಕುತ್ತ ಹೇಳಿದಳು.
ಆದರೆ ಲಕ್ಷ್ಮಣ ಮೊದಲೇ ಭಯದಿಂದ ವಿಹ್ವಲನಾಗಿದ್ದ. ಹಾಗಾಗಿ ಅವಳ ಮಾತು ಕೇಳಿದವನು,‘ಅಯ್ಯಯ್ಯೋ, ಬೇಡ ಮಾರಾಯ್ತೀ! ನಾವು ಆದಷ್ಟು ಬೇಗ ಈ ಊರನ್ನು ಬಿಡಬೇಕು. ಇಲ್ಲದಿದ್ದರೆ ಮನೆಯವರು ತಮ್ಮ ಮಾನಮರ್ಯಾದೆ ಉಳಿಸಿಕೊಳ್ಳಲು ನಮ್ಮನ್ನು ಹಿಡಿದು ಕೊಂದು ಹಾಕಲೂ ಹೇಸಲಿಕ್ಕಿಲ್ಲ! ಬೆಳಗಾಗುವುದರೊಳಗೆ ಎಷ್ಟು ಸಾಧ್ಯವೋ ಅಷ್ಟು ದೂರ ಹೋಗಿ ಬಿಡುವ. ಸ್ವಲ್ಪ ಗಟ್ಟಿ ಮನಸ್ಸು ಮಾಡಿ ಹೆಜ್ಜೆ ಹಾಕು ಮಾರಾಯ್ತೀ. ಕಾಸರಪೇಟೆಗೆಇನ್ನೇನು ಒಂದೆರಡು ಮೈಲಿಯಷ್ಟೇ ಇರುವುದು!’ ಎಂದು ಸರೋಜಾಳನ್ನು ಸಂತೈಸುತ್ತ ಮುನ್ನಡೆಯುತ್ತಿದ್ದ. ಆದರೆ ಆಕೆ ಇನ್ನೇನು ಕುಸಿಯುವುದರಲ್ಲಿದ್ದವಳು,‘ಅಯ್ಯಯ್ಯೋ!ಇಲ್ಲವಾ, ನನ್ನಿಂದಿನ್ನು ಒಂದು ಹೆಜ್ಜೆಮುಂದಿಡಲಿಕ್ಕೂ ಆಗುವುದಿಲ್ಲ!’ ಎನ್ನುತ್ತ ದಾರಿಯ ಬದಿಯದೊಡ್ಡ ಮರವೊಂದರ ಬುಡಕ್ಕೊರಗಿ ಕುಳಿತು ಅಳುವುದಕ್ಕೇ ಶುರು ಮಾಡಿದಳು. ಆಗ ಲಕ್ಷ್ಮಣ ದಂಗಾದ. ಆದರೂ ತನ್ನ ಸಂಗಾತಿಯ ಸ್ಥಿತಿಯನ್ನುಕಂಡು ಮರುಕ ಹುಟ್ಟಿತು.‘ಏನಾಯ್ತಾ ಸರೂ…! ಇನ್ನು ಸ್ವಲ್ಪ ದೂರವನಾ… ಪೇಟೆ ಬಂದುಬಿಡುತ್ತದೆ. ಅಲ್ಲೇ ಎಲ್ಲಾದರೂ ವಿಶ್ರಾಂತಿ ತೆಗೆದುಕೊಳ್ಳುವ ಆಗದಾ…?’ ಎಂದು ಮೃದುವಾಗಿ ಅವಳನ್ನು ಎಬ್ಬಿಸಹೋದ. ಆದರೆ ಅವಳು ಕುಳಿತಲ್ಲಿಂದ ಒಂದಿನಿತೂ ಅಲ್ಲಾಡಲಿಲ್ಲ. ಆದ್ದರಿಂದ ಲಕ್ಷ್ಮಣನೂ ವಿಧಿಯಿಲ್ಲದೆ ಅವಳೊಂದಿಗೆ ಕುಳಿತುಕೊಂಡ.
ಹದಿಹರೆಯದ ಕಾಮನೆಗಳ ಸೆಳೆತವೋ, ಹೆತ್ತವರು ಅವಮಾನಿಸಿದರೆಂಬ ರೋಷದ ಕಿಚ್ಚೋ ಅಥವಾ ಆ ದೇವರೇ ಗಂಟು ಹಾಕಿ ಕಳುಹಿಸಿದ ಬಾಂಧವ್ಯವೋ ಒಟ್ಟಾರೆ ಯಾವುದೋ ಒಂದರ ತೀವ್ರ ಒತ್ತಡಕ್ಕೆ ಬಲಿಯಾಗಿದ್ದ ಎಳೆಯ ಮನಸ್ಸುಗಳೆರಡೂದುಡುಕಿ ನಿರ್ಧರಿಸಿ ಹೊರಟ ಪ್ರಯಾಣಕ್ಕೊಂದು ಗೊತ್ತುಗುರಿಯಿರಲಿಲ್ಲ. ತಾವು ಹಿಡಿದ ದಾರಿ ಎತ್ತ ಕೊಂಡೊಯ್ಯುವುದೋ ಅತ್ತ ಸಾಗುವ ಸ್ಥಿತಿಯಲ್ಲಿದ್ದ ಜೋಡಿಯು ಬಳಲಿ ಬೆಂಡಾಗಿ ಜೀವನದಲ್ಲಿ ಮೊದಲ ಬಾರಿಗೆ ಅರ್ಥವಾಗದ ಭಯಕ್ಕೆ ಸಿಲುಕಿ ಒಬ್ಬರಿಗೊಬ್ಬರು ಜೊತೆಯಲ್ಲಿದ್ದೂ ಅನಾಥಪ್ರಜ್ಞೆಯಿಂದ ನರಳಿದರು. ಹಾಗಾಗಿ ಇಬ್ಬರಿಗೂ ಮಾತು ಬೇಡವಾಗಿತ್ತು. ಸರೋಜ ಹಾಗೆಯೇ ಲಕ್ಷ್ಮಣನ ಮಡಿಲಿಗೊರಗಿದವಳಿಗೆ ರಪ್ಪನೆ ನಿದ್ರೆ ಹತ್ತಿತು. ಆದರೆ ಲಕ್ಷ್ಮಣನನ್ನು ನಾಳಿನ ಚಿಂತೆಯು ಬೃಹದಾಕಾರವಾಗಿ ಕಾಡುತ್ತಿತ್ತು. ತಾನು ಮನೆಯಿಂದಅಷ್ಟೊಂದು ರೋಷ, ಭರಾಮಿನಿಂದ ಎದ್ದು ಬರಬಾರದಿತ್ತೇನಾ? ಎಂಬ ಯೋಚನೆ ಅವನಲ್ಲಿ ಅಳುಕು ಮತ್ತು ತಪ್ಪಿತಸ್ಥಭಾವವನ್ನು ಸೃಷ್ಟಿಸಿತ್ತು. ಹಾಗಾಗಿ ಅಲ್ಲಿಯವರೆಗೆ ಅವನನ್ನು ಮುನ್ನೆಡೆಸಿಕೊಂಡು ಬಂದಿದ್ದಂಥ ಉತ್ಸಾಹವೂಜರ್ರನೇ ಇಳಿಯಿತು. ಹತಾಶೆಯಿಂದ ಮರಕ್ಕೊರಗಿ ಕಣ್ಣುಮುಚ್ಚಿದ. ಆದರೆ ಅವನ ಧೈರ್ಯವಿನ್ನೂ ಪೂರ್ತಿ ಕರಗಿರಲಿಲ್ಲ. ಕೆಲವು ಕ್ಷಣದಲ್ಲಿ ಉದಾಸೀನವನ್ನು ಬದಿಗೊತ್ತಿ ಯೋಚಿಸತೊಡಗಿದ.
ಹಾಗೆ ಹೊರಟು ಬರದಿದ್ದರೆ ಮಾವಂದಿರು ಮತ್ತು ಅಣ್ಣಂದಿರು ನಮ್ಮನ್ನು ಸುಮ್ಮನೆ ಬಿಡುತ್ತಿದ್ದರಾ? ಒಂದೋ, ಸರೋಜಾಳನ್ನು ಯಾವನೋ ಒಬ್ಬನ ಕುತ್ತಿಗೆಗೆ ಕಟ್ಟಿ ಹೊರಗೆ ತಳ್ಳುತ್ತಿದ್ದರು ಅಥವಾ ನನ್ನನ್ನೇ ಹೊಡೆದು ಓಡಿಸುತ್ತಿದ್ದರು. ಅವರ ದೃಷ್ಟಿಯಲ್ಲಿ ನಾವು ಮಾಡಿರುವ ಅಪರಾಧವೇ ಅಂಥದ್ದವಲ್ಲವಾ! ಹಾಗಾಗಿ ಮನೆ ಬಿಟ್ಟು ಬಂದದ್ದೇ ಸರಿಯಾದ ನಿರ್ಧಾರ. ತಮಗೂ ಒಬ್ಬರನ್ನೊಬ್ಬರು ಬಿಟ್ಟು ಬದುಕಲು ಸಾಧ್ಯವಿಲ್ಲ! ಎಂದು ಕೊಂಡವನು ಸ್ವಲ್ಪ ಗೆಲುವಾದ. ಆದರೆ ಮರುಕ್ಷಣ, ‘ಬಂದಿದ್ದು ಬಂದಾಗಿದೆ. ಆದರೆ ಇನ್ನು ಮುಂದೆ ಹೋಗುವುದೆಲ್ಲಿಗೆ…? ನಮ್ಮ ಕೈಹಿಡಿದು ಆಸರೆ ನೀಡುವವರು ಯಾರಿದ್ದಾರೆ…? ಕಾಸರಪೇಟೆ ಅಥವಾ ಅನಂತೂರಿಗೆ ಹೋಗಿ ಬದುಕುವ ಎಂದರೆ ಖಂಡಿತಾ ಸಾಧ್ಯವಿಲ್ಲ. ನಮ್ಮವರು ಅಲ್ಲೆಲ್ಲೂ ಉಳಿಯಲು ಬಿಡುವುದಿಲ್ಲ. ಅದಕ್ಕಿಂತಲೂ ದೂರವೆಂದರೆ ಎಲ್ಲಿಗೆ? ಬೇರೆ ಯಾವ ಊರಿನ ಪರಿಚಯವೂ ತನಗಿಲ್ಲವಲ್ಲಾ…! ಎಂಬ ಪ್ರಶ್ನೆಗಳು ಅವನನ್ನು ಮತ್ತೆಚಿಂತೆಗೀಡು ಮಾಡಿದವು. ಆಗ ಅವನಿಗೆ ಪಕ್ಕನೆ, ಶಿವಕಂಡಿಕೆಗೆ ಹೋದರೆ ಹೇಗೆ? ಎಂಬ ಯೋಚನೆ ಬಂತು.
‘ಅನಂತೂರಿನಿಂದ ಶಿವಕಂಡಿಕೆ ಬಹಳ ದೂರವೇನಿಲ್ಲ. ಮುದ್ದಣಪುರದವರೆಗೆ ಬಸ್ಸಿನಲ್ಲಿ ಹೋಗುವುದು. ಅಲ್ಲಿಂದ ದೋಣಿಯ ಮೂಲಕ ಒಂದು ಹೊಳೆ ದಾಟಿ, ಬಸ್ಸು ಹತ್ತಿದರೆ ಮತ್ತೊಂದು ಗಂಟೆಯಲ್ಲಿ ಶಿವಕಂಡಿಕೆಗೆ ತಲುಪಬಹುದು!’ಎಂದು ಮಾವಂದಿರು ಮಾತಾಡಿಕೊಳ್ಳುತ್ತಿದ್ದುದು ತನಗೆ ನೆನಪಿದೆ. ಹೌದು.ಅಲ್ಲಿಗೆ ಹೋಗುವುದೇ ಒಳ್ಳೆಯದು. ಅಲ್ಲಿಗೆ ತಲುಪಿದ ಕೂಡಲೇ ಮೊದಲು ಯಾವುದಾದರೂ ಜೀವನಕ್ಕೊಂದು ಕೆಲಸ ಹಿಡಿಯಬೇಕು. ಮುಂದಿನದ್ದನ್ನು ಆಮೇಲೆ ಯೋಚಿಸುವ. ಪಕ್ಕನೆ ಕೆಲಸ ಸಿಗದಿದ್ದರೂ ಇಬ್ಬರಿಗೂ ಬೀಡಿ ಕಟ್ಟಲು ಬರುತ್ತದೆ. ಅದನ್ನೇ ಮಾಡಿಕೊಂಡು ಗಂಜಿ ಉಂಡಾದರೂ ಬದುಕಬಹುದು!ಎಂದು ನಿರ್ಧರಿಸಿದವನಲ್ಲಿಮರಳಿ ಚೈತನ್ಯ ಚಿಗುರೊಡೆಯಿತು. ತನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದ ಸರೋಜಾಳ ಮುಗ್ಧ ಮುಖವನ್ನು ಪ್ರೀತಿಯಿಂದ ದಿಟ್ಟಿಸಿದ. ಚಂದಿರನ ಮಸುಕು ಬೆಳಕಿನಲ್ಲಿ ಅವಳ ನಿರ್ಮಲ ಮುಖವು ಮನೋಹರವಾಗಿ ಕಂಡಿತು. ಆಕ್ಷಣದಲ್ಲಿ ಅವನೊಳಗೆ,ತಮ್ಮಿರಿಬ್ಬರ ನಡುವೆ ಚಿಗುರಿದ ಪ್ರೇಮ ಸಂಬಂಧದ ಸವಿನೆನಪುಗಳು ನವಿರಾಗಿ ಬಿಚ್ಚಿಕೊಂಡವು.
ನಮ್ಮಿಬ್ಬರ ನಡುವೆ ಈಗ ಇರುವಸ್ನೇಹ ಮತ್ತುನಾವು ಒಬ್ಬರನ್ನೊಬ್ಬರು ಅಗಲಿರಲಾಗದಂಥ ಪ್ರೀತಿಯು ನಿನ್ನೆ ಮೊನ್ನೆಯದಲ್ಲ. ಅದು ಬಾಲ್ಯದಲ್ಲಿನಮ್ಮ ತೊದಲು ನುಡಿಗಳು ಶುರುವಾದ ಗಳಿಗೆಯಿಂದ,ಇನ್ನೂ ನಾಚಿಕೆ, ಮುಜುಗರ ಮೂಡದಿದ್ದ ಮತ್ತುಬೆತ್ತಲೆಯಾಗಿಓಡಾಡುತ್ತಿದ್ದ ಪ್ರಾಯದಲ್ಲೇ ಹುಟ್ಟಿ ಬೆಳೆದಿರುವಂಥದ್ದು ಅಂತ ತನೆಗೆಷ್ಟೋ ಬಾರಿ ಅನ್ನಿಸಿದ್ದಿದೆ. ಈ ನನ್ನ ಚೆಲುವೆಯೂ ಅಷ್ಟೇ ಆವತ್ತಿನಿಂದ ಇವತ್ತಿನವರಗೆ ನನ್ನನ್ನು ಎಷ್ಟೊಂದು ಗಾಢವಾಗಿ ಹಚ್ಚಿಕೊಂಡಿದ್ದಾಳೆಂದರೆ ಬಹುಶಃ ನನ್ನ ನೆರಳೇ ನನ್ನನ್ನುಅಷ್ಟೊಂದುಹಿಂಬಾಲಿಸಿರಲಿಕ್ಕಿಲ್ಲ ಎಂಬಷ್ಟುಇವಳು ನನ್ನೊಂದಿಗಿರಲು ಇಚ್ಛಿಸುವುದನ್ನು ನೆನೆದರೆ ಅಚ್ಚರಿಯಾಗುತ್ತದೆ. ಆದರೆ ಆಗೆಲ್ಲ ಇವಳ ಆ ಬಗೆಯ ವರ್ತನೆ ಕೆಲವೊಮ್ಮೆನನಗೂ ಕಿರಿಕಿರಿ ಅನಿಸಿದ್ದುಂಟು!ಆಗ ನನ್ನಲ್ಲಿಮೂಡುತ್ತಿದ್ದ ಅಸಡ್ಡೆಯನ್ನು ಇವಳು ಎಷ್ಟೊಂದು ಸೂಕ್ಷ್ಮವಾಗಿ ತಿಳಿದುಕೊಳ್ಳುತ್ತಿದ್ದಳು ಮತ್ತು ರಪ್ಪನೆನನ್ನಿಂದ ದೂರವಾಗಿಯೂ ಬಿಡುತ್ತಿದ್ದಳು! ಆದರೆ ನನ್ನ ಮುನಿಸಾದರೂ ಎಷ್ಟು ಹೊತ್ತಿರುತ್ತಿತ್ತು? ಒಂದೆರಡು ಗಂಟೆಯೋ ಅಥವಾಒಂದು ದಿನವೋ ಇದ್ದರೆ ಹೆಚ್ಚು. ನಾನು ಹಳೆಯದನ್ನು ಮರೆಯುತ್ತಇವಳೇಸಮೀಪಬಂದು,ಇಬ್ಬನಿಯ ತಂಪಿನಲಿ ಮಿಂದಹೂವಿನಂತೆ ಎಷ್ಟೊಂದು ಪ್ರೀತಿಯಂದ ಆಪ್ತವಾಗುತ್ತಿದ್ದಳು!ಆಗೆಲ್ಲ ನನಗೇ ಅರ್ಥವಾಗದನನ್ನ ಕುಡಿ ನೋಟದಲ್ಲಿ ಅದೇನು ಕಾಣುತ್ತಿದ್ದಳೋ? ನಾಚಿಕೆಯಿಂದ ಹಿಡಿಯಾಗಿ ದೂರವಿರುವಂತೆ ನಟಿಸುತ್ತಿದ್ದಳು. ಆದರೂ ನನ್ನ ಸಾಮಿಪ್ಯವು ಅವಳಿಗೆ ಅದೆಷ್ಟುಹಿತವಾಗುತ್ತಿತ್ತು ಎಂಬುದು ಅವಳ ಮಾತು ಮತ್ತು ಸುಂದರ ಹಾವಭಾವಗಳಿಂದಲೇ ನನಗೆ ತಿಳಿಯುತ್ತಿತ್ತು. ಬಹುಶಃ ಆ ಎಲ್ಲ ಅನುಭವಗಳ ಮೊತ್ತವೇ ತಾನಿಂದು ಈ ಮುದ್ದು ಹುಡುಗಿಯನ್ನು ಇಷ್ಟೊಂದು ಪ್ರೀತಿಸುತ್ತಿರಬೇಕು ಎಂದೆನಿಸುತ್ತದೆ.
ಹದವಾಗಿ ಮಾಗಿದ, ಕೆಂಪಗಿನ ಚಂಪೆಹಣ್ಣೆಂದರೆ ಈ ಹುಡುಗಿಗೆ ಎಷ್ಟೊಂದು ಇಷ್ಟ! ಅದರ ಹುಳಿ, ಸಿಹಿಯಾದ ಒಗರು ರುಚಿಯನ್ನಿವಳು ಸವಿಯುವಾಗ ಮುಖದಲ್ಲಿ ಹೊಮ್ಮುತ್ತಿದ್ದ ಅಂದವೋ…! ದೇವರೇ! ಅದನ್ನು ನೆನೆದರೆ ಈಗಲೂ ರೋಮಾಂಚನವಾಗುತ್ತದೆ. ಆವತ್ತೊಂದು ದಿನ ಚಂಪೆಹಣ್ಣು ಕೊಯ್ಯಲೆಂದು ಇಬ್ಬರೂ ಸಮೀಪದ ಹಾಡಿಗೆ ಹೋಗಿದ್ದೆವಲ್ಲ.ಆಹೊತ್ತು ಮೈಯಿಡೀ ಮುಳ್ಳುಗಳಿಂದ ತುಂಬಿದ ಆ ಮರವನ್ನು ಕಷ್ಟಪಟ್ಟು ಹತ್ತಿ ಒಂದಷ್ಟು ಹಣ್ಣುಗಳನ್ನು ಉದುರಿಸಿ ಕೆಳಗೆ ಬಂದೆ. ಅಷ್ಟೊತ್ತಿಗೆ ಆ ಹಣ್ಣುಗಳನ್ನು ಮೆಲ್ಲುತ್ತಿದ್ದ ಇವಳು ತನ್ನ ಲಂಗವನ್ನು ದುಂಡಗೆ ಮೊರದಂತೆ ಮಾಡಿ ಹಣ್ಣುಗಳನ್ನು ಹೆಕ್ಕಿ ಅದರಲ್ಲಿ ತುಂಬಿಸಿಕೊಂಡಿದ್ದಳು. ಆಕ್ಷಣ ನನಗೇನಾಯಿತೋ? ನಾನೇನು ಮಾಡುತ್ತಿರುವೆನೆಂಬ ಪ್ರಜ್ಞೆಯೇ ಇಲ್ಲದೆ ಬಾಚಿ ತಬ್ಬಿಕೊಂಡು ಒಂದೇ ಸಮನೆ ಮುತ್ತುಕೊಟ್ಟಿದ್ದೆನಲ್ಲ!ಇವಳ ಕೆಂದುಟಿಯಲ್ಲಿ ಅಂಟಿದ್ದ ಚಂಪೆಹಣ್ಣಿನ ರುಚಿಗೆ ಪ್ರೇಮಾಮೃತದ ಸವಿಯೂಬೆರೆತು ನನ್ನೊಳಗೆ ಇಳಿಯುತ್ತಿತ್ತು. ಆದರೆ ಇವಳು ನನ್ನ ಏಕಾಏಕಿ ಆಕ್ರಮಣಕ್ಕೆ ಅವಕ್ಕಾದಳು. ನನ್ನ ಭುಜ, ತೋಳು ಮತ್ತು ಬೆನ್ನಿಗೆರಪರಪನೆ ಗುದ್ದುತ್ತ ಪರಚಿದಳು. ಆದರೂ ನನ್ನ ಬಿಗಿತವು ಸಡಿಲವಾಗಲಿಲ್ಲ.ಹಾಗಾಗಿ ಮೆಲ್ಲನೆ,ಹುಣ್ಣಿಮೆಯ ಚಂದ್ರಿಕೆಯಷ್ಟು ಮೃದುವಾದಳು.ಇವಳ ಕೋಮಲ ಕೈಗಳು ತಮ್ಮ ಹೋರಾಟವನ್ನು ನಿಲ್ಲಿಸಿ ನನ್ನನ್ನು ಬಿಗಿದಪ್ಪಿಕೊಂಡವು. ಆದರೆ ಸ್ವಲ್ಪಹೊತ್ತಲ್ಲಿ ನನಗೇಭಯವಾಗಿ ಬಿಟ್ಟಿತು. ತಟ್ಟನೆ ಎಚ್ಚೆತ್ತು ಒಲ್ಲದ ಮನಸ್ಸಿನಿಂದ ಅವಳಿಂದ ಬಿಡಿಸಿಕೊಂಡೆ. ನಮ್ಮಿಬ್ಬರ ಅಪ್ಪುಗೆಯ ವೇಗಕ್ಕೆ ಅವಳು ತನ್ನ ಲಂಗದಲ್ಲಿ ತುಂಬಿಕೊಂಡಿದ್ದ ಹಣ್ಣುಗಳೆಲ್ಲ ಉದುರಿಬಿದ್ದು ಕಾಲಡಿಗೆ ಸಿಲುಕಿ ಅಪ್ಪಚ್ಚಿಯಾಗಿದ್ದುವು. ಮರುಕ್ಷಣ ಈ ನನ್ನ ಪುಟ್ಟ ಸುಂದರಿ ನನ್ನನ್ನೊಮ್ಮೆಸಂಕೋಚದಿಂದ ದಿಟ್ಟಿಸಿದವಳು, ಒಂದಿಷ್ಟು ಹಣ್ಣುಗಳನ್ನು ಬಾಚಿ ಆಯ್ದುಕೊಂಡುಜಿಂಕೆಯ ಮರಿಯಂತೆ ಚಂಗನೆ ನೆಗೆದು ಮನೆಯತ್ತ ಓಡಿದಳು.
ಎಲ್ಲಿ ನನ್ನಾಟವನ್ನು ಮನೆಯವರಿಗೆ ತಿಳಿಸಿ ಮರ್ಯಾದೆ ಕಳೆಯುತ್ತಾಳೋ ಎಂದುಕೊಂಡನನಗಾವತ್ತು ಎಷ್ಟೊಂದು ಹೆದರಿಕೆಯಾಗಿತ್ತು! ಆದರೆ ಮತ್ತೊಂದು ಯೋಚನೆ ಹೇಳುತ್ತಿತ್ತು, ಇಲ್ಲ. ಅವಳು ಯಾರಲ್ಲೂ ಹೇಳುವುದಿಲ್ಲ.ಯಾಕೆಂದರೆ ಅವಳಿಗೂ ನಾನು ಇಷ್ಟವಾಗಿದ್ದೇನೆ ಎಂದು. ಆದರೂ ಭಯದಿಂದ ಮನೆಯತ್ತ ಧಾವಿಸಿ ಇವಳನ್ನು ಹುಡುಕಿದೆ. ಎಲ್ಲೂ ಕಾಣಿಸಲಿಲ್ಲ. ಆತಂಕವಾಯಿತು. ತೋಟದತ್ತ ಓಡಿದೆ.ಅಲ್ಲಿನಮ್ಮ ಪ್ರೀತಿಯ ಹಲಸಿನ ಮರದ ಮೇಲೆ ಕಾಣಿಸಿದಳು. ಎತ್ತರದ ಕೊಂಬೆಯೊಂದರ ಮೇಲೆ ಕುಳಿತು ತನ್ನ ಬೆಳ್ಳಗಿನ ಕಾಲುಗಳನ್ನು ಇಳಿಬಿಟ್ಟು ಆಡಿಸುತ್ತ, ಚಂಪೆಹಣ್ಣು ಮೆಲ್ಲುತ್ತ ಯಾವುದೋ ನವಿರಾದ ಗುಂಗಿನಲ್ಲಿದ್ದಳು. ನಾನೂ ಮರವೇರಿ ಹೋಗಿ ಇವಳ ಸಮೀಪ ಕುಳಿತೆ. ಆಗಹೇಗೆ ನಾಚಿಕೊಂಡಳು!ಇವಳ ಆ ಕೆಂಪಡರಿದ ಕೆನ್ನೆ ಮತ್ತು ತುಟಿಗಳು ನನ್ನಲ್ಲೂ ನಾಚಿಕೆಯಂಥ ಭಾವವನ್ನು ಮೂಡಿಸಿದ್ದವು. ಮತ್ತೊಮ್ಮೆ ಚುಂಬಿಸಲು ಮುಂದಾದೆ. ಆದರೆ ಅಬ್ಬಾ! ಇವಳು ನನ್ನನ್ನು ಗಟ್ಟಿಯಾಗಿ ಚಿವುಟಿ ಸರಸರನೆ ಮರವಿಳಿದವಳು,‘ಥೂ! ನಾಯಿ, ಹೋಗಾಚೇ…!’ ಎಂದು ಹುಸಿಮುನಿಸಿನಿಂದ ಬೈದು ನಗುತ್ತ ಮನೆಯತ್ತ ಓಡಿದಳು. ಆದರೆ ಆವತ್ತಿನ ಆ ಆಸೆಯು ಇಬ್ಬರಲ್ಲೂ ಮತ್ತಷ್ಟು ಗರಿಗೆದರಿತು. ಅಂದಿನಿಂದ ಅಲ್ಲಿ ಇಲ್ಲಿ ಮರೆ ಸಿಕ್ಕಿದಲ್ಲೆಲ್ಲ ಅದೆಷ್ಟು ಬಾರಿ ಜೊತೆಯಾಗಿ ಬಿಗಿದಪ್ಪಿಕೊಂಡುಒಬ್ಬರಿಗೊಬ್ಬರು ಮುತ್ತಿನ ಮಳೆಗರೆಯುತ್ತ ಮೈ ಮರೆಯುತ್ತಿದ್ದೆವು! ಹೀಗಿರುವ ನಾವು ಒಬ್ಬರನ್ನೊಬ್ಬರು ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುವವರು ಯಾಕೆ ಮದುವೆಯಾಗಬಾರದು? ಈ ವಿಷಯ ನಮ್ಮ ಹಿರಿಯರಿಗ್ಯಾಕೆ ಅರ್ಥವಾಗುವುದಿಲ್ಲ! ‘ಒಂದು ಗಂಡು, ಹೆಣ್ಣಿನ ಹಿಂದಿನ ಜನ್ಮದ ಸಂಬಂಧವೇ ಈ ಜನ್ಮದಲ್ಲೂ ಮುಂದುವರೆಯುವುದು ಮಗಾ…!’ ಎಂದು ಅಮ್ಮ ಹೇಳುತ್ತಿದ್ದ ಮಾತುಗಳು ಸುಳ್ಳಾ ಹಾಗಾದರೆ! ಈ ಸಂಬಂಧಿಕರಿಗೆಲ್ಲ ತಲೆ ಸರಿಯಿಲ್ಲ. ಇನ್ನು ಮುಂದೆ ಇವರ್ಯಾರೂ ನಮಗೆ ಬೇಡ. ಇವರೆಲ್ಲರಿಂದ ಜೀವನಪೂರ್ತಿ ದೂರವಿದ್ದು ಬದುಕುವ ಛಲ ಮತ್ತು ಶಕ್ತಿನಮ್ಮಲ್ಲಿದೆ ಎನ್ನುವುದನ್ನು ಸಾಬೀತು ಮಾಡಿ ತೋರಿಸುತ್ತೇನೆ!ಎಂದೆಲ್ಲ ಯೋಚಿಸಿದ ಲಕ್ಷ್ಮಣಒಂದು ದೃಢ ನಿರ್ಧಾರಕ್ಕೆ ಬಂದ. ಆಗ ಅವನ ಮನಸ್ಸು ತುಸು ಶಾಂತವಾಯಿತು. ಸರೋಜಾಳ ಕೆನ್ನೆಗೆ ಮೆಲುವಾಗಿ ಮುತ್ತಿಟ್ಟು ಮರಕ್ಕೊರಗಿ ಕಣ್ಣುಮುಚ್ಚಿದ.
(ಮುಂದುವರೆಯುವುದು)