ಗಿರೀಶ್ ಕಾರ್ನಾಡ್ ಖ್ಯಾತ ರಂಗಕರ್ಮಿ, ಕನ್ನಡದ ಹಿರಿಯ ಸಾಹಿತಿ, ಬಹುಭಾಷಾ ನಟ, ನಿರ್ದೇಶಕ, ಕನ್ನಡ ಭಾಷೆಗೆ ಏಳನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು.ಇವರು ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, …ಇತ್ಯಾದಿ ಬಹುಚರ್ಚಿತ ನಾಟಕಗಳನ್ನು ಬರೆದ ಪ್ರತಿಭಾಶಾಲಿ ನಾಟಕಕಾರರು. ಗಿರೀಶ್ ಕಾರ್ನಾಡ್ ಕನ್ನಡ-ಹಿಂದಿ-ಮರಾಠಿ ರಂಗಭೂಮಿ ಮತ್ತು (ದಕ್ಷಿಣ ಭಾರತದ ಸಹಿತ) ಸಿನಿಮಾ ಕ್ಷೇತ್ರಗಳಲ್ಲಿ ಉತ್ಕೃಷ್ಟ ಕೊಡುಗೆಯನ್ನು ನೀಡಿದವರು.
ಗಿರೀಶ್ ಕಾರ್ನಾಡರನ್ನು ಹಿಂದಿ ರಂಗಭೂಮಿಯಲ್ಲಿ ‘ಸಾಂಸ್ಕೃತಿಕ ಪ್ರಶಾಸಕ್’ ಅನ್ನುತ್ತಾರೆ. ಕನ್ನಡ ಮತ್ತು ಹಿಂದಿಯನ್ನು ಅವರು ತನ್ನ ನಾಟಕಗಳ ಮೂಲಕ ಹತ್ತಿರಕ್ಕೆ ತಂದವರು. ಕನ್ನಡಿಗ ಆಗಿದ್ದರೂ ಹಿಂದಿ ಭಾಷಾ ಸಮಾಜದಲ್ಲಿ ಅವರು ತನ್ನ ನಾಟಕಗಳ ಮೂಲಕ ಬಹು ಪರಿಚಿತರಾಗಿದ್ದರು.
ಇವರ ‘ತುಘಲಕ್’ ನಾಟಕ ಹಿಂದಿಯಲ್ಲಿ ಬಹುಖ್ಯಾತಿ. ಅನೇಕ ರಂಗ ಪ್ರಯೋಗಗಳನ್ನು ಈ ನಾಟಕ ಕಂಡಿದೆ. 26ರ ಪ್ರಾಯದಲ್ಲಿ ಅದನ್ನು ಅವರು ಬರೆದಿದ್ದರು. ಹಿಂದಿಯಲ್ಲಿ ಒಂದು ಆಡು ಮಾತು ಇದೆ. ‘ತುಘಲಕ್ ಮೂಲತಃ ಹಿಂದಿ, ಕನ್ನಡಕ್ಕೆ ಅದು ಅನುವಾದ ಆಗಿರಬೇಕು’ ಎನ್ನುವಷ್ಟು ತುಘಲಕ್ ಹಿಂದಿ ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದೆ. ಗಿರೀಶ್ ಕಾರ್ನಾಡರು ಮೂಲರೂಪದಿಂದ ಇಂಗ್ಲಿಷ್‌ನಲ್ಲಿ ಯೋಚಿಸಿ ಅನಂತರ ಕನ್ನಡದಲ್ಲಿ ಪುನರ್ಲೇಖನ ಬರೆಯುತ್ತಿದ್ದರೆಂಬ ಮಾತೂ ಪ್ರಚಲಿತವಿದೆ.
ಸುಮಾರು ನಾಲ್ಕೈದು ದಶಕಗಳ ಕಾಲ ಕಾರ್ನಾಡ್ ನಾಟಕಗಳನ್ನು ರಚಿಸಿದರು. ಆಗಾಗ್ಗೆ ಸಮಕಾಲೀನ ಸಮಸ್ಯೆಗಳನ್ನು ನಿಭಾಯಿಸಲು ಇತಿಹಾಸ ಮತ್ತು ಪುರಾಣಗಳನ್ನು ಬಳಸುತ್ತಿದ್ದರು. ಅವರು ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರರಾಗಿ ಕೆಲಸ ಮಾಡುವ ಭಾರತೀಯ ಸಿನಿಮಾ ಜಗತ್ತಿನಲ್ಲಿ ಬಹಳ ಸಕ್ರಿಯರಾಗಿದ್ದವರು.
ಮಹಾರಾಷ್ಟ್ರದ ಮಾಥೆರಾನ್‌ನಲ್ಲಿ 1938ರಲ್ಲಿ( ಮೇ- 19) ಜನಿಸಿದ ಕಾರ್ನಾಡರು ನಂತರ ಶಿರಸಿ, ಅಲ್ಲಿಂದ ಧಾರವಾಡಕ್ಕೆ ಬಂದು ನೆಲೆಸಿದ್ದರು.1957ರಲ್ಲಿ ಪದವಿ ಮುಗಿಸಿ ಧಾರವಾಡದಿಂದ ಮುಂಬೈಗೆ ಉನ್ನತ ವ್ಯಾಸಂಗಕ್ಕೆ ಬಂದರು. ಮುಂದೆ ಶಿಷ್ಯವೇತನ ಪಡೆದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ಹಡಗಿನಲ್ಲಿ ತೆರಳಿದರು. ಹಡಗಿನಲ್ಲಿ ಹೋಗುವಾಗ ಅವರು ‘ಯಯಾತಿ’ ನಾಟಕವನ್ನು ರಚಿಸಿದರು. ಅದನ್ನು ಮುಂದೆ ಮನೋಹರ ಗ್ರಂಥಮಾಲೆಯೇ (ಅಟ್ಟ’) ಪ್ರಕಟಿಸಿತು. ನಂತರದ ಕೃತಿಗಳೆಲ್ಲ ಮನೋಹರ ಗ್ರಂಥಮಾಲೆಯೇ ಪ್ರಕಟಿಸುತ್ತಾ ಬಂದಿತ್ತು. ಇದರ ಜಿ.ಬಿ. ಜೋಶಿಯವರು ಗಿರೀಶ್ ಕಾರ್ನಾಡರ ಸಾಹಿತ್ಯ ಕೃಷಿಗೆ ಬೆನ್ನೆಲುಬಾಗಿದ್ದರು. ಇನ್ನೊಬ್ಬರು ಕೀರ್ತಿನಾಥ ಕುರ್ತಕೋಟಿ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ… ಇತ್ಯಾದಿ ಶಿಕ್ಷಣ ಪಡೆದ ಕಾರ್ನಾಡರು ಮುಂದೆ ವಿಶ್ವವೇ ಗಮನ ಸೆಳೆಯುವಂತಹ ನಾಟಕಗಳನ್ನು ಬರೆಯುತ್ತಾ ಹೋದರು. ಯಯಾತಿ, ತುಘಲಕ್, ಹಯವದನ, ತಲೆದಂಡ, ರಾಕ್ಷಸ ತಂಗಡಿ… ಇಂತಹ ಹಲವು ಪ್ರಸಿದ್ಧ ನಾಟಕಗಳನ್ನು ನೀಡಿದವರು ಕಾರ್ನಾಡ್. 1952ರಲ್ಲಿ ಶಿರಸಿಯಿಂದ ಕುಟುಂಬ ಸಹಿತ ಧಾರವಾಡಕ್ಕೆ ಬಂದು ಇಲ್ಲೇ ನೆಲೆಸಿದರು. ಗಿರೀಶ್ ಕಾರ್ನಾಡ್ ಅವರು ಧಾರವಾಡಕ್ಕೆ ಕೊನೆಯ ಭೇಟಿ ನೀಡಿದ್ದು 2018ರಲ್ಲಿನ ‘ಧಾರವಾಡ ಸಾಹಿತ್ಯ ಸಂಭ್ರಮ’ಕ್ಕೆ. ಅದೂ ಮೂಗಿಗೆ ಆಮ್ಲಜನಕ ನಳಿಕೆ ಹಾಕಿಕೊಂಡು ಬಂದಿದ್ದರು. ಒಮ್ಮೆ ಜೈಪುರ ಸಾಹಿತ್ಯ ಸಮ್ಮೇಳನವನ್ನು ವೀಕ್ಷಿಸಿ ಬರುವಂತೆ ಗಿರಡ್ಡಿ ಗೋವಿಂದರಾಜ್ ತಂಡಕ್ಕೆ ಗಿರೀಶ್ ಕಾರ್ನಾಡರು ಹೇಳಿದ್ದರು. ಅದನ್ನು ವೀಕ್ಷಿಸಿ ಬಂದ ನಂತರವೇ ಗಿರಡ್ಡಿಯವರಿಗೆ ಅದೇ ಮಾದರಿಯಲ್ಲಿ ‘ಧಾರವಾಡ ಸಾಹಿತ್ಯ ಸಂಭ್ರಮ’ ಆಯೋಜಿಸುವ ಮನಸ್ಸು ಬಂದದ್ದು ಎಂಬ ಮಾತಿದೆ.
ಗಿರೀಶ್ ಕಾರ್ನಾಡರ ನಾಟಕಗಳು ಇಂಗ್ಲಿಷ್, ಹಿಂದಿ ಸಹಿತ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅಬ್ರಾಹಮ್ ಅಲ್ಕಾಜಿ, ಅಲೆಕ್ ಪದಮ್ ಸೀ, ಸತ್ಯದೇವ ದುಬೆ… ಮುಂತಾದ ಖ್ಯಾತ ನಿರ್ದೇಶಕರು ಗಿರೀಶ್ ಕಾರ್ನಾಡರ ನಾಟಕಗಳನ್ನು ನಿರ್ದೇಶಿಸಿದ್ದರು. 1970ರಲ್ಲಿ ‘ಸಂಸ್ಕಾರ’ ಕನ್ನಡ ಸಿನಿಮಾ ಮೂಲಕ ಫಿಲ್ಮೀಕೆರಿಯರ್‌ನ ಶುಭಾರಂಭ ಮಾಡಿದ ಕಾರ್ನಾಡರು ಮುಂದೆ ಕನ್ನಡ-ಹಿಂದಿ ಸಿನೆಮಾಗಳಲ್ಲಿ ಮಿಂಚಿದರು. ನಿಶಾಂತ್, ದೌಡ್, ಮಂಥನ್… ಹೀಗೆ ಅನೇಕ ಹಿಂದಿ ಫಿಲ್ಮ್ ಗಳಲ್ಲಿ ಅಭಿನಯಿಸಿದರು. 1971ರಲ್ಲಿ ವಂಶವೃಕ್ಷ, 1984ರಲ್ಲಿ ‘ಉತ್ಸವ್’ ಫಿಲ್ಮ್ ನಿರ್ದೇಶಿಸಿದರು. ಟಿ.ವಿ. ಪ್ರೇಕ್ಷಕರು ‘ಮಾಲ್ಗುಡಿ ಡೇಸ್’, ಇಂದ್ರ ಧನುಷ್ಯ ….ಇದರಲ್ಲಿನ ಅಭಿನಯವನ್ನು ಮರೆಯುವಂತಿಲ್ಲ. ಎಸ್.ಎಲ್. ಭೈರಪ್ಪ ಅವರ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯನ್ನು ಕಾರ್ನಾಡರು ಸಿನಿಮಾ ಆಗಿ ನಿರ್ದೇಶಿಸಿದವರು. ಆದರೆ, ನಂತರ ಭೈರಪ್ಪ ಅವರು ಬಲಪಂಥೀಯ ಲೇಖಕ ಎಂದು ಕಾಣಿಸಿಕೊಂಡ ಚರ್ಚೆಯ ನಂತರ ಆ ಕಾದಂಬರಿಯ ಆಯ್ಕೆಗಾಗಿ ವಿಷಾದಿಸಿದ್ದೂ ಇದೆ.
2017ರಲ್ಲಿ ಸಲ್ಮಾನ್ ಖಾನ್ ರ ‘ಟೈಗರ್ ಜಿಂದಾ ಹೈ’ ಕಾರ್ನಾಡ್ ಅಭಿನಯಿಸಿದ ಕೊನೆಯ ಹಿಂದಿ ಫಿಲ್ಮ್ ಆಗಿದೆ. ಇದನ್ನು ಅಲೀ ಅಬ್ಬಾಸ್ ಜಫರ್ ನಿರ್ದೇಶಿಸಿದ್ದರು. ಗಿರೀಶ್ ಕಾರ್ನಾಡ್ ಅವರು ತೀರಿಹೋದ ಸಮಯ ”ಸಾಹೇಬರ ಜೊತೆ ನನ್ನ ಸಂಬಂಧವು ಓರ್ವ ಸ್ಟೂಡೆಂಟ್ ಮತ್ತು ಟೀಚರ್ ನಡುವಿನ ಸಂಬಂಧವಾಗಿತ್ತು. ಅವರಂತಹ ಬಹು ಆಯಾಮ ವ್ಯಕ್ತಿ ನಿಧನರಾಗಿರುವುದು ಸಿನಿಮಾ ಮತ್ತು ರಂಗಭೂಮಿಗೆ ತೀವ್ರ ನಷ್ಟವಾಗಿದೆ’ ಎಂದು ಅಲೀ ಅಬ್ಬಾಸ್ ಜಫರ್ ಹೇಳಿದ್ದರು.
ಕನ್ನಡ ಫಿಲ್ಮ್ ‘ಸಂಸ್ಕಾರ’ಕ್ಕೆ ರಾಷ್ಟ್ರಪತಿಯ ಗೋಲ್ಡನ್ ಲೋಟಸ್ ಅವಾರ್ಡ್ ಸಿಕ್ಕಿತ್ತು. ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಚೆಲುವಿ, ಕಾಡು, ಕಾನೂರು ಸುಬ್ಬಮ್ಮ ಹೆಗ್ಗಡತಿ… ಇತ್ಯಾದಿಗಳು ಗಿರೀಶ್ ಕಾರ್ನಾಡ್ ರಿಗೆ ಬಹಳ ಖ್ಯಾತಿ ತಂದಿವೆ.
ಹಿಂದಿಯಲ್ಲಿ ನಿಶಾಂತ್, ಮಂಥನ್, ಪ್ರಕಾರ್, ಇಕ್ಬಾಲ್, ಡೋರ್, ಆಶಾಯೆಂ, ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ… ಇವೆಲ್ಲ ಫಿಲ್ಮ್ ಗಳಲ್ಲಿನ ಇವರ ಅಭಿನಯ ಮರೆಯುವಂತಿಲ್ಲ. ಹಿಂದಿ ರಂಗಭೂಮಿಯಲ್ಲಿ ಗಿರೀಶ್ ಕಾರ್ನಾಡರ ನಾಟಕವನ್ನು ಮೊದಲ ಬಾರಿಗೆ ತಂದವರು ಓಂ ಶಿವಪುರಿ, ಎನ್ ಎಸ್, ಡಿ.ಯಿಂದ ಹೊರಬಂದ ಅವರ ಮತ್ತು ರಾಮ್ ಗೋಪಾಲ್ ಬಜಾಜ್ (ಪ್ರಸಿದ್ಧ ರಂಗಕರ್ಮಿ, ಗಿರೀಶ್ ಕಾರ್ನಾಡರ ಹಲವು ನಾಟಕಗಳನ್ನು ಹಿಂದಿಗೆ ಅನುವಾದಿಸಿದವರು) ಹಾಗೂ ಇನ್ನಿತರ ಕೆಲವು ರಂಗಕರ್ಮಿಗಳು ಜೊತೆಗೂಡಿ ‘ದಿಶಾಂತರ’ ರಂಗ ಮಂಡಳಿ ರಚಿಸಿದ್ದರು. ಈ ಮಂಡಳಿಯು ಶಿವಪುರಿ ಅವರ ನಿರ್ದೇಶನದಲ್ಲಿ ಮೊದಲ ಬಾರಿ “ತುಘಲಕ್’ ನಾಟಕ ಪ್ರದರ್ಶಿಸಿತ್ತು. ಅನಂತರ ಪ್ರಸನ್ನ ಅಲ್ಕಾಜಿ ಸಹಿತ ಹಲವರು ‘ತುಘಲಕ್ ‘ನ್ನು ಹಿಂದಿಯಲ್ಲಿ ಪ್ರದರ್ಶಿಸಿದ್ದರು.
ಗಿರೀಶ್ ಕಾರ್ನಾಡರು ಐರಿಶ್ ಲೇಖಕರ ಸಲಹೆಯಂತೆ ತಮ್ಮ ಜೀವನದ ದಿಕ್ಕು ಬದಲಾಯಿಸಿಕೊಂಡವರು ಎನ್ನುತ್ತಾರೆ ಪತ್ರಕರ್ತರಾದ ರೇಖಾ ಖಾನ್. ತಮ್ಮ 17ರ ವಯಸ್ಸಿನಲ್ಲಿ ಐರಿಶ್ ಲೇಖಕ ಸೀನ್ ಓ ಕೈಸಿ ಅವರಿಗೆ ಒಂದು ಸ್ಕೆಚ್ ತಯಾರಿಸಿ ಕಳುಹಿಸಿದ್ದರು ಗಿರೀಶ್ ಕಾರ್ನಾಡ್. ಅದಕ್ಕೆ ಉತ್ತರವಾಗಿ ಕೈಸಿ ಪತ್ರದಲ್ಲಿ ಹೇಳಿದರಂತೆ “ಹೀಗೆಲ್ಲ ನಿಮ್ಮ ಸಮಯವನ್ನು ಹಾಳು ಮಾಡಲು ಹೋಗಬೇಡಿ. ಜನರು ನಿಮ್ಮ ಆಟೋಗ್ರಾಫ್ ಕೇಳುವಂತಹ ಕೆಲಸ ಮಾಡಿರಿ” ಎಂದು ಉತ್ತರಿಸಿದ್ದರು. ಮುಂದೆ ಗಿರೀಶರು ಅಧ್ಯಯನ ಮಾಡಿದ್ದು , ಲೇಖಕ -ನಾಟಕಕಾರ, ಅಭಿನಯ…… ಬಹುಮುಖ ಕ್ಷೇತ್ರಗಳಲ್ಲಿ ಪ್ರತಿಭಾವಂತರಾಗಿ ಬೆಳೆಯುತ್ತಾ ಬಂದರು.
ಹಿಂದಿ ಚಲನಚಿತ್ರಗಳು: 1977 ರ ಹಿಂದಿ ಚಲನಚಿತ್ರ ‘ಸ್ವಾಮಿ’ ಗಿರೀಶ್ ಕಾರ್ನಾಡ್ ರ ಪ್ರಸಿದ್ಧ ಚಲನಚಿತ್ರವಾಗಿದೆ. ಇದರಲ್ಲಿ ಶಬಾನಾ ಅಜ್ಮಿ ಜೊತೆಗೆ ಕಾರ್ನಾಡ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ‘ನಿಶಾಂತ್’ ಗಿರೀಶ್ ಕಾರ್ನಾಡ್ ಅವರ ಮತ್ತೊಂದು ಪ್ರಸಿದ್ಧ ಚಲನಚಿತ್ರವನ್ನು ಶ್ಯಾಮ್ ಬೆನಗಲ್ ನಿರ್ದೇಶಿಸಿದ್ದಾರೆ. ಇದರಲ್ಲಿ ಕಾರ್ನಾಡರ ಪತ್ನಿಯ ಪಾತ್ರವನ್ನು ಶಬಾನಾ ಅಜ್ಮಿ ಯೇ ನಿರ್ವಹಿಸಿದ್ದಾರೆ. 1976 ರಲ್ಲಿ, ಗಿರೀಶ್ ಕಾರ್ನಾಡ್ ಅವರು ಶ್ಯಾಮ್ ಬೆನಗಲ್ ಅವರ ಮತ್ತೊಂದು ‘ಮಂಥನ್’ ಫಿಲ್ಮ್ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ನಾಗೇಶ್ ಕುಕುನೂರ್ ಅವರ ‘ಇಕ್ಬಾಲ್ ‘ಮತ್ತು ‘ಡೋರ್’ ಗಿರೀಶ್ ಕಾರ್ನಾಡ್ ಅವರ ಎರಡು ಜನಪ್ರಿಯ ಚಲನಚಿತ್ರಗಳಾಗಿವೆ. ಗಿರೀಶ್ ಕಾರ್ನಾಡ್ ಅವರು 4 ಫಿಲ್ಮ್ ಫೇರ್ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಅವರು ವಂಶ ವೃಕ್ಷ (1971) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು. ಈ ಚಿತ್ರಕ್ಕಾಗಿ ಗಿರೀಶ್ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತು.
ಗೌರವ,ಪುರಸ್ಕಾರ: ಫಿಲ್ಮ್ ಟಿವಿ ಇನ್ಸಿಟ್ಯೂಟ್‌ನ ಚೆಯರ್ ಮ್ಯಾನ್ (1974-75), ಸಂಗೀತ ನಾಟಕ ಅಕಾಡೆಮಿ ಚೆಯರ್ ಮ್ಯಾನ್ (1988-93), ಲಂಡನ್‌ನ ನೆಹರೂ ಸೆಂಟರ್‌ನ ನಿರ್ದೇಶಕ (2000-2003)… ಇವೆಲ್ಲ ಗೌರವಗಳಲ್ಲದೆ ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಸಮ್ಮಾನ್, ಫಿಲ್ಮ್ ಫೇರ್ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಸಹಿತ ಅನೇಕ ಸರ್ವೋಚ್ಛ ಸಮ್ಮಾನ ಗೌರವ ಪ್ರಶಸ್ತಿಗಳೆಲ್ಲ ಗಿರೀಶ್ ಕಾರ್ನಾಡರಿಗೆ ದೊರೆತಿದೆ. ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳಾದ ಕುವೆಂಪುರ ‘ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಯು. ಆರ್. ಅನಂತ
ಮೂರ್ತಿಯವರ ‘ಸಂಸ್ಕಾರ’ ಸಿನೆಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವವೂ ಗಿರೀಶ್ ಕಾರ್ನಾಡ್ ಅವರಿಗೆ ದೊರಕಿದೆ. ಅವರು ತುಘಲಕ್, ಹಯವದನ ಮುಂತಾದ ನಾಟಕಗಳನ್ನು ಬರೆಯುವ ಮೂಲಕ ಮಾತ್ರವಲ್ಲ; ಸ್ವತಃ ಅಭಿನಯಿಸಿ, ರಂಗಭೂಮಿಯತ್ತ ಪ್ರೇಕ್ಷಕರಿಗೆ ಆಸಕ್ತಿಯನ್ನು ಮೂಡಿಸಿದ್ದ ಮಹಾನ್ ನಟರೂ ಆಗಿದ್ದಾರೆ.
ಕಾರ್ನಾಡರ ಆತ್ಮಚರಿತ್ರೆ ‘ಆಡಾಡತಾ ಆಯುಷ್ಯ’. ಬದುಕಿದ್ದಾಗ ಕೊನೆಯ ದಿನಗಳಲ್ಲಿ ಸಂದರ್ಶನ ಕೇಳಿದರೆ ಅವರು ಹೆಚ್ಚಾಗಿ ಹೇಳುತ್ತಿದ್ದ ಮಾತು ‘ಹೇಳುವುದನ್ನು ಕೃತಿಯಲ್ಲಿ – ಹೇಳಿದ್ದೇನೆ. ಪುಸ್ತಕ ಓದಿ”. ಎನ್ನುವುದಾಗಿತ್ತು. ಹೌದು, ಗಿರೀಶ್ ಕಾರ್ನಾಡ್ ತನ್ನ ವಿಚಾರಗಳಿಂದ ಅನೇಕರನ್ನು ಎದುರು ಹಾಕಿಕೊಂಡಿದ್ದರು. ‘ಅಸಹಿಷ್ಣುತೆ’ಯ ದಿನಗಳಲ್ಲಿ ‘ಪ್ರಶಸ್ತಿ ವಾಪಾಸಾತಿ’ ಎಂಬ ಅಲೆಯಲ್ಲಿ ಸೇರಿಕೊಂಡು ತಾವು ಮೋದಿ ಸರಕಾರವನ್ನು ಟೀಕಿಸಿದ್ದರು. ಗೌರಿ ಲಂಕೇಶ್ ಹತ್ಯಾಘಟನೆಯ ನಂತರ ಇನ್ನಷ್ಟು ಆಕ್ರಮಣಕಾರಿ ಹೇಳಿಕೆಗಳನ್ನು ನೀಡಿದ್ದರು. ‘ತಾನೂ ನಗರ ನಕ್ಸಲ್’ ಎಂದು ಅವರು ಕುತ್ತಿಗೆಯಲ್ಲಿ ಬೋರ್ಡ್ ನೇತು ಹಾಕಿಸಿಕೊಂಡದ್ದೂ ಇದೆ. ಕಾರ್ನಾಡರ ವೈಚಾರಿಕತೆಯನ್ನು ಮುಂದಿಟ್ಟು ಮತಭೇದ ಇರಬಹುದು. ಆದರೆ ಒಬ್ಬ ರಂಗಕರ್ಮಿಯಾಗಿ, ವೈಚಾರಿಕ ಸಾಹಿತ್ಯ ರೂಪದಲ್ಲಿ ಅವರು ಯಾವತ್ತೂ ಶ್ರೇಷ್ಟರು.
ಗಿರೀಶ್ ಕಾರ್ನಾಡರು 10 ಜೂನ್ 2019ರಂದು ನಿಧನರಾದರು.ಬಹು ಅಂಗಾಂಗ ವೈಫಲ್ಯದಿಂದಾಗಿ ಅವರು ಬೆಂಗಳೂರಲ್ಲಿ ವಿಧಿವಶರಾದರು. 81 ವರ್ಷ ವಯಸ್ಸಿನ ಗಿರೀಶ್ ಕಾರ್ನಾಡರು ಮೂರು ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ನೈಸರ್ಗಿಕವಾಗಿ ಉಸಿರಾಟ ಕಷ್ಟವಾಗುತ್ತಿತ್ತು. ಅವರು ಆಮ್ಲಜನಕ ಯಂತ್ರವನ್ನು ಬಳಸುತ್ತಿದ್ದರು. ಇಂತಹ ಗಿರೀಶ್ ಕಾರ್ನಾಡರು ನಿಧನರಾದ ಸಂದರ್ಭ ಸರಕಾರಿ ಗೌರವ ಹಾಗೂ ಅತಿ ವಿಜೃಂಭಣೆ ಬೇಡ ಎಂದು ಮೊದಲೇ ಕಾರ್ನಾಡ್ ಕುಟುಂಬದವರು ಹೇಳಿದ್ದರು. ಹಾಗಾಗಿ ಅವರ ಅಂತ್ಯಕ್ರಿಯೆ ಸರಳವಾಗಿಯೇ ನೆರವೇರಿತು.
ತಮ್ಮ ಮೇಲಿನ ಎಲ್ಲ ಆರೋಪಗಳಿಗೂ ಅವರು ಅಷ್ಟೇ ಸ್ಪಷ್ಟವಾಗಿ ಪ್ರತಿಕ್ರಿಯಿಸಿದವರು. ತನಗೆ ಯಾವುದು ಸರಿ ಕಾಣುತ್ತದೋ ಅದನ್ನು ಹೇಳಿಯೇ ಬಿಡುತ್ತಿದ್ದರು. ಪತ್ನಿ ಡಾ. ಸರಸ್ವತಿ ಗಣಪತಿ, ಪುತ್ರ ರಘು ಅಮಯ್, ಪುತ್ರಿ ಶಾಲ್ಮಲಿ ರಾಧಾ ಸಹಿತ ಅಪಾರ ಅಭಿಮಾನಿ ವರ್ಗವನ್ನು, ರಂಗ ಪ್ರೇಮಿಗಳನ್ನು ,ಸಾಹಿತ್ಯಪ್ರೇಮಿಗಳನ್ನು ಅಗಲಿ ಇಂದಿಗೆ ಮೂರು ವರ್ಷಗಳು ಕಳೆದಿವೆ. ಅವರು ನಾಟಕಗಳ ಮೂಲಕ ಸದಾ ಜೀವಂತ ಇರುವವರು, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದಂತೆ “ಚರಿತ್ರೆ ಮತ್ತು ಪುರಾಣಗಳ ನಡುವಿನ ಅನುಸಂಧಾನ ಮಾಡುವ ಶಕ್ತಿ ಗಿರೀಶ್ ಕಾರ್ನಾಡ್ ಅವರಲ್ಲಿತ್ತು. ಇವೆರಡಕ್ಕೂ ಅರ್ಥ ಹಾಗೂ ವ್ಯಾಖ್ಯಾನ ನೀಡುವಲ್ಲಿ ಅವರು ನಿಪುಣರಿದ್ದರು.”
ಗಿರೀಶ್ ಕಾರ್ನಾಡರ ನಿಧನದ ಜತೆಗೆ ಅಖಿಲ ಭಾರತೀಯ ರಂಗಭೂಮಿ ನಾಲ್ವರು ದಿಗ್ಗಜರನ್ನು ಆ ದಶಕದಲ್ಲಿ ಕಳಕೊಂಡಿತು. ಹಿಂದಿಯಲ್ಲಿ ಮೋಹನ್ ರಾಕೇಶ್, ಮರಾಠಿಯಲ್ಲಿ ವಿಜಯ್ ತೆಂಡೂಲ್ಕರ್, ಬಂಗಾಳಿಯಲ್ಲಿ ಬಾದಲ್ ಸರಕಾರ್ ಮತ್ತು ಕನ್ನಡದಲ್ಲಿ ಗಿರೀಶ್ ಕಾರ್ನಾಡ್ ನಮ್ಮನ್ನು ಅಗಲಿದ್ದಾರೆ.
———
7 thoughts on “ಹಿಂది – ಕನ್ನಡ ರಂಗಭೂಮಿಯ ಬಾಂಧವ್ಯ ಬೆಸೆದ ‘ಗಿರೀಶ್ ಕಾರ್ನಾಡ್’’”
ಗಿರೀಶ್ ಕಾರ್ನಾಡ್ ರ ಬಹುಆಯಾಮಿ ವ್ಯಕ್ತಿತ್ವವನ್ನು ನೆನಪಿಸಿದ್ದಕ್ಕಾಗಿ ಶ್ರೀನಿವಾಸ್ ಜೋಕಟ್ಟೆಯವರಿಗೆ ವಂದನೆಗಳು.
ಬರಹ ಚೆನ್ನಾಗಿದೆ.
ಗಿರೀಶ್ ಕಾರ್ನಾಡ್ ರವರ ಮಾಹಿತಿಗಾಗಿ ಧನ್ಯವಾದಗಳು.
ಬಹಳ ಉತ್ತಮ ಲೇಖನ
ಗಿರೀಶ್ ಕಾರ್ನಾಡ್ ರವರ ಮಾಹಿತಿಗಾಗಿ ಶ್ರೀನಿವಾಸ್ ಜೋಕಟ್ಟೆ ಅವರಿಗೆ ಧನ್ಯವಾದಗಳು
ಗಿರೀಶ್ ಕಾರ್ನಾಡ್ ರವರ ಮಾಹಿತಿಗಾಗಿ ಧನ್ಯವಾದಗಳು.
ಕಾರ್ನಾಡ್ ರ ಬಗ್ಗೆ ಚಂದ ಬರೆದಿದ್ದಿರಿ.