ಸಂಧ್ಯಾ ಪ್ರಶಾಂತ್ ನಾಗಲಾಪುರ ಈಚೆಗೆ ನೀಡಿದ ಸಾಂಸ್ಕೃತಿಕ ಸಂದರ್ಶನವೊಂದರಿಂದ ನಮ್ಮೆಲ್ಲರಿಗೂ ಸರಿಯಾಗಿಯೇ ಮೈ ಚಳಿ ಬಿಟ್ಟಿತು. ಸಂಧ್ಯಾ ಆಧುನಿಕ ಮನೋಭಾವದವರು, ಮುಕ್ತವಾಗಿ ಮಾತನಾಡುತ್ತಾರೆ ಎಂದು ನಮಗೆಲ್ಲ ತಿಳಿದಿದ್ದರೂ ಅವರು ಸಂದರ್ಶನದಲ್ಲಿ ಹೇಳಿದ ಮಾತುಗಳನ್ನು ಇದುವರೆಗೆ ನಾವು ಯಾರೂ ಕೇಳಿರಲಿಲ್ಲ, ಹೇಳಿರಲೂ ಇಲ್ಲ. ನಮ್ಮ ನಮ್ಮ ನಡುವಿನ ಮಾತುಕತೆಯಲ್ಲಿ ಕೂಡ ಆಡಿದವರಲ್ಲ. ಆದರೆ ಅವರು ಒಮ್ಮೆ ಮಾತನಾಡಿದರು ನೋಡಿ, ಅರೆ ಇದೆಲ್ಲ ಮಾತು ನಮ್ಮ ಮನಸ್ಸಿನಲ್ಲೇ ಇತ್ತಲ್ಲ, ನಮಗೆ ಹೇಳೋಕೆ ಮನಸ್ಸೇ ಬರಲಿಲ್ಲ, ಧೈರ್ಯವೂ ಆಗಲಿಲ್ಲ ಅಂತ ನಮ್ಮ ನಮ್ಮ ಎದೆಯನ್ನು ನಾವು ಮುಟ್ಟಿ ಮುಟ್ಟಿ ನೋಡಿಕೊಂಡೆವು. ಸಂಧ್ಯಾ ಮೇಡಂ ಅಲ್ಲಿ ಇಲ್ಲಿ ವಿಚಾರ ಸಂಕಿರಣಗಳಲ್ಲಿ, ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಸಿಗುತ್ತಿದ್ದರು. ಈಚೆಗೆ ಸಿಗದೆ ಒಂದೂವರೆ-ಎರಡು ವರ್ಷಗಳೇ ಆಗಿತ್ತು. ಇಲ್ಲ, ಇಲ್ಲ, ಈಚಿನ ಸಂದರ್ಶನದ ಒಳನೋಟಗಳಿಗಾಗಿ ಅವರನ್ನು ವೈಯಕ್ತಿಕವಾಗಿ ಅಭಿನಂದಿಸಲೇ ಬೇಕು, ಭೇಟಿ ಮಾಡಲೇಬೇಕು, ಭೇಟಿಯ ಸಂದರ್ಭದಲ್ಲಿ ಇನ್ನೂ ಹೆಚ್ಚು ವಿವರವಾಗಿ ಮಾತನಾಡಬಹುದು ಎಂದುಕೊಂಡು ದೂರವಾಣಿ ಕರೆ ಮಾಡಿದಾಗ ಮಾತಿನ ಉತ್ಸಾಹದಲ್ಲೇ ಅವರು ಹತ್ತು ಹನ್ನೆರಡೂವರೆ ಆಡಿ ಜಿಗಿಯುತ್ತಿದ್ದರು. ಮುಖವೆಲ್ಲಾ ಹೆಮ್ಮೆ, ಸಂತೋಷದಿಂದ ಅರಳಿರುವುದು ಮಾತಿನಲ್ಲೇ ಕಾಣುತ್ತಿತ್ತು. ಅನುಭವಕ್ಕೆ ಬರುತ್ತಿತ್ತು. ಮಾತನಾಡಿದ್ದರಿಂದ ಅವರನ್ನು ಭೇಟಿಯಾಗುವ ತಹತಹ ಇನ್ನೂ ಹೆಚ್ಚಾಯಿತು.
*****
ಸಂಧ್ಯಾ-ಪ್ರಶಾಂತರದು ಆಧುನಿಕ ಕುಟುಂಬ ಮಾತ್ರವಲ್ಲ, ಸಂತೃಪ್ತ ಕುಟುಂಬ ಕೂಡ. ಉಪಕಾರ ಬುದ್ಧಿಯೂ ಇತ್ತು. ಪ್ರಶಾಂತ್ ನಾಗಲಾಪುರ ಯಶಸ್ವಿ ವಕೀಲರಾಗಿ ಸಂಪಾದನೆಯ ಒಂದು ಭಾಗವನ್ನು ನಿಗದಿಯಾಗಿ ಪ್ರತಿ ವರ್ಷವೂ trust ಒಂದಕ್ಕೆ ನೀಡುತ್ತಿದ್ದಾರೆ. ಆ ಹಣದಿಂದ ಹಳ್ಳಿಗಾಡಿನ ೫ ಮಕ್ಕಳಿಗೆ ಕಾನೂನು ಶಿಕ್ಷಣ ಕೊಡಿಸಲು ನೆರವಾಗುತ್ತದೆ. ನೆಹರೂ ನಗರದ ಕ್ಲಬ್ ಅಧ್ಯಕ್ಷರು. ಕ್ಲಬ್ನ ಗ್ರಂಥಾಲಯದಲ್ಲಿ ಸಿಗದ ಒಳ್ಳೆಯ ಪುಸ್ತಕಗಳೇ ಇಲ್ಲ ಎಂಬ ಖ್ಯಾತಿ. ಸುಗಮ ಸಂಗೀತ, ಹೌಸಿ, ಜಾದೂ ಪ್ರದರ್ಶನ ಇವುಗಳ ಜೊತೆಗೆ ಕವಿಗೋಷ್ಠಿ, ಚಿತ್ರಕಲಾ ಪ್ರದರ್ಶನಗಳೂ ನಡೆಯುತ್ತಿರುವುದಕ್ಕೆ ಪ್ರಶಾಂತರೇ ಕಾರಣ. ಕ್ಲಬ್ನ ವಾರ್ತಾಪತ್ರಿಕೆಗೆ ಬಹು ದೀರ್ಘಕಾಲದಿಂದಲೂ ಅವರೇ ಸಂಪಾದಕರು. ಬರೆಯಬಲ್ಲರು ಕೂಡ. ಆದರೆ, ಪ್ರಾಧ್ಯಾಪಕಿ ಪತ್ನಿ ಸಂಧ್ಯಾರಂತೆ ನಿರಂತರ ಬರಹಗಾರರಲ್ಲ. ಸಂಧ್ಯಾ ನಿರಂತರ ಬರಹಗಾರ್ತಿ, ಅಂಕಣಗಾರ್ತಿಯಾಗಿರುವುದಕ್ಕೆ ಪ್ರಶಾಂತರ ಒತ್ತಾಸೆ ಮತ್ತು ಪ್ರೋತ್ಸಾಹವೇ ಕಾರಣ ಎಂಬುದು ಕೂಡ ಎಲ್ಲರಿಗೂ ಗೊತ್ತಿದೆ. ಮೇಡಂ ಆಗಾಗ್ಗೆ ಚಾರಣ ಪ್ರವಾಸಕ್ಕೆ ಹೊರಟುಬಿಡುತ್ತಾರೆ. Writers in Residence ಕಾರ್ಯಕ್ರಮಗಳಿಗೆ ಹೆಚ್ಚು ಕಡಿಮೆ ಪ್ರತಿ ವರ್ಷವೂ ಹೋಗುತ್ತಾರೆ. ಆವಾಗೆಲ್ಲ ಪ್ರಶಾಂತರೇ ಮನೆ-ಮಕ್ಕಳ ಜವಾಬ್ದಾರಿಯನ್ನೆಲ್ಲ ನೋಡಿಕೊಳ್ಳುವುದು.
ಪ್ರಶಾಂತ್-ಸಂಧ್ಯಾರ ಮನೋಧರ್ಮ ನಮಗೆ ನಿಚ್ಚಳವಾಗಿ ಗೊತ್ತಾಗುವುದು ಮಕ್ಕಳ ವಿಷಯಕ್ಕೆ ಬಂದಾಗಲೇ! ಮಗಳು ಸಪ್ನ ಎರಡನೇ ವರ್ಷದ ಬಿ.ಎಸ್ಸಿ ಕೊನೆಯಲ್ಲಿ ನನಗೆ ವಿಜ್ಞಾನ ಓದುವುದರಲ್ಲಿ ಆಸಕ್ತಿಯಿಲ್ಲ ಎಂದು ಘೋಷಿಸಿ ಹೊಸದಾಗಿ ಬಿ.ಎಗೆ ಸೇರಿಕೊಂಡಳು. ಅವಳು ಓದುತ್ತಿದ್ದ ಕಾಲೇಜು ವಿಜ್ಞಾನಕ್ಕೆ ಪ್ರಸಿದ್ಧವಾದದ್ದು ಮಾತ್ರವಲ್ಲ, ತುಂಬಾ ಹೆಚ್ಚಿನ ವೆಚ್ಚದ ಕಾಲೇಜು ಕೂಡ ಆಗಿತ್ತು. ಆದರೂ ಗಂಡ-ಹೆಂಡತಿ ಚೂರೂ ಬೇಸರ ಮಾಡಿಕೊಳ್ಳದೆ, ಗೊಣಗಾಡದೆ ಮಗಳ ಆಯ್ಕೆಗೆ ಸ್ಪಂದಿಸಿದರು. ಈಗ ಅವಳು ಬಿ.ಎ ಮುಗಿಸಿ ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ದೂರಶಿಕ್ಷಣ ವ್ಯವಸ್ಥೆಯ ಮೂಲಕ ಮಾನವಶಾಸ್ತ್ರ ಓದುತ್ತಿದ್ದಾಳೆ. ಅವಳ ಮದುವೆಗೆ ಕೂಡ ಪ್ರಯತ್ನ ನಡೀತಿದೆ. ಒಳ್ಳೆ ಕಡೆ ಸಂಬಂಧ ಹುಡುಕುತ್ತಿದ್ದಾರೆ ಎಂಬ ಮಾತು ಕೂಡ ಅಲ್ಲಿ ಇಲ್ಲಿ ಕೇಳಿಬರುತ್ತಿತ್ತು. ಮಗ ಎಂ.ಕಾಂ ಮಾಡಿ Travel Agency ನಡೆಸುತ್ತಾ ಟ್ಯಾಕ್ಸಿ ಓಡಿಸುತ್ತಿದ್ದರೂ ಯಾವ ರೀತಿಯ ವಿರೋಧವನ್ನೂ ವ್ಯಕ್ತಪಡಿಸಿರಲಿಲ್ಲ. ಇಷ್ಟು ದೊಡ್ಡ ವಕೀಲರು, ಪ್ರಸಿದ್ಧ ಪ್ರಾಧ್ಯಾಪಕಿ, ಬರಹಗಾರ್ತಿ, ಇಂಥವರ ಮಗ Travel Agency ನಡೆಸಬಹುದೆ ಅಂಥ ನಮ್ಮ ನಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರೂ ಈ ವಿಷಯ ಚರ್ಚೆಗೆ ಬಂದಾಗಲೆಲ್ಲ ದಂಪತಿಗಳು ಮಗನನ್ನು ಮೆಚ್ಚಿಯೇ ನಮ್ಮ ಚರ್ಚೆ ಮುಗಿಯುತ್ತಿತ್ತು.
*****
ಸಂದರ್ಶನದಲ್ಲಿ ಮಕ್ಕಳನ್ನು Settle ಮಾಡುವುದು ಅನ್ನುವ ಪರಿಕಲ್ಪನೆಯನ್ನೇ ಸಂಧ್ಯಾ ಬಲವಾಗಿ ವಿರೋಧಿಸಿದರು. ಗೇಲಿ ಮಾಡಿದರು. ಈ ವಿಚಾರವೇ ಭ್ರಮಾತ್ಮಕ. ಮನುಷ್ಯ ಎಷ್ಟೇ ಪ್ರಯತ್ನ ಪಟ್ಟರೂ, ಎಷ್ಟೇ ವಯಸ್ಸಾದರೂ, ಎಷ್ಟೇ ಶ್ರೀಮಂತನಾದರೂ ಸೆಟ್ಲ್ ಆಗೋಲ್ಲ. ಇನ್ನು ಮಕ್ಕಳನ್ನು Settle ಮಾಡುವುದೆಂತು? ಹೆಣ್ಣು ಮಕ್ಕಳು ಸೆಟ್ಲ್ ಆಗುವುದು ಅಂದರೆ ಮದುವೆ ಆಗಿಬಿಡುವುದು ಎಂದು ಅರ್ಥವೇ? ಮದುವೆ ಆಗುವುದು ಎಂದರೆ ಯಾವ ರೀತಿಯ ಮದುವ? ಪ್ರೇಮ ವಿವಾಹವೆ? ಗುರುಹಿರಿಯರು ನಿಶ್ಚಯಿಸಿದ ವಿವಾಹವೆ? ಬೇರೆ ಬೇರೆ ಸಾಮಾಜಿಕ ವಲಯದವರೊಡನೆ ಆಗುವ ಮದುವೆಯೆ? ಆಯ್ತು, ಯಾವುದೋ ಒಂದು ರೀತಿಯ ಮದುವೆ ಆಗೇ ಹೋಯಿತು ಎಂದೇ ಇಟ್ಟುಕೊಳ್ಳೋಣ; ಮದುವೆ ಆದ ಮೇಲೆ ಯಾವಾಗ ಮಕ್ಕಳಾಗಬೇಕು, ಎಷ್ಟು, ಯಾವ ತರದ್ದು? ಹಾಗೆಂದರೆ, ಮದುವೇನೇ ಆಗದ ಹೆಣ್ಣು ಮಕ್ಕಳು ಸೆಟ್ಲ್ ಆಗುವುದೇ ಇಲ್ಲವೇ? ಜೀವನದಲ್ಲಿ, ಜೀವನದುದ್ದಕ್ಕೂ! ಮದುವೆಯ ನಂತರ ವಿಚ್ಛೇದನವಾದರೆ ಮತ್ತೆ ಯಾವಾಗ ಎಲ್ಲಿ ಸೆಟ್ಲ್ ಆಗಬೇಕು? ಇನ್ನು ಗಂಡು ಮಕ್ಕಳ ಲೆಕ್ಕಕ್ಕೆ ಬಂದರೆ, ಅವರು ಯಾವಾಗ ಸೆಟ್ಲ್ ಆಗ್ತಾರೆ? ಮದುವೆ ಆಗಿ ಅವರಿಗೆ ಗಂಡು ಮಕ್ಕಳಾದ ಮೇಲಾ? ಗಂಡು ಮಕ್ಕಳಾಗದೆ ಹೋದರೆ, ಏನು ಮಾಡಬೇಕು? ನಮ್ಮ ಮಕ್ಕಳ ಮೇಲೆ ನಮಗೆ ಪ್ರೀತಿ ಇಲ್ಲದಿದ್ದರೂ, ಇರುವ ಪ್ರೀತಿ ಕಡಿಮೆ ಆಗಿದ್ದರೂ ನಮ್ಮ ಆಸ್ತಿ, ಮನೆ, ಉದ್ಯೋಗ ಎಲ್ಲವನ್ನೂ ಅವರಿಗೆ ಕೊಡಬೇಕಾ? ಹೀಗೆ ಇಂತಹ ಪ್ರಶ್ನೆಗಳನ್ನೇ ಕೆದಕಿ ಕೆದಕಿ ಖಾರವಾಗಿ ಕೇಳುತ್ತಲೇ ಹೋದರು ಮೇಡಂ. ಸಂದರ್ಶನ ಇದ್ದದ್ದೇ ಹದಿನೈದು ನಿಮಿಷ. ಅದರಲ್ಲಿ ಜಾಹಿರಾತು ಎರಡೂವರೆ ನಿಮಿಷ. ಮಧ್ಯೆ ಒಂದು ಸುಭಾಷಿತದ ಮಾತು ಇಲ್ಲದಿದ್ದರೆ ಸಂಧ್ಯಾ ಇನ್ನೂ ಏನೇನು ಪ್ರಶ್ನೆಗಳನ್ನು ಕೇಳುತ್ತಿದ್ದರೋ?
*****
ಸಂದರ್ಶನದ ಪಾಠವನ್ನು ಫೇಸ್ಬುಕ್ನಲ್ಲಿ ಕೂಡ ಹಾಕಿದ್ದರು. ಎಷ್ಟೊಂದು ಜನರ ಅಭಿನಂದನೆ, ಮೆಚ್ಚುಗೆ, ಎಷ್ಟೊಂದು ಜನರಿಂದ ಮರು ಹಂಚುವಿಕೆ – ನನ್ನದೂ ಕೂಡ ಇದರಲ್ಲಿ ಸೇರಿತ್ತು. ಮೇಡಂ ಉತ್ತರವಾಗಿ ಎರಡು ವಾಕ್ಯ ಬರೆದು ನನ್ನೊಡನೆ ಆತ್ಮೀಯವಾಗಿ ಪ್ರತಿಕ್ರಿಯಿಸಿದ್ದರು.
ನಿಮ್ಮ ಮನೆಗೆ ಬಂದು ಮಾತನಾಡುತ್ತೇನೆ ಎಂದು ಹೇಳಿದಾಗ, ಕುತೂಹಲ ಮಾತ್ರವಿದ್ದರೂ, ಮನೆಗೆ ಹೋಗುವ ಸಮಯ ಹತ್ತಿರ ಬಂದಂತೆಲ್ಲ ನಾನೇ ಉದ್ವೇಗಕ್ಕೆ ಒಳಗಾಗಿದ್ದೆ. ಮೇಡಂ ಸಂದರ್ಶನದ ಪಾಠವನ್ನು ವಿದೇಶಗಳಲ್ಲಿ ಈಗಾಗಲೇ ಮನೆ ಕೊಂಡು ಹತ್ತಾರು ವರ್ಷಗಳಿಂದ ವಾಸವಾಗಿರುವ ನನ್ನ ಇಬ್ಬರು ಮಕ್ಕಳ ಹತ್ತಿರ ಕೂಡ ಪ್ರಸ್ತಾಪಿಸಿದ್ದೆ. ಬರಲಿರುವ ಮೇಡಂ ಭೇಟಿ ಬಗ್ಗೆ ಕೂಡ ಹೇಳಿಕೊಂಡಿದ್ದೆ.
*****
ಅಂತೂ ಸ್ಕಂದಶ್ರೀ ಫ್ಲಾಟ್ ತಲುಪಿದಾಗ ಕರೆಗಂಟೆ ಒತ್ತುವ ಅವಶ್ಯಕತೆಯೇ ಬರಲಿಲ್ಲ. ಬಾಗಿಲು ತೆರೆದೇ ಇತ್ತು. ಓ! ಇನ್ನೂ ಅದೇ ಮನೆ ಕೆಲಸದವಳು ಇದ್ದಾಳೆ. ವಿಶಾಲವಾದ ದಿವಾನಖಾನೆ, ಕುರ್ಚಿ, ಮೇಜು, ಸೋಫಾ ಮೇಲಿರುವ ಧೂಳನ್ನು ಹೊಡೆಯುತ್ತಿದ್ದಾಳೆ. ನನ್ನನ್ನು ನೋಡಿ ಪರಿಚಯದ ನಗೆ ನಕ್ಕಳು. ಗೌರಿ ಅಲ್ಲವೇ ಇವಳ ಹೆಸರು? ಎಷ್ಟು ವರ್ಷದಿಂದ ಇವಳೇ ಇದ್ದಾಳೆ? ಇರದೆ ಏನು ಮಾಡ್ತಾಳೆ? ಈ ವಿಷಯದಲ್ಲೂ ಸಂಧ್ಯಾ-ಪ್ರಶಾಂತ್ ಒಂದು ಆದರ್ಶವೇ! ವಾರ್ಷಿಕ ಇಂಕ್ರಿಮೆಂಟ್ ಕೊಡ್ತಾರೆ, ವಿಮೆ ಮಾಡಿಸಿದ್ದಾರೆ, ಮಕ್ಕಳ ಶಾಲೆಯ ಶುಲ್ಕ ತುಂಬುತ್ತಾರೆ, ಹಬ್ಬದ ದಿನಗಳಲ್ಲಿ ಮನೆಗೇ ಊಟಕ್ಕೆ ಕೂಗುತ್ತಾರೆ. ಇಲ್ಲದೇ ಹೋದರೆ ಹಿಂದಿನ ದಿನವೇ ಹಬ್ಬದ ವಿಶೇಷಗಳನ್ನೆಲ್ಲ ಮಾಡಿಸಿಕೊಂಡು, ಹಬ್ಬದ ದಿನಕ್ಕೆಂದು ಉಡುಗೊರೆ ಸಮೇತ ರಜಾ ಕೊಡ್ತಾರೆ.
ಗೌರಿ ಸ್ವಾಗತಿಸಿದಳು. ಎಲ್ಲರೂ ಮೇಲುಗಡೆ ರೂಮಿನಲ್ಲಿದ್ದಾರೆ, ನೀವು ಬಂದಿರುವುದನ್ನು ಹೇಳಿ ಬರ‍್ತೀನಿ ಎಂದು ಹೊರಟಳು. ಪರವಾಗಿಲ್ಲ ಸ್ವಲ್ಪ ಹೊತ್ತು ಕಾಯ್ತೀನಿ ಎಂದು ನಾನು ಮಾತು ಮುಗಿಸುವ ಮುನ್ನವೇ ಮೆಟ್ಟಿಲುಗಳನ್ನು ಹತ್ತಲು ಪ್ರಾರಂಭಿಸಿದಳು. ಮೇಲಿನ ರೂಮಿನ ಬಾಗಿಲು ತೆರೆದಿತ್ತು. ಕೆಳಗಡೆ ಮೇಡಂ ಮತ್ತು ವಕೀಲರ ಪುಸ್ತಕಗಳ ಬೀರು ಕಾಣಿಸಿತು. ಬಿಸಿ ಬಿಸಿ ಮಾತುಕತೆ ಕೇಳಿಸಿತು. ಮಗಳು ಬಿರುಸಿನ ಮಾತಿನ ಮಧ್ಯೆಯೇ ಅಳುತ್ತಿದ್ದಳು. ಮಗ ಧ್ವನಿ ಏರಿಸಿ ಮಾತನಾಡುತ್ತಿದ್ದ. ಒಂದೆರಡು ಸಲ ಟೇಬಲ್ ಕುಟ್ಟಿದ ಸದ್ದು ಕೂಡ ಕೇಳಿಸಿತು.
ಅಯ್ಯೋ! ಇವರ ಕುಟುಂಬದ ನಾಲ್ಕು ಗೋಡೆಯ ಒಳಗಿನ ಮಾತುಗಳನ್ನೆಲ್ಲ ನಾನೇಕೆ ಕೇಳಿಸಿಕೊಳ್ಳಬೇಕು ಎಂದೆನಿಸಿದರೂ ಹೊರಡಲು ಕಾಲುಗಳಿಗೆ ಮನಸ್ಸಿರಲಿಲ್ಲ.
*****
ಮಗಳು ಹೇಳುತ್ತಿದ್ದಳು: ಅಮ್ಮ ನಿನ್ನಂತ ಗೋಸುಂಬೆ ಈ ಜಗತ್ತಿನಲ್ಲೇ ಇಲ್ಲ! ಹೆಣ್ಣು ಮಕ್ಕಳ ಸಕಲ ಸ್ವಾತಂತ್ರ್ಯದ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿ. ನನಗೆ ಮಾತ್ರ ಎಲ್ಲ ವೈವಾಹಿಕ Bureauಗಳಲ್ಲೂ ರಿಜಿಸ್ಟರ್ ಮಾಡಿಸ್ತಿ. ಮಠದ ಸ್ವಾಮಿಗಳ ಕಾರ್ಯದರ್ಶಿಗೆ ಕೂಡ ಗಂಡು ಹುಡುಕಲು ಹೇಳಿರುವೆ. ಬಂದ ಯಾವುದೇ ಸಂಬಂಧಾನೂ ಸುತಾರಾಂ ಒಪ್ಪಲ್ಲ. ಕುಂಡಲಿ ಲೆವೆಲ್ನಲ್ಲೇ ತಿರಸ್ಕರಿಸುತ್ತೀರಿ. ನೀವು ಇಷ್ಟಪಟ್ಟ ಯಾವುದಾದೂ ಒಂದು ಸಂಬಂಧ ಕೈಗೂಡದೆ ಹೋದರೆ, ತಿಂಗಳಾನುಗಟ್ಟಲೆ ಮನೆಯಲ್ಲಿ ಖಿನ್ನತೆ, ಹತಾಶೆ.
ರಾತ್ರಿ ಹೊತ್ತು ನಾನು ಗೆಳತಿಯರ ಮನೆಯಲ್ಲಿ ಇರತೀನಿ ಅನ್ನುವ ಕಾರ್ಯಕ್ರಮ ಅಂದರೆ ನಿಮ್ಮಿಬ್ಬರಿಗೂ ಭಯವೋ ಭಯ! ಇಡೀ ರಾತ್ರಿಯೆಲ್ಲ ಯಾರ ಯಾರ ಜೊತೆಯಲ್ಲೋ ಮಲಗತೀನಿ ಅಂತ ಕನಸು ಕಾಣುತ್ತೀರಿ. ಮನೇನಲ್ಲಿ ಪ್ರತಿನಿತ್ಯ ರಾಮಾಯಣ, ವಾದವಿವಾದ. ವೇಶ್ಯಾವಾಟಿಕೆ ಮಾಡೋಕ್ಕೆ ನಾನು ಹೊರಟಿದ್ದೀನಿ ಎನ್ನುವ ಭಾವನೆ. ಯಾರೇ classmte ಬಂದರೂ ಅವರ ಜಾತಿ, ಅಂತಸ್ತು, ಹಿನ್ನೆಲೆಯನ್ನೆಲ್ಲ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ವಿಚಾರಿಸುತ್ತೀರಿ. Not done ಅಮ್ಮ.
ಅಲ್ಲ ಅಮ್ಮ ಸಂದರ್ಶನದಲ್ಲಿ ಎಷ್ಟು ಖಡಾಖಂಡಿತವಾಗಿ ಮಾತನಾಡುತ್ತಿ. ನಮ್ಮ ಮನೇನಲ್ಲಿ ನಾಲ್ಕು ಗೋಡೆಗಳ ಮಧ್ಯೆ ಏನಾಗ್ತಾ ಇದೆ ಅಂತ ಹೇಳಬೇಕು, ಹಂಚಿಕೊಳ್ಳಬೇಕೇ ಹೊರತು ಸಾರ್ವಜನಿಕ ಭಾಷಣ ಕೊಟ್ಟರೆ ಏನು ಪ್ರಯೋಜನ? ನಮಗೆಲ್ಲ ಚಿಕ್ಕಂದಿನಲ್ಲಿ ಕೂರಿಸಿಕೊಂಡು ಪದ್ಯ ಓದುವುದು ಹೇಗೆ ಅಂತ ಹೇಳಿ ಕೊಡ್ತಿದ್ದೆಯಲ್ಲ ಹಾಗಾಯಿತು ನಿನ್ನ ಭಾಷಣ! ಆಪ್ತವಾದ ಸಂಗತಿಗಳ ಬಗ್ಗೆ ಸಾರ್ವಜನಿಕ ಭಾಷಣದ ಶೈಲಿಯಲ್ಲಿ ಮಾತನಾಡಿದರೆ ಏನು ಪ್ರಯೋಜನ ಹೇಳು. ಮೊದಲನೆಯದಾಗಿ ಮಾತೇ ಅಪ್ರಾಮಾಣಿಕವಾದ್ದು. ಅದರಿಂದ ಯಾರಿಗೂ ಯಾವ ರೀತಿಯ ಪ್ರಯೋಜನವೂ ಆಗುವುದಿಲ್ಲ. ಫೇಸ್ಬುಕ್ನಲ್ಲಿ ಹೆಚ್ಚು ಜನಪ್ರಿಯವಾಗಬಹುದು, ಅಷ್ಟೇ.
ಮಾತಿನ ಮಧ್ಯೆ ಮಗಳು ಬಿಕ್ಕುತ್ತಿದ್ದಳು. ತನ್ನನ್ನು ತಾನೇ ಸಾವರಿಸಿಕೊಂಡು ಇನ್ನೂ ಬಿರುಸಾಗಿ ಮುಂದಿನ ಮಾತು ಹೇಳುತ್ತಿದ್ದುದು ಕೂಡ ಕೆಳಗಡೆ ಹಾಲಿನಲ್ಲಿ ಕುಳಿತಿದ್ದ ನನಗೆ ಗೊತ್ತಾಗುತ್ತಿತ್ತು.
*****
ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಕೇಳಿಸಿಕೊಳ್ಳುತ್ತಾ ನನಗೊಂದು ರೀತಿಯ ಸಮಾಧಾನ, ನೆಮ್ಮದಿ ಆಯ್ತು. ಪ್ರಾರಂಭದಲ್ಲಿ ಇನ್ನೊಬ್ಬರ ಮಾತುಗಳನ್ನು ಹೀಗೆ ಕೇಳಿಸಿಕೊಳ್ಳಬಾರದು ಅಂತ ಅನ್ನಿಸ್ತಾಯಿತ್ತು. ಆಮೇಲೆ ಸ್ವಲ್ಪ ಸ್ವಲ್ಪವಾಗಿ ಧೈರ್ಯ ಬಂತು. ಕೇಳಿಸಿಕೊಳ್ಳಬೇಕಾದ ಮಾತು, ಕೇಳಿಸಿಕೊಳ್ಳಬೇಕಾದ ಕತೆಯನ್ನೇ ಕೇಳಿಸಿಕೊಳ್ಳುತ್ತಿರುವೆ ಎಂದು ಅನ್ನಿಸಿತು.
ಗೌರಿ ಈ ಮಧ್ಯೆ ಶರಬತ್ತು, ಚಿಪ್ಸ್ ತಂದಿಟ್ಟಳು. ಸಲಿಗೆಯಿಂದ ನಕ್ಕಳು. ಅವಳಿಗೂ ಮೇಲಿನ ಮಾತುಗಳೆಲ್ಲ ಕೇಳಿಸ್ತಾ ಇತ್ತು. ದಿನವೂ ಈ ರೀತಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿರಬೇಕು. ಮನೆಗೆಲಸದವಳ ಎದುರಿಗೂ ಈ ರೀತಿಯ ಮಾತುಗಳನ್ನಾಡುವ ಸಮಾನತೆಯ ಮನೋಭಾವ, ಗೌರಿಯ ಚಲನವಲನೆ ಕೂಡ ಸರ್ವೇ ಸಾಧಾರಣವಾಗಿತ್ತು. ಯಾವುದೇ ಮುಜುಗರ, ಸಂಕೋಚ ಕಂಡುಬರಲಿಲ್ಲ.
*****
ಮಗ ಇನ್ನೂ ಖಂಡಿತವಾಗಿ ಮುಂದುವರೆಸಿದ. ಅಮ್ಮ, ನಿನಗೂ, ಅಪ್ಪನಿಗೂ ತುಂಬಾ Insecurity. ನಾನು Travel Agency ನಡೆಸ್ತಾ ಇರೋದು ನಿಮಗೆ ಸುತಾರಾಂ ಇಷ್ಟವಿಲ್ಲ. ಇದರಿಂದ ಕುಟುಂಬದ ಸ್ಥಾನಮಾನಕ್ಕೂ ಕಡಿಮೆ, ನಿಮ್ಮ ಮರ್ಯಾದೆಗೂ ಕುಂದು ಅನ್ನುವ ಭಾವನೆ. ನಾನು ಗಿರಾಕಿಗಳ ಹತ್ತಿರ ನೇರವಾಗಿ ಫೋನ್ನಲ್ಲಿ ಮಾತನಾಡೋದು, ಡ್ರೈವರ್ಗಳಾರೂ ಕೆಲಸಕ್ಕೆ ಬಾರದ ದಿನಗಳಲ್ಲಿ ನಾನೇ ಡ್ರೈವ್ ಮಾಡಿಕೊಂಡು ಗಿರಾಕಿಗಳನ್ನು ಏರ್ಪೋರ್ಟ್ನಲ್ಲಿ ಬಿಡೋದು ನಿಮಗೆ ಕೊಂಚವೂ ಇಷ್ಟವಿಲ್ಲ. ನಿಮ್ಮ ಹೆದರಿಕೆ ಏನು ಅಂದರೆ, ನನಗೆ ಒಳ್ಳೆ ಸಂಬಂಧ ಸಿಗದೆ ಹೋಗಬಹುದು ಅಂತಾ. ಇನ್ನೂ ದೊಡ್ಡ ಭಯ ಅಂದರೆ, ನನ್ನಿಂದಾಗಿ ತಂಗಿಗೂ ಒಳ್ಳೆಯ ಕಡೆಯಿಂದ ಸಂಬಂಧ ಕೇಳಿಕೊಂಡು ಬರದೇ ಇರಬಹುದು ಅಂತಾ. ಈಗಿನ ಕಾಲದಲ್ಲಿ ಯಾವುದು ಯಾವಾಗ ಒಳ್ಳೆ ಸಂಬಂಧ, ಒಳ್ಳೆ ಸಂಬಂಧ ಅಲ್ಲ ಅಂತ ಯಾರಾದರೂ ಯಾವಾಗಲಾದರೂ ಹೇಳಲಿಕ್ಕೆ ಆಗುತ್ತಾ? ಹೇಳುವುದರ ಜೊತೆಗೆ ಎಲ್ಲರೆದುರಿಗೂ Prove ಬೇರೆ ಮಾಡಬೇಕಲ್ಲ? ಬಾದುರಿ ಕುಟುಂಬದಲ್ಲೇ ನೋಡಿ, ಅಪ್ಪ ಪೋಲಿಸ್ ಇಲಾಖೆ, ಅಮ್ಮ ರೆವಿನ್ಯೂ ಇಲಾಖೆ. ಮಕ್ಕಳಿಗೆಲ್ಲ ವಿದೇಶೀ ಕಂಪನಿಗಳಲ್ಲೇ ಕೆಲಸ. ಎಷ್ಟು ಒಳ್ಳೆಯ ಕಾರುಗಳು ಮನೆ ಮುಂದೆ ಯಾವಾಗಲೂ ನಿಂತಿರುತ್ತವೆ. ಈಗಾಗಲೇ ಇಬ್ಬರು ಮಕ್ಕಳಿಗೆ ವಿಚ್ಛೇದನ ಸಿಕ್ಕಿದೆ. ಇನ್ನೊಬ್ಬಳಿಗೆ ಮದುವೆ ಗೊತ್ತಾಗುತ್ತೆ, ಮುಂದು ಮುಂದಕ್ಕೆ ಹೋಗುತ್ತಲೇ ಇರುತ್ತೆ. ಇನ್ನೊಬ್ಬಳಿಗೆ ಮದುವೆ ಆಗೋದಕ್ಕೇ ಇಷ್ಟ ಇಲ್ಲ. ಅವರ ಮನೆಗೆ ಬರದೆ ಇರುವ ಅಧಿಕಾರಿಯೇ ಇಲ್ಲ, ನಾಯಕರೇ ಇಲ್ಲ.
*****
ತಾಯಿ-ತಂದೆ ಇಬ್ಬರೂ ಒಬ್ಬರಾದ ಮೇಲೆ ಒಬ್ಬರು ಬಿಡಿಸಿ, ಬಿಡಿಸಿ ಹೇಳಿದರು:
ಮಕ್ಕಳ ಜೀವನ ಚೆನ್ನಾಗಿರಬೇಕು, ನೆಮ್ಮದಿಯಾಗಿರಬೇಕು, ಯಾವಾಗಲೂ ಸಂತೋಷದಿಂದ ಇರಬೇಕೆಂದು ತಾನೇ ಎಲ್ಲರೂ ಹಂಬಲಿಸುವುದು. ಅಷ್ಟನ್ನೇ ತಾನೇ ನಾವು ಕೂಡ ಬಯಸ್ತಾ ಇರೋದು. ಯಾಕೆ ಇಬ್ಬರು ಮಕ್ಕಳೂ ಮೈ ಮೇಲೆ ಬೀಳ್ತೀರೆ. ಮಾತಾಡಿಕೊಂಡು ಮೇಲೆ ಬೀಳುವವರ ತರಹ. ಇದೂ ಕೂಡ not done.
ಮತ್ತೆ ಮಗಳ ಧ್ವನಿ. ಹಾಗಲ್ಲ. ನಮ್ಮ ಮನೆಯಲ್ಲಿ ಯಾವ ಸಮಸ್ಯೆಯೂ ಇಲ್ಲ. ಎಲ್ಲವನ್ನೂ ಪರಿಹರಿಸಿಕೊಂಡುಬಿಟ್ಟಿದ್ದೇವೆ ಎನ್ನುವ ಲೋಕಾಭಿರಾಮದ ಧಾಟಿಯಲ್ಲಿ ನೀನು ಭಾಷಣ ಹೊಡೆದೆಯಲ್ಲ. ಅದನ್ನು ನಾನು ಬೇಡವೆಂದದ್ದು. ಯಾವುದೇ ಮಾತಿನ ಹಿಂದಾದರೂ ನಮ್ಮ ನಮ್ಮ ಮನೆಯ ಸತ್ಯದ, ಸ್ವಂತ ಅನುಭವದ ಒತ್ತಾಸೆ ಇರಬೇಕು.
ಈಗ ತಾಯಿ ಕೊಂಚ ತಾಳ್ಮೆ ಕಳೆದುಕೊಂಡವರಂತೆ, ಇಲ್ಲ ಎಲ್ಲವನ್ನೂ ಸಾವರಿಸುವಂತೆ, “ಆಯ್ತು, ನಿನ್ನ ಸುಧಾರಣೆಯ ಮಾತು ನಾಳೆಗೂ ಸ್ವಲ್ಪ ಇರಲಿ. ಈಗ ಕೆಳಗಡೆ ಸ್ನೇಹಿತರೊಬ್ಬರು ಬಂದಿದ್ದಾರೆ” ಎಂದು ಮಹಡಿಯಿಂದ ಇಳಿಯಲು ಪ್ರಾರಂಭಿಸಿದರು. ನಾಲ್ಕು ಜನರೂ ಒಬ್ಬರನ್ನು ಒಬ್ಬರು ತಳ್ಳಿಕೊಂಡು, ಸೋದರಿ ಸೋದರನ ಬೆನ್ನ ಮೇಲೆ ಗುದ್ದುತ್ತಾ ಕುಲುಕುಲು ನಗುತ್ತಾ ಕೆಳಗಿಳಿದರು. ಅವರೆಲ್ಲಾ ನಗುತ್ತಿದ್ದರೂ ನನಗೇ ಮುಜುಗರ. ಇಷ್ಟೆಲ್ಲಾ ಮಾತುಕತೆಯ ಸಂದರ್ಭದಲ್ಲಿ ನಾನೂ ಇಲ್ಲಿರುವುದರ ಬಗ್ಗೆ ಅವರಿಗೇನು ಅನ್ನಿಸಿತೋ? ಇದೆಲ್ಲ ಏನೂ ನಡೆದೇ ಇಲ್ಲವೇನೋ ಎಂಬಂತೆ ಸಂಧ್ಯಾ, “Sorry ನಾನೂ ಪ್ರಶಾಂತ್ ನಿಮ್ಮನ್ನು ತುಂಬಾ ಕಾಯಿಸಿಬಿಟ್ಟೆವು”. ಆಕೆ ಹೇಳುತ್ತಿರುವುದು, ಹೇಳುತ್ತಿರುವ ರೀತಿ ಎರಡೂ ಸರಿಯೆಂಬಂತೆ ಪ್ರಶಾಂತ್ ಕೂಡ ನಿರಾಳವಾಗಿ ನಕ್ಕು ಹಸ್ತ ಲಾಘವ ನೀಡಲು ಕೈಚಾಚಿದರು.
“ಹೇಗಿದ್ದೀರಿ. ಮನೆಯಲ್ಲಿ ಎಲ್ಲರೂ ಕ್ಷೇಮವೆ. ವಿದೇಶದಲ್ಲಿರುವ ಸಂತಾನ ರತ್ನಗಳು ಹೇಗಿವೆ?” ತಮ್ಮ ಮಾತಿಗೆ ತಾವೇ ನಕ್ಕರು. ಮಾತಿನಲ್ಲಿ ಸಮಾಧಾನದ ಭಾವವೇ ಇತ್ತು.
ಹೌದು ಮೇಡಂ ಎಂದ ತಕ್ಷಣ, ದೂರದಲ್ಲಿರುವ ಮಗಳು ಮಗು ಪಡೆಯಲು ಕೃತಕ ಗರ್ಭಧಾರಣೆಯ ಮೂಲಕ ಹೆಣಗಾಡಿ ಹೆಣಗಾಡಿ ಸೋತು ತನ್ನ ದೇಹದ ಆರೋಗ್ಯವನ್ನೇ ಹಾಳುಮಾಡಿಕೊಂಡಿರೋದು ಕಣ್ಣ ಮುಂದೆ ಬಂದಿತು. ಗಂಟಲು ಸೆರೆ ಕಟ್ಟಿತು. ಇದನ್ನು ಇಲ್ಲಿ ಹೇಳುವುದು ಸರಿಯೋ ಇಲ್ಲವೋ ಎಂದು ಗೊಂದಲವಾಗಿ ತಕ್ಷಣ ಹೊರಡುವುದು, ಮಾತನಾಡದೇ ಎದ್ದು ಬಿಡುವುದು ಒರಟು ವರ್ತನೆಯಾಗಬಹುದು ಎನಿಸಿ ಹೌದು ಮೇಡಂ ಎಂದಾಗ, ಎದುರಿಗೇ ಕುಳಿತಿರುವ ಅವರ ಮಗಳು ನನ್ನನ್ನೇ ಕೆಕ್ಕರಿಸಿ ನೋಡಿದ ಭಾವನೆ ಬಂತು. ಪಾಪ, ಅವಳು ಮೊಬೈಲ್ನಲ್ಲಿ ಯಾವುದೋ ಸಂದೇಶ ಟೈಪ್ ಮಾಡುತ್ತಿದ್ದಳು. ನಾನು ನಗುವ ಪ್ರಯತ್ನ ಮಾಡುತ್ತಲೇ ಇದ್ದೆ. ಮಕ್ಕಳು ನಮಸ್ಕಾರ ಹೇಳಿದರು. ಮಗನಿಗೆ ಯಾವುದೋ ಗಿರಾಕಿಯಿಂದ ಫೋನ್ ಬಂತು. ಮಗಳು ಮತ್ತೆ ಮೊಬೈಲ್ನಲ್ಲಿ ಮುಳುಗಿದಳು.
ಈವತ್ತು ಬೆಳಿಗ್ಗೆ ನಮ್ಮ ಮನೆಯಲ್ಲಿ ತಿಂಡಿ ಮಾಡಲೇ ಇಲ್ಲ. ಹೀಗೇ ಮಾತನಾಡಿಕೊಂಡು ಕುಳಿತುಬಿಟ್ಟೆವು. ಗೌರಿ ಊಟಕ್ಕೇ ರೆಡಿ ಮಾಡಿಬಿಟ್ಟಿದ್ದಾಳೆ. ಮನೇಲೂ ಎಲ್ಲ ತರಕಾರಿ ಮುಗಿದೇ ಹೋಗಿದೆ. ಇದ್ದುದರಲ್ಲಿ ದಪ್ಪ ಮೆಣಸಿನಕಾಯಿ, ಚಪ್ಪರದವರೆ ಸೇರಿಸಿ ಹುಳಿ ಮಾಡಿದ್ದಾಳೆ. ಜೊತೆಗೆ ಅವಳಿಗೆ ಖುಷಿಯಾದಾಗ ಮಾಡುವ ರಾಗಿ ಮುದ್ದೆ ಕೂಡ. Please join us.
ನನಗೆ ಬೇಡ ಎನ್ನಲು ಯಾವ ಕಾರಣಗಳೂ ಆ ವಾತಾವರಣದಲ್ಲಿ ಕಾಣಲಿಲ್ಲ. ನಿಜಕ್ಕೂ ಅದೊಂದು ಕೌಟುಂಬಿಕ ಊಟವೇ ಆಗಿತ್ತು. ಮಾತುಕತೆಯ ಹದವು ಕೂಡ ವಿಸ್ತಾರವಾಗಿತ್ತು ಮತ್ತು ಧಾಟಿ ಕೂಡ ತೀರಾ ಸಾರ್ವಜನಿಕವಾಗಿರಲಿಲ್ಲ.
*****
10 thoughts on “ಕದ್ದು(!) ಕೇಳಿಸಿಕೊಂಡ ಕಥೆ”
ಇದೊಂದು ಬಗೆಯ ಅಂತರಂಗದ ಮೃದಂಗ. ನಮಗೆ ನಾವೇ ಮೆಲುಕು ಹಾಕಲು. nice!
Sir.Kind of u to write ur appreciation.When seniors like u appreciate one feels confident.
ಈ ಬಗೆಯ ದ್ವಂದ್ವ, ವೈರುಧ್ಯಗಳು ಇದ್ದರೇ ಜೀವನ ಸಾರ್ಥಕ ಎಂಬ ಮನೋಭಾವ ಇಂದಿನ ಬಹುಪಾಲು ಜನರಲ್ಲಿದೆ. ಸರಳವಾಗಿ, ನೇರವಾಗಿ ಬದುಕುವುದು ದುಬಾರಿಯಾಗುತ್ತಿದೆ.ಚಿಂತನೆಗೆ ಹಚ್ಚಿದ ಕಥೆ, ಧನ್ಯವಾದಗಳು ಸರ್.
Thanks for ur Comments
ಗುಡ್ ಸ್ಟೋರಿ ಸರ್..ಮನೆ ಮನೆಯ ರಾಮಾಯಣ. ಅದನ್ನು ಸಾರ್ವಜನಿಕವಾಗಿ ಹೇಗೆ ಕ್ಯಾರಿ ಮಾಡ್ತೆವೆ ಎನ್ನುವುದು ಮುಖ್ಯ.ಸರಳವಾದ ಮುಖ್ಯವಾದ ಕಥೆ
Thanks Nandini for comments.
ಮನುಷ್ಯನ ಖಾಸಗಿ ಬದುಕಿನ ಓರೆಕೋರೆಗಳು, ಸಾರ್ವಜನಿಕವಾಗಿ ತೋರಿಸುವ ಮುಖದ ಚಿತ್ರಣವನ್ನು ಮನೆಯ ಮಕ್ಕಳು ತಮ್ಮ ಖಾಸಗಿ ನಾಲ್ಕುಗೋಡೆಗಳ ನಡುವೆ ಅನಾವತಣಗೊಳಿಸುವುದು ಬದುಕಿನ ಕಟು ವಾಸ್ತವದ ವಿಡಂಬನೆಯಂತೆ ಕಂಡಿತು. ಆದರೆ ಒಂದು ಬಗೆಯ ವಿಷಾದ ನಾವು ಎಣಿಸಿದಂತೆ ಜೀವನ ಇರದೆ ದುಃಖ ಆಗುವ ಪರಿ ವಿಷಾದಮಯ
ThanksHabby sir for ur kind views and encouragement.
ಹೊರಗೊಂದು ಒಳಗೊಂದು ಎನ್ನುವರಲ್ಲ ಹಾಗೆ, ಈ ಕಥಾ ನಿರೂಪಣೆಯಲ್ಲಿ ಎದ್ದು ತೋರುವ ವಾಸ್ತವತೆ. ಆದರೆ ಒಂದು, ತಂದೆ-ತಾಯಿಯರ ಕಳಕಳಿ ತಮ್ಮ ಮಕ್ಕಳು ಚೆನ್ನಾಗಿರಬೇಕೆನ್ನುವುದು,ಮತ್ತು ಮಕ್ಕಳದು ತಮ್ಮ ತನವನ್ನು ಹೇಗೆ ಬಿಟ್ಟುಕೊಡುವುದು, ಬಿಟ್ಟುಕೊಡಬೇಕೇ ಎನ್ನುವ ಮನೋಧರ್ಮ. ಇಂಥ ಮಾನಸಿಕ ಒಳತೋಟಿಗೆ ಸಿಕ್ಕ ಒಂದು ಕುಟುಂಬದ ಚಿತ್ರಣ ಬಹುತೇಕ ಇಂದಿನ ಎಲ್ಲ ಕುಟುಂಬಗಳಲ್ಲೂ ಕಾಣುವಂಥದು. ಆದರೂ ಬದುಕು ಸಾಗುತ್ತದೆ ಹೇಗೋ. ಸರಾಗವಾಗಿ ಹರಿಯುವ ಕಥವಾಹಿನಿ.
sir Thanks for ur comments.