ಮುನ್ನುಡಿಯ ಕಥೆ

ಭೂಲೋಕದಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ದಿನ ಸಾಯಲೇಬೇಕು. ಭಗವಾನ್ ಬುದ್ಧ ಹುಟ್ಟು ಸಾವುಗಳ ಕಹಿ ಸತ್ಯವನ್ನು ಮನಗಾಣಿಸಲೆಂದೇ ಗೌತಮಿಗೆ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ್ದ. ಒಂದು ವೇಳೆ ಭಗವಾನ್ ಬುದ್ಧ ಮತ್ತು ಗೌತಮಿ ಇಪ್ಪತ್ತೊಂದನೆಯ ಶತಮಾನದಲ್ಲಿ ಅದೂ ನಮ್ಮ ಕರ್ನಾಟಕದಲ್ಲಿ ಬದುಕಿದ್ದರೆ ಏನಾಗುತ್ತಿತ್ತು? ಉತ್ತರ ತುಂಬ ಸರಳವಾಗಿದೆ. ಭಗವಾನ್ ಬುದ್ಧ ಖಂಡಿತವಾಗಿಯೂ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳುತ್ತಿರಲಿಲ್ಲ, ಅದರ ಬದಲಾಗಿ ಮುನ್ನುಡಿಯಿಲ್ಲದ ಕನ್ನಡ ಪುಸ್ತಕವೊಂದನ್ನು ತರಲು ಹೇಳುತ್ತಿದ್ದ!

ಸದ್ಯ ನಮ್ಮ ಕನ್ನಡ ಸಾಹಿತ್ಯಲೋಕದಲ್ಲಿ ಮುನ್ನುಡಿಗಳಿಲ್ಲದ ಪುಸ್ತಕಗಳನ್ನು ಕಾಣುವುದೂ ಒಂದೇ, ಏಕಶೃಂಗಿ ಎಂಬ ಕಾಲ್ಪನಿಕ ಪ್ರಾಣಿಯನ್ನು ಕಾಣುವುದೂ ಒಂದೇ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಹೆಂಗಸರು ಅಲಂಕಾರವಿಲ್ಲದೆ ಹೊರಬರವುದಿಲ್ಲ. ಅದೇ ರೀತಿ ಹಲವು ಪುಸ್ತಕಗಳು ಮುನ್ನುಡಿಗಳಿಲ್ಲದೆ ಹೊರಬರುವುದಿಲ್ಲ. ಕೆಲವು ಸಲ ಪುಸ್ತಕಗಳಲ್ಲಿ ಮುನ್ನುಡಿ ಮತ್ತು ಅವರಿವರ ಪ್ರತಿಕ್ರಿಯೆಗಳು ಸೇರಿ ಸಾಹಿತಿ ಬರೆದದ್ದಕ್ಕಿಂತ ಇಂತಹ ಶಹಬ್ಬಾಸಗಿರಿಯ ಬರಹಗಳೇ ಹೆಚ್ಚು ಪುಟಗಳನ್ನು ತಿಂದು ಬಿಟ್ಟಿರುತ್ತವೆ. ವಿಶೇಷವಾಗಿ ಅತೃಪ್ತ  ಲೇಖಕಿಯರ ಪುಸ್ತಕಗಳನ್ನು ನೋಡಿದರೆ ಈ ಮಾತಿನ ಸತ್ಯಾಂಶ ತಿಳಿಯುತ್ತದೆ.

ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಮುನ್ನುಡಿಗೆ ತನ್ನದೇ ಆದ ಸ್ಥಾನವಿದೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಮತ್ತು ನವ್ಯೋತ್ತರ ಕಾಲಘಟ್ಟದಲ್ಲಿ ಇಂತಹ ಮುನ್ನುಡಿಯ ಸ್ವರೂಪ ಬದಲಾಗುತ್ತ, ಬೆಳೆಯುತ್ತ ಬಂದಿದೆ. ಮುನ್ನುಡಿಯ ಕುರಿತ ಕೆಲವು ಪ್ರಸಂಗಗಳು ತುಂಬ ಸ್ವಾರಸ್ಯಕರವಾಗಿವೆ.

ನವೋದಯ ಮತ್ತು ಪ್ರಗತಿಶೀಲ ಪಂಥದ ದಿಗ್ಗಜ ಲೇಖಕರು ತಮ್ಮ ಸಮಕಾಲೀನ ಮತ್ತು ಕಿರಿಯ ಸಾಹಿತಿಗಳನ್ನು ಪ್ರೋತ್ಸಾಹಿಸಲು ಮುನ್ನುಡಿ ಬರೆಯುತ್ತಿದ್ದರು. ಕೃತಿಯೊಂದನ್ನು ಆಮೂಲಾಗ್ರವಾಗಿ ಓದಿ, ಟಿಪ್ಪಣಿ ಮಾಡಿಕೊಂಡು ತುಂಬ ಗಂಭೀರವಾಗಿ ಲೇಖನ ಬರೆದು ಕೊಡುತ್ತಿದ್ದರು. ನಮ್ಮ ನವೋದಯ ಮತ್ತು ಪ್ರಗತಿಶೀಲ ಪಂಥದ ಹಿರಿಯರು ಕೃತಿಯ ಗುಣದೋಷಗಳಲ್ಲಿ ಗುಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ದೋಷಗಳ ಬಗ್ಗೆ ಮೇಷ್ಟ್ರು ವಿದ್ಯಾರ್ಥಿಗಳಿಗೆ ತಿಳಿ ಹೇಳುವಂತೆ ತುಂಬ ಅಕ್ಕರೆಯಿಂದ ತಿಳಿ ಹೇಳಿ ಅವರ ಬರವಣಿಗೆ ಸುಧಾರಿಸಲು ನೆರವಾಗುತ್ತಿದ್ದರು. ಸಹೃದಯಿಗಳೂ, ಗುಣಗ್ರಾಹಿಗಳೂ ಆದ ನಮ್ಮ ಹಿರಿಯ ಲೇಖಕರು ತಮ್ಮ ಪ್ರೋತ್ಸಾಹದಾಯಕ ಮುನ್ನುಡಿಯಮೂಲಕ ಅನೇಕ ಹೊಸ ಲೇಖಕರನ್ನು ಬೆಳೆಸಿದರು.

ವರಕವಿ ಬೇಂದ್ರೆಯವರು ಮುನ್ನುಡಿ ಬರೆಯುವ ಕ್ರಮವೇ ತುಂಬ ವಿಶಿಷ್ಟ ಮತ್ತು ಅನನುಕರಣೀಯ. ಯಾರಾದರೂ ಮುನ್ನುಡಿ ಬೇಕೆಂದು ಅವರ ಬಳಿ ಹಸ್ತಪ್ರತಿ ತೆಗೆದುಕೊಂಡು ಹೋದರೆ ತುಂಬ ಅಕ್ಕರೆಯಿಂದ ಮಾತನಾಡಿಸಿ ಮುನ್ನುಡಿ ಬರೆದು ಕೊಡುವುದಾಗಿ ಹೇಳುತ್ತಿದ್ದರು. ಬೇಂದ್ರೆಯವರಿಗೆ ಆ ಕೃತಿ ಮೆಚ್ಚುಗೆಯಾದರೆ ಮುನ್ನುಡಿ ಬರೆಯುತ್ತಿದ್ದರು. ಅವರಿಗೆ ಇಷ್ಟವಾಗದಿದ್ದರೆ ಒಂದು ಕವಿತೆ ಬರೆದು ಅದನ್ನೇ ಮುನ್ನುಡಿಯಾಗಿ ಬಳಸಿಕೊಳ್ಳುವಂತೆ ಹೇಳುತ್ತಿದ್ದರು!

ಬೇಂದ್ರೆಯವರು ಎಷ್ಟಾದರೂ ವರಕವಿಗಳು. ಸಹೃದಯರಾದ ಅವರು ತಮ್ಮ ಬಳಿ ಬಂದ ಯಾರಿಗೂ ನಿರಾಸೆ ಮಾಡುತ್ತಿರಲಿಲ್ಲ. ಬೇಂದ್ರೆಯವರು ತಮ್ಮ ಬಳಿ ಬಂದವರಿಗೆ ಮುನ್ನುಡಿ ಅಥವಾ ಕವಿತೆಯೊಂದಿಗೆ ಕಲ್ಲುಸಕ್ಕರೆ ಕೊಟ್ಟು ಆಶೀರ್ವದಿಸಿ ಕಳಿಸುತ್ತಿದ್ದರು. ಒಟ್ಟಿನಲ್ಲಿ ಬೇಂದ್ರೆಯವರ ಬಳಿ ಹೋದವರಿಗೆ ನಿರಾಸೆಯಾಗುತ್ತಿರಲಿಲ್ಲ. ಮುನ್ನುಡಿ ಅಥವಾ ಕವಿತೆ ಎರಡರಲ್ಲೊಂದು ಖಚಿತವಾಗಿ ಸಿಗುತ್ತಿತ್ತು.

ನವೋದಯದ ಹಿರಿಯ ಲೇಖಕರೊಬ್ಬರು ಹೊಸ ಲೇಖಕರೊಬ್ಬರ ಕೃತಿಗೆ ಪ್ರೋತ್ಸಾಹದಾಯಕ ಮುನ್ನುಡಿ ಬರೆದಿದ್ದರು. ವಿಮರ್ಶಕನೆಂದರೆ ಸಾಹಿತಿಗಳ ಹಣೆಬರಹವನ್ನೇ ಬದಲಾಯಿಸಬಲ್ಲವನೆಂಬ ಭ್ರಮೆಯಲ್ಲಿದ್ದ ನವ್ಯ ವಿಮರ್ಶಕನೊಬ್ಬ “ಸರ್, ಅದೊಂದು ಸಾಧಾರಣ ಕೃತಿ. ಅದಕ್ಕೆ ನೀವು ಇಂತಹ ಮುನ್ನುಡಿ ಬರೆಯಬಹುದೇ?” ಎಂದು ಪ್ರಶ್ನಿಸಿದ. ಅದಕ್ಕೆ ಆ ಹಿರಿಯ ಲೇಖಕರು “ಅಣ್ಣಾ, ಆ ಲೇಖಕ ಇನ್ನೂ ಚಿಕ್ಕವನು. ನಾನು ಅವನನ್ನು ಪ್ರೋತ್ಸಾಹಿಸಲೆಂದೇ ಬರೆದಿದ್ದೇನೆ. ಯೋಗ್ಯತೆ ಮತ್ತು ಯೋಗವಿದ್ದರೆ ಅವನು ಮುಂದೆ ಒಳ್ಳೆಯ ಲೇಖಕನಾದರೂ ಆಗಬಹುದು” ಎಂದು ಹೇಳಿದರು. ಹಿರಿಯ ಲೇಖಕರ ಉತ್ತರದಿಂದ ಸಿಟ್ಟಾದ ವಿಮರ್ಶಕ ಬಾಯ್ಮುಚ್ಚಿಕೊಂಡು ಜಾಗ ಖಾಲಿ ಮಾಡಿದ.

ಕಾದಂಬರಿ ಸಾರ್ವಭೌಮ ಅ.ನ.ಕೃ. ಅವರಂತೂ ಸಾಕಷ್ಟು ಲೇಖಕರನ್ನು ಬೆಳೆಸಿದ್ದಾರೆ. ಹೊಸ ಲೇಖಕನೊಬ್ಬ ಅ.ನ.ಕೃ. ಅವರ ಬಳಿ ಬಂದು ತನ್ನ ಚೊಚ್ಚಲ ಕಾದಂಬರಿಗೆ ಮುನ್ನುಡಿ ಬರೆದು ಕೊಡಬೇಕೆಂದು ತುಂಬ ವಿನಯದಿಂದ ಕೇಳಿಕೊಂಡ. ಸಹೃದಯಿಯಾದ ಅ.ನ.ಕೃ. ಅವರು ಅವನನ್ನು ತುಂಬ ವಿಶ್ವಾಸದಿಂದ ಮಾತನಾಡಿಸಿ ಎರಡು ದಿನ ಬಿಟ್ಟು ಬರುವಂತೆ ಸೂಚಿಸಿದರು. ಆ ಲೇಖಕ ಎರಡು ದಿನ ಬಿಟ್ಟು ಬಂದಾಗ ಅ.ನ.ಕೃ. ಅವರು ಆ ಹಸ್ತಪ್ರತಿಯನ್ನು ಆಮೂಲಾಗ್ರವಾಗಿ ಓದಿ ಅನೇಕ ತಿದ್ದುಪಡಿ ಮಾಡಿದ್ದರು. ಆ ಕಾದಂಬರಿಯ ಅಂತ್ಯ ಚೆನ್ನಾಗಿಲ್ಲವೆಂದು ತಾವೇ ಕೊನೆಯ ಮೂವತ್ತು-ನಲವತ್ತು ಪುಟಗಳನ್ನು ಹೊಸದಾಗಿ  ಬರೆದಿದ್ದರು. ಇಷ್ಟೇ ಸಾಲದೆಂಬಂತೆ ಆ ಕಾದಂಬರಿಗೆ ಪ್ರೋತ್ಸಾಹದಾಯಕ ಮುನ್ನುಡಿ ಬರೆದು, ಪ್ರಕಾಶಕರೊಬ್ಬರ ಮೂಲಕ ಪುಸ್ತಕ ಪ್ರಕಟವಾಗುವಂತೆ ಸಹ ನೋಡಿಕೊಂಡರು. ದೊಡ್ಡ ಮನಸ್ಸಿನ ವ್ಯಕ್ತಿಯಾದ ಅ.ನ.ಕೃ. ಅವರು ಮಾಡಿದ ಪರೋಪಕಾರಗಳು ಒಂದೆರಡಲ್ಲ. ಸಹೃದಯತೆಗೆ ಮತ್ತೊಂದು ಹೆಸರೇ ಅ.ನ.ಕೃ.

ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕರೂ, ಜ್ಞಾನಪೀಠಪ್ರಶಸ್ತಿ ವಿಜೇತರೂ ಆದ ಯು.ಆರ್.ಅನಂತಮೂರ್ತಿಯವರು ಮುನ್ನುಡಿ ಬರೆಯುವ ಶೈಲಿಯೇ ತೀರ ವಿಭಿನ್ನ ಮತ್ತು ವಿಶಿಷ್ಟ. ಅನಂತಮೂರ್ತಿಯವರು ತಮಗೆ ಇಷ್ಟವಾದ ಕೃತಿಯ ಕುರಿತು ಸಾಕಷ್ಟು ಒಳನೋಟಗಳಿರುವ ವಿಮರ್ಶಾತ್ಮಕ ಮುನ್ನುಡಿ ಬರೆಯುತ್ತಿದ್ದರು. ಒಂದುವೇಳೆ ಅನಂತಮೂರ್ತಿಯವರಿಗೆ ಆ ಕೃತಿ ಇಷ್ಟವಾಗದಿದ್ದರೂ ಮುನ್ನುಡಿಯಲ್ಲಿ ಆ ಕೃತಿಯ ಕುರಿತು ಪ್ರಸ್ತಾಪವನ್ನೇ ಮಾಡದೆ ಪ್ರಚಲಿತ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಕುರಿತು ಗಂಭೀರವಾಗಿ ಚರ್ಚಿಸುತ್ತಿದ್ದರು. ಮುನ್ನುಡಿಯ ಕೊನೆಯ ಪ್ಯಾರಾಗ್ರಫಿನಲ್ಲಿ ಮಾತ್ರ ಆ ಪುಸ್ತಕ ಮತ್ತು ಲೇಖಕನ ಕುರಿತು ಎರಡು ಮಾತು ಹೇಳಿ ಮುಗಿಸುತ್ತಿದ್ದರು. ಅಂತಹ ಮುನ್ನುಡಿಯಲ್ಲಿ ಕೃತಿಯ ದೋಷಗಳ ಕುರಿತು ಪರೋಕ್ಷವಾಗಿ ಎಚ್ಚರಿಕೆಯ ಮಾತುಗಳಿರುತ್ತಿದ್ದವು. ಮೊದಲೇ ಅನಂತಮೂರ್ತಿಯವರದು ಚಂದದ ಗದ್ಯ. ಮುನ್ನುಡಿ ಬರೆಸಿ ಕೊಂಡವರಿಗೂ, ಮುನ್ನುಡಿ ಓದಿದವರಿಗೂ ಖುಷಿಯಾಗುವಂತಿರತ್ತಿತ್ತು. ಇಂತಹ ಬೆಡಗಿನ ಮುನ್ನುಡಿ ಬರೆಯುವ ಕಲೆ ಅನಂತಮೂರ್ತಿಯವರಿಗೆ ಸಿದ್ಧಿಸಿತ್ತು.

ಕನ್ನಡದಲ್ಲಿ ಅತಿ ಹೆಚ್ಚು ಮುನ್ನುಡಿ ಬರೆದ ವಿಮರ್ಶಕ ಬಹುಶಃ ಕೀರ್ತಿನಾಥ ಕುರ್ತಕೋಟಿಯವರೇ ಇರಬೇಕು. ಕುರ್ತಕೋಟಿಯವರು ಕರ್ನಾಟಕದ ಖ್ಯಾತ ಪ್ರಕಾಶನ ಸಂಸ್ಥೆಯಾದ ಧಾರವಾಡದ ಮನೋಹರ ಗ್ರಂಥ ಮಾಲಾದ ಸಾಹಿತ್ಯಿಕ ಸಲಹೆಗಾರರರಾಗಿದ್ದರು. ಮನೋಹರ ಗ್ರಂಥ ಮಾಲಾದಿಂದ ಪ್ರಕಟವಾದ ಶೇಕಡಾ ಎಂಬತ್ತರಷ್ಟು ಪುಸ್ತಕಗಳಿಗೆ ಕುರ್ತಕೋಟಿಯವರೇ ಮುನ್ನುಡಿ ಬರೆಯುತ್ತಿದ್ದರು. ಹಿರಿಯರನೇಕರು ಹೇಳುವಂತೆ ಮುನ್ನುಡಿಗಳ ವಿಚಾರದಲ್ಲಿ ಕುರ್ತಕೋಟಿಯವರು ಯಾರಿಗೂ ನಿರಾಸೆ ಮಾಡಿದವರಲ್ಲ. ನಿಗದಿತ ಸಮಯಕ್ಕೆ ಮೊದಲೇ ಮುನ್ನುಡಿ ಬರೆದು ಕೊಡುವವರೆಂಬ ವಿಶಿಷ್ಟ ಖ್ಯಾತಿಯೂ ಕುರ್ತಕೋಟಿಯವರಿಗಿತ್ತು. ಅನೇಕ ಹೊಸ ಲೇಖಕರಿಗೆ ಮುನ್ನುಡಿ ಬರೆಯುವುದರ ಮೂಲಕ ಕುರ್ತಕೋಟಿಯವರು ಸಾಕಷ್ಟು ಪ್ರೋತ್ಸಾಹ ನೀಡಿದರು.

ಧಾರವಾಡದ ಮತ್ತೊಬ್ಬ ವಿಮರ್ಶಕ ಗಿರಡ್ಡಿ ಗೋವಿಂದರಾಜ ಮುನ್ನುಡಿ ಬರೆಯುವುದಿಲ್ಲವೆಂಬ ಖ್ಯಾತಿ ಪಡೆದವರು. ಗಿರಡ್ಡಿ ಮುನ್ನುಡಿ ಬರೆಯುವುದಿಲ್ಲವೆಂಬುದು ಗೊತ್ತಿದ್ದರೂ ಕೆಲವು ಲೇಖಕರು ಅವರ ಬಳಿ ಮುನ್ನುಡಿ ಬರೆಸಬೇಕೆಂದು ಪ್ರಯತ್ನಿಸಿ ವಿಫಲರಾಗಿದ್ದರು. ಮುಂದೆ ಗಿರಡ್ಡಿಯವರು ತೀರಿ ಹೋದ ಲೇಖಕರ ಪುಸ್ತಕಗಳಿಗೆ ಮಾತ್ರ ಮುನ್ನುಡಿ ಬರೆಯುವ ಮೂಲಕ ಮರಣೋತ್ತರ ಮುನ್ನುಡಿಕಾರ ಎಂದು ಹೆಸರಾದರು. ಕನ್ನಡದ ಖ್ಯಾತ ಲೇಖಕರೂ, ನವ್ಯ ಸಾಹಿತ್ಯದ ದಿಗ್ಗಜರೂ ಆದ ಶಾಂತಿನಾಥ ದೇಸಾಯಿಯವರ “ಸಮಗ್ರ ಕತೆಗಳು” ಕೃತಿಗೆ ಗಿರಡ್ಡಿಯವರು ಮುನ್ನುಡಿ ಬರೆಯುವುದರ ಬದಲು ಶಾಂತಿನಾಥ ದೇಸಾಯಿಯವರ  ವ್ಯಕ್ತಿಚಿತ್ರ ಬರೆದರು. ಆ ಮೂಲಕ ಕನ್ನಡದ ಮಹತ್ವದ ಲೇಖಕರಾದ ಶಾಂತಿನಾಥ ದೇಸಾಯಿಯವರ ಕಥೆಗಳ ಕುರಿತು ವಿಮರ್ಶೆ ಬರೆಯುವ ಒಳ್ಳೆಯ ಅವಕಾಶವೊಂದನ್ನು ಗಿರಡ್ಡಿಯವರು ಕಳೆದುಕೊಂಡರು. ಕನ್ನಡ ವಿಮರ್ಶಕರೆಂದರೇ ಹೀಗೇ ತುಂಬ ವಿಚಿತ್ರವಾಗಿರುತ್ತಾರೆ!

ನವ್ಯ ಸಾಹಿತ್ಯ ಚಳುವಳಿಯ ಮೂಲಕ ಕನ್ನಡದಲ್ಲಿ ವಿಮರ್ಶಕರು ಮುನ್ನಲೆಗೆ ಬಂದರು. ಸೃಜನಶೀಲ ಸಾಹಿತಿಗಳಿಗಿಂತ ತಾವೇ ದೊಡ್ಡವರು ಎಂಬ ಭಾವನೆ ನಮ್ಮ ಅನೇಕ ವಿಮರ್ಶಕರಿಗಿದೆ. ಇಂತಹ ವಿಮರ್ಶಕರು ಮುನ್ನುಡಿಯ ನೆಪದಲ್ಲಿ ಪಾಂಡಿತ್ಯ ಪ್ರದರ್ಶನ ಮಾಡತೊಡಗಿದರು. ಇವರು ಸಮತೂಕದ ಮುನ್ನುಡಿ ಬರೆಯಲಿಲ್ಲ, ಬದಲಾಗಿ ತಮಗೆ ಇಷ್ಟವಾದ ಕೃತಿಗಳನ್ನ ಹಾಡಿ ಹೊಗಳಿದರು. ತಮಗೆ ಇಷ್ಟವಾಗದ ಕೃತಿಗಳನ್ನು ನಿರ್ದಾಕ್ಷಿಣ್ಯವಾಗಿ ತೆಗಳಿದರು. ಇವರು ನವ್ಯ ಕೃತಿಗಳನ್ನು ಸಮರ್ಥಿಸುವ ಮತ್ತು ನವ್ಯೇತರ ಕೃತಿಗಳನ್ನು ವಿರೋಧಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಆರಂಭಿಸಿದರು.

ದಲಿತ-ಬಂಡಾಯ ಮತ್ತು  ನವ್ಯೋತ್ತರ  ಕಾಲಘಟ್ಟದಲ್ಲಿ ರಾಜಕೀಯ ಇನ್ನಷ್ಟು ಹೆಚ್ಚಾಗುತ್ತ ಬಂದಿತು. ಈ ಹೊತ್ತಿಗಾಗಲೇ ವಿಮರ್ಶಕರು ಮತ್ತು ಬುದ್ಧಿಜೀವಿಗಳು ಸಾಕಷ್ಟು ಬಲಿತಿದ್ದರು. ಕೆಲವು ಬುದ್ಧಿಜೀವಿಗಳಂತೂ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ  ಬಾಲಬಡುಕರಾಗಿದ್ದಾರೆ. ಈ ಬುದ್ಧಿಜೀವಿಗಳು  ತಮ್ಮ ಸ್ವಾರ್ಥಕ್ಕಾಗಿ ಯಾವ ಮಟ್ಟಕ್ಕೂ ಇಳಿಯಬಲ್ಲರು. ಎಡಪಂಥ, ಬಲಪಂಥವೆಂದು ಇಲ್ಲದ ಗದ್ದಲವೆಬ್ಬಿಸಿ ಸಾಹಿತ್ಯಲೋಕದಲ್ಲಿ ಹೊಲಸು ರಾಜಕೀಯ ಆರಂಭಿಸಿರುವ ಬುದ್ಧಿಜೀವಿಗಳು ಸ್ವಾರ್ಥ ಮತ್ತು ನೀಚತನದಲ್ಲಿ ರಾಜಕಾರಣಿಗಳನ್ನೂ ಮೀರಿಸಿದ್ದಾರೆ.

ಕರ್ನಾಟಕದ ಬುದ್ಧಿಜೀವಿಗಳು ತಾವೇ ಕಟ್ಟಿಕೊಂಡ ಗೋಡೆಗಳ ನಡುವೆ ಬಂಧಿತರು. ತಮಗೆ ಪ್ರಿಯವಾದ ಕೆಲವು ಐಡಿಯಾಲಜಿಗಳನ್ನು ಸಮರ್ಥಿಸುವುದೇ ಇವರ ಕೆಲಸ. ಇಂತಹ ಭಗ್ನ ಸಂತೋಷಿಗಳು ಬರೆದ ಮುನ್ನುಡಿಗೂ ಆ ಕೃತಿಗೂ ಯಾವುದೇ ಸಂಬಂಧವಿರುವುದಿಲ್ಲ. ಸಾಹಿತ್ಯದಲ್ಲಿ ರಾಜಕೀಯವನ್ನು ತಂದು ಸಾಹಿತ್ಯಲೋಕಕ್ಕೆ ಮಸಿ ಬಳಿದ ಕೀರ್ತಿ ಇಂತಹ ಸಮಯಸಾಧಕ ಬುದ್ಧಿಜೀವಿಗಳಿಗೆ ಸಲ್ಲುತ್ತದೆ. ಇಂತಹ ಸಮಯಸಾಧಕ ಬುದ್ಧಿಜೀವಿಗಳು  ಎಡಪಂಥೀಯರಲ್ಲೂ ಇದ್ದಾರೆ, ಬಲಪಂಥೀಯರಲ್ಲೂ ಇದ್ದಾರೆ.

ಎಡಪಂಥೀಯ ಬುದ್ಧಿಜೀವಿಯೊಬ್ಬನಿಗೆ ಬಲಪಂಥೀಯ ಸರ್ಕಾರ ಅಧಿಕಾರಕ್ಕೆ ಬಂದದ್ದು ತೀವ್ರದುಃಖಕ್ಕೆ ಕಾರಣವಾಗಿತ್ತು. ಎಡ ಪಂಥೀಯ ರಾಜಕೀಯ ಪಕ್ಷವೇ ಜನಾಭಿಪ್ರಾಯ ಒಪ್ಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತರೂ ಈ ಖತರ್ನಾಕ್ ಬುದ್ಧಿಜೀವಿಗೆ ನೆಮ್ಮದಿಯಿರಲಿಲ್ಲ. ಎಡಪಂಥೀಯ ಸರ್ಕಾರವಿದ್ದಿದ್ದರೆ ಯಾವುದಾದರೂ ಅಕಾಡೆಮಿ, ಪ್ರಾಧಿಕಾರ ಅಥವಾ ಟ್ರಸ್ಟಿನ ಅಧ್ಯಕ್ಷನಾಗಿ ಸರ್ಕಾರಿ ದುಡ್ಡಲ್ಲಿ ಮಜವಾಗಿ ಜೀವನ ಕಳೆಯಬಹುದಿತ್ತು. ಅದರಲ್ಲೂ ಯಾವುದಾದರೂ ಅಧಿಕಾರದಲ್ಲಿದ್ದರೆ ಅತೃಪ್ತ ಲೇಖಕಿಯರನ್ನು ಸುಲಭವಾಗಿ ಬಲೆಗೆ ಕೆಡವಬಹುದು.ಇದೊಂದೂ ಇಲ್ಲದೆ ಅವನಿಗೆ ಹುಚ್ಚುಹಿಡಿದಂತಾಗಿತ್ತು. ಇವನಂತೆಯೇ ದುಃಖಿತರಾದ ಹತ್ತು ಹಲವು ಬುದ್ಧಿಜೀವಿಗಳು ಬೆಂಗಳೂರಿನಲ್ಲಿದ್ದಾರೆ.

ಇಂತಹ ಬುದ್ಧಿಜೀವಿಗಳು ಯಾವುದೇ ಪ್ರಕಾರದ ಕೃತಿಗಳಿಗೆ ಮುನ್ನುಡಿ ಬರೆದರೂ ಅಲ್ಲಿ ತಮ್ಮಮನಸ್ಸಿನಲ್ಲಿರುವ ವಿಷವನ್ನುಕಕ್ಕುತ್ತಾರೆ. ಆ ಕೃತಿಯ ಅಥವಾ ಲೇಖಕರ ಕುರಿತು ಒಂದೇ ಒಂದು ಮಾತೂ ಅಲ್ಲಿರುವುದಿಲ್ಲ.ಮುಖ್ಯವಾ ಗಿಬಲಪಂಥೀಯ ಸರ್ಕಾರ ತೊಲಗಿ ಎಡಪಂಥೀಯ ಸರ್ಕಾರ ಅಧಿಕಾರಕ್ಕೆ ಬರಬೇಕು ಮತ್ತು ತಾವೆಲ್ಲ ಮೊದಲಿನಂತೆ ಯಾವುದಾದರೂ ಅಧಿಕಾರ ಪಡೆದು ಸುಖವಾಗಿ ಕಾಲ ಕಳೆಯುವಂತಾಗ ಬೇಕೆಂಬ ತಮ್ಮ ಮನಸ್ಸಿನ ಬಯಕೆಯನ್ನೇ ಪರೋಕ್ಷವಾಗಿ ತೋಡಿ ಕೊಂಡಿರುತ್ತಾರೆ.

ಲೇಖಕರು ತಮ್ಮ  ಪುಸ್ತಕಗಳಿಗೆ ಬುದ್ಧಿಜೀವಿಗಳ ಬಳಿ ತಾವಾಗಿಯೇ ಕೇಳಿ ಮುನ್ನುಡಿ ಬರೆಸಿಕೊಂಡಿರುವುದರಿಂದ ವಿಧಿಯಿಲ್ಲದೆ ಅವರು ಬರೆದ ರಾಜಕೀಯ ಪ್ರೇರಿತ ಮುನ್ನುಡಿಗಳನ್ನು ತಮ್ಮ ಪುಸ್ತಕದಲ್ಲಿ ಬಳಸಿಕೊಳ್ಳ ಬೇಕಾಗುತ್ತದೆ. ಬುದ್ಧಿಜೀವಿಗಳ ಇಂತಹ ದುರುದ್ದೇಶ ಪೂರ್ವಕ ಮುನ್ನುಡಿಯನ್ನು ತಿರಸ್ಕರಿಸುವ ಧೈರ್ಯವಂತೂ ಲೇಖಕರಿಗಿರುವುದಿಲ್ಲ. ಹಾಗೇನಾದರೂ  ಮುನ್ನುಡಿ ತಿರಸ್ಕರಿಸಿದರೆ ಬುದ್ಧಿಜೀವಿಗಳು ಅಂತಹವರ ಭವಿಷ್ಯವನ್ನೇ ನಿರ್ನಾಮ ಮಾಡಿ ಬಿಡಬಲ್ಲರು. ಬುದ್ಧಿಜೀವಿಗಳನ್ನು ಎದುರು ಹಾಕಿಕೊಳ್ಳುವುದೂ ಒಂದೇ ನಾಗರಹಾವನ್ನು ಎದುರು ಹಾಕಿಕೊಳ್ಳುವುದೂ ಒಂದೇ! ಯಾರನ್ನು ಬೇಕಾದರೂ ತಡವಿಕೊಳ್ಳಬಹುದು ಆದರೆ ಬುದ್ಧಿಜೀವಿಗಳನ್ನು ತಡವಿಕೊಂಡು ನೆಮ್ಮದಿಯಾಗಿ ಬದುಕುವುದು ಕರ್ನಾಟಕದಲ್ಲಂತೂ ಅಸಾಧ್ಯ!

“ಲೇಖಕನಿಗೆ  ವರುಷ ವಿಮರ್ಶಕನಿಗೆ ನಿಮಿಷ” ಎಂಬ ಮಾತು ಶೇಕಡ ನೂರ ಹತ್ತರಷ್ಟು ನಿಜ. ಇತ್ತೀಚೆಗೆ ಒಬ್ಬ ಎಡಪಂಥೀಯ ವಿಮರ್ಶಕ ಕನ್ನಡದ ಮಹತ್ವದ ಲೇಖಕರೊಬ್ಬರ ಕಾದಂಬರಿಯ ಕುರಿತು ಋಣಾತ್ಮಕ ವಿಮರ್ಶೆ ಬರೆದು ಆ ಕಾದಂಬರಿಯ ಬಗೆಗೆ ಋಣಾತ್ಮಕ ಪ್ರತಿಕ್ರಿಯೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾದ. ಈ ವಿಮರ್ಶಕ ಆ ಹಿರಿಯ ಲೇಖಕರು ಹಲವು ವರ್ಷಗಳಿಂದ ತುಂಬ ಜತನವಾಗಿ ರೂಪಿಸಿದ್ದ ಕಾದಂಬರಿ ಎಂಬ ಮಡಕೆಗೆ ವಿಮರ್ಶೆಯೆಂಬ ಒರಟು ದೊಣ್ಣೆಯಿಂದ ಹೊಡೆದು ಅಟ್ಟಹಾಸಗೈದ. ವಿಮರ್ಶಕರೆಂದರೆ  ಪ್ರಶ್ನಾತೀತ  ವ್ಯಕ್ತಿ ಎಂದು ತಿಳಿದಿರುವ ಹತ್ತು ಹಲವು ಮೂರ್ಖ ಸಾಹಿತಿಗಳು  ಈ ಹಠಮಾರಿ ವಿಮರ್ಶಕ ಬರೆದಿದ್ದೇ ಸರಿ ಎಂದು ವಾದಿಸುತ್ತ  ತಿರುಗುತ್ತಿದ್ದಾರೆ.

ಅತೃಪ್ತ ಲೇಖಕಿಯರ ವಿಷಯದಲ್ಲಿ ಮಾತ್ರ ಈ ವಿಮರ್ಶಕನದು ಉದಾರ ಮನಸ್ಸು. ಅಂತಹ ಲೇಖಕಿಯರ ಕೃತಿಗಳಿಗೆ ಮುನ್ನುಡಿ ಬರೆಯುವಾಗ ಮಾತ್ರ ಭಾವೋದ್ವೇಗಕ್ಕೊಳಗಾಗಿ ಯದ್ವಾತದ್ವಾ ಹೊಗಳುತ್ತಾನೆ. ಇವನು ಮೆಚ್ಚಿದ ಲೇಖಕಿಯರ ಕೃತಿಗಳು ಒಳ್ಳೆಯ ಕೃತಿಗಳೆಂದು ಸಾಬೀತು ಪಡಿಸಲು ಇನ್ನಿಲ್ಲದಂತೆ ಶ್ರಮಿಸುತ್ತಾನೆ. ಇವನ ಮೆಚ್ಚಿನ ಲೇಖಕಿಯರ ಕುರಿತು ಯಾರಾದರೂ ವಸ್ತುನಿಷ್ಠ ವಿಮರ್ಶೆ ಬರೆದರೆ ಅಂತಹವರ ಜೊತೆ ಕಾಲುಕೆರೆದು ಜಗಳಕ್ಕಿಳಿಯುತ್ತಾನೆ. ಕೆಲವು ಮರ್ಯಾದಸ್ಥ ಲೇಖಕರು ಈ ಮೂರ್ಖನ ಜೊತೆ ಏಗಲಾರದೆ ಹಿಂದೆ ಸರಿದಾಗ ತಾನೇ ಗೆದ್ದೆನೆಂದು ಬೀಗುತ್ತಾನೆ.

ಕರಾವಳಿಭಾಗದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಅತೃಪ್ತ ಲೇಖಕಿಯೊಬ್ಬಳು ಬರೆದ ಕಳಪೆ ಕೃತಿಯೊಂದರ ಕುರಿತು ಬೆಂಗಳೂರಿನ ಬುದ್ಧಿಜೀವಿಯೊಬ್ಬ ಆಹಾ… ಓಹೋ.. .ಸುಂದರ.. . ಅತಿಸುಂದರ… (ಲೇಖಕಿಯೋ?ಕೃತಿಯೋ?) ಎಂದು ಹಾಡಿ ಹೊಗಳಿ ಮುನ್ನುಡಿ ಬರೆದ. ಮೊದಲೇ ಅಹಂಕಾರಿಯಾದ ಅತೃಪ್ತ ಲೇಖಕಿ ಬುದ್ಧಿಜೀವಿಯ ಹೊಗಳಿಕೆಯಿಂದ ತಾನೊಬ್ಬ ಶ್ರೇಷ್ಠ ಲೇಖಕಿ ಎಂಬ ಭ್ರಮೆಗೊಳಗಾಗಿದ್ದಾಳೆ. ಬೆಂಗಳೂರಿನ ಬುದ್ಧಿಜೀವಿ ತನ್ನ ಸ್ವಾರ್ಥಕ್ಕಾಗಿ ಇಂತಹ ಅನೇಕ ಅತೃಪ್ತ ಲೇಖಕಿಯರನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದ. ಲೇಖಕಿಯರ ಪುಸ್ತಕಗಳಿಗೆ ರಣಕೇಕೆ ಹಾಕಿ ಮುನ್ನುಡಿ ಬರೆಯುವ ಹೆಂಗರುಳಿನ ಬುದ್ಧಿಜೀವಿಗಳು ರಾಜಧಾನಿ ಬೆಂಗಳೂರಿನಲ್ಲಿ ತುಂಬ ಜನ ಇದ್ದಾರೆ.

ಬೆಂಗಳೂರಿನಲ್ಲಿ  ಒಬ್ಬ ಅತೃಪ್ತ ಲೇಖಕಿಯಿದ್ದಾಳೆ. ಇವಳಿಗೆ ಕನ್ನಡದ ಪ್ರಸಿದ್ಧ ಸಾಹಿತಿಗಳ ನಿಕಟ ಪರಿಚಯವಿದೆ. ಕೆಲವು ಲೇಖಕರಂತೂ ಇವಳೆಂದರೆ ಬಿದ್ದು ಸಾಯುತ್ತಾರೆ. ಈ ಮಧ್ಯವಯಸ್ಕ ಅತೃಪ್ತೆ  ತಾನೊಬ್ಬ ವಿಮರ್ಶಕಿ ಎಂದು ಸ್ವಯಂ ಘೋಷಿಸಿಕೊಂಡಿದ್ದಾಳೆ. ಈ ಲೇಖಕಿ ಒಂದೇ ಒಂದು ಪುಸ್ತಕ ಪ್ರಕಟಿಸಿಲ್ಲ. ಫೇಸಬುಕ್ಕಿನಲ್ಲಿ, ಅಂತರ್ಜಾಲ ತಾಣಗಳಲ್ಲಿ ಇವಳ ಅನೇಕ ಕಳಪೆ ಲೇಖನಗಳು ಪ್ರಕಟವಾಗುತ್ತಿರುತ್ತವೆ. ಈ ಅತೃಪ್ತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನದ ತೀರ್ಪುಗಾರಳಾಗಿಯೂ ಕಾರ್ಯ ನಿರ್ವಹಿಸಿದ್ದಾಳೆ. ವಸೂಲಿಯಿದ್ದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಏನು ಬೇಕಾದರೂ ಸಾಧ್ಯ ಎಂಬುದಕ್ಕೆ ಇವಳೇ ಸಾಕ್ಷಿ.

ಸ್ತ್ರೀಲೋಲ  ಮತ್ತು  ಲಂಪಟ ಸಾಹಿತಿಗಳನ್ನು ಇವಳು ಮಾನಸ ಗುರುಗಳೆಂದು ಕರೆಯುತ್ತಾಳೆ. ಇಂತಹ ಮುದಿ ಲೇಖಕರ ಅಭಿನಂದನ ಗ್ರಂಥ ತರುವಲ್ಲಿ ಇವಳು ತಜ್ಞೆ. ಇತ್ತೀಚೆಗೆ ಒಬ್ಬ ಮುದಿ ಲಂಪಟನ ಕುರಿತ ಅಭಿನಂದನ ಗ್ರಂಥ ಹೊರಬಂದಿತು. ಅದರಲ್ಲಿ ಶೇಕಡ ಎಪ್ಪತ್ತರಷ್ಟು ಲೇಖನಗಳನ್ನು ಅತೃಪ್ತ ಲೇಖಕಿಯರೇ ಬರೆದಿದ್ದರು. ಇಂತಹ ಅನುಪಯುಕ್ತ ಗ್ರಂಥಗಳನ್ನು ತುಂಬ ಜವಾಬ್ದಾರಿಯಿಂದ ಸಂಪಾದಿಸಿ ಹೊರತರುವುದು ಇವಳಿಗೆ ಮಾತ್ರ ಸಾಧ್ಯ. ಹೊಸ ಅತೃಪ್ತ ಲೇಖಕಿಯರ ಕೃತಿಗಳಿಗೆ ಮುನ್ನುಡಿ ಬರೆಯುವ ಮೂಲಕ ಅಂತಹವರನ್ನು ಅತೃಪ್ತ ಲೇಖಕಿಯರ ಬಳಗಕ್ಕೆ ಸೇರಿಸುತ್ತಾಳೆ. ಅತೃಪ್ತ ಲೇಖಕಿಯರ ಬಳಗ ಬೆಳೆಯುವಲ್ಲಿ ಇವಳ ಕೊಡುಗೆಯನ್ನು ಅಲಕ್ಷಿಸುವಂತಿಲ್ಲ.

ಕನ್ನಡದ ಇಬ್ಬರು ಲೇಖಕರು ಸುಮಾರು ಇಪ್ಪತ್ತೈದು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಒಬ್ಬ ಕವಿಯಾದರೆ ಮತ್ತೊಬ್ಬ ವಿಮರ್ಶಕ. ಪರಸ್ಪರರ ಕೃತಿಗಳನ್ನು ಪ್ರಕಟಣಪೂರ್ವದಲ್ಲಿ ಓದಿ, ಚರ್ಚಿಸಿ ಏನಾದರೂ ತಿದ್ದುಪಡಿಗಳಿದ್ದರೆ ಮಾಡಿ ನಂತರ ಪ್ರಕಟಣೆಗೆ ಕಳಿಸುತ್ತಿದ್ದರು. ಕವಿಗೆ ವಿಮರ್ಶಕ ಮೊದಲ ಓದುಗನಾದರೆ, ವಿಮರ್ಶಕನಿಗೆ ಕವಿ ಮೊದಲ ಓದುಗ. ಕವಿ ತನ್ನ ಹೊಸ ಕವನ ಸಂಕಲನವೊಂದಕ್ಕೆ  ವಿಮರ್ಶಕ ಮಿತ್ರನ ಹತ್ತಿರ ಮುನ್ನುಡಿ ಕೇಳಿದ. ವಿಮರ್ಶಕ ತುಂಬ ಸಂತೋಷದಿಂದ ದೀರ್ಘ ಮುನ್ನುಡಿಯೊಂದನ್ನು ಬರೆದು ಕೊಟ್ಟ. ಕವಿ ಮುನ್ನುಡಿ ಓದಿ ತೀವ್ರ ನಿರಾಶನಾದ. ಏಕೆಂದರೆ ಆ ದೀರ್ಘ ಮುನ್ನುಡಿಯಲ್ಲಿ ಕವಿಯ ಕುರಿತಾಗಲೀ, ಕವನಗಳ ಕುರಿತಾಗಲೀ ಒಂದೇ ಒಂದು ಒಳ್ಳೆಯ ಮಾತಿರಲಿಲ್ಲ. ವಿಮರ್ಶಕ ಸೆಕ್ಯುಲರಿಸಂ, ಕೋಮುವಾದ, ಅಭಿವ್ಯಕ್ತಿ ಸ್ವಾತಂತ್ರ್ಯ, ಬುದ್ಧಿಜೀವಿಗಳ ತಲ್ಲಣ, ಅತಂತ್ರ ಪರಿಸ್ಥಿತಿ ಮತ್ತು ಎಡ-ಬಲ ರಾಜಕೀಯ ಎಂದು ಅಸಂಬದ್ಧವಾಗಿ, ಜಾಳುಜಾಳಾಗಿ ಮುನ್ನುಡಿ ಬರೆದಿದ್ದ.

ಕವಿ ತನ್ನ ಮಿತ್ರನಿಗೆ ಕವನ ಸಂಕಲನದಲ್ಲಿ ಮುನ್ನುಡಿಯನ್ನು ಹಾಕಲಾಗುವುದಿಲ್ಲವೆಂಬ ವಿಷಯವನ್ನು ತುಂಬ ಸಂಕೋಚದಿಂದ ತಿಳಿಸಿದ. ಕವಿಯ ಮಾತಿನಿಂದ ವಿಮರ್ಶಕನಿಗೆ ತುಂಬ ಕಸಿವಿಸಿಯಾದರೂ  ಆಗಬಹುದೆಂದು ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದ. ಈ ಮುನ್ನುಡಿಯ ಪ್ರಕರಣವಾದ ನಂತರ ಇಬ್ಬರ ನಡುವೆ ಮೊದಲಿದ್ದ ಸ್ನೇಹ-ಸೌಹಾರ್ದ ಈಗಿಲ್ಲ. ಒಂದು ಮುನ್ನುಡಿಯ ಕಾರಣದಿಂದ ಇಪ್ಪತ್ತೈದು ವರ್ಷಗಳ ಗೆಳತನಕ್ಕೆ ಕುತ್ತು ಬಂದದ್ದು ವಿಷಾದದ ಸಂಗತಿ.

ಗದುಗಿನ ಕವಿಯೊಬ್ಬ ತಾನೇ ದುಡ್ಡು ಹಾಕಿ ತನ್ನ ಕವನಸಂಕಲನ ಪ್ರಕಟಿಸಲು ಸಿದ್ಧನಾದ. ಬೆಂಗಳೂರಿನ ಖ್ಯಾತ ಲೇಖಕನೊಬ್ಬನಿಗೆ ಮುನ್ನುಡಿ ಬರೆಯುವಂತೆ ವಿನಂತಿಸಿಕೊಂಡ. ಆದರೆ ಬೆಂಗಳೂರಿನ ಲೇಖಕ ಲೇಡಿಸ್ ಸ್ಪೆಷಲಿಸ್ಟ್. ಹೆಂಗಸರ ಕೃತಿಗಳನ್ನು ಹಾಡಿ ಹೊಗಳಿ ಮುನ್ನುಡಿ ಬರೆಯುವಲ್ಲಿ ತಜ್ಞನೆಂದು ಖ್ಯಾತಿ ಪಡೆದವ. ಗಂಡಸರೆಂದರೆ ಅವನಿಗೆ ಅಷ್ಟಕ್ಕಷ್ಟೆ. ಮುನ್ನುಡಿ ಬರೆಯಲಾಗುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದರೂ ಗದುಗಿನ ಬೇತಾಳ ಬೆನ್ನು ಬಿಡಲಿಲ್ಲ.

ದಾಕ್ಷಿಣ್ಯಕ್ಕೆ ಒಪ್ಪಿದ ಲೇಡಿಸ್ ಸ್ಪೆಷಲಿಸ್ಟ್ ಹತ್ತು ತಿಂಗಳಾದರೂ ಮುನ್ನುಡಿ ಕೊಡಲಿಲ್ಲ. ಕೊನೆಗೆ ಲೇಡಿಸ್ ಸ್ಪೆಷಲಿಸ್ಟ್ ಮದ್ಯ, ಮಾಂಸಾಹಾರ ಮತ್ತು ಮಾನಿನಿಯರೆಂದರೆ ಬಿದ್ದು ಸಾಯುತ್ತಾನೆಂಬ ವಿಷಯ ತಿಳಿಯಿತು. ಗದುಗಿನ ಕವಿ ಒಂದು ಭಾನುವಾರ ಬೆಂಗಳೂರಿಗೆ ತೆರಳಿ ಸಾಕಷ್ಟು ಹಣ ಖರ್ಚು ಮಾಡಿ ಲೇಡಿಸ್ ಸ್ಪೆಲಿಸ್ಟನಿಗೆ ಯಥೇಚ್ಛವಾಗಿ ಮದ್ಯ ಮತ್ತು ಮಾಂಸಾಹಾರ ಕೊಡಿಸಿ ಒಳ್ಳೆಯ ಪಾರ್ಟಿ ಕೊಟ್ಟ.

ಪಾರ್ಟಿಯ ಪ್ರಭಾವ ತುಂಬ ಚೆನ್ನಾಗಿ ಕೆಲಸ ಮಾಡಿತು. ಸೋಮವಾರ ಸಂಜೆಯೇ ಗದುಗಿನ ಕವಿಯ ಕವಿತ್ವವನ್ನು ಹೊಗಳಿ ಅಟ್ಟಕ್ಕೇರಿಸಿದ್ದ ಸುಂದರ ಮುನ್ನುಡಿ ಕವಿಯ ಕೈಸೇರಿತು. ಗದುಗಿನ ಕವಿಯ ಹೊಸ ಕವನಸಂಕಲನಕ್ಕೆ ಬೆಂಗಳೂರಿನ  ಲೇಡಿಸ್ ಸ್ಪೆಷಲಿಸ್ಟನ ಮುನ್ನುಡಿಯಿಂದ ವಿಶೇಷ ಅನುಕೂಲವೇನೂ ಆಗಲಿಲ್ಲ. ಬದಲಾಗಿ ಆ ಖರ್ಚು ಈ ಖರ್ಚು ಎಂದು ನಲವತ್ತು ಸಾವಿರ ರೂಪಾಯಿಗಳ ಸಾಲ ಅವನ ಹೆಗಲೇರಿತು.

ಒಬ್ಬ ಬಂಡಾಯಕವಿಗೆಮುನ್ನುಡಿಬರೆಯುವುದೇಕೆಲಸ.ಈತ ಮುನ್ನುಡಿ ಸ್ಪೇಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ. ನವೋದಯ, ಪ್ರಗತಿಶೀಲ,ನವ್ಯಮತ್ತುನವ್ಯೋತ್ತರಸೇರಿದಂತೆಯಾವಮಹತ್ವದಲೇಖಕರನ್ನೂಈಮಹಾಶಯಓದಿಲ್ಲ.ಒಳ್ಳೆಯ ಕೃತಿಗಳನ್ನು ಓದುವುದೆಂದರೆ ಇವನಿಗಾಗುವುದಿಲ್ಲ. ಈ ಕವಿ ತನ್ನಶಿಷ್ಯ-ಶಿಷ್ಯೆಯರಿಗೆ ಸಹ ಯಾವ ಮಹತ್ವದ ಲೇಖಕರನ್ನೂ ಓದ ಬೇಡಿ ಬರೀ ಬರೆಯುತ್ತ ಸಾಗಿ ಎಂದೇ ಸಲಹೆ ನೀಡುತ್ತಾನೆ.ಕಳಪೆ ಕವನ ಸಂಕಲನಗಳು ಪುಂಖಾನುಪುಂಖವಾಗಿ ಪ್ರಕಟವಾಗುವಲ್ಲಿ ಇವನ ಕೊಡುಗೆ ತುಂಬ ಇದೆ. ಏಕೆಂದರೆ ಇಂತಹ ಬಹುತೇಕ ಕಳಪೆ  ಕವನ ಸಂಕಲನಗಳನ್ನು ಓದಿ ಮುನ್ನುಡಿ ಬರೆದು ಕೊಡುವವನೇ ಇವನು. ಈ ಕವಿಗೆ ಮುನ್ನುಡಿ ಬರೆಯುವುದು ಚಟವಾಗಿಬಿಟ್ಟಿದೆ.

ಉದಯೋನ್ಮುಖರು ಕೇಳಿದರೂ, ಕೇಳದಿದ್ದರೂ ಮುನ್ನುಡಿ ಬರೆದು ಕೊಡುತ್ತಾನೆ. ತಿಂಗಳಿಗೆ ಕನಿಷ್ಠ ಎರಡ್ಮೂರು ಮುನ್ನುಡಿ ಬರೆಯದಿದ್ದರೆ ಅಸ್ವಸ್ಥನಾಗುತ್ತಾನೆ. ಮತ್ತೆ ಮುನ್ನುಡಿ ಬರೆಯತೊಡಗಿದಾಗ ನಾರ್ಮಲ್ಲಾಗುತ್ತಾನೆ. ಮುನ್ನುಡಿ ಬರೆಯುವುದು ಅನೇಕ ಲೇಖಕರಿಗೆ  ತಲೆನೋವಿನ ಸಂಗತಿಯಾದರೆ ಈ ಕವಿಗೆ ಮಾತ್ರ ಮುನ್ನುಡಿ ಬರೆಯುವುದು ತುಂಬ ಸಂತೋಷ ನೀಡುತ್ತಿತ್ತು.

ಉದಯೋನ್ಮುಖಕವಿಯೊಬ್ಬಇತ್ತೀಚೆಗೆ 92ಪುಟಗಳ ಕವನ ಸಂಕಲನ ಪ್ರಕಟಿಸಿದ.ಈ ಕವನ ಸಂಕಲನದ ವಿಶೇಷವೆಂದರೆ ಮುನ್ನುಡಿ ಸ್ಪೇಷಲಿಸ್ಟನಾದ ಬಂಡಾಯ ಕವಿಯೂ ಸೇರಿದಂತೆ ನಾಲ್ಕು ಜನ ಲೇಖಕರು ಮುನ್ನುಡಿ ಬರೆದಿದ್ದರು. ಆರು ಜನ ಪ್ರತಿಕ್ರಿಯೆ ಬರೆದಿದ್ದರು.ಕವನಗಳಿರುವುದು ಬರೀ 42ಪುಟಗಳು ಮಾತ್ರಉಳಿದ ಪುಟಗಳೆಲ್ಲ ಮುನ್ನುಡಿ ಮತ್ತು ಪ್ರತಿಕ್ರಿಯೆಗಳಿಗೆ ಮೀಸಲು. ಇವೆಲ್ಲ ರಾಜಕೀಯ ಪ್ರೇರಿತ ಬರಹಗಳು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕನ್ನಡದಲ್ಲಿ ಇಂತಹ ಕವಿಗಳೂ, ಕವನ ಸಂಕಲನಗಳೂ ಹೆಚ್ಚಾಗಿ ಬರುತ್ತಿರುವುದು ಖೇದದ ಸಂಗತಿ.

ಇನ್ನು ಉದಯೋನ್ಮುಖ ಸಾಹಿತಿಗಳಲ್ಲಿ ಮುನ್ನುಡಿಯ ಕುರಿತ ಹಪಾಹಪಿ ಎಲ್ಲರಿಗಿಂತಲೂ ಹೆಚ್ಚಾಗಿ ಕಂಡುಬರುತ್ತದೆ. ಇವರು ಹಿರಿಯ ಸಾಹಿತಿಗಳನ್ನು ಇನ್ನಿಲ್ಲದಂತೆ ಕಾಡಿ ಬೇಡಿ ಮುನ್ನುಡಿ ಬರೆಸಿಕೊಳ್ಳುತ್ತಾರೆ. ಕೆಲವರಂತೂ ಮುನ್ನುಡಿಗೋಸ್ಕರ ವರ್ಷಾನುಗಟ್ಟಲೆ ಕಾಯುತ್ತಾರೆ. ಎಷ್ಟೋ ಜನ ಹಿರಿಯ ಲೇಖಕರು ಉದಯೋನ್ಮುಖರ ಉಪದ್ರವಕ್ಕೆ ಬೇಸತ್ತು ಮುನ್ನುಡಿ ಬರೆದು ಕೊಡುತ್ತಾರೆ. ಇನ್ನು ಕೆಲವು ಲೇಖಕರು ಪಾಪ, ವರ್ಷಾನುಗಟ್ಟಲೆ ಕಾಯುತ್ತಿದ್ದಾರೆ ಎಂದು ಕನಿಕರದಿಂದ ಮುನ್ನುಡಿ ಬರೆದು ಕೊಡುತ್ತಾರೆ. ಮತ್ತೆ ಕೆಲವು ಲೇಖಕರು ಹೊಸಬರನ್ನು ಪ್ರೋತ್ಸಾಹಿಸಲೆಂದು ಸ್ನೇಹದಿಂದ ಮುನ್ನುಡಿ ಬರೆದು ಕೊಡುತ್ತಾರೆ. ಆದರೆ ಬುದ್ಧಿಜೀವಿಗಳು ಮಾತ್ರ ಉದಯೋನ್ಮುಖರನ್ನು ತಮ್ಮ ಹಿಂಬಾಲಕರನ್ನಾಗಿಸಿಕೊಳ್ಳಲು ಸ್ವಾರ್ಥಪೂರಿತ ಪ್ರೀತಿಯಿಂದ ಮುನ್ನುಡಿ ಬರೆದು ಕೊಡುತ್ತಾರೆ. ಈ ಬುದ್ಧಿಜೀವಿಗಳು ಎಲ್ಲರಿಗಿಂತಲೂ ಅಪಾಯಕಾರಿ.

ಮುನ್ನುಡಿಯ ಮೋಹವೇ ಅಂತಹುದು ಅದು ಎಂತಹವರನ್ನೂ ಬಿಟ್ಟಿಲ್ಲ. ಕನ್ನಡದ ಬಹುಸಂಖ್ಯಾತ ಸೃಜನಶೀಲ ಲೇಖಕರು ಅಲ್ಪಸಂಖ್ಯಾತ ವಿಮರ್ಶಕರ ಮುನ್ನುಡಿ ಬಯಸುತ್ತಾರೆ. ಈ ವಿಮರ್ಶಕ ಮಹಾಶಯರು ಮುನ್ನುಡಿ ಕೊಡಲು ಇನ್ನಿಲ್ಲದಂತೆ ಕಾಡಿಸಿದರೂ ತಾಳ್ಮೆಯಿಂದ ಕಾಯುತ್ತಾರೆ.ಇಂತಹ ಘಟನೆಗಳು ವಿಮರ್ಶಕರಲ್ಲಿ ತಾವು ಸೃಜನಶೀಲ ಲೇಖಕರಿಗಿಂತ  ದೊಡ್ಡವರು ಎಂಬ ಅತಿಯಾದ ಆತ್ಮವಿಶ್ವಾಸ ತುಂಬಿ ಅಹಂಕಾರದಿಂದ ಬೀಗುವಂತೆ ಮಾಡಿರುವುದು ಸುಳ್ಳಲ್ಲ. ಇನ್ನಾದರೂ ನಮ್ಮ ಸಾಹಿತಿಗಳು ಮುನ್ನುಡಿಯ ಭ್ರಮೆಯಿಂದ ಹೊರ ಬರಬೇಕಾದ ಅಗತ್ಯವಿದೆ.

ಯಾವುದೇ ಸಾಹಿತ್ಯ ಕೃತಿ ತನ್ನ ಅಂತಃಸತ್ವದಿಂದಲೇ ಬಾಳಿ ಬದುಕ ಬೇಕಲ್ಲದೆ ಮುನ್ನುಡಿ, ವಿಮರ್ಶೆ ಅಥವಾ ಪ್ರಶಸ್ತಿಗಳಿಂದಲ್ಲ. ಒಂದು ಕೃತಿ ಕಳಪೆಯಾಗಿದ್ದರೆ ಎಂತಹ ದೊಡ್ಡ ಲೇಖಕರ ಮುನ್ನುಡಿ, ವಿಮರ್ಶೆ ಅಥವಾ ಪ್ರಶಸ್ತಿಗಳೂ ಅಂತಹ ಕೃತಿಯನ್ನು ಕಾಪಾಡಲಾರವು. ಅದೇ ಒಂದು ಶ್ರೇಷ್ಠ ಸಾಹಿತ್ಯ ಕೃತಿಗೆ ಯಾವುದೇ ಮುನ್ನುಡಿ, ವಿಮರ್ಶೆ ಅಥವಾ ಪ್ರಶಸ್ತಿಗಳ ಅಗತ್ಯವಿಲ್ಲ. ಇಂತಹ ಶ್ರೇಷ್ಠ ಕೃತಿಗಳು ತಮ್ಮ ಅಂತಃಸತ್ವದಿಂದಲೇ ದೇಶಕಾಲಗಳನ್ನು ಮೀರಿ ಬಹುಕಾಲ ಬಾಳಬಲ್ಲಷ್ಟು ಶಕ್ತಿಯುತವಾಗಿರುತ್ತವೆ. ಸುದೈವವಶಾತ್ ಕನ್ನಡದಲ್ಲಿ ಇಂತಹ ಸಾಕಷ್ಟು ಶಕ್ತಿಯುತ  ಕೃತಿಗಳಿವೆ. ಇದು ನಿಜಕ್ಕೂ ನನ್ನಂತಹ ಸಾಹಿತ್ಯಪ್ರಿಯರಿಗೆ ಸಮಾಧಾನ ಮತ್ತು ಹೆಮ್ಮೆ ತರುವ ಸಂಗತಿ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter