(ಇಂದು ಕಯ್ಯಾರ ಕಿಞ್ಞಣ್ಣ ರೈ ಅವರ ಜನ್ಮ ದಿನ (ಜನನ ೮-೬-೧೯೧೫))
ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಸುದೀರ್ಘಕಾಲ ಅಧ್ಯಾಪನವನ್ನು ನಡೆಸಿ ಅತ್ಯುನ್ನತ ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿ ಶಾಲೆಯನ್ನೂ ಹುಟ್ಟೂರನ್ನೂ ಪುಳಕಗೊಳಿಸಿ ಗೌರವದಿಂದ ಬೆಳಗುವಂತೆ ಮಾಡಿದವರು ಕಯ್ಯಾರರು.ಅವರಿಗೆ ರಾಷ್ಟ್ರಪ್ರಶಸ್ತಿಬಂದದ್ದು 1969ರಲ್ಲಿ. ನಾನು ನವಜೀವನ ಪ್ರೌಢಶಾಲೆಯನ್ನು ಸೇರಿದ್ದು 1970ರಲ್ಲಿ. ಆಗ ಆ ಶಾಲೆಯ ಪರಿಸರದಲ್ಲಿ ಅವರಿಗೆ ಪ್ರಶಸ್ತಿಬಂದ ಸಂಭ್ರಮದ ಸೊಲ್ಲು ಅನುರಣಿಸುತ್ತಿತ್ತು. ಆ ಶಾಲೆಯಲ್ಲಿ ಅಧ್ಯಾಪಕರಾಗಿದ್ದವರ ಮಗಳು ನನ್ನ ಸಹಪಾಠಿ. ಆಕೆ ಕಯ್ಯಾರರಿಗೆ ಪ್ರಶಸ್ತಿ ಬಂದ ಸಂಭ್ರಮವನ್ನು ಹಾಗೂ ಆ ನಿಮಿತ್ತ ಏರ್ಪಡಿಸಿದ ಅಭಿನಂದನ ಸಮಾರಂಭದಲ್ಲಿ ಮುಖ್ಯೋಪಾಧ್ಯಾಯರು ಭಾವಪರವಶರಾಗಿ ಅತ್ತದ್ದನ್ನು ಹೇಳುತ್ತಿದ್ದರೆ ನಾವು (ಇತರ ಶಾಲೆಗಳಿಂದ ಆ ಶಾಲೆಗೆ ಎಂಟನೆ ಕ್ಲಾಸಿಗೆ ಸೇರಿದವರು) ಕಣ್ಣರಳಿಸಿ ಕೇಳುತ್ತಿದ್ದೆವು. ಅಂತಹ ಗುರುಗಳಿರುವ ಶಾಲೆಯಲ್ಲಿ ಕಲಿಯುವ ಅವಕಾಶ ನಮ್ಮದಾಯಿತಲ್ಲ ಎಂದು ಬೀಗುತ್ತಿದ್ದೆವು. ಆ ದೊಡ್ಡದೇಹದ ಜೀವ ಕಲ್ಲಕಳಿಯದ ತಮ್ಮ ಮನೆಯಿಂದ ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಟ್ಟು ದೂರದಿಂದ ನಡೆದು ಬರುತ್ತಿದ್ದರೆ ನಾವು ಬೆರಗಿನಿಂದ ನೋಡುತ್ತಿದ್ದೆವು.ಹಾಗೆ ದಾರಿ ನಡೆಯುತ್ತ ಕೆಲವೊಮ್ಮೆ ಅವರು ಜೊತೆಯಾದರೆ, ನಮ್ಮನ್ನು ಮಾತನಾಡಿಸಿದರೆ ನಮ್ಮ ಹರ್ಷ ಹೇಳತೀರ.
ಇನ್ನು ತರಗತಿಯಲ್ಲಿ ಅವರ ಪಾಠವೋ. ಆ ಸ್ವರಭಾರ; ಆ ಕಂಠ; ಗದ್ಯವಾಗಲಿ ಪದ್ಯವಾಗಲಿ ಅದನ್ನು ರಸವತ್ತಾಗಿ ವಿದ್ಯಾರ್ಥಿಗಳಿಗೆ ತಲಪಿಸುವ ಆ ಸಿದ್ಧಿ;ವ್ಯಾಕರಣ, ಛಂದಸ್ಸು, ಅಲಂಕಾರ ಇತ್ಯಾದಿಗಳನ್ನು ಅವು ಶಾಸ್ತ್ರಗಳು ಎಂಬ ಅನಿಸಿಕೆಯೇ ಬಾರದಂತೆ ವಿದ್ಯಾರ್ಥಿಗಳ ತಲೆಯಲ್ಲಿ ಅಚ್ಚೊತ್ತಿದಂತೆ ಮನದಟ್ಟುಮಾಡುವ ಆ ರೀತಿ- ಇತ್ಯಾದಿಗಳನ್ನು ನನ್ನ ಅಣ್ಣಂದಿರಿಂದ ಕೇಳಿ ಕೇಳಿ ನನ್ನ ಕಲ್ಪನೆಯಲ್ಲಿ ಅದಾಗಲೇ ಅವರ ಬಿಂಬವೊಂದು ಮೂಡಿತ್ತು.ನಿದ್ದೆಯಿಂದ ಎಬ್ಬಿಸಿ ಕೇಳಿದರೂ ಛಂದೋನಿಯಮಗಳನ್ನು ವ್ಯಾಕರಣ ವಿಚಾರಗಳನ್ನು ಅಲಂಕಾರದ ಗುರುತನ್ನು ಅವರ ಶಿಷ್ಯರಾದ ನನ್ನ ಅಣ್ಣಂದಿರು ಪಟಪಟನೆ ಹೇಳಬಲ್ಲವರಾಗಿದ್ದರೆ ಅದು ಕಯ್ಯಾರರ ಪಾಠದಿಂದ.ಮನೆಯಲ್ಲಿ ಕಾವ್ಯವಾಚನ ಮಾಡುತ್ತಿದ್ದ ದೊಡ್ಡಣ್ಣನ ಆ ಸ್ಪಷ್ಟ, ನಿರರ್ಗಳ ಹಾಗೂ ಭಾವಪೂರ್ಣವಾದ ಧಾಟಿಯಲ್ಲಿ ಕಯ್ಯಾರರಿದ್ದರು.ಪುಸ್ತಕ ಪ್ರೀತಿ, ಕಾವ್ಯಪ್ರೀತಿ ನಮಗೆಲ್ಲ ಬಳುವಳಿಯಾಗಿ ಬಂದಿದ್ದರೆ ಅದರ ಹಿಂದೆ ಕಯ್ಯಾರರಂತಹ ಗುರುಗಳಿದ್ದರು.ಶಾಲಾ ಗ್ರಂಥಾಲಯದಿಂದ ಪುಸ್ತಕಗಳನ್ನು ಕೊಟ್ಟು ಕಡ್ಡಾಯವಾಗಿ ಓದಿಸಿ ಅವುಗಳ ಬಗ್ಗೆ ತಿಳಿದಂತಹ ನಾಲ್ಕು ಸಾಲನ್ನು ಬರೆಯಲು ಹೇಳುತ್ತಿದ್ದವರು ನಮ್ಮ ಈ ಗುರುಗಳು. ಅವರ ಅಧ್ಯಾಪನದ ಅವಧಿಯಲ್ಲಿ ಕಯ್ಯಾರರೇ ಮುಖ್ಯಸಂಪಾದಕರಾಗಿ ‘ನವಜೀವನ’ವೆಂಬ ಮುದ್ರಿತ ಶಾಲಾಪತ್ರಿಕೆಯೊಂದು ಪ್ರಕಟವಾಗುತ್ತಿತ್ತು. ಅದರಲ್ಲಿ ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಬರಹಗಳು, ಶಾಲೆಯ ಚಟುವಟಿಕೆಗಳ ವರದಿ, ಸಂದರ್ಶಕರ ಅಭಿಪ್ರಾಯಗಳು -ಇತ್ಯಾದಿಗಳು ಒಳಗೊಂಡಿದ್ದು ಶಾಲಾಸಂಚಿಕೆಗೆ ಮಾದರಿಯಾಗಿತ್ತು.ನನ್ನ ಅಣ್ಣಂದಿರ ಕಾಲದ ಈ ಶಾಲಾಸಂಚಿಕೆಗಳನ್ನು ಹಾಗೂ ಕಯ್ಯಾರರೇ ಸಿದ್ಧಪಡಿಸಿದ ನವೋದಯ ವಾಚನಮಾಲೆಯ ಪಠ್ಯಗಳನ್ನು ಪೆಪ್ಪರಮಿಂಟು ಸವಿದಂತೆ ಓದಿದ ನೆನಪು ನನಗಿದೆ.ಅವರು ಅವರಿಂದ ಸಾಹಿತ್ಯ ಪ್ರೇರಣೆಯನ್ನು ಪಡೆದ ಅನೇಕಾನೇಕ ಶಿಷ್ಯರಲ್ಲಿನಾನೂ ಒಬ್ಬಳು.ಅವರ ಪಾಠವನ್ನು ಕೇಳಿದವರೆಲ್ಲ ಲೇಖಕರಾಗದಿದ್ದರೂ ಒಳ್ಳೆಯ ಓದುಗರಂತೂ ಆಗಲೇಬೇಕು. ನನಗೆ ಎಂಟು ಮತ್ತು ಹತ್ತನೆ ತರಗತಿಯಲ್ಲಿ ಅವರ ಪಾಠ ಕೇಳುವ ಅವಕಾಶವಿರಲಿಲ್ಲ. ಒಂಬತ್ತರಲ್ಲಿ ಪೂರ್ತಿ ನಮಗವರು ಪಾಠ ಹೇಳಿದ್ದರು.ಅವರೇ ಬರೆದ ಕವೀಂದ್ರ ರವೀಂದ್ರರು ಎನ್ನುವ ಗದ್ಯಭಾಗದ ಹಾಗೂ ‘ಬೇಡುವೆಂ ಚಂದ್ರವಂಶದ ಕುಡಿಯ ಕಾಪಾಡು’ ಎಂಬ ಪದ್ಯದ ಪಾಠವಂತೂ ನನ್ನ ತಲೆಯಲ್ಲಿ ಅಚ್ಚೊತ್ತಿದೆ.ಓರ್ವಅಧ್ಯಾಪಕ ಸ್ವತ: ಕವಿಯಾಗಿದ್ದಾಗ ಪಾಠವನ್ನು ಅನುಭವಿಸಿ ಮಕ್ಕಳಿಗೆ ತಲಪಿಸುವಾಗ ಅದರ ಪರಿಣಾಮ ಏನು ಎನ್ನುವುದಕ್ಕೆ ಆ ಪಾಠಗಳು ಸಾಕ್ಷಿಯಾಗಿದ್ದವು.
ವಿಶ್ವಮಾನ್ಯರಾದ ಹಾಗೂ ಭಾರತೀಯ ಸಾಹಿತ್ಯದ ನವೋತ್ಥಾನಕ್ಕೆ ಕಾರಣರಾದ ರವೀಂದ್ರರ ಬಗ್ಗೆ ಕಯ್ಯಾರರಿಗೆ ಅತ್ಯಂತ ಅಭಿಮಾನವಿತ್ತು.ಹಾಗಾಗಿ ಆ ಔನ್ನತ್ಯದ ವಿಶೇಷತೆಯನ್ನು ಹೇಳುವಲ್ಲಿ ಒಂದು ಉನ್ಮೇಷ ಕಾಣಿಸಿಕೊಂಡು ಅದು ಮಕ್ಕಳಿಗೆ ರವಾನೆಯಾಗುತ್ತಿದ್ದುದು ಸುಳ್ಳಲ್ಲ.ಮಕ್ಕಳು ದೊಡ್ಡ ಕನಸುಗಳನ್ನು ಕಾಣಲು,ಉತ್ಸಾಹದಿಂದ ರಚನಾತ್ಮಕವಾಗಿ ತೊಡಗಿಕೊಳ್ಳಲು ಅಧ್ಯಾಪಕರ ಈ ಬಗೆಯ ಪಾಠ ಯಾವತ್ತೂ ಪ್ರೇರಣೆಯಾಗುತ್ತದೆ.ಅದೇ ಉತ್ಸಾಹ ಗೋವಿಂದ ಪೈಯವರ ಬಗ್ಗೆ ಹೇಳುವಾಗಲೂ ಕಾಣಿಸುತ್ತಿತ್ತು.ಅವರ ಗದ್ಯಕೃತಿಗಳಲ್ಲಿ ಬಹುಪಾಲು ವ್ಯಕ್ತಿಚಿತ್ರಗಳೇ ಕಾಣುತ್ತವೆ. ಅಂದರೆ ಅವರಿಗೆ ಗುರುಗಳಾಗಿ ಮುಂದಿನ ಪೀಳಿಗೆಗೆ ಉನ್ನತ ವ್ಯಕ್ತಿತ್ವದ ಮಾದರಿಗಳನ್ನು ಪರಿಚಯಿಸುವುದು ಮುಖ್ಯವಾಗಿ ಕಂಡಿರಬೇಕು. ಇನ್ನು ಪದ್ಯ ಭಾಗದ ಕುರಿತು ಹೇಳಹೊರಟರೆ ಈಗಾಗಲೇ ಉಲ್ಲೇಖಿಸಿದ ಉದಾಹರಣೆಯಲ್ಲಿ ಕುಂತಿ ಕರ್ಣರ ಭೇಟಿಯ ಸಂದರ್ಭ ಬರುತ್ತದೆ.’ತೊಟ್ಟಬಾಣವನ್ನು ಮರಳಿತೊಡದಿರು’ ಎಂದು ಎಂದು ಕುಂತಿ ಕರ್ಣನಲ್ಲಿ ಕೇಳುವ ಸಂದರ್ಭ.ಇಲ್ಲಿ ತಾಯಿ ಕುಂತಿಯ ಪಾತ್ರಕ್ಕೆ ಏನೊಂದೂ ಅಪಚಾರಮಾಡದೆ ಕರ್ಣನ ಪಾತ್ರದ ಔನ್ನತ್ಯವನ್ನು ಕಯ್ಯಾರರು ಎಷ್ಟು ಹೃದಯಸ್ಪರ್ಶಿಯಾಗಿ ಕಾವ್ಯದಲ್ಲಿ ನಿರೂಪಿಸಿದ್ದಾರೋ ಅಷ್ಟನ್ನೂ ತರಗತಿಯಲ್ಲಿ ಧಾರೆಯೆರೆಯುತ್ತಿದ್ದರು.ಅದು ಶಬ್ದಾರ್ಥವನ್ನು ಹೇಳಿ ಸಂಧಿ ವಿಂಗಡಿಸಿ ಪದ್ಯದ ಗದ್ಯಾನುವಾದವನ್ನಷ್ಟೇ ಹೇಳಿ ಕೈತೊಳೆದುಕೊಳ್ಳುವ ಬಗೆಯಲ್ಲ.ಪದ್ಯವನ್ನು ಪದ್ಯದಂತೆ ಓದುವುದು,ಸಂದರ್ಭವನ್ನು ತಿಳಿದುಕೊಳ್ಳುವುದು, ಅದರ ಶಬ್ದಾರ್ಥಗಳನ್ನು ತಿಳಿದುಕೊಳ್ಳುವುದು,ಅರ್ಥದ ಸ್ವಾರಸ್ಯವನ್ನೂ ಭಾವದ ಸೊಗಸನ್ನೂ ಗ್ರಹಿಸುವುದು ಪದ್ಯದ ಸಂದೇಶವನ್ನೂ ಅರಿಯುವುದು- ಈ ಎಲ್ಲ ಮಜಲುಗಳನ್ನು ಒಳಗೊಂಡ ರಸಯಾನವಾಗಿತ್ತದು. ‘ಕಟ್ಟಿ ಜೀವವ ವಿಧಿಯು ಬಡಿದಟ್ಟುತಿರೆ ಜನನಿ ಪುಣ್ಯಗರ್ಭದೊಳೆನಗೆ ಮಂಗಳಾಶ್ರಯವಿತ್ತೆ’ಎಂದು ತಾಯಿಯೊಡನೆ ಹೇಳುವ ಕರ್ಣನೇ ಅವರಾಗುತ್ತಿದ್ದರು. ಕಂಠ ಗದ್ಗದ; ಕಪೋಲದಲ್ಲಿ ಇಳಿಯುವ ಕಣ್ಣೀರು;ತರಗತಿಯಿಡೀ ಮೌನವಾಗಿ ರೋದಿಸುವ ಕ್ಷಣವದು. ಅದೊಂದು ಬಗೆಯ ಕೆಥಾರ್ಸಿಸ್. ಈ ಕಾವ್ಯಸಂಸ್ಕಾರ ಅದು ರವಾನಿಸುವ ಪಾಠ ಪರೀಕ್ಷೆ ಬರೆದು ಮರೆಯುವಂಥದ್ದಲ್ಲ. ಜೀವನಪೂರ್ತಿ ಮುನ್ನಡೆಸುವಂಥದ್ದು.
ಹಾಗೆ ನೋಡಿದರೆ ಕವಿ,ಪತ್ರಕರ್ತ, ಅಧ್ಯಾಪಕ, ಸಮಾಜಸೇವಕ,ಕೃಷಿಕ- ಕಯ್ಯಾರರು ನಿರ್ವಹಿಸಿದ ಈ ಪಾತ್ರಗಳು ಒಂದಕ್ಕೊಂದು ವಿರೋಧವಾಗಿ ಕಂಡಿತವಾಗಿಯೂ ಇರಲಿಲ್ಲ. ಅವು ಒಂದಕ್ಕೊಂದು ಪೂರಕವಾಗಿ ಇದ್ದವೆಂದರೆ ತಪ್ಪಲ್ಲ.ದುಡಿಮೆಯೇ ದೇವರೆಂದು ತಿಳಿದ ಅವರಿಗೆ ಸಾಮಾಜಿಕ ಋಣದ ಸ್ಪಷ್ಟ ಅರಿವು ಇತ್ತು. ಹಾಗಾಗಿ ಒಂದೊಂದು ವೃತ್ತಿಯೊಂದಿಗೆ ಬೆಸೆದ ಸಾಮಾಜಿಕ ಬದ್ಧತೆಯ ಗೌರವದಿಂದ ಅದನ್ನು ನಿರ್ವಹಿಸಿದರು ಎನ್ನವುದು ಮುಖ್ಯ. ಕವಿ ಒಬ್ಬ ಲೋಕಗುರು.ತನ್ನವ್ಯಕ್ತಿತ್ವದ ಗುರುತ್ವದಿಂದ ‘ಪಾಪಮಿದು ಪುಣ್ಯಮಿದು ಹಿತರೂಪಮಿದು ಅಹಿತ ಪ್ರಕಾರಮಿದು’ ಎಂದು ತಿಳಿಸಿಕೊಡುವ ತಿದ್ದುವ ಗುರು. ಇದು ಅಧ್ಯಾಪನವೃತ್ತಿಗೆ ಪೂರಕವೇ ಆಯಿತು.ಕನ್ನಡ ಅಧ್ಯಾಪಕರಾಗಿ ಅವರು ಬೋಧಿಸಿದ ಗದ್ಯಪದ್ಯಗಳು ಹೃದ್ಯವಾಗಿ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುದಕ್ಕೆ ಇದು ಕಾರಣ.ಈಗಷ್ಟೆ ಉದಾಹರಿಸಿದ ಆ ಕಾವ್ಯಭಾಗ ಅದರಷ್ಟಕ್ಕೆ ಒಂದು ಪಾಠ.ತಾಯಿಯ ಸಂಕಟ, ಮಗನ ಅಳಲು ಇನ್ನೊಬ್ಬರ ದು:ಖದಲ್ಲಿ ಸಹತಾಪವನ್ನು ಅನುಭವಿಸಲು ಕಲಿಸುತ್ತದೆ. ನಾವು ಒಣ ಮನುಷ್ಯರಾಗಿ ಬರೇ ವ್ಯಾವಹಾರಿಕರಾಗಿ ಇರುವುದನ್ನಲ್ಲ.ಮನುಷ್ಯರನ್ನು ಅರ್ಥಮಾಡಿಕೊಳ್ಳಲು, ಬದುಕನ್ನು ಅರ್ಥಮಾಡಿಕೊಳ್ಳಲು ಕಲಿಸುತ್ತದೆ.ಅವರ ಯಾವುದೇ ರಚನೆಯನ್ನು ನೋಡಿದರೂ ಅವು ನಿರುದ್ದಿಶ್ಯವಲ್ಲ. ಅವರ ‘ಸಾಹಿತ್ಯದೃಷ್ಟಿ’ ಕೃತಿಯಲ್ಲಿ ಈ ವಿಚಾರವನ್ನು ಸ್ಪಷ್ಟವಾಗಿಯೇ ಸಾರಿದ್ದಾರೆ ಕೂಡ. ‘ಸಂಸ್ಕøತಿಯ ಹೆಗ್ಗುರುತುಗಳು’ ಎಂಬ ಅವರ ಪ್ರಚಾರೋಪನ್ಯಾಸದಲ್ಲೂ ಈ ಆಶಯವನ್ನು ನೋಡಬಹುದು.ಸಂಸ್ಕøತಿಯ ತಿರುಳನ್ನು ಅವರು ಗ್ರಹಿಕೆಗೆ ತಂದುಕೊಂಡ ರೀತಿ, ಅದನ್ನು ಗುರುತನದ ಹಿರಿಮೆಯಲ್ಲಿ ಓದುಗರಿಗೆ ತಲಪಿಸುವ ಬಗೆ ಮಾದರಿಯಾದದ್ದು.ಕಯ್ಯಾರರ ಅಧ್ಯಾಪನದ ಕುರಿತು ಹೇಳುವಾಗ ತರಗತಿಯೊಳಗಿನ ಪಾಠದ ಕುರಿತು ಮಾತ್ರವಲ್ಲ ಸಾಹಿತ್ಯಸೃಷ್ಟಿ ಜನರ ಬಾಳಿಗೆ ದಾರಿದೀಪವಾಗಬೇಕು ಎಂಬ ಕಳಕಳಿಯಿಂದ ಬರೆದು ಸಾರಿದ ಅವರ ಜೀವನ ಪಾಠದ ಕುರಿತೂ ಉಲ್ಲೇಖಿಸಬೇಕಾಗುತ್ತದೆ. ಅವರ ವಿದ್ಯಾರ್ಥಿಗಳಾರೂ ಕನ್ನಡದಲ್ಲಿ ಅನುತ್ತೀರ್ಣರಾಗಲಿಲ್ಲ ಎನ್ನುವುದು ಅಧ್ಯಾಪಕರಾಗಿ ಅವರ ಹೆಗ್ಗಳಿಕೆ.ಶಿಷ್ಯರಬಗ್ಗೆ ಅವರದು ತುಂಬು ಅಭಿಮಾನ.ಶಿಷ್ಯರ ಅಲ್ಪಸಾಧನೆಯನ್ನು ಕೂಡ ಮೆಚ್ಚಿ ಪ್ರೋತ್ಸಾಹಿಸುವುದು ಅವರ ದೊಡ್ಡಗುಣ. (ಮಂಗಳೂರು ಪುರಭವನದಲ್ಲಿ ಬಹಳ ವರ್ಷಗಳಹಿಂದೆ ನಡೆದ ಒಂದು ಕಾರ್ಯಕ್ರಮದಲ್ಲಿ ನನ್ನನ್ನು ತಮ್ಮ ಶಿಷ್ಯೆಯೆಂದು ಬನ್ನಂಜೆ ಗೋವಿಂದಾಚಾರ್ಯರಿಗೆ ಪರಿಚಯಿಸಿದ್ದು ನೆನಪಿದೆ.)
ಕಯ್ಯಾರರ ಕನ್ನಡ ಹೋರಾಟ- ಕನಸು ಮತ್ತು ಸಾಧನೆ;
.ಕಯ್ಯಾರರ ವ್ಯಕ್ತಿತ್ವದಲ್ಲಿ ಸ್ವಾತಂತ್ರ್ಯದ ಪ್ರಜ್ಞೆ,ಸ್ವಾಭಿಮಾನದ ನಿಲುವು, ಸ್ವದೇಶಿಚಿಂತನೆ ಹಾಸುಹೊಕ್ಕಾಗಿ ಬೆರೆತಿದೆ
ಕನ್ನಡಾಂತರ್ಗತಂ ತುಳುನಾಡು ನನ್ನದಿದು
ಭಾರತಾಂತರ್ಗತಂ ಕನ್ನಡದ ಬದುಕು
ಕನ್ನಡದ ಗಡಿನಾಡಿನಲ್ಲಿ ನಾ ಹುಟ್ಟಿರಲು
ಹೇಡಿಯೆನಿಸದೆ ಯೋಧನಾಗಬೇಕು
ಎಂಬ ಕಯ್ಯಾರರ ಸಾಲುಗಳು ಅವರ ವ್ಯಕ್ತಿತ್ವದೊಳಗೆ ರಾಷ್ಟ್ರೀಯತೆ ಮತ್ತು ಉಪರಾಷ್ಟ್ರೀಯತೆಗಳು ಸಾಮರಸ್ಯದಿಂದ ಬೆಸೆದುಕೊಂಡ ಬಗೆಯನ್ನು ತಿಳಿಸುತ್ತವೆ.ತುಳು,ಕನ್ನಡ,ಭಾರತದೇಶ ಎಂಬ ಐಡೆಂಟಿ-ಟಿಗಳು ಕಯ್ಯಾರರಿಗೆ ಒಂದಕ್ಕೊಂದು ವಿರೋಧವಲ್ಲ. ಆದರೆ ‘ಕೇರಳಾಂತರ್ಗತಂ ತುಳುನಾಡಿನ ಸೆರಗು ಕಾಸರಗೋಡು,’ ಎಂಬ ಕಟುವಾಸ್ತವವನ್ನು ಒಪ್ಪಿಕೊಳ್ಳಲೋ ಅರಗಿಸಿಕೊಳ್ಳಲೋ ಅವರಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಚಾರಿತ್ರಿಕವಾಗಿ,ಸಾಂಸ್ಕøತಿಕವಾಗಿ, ಭಾಷಿಕವಾಗಿ ಮತ್ತು ಭೌಗೋಲಿಕವಾಗಿ ಕೂಡ ದ.ಕ.ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ನೆಲ ಇದು.ರಾಜಕೀಯ ಆವುಟದಿಂದ ಸಂಭವಿಸಿದ ದುರಂತವನ್ನು ಅರಗಿಸಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ? ಗೋವಿಂದಪೈಯವರು ಮಂಜೇಶ್ವರ, ದ.ಕ.ಜಿಲ್ಲೆ ಎಂದೇ ಕೊನೆಯವರೆಗೂ ಬರೆಯುತ್ತಿದ್ದರಂತೆ.ಕಯ್ಯಾರರು ಹಾಗೆ ಬರೆಯದಿದ್ದರೂ ಮಾನಸಿಕವಾಗಿ, ಭಾವನಾತ್ಮಕವಾಗಿ ಹಾಗೂ ತಮ್ಮ ಕ್ರಿಯಾಶೀಲತೆಯಲ್ಲಿ ಹಾಗೆಯೇ ಬದುಕಿದರು.ವಿದ್ವಾನ್ ಪದವಿಗೆ ತೃಪ್ತರಾಗದೆಇಂಗ್ಲಿಷ್ ಶಿಕ್ಷಣಕ್ಕೂ ತೆರೆದುಕೊಂಡು, ಬಿ.ಎ,ಎಂ.ಎ.ಪದವಿಯನ್ನು ಪೂರೈಸಿದ್ದು, ಪತ್ರಕರ್ತನಾಗಿ ದೇಶದ ಮತ್ತು ಪರಿಸರದ ಆಗುಹೋಗುಗಳನ್ನು ಜವಾಬ್ದಾರಿಯುತ ಎಚ್ಚರದಿಂದ ಗಮನಿಸಿದ್ದು ಬಹಳ ಮುಖ್ಯವಾಗುತ್ತದೆ.ಸ್ವಾತಂತ್ರ್ಯ ಚಳುವಳಿಯ ಕಾವು ತೀವ್ರವಾಗುತ್ತಿದ್ದಂತೆಯೇ ಭಾಷಿಕನೆಲೆಯ ಉಪರಾಷ್ಟ್ರೀಯತೆಯೂ ಬಲಗೊಳ್ಳುತ್ತಿದ್ದ ಕಾಲದಲ್ಲಿ ಕಯ್ಯಾರರು ಇವೆರಡನ್ನೂ ಸರಿದೊರೆಯಾಗಿ ಮೈಗೂಡಿಸಿಕೊಂಡವರು.ಪೊಟ್ಟಿ ಶ್ರೀರಾಮುಲು 64ದಿನಗಳ ಉಪವಾಸದ ಬಳಿಕ ಮರಣವನ್ನಪ್ಪಿದಾಗ ಅವರ ಬೇಡಿಕೆಯಾದ ಆಂಧ್ರಪ್ರದೇಶದ ಉದಯವಾಗಿ ಚೆಲುವ ಕನ್ನಡನಾಡಿನ ಉದಯದ ಸಂಕಲ್ಪಕ್ಕೆ ಬಲಬಂತು. ಕರ್ನಾಟಕ ಏಕೀಕರಣದ ಹೋರಾಟವು ಅದಕ್ಕೂ ಹಿಂದೆಯೇ ಆರಂಭವಾಗಿದ್ದವು. ವಿಶಾಲಕೇರಳದ ಉದಯದ ಕನಸು ಕಂಡ ಮಲಯಾಳಿಗರ ಪ್ರಯತ್ನದ ವಾರ್ತೆ ಕಾಸರಗೋಡು ಕೈತಪ್ಪಿಹೋಗುವ ಆತಂಕವನ್ನು ಕನ್ನಡಿಗರಲ್ಲಿ ಅದಾಗಲೇ ಸೃಷ್ಟಿಸಿತ್ತು.1947ರಲ್ಲಿ ಕಾಸರಗೋಡಿನಲ್ಲಿ ನಡೆದ ಕನ್ನಡ ಸಾಹಿತ್ಯಪರಿಷತ್ತಿನ ಸಮ್ಮೇಳನವು ಕರ್ನಾಟಕ ಏಕೀಕರಣದ ದೃಷ್ಟಿಯಿಂದಲೂ ಮಹತ್ವದ ಸಮ್ಮೇಳನವಾಗಿತ್ತು.ಸಮ್ಮೇಳನವು ಕಾಸರಗೋಡಿನಲ್ಲಿ ನಡೆದದ್ದು, ಅದಕ್ಕೆ ಏಕೀಕರಣದ ಹೋರಾಟಗಾರರಲ್ಲಿ ಒಬ್ಬರಾದ ತಿ.ತಾ ಶರ್ಮರು ಆಧ್ಯಕ್ಷರಾದದ್ದು, ತೆಂಕನಾಡು ಎಂಬ ಸ್ಮರಣಸಂಚಿಕೆಯ ಸಂಪಾದನೆಯಲ್ಲಿ ಕಯ್ಯಾರಕಿಞ್ಞಣ್ನರೈಯವರಿಗೂ ಪಾತ್ರವಿದ್ದದ್ದು ಅದರಲ್ಲಿ ಶ್ರೀಧರ ಕಕ್ಕಿಲ್ಲಾಯರು ಕಾಸರಗೋಡಿನ ಕುರಿತು ಅಧ್ಯಯನಪೂರ್ಣ ಮೌಲಿಕ ಲೇಖನವೊಂದನ್ನು ಬರೆದು ಏಕೀಕರಣದ ಹೋರಾಟಗಾರರು ಜಾಗೃತರಾಗಿರುವಂತೆ ಸೂಚಿಸಿದ್ದು ಇತಿಹಾಸದ ಭಾಗ.ಮುಂದೆ ಜಸ್ಟಿಸ್ ಮಹಾಜನ ಕಮಿಷನಿನ ಮುಂದೆ ಆಗ ಕರ್ಣಾಟಕ ಸಮಿತಿಯ ಅಧ್ಯಕ್ಷರಾಗಿದ್ದ ಕಕ್ಕಿಲ್ಲಾಯರು ಹಗಲಿರುಳು ಶ್ರಮಿಸಿ ಮನವಿ ಸಿದ್ಧಪಡಿಸಿದ್ದರು. ಹಿರಿಯ ಹೋರಾಟಗಾರಾಗಿದ್ದಶ್ರೀಧರ ಕಕ್ಕಿಲ್ಲಾಯರ ಬಗ್ಗೆ ಕಯ್ಯಾರರು ‘ಕನ್ನಡದ ಶಕ್ತಿ’ ಎಂಬ ಸಂಸ್ಮರಣ ಗ್ರಂಥವನ್ನು ಸಂಪಾದಿಸಿದರು. ಅವರ ಹೆಸರಿನಲ್ಲಿ ಒಂದು ಟ್ರಸ್ಟನ್ನು ರೂಪಿಸುವಲ್ಲಿ ಮಾರ್ಗದರ್ಶನವನ್ನು ನೀಡಿದರು.
‘ತೆಂಕನಾಡು’ ಸಂಚಿಕೆಯನ್ನು ಗಮನಿಸಿದರೆ ಏಕೀಕರಣದ ಕಾವು ದಟ್ಟೈಸುತ್ತಿದ್ದುದನ್ನು ಗಮನಿಸಬಹುದು.1955ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಪ್ರಾಂತೀಕರಣ ಸಮಿತಿಗೆ ಕಾಸರಗೋಡಿನ ಭವಿಷ್ಯದ ಕುರಿತು ಸುಳುಹು ಸಿಕ್ಕಿ ಆತಂಕ ತಲೆದೋರಿತ್ತು. ಕಾರಣವೆಂದರೆ ಭಾಷಾವಾರು ಪ್ರಾಂತ ನಿರ್ಮಾಣಕ್ಕೆ ಅಭಿಪ್ರಾಯ ಕ್ರೋಢೀಕರಿಸಿ ಶಿಫಾರಸು ಮಾಡಲು ನೇಮಕಗೊಂಡ ಫಜಲ್ ಆಲಿ ಕಮಿಷನಿನಲ್ಲಿ ಕೆರಳೀಯರಾದ ಸರ್ದಾರ್ ಕೆ.ಎಂ ಪಣಿಕ್ಕರ್ ಇದ್ದದ್ದು.ಫಲಾನುಭವಿಗಳು ನ್ಯಾಯತೀರ್ಮಾನಮಂಡಳಿಯಲ್ಲಿ ಇರುವುದು ಎಷ್ಟು ಮಾತ್ರಕ್ಕೂ ಒಪ್ಪತಕ್ಕ ವಿಚಾರವಲ್ಲವೆಂದು ಫಣಿಕ್ಕರ್ ಅವರಿಗೆ ಅದರಿಂದ ಹೊರಗುಳಿಯಬಹುದಿತ್ತು. ಆದರೆ ಹಾಗಾಗಲಿಲ್ಲ.ಆ ಸಜ್ಜನಿಕೆಯನ್ನೋ ಔನ್ನತ್ಯವನ್ನೋ ಅವರು ಮೆರೆಯಲಿಲ್ಲ. ಅವರ ಬಳಿಹೋಗಿ ಚಂದ್ರಗಿರಿಯ ಉತ್ತರಭಾಗವನ್ನು ಕರ್ನಾಟಕಕ್ಕೆ ಸೇರಿಸಲೇಬೆಕೆಂಬ ಹಾಗೂ ಚಂದ್ರಗಿರಿಯ ದಕ್ಷಿಣ ಭಾಗವನ್ನು ಬೇಕಾದರೆ ಕೇರಳಕ್ಕೆ ಸೇರಿಸಬಹುದೆಂದು ಆಧಾರ ಸಮೇತ ಅಹವಾಲು ಮಂಡಿಸಿದವರಲ್ಲಿ ಅದರಂತೆ ಮಾಡುವುದಾಗಿ ಅವರು ಭರವಸೆಯನ್ನಿತ್ತದ್ದು ಮಾತ್ರ. ಆ ಭರವಸೆ ಹುಸಿಯಾಗಿ ಫಣಿಕ್ಕರ್ ಅವರು ವಿಶ್ವಾಸ ದ್ರೋಹವನ್ನು ಮೆರೆದಾಗ ಕನ್ನಡಿಗರಿಗೆ ಆದ ಆಘಾತ ಅಷ್ಟಿಷ್ಟಲ್ಲ. ಪ್ರತಿಭಟನೆ, ಮೆರವಣಿಗೆ, ಜೈಲುವಾಸ ಎಲ್ಲ ನಡೆದವು .
ಕಯ್ಯಾರರು’ ಬೆಂಕಿಬಿದ್ದಿದೆ ಮನೆಗೆ ಓ ಬೇಗಬನ್ನಿ ಎಲ್ಲರೂ ಎದ್ದೆದ್ದುಬೇಗ ಬನ್ನಿ, ಕನ್ನಡದ ಗಡಿಕಾಯೆ ನುಡಿಕಾಯೆ ಗುಡಿಕಾಯೆ ಓಡಿಬನ್ನಿ ಕಾಯಲಾರೆವೆ ಸಾಯೆ’ ಎಂದು ಕಾವ್ಯದ ಮೂಲಕ ಕರೆಯಿತ್ತರು. ಆದ ತಪ್ಪನ್ನು ಸರಿಪಡಿಸಿ ಮತ್ತೆ ಕರ್ಣಾಟಕದೊಂದಿಗೆ ಕಾಸರಗೋಡನ್ನು ವಿಲೀನಗೊಳಿಸುವ ಅವಕಾಶ ಪ್ರಜಾಪ್ರಭುತ್ವದಲ್ಲಿ ಇದೆಯೆಂದು ಅಚಲವಾಗಿ ನಂಬಿ ನಡೆಸಿದ ಹೋರಾಟದಲ್ಲಿ ಹಲವರು ಹಲವು ರೀತಿಗಳಲ್ಲಿ ಭಾಗಿಯಾದರು. ಈ ಹೋರಾಟಕ್ಕೆ ತನ್ನನ್ನು ಮುಡುಪಾಗಿಟ್ಟ ಸಂಸ್ಥೆಯಾಗಿದ್ದ ಕರ್ನಾಟಕ ಸಮಿತಿಯಲ್ಲಿದ್ದುಕೊಂಡು( ಕರ್ನಾಟಕಪ್ರಾಂತೀಕರಣ ಸಮಿತಿಯಿದ್ದದ್ದು ಮುಂದೆ ಕರ್ನಾಟಕ ಸಮಿತಿ ಎಂಬ ಹೆಸರಿನಲ್ಲಿ ಕಾರ್ಯಾಚರಿಸಿತು.) ಕಯ್ಯಾರರು ತಮ್ಮ ವರ್ಚಸ್ಸು , ವಾಗ್ವೈಖರಿಯಿಂದ ಕರ್ಣಾಟಕದ ಮತ್ತು ಕೇಂದ್ರದ ಗಮನವನ್ನು ಸೆಳೆಯಲು ಅವಿರತ ಪ್ರಯತ್ನಗಳನ್ನು ಮಾಡುತ್ತಲೇ ಬಂದರು. ಅವರ ಲೇಖನ ಮಾಲೆಗಳು,ಭಾಷಣಗಳ ಮುದ್ರಿತ ಪ್ರತಿಗಳು ಕಾಸರಗೋಡಿನ ಕನ್ನಡ ಹೋರಾಟಕ್ಕೆ ಅವರು ತುಂಬುತ್ತಿದ್ದ ಶಕ್ತಿಗೆ ಸಾಕ್ಷ್ಯವಹಿಸುತ್ತವೆ.ಕನ್ನಡವನ್ನು ಉಳಿಸುವ ಛಲವುಳ್ಳವರಿಗೆ ಹೋರಾಟಗಾರರಿಗೆ ಸತ್ಯಾಗ್ರಹಿಗಳಿಗೆ ಕಯ್ಯಾರರ ಗೀತೆಗಳು ಸ್ಪೂರ್ತಿಯನ್ನಿತ್ತವು. ಕರ್ನಾಟಕ ಪ್ರಾಂತೀಕರಣ ಸಮಿತಿಯು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯ ಶಕ್ತಿಯನ್ನು ಪಡೆಯಲು ನಿರ್ಧರಿಸಿದಾಗ ಕಯ್ಯಾರರು ತಮ್ಮ ಕಂಚಿನ ಕಂಠದ ಮೊಳಗಿನಿಂದ ಸಮಿತಿಯ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.ವಿಲಿನೀಕರಣದ ಬೇಡಿಕೆಗೆ ಕನ್ನಡಿಗರ ಪಕ್ಷಾತೀತ ಬೆಂಬಲ ದೊರಕಿ ಕನ್ನಡಿಗರ ಕಣ್ಮಣಿಗಳಾಗಿದ್ದವರು ಉಮೇಶರಾವ್(ಕೇರಳದ ವಿಧಾನ ಸಭೆಗೆ ನಡೆದ ಮೊದಲ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದವರು.), ಮಹಾಬಲಭಂಡಾರಿ, ಯು.ಪಿ ಕುಣಿಕುಳ್ಳಾಯ ಜನಪ್ರತಿನಿಧಿಗಳಾಗಿ ಆಯ್ಕೆಯಾದರು.ಕನ್ನಡಿಗರಿಗೆ ಶಾಸನಬದ್ಧವಾದ ಹಕ್ಕುಗಳನ್ನು ಒದಗಿಸಿಕೊಡುವಲ್ಲಿ ಈ ಜನಪ್ರತಿನಿಧಿಗಳು ಶ್ರಮಿಸಿದ್ದು ಮರೆಯುವ ಹಾಗೆ ಇಲ್ಲ.ಮುಂದಿನ ದಿನಗಳಲ್ಲಿ ವಿಲಿನೀಕರಣದ ಹೋರಾಟಕ್ಕೆ ಚುನಾವಣಾಕಣಗಳಲ್ಲಿ ಹಿನ್ನಡೆ ಬಂದಾಗಲೂ ಕಯ್ಯಾರರು ತಮ್ಮ ಪ್ರಯತ್ನವನ್ನು ಮುಂದುವರಿಸಿದರು.ಎಷ್ಟೆಷ್ಟು ಚಳವಳಿಗಳು ಎಷ್ಟೆಷ್ಟು ಸಮ್ಮೇಳನಗಳು!ಪತ್ರಮುಖೇನ ಮೊರೆಗಳು, ಠರಾವು ಮಂಡನೆಗಳು- ಇವುಗಳೆಲ್ಲದರಲ್ಲಿ ಕಯ್ಯಾರರ ಪಾತ್ರ ಇದ್ದೇ ಇರುತ್ತಿತ್ತು.ಕರ್ಣಾಟಕದಿಂದ ಇಂದು ಕಾಸರಗೋಡು ಕನ್ನಡಿಗರು, ವಿದ್ಯಾರ್ಥಿಗಳು ಪಡೆಯುವ ಸವಲತ್ತುಗಳ ಹಿಂದೆ ಕಯ್ಯಾರರ ಪರಿಶ್ರಮವೂ ಇದೆ
.ಕ.ಸಾ.ಪದ ಗಡಿನಾಡ ಹಾಗೂ ಹೊರನಾಡ ಘಟಕಗಳನ್ನು ಸ್ಥಾಪಿಸುವಲ್ಲಿ ಕಯ್ಯಾರರದು ಅತ್ಯಂತ ಪ್ರಮುಖ ಪಾತ್ರ. ಸಾಕಷ್ಟು ಹಳಮೆ ಇರುವ ಹಾಗೂ ಪ್ರತಿಷ್ಠಿತ ಕ.ಸಾ,ಪದ ಒಂದು ಘಟಕ ಇಲ್ಲಿ ಸ್ಥಾಪನೆಗೊಂಡದ್ದು ಇಲ್ಲಿನ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಹೇಗೆ ಪೂರಕವಾಯಿತು ಎನ್ನುವುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ.ಬೆಂಗಳೂರಿನಲ್ಲಿ ಕಾಸರಗೋಡಿನ ಕನ್ನಡ ಹೋರಾಟಕ್ಕೆ ಜನಬೆಂಬಲ ಹಾಗೂ ಧುರೀಣರ ಬೆಂಬಲವನ್ನು ಪಡೆಯುವ ದಿಸೆಯಲ್ಲಿ ಕಯ್ಯಾರರ ಪರಿಶ್ರಮ ದೊಡ್ಡದು. ಉಳಿದವರಿಗೆ ಎಷ್ಟೇ ಭ್ರಮನಿರಸನವಾದರೂ ಕಯ್ಯಾರರು ಮಾತ್ರ ಕಾಸರಗೋಡಿನಲ್ಲಿ ಕನ್ನಡದ ಉಳಿವಿನ ಪ್ರಶ್ನೆ ಬಂದಾಗ ಕರ್ನಾಟಕದೊಂದಿಗೆ ವಿಲೀನ ಮಾತ್ರ ಅದಕ್ಕೆ ಪರಿಹಾರ ಎಂದು ಧೃಢವಾಗಿ ನಂಬಿ ಹಂಬಲಿಸಿ ಹಂಬಲಿಸಿ ಮೊರೆಯಿಟ್ಟರು.ಕರ್ಣಾಟಕದ ರಾಜಕೀಯಶಕ್ತಿ ಕಾಸರಗೋಡಿನ ವಿಲಿನೀಕರಣದ ಕುರಿತುತೋರುವ ನಿರಾಸಕ್ತಿಯನ್ನು ಚುಚ್ಚಿ ಹೇಳಿ ಜಾಗೃತಗೊಳಿಸಲು ಶ್ರಮಿಸಿದರು.
ಆಧಾರಗಳು ತಿಳಿಸುವಂತೆ ಕಯ್ಯಾರರು ಯಾವುದೇ ಕನ್ನಡ ಹೋರಾಟದ ಅಥವಾ ಚಳವಳಿಯ ಓರ್ವ ಏಕ್ಟಿವಿಸ್ಟಿನಂತೆ ನಾಯಕತ್ವವನ್ನು ವಹಿಸಲಿಲ್ಲ.ಬೀದಿಗಿಳಿದು ಪ್ರತಿಭಟನೆ ಮಾಡಿ ಜೈಲು ಸೇರಲಿಲ್ಲ. ಆದರೆ ‘ಕನ್ನಡವೆಂದರೆ ಮಂತ್ರಕಣಾ, ಶಕ್ತಿಕಣಾ’ ಎಂಬ ಕುವೆಂಪು ವಾಣಿಯಂತೆ ಕಯ್ಯಾರರ ಸಿಂಹಘರ್ಜನೆ ಅನೇಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿತು. ಕಯ್ಯಾರರು ನಡೆಸಿದ ಸಾಹಿತ್ಯಕ ಮತ್ತು ಸಾಂಸ್ಕøತಿಕ ಹೋರಾಟ ನೀಡಿದ ಪ್ರೇರಣೆ, ಪ್ರೋತ್ಸಾಹಗಳನ್ನು ಅಳೆದು ನೋಡಲು ಸಾಧ್ಯವಿಲ್ಲ.ಅದು ಗುಪ್ತಗಾಮಿನಿಯಾಗಿ ತಲೆಮಾರಿನಿಂದ ತಲೆಮಾರಿಗೆ ದಾಟುವಂಥದ್ದು.ಅವರು ಸಂಘಟಿಸಿದ ಸಮ್ಮೇಳನಗಳಲ್ಲಿ ಭಾಗವಹಿಸಿದ ಕಾಸರಗೋಡಿನ ಆ ಎಳೆಯ ತಲೆಮಾರು ಇಂದು ಮಧ್ಯವಯಸ್ಕರಾಗಿದ್ದರೂ ಹೋರಾಟದ ಕೆಚ್ಚನ್ನು ಇನ್ನೂ ಉಳಿಸಿಕೊಂಡಿರುವುದು ಇದಕ್ಕೆ ಸಾಕ್ಷಿ.ಇಂದು ಕೂಡ ಎಳೆಯರು ಕನ್ನಡದಲ್ಲಿ ಕವಿತೆ, ಕತೆಗಳನ್ನು ಕಟ್ಟಿ ಹಾಡಿ ಸಂಕಲನಗಳನ್ನು ತಂದು ಸಂಭ್ರಮಪಡುವುದಿದ್ದರೆ ಇಂತಹ ಘಟನೆಗಳ ಪರೋಕ್ಷಪ್ರೇರಣೆ ಇಲ್ಲವೇ? ಕಯ್ಯಾರರು ತಮ್ಮ ಆತ್ಮಚರಿತ್ರೆಯಲ್ಲಿ ತಿಳಿಸುವಂತೆ ಅವರು ಹದಿನೈದು ವರ್ಷದ ಹುಡುಗನಾಗಿದ್ದಾಗ ಗಾಂಧಿದರ್ಶನಕ್ಕಾಗಿ ಕಾಲ್ನಡೆಯಲ್ಲಿ ಮಂಗಳೂರಿಗೆ ಹೋಗುತ್ತಾರೆ.ಈ ಘಟನೆಯ ಅನುಭವ ಮುಂದೆ ಗಾಂಧಿದರ್ಶನವೆಂಬ ಕವಿತೆಯಲ್ಲಿ ಹರಳುಗಟ್ಟುತ್ತದೆ.ಮಲಯಾಳದ ಖ್ಯಾತ ಸಾಹಿತಿ ವೈಕಂಮಹಮ್ಮದ್ ಬಶೀರರು ತಾವು ಹುಡುಗನಾಗಿದ್ದಾಗ ತಮ್ಮೂರಿಗೆ ಬಂದ ಗಾಂಧೀಜಿಯನ್ನು ಜನಸಂದಣಿಯ ಮಧ್ಯೆನುಸುಳಿ ಮುಟ್ಟಿಬಂದು ಮನೆಗೆ ಬಂದು ತಾಯಿಗೆ ‘ಅಮ್ಮಾ ನಾನು ಗಾಂಧಿಜಿಯನ್ನು ಮುಟ್ಟಿದೆ’ ಎಂದು ಹೇಳಿದರಂತೆ. ನಮಗೆ ಅನಿಸಬಹುದು -ಏನಿದೆ ಅದರಲ್ಲಿ ‘ ಗಾಂಧೀüಜಿಯನ್ನು ನೋಡುವುದಂತೆ, ಮುಟ್ಟುವುದಂತೆ’. ಆದರೆ ಈ ಹಿರಿಯರ ಬದುಕನ್ನು ಅವಲೋಕಿಸಿದರೆ ಈ ಕ್ರಿಯೆಗಳ ಸಾಂಕೇತಿಕ ಮಹತ್ವ ಮನವರಿಕೆಯಾಗಬಹುದು. ಗಾಂಧಿಯುಗದ ಮೌಲ್ಯಗಳನ್ನು ಆವಾಹಿಸಿಕೊಂಡು ಸರಳಜೀವನ ಉನ್ನತ ಚಿಂತನೆಯೊಂದಿಗೆ ದುಡಿಮೆಯ ಮೌಲ್ಯವನ್ನು ಎಂದೂ ಕೈಬಿಡದೆ ಜೀವಿತವನ್ನು ಪೂರೈಸುವುದು ಸಾಮಾನ್ಯಸಂಗತಿಯಲ್ಲ. ಗಾಂಧಿಮಾರ್ಗದ ಹೋರಾಟದಲ್ಲಿ ನಂಬಿಕೆಯಿರಿಸಿ ತಾವು ನೆಚ್ಚಿದ ಮೌಲ್ಯಕ್ಕಾಗಿ, ಧ್ಯೇಯಕ್ಕಾಗಿ ಬದುಕಿದ ಅವರಿಗೆ ಅವರ ಬಹುದೊಡ್ಡ ಕನಸು ನನಸಾಗದೆ ವಿದಾಯಹೇಳಬೇಕಾಯಿತು. ಗೋವಿಂದಪೈಯವರ ಕುರಿತು ಅತ್ಯಂತ ಅಭಿಮಾನ ಗೌರವಗಳನ್ನು ತಳೆದು ಮೂರುಕೃತಿಗಳನ್ನು ಬರೆದ ಕಯ್ಯಾರರಿಗೆ ಅವರ ಜೀವಿತಕಾಲದಲ್ಲಿ ರಾಷ್ಟ್ರಕವಿಗೆ ಯೋಗ್ಯ ಸ್ಮಾರಕ ಸಾಕಾರಗೊಳ್ಳುವುದನ್ನು ನೋಡುವುದಕ್ಕಾಗಲಿಲ್ಲ.
ಈ ಕುರಿತು ಅವರಿಗೆ ತುಂಬ ವೇದನೆಯಿತ್ತು.ಕನ್ನಡದ ಕಟ್ಟಾಳುವಾಗಿ ಬಾಳಿದ ಕಯ್ಯಾರರಿಗೆ ಕಾಸರಗೋಡೂ ಸೇರಿದಂತೆ ದ.ಕ.ಜಿಲ್ಲೆಯ ಬಹುತ್ವದಬಗ್ಗೆ ಅಭಿಮಾನ. ಇಲ್ಲಿನ ಕಲೆ ಸಂಸ್ಕøತಿ ಈ ಬಹುತ್ವದಿಂದ ಪುಷ್ಟವಾಗಿದ್ದು ಅದನ್ನು ಕಾಪಾಡಿಕೊಂಡು ಬರಬೇಕೆಂಬ ಕಾಳಜಿ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ.(ನೋಡಿ: 66ನೆಯ ಅಖಿಲಭಾರತ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷಭಾಷಣ).ತುಳುವರಾಗಿ ತುಳುವಿನ ಗೌರವ ಘನತೆಗಳನ್ನು ಮಾನಿಸಬೇಕೆನ್ನುವುದು ಅವರ ಆಸೆಯಾಗಿತ್ತು. ಪ್ರಾಂತಪುನರ್ವಿಭಜನೆಯ ದುರಂತಕ್ಕೆ ಬಲಿಯಾದ ಕಾಸರಗೋಡಿನ ಪ್ರತ್ಯೇಕ ಸಂದರ್ಭದಿಂದಾಗಿ ಅವರು ತುಳು ಚಳವಳಿಯಲ್ಲಿ ವಿಶೇಷವಾಗಿ ತಮ್ಮನ್ನು ಗುರುತಿಸಿಕೊಂಡಿಲ್ಲದಿರಬಹುದು. ಅಲ್ಲದೆ ಅವರು ಓದಿದ ವಿದ್ಯಾಸಂಸ್ಥೆ,ಪರ್ತಕರ್ತರಾಗಿಯೂ ಲೇಖಕರಾಗಿಯೂ ತಮ್ಮ ಒಡನಾಟಕ್ಕೆ ಬಂದ ಧುರೀಣರ ವರ್ಚಸ್ಸು, ವಿಶಾಲವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಸೇರಿಕೊಂಡ ಹಿನ್ನೆಲೆ,ಒಟ್ಟು ಒಂದು ಸಮೂಹದ( ಅದರಲ್ಲಿ ಕನ್ನಡ, ತುಳು,ಕೊಂಕಣಿ,ಉರ್ದುಅಲ್ಲದೆ ಸ್ಥಳೀಯ ಮಲಯಾಳ ಭಾಷೆಯ ಪ್ರಭೇದಗಳನ್ನು –ಆಡುತ್ತ ಸಹಬಾಳ್ವೆಯಿಂದ ಗುರುತಿಸಲ್ಪಟ್ಟ ಎಲ್ಲರ) ಹಿತಚಿಂತನೆಯ ತುರ್ತುಅಡಗಿತ್ತು ಎನ್ನವುದನ್ನು ನಾವು ಗಮನಿಸಬೇಕು). ಒಟ್ಟು ಅಸ್ತಿತ್ವದ,ಅಳಿವು-ಉಳಿವಿನ ಆ ಜರೂರು ಕಯ್ಯಾರರನ್ನು ಹಾಗೆ ಇರಗೊಟ್ಟಿತು ಎನ್ನಬಹುದು. ತಮ್ಮ ಸಾಹಿತ್ಯಸಾಧನೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ, ನಾಡೋಜ, ಗೌರವ ಡಾಕ್ಟರೇಟ್,ಮುಂತಾದ ದೊಡ್ಡ ದೊಡ್ಡ ಪ್ರಶಸ್ತಿಗಳು ಅವರಿಗೆ ಸಂದವು. ಅಲ್ಲದೆ ಅಖಿಲಭಾರತ ಸಾಹಿತ್ಯಸಮ್ಮೇಳನದ ಅಧ್ಯಕ್ಷ ಪದವಿಗೆ ಅವರು ಭಾಜನರಾದರು. ಅವರ ಬದುಕು ಬರಹ ಡಾಕ್ಟರೇಟ್ ಪದವಿಪಡೆಯಲು ಅಧ್ಯಯನ ವಿಷಯವಾಯಿತು. ಡಾ.ಸದಾನಂದ ಪೆರ್ಲರು ಕಾಸರಗೋಡಿನ ಕನ್ನಡ ಹೋರಾಟದ ಬಗ್ಗೆ ಸಿದ್ಧಪಡಿಸಿದ ಮಹಾಪ್ರಬಂಧದಲ್ಲಿ ಕಯ್ಯಾರರ ಹೋರಾಟವನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಿದ್ದಾರೆ. ಅವರ ಕುರಿತು ಸಾಕ್ಯಚಿತ್ರಗಳು ಬಂದವು. ‘ಗಡಿನಾಡಕಿಡಿ’ ಎಂಬ ಮೌಲಿಕ ಆಕರ ಗ್ರಂಥವೊಂದು ಅವರ 75ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರಿಗೆ ಅರ್ಪಿತವಾಯಿತು. ಹೀಗೆ ಇನ್ನೂ ಅನೇಕ ಬಗೆಯ ಗುರುತಿಸುವಿಕೆ ಕನ್ನಡಿಗರು ಇರುವೆಡೆಗಳಲ್ಲೆಲ್ಲ ನಡೆಯುತ್ತಾಬಂದವು. ವೈಯಕ್ತಿಕವಾಗಿ ಅವರಿಗೆ ಸಂದ ಸನ್ಮಾನ ಗೌರವಗಳು ಅವರಿಗೆ ಧನ್ಯತೆಯನ್ನು ನೀಡಿದರೂ ಕರ್ನಾಟಕದೊಂದಿಗೆ ಕಾಸರಗೋಡಿನ ವಿಲಿನೀಕರಣದ ಕನಸು ನನಸಾಗದ ಕೊರಗು ಮಾತ್ರ ಅವರಲ್ಲಿ ಉಳಿದೇ ಇತ್ತು.
*ಮಹೇಶ್ವರಿ ಯು.
7 thoughts on “‘ಗುರು ಕಯ್ಯಾರ’: ಅಧ್ಯಾಪನ, ಕನ್ನಡ ಹೋರಾಟ, ಕನಸು, ಸಾಧನೆ…”
ತಲಸ್ಪರ್ಶಿ ವಿಶ್ಲೇಷಣೆ. ಹೃದಯಸ್ಪರ್ಶಿ ಲೇಖನ.
ಧನ್ಯವಾದಗಳು
ಕನ್ನಡದ ಕಟ್ಟಾಳು ಗುರು ಪಿತಾಮಹ ಕಯ್ಯಾರ ರ ಸಾಧನೆಯ ಆಪ್ತ ಅನಾವರಣ. ಅಭಿನಂದನೆಗಳು ನಮಸ್ಕಾರ.
ಧನ್ಯವಾದಗಳು
ಧನ್ಯವಾದಗಳು ವಿಭಾ
ಕಯ್ಯಾರರ ಕನ್ನಡಾಭಿಮಾನವನ್ನು ಕಟ್ಟಿಕೊಡುವ ಲೇಖನ ಕನ್ನಡದ ಯುವಚೇತನಗಳಿಗೆ ಪ್ರೇರಣೆ.
ಹೃದಯಸ್ಪರ್ಶಿ, ಮಹೇಶ್ವರೀ. ಆ ಮಹಾತ್ಮ ರನ್ನು, ಅಂದಿನ ಭವ್ಯ ಗುರುಪರಂಪರೆ ಯನ್ನು, ನಿಮ್ಮಂಥ ಶಿಷ್ಯರ ಸಮರ್ಪಣ ಭಾವವನ್ನು, ನಿಚ್ಚಳವಾಗಿ ತೆರೆದಿಟ್ಟಿದ್ದೀರಿ.
ಅಭಿನಂದನೆಗಳು!