ವಿವಶ (ಧಾರಾವಾಹಿ ಭಾಗ-5)

ಶ್ರೀಧರ ಶೆಟ್ಟರ ಶೆಡ್ಡಿನಲ್ಲಿ ವಾಸವಿರುವ ಹಾಗೂಅವರ ತೋಟದ ಕೆಲಸದ ವಿಚಾರದಲ್ಲಿ ಗಟ್ಟಿಗ ಆಳೆಂದರೆ ತೋಮನೊಬ್ಬನೇ!ಇದ್ದಿಲು ಮೈಬಣ್ಣದ ಐದು ಮುಕ್ಕಾಲು ಅಡಿ ಎತ್ತರದ ಕಡಿದರೆ ನಾಲ್ಕಾಳಾಗುವಂಥ ದಾಂಡಿಗ ಮನುಷ್ಯ ತೋಮ. ಕೇರಳದ ಬುಡಕಟ್ಟು ಜನಾಂಗವೊಂದರಲ್ಲಿ ಜನಿಸಿದನು ಹೆತ್ತವರ ಪ್ರೀತಿ ಮತ್ತು ಭದ್ರತೆಯಿಂದಲೂ, ಸಂಸ್ಕಾರಯುತ ಬದುಕಿನಿಂದಲೂ ಬಾಲ್ಯದಲ್ಲೇ ವಂಚಿತನಾದವನು.ಹಾಗಾಗಿ ತನ್ನಂಥದ್ದೇ ಒಂದಷ್ಟು ಅಲೆಮಾರಿ ಬಂಧುಗಳೊಂದಿಗೆ ಕೂಡಿ ಎಳವೆಯಲ್ಲೇ ಹುಟ್ಟೂರು ತೊರೆದಿದ್ದ.ಆರಂಭದಲ್ಲಿ ಮಂಜೇಶ್ವರ ಮತ್ತುಅನಂತೂರಿನಲ್ಲಿ ಯಾರು ಯಾರದೋ ಮನೆ ಚಾಕರಿ ಮತ್ತು ತೋಟದ ಕೆಲಸವನ್ನು ಮಾಡಿಕೊಂಡಿದ್ದ. ಅಲ್ಲಿಂದ ಕ್ರಮೇಣ ಮಾಂಸಾಹಾರಿ ಹೋಟೆಲುಗಳ ಜೀತಕ್ಕೆ ಭಡ್ತಿ ಪಡೆದು ಪಾತ್ರೆಪರಡಿ,ಕಸಮುಸುರೆ ತಿಕ್ಕುತ್ತ ಬೆಳೆದವನು ಹದಿಹರೆಯ ತಲುಪುವ ಹೊತ್ತಿಗೆ ಶಿವಕಂಡಿಕೆ ಪಟ್ಟಣಕ್ಕೆ ಬಂದು ಸೇರಿದ. ಅಲ್ಲಿನ ವಲಸೆ ತಮಿಳರೊಂದಿಗೆ ಕೂಡಿ ಶಿಲೆಕಲ್ಲಿನ ಅಡಿಪಾಯ ಕಟ್ಟುವುದನ್ನೂ ಕಲಿತ. ಬಾವಿ ತೋಡುವುದನ್ನು ರೂಢಿಸಿಕೊಂಡ. ಕೆಲಸವಿಲ್ಲದಾಗ, ತೋಡಿದ ಬಾವಿಯ ಮಣ್ಣು ಹೊರುವುದಕ್ಕೂ ಸೈ ಎನಿಸಿಕೊಳ್ಳುತ್ತಿದ್ದ. ತೆಂಗಿನಮರ ಹತ್ತಿ ಕಾಯಿ ಕೀಳುವುದು, ಅಡಿಕೆ ಕೊಯ್ಯುವುದು ಮತ್ತು ಮಾವು, ಗೇರುಹಣ್ಣುಗಳ ಋತುವಿನಲ್ಲಿ ಫಲಭರಿತ ಮರಗಳನ್ನು ವಹಿಸಿಕೊಂಡು ಹಣ್ಣುಗಳನ್ನು ಕಿತ್ತು ಸಗಟು ವ್ಯಾಪಾರ ಮಾಡುತ್ತ ಒಂದಿಷ್ಟು ಸಂಪಾದಿಸುತ್ತ ಬದುಕುತ್ತಿದ್ದ.


ಇಂಥ ತೋಮನ ಒಂದು ಮುಖ್ಯಬಲಹೀನತೆ ಏನೆಂದರೆ ಅವನು ಎಲ್ಲೂ ಮತ್ತು ಯಾವುದರಲ್ಲೂ ಸ್ಥಿರವಾಗಿ ನಿಂತು ಸಾಧಿಸುವ ಗುಣದವನಾಗಿರಲಿಲ್ಲ. ಮಾರಿಗೆ ಬಿಟ್ಟ ಹೋರಿಯಂತೆ ತಿಂದುಂಡು ತಿರುಗಾಡುವಂಥ ಸ್ವಭಾವದ ಅಲೆಮಾರಿ. ಹೀಗಿದ್ದವನಿಗೆ ಯಕ್ಷಗಾನ ನೋಡುವ ಗೀಳೊಂದು ಬಾಲ್ಯದಿಂದಲೇ ಬಲವಾಗಿ ಅಂಟಿ ಬಂದಿತ್ತು. ಅದಕ್ಕಾಗಿ ಎಷ್ಟು ದೂರದ ಊರಿಗಾದರೂ ಹೋಗಿ ಬರುತ್ತಿದ್ದ. ಆದ್ದರಿಂದ ಅದೇ ಆಸೆಯಿಂದ ಆವತ್ತೊಂದು ದಿನ, ‘ಗುಳ್ಳಗರಡಿ’ಮೇಳದವರ ದೇವಿ ಮಹಾತ್ಮೆ ಆಟವನ್ನು ನೋಡಲು ಗಂಗರಬೀಡಿಗೆ ಪಾದ ಬೆಳೆಸಿದ. ಆಟ ನೋಡಿ ಬಹಳ ಖುಷಿಯನ್ನೂ ಪಟ್ಟ. ಆದರೆ ಇಡೀರಾತ್ರಿ ನಿದ್ದೆಗೆಟ್ಟಿದ್ದರಿಂದ ಮುಂಜಾನೆಯ ಹೊತ್ತಿಗೆ ಅವನಿಗೆ ಕಣ್ಣುಕೂರಲು ಶುರುವಾಯಿತು. ಮಲಗಲು ಅತ್ತಿತ್ತದ ಪ್ರಶಸ್ತ ಜಾಗವೊಂದನ್ನು ಹುಡುಕುತ್ತ ಸ್ವಲ್ಪಹೊತ್ತು ಅಲೆದಾಡಿದ. ಆಗ ಅಲ್ಲೇ ಸಮೀಪವಿದ್ದ ಮತ್ತು ದೈತ್ಯ ಮರಗಳಿಂದಾವೃತ್ತವಾದ ಮಹಿಷಮರ್ಧಿನಿ ದೇವಸ್ಥಾನದ ವಠಾರವು ಅವನನ್ನು ಕೈಬೀಸಿ ಕರೆಯಿತು.ಅತ್ತ ಹೋಗಿ ಮೊದಲಿಗೆ ಅಮ್ಮನವರಿಗೆ ಭಕ್ತಿಯಿಂದ ಕೈಮುಗಿದ. ಆ ಹೊತ್ತು ಅರ್ಚಕ ಸುಬ್ರಾಯ ಭಟ್ಟರು ದೇವಿಯ ಪೂಜಾಕಾರ್ಯದಲ್ಲಿ ಮಗ್ನರಾಗಿದ್ದರು. ಹಾಗಾಗಿ ಅವರಿಗೆ ಇವನತ್ತ ಗಮನವಿರದಿದ್ದರೂ ಒಂದು ನಮಸ್ಕಾರವನ್ನು ಅವರಿಗೂ ಹೊಡೆದ.ಬಳಿಕ ದೇವಳದ ಹೊರಾಂಗಣದ ವಿಶಾಲ ಜಗುಲಿಯ ಮೂಲೆಯೊಂದಲ್ಲಿ ಕೈಕಾಲು ಚಾಚಿ ಮಲಗಿ ಗಾಢವಾದ ನಿದ್ರೆಗೆ ಜಾರಿದ. ಬೆಳಗ್ಗಿನ ಪೂಜೆ ಮುಗಿಸಿದ ಭಟ್ಟರು ಯಾವುದೋ ಗುಂಗಿನಲ್ಲಿ ತೋಮನನ್ನು ಗಮನಿಸದೆಯೇ ಮನೆಗೆ ಹೋಗಿದ್ದರು. ಆದರೆ ಮಧ್ಯಾಹ್ನ ಮರಳಿ ಪೂಜೆಗೆ ಬಂದವರು, ಕರಿಯ ಕೋಣದಂತೆ ಬಿದ್ದುಕೊಂಡು ಸಶಬ್ದವಾಗಿ ಗೊರಕೆ ಹೊಡೆಯುತ್ತಿದ್ದ ಅಪರಿಚಿತನನ್ನು ಕಂಡು ಸಿಡಿಮಿಡಿಗೊಂಡವರು,‘ಏಯ್…!ಯಾರು ಮಾರಾಯ ನೀನು?ಇಂಥ ರಣ ಬಿಸಿಲಿನಲ್ಲಿಈ ನಮೂನಿ ಗೊರಕೆ ಹೊಡೆಯುತ್ತಿರುವುದು? ಬೇರೆ ಜಾಗ ಸಿಗಲಿಲ್ಲವಾ ನಿಂಗೆ?’ ಎಂದು ಎತ್ತರದ ಧ್ವನಿಯಲ್ಲಿ ಗದರಿಸಿದರು.


ಭಟ್ಟರ ಕೂಗಿಗೆ ತೋಮ ಬೆಚ್ಚಿಬಿದ್ದು ಎದ್ದು ಕುಳಿತ.ಆದರೆ ಕೆಲವು ಕ್ಷಣ ಅವನಿಗೆ ಏನೂ ಹೊಳೆಯಲಿಲ್ಲ. ನಂತರ ಭಟ್ಟರ ಭವ್ಯವಾದ ಧಾರ್ಮಿಕ ರೂಪವು ಅವನ ಮಸ್ತಿಷ್ಕದೊಳಗೆ ಕುಣಿದಂತಾದಾಗಿ ರಪ್ಪನೆ ಕಣ್ಣುಜ್ಜಿಕೊಂಡವನು ವಿಧೇಯನಾಗಿ ಎದ್ದು ಅವರ ಮುಂದೆ ಕೈಕಟ್ಟಿ ನಿಂತ ಹಾಗೂ ತನಗೆ ನೆನಪಿದ್ದ ಮತ್ತು ಹೇಳಲು ಶಕ್ಯವಿದ್ದತನ್ನ ಜೀವನಗಾಥೆಯನ್ನು ಒಂದಿಷ್ಟು ಪ್ರಾಮಾಣಿಕತೆ ಬೆರೆಸಿ ಸಂಕ್ಷಿಪ್ತವಾಗಿ ಅವರಿಗೆ ವಿವರಿಸಿದ. ಭಟ್ಟರಿಗೆ ಈ ತರುಣನ ಬದುಕಿನ ಚರಿತ್ರೆಗಿಂತಲೂ ಅವನ ನಯವಿನಯ ಮತ್ತು ಅವನು ತನ್ನನ್ನು ಗೌರವಿಸಿದ ರೀತಿಯು ಬಹಳವೇ ಹಿಡಿಸಿಬಿಟ್ಟಿತು. ಆದ್ದರಿಂದ ಅವನನ್ನು ಒಳಗಿನ ಜಗುಲಿಗೆ ಕರೆದೊಯ್ದು ಕುಳ್ಳಿರಿಸಿದರು.ದೇವರ ಬೆಳಗ್ಗಿನ ನೈವೇದ್ಯವನ್ನು ಹೊಟ್ಟೆ ತುಂಬಾ ಬಡಿಸಿದರು. ತೋಮ ಅದೇ ಸೌಜನ್ಯದ ಭಂಗಿಯಲ್ಲಿ ಕುಳಿತುಕೊಂಡು ಪೊಗದಸ್ತಾಗಿ ಪ್ರಸಾದ ಸ್ವೀಕರಿಸಿ ಮೆತ್ತಗೆ ತೇಗಿದ.ಅಷ್ಟಲ್ಲದೆ ಮರಳಿ ಸಂಜೆಯವರೆಗೆ ಅಲ್ಲೇ ವಿರಮಿಸಲು ಭಟ್ಟರ ಊಟೋಪಾಚಾರವು ಅವನಿಗೆ ಪರೋಕ್ಷ ಸಮ್ಮತಿಯನ್ನೂ ನೀಡಿತು. ಹಾಗಾಗಿ ಆಟದ ನಿದ್ರೆಯನ್ನು ಪೂರ್ತಿಯಾಗಿ ಹೊಡೆದು ಸಂಜೆಯ ಹೊತ್ತಿಗೆ ಎದ್ದು ಇನ್ನು ಶಿವಕಂಡಿಕೆಗೆ ಹೊರಡಬೇಕು ಎಂಬಷ್ಟರಲ್ಲಿ ಭಟ್ಟರು ಮತ್ತೆ ಅವನನ್ನು ನಿಲ್ಲಿಸಿಕೊಂಡವರು,‘ನೋಡನಾ…ಶ್ರೀಧರಶೆಟ್ಟರ ತೋಟಕ್ಕೆ ಆಳು ಬೇಕೆಂದು ಹೇಳುತ್ತಿದ್ದರು. ಆದರೆ ಅವರಿಗೆ ಖಾಯಂ ಜನ ಬೇಕಂತೆ. ಬಹಳ ಒಳ್ಳೆಯ ಮನುಷ್ಯ ಅವರು. ನಿನಗೂ ಯಾರೂ ಇಲ್ಲ ಅನ್ನುತ್ತೀಯಾ. ಕೆಲಸ ಮಾಡುವುದಿದ್ದರೆ ಹೋಗು. ನನ್ನ ಹೆಸರು ಹೇಳು.ಕೆಲಸ ಕೊಡುತ್ತಾರೆ. ಉಳಿದುಕೊಳ್ಳಲು ಮನೆಯನ್ನೂ ಕೊಡುತ್ತಾರೆ!’ ಎಂದು ಹೇಳಿ ಶೆಟ್ಟರ ಮನೆಯ ದಾರಿಯನ್ನುತೋರಿಸಿದರು. ಅಷ್ಟು ಕೇಳಿದ ತೋಮನಿಗೆ ದೇವಿ ಮಹಾತ್ಮೆ ಆಟದ ಪ್ರಭಾವವೋ ಅಥವಾ ಸುಬ್ರಾಯ ಭಟ್ಟರ ಕನಿಕರದ ಸ್ನೇಹವೋ ಒಟ್ಟಾರೆ ಆಕ್ಷಣವೇ ಗಂಗರಬೀಡುಹಿಡಿಸಿಬಿಟ್ಟಿತು. ಆದ್ದರಿಂದ ಅವರಿಗೆ,‘ಆಯ್ತು ಸ್ವಾಮಿ!’ ಎಂದು ನಮ್ರವಾಗಿ ಉತ್ತರಿಸಿ ಡೊಗ್ಗಾಲು ಬಿದ್ದು ನಮಸ್ಕರಿಸಿ ಹೊರಟ.


ಆವತ್ತು ತೋಮ ಬರುವ ಹೊತ್ತಿಗೆ ಶೆಟ್ಟರು ಕೂಡಾ ತಮ್ಮ ಬಂಗಲೆಯಲ್ಲೇ ಇದ್ದರು. ತೋಮ ತಾನು ಸುಬ್ರಾಯ ಭಟ್ಟರ ಹೇಳಿಕೆಯ ಮೇರೆಗೆ ಬಂದಿರುವುದಾಗಿ ಅವರಿಗೆ ನಮ್ರವಾಗಿ ತಿಳಿಸಿದ ಹಾಗೂ ತನ್ನ ಜೀವನ ವೃತ್ತಾಂತವನ್ನು ಭಟ್ಟರಿಗೆ ಅರುಹಿದ ರೀತಿಯಲ್ಲೇ ಅವರಿಗೂ ವಿವರಿಸಿದ. ತನಗೆ ಗೊತ್ತಿದ್ದ ಕೆಲಸ ಕಾರ್ಯಗಳ ಪಟ್ಟಿಯನ್ನೂ ಸಾವಧಾನವಾಗಿ ಅವರ ಮುಂದೆ ಬಿಚ್ಚಿಟ್ಟ. ತೋಮನ ಮಾತಿನ ಶೈಲಿ ಮತ್ತು ಅವನ ಕಾಯದ ಕಸುವನ್ನು ಕಂಡ ಶೆಟ್ಟರಿಗೂ ಅವನು ಹಿಡಿಸಿದ. ಏಕೆಂದರೆ ಅವರಿಗೂ ತೋಮನಂಥ ಗಟ್ಟಿ ಆಳೊಬ್ಬ ಬೇಕಾಗಿದ್ದ. ಆದ್ದರಿಂದ ಈತನನ್ನು ಉಳಿಸಿಕೊಂಡರೆ ತಮ್ಮ ತೋಟದ ಅರ್ಧಕ್ಕರ್ಧ ಕೂಲಿಯ ಜರೂರತ್ತನ್ನು ಇವನೊಬ್ಬನೇ ನೀಗಿಸಬಲ್ಲ.ತಡಮಾಡಿದರೆ ಗಂಗರಬೀಡಿನ ಇನ್ನ್ಯಾವುದೋ ಕಿರಿಸ್ತಾನರ ಅಥವಾ ಬ್ರಾಹ್ಮಣರ ಪಾಲಾದಾನು! ಎಂದುಕೊಂಡವರು ಅವನಿಗೆ ಯಾವ ಶರತ್ತನ್ನೂ ವಿಧಿಸದೆ ಮರುದಿನದಿಂದಲೇ ಕೆಲಸಕ್ಕೆ ಹಾಜರಾಗಲು ಸೂಚಿಸಿದರು ಮತ್ತು ಉಳಿದುಕೊಳ್ಳಲು ಇದ್ದುದರಲ್ಲಿ ಸುಮಾರಾದ ಶೆಡ್ಡೊಂದನ್ನು ಕೊಟ್ಟರು. ಅಲ್ಲಿಯವರೆಗೆ ಎಲ್ಲೆಲ್ಲೋ ದುಡಿದು ಯಾರು ಯಾರದೋ ಗುಡಿಸಲು, ಹಟ್ಟಿಗಳಲ್ಲಿ ರಾತ್ರಿ ಕಳೆಯುತ್ತ ತನ್ನದೆಂಬ ಸ್ವಂತ ಸೂರಿಲ್ಲದೆ ಅನಾಥನಂತಿದ್ದ ತೋಮನಿಗೆ ಶೆಟ್ಟರ ಮೂರುಕಾಸಿನ ಶೆಡ್ಡು ಪುಟ್ಟ ಅರಮನೆಗೆ ಸಮಾನವೆನಿಸಿಬಿಟ್ಟಿತು. ಖುಷಿಯಿಂದ ವಾಸಿಸತೊಡಗಿದ.
ಶೆಟ್ಟರು ತಾವು ಪುಕ್ಕಟೆಯಾಗಿ ನೀಡಿದ ಶೆಡ್ಡಿಗೆ ತೋಮನಿಂದ ದುಪ್ಪಟ್ಟು ದುಡಿಸತೊಡಗಿದರು.ಆದರೆ ಇತರರಿಗಿಂತ ತುಸು ಹೆಚ್ಚು ಸಂಬಳವನ್ನೂ ಕೊಡಲಾರಂಭಿಸಿದರು.ತೋಮನೂ ಪ್ರಾಮಾಣಿಕವಾಗಿ ದುಡಿತೊಡಗಿದ. ಬರಬರುತ್ತ ಅವನಿಗೆ ಗಂಗರಬೀಡಿನ ಕಿರಿಸ್ತಾನರ ಸ್ನೇಹ ಮತ್ತು ಆತ್ಮೀಯತೆಗಳೂ ಸೊಂಪಾಗಿ ದೊರಕಲಾರಂಭಿಸಿದುವು. ಅವರ ಬಿಸಿಬಿಸಿ ಕಂಟ್ರಿ ಸಾರಾಯಿ ಅವನನ್ನು ಎಲ್ಲಿಲ್ಲದಂತೆ ಆವರಿಸಿಕೊಂಡಿತು. ಅವನ ಹುಟ್ಟೂರಿನಲ್ಲಿ ಜರುಗುತ್ತಿದ್ದ ತುಳುವರ ಮನರಂಜನಾ ಕ್ರೀಡೆಗಳಾದ ಕೋಳಿ ಅಂಕ, ಆಟ ಮತ್ತು ಕೋಲಗಳು ಗಂಗರಬೀಡಿನಲ್ಲೂ ಯಥೇಚ್ಛವಾಗಿ ನಡೆಯುತ್ತಿದ್ದುವು.ಹಾಗಾಗಿ ಅವನಿಗೆ ಗಂಗರಬೀಡು ಬಹಳಬೇಗನೇ ಆಪ್ತವಾಗಿಬಿಟ್ಟಿತು.ಆವರೆಗೆ ಗೊತ್ತುಗುರಿಯಿಲ್ಲದೆ ಕುಂಟುತ್ತ ಕುರುಡುತ್ತ ಸಾಗುತ್ತಿದ್ದ ತನ್ನ ಅಲೆಮಾರಿ ಬದುಕಿಗೊಂದು ಶಾಶ್ವತ ನೆಲೆಯನ್ನುನೀಡಲು ತೋಮ ಗಂಗರಬೀಡುವನ್ನೇ ಆರಿಸಿಕೊಂಡುಜೀವನಪರ್ಯಂತ ಇಲ್ಲೇ ಬದುಕಲು ನಿರ್ಧರಿಸಿಬಿಟ್ಟ.


ತೋಮನ ದುಡಿತವೂ, ಊಟದ ಹೊಡೆತವೂ ಮತ್ತು ಸಾರಾಯಿ ಕುಡಿತವೂ ಹೆಚ್ಚು ಕಮ್ಮಿ ಒಂದೇ ರೀತಿಯವು. ಇವು ಮೂರರಿಂದಲೂ ಅವನು ಯಾವತ್ತೂ ಸೋತು ಹಿಂದೆ ಸರಿದವನಲ್ಲ. ತೋಟದ ಕೆಲಸದ ದಿನಗಳನ್ನು ಬಿಟ್ಟರೆ ಉಳಿದ ದಿನಗಳಲ್ಲಿ ಹದವಾಗಿ ಕುಡಿದು ಶೆಡ್ಡಿನೊಳಗೆ ಮೈಚೆಲ್ಲಿ ಬಿದ್ದುಕೊಳ್ಳುವುದು ಅವನಿಚ್ಛೆಯ ಬದುಕು. ತಾನೆಷ್ಟೇ ಕುಡಿದರೂ ಪಕ್ಕನೇ ಧರೆಗುರುಳುವ ಪಿಂಡವಲ್ಲ ಅವನು!ಹೀಗಾಗಿ ಅವನ ಶಕ್ತಿ ಸಾಮಥ್ರ್ಯವನ್ನು ಕಂಡಿದ್ದ ಅವನದೇ ಮಟ್ಟದ ಕೆಲವು ತರುಣಿಯರು ವಯೋಸಹಜ ಆಕರ್ಷಣೆಯಿಂದ ಮನಸೋತು ಅವನ ಹಿಂದೆ ಬಿದ್ದುದುಂಟು. ಇವನನ್ನು ಪ್ರೀತಿಸಿ ತಾಳಿಯ ಭಾಗ್ಯವನ್ನು ಪಡೆದು ಜೊತೆಯಾಗಿ ಬಾಳಬೇಕೆಂದು ಆಶಿಸಿ ಬೆನ್ನು ಹತ್ತಿದವರೂ ಕೆಲವರುಂಟು. ಆದರೆ ತೋಮ ಮಾತ್ರ ತನ್ನನ್ನು ಬಯಸಿ ಬರುವ ಲಲನೆಯರನ್ನು ಅಂಥ ಪವಿತ್ರ ದೃಷ್ಟಿಯಿಂದೆಲ್ಲ ನೋಡಲು ಹೋಗದೆ ಕೇವಲ ತನ್ನ ಕಾಮದ ತೃಷೆಯನ್ನುನೀಗಿಸಿಕೊಳ್ಳುವುದಕ್ಕೆ ಮಾತ್ರವೇ ಬಳಸಿಕೊಳ್ಳುತ್ತ ಕೊನೆಗೊಮ್ಮೆ ಅವರಿಂದ ತಣ್ಣಗೆ ಕಳಚಿಕೊಂಡು ಮುಂದಿನೂರಿಗೆ ಪಾದ ಬೆಳೆಸುತ್ತ ಬಂದವನಾಗಿದ್ದ. ಹೀಗಾಗಿ ಇಂಥ ತೋಮನಿಗೆ ಗಂಗರಬೀಡಿನಲ್ಲೂ ಒಬ್ಬಳು ಸಿಗುತ್ತಾಳೆ.


ಆಕೆಯ ಹೆಸರು ಪ್ರೇಮ. ಐದೂವರೆ ಅಡಿ ಎತ್ತರದ,ತೆಳುವಾಗಿ ಎಣ್ಣೆ ಲೇಪಿಸಿದಂಥ ಗೋಧಿ ಮೈಬಣ್ಣದ,ಕಡೆದ ವಿಗ್ರಹದಂಥ ಚೆಲುವಿನ ಹೆಣ್ಣುಪ್ರೇಮ ತನ್ನ ಮೈಮಾಟದಿಂದ ಪುರುಷರ ಮನಸೂರೆಗೊಳ್ಳುವಂಥ ಬೆಡಗಿ. ಆದರೆ ಇವಳು ಅದೆಷ್ಟು ಸುಂದರಿಯೋ ಅಷ್ಟೇ ಬಜಾರಿಯೂ ಹೌದು. ಒಂದೊಮ್ಮೆ ಯಾವ ವಿಷಯಕ್ಕಾದರೂ ಯಾರ ಮೇಲಾದರೂ ಕೋಪಿಸಿಕೊಂಡಳೆಂದರೆ ಹೆಂಗಸರನ್ನು ಬಿಡಿ, ಗಂಡಸರನ್ನೂ ಲೆಕ್ಕಿಸುವವಳಲ್ಲ. ಹೊಯಿಕೈಯಿಗಾದರೂ ತಯಾರೇ ಎಂಬಷ್ಟು ಜೋರಿನವಳು! ಹೀಗಾಗಿ ಗಂಗರಬೀಡಿನ ಯಾವ ಗಂಡಸರು ಕೂಡಾ ಇವಳ ತಂಟೆಗೆ ಬರಲು ಹೆದರುತ್ತಿದ್ದರು. ಆದರೆ ಅವಳೂ ಒಬ್ಬಳು ಹೆಣ್ಣಲ್ಲವೇ. ಅಷ್ಟರಲ್ಲಾಗಲೇ ಹದಿಹರೆಯವೂ ದಾಟುವುದರಲ್ಲಿದ್ದ ಅವಳು ತನಗೂ ಒಬ್ಬ ತಕ್ಕನಾದ ಸಂಗಾತಿ ಬೇಕು ಎಂಬ ಆಸೆಯಿಂದ ಅಂಥವನ ಅನ್ವೇಷಣೆಗಿಳಿದಿದ್ದುದೂ ಸುಳ್ಳಲ್ಲ.ಇಂಥವಳ ಕಣ್ಣು ಒಮ್ಮೆ ಆಕಸ್ಮತ್ತಾಗಿ ತೋಮನೆಂಬ ಕರಿ ಹೋರಿಯ ಮೇಲೆ ಬಿದ್ದುಬಿಟ್ಟಿತು.


ತೋಮನಿಗೆ ಶೆಟ್ಟರ ತೋಟದ ಕೆಲಸವುವಾರದಲ್ಲಿ ಮೂರೋ ನಾಲ್ಕೋ ದಿನ ಮಾತ್ರವೇ ಇರುತ್ತದೆ. ಹಾಗಾಗಿ ಆವತ್ತು ಗುರುವಾರ ಸ್ವಲ್ಪ ದೂರದ ಹೆಡ್ಡಿಪರ್ಬುಗಳು ತಮ್ಮ ತೋಟದ ತೆಂಗಿನಕಾಯಿ ಕೊಯ್ಯಲು ತೋಮನನ್ನು ಕರೆದಿದ್ದರು. ತೋಮ ಅಂದು ಮುಂಜಾನೆ ಬೇಗನೆದ್ದು ಅಲ್ಲಿಗೆ ಹೋಗಿ ಮರವೇರಲು ತಯಾರಿ ನಡೆಸುತ್ತಿದ್ದ. ಅವನನ್ನು ಕಂಡ ಪರ್ಬುಗಳು ಕಾಯಿ, ಬೊಂಡಗಳು ತುಂಬಿದ್ದ ಕೆಲವು ಮರಗಳನ್ನು ಅವನಿಗೆ ತೋರಿಸಿ ತಮ್ಮ ಕೆಲಸದ ಮೇಲೆ ಪೇಟೆಗೆ ಹೊರಟು ಹೋದರು. ಪ್ರೇಮಾಳೂ ಹೆಡ್ಡಿಪರ್ಬುಗಳ ಮನೆಗೆಲಸಕ್ಕೆ ಬರುತ್ತಿದ್ದವಳು ಆ ಸಮಯದಲ್ಲಿ ಅಂಗಳದ ಎದುರಿನ ತೆಂಗಿನಕಟ್ಟೆಯಲ್ಲಿ ಕುಳಿತು ಪಾತ್ರೆ ತಿಕ್ಕುತ್ತಿದ್ದಳು. ಆಗ ಅವಳ ನೋಟವು ಪಕ್ಕನೆ ತೋಮನತ್ತ ಹರಿಯಿತು. ಅದೇ ಕ್ಷಣದಲ್ಲಿ ಅವನೂ ಅವಳನ್ನು ನೋಡಿದ. ಇಬ್ಬರ ಕಣ್ಣುಗಳೂ ಕ್ಷಣಕಾಲಸಂಧಿಸಿದವು. ಆದರೆ ತೋಮನ ಕಡೆಯಿಂದ ಪ್ರೇಮಾಳಿಗೆ ಸೂಕ್ತ ಸಂಜ್ಞೆಯೇನೂ ಬರಲಿಲ್ಲ. ಅವನು ಮರವೇರುವ ಧ್ಯಾನದಲ್ಲಿದ್ದವನು, ಅವಳನ್ನು ಕಂಡರೂ ಸರಿಯಾಗಿ ಗಮನಿಸದೆ ಸರಸರನೇ ಮರ ಹತ್ತತೊಡಗಿದ.


ಮುಗಿಲೆತ್ತರದ ಮರದ ಒಂದೊಂದೇ ಹಂತಕ್ಕೆ ಚಿಂಪಾಜಿಯಂತೆ ಜಿಗಿಜಿಗಿದು ಏರುತ್ತಿದ್ದ ತೋಮನ ಬಲಿಷ್ಠವಾದ ತೊಡೆ, ತೋಳು ಮತ್ತು ಎಣ್ಣೆ ಲೇಪಿಸಿದಂತೆ ಹೊಳೆಯುತ್ತಿದ್ದ ಕಪ್ಪಗಿನ ಬೆನ್ನು ಮತ್ತು ಸೊಂಟದ ಮಾಂಸಖಂಡಗಳು ಎಗರಿ ಎಗರಿ ಬಿಗಿದು ಕೊಳ್ಳುತ್ತಿದ್ದುದನ್ನು ಪ್ರೇಮಾ ಕದ್ದು ಮುಚ್ಚಿ ನೋಡುತ್ತಿದ್ದವಳು ದೊಡ್ಡದೊಂದು ತಪಲೆ ತಿಕ್ಕಿದ್ದರಿಂದಲೋ ಅಥವಾ ಇನ್ನೇನೋ ಕಲ್ಪಿಸಿ ಕೊಂಡಿದ್ದರಿಂದಲೋ ಮೆಲ್ಲನೆ ಬೆವರಿದಳು. ಇತ್ತ ತೋಮ ಬೆಂಬಿಡದೆ ಒಂದರ ಹಿಂದೊಂದರಂತೆ ಮರವೇರುತ್ತಿದ್ದವನು ಒಂದು ಗಂಟೆಯಲ್ಲಿ ಅಷ್ಟೂ ಮರಗಳ ಕಾಯಿ ಮತ್ತು ಸೀಯಾಳಗಳನ್ನು ಕಿತ್ತು ಹಾಕಿ, ಅದೇ ವೇಗದಲ್ಲಿ ಮರವಿಳಿದು ಬಂದು‘ಅಯ್ಯಬ್ಬಾ…!’ ಎಂದು ಏದುಸಿರು ಬಿಡುತ್ತ ಮರವೊಂದರ ಬುಡಕ್ಕೊರಗಿ ಕಾಲು ಚಾಚಿ ಕುಳಿತ.
‘ಬಾಯಮ್ಮಾ…ಸ್ವಲ್ಪ ನೀರು ಕೊಡಿಯೇ…ಹಾಗೇ ಒಂಚೂರು ಬೆಲ್ಲವನ್ನೂ ತನ್ನಿ…. ಎಂಥ ಸಾವಿನ ಸೆಕೆ ಮಾರಾಯ್ರೇ ಇದು…!’ ಎಂದು ಮುಖ ಸಿಂಡರಿಸಿಕೊಳ್ಳುತ್ತ ಅಂದವನು, ತನ್ನ ಸೊಂಟಕ್ಕೆ ಬಿಗಿದಿದ್ದ ತುಂಡು ಬೈರಾಸಿನಿಂದ ಮುಖ, ಕತ್ತು ಮತ್ತು ಹೊಟ್ಟೆಯ ಬೆವರನ್ನು ತಿಕ್ಕಿ ಒರೆಸಿಕೊಂಡ.


ಹೆಡ್ಡಿಪರ್ಬುಗಳ ಪತ್ನಿ ಹೆಲೆನಾಬಾಯಿ ತೆಂಗಿನಕಾಯಿ ಹೆಕ್ಕುತ್ತಿದ್ದವರು ಅಲ್ಲಿಂದಲೇ,‘ಹೇ, ಪ್ರೇಮಾ…, ಒಳಗೆ ಲೂಸಿ ಇದ್ದಾಳೆ ಮಾರಾಯ್ತೀ. ಅವಳೊಡನೆ ತೋಮನಿಗೆ ನೀರು ಮತ್ತು ಬೆಲ್ಲ ತಂದು ಕೊಡಲು ಹೇಳು…!’ ಎಂದು ಕೂಗಿ ಹೇಳಿದರು.
ಇತ್ತ ತೋಮನನ್ನು ಕಂಡ ಕ್ಷಣದಿಂದ ಪ್ರೇಮ ಮನೆಯ ಹೊರಗಿನ ಕೆಲಸಕ್ಕೇ ಹೆಚ್ಚು ಒತ್ತುಕೊಟ್ಟು ಅಂಗಳ ಗುಡಿಸುತ್ತಿದ್ದವಳು ಬಾಯಮ್ಮನ ಆಜ್ಞೆಗೆ,‘ಆಯ್ತು ಬಾಯಮ್ಮಾ…!’ ಎಂದು ರಾಗದಿಂದ ಉತ್ತರಿಸಿ ಕೂಡಲೇ ಹೋಗಿಲೂಸಿಯಿಂದ ನೀರು ತರಿಸಿಕೊಂಡು ತೋಮನತ್ತ ವಯ್ಯಾರದಿಂದ ನಡೆದು ಬಂದವಳುಎಲೆಯಡಿಕೆ ಮೆಲ್ಲುತ್ತಿದ್ದ ಅವನೆದುರು ಬಾಗಿ ನೀರಿನ ತಂಬಿಗೆಯನ್ನೂ ಬೆಲ್ಲವನ್ನೂ ನೀಡಿ ನಿಂತು,‘ತಕ್ಕೊಳ್ಳಿ…!’ ಎಂದು ತಾನುಹಿಂದೆಂದೂ ಪಡದಷ್ಟು ನಾಚಿಕೆಯಿಂದ ಹೇಳಿದಳು. ಆದರೆ ಅದನ್ನು ಗಮನಿಸಿದ ಬಾಯಮ್ಮನಿಗೆ ಜೋರಾಗಿ ನಗು ಬಂತು.
‘ಅರೆರೇ…ಇದೇನಾ ಪ್ರೇಮಾ…? ನಿನಗೂ ನಾಚಿಕೆಯಾಗುವುದುಂಟನಾ! ಓ ದೇವರೇ…!’ ಎಂದು ಗೊಳ್ಳನೇ ನಕ್ಕರು. ಬಾಯಮ್ಮನ ಅಣಕದಿಂದ ಪ್ರೇಮ ಮತ್ತಷ್ಟು ನಾಚಿದವಳು,‘ಅಯ್ಯೋ ಇಲ್ಲಪ್ಪಾ…!ನೀವೊಬ್ಬರು ಹೋಗಿ ಬಾಯಮ್ಮಾ…!’ ಎಂದು ನಗುತ್ತ ತೋಮನನ್ನು ಓರೆಗಣ್ಣಿಂದ ದಿಟ್ಟಿಸುತ್ತ ಹೋಗಿ ಮತ್ತೆ ಅಂಗಳ ಗುಡಿಸತೊಡಗಿದಳು. ಪ್ರೇಮಾಳಂತಹ ಚೆಂದುಳ್ಳಿ ಚೆಲುವೆಯರನ್ನು ಬಹಳಷ್ಟು ಕಂಡಿದ್ದ ರಸಿಕ ಶಿಖಾಮಣಿ ತೋಮನುಅಂಥವರ ಹಾವಭಾವಗಳಲ್ಲಿರುವ ಆಕರ್ಷಣೆಗಳಿಗೆಲ್ಲ ಪಕ್ಕನೇ ಬಿದ್ದುಬಿಡುವ ಚಂಚಲ ಬುದ್ಧಿಯನ್ನೆಂದೋತಿದ್ದಿಕೊಂಡಿದ್ದ. ಆದರೆ ಬಾಯಮ್ಮನ ಇಂದಿನ ವಿನೋದದ ಮಾತು ಯಾಕೋ ಅವಳ ಬಗ್ಗೆ ಅವನಲ್ಲಿ ಆಸಕ್ತಿಯನ್ನು ಕೆರಳಿಸಿತು.ಆದ್ದರಿಂದ ಅವಳನ್ನೊಮ್ಮೆ ಅಡಿಯಿಂದ ಮುಡಿಯವರೆಗೆ ಕಿರಾತಕ ದೃಷ್ಟಿಯಿಂದ ದಿಟ್ಟಿಸಿದವನು,‘ಓಹೋ,ಪರ್ವಾಗಿಲ್ಲ ಹುಡುಗಿ, ಒಳ್ಳೆಯ ಬಂಗನಪಲ್ಲಿ ಮಾವಿನ ಹಣ್ಣಿನಂತಿದ್ದಾಳೆ! ತಾನು ಈವರೆಗೆ ಕಂಡವುಗಳಲ್ಲೆಲ್ಲಾ ಇವಳು ಒಂದು ಕೈ ಹೆಚ್ಚೇ ಚಂದವಿದ್ದಾಳೆ!’ ಎಂದುಕೊಂಡವನಿಗೆ ಮರುಕ್ಷಣ ಅವಳ ಮೇಲೆ ಎಂತಹದ್ದೋ ಆಕರ್ಷಣೆ ಹುಟ್ಟಿಬಿಟ್ಟಿತು. ಹಾಗಾಗಿ ತನ್ನ ಸಮೀಪವಿದ್ದ ಬಾಯಮ್ಮನೊಡನೆ,‘ಇವಳು ಯಾರ ಮನೆಯವಳು ಬಾಯಮ್ಮಾ…?’ಎಂದು ಮೆಲುವಾಗಿ ಕೇಳಿದ.
‘ಯಾರು ಪ್ರೇಮವಾ…? ಅವಳು ನಮ್ಮ ಅರಕಲಬೆಟ್ಟಿನ ಅಂಗರನ ಮಗಳಲ್ಲವಾ ಮಾರಾಯಾ!’ ಎಂದು ಬಾಯಮ್ಮ ರಾಗವೆಳೆದರು. ತೋಮ ಗಂಗರಬೀಡಿಗೆ ಬಂದು ಆಗಲೇ ನಾಲ್ಕು ವರ್ಷಗಳು ಕಳೆದಿದ್ದವು. ಆದ್ದರಿಂದ ಅವನಿಗೆ ಊರಿನ ಮುಖ್ಯ ವ್ಯಕ್ತಿಗಳ ಪರಿಚಯವು ಆಗಾಗ ಅವರೆಲ್ಲ ಕಿರಿಸ್ತಾನರ ಮನೆಗಳಿಗೆ ಸಾರಾಯಿ ಕುಡಿಯಲು ಬರುವಾಗಲೂ ಮತ್ತು ಕೋಳಿಕಟ್ಟದ ಸಂದರ್ಭದಲ್ಲೂ ಆಗುತ್ತಿತ್ತು. ಅಂಥ ಕಡೆ ಕೆಲವು ಬಾರಿ ಅವನು ಅಂಗರನನ್ನೂ ಕಂಡಿದ್ದ ಮತ್ತುಮಾತಾಡಿಸಿಯೂ ಇದ್ದ.ಹಾಗಾಗಿ,‘ಓಹೋ… ಅವರ ಮಗಳಾ ಇವಳು…? ನನಗೆ ಹೇಗೆ ಗೊತ್ತಾಗಬೇಕು ಬಾಯಮ್ಮಾ…?’ ಎನ್ನುತ್ತಸಭ್ಯನಂತೆ ನಕ್ಕ. ತೋಮನ ಪೂರ್ವ ಕಿತಾಪತಿಗಳ ಕುರಿತು ಅವರಿವರಿಂದ ಅಷ್ಟಿಷ್ಟು ತಿಳಿದುಕೊಂಡಿದ್ದ ಬಾಯಮ್ಮನಿಗೆ ಅವನ ಮಾತು ಕೇಳಿ ಒಳಗೊಳಗೆ ನಗು ಬಂತು. ಆದರೂ ತೋರಿಸಿಕೊಳ್ಳದೆ ಕಾಯಿಗಳನ್ನು ರಾಶಿ ಹಾಕುವುದರಲ್ಲಿ ಮಗ್ನರಾದರು. ಅಷ್ಟರಲ್ಲಿ ಹೆಡ್ಡಿ ಪರ್ಬುಗಳು ಬಂದ ಸೂಚನೆಯಾಗಿ ಅವರ ಲ್ಯಾಂಬ್ರೆಟ್ಟಾ ಸ್ಕೂಟರಿನ ಟರ್ರ್‍ರ್ರ್‍ರ್ರ್…!ಎಂಬ ಸದ್ದು ಇಡೀ ವಠಾರವನ್ನು ಅದುರಿಸಿತು. ಅದರಿಂದ ಬಾಯಮ್ಮ ಪ್ರೇಮಾಳನ್ನು ಮತ್ತೊಮ್ಮೆ ಕೂಗಿ ಕರೆಯುತ್ತ,‘ಪ್ರೇಮಾ ಇಲ್ಲಿ ಬಾರನಾ, ಸ್ವಲ್ಪ ಕಾಯಿ ಹೆಕ್ಕಿ ಹಾಕು!’ಎಂದು ಸೂಚಿಸಿ ಗಂಡನನ್ನು ಎದುರುಗೊಳ್ಳಲು ಮನೆಯತ್ತ ನಡೆದರು.


ಅಷ್ಟೊತ್ತಿಗೆ ತೋಮನೂ ಎದ್ದವನು ತೆಂಗಿನ ಕಟ್ಟೆಯ ಮೇಲೆ ತಾನು ಬಲವಾಗಿ ಊರಿ ಕುಳಿತಿದ್ದ ಒತ್ತಡಕ್ಕೆ ಜಜ್ಜಿ ಪುಡಿಯಾಗಿ ಕುಂಡೆಗಳಿಗೆಅಂಟಿಕೊಂಡಿದ್ದ ಒಣಹುಲ್ಲುಗಳನ್ನೆಲ್ಲ ಎಡಗೈಯಿಂದ ತಟಪಟನೇ ಕೊಡವಿಕೊಂಡು ಬಾಯಮ್ಮನ ಹಿಂದೆಯೇ ಹೊರಟು ಹೋಗುವವನಿದ್ದ. ಆದರೆ ಅವರ ಬಾಯಲ್ಲಿ ಮತ್ತೊಮ್ಮೆ ಪ್ರೇಮರಾಗ ಉಲಿದುದನ್ನು ಕೇಳಿದವನು ಮರಳಿ ಮೆಲ್ಲನೆ ಕುಳಿತುಕೊಂಡು ಮಗದೊಮ್ಮೆ ಎಲೆಯಡಿಕೆ ಬಾಯಿಗೆಸೆದುಕೊಂಡ. ಅದನ್ನು ಗಮನಿಸಿದ ಪ್ರೇಮಾಳಮನಸ್ಸು ಮತ್ತಷ್ಟು ಅರಳಿ ಹೂವಾಯಿತು. ಅದೇ ಗುಂಗಿನಲ್ಲಿದ್ದವಳುಅವನನ್ನು ಓರೆ ನೋಟದಿಂದ ದಿಟ್ಟಿಸುತ್ತ,ದೂರದೂರದ ಕಾಯಿಗಳನ್ನು ಹೆಕ್ಕಿ ಹೆಕ್ಕಿ ಅವನು ಕುಳಿತಿದ್ದ ಪಕ್ಕದ ರಾಶಿಗೆ ಎಸೆಯುತ್ತ ಇದ್ದಳು. ಅದಕ್ಕೆ ಪ್ರತಿಯಾಗಿ ತೋಮನಿಂದಲೂ ಮೋಹಕ ಸಂವಹನ ಅವಳತ್ತ ರವಾನೆಯಾಗುತ್ತಿತ್ತು.ಅಷ್ಟರಲ್ಲಿ ಅವಳು ಬೀಸಿ ಎಸೆದ ಒಣ ಕಾಯಿಯೊಂದು ರಪ್ಪನೆ ಗುರಿ ತಪ್ಪಿದ್ದು ತೋಮ ಕಾಲು ತೆರೆದು ಕುಳಿತಿದ್ದವನ ದೊಗಳೆ ಚಡ್ಡಿಯ ನಡುಭಾಗಕ್ಕೇ ಬಂದು ಅಪ್ಪಳಿಸುವುದರಲ್ಲಿತ್ತು. ಆದರೆ ಅವನು ರಪ್ಪನೆ ಅದನ್ನು ಗ್ರಹಿಸಿದವನು,‘ಒಯ್ಯಯ್ಯಪ್ಪಾ ದೇವರೇ…!’ ಎಂದು ಉದ್ಗರಿಸುತ್ತ ಒಂದೇ ಉಸಿರಿಗೆ ನೆಗೆದು ತಪ್ಪಿಸಿಕೊಂಡ. ಮರುಕ್ಷಣ, ‘ಅರೆರೇ ಇದೆಂಥದು ಮಾರಾಯ್ತಿ ನಿನ್ನ ಕಿತಾಪತಿ…? ಹೀಗಾ ಕಾಯಿ ರಾಶಿ ಹಾಕುವುದು? ನಾನೊಂದು ಕ್ಷಣ ಮೈಮರೆಯುತ್ತಿದ್ದರೆ ಅಲಕ್ಕ ತೆಗೆಯುತ್ತಿದ್ದಿಯಲ್ಲ ನನ್ನನ್ನು…!’ಎಂದು ಭಯದಿಂದ ಗದರಿಸಿದ. ಅತ್ತ ಪ್ರೇಮಾಳೂ ನಡೆಯಲಿದ್ದ ದೊಡ್ಡ ಅನಾಹುತವೊಂದನ್ನು ನೆನೆದವಳುನಡುಗಿಬಿಟ್ಟಳು.ಆದರೆ ಮುಂದಿನಕ್ಷಣ ಮತ್ತೇನೋ ಕಲ್ಪಿಸಿಕೊಂಡು ತಲೆತಗ್ಗಿಸಿ ನಕ್ಕಳು. ಅದನ್ನು ಗಮನಿಸಿದ ತೋಮನ ಮುನಿಸೂ ಮಾಯವಾಗಿ, ‘ನೀನೆಂಥದು ಮಾರಾಯ್ತೀ, ಮಾಡುವುದನ್ನು ಮಾಡಿಬಿಟ್ಟು ಅದರ ಮೇಲೆ ನಗುತ್ತಿಯಲ್ಲಾ…!’ ಎಂದ ತಾನೂ ನಗುತ್ತ.
‘ಅಯ್ಯೋ ತಪ್ಪಾಯ್ತು ಮಾರಾಯ್ರೇ…! ಗೊತ್ತಾಗಲಿಲ್ಲ.ಏನೋ ಯೋಚಿಸುತ್ತ ಎಸೆದುಬಿಟ್ಟೆ. ತಾಗಿತಾ…?’ ಎಂದು ದೈನ್ಯದಿಂದ ಕ್ಷಮೆಯಾಸಿದ ಪ್ರೇಮಾಳ ಮೋಹಕ ಭಂಗಿಯನ್ನು ಕಂಡತೋಮನಿಗೆ ಅವಳನ್ನಲ್ಲೇ ಬಾಚಿ ತಬ್ಬಿಕೊಳ್ಳುವಷ್ಟು ಆಸೆಯಾಯಿತು. ಆದರೂ ಹತ್ತಿಕ್ಕಿಕೊಂಡು ಉಗುಳು ನುಂಗಿದ.


‘ಏನೋ ದೇವರ ದಯೆಯಿಂದ ತಾಗಲಿಲ್ಲ ಮಾರಾಯ್ತೀ.ಆದರೆ ತಾಗುತ್ತಿದ್ದರೆ ಮಾತ್ರ ನನ್ನ ಕಥೆ ಇಲ್ಲೇ ಕೋಚಾ ಆಗುತ್ತಿತ್ತಲ್ಲವಾ..!’ ಎನ್ನುತ್ತಅವಳನ್ನು ಒಂಥರಾ ನೋಡಿದವನುತಟ್ಟನೆ ಮಾತು ತಿರುಗಿಸಿ.‘ಹೌದೂ…ಅಂಗರಣ್ಣ ಹೇಗಿದ್ದಾರೆ? ಅವರನ್ನು ನೋಡದೆ ತುಂಬಾ ದಿವಸವಾಯಿತು. ಈಗೀಗ ಕೋಳಿಕಟ್ಟದಲ್ಲೂ ಕಾಣಿಸುವುದಿಲ್ಲವಲ್ಲ ಏನು,ಹುಷಾರಿಲ್ಲವಾ…?’ ಎಂದು ವಿಚಾರಿಸಿದ. ಆಗ ಪ್ರೇಮಾಳಿಗೆ ಅಚ್ಚರಿಯಾಯಿತು.‘ನಿಮಗೆ ನನ್ನಪ್ಪನ ಗುರ್ತ ಉಂಟ ಮಾರಾಯ್ರೇ…?’ ಎಂದವಳು,‘ಅಯ್ಯೋ ಅವರಿಗೇನಾಗಿದೆ? ಮೂರುಹೊತ್ತು ಚೆನ್ನಾಗಿ ಕುಡಿದುಕೊಂಡು ಗಮ್ಮತ್ತಿನಲ್ಲಿದ್ದಾರೆ!’ ಎಂದು ಅಪ್ಪನ ಮೇಲಿನ ಬೇಸರವನ್ನು ಇನ್ನಷ್ಟು ತೋರಿಸಲಿದ್ದವಳು ರಪ್ಪನೆ ತನ್ನ ತಪ್ಪಿನರಿವಾಗಿ ನಾಲಗೆ ಕಚ್ಚಿಕೊಂಡು, ‘ಅಂದಹಾಗೆ ನಿಮ್ಮ ಮನೆ ಎಲ್ಲಿ…?’ಎಂದುಅವನ ಬಗ್ಗೆ ಉತ್ಸಾಹ ತೋರಿಸಿದಳು. ಆಗ ತೋಮನಿಗೆ ತನ್ನ ಕಥೆಯನ್ನು ಹೇಳುವ ಹುರುಪೆದ್ದಿತು. ಆದ್ದರಿಂದ,‘ನಾನು ಮೂಲದಲ್ಲಿ ಕೇರಳದವನು. ಆದರೆ ಸಣ್ಣದರಲ್ಲಿಯೇ ಹುಟ್ಟಿದ ಊರನ್ನುಬಿಟ್ಟೆ.ಆನಂತರ ಆ ಊರು ಈ ಊರು ಅಂತ ಸುತ್ತಾಡಿಕೊಂಡು ಬಂದವನು ಕೊನೆಗೆ ನಿಮ್ಮೂರಿಗೆ ಬಂದು ನೆಲೆಸಿಸುಮಾರು ನಾಲ್ಕು ವರ್ಷವಾಗುತ್ತ ಬಂತು ನೋಡು. ಈಗ ಶ್ರೀಧರಶೆಟ್ಟರೊಂದಿಗೆ ಎಸ್ಟೇಟಿನಲ್ಲಿದ್ದೇನೆ!’ ಎಂದು ತಾನು ಶೆಟ್ಟರ ಊಳಿಗದವನೆನ್ನಲು ಜಂಭ ಬಿಡದೆ, ಅವರ ಬಲಗೈ ಬಂಟನೇ ತಾನು ಎಂಬಂಥ ಗತ್ತಿನಿಂದ ಹೇಳಿದ.


‘ಓಹೋ…ಹೌದಾ…?’ ಎಂದ ಪ್ರೇಮಾಳಿಗೆ ಇನ್ನೇನೋ ಹೊಳೆಯಿತು. ‘ನಮ್ಮದೂ ನಾಲ್ಕು ಮರದ ಕಾಯಿಗಳು ಬಲಿತು ಒಣಗಿಬಿಟ್ಟಿವೆ ಮಾರಾಯ್ರೇ. ಅಪ್ಪ ಕೊಯ್ಯುತ್ತೇನೆ ಅನ್ನುತ್ತಾರೆ. ಆದರೆ ಅವರನ್ನು ಮರ ಹತ್ತಿಸಲು ನಮಗೆ ಹೆದರಿಕೆಯಾಗುತ್ತದೆ. ಹಾಗಾಗಿ ನಿಮಗೆ ಯಾವಾಗ ಪುರುಸೋತ್ತುಂಟು? ಸಮಯ ಸಿಕ್ಕಿದಾಗ ಬಂದು ಕೊಯ್ದು ಕೊಡಬಹುದಾ…?’ ಎಂದು ವಯ್ಯಾರದಿಂದ ಕೇಳಿದಳು. ಆದರೆ ತೋಮ,ಇವಳ ಜೊತೆ ಯಾವಾಗ ಮತ್ತುಹೇಗೆ ಮಜಾ ಉಡಾಯಿಸುವುದು ಎಂಬ ಲೆಕ್ಕಾಚಾರದಲ್ಲಿದ್ದವನು ಕೂಡಲೇ,‘ಆಯ್ತು. ಅದಕ್ಕೇನಂತೆ. ನಾಳೆಯೇ ಬಂದು ಕೊಯ್ದುಕೊಡುವ. ಆದರೆ ಗಡದ್ದು ಕೋಳಿಯೂಟವಾಗಬೇಕಷ್ಟೇ!’ ಎಂದು ತಮಾಷೆಯಿಂದ ಅಂದವನುವೀಳ್ಯ ಜಗಿಜಗಿದು ಕನರು ಕಟ್ಟಿದ್ದ ತನ್ನ ಹಲ್ಲಿನ ಪಂಕ್ತಿಗಳನ್ನು ಚೆಂದವಾಗಿ ಪ್ರದರ್ಶಿಸುತ್ತ ನಕ್ಕ.‘ಅಯ್ಯೋ…ಅದಕ್ಕೇನಂತೆ ಬನ್ನಿ, ಬನ್ನಿ. ನಾಡಿದ್ದು ಶನಿವಾರ ಊರಿನ ದೊಡ್ಡ ಮಾರಿಪೂಜೆ ಉಂಟಲ್ಲವ. ಆವತ್ತು ರಾತ್ರಿ ಮನೆಯ ಮಾರಿಗೇ ಬನ್ನಿ…!’ ಎಂದು ಪ್ರೇಮ ಕೂಡಾ ಅಷ್ಟೇ ಮುತುವರ್ಜಿಯಿಂದ ಕರೆದಳು. ಆದರೆ ಅವಳ ಮಾತಿನಲ್ಲಿ ತೋಮ ಬೇರೇನೋ ಒಳಭಾವವನ್ನು ಗ್ರಹಿಸಿದವನುತಟ್ಟನೆ ರೋಮಾಂಚಿತನಾದ.
‘ಆಯ್ತು ಖಂಡಿತಾ ಬರುತ್ತೇನೆ!’ ಎನ್ನುತ್ತ ಮಾದಕವಾಗಿ ನಕ್ಕವನು ಎದ್ದು ಹೆಡ್ಡಿಪರ್ಬುಗಳಿಂದ ಸಂಬಳ ವಸೂಲಿಗೆ ಹೊರಟು ಹೋದ.
(ಮುಂದುವರೆಯುವುದು)

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter