ಗುರುರಾಜ್ ಸನಿಲ್ ಅವರ ಅವಳಿ ಕಾದಂಬರಿಗಳ ಲೋಕಾರ್ಪಣೆ

ಉಡುಪಿ : ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್. ಪಿ. ಅವರು ಅಧ್ಯಕ್ಷತೆ ವಹಿಸಿ, “ಗುರುರಾಜ್ ಸನಿಲರು ಉರಗತಜ್ಞರು ಮಾತ್ರ ಅಲ್ಲ; ಅವರು ಒಳ್ಳೆಯ ಬರಹಗಾರರೂ ಹೌದು. ಈಗಾಗಲೇ ಅನೇಕ ವಿಚಾರಗಳ ಕುರಿತ ವೈಚಾರಿಕ ಲೇಖನಗಳನ್ನು, ಕತೆಗಳನ್ನು ಹಾಗೂ ಇತ್ತೀಚೆಗೆ ಅವಳಿ ಕಾದಂಬರಿಗಳನ್ನು ಬರೆದು ಮಹತ್ವದ ಕೊಡುಗೆ ನೀಡಿದ್ದಾರೆ.  ಈ ಮೂಲಕ ಅವರು ಸೃಜನಶೀಲ ಬರವಣಿಗೆಯಲ್ಲೂ ಪಳಗಿದ ಕೈ ಅನ್ನುವುದು ಸ್ಪಷ್ಟವಾಗುತ್ತದೆ. ಸನಿಲರ ಹೆಚ್ಚಿನ ಬರವಣಿಗೆಗಳು ಪರಿಸರ ಮತ್ತು ವನ್ಯಜೀವಿ ಕಾಳಜಿ ಹಾಗೂ ಸಮಾಜ ಸುಧಾರಣೆಯ ಅಂಶಗಳನ್ನು ಹೊಂದಿರುವುದು ಗಮನಾರ್ಹ” ಎಂದು  ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ರಾಷ್ಟಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಸಂಸ್ಕøತಿ ವಿಶ್ವ ಪ್ರತಿಷ್ಠಾನದ ಸಹಯೋಗದಲ್ಲಿ ಉರಗತಜ್ಞ ಗುರುರಾಜ್ ಸನಿಲ್ ಅವರ ‘ವಿವಶ’ ಮತ್ತು ‘ಆವರ್ತನ’ ಅವಳಿ ಕಾದಂಬರಿಗಳ ಲೋಕಾರ್ಪಣೆ ಎಂಜಿಎಂ ಕಾಲೇಜಿನ ಧ್ವನ್ಯಲೋಕಾ ಸಭಾಂಗಣದಲ್ಲಿ ಆದಿತ್ಯವಾರ ಉಡುಪಿ, ಮೇ 22 ರಂದು ನಡೆದ ಕಾರ್ಯಕ್ರಮದಲ್ಲಿ ಮೆಚ್ಚುಗೆಯ ನುಡಿಗಳನ್ನಾಡಿದರು.

ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ “ವಿವಶ’ ಪುಸ್ತಕವನ್ನು ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಜಗದೀಶ್ ಶೆಟ್ಟಿ ‘ಆವರ್ತನ’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಕ.ಸಾ.ಪ. ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು ವಿವಶ ಕೃತಿಯನ್ನು ವಿಮರ್ಶಿಸಿ, ‘ತುಳುನಾಡಿನ ಸಂಸ್ಕøತಿ ಮತ್ತು ಬಿನ್ನ ಭಿನ್ನ ಕಾಲಘಟ್ಟದಲ್ಲಿ ಬಂದ ಅದರ ಸ್ಥಿತ್ಯಾಂತರವನ್ನು ಡಿ. ಕೆ. ಚೌಟರ, ‘ಮಿತ್ತ ಬೈಲ್ ಯಮುನಕ್ಕ’ ಡಾ. ನಾ. ಮೊಗಸಾಲೆ ಅವರ ‘ಉಲ್ಲಂಘನೆ’ ಎಚ್. ನಾಗವೇಣಿ ಅವರ ‘ಗಾಂಧಿ ಬಂದ’ ಕಾದಂಬರಿಗಳಂಥ ಅನನ್ಯ ಕೃತಿಗಳ ಸಾಲಿನಲ್ಲಿ ನಿಲ್ಲುವ ವಿವಶವು ಕೂಡಾ ವಿಭಿನ್ನವಾಗಿ ಮೂಡಿಬಂದಿದೆ. ತುಳುನಾಡಿನ ಆಚಾರ ವಿಚಾರ, ಧರ್ಮಗಳು, ಮನುಷ್ಯನ ಸಂಬಂಧ, ಅಜ್ಞಾನ, ದುಶ್ವಟಗಳು, ಅವುಗಳ ನಡುವೆ ತೊಳಲಾಡುವ ಕಾಮ, ಪ್ರೇಮದ ಭಾವನೆಗಳನ್ನು ಲೇಖಕರು ಸೊಗಸಾಗಿ ವಿಶ್ಲೇಷಿಸಿದ್ದಾರೆ. ಮನುಷ್ಯ ಜೀವನ ಮತ್ತು ಸಂಬಂಧಗಳ ಕುರಿತು ಚಿಂತನೆಗೆ ಹಚ್ಚುವ ಈ ಕೃತಿ ಸಮಾಜ ವಿಜ್ಞಾನದ ಹಿನ್ನೆಲೆಯಲ್ಲಿ ಅಧ್ಯಯನಕಾರರಿಗೆ ಯೋಗ್ಯ ಕಥನವಾಗಿದೆ” ಎಂದರು.

ಸಾಹಿತಿ ಅನಿತಾ ಪಿ. ತಾಕೊಡೆ ಅವರು ‘ಆವರ್ತನ’ ಕೃತಿಯನ್ನು ಪರಿಚಯಿಸುತ್ತ “ಸಮಕಾಲೀನ ಸಮಾಜದಲ್ಲಿರುವ ಸ್ಥಿತಿಗತಿ ಮತ್ತು ಆರೋಗ್ಯಪೂರ್ಣ ಸಮಾಜಕ್ಕೆ ಹಾಗೂ ಪರಿಸರಕ್ಕೆ ಮಾರಕವಾಗಿರುವಂಥ ವಿಚಾರಗಳಿಗೆ ಗುರುರಾಜ್ ಸನಿಲ್ ಅವರು ಪ್ರಾಧಾನ್ಯತೆಯನ್ನು ನೀಡಿದ್ದಾರೆ. ಇದು ಕೇವಲ ಕಾದಂಬರಿಯಾಗಿ ಓದುಗರ ಮನ ರಂಜಿಸುವುದು ಮಾತ್ರವಲ್ಲ; ಪರಿಸರ ಸಂರಕ್ಷಣೆ, ಅಂಧಾನುಕರಣೆಗಳ ನಿವಾರಣೆ ಹಾಗೂ ಶೋಷಿತ ವರ್ಗವನ್ನು ಸುಧಾರಣೆಗೆ ತರುವಂಥ  ಒಂದು ಮಹತ್ವದ ಕಾರ್ಯ ಮಾಡಲು ಪ್ರಯತ್ನಿಸಿರುವುದು ನಿಜಕ್ಕೂ ಪ್ರಶಂಸನೀಯ. ಸನಿಲ್ ಅವರು ತಮ್ಮ ಸುತ್ತಮುತ್ತಲಿನ ವಿದ್ಯಾಮಾನಗಳ ಸೂಕ್ಷ್ಮತೆಗಳನ್ನು  ಸರಿಯಾಗಿ ಅರ್ಥೈಸಿಕೊಂಡವರಾಗಿದ್ದಾರೆ. ಎಲ್ಲರಿಗೂ ಸರಳವಾಗಿ ಗ್ರಾಹ್ಯವಾಗುವಂತೆ ವಾಸ್ತವ ಸತ್ಯವನ್ನು ತೆರೆದಿಟ್ಟಿದ್ದಾರೆ ಆವರ್ತನ ಕಾದಂಬರಿಯನ್ನು ಓದಿದವರು ಮತ್ತೆಂದೂ ಯಾವುದೇ ಅಪನಂಬಿಕೆಗಳಿಗೆ ಬಲಿಯಾಗುವುದಿಲ್ಲವೆಂಬುದನ್ನು ದಿಟವಾಗಿ ಹೇಳಬಹುದು” ಎಂದರು.

ಕೃತಿಕಾರರಾದ ಗುರುರಾಜ್ ಸನಿಲ್ ಅವರು ತಮ್ಮ ಮಾತಿನಲ್ಲಿ, “ಕಾದಂಬರಿ ಓದುವ ಆಸಕ್ತಿ ಶಾಲಾ ದಿನಗಳಲ್ಲಿಯೇ ಇತ್ತು. ಬರೆಯುವ  ಹವ್ಯಾಸ ಓದಿನಿಂದಲೇ ಶುರುವಾಗಿದ್ದು. ಎಂದಾದರೊಂದು ದಿನ ಕಾದಂಬರಿ ಬರೆಯಬೇಕೆನ್ನುವ ಆಸೆಯೂ ಮನಸ್ಸಿನಲ್ಲಿತ್ತು. ಅದು ಇದೀಗ ನೆರವೇರಿದ್ದು ಖುಷಿ ನೀಡಿದೆ. ಯಾವುದೇ ಒಂದು ಕಾದಂಬರಿ ಓದಬೇಕು ಅಂತ ಅನಿಸುವುದೇ ಅದನ್ನು ವಿಮರ್ಶೆ ಮಾಡುವವರಿಂದ. ಇಂದು ಬಿಡುಗಡೆಗೊಂಡ ಎರಡು ಕಾದಂಬರಿಗಳ ಸಂಕ್ಷಿಪ್ತ ಪರಿಚಯವನ್ನು ವಿಮರ್ಶಕರು ಸೊಗಸಾಗಿ ನಿಮ್ಮ ಮುಂದಿಟ್ಟಿದ್ದಾರೆ. ನನ್ನ ಪ್ರಗತಿಗೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಸಹಕರಿಸಿದ್ದಾರೆ” ಎಂದು ಕೃತಜ್ಞತೆಯನ್ನು ಸಲ್ಲಿಸಿದರು

ಸಂಸ್ಕೃತಿ ವಿಶ್ವ  ಪ್ರತಿಷ್ಠಾನದ ವತಿಯಿಂದ ಸನಿಲ್ ಅವರನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಜಗದೀಶ್ ಶೆಟ್ಟಿ, ನೀಲಾವರ ಸುರೇಂದ್ರ ಅಡಿಗ, ಕ.ಸಾ.ಪ. ಗೌರವ ಕಾರ್ಯದರ್ಶಿ ರಂಜನಿ ವಸಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಪೂರ್ಣಿಮ ಜನಾರ್ದನ್ ಕಾರ್ಯಕ್ರಮವನ್ನು ನಿರೂಪಿಸಿದರು.

ನಾಡೋಜ ಕೆ. ಪಿ. ರಾವ್, ಡಾ. ಪಿ. ವಿ. ಭಂಡಾರಿ, ಡಾ. ವಿರೂಪಾಕ್ಷ ದೇವರಮನೆ, ಯೋಗದಾ ಸತ್ಸಂಗದ ರವಿ ನಾರಾಯಣ ಭಟ್, ಶ್ರೀ ನರಸಿಂಹಮೂರ್ತಿ ರಾವ್, ಮುಂಬೈಯ ಹಿರಿಯ ಸಾಹಿತಿ ಮಮತಾ ರಾವ್, ಲತಾ ಶೆಟ್ಟಿ ಮತ್ತಿತರ ಸಾಹಿತ್ಯ ಪ್ರೇಮಿಗಳು ಪಾಲ್ಗೊಂಡರು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter