ಅನಾಥ

‘ಸಾರ್… ಟಿ.ವಿ. ಹೋಗ್ಬಿಟ್ರಂತೆ…’ ಮುಂಜಾನೆ ಬ್ಯಾಂಕಿನ ಶೆಟರನ್ನು ಮೇಲೆತ್ತುತ್ತ ರಾಜು ಸಣ್ಣಗೆ ಉಲಿದ. ಅವನ ಮಾತು ನೋವಿನಿಂದ ಭಾರವಾಗಿತ್ತು. ಕ್ಷಣಕಾಲ ನಾನು ಏನೂ ಪ್ರತಿಕ್ರಿಯಿಸಲು ಸಾಧ್ಯವಾಗದ ಅಚ್ಚರಿಗೆ ಒಳಗಾದೆ. ಯಾಕೆಂದರೆ ನಿನ್ನೆ ಸಂಜೆ ನನ್ನನ್ನು ಕಂಡು ಮಾತನಾಡಿಸಿ ಹೋದ ವ್ಯಕ್ತಿ ಇದ್ದಕ್ಕಿದ್ದಂತೆ ಇಲ್ಲ ಎನ್ನುವ ಸತ್ಯವನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ನನ್ನ ಮನಸ್ಸು ಹಿಂದೇಟು ಹಾಕಿತು.

‘ಹೌದಾ! ಏನಾಗಿತ್ತಂತೆ’ ತಡೆಯಲಾರದೆ ಕೇಳಿದೆ.

‘ಹಾರ್ಟ್ಅಟ್ಯಾಕ್ ಅಂತೆ ಸಾರ್. ರಾತ್ರಿ ಮಲಗಿದಲ್ಲಿಯೇ ಹೋಗಿರಬೇಕು ಅಂತ ಜನ ಆಡಿಕೊಳ್ತಿದ್ದಾರೆ’

ತನಗೆ ಸಿಕ್ಕ ಸುದ್ದಿಯನ್ನು ಹೇಳುತ್ತಾ ಅವನು ಬೀಗ ತೆಗೆದು ಬ್ಯಾಂಕಿನೊಳಗೆ ಕಾಲಿಟ್ಟ. ನಾನು ಬ್ಯಾಂಕಿನ ಮೆಟ್ಟಿಲುಗಳನ್ನೊಮ್ಮೆ ದಿಟ್ಟಿಸಿದೆ. ಅಲ್ಲಿ ಯಾವತ್ತೂ ಹಾಜರಿ ಹಾಕುತ್ತಿದ್ದ ಅವರು ಇಂದು ಕಾಣಿಸಲಿಲ್ಲ. ಯಾವತ್ತೂ ಕೂರುತ್ತಿದ್ದ ಆ ಸ್ಥಳ ಅನಾಥವಾದಂತೆ ಅನಿಸಿತು.

ತಿರುವೆಂಕಟ ಅಯ್ಯಂಗಾರ್ ಎಲ್ಲರ ಬಾಯಲ್ಲಿ ಚುಟುಕಾಗಿ ಟಿ.ವಿ. ಆಗಿಬಿಟ್ಟಿದ್ದರು. ನನ್ನ ಹೃದಯಕ್ಕೆ ತೀರ ಹತ್ತಿರವಾಗಿದ್ದ ಅವರ ಗತಜೀವನದ ಹಾಳೆಗಳು ನನ್ನೆದುರು ಒಂದೊಂದಾಗಿ ತೆರೆದುಕೊಳ್ಳಲಾರಂಭಿಸಿದವು. ಸುಮಾರು ಎಪ್ಪತ್ತರ ಆಚೀಚೆಯ ವಯಸ್ಸು. ತುಸು ಕಪ್ಪಗಿನ ಕೃಶದೇಹ. ಉದ್ದನೆಯ ಮುಖದಲ್ಲಿ ಸದಾ ನಗುಸೂಸುವ ಕಣ್ಣುಗಳು. ಇನ್ ಶರ್ಟ್ ಮಾಡಿ ಠಾಕುಠೀಕಾಗಿ ಇರುತ್ತಿದ್ದ ಅವರ ನಿಲುವೊಮ್ಮೆ ನನ್ನ ಕಣ್ಣೆದುರು ಹಾದು ಹೋಯಿತು. ತಕ್ಷಣ ನಿನ್ನೆ ಇದ್ದವರು ಇಂದು ಇಲ್ಲವಾದರಲ್ಲ ಎನ್ನುವ ಚಿಂತೆ ನಶ್ವರತೆಯ ನೆರಳನ್ನು ನನ್ನೊಳಗೆ ಉಳಿಸಿ ಬಿಟ್ಟಿತು.

ನಮ್ಮ ಬ್ಯಾಂಕಿನ ಶಾಖೆ ಉತ್ತರಹಳ್ಳಿಯ ಮುಖ್ಯರಸ್ತೆಗೆ ಹೊಂದಿಕೊಂಡಿತ್ತು. ಎದುರಿಗಿರುವ ಅಗಲವಾದ ರಸ್ತೆಯಲ್ಲಿ ಬಿಡುವಿಲ್ಲದೆ ಸರಿದಾಡುವ ವಾಹನಗಳ ದಟ್ಟಣೆ. ಫುಟ್ಪಾನತಿನಲ್ಲಿ ಓಡಾಡುವ ಜನಜಂಗುಳಿ. ರಸ್ತೆಗೆ ಹೊಂದಿಕೊಂಡೇ ಇರುವ ಬೃಹತ್ ಸಂಕೀರ್ಣದ ನೆಲಮಹಡಿಯಲ್ಲಿ ನಮ್ಮ ಬ್ಯಾಂಕು. ಫುಟ್ಪಾೆತಿನಿಂದ ಒಂದಿಷ್ಟು ಮೆಟ್ಟಿಲುಗಳನ್ನು ಏರಿ ಬ್ಯಾಂಕನ್ನು ಪ್ರವೇಶಿಸುವುದಕ್ಕಿಂತ ಮುಂಚೆ ಮೆಟ್ಟಿಲ ಮಗ್ಗುಲಲ್ಲಿ ಸುಖಾಸೀನರಾಗಿರುತ್ತಿದ್ದ ಅಯ್ಯಂಗಾರ್ ಕಣ್ಣಿಗೆ ಬಿದ್ದರಷ್ಟೇ ನನ್ನ ಮನಸ್ಸಿಗೇನೋ ತೃಪ್ತಿ. ನನ್ನನ್ನು ಕಂಡೊಡನೆ ಮುಖತುಂಬ ನಗು ತಂದು ‘ನಮಸ್ಕಾರ ಸಾರ್…’ ಎಂದು ಸ್ವಾಗತಿಸದ ದಿನವಿಲ್ಲ. ಕೆಲವೊಮ್ಮೆ ಆರೋಗ್ಯದ ಏರುಪೇರಿನಿಂದಲೋ ಇಲ್ಲಾ ಹೆಣ್ಣುಮಕ್ಕಳನ್ನು ಕಾಣಲು ಹೋದ ಸಂದರ್ಭದಲ್ಲೋ ಅವರ ಗೈರುಹಾಜರಿ ಗಮನಕ್ಕೆ ಬರುತ್ತಿತ್ತು. ಆದರೆ ಇನ್ನು ಮುಂದೆ ಅಲ್ಲಿ ಅಯ್ಯಂಗಾರರನ್ನು ಕಾಣಲು ಸಾಧ್ಯವೇ ಇಲ್ಲವಲ್ಲ ಅಂತ ಮನಸ್ಸು ಪೇಚಾಡಿತು. ತೀರ ಹತ್ತಿರದವರನ್ನು ಕ್ಷಣಮಾತ್ರದಲ್ಲಿ ಕಳೆದುಕೊಂಡಂತಹ ಭಾವ ನನ್ನಲ್ಲಿ. ಭಾವಜೀವದ ತಂತೊಂದು ನನ್ನೊಳಗೆ ಕಡಿದುಹೋದ ವೇದನೆ. ಹಿಂದೆಲ್ಲ ನಾನು ಬ್ಯಾಂಕಿಗೆ ಕಾಲಿಟ್ಟೊಡನೆ ಹಿಂಬಾಲಿಸಿ ಬಂದು ಕುಶಲೋಪರಿ ವಿಚಾರಿಸುವವರು ಇಂದು ಇಲ್ಲ ಎನ್ನುವ ಹಳಹಳಿಯ ಅನಾಥಭಾವ. ಆಗೆಲ್ಲ ನನ್ನೆದುರು ಒಂದಿಷ್ಟು ಕೂತು ತಮ್ಮ ಕಳೆದುಹೋದ ಜೀವನದ ಕತೆಗಳನ್ನೆಲ್ಲ ಧಾರಾವಾಹಿಗಳಂತೆ ಬಿಚ್ಚುತ್ತ ಹಗುರವಾಗುತ್ತಿದ್ದರು. ಬಹುಶಃ ನನ್ನ ಮೇಲಿದ್ದ ಅವರ ಹಿರಿತನದ ವಾತ್ಸಲ್ಯಮಯ ಸಂಬಂಧ ಇದಕ್ಕೆ ಕಾರಣವಿರಬಹುದು. ಭೂತಕಾಲದ ಅವರ ಬದುಕು ಎಲ್ಲರಂತೆ ಏರಿಳಿತಗಳನ್ನು ಕಂಡರೂ ಸಿಹಿಗಿಂತ ಹೆಚ್ಚು ಕಹಿಯನ್ನೇ ಉಂಡವರು ಅವರು. ಸಾವು ಯಾರನ್ನೂ ಕೇಳಿ ಬರುವುದಿಲ್ಲವಲ್ಲ. ಒಂದುದಿನ ಹಠಾತ್ತನೆ ಬಂದೆರಗಿ ಬದುಕಿಗೇ ಪೂರ್ಣವಿರಾಮವೀಯುವ ಅದು ನಿಜಕ್ಕೂ ನಿಗೂಢವೇ ಸರಿ.    

ಬ್ಯಾಂಕಿನ ಮೆಟ್ಟಿಲನ್ನು ತಮ್ಮ ಖಾಸಗಿ ಸ್ಥಳದಂತೆ ಕೂರಲು ಬಳಸುತ್ತಿದ್ದ ಅವರ ದಿನಚರಿ ಯಾರೊಬ್ಬರಿಗೂ ಅಚ್ಚರಿ ತಂದಿರಲಿಲ್ಲ. ತಮ್ಮೆದುರು ಹಾದುಹೋಗುವ ಎಲ್ಲರೂ ಅವರಿಗೆ ಹೆಚ್ಚುಕಡಿಮೆ ಚಿರಪರಿಚಿತರೆ. ಹಾಗಾಗಿ ಪರಿಚಯವಿರಲಿ ಇಲ್ಲದಿರಲಿ ಎಲ್ಲರನ್ನೂ ಕರೆದು ಮಾತನಾಡಿಸುತ್ತಿದ್ದರು. ಅಲ್ಲಿ ಎಲ್ಲರಿಗೂ ಅವರ ಆತ್ಮೀಯತೆಯ ಪರಿಚಯವಾಗುತ್ತಿತ್ತು. ಸಣ್ಣವರಂತೂ ಅವರನ್ನು ತಮಾಷೆಯಿಂದ ಹೀರೋ ಅನ್ನುತ್ತಿದ್ದರು. ರಸ್ತೆ ದಾಟಲು ಪರದಾಡುವ ವಯಸ್ಸಿನವರಿರಲಿ, ಬೀದಿಯ ಮೇಲೆ ಭಿಕ್ಷೆಬೇಡುವ ಅನಾಥರಿರಲಿ ಅವರಿಗೆ ಸಹಾಯಹಸ್ತ ಚಾಚುವುದರಲ್ಲಿ ಇವರು ಯಾವತ್ತೂ ಮುಂದು. ಬೆಳಗ್ಗೆಯಿಂದ ಕತ್ತಲಾವರಿಸಿ ಅಂಗಡಿ ಬಾಗಿಲುಗಳು ಮುಚ್ಚುವವರೆಗೂ ಅವರ ಠಿಕಾಣಿ ಅಲ್ಲೇ. ಮಧ್ಯಾಹ್ನ ಒಂದು ತಾಸು ಹತ್ತಿರದಲ್ಲಿಯೇ ಇದ್ದ ಫ್ಲ್ಯಾಟ್ ಗೆ ಹೋಗಿ ಉಂಡು ಬಂದರೆ ಅದೇ ಅವರ ಲೆಕ್ಕದಲ್ಲಿ ವಿರಾಮ. ತಮ್ಮೊಡನೆ ಮಾತನಾಡುವವರ ಕಷ್ಟಸುಖಗಳಲ್ಲಿ ಭಾವನಾತ್ಮಕವಾಗಿ ಬೆರೆಯುತ್ತಿದ್ದ ಅವರು ಸಮಾಧಾನ, ಅನುಕಂಪಗಳ ಮಾತಿನಿಂದ ಸಂತೈಸುತ್ತಲೂ ಇದ್ದರು. ಹೀಗೆ ತಮ್ಮ ಖಾಸಗಿ ಬಳಗವನ್ನು ವಿಸ್ತರಿಸುವುದಕ್ಕೂ, ಮೆಟ್ಟಿಲ ಮೇಲೆ ಬಂದು ದಿನವಿಡೀ ಕೂರುವುದಕ್ಕೂ ಒಂದು ಬಲವಾದ ಕಾರಣವಿತ್ತು. ಹೆಂಡತಿ ತೀರಿಕೊಂಡ ನಂತರ ಅವರು ಏಕಾಂಗಿಯಾದರು. ಒಂಟಿತನದ ಬೇಸರವನ್ನು ನೀಗಲು ಅವರು ಆರಿಸಿದ್ದು ಈ ಸಾರ್ವಜನಿಕ ಸ್ಥಳ ಮತ್ತು ಅಲ್ಲಿ ಓಡಾಡುವ ಸಾರ್ವಜನಿಕರನ್ನು! ತಾವು ಕೂರುತ್ತಿದ್ದ ಸ್ಥಳಕ್ಕೂ ಜೀವಂತಿಕೆಯನ್ನು ತರಿಸಿಕೊಂಡ ಲವಲವಿಕೆಯ ವ್ಯಕ್ತಿ ಅಯ್ಯಂಗಾರ್.

ತಿರುವೆಂಕಟ ಅಯ್ಯಂಗಾರ್ ಹುಟ್ಟಿದ್ದು ತಮಿಳುನಾಡಿನಲ್ಲಾದರೂ ಬದುಕು ಕಟ್ಟಿಕೊಂಡದ್ದು ದೂರದ ಮುಂಬೈಯಲ್ಲಿ.  ಹೆಸರಾಂತ ಸಿದ್ಧಉಡುಪು ತಯಾರಿಕಾ ಘಟಕದಲ್ಲಿ ಮಾರಾಟ ವಿಭಾಗದ ಮ್ಯಾನೇಜರ್ ಆಗಿ ನಿವೃತ್ತಿಹೊಂದಿದವರು. ಮುಂಬೈಯಲ್ಲಿ ಉದ್ಯೋಗದಲ್ಲಿದ್ದಾಗ ಅವರು ಅಲ್ಲಿಯ ಮರಾಠಿ ಹೆಣ್ಣು ಪ್ರೇಮಾಬಾಯಿಯನ್ನು ಮೆಚ್ಚಿ ಮದುವೆಯಾದರು. ಈ ಮದುವೆ ಅವರ ಶ್ರೀಮಂತ ಮನೆತನದೊಂದಿಗಿನ ಸಂಬಂಧವನ್ನು ಶಾಶ್ವತವಾಗಿ ಕಡಿದುಹಾಕುತ್ತದೆ ಎಂದು ಅವರೆಣಿಸಿರಲಿಲ್ಲ. ಮೊದಲೇ  ಸಂಪ್ರದಾಯಸ್ಥ ಕುಟುಂಬ. ಸಿಟ್ಟನ್ನು ಸದಾ ಮೂಗಿನ ಮೇಲಿರಿಸಿ ವ್ಯವಹರಿಸುತ್ತಿದ್ದ ಕಟ್ಟುನಿಟ್ಟಿನ ತಂದೆ, ಅದಕ್ಕೆ ಭಿನ್ನವಾಗಿ ಪ್ರೀತಿ, ಮಮತೆಗಳಿಂದ ಹೃದಯಕ್ಕೆ ಹತ್ತಿರವಾಗಿದ್ದ ತಾಯಿ ತಮ್ಮಂದಿರು…. ಎಲ್ಲರೂ ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಅವರಿಂದ ನಿಷ್ಠುರವಾಗಿ ದೂರವಾಗಿದ್ದರು. ಮುಂದೆ ಮನೆತನದ ಯಾವ ಆಸ್ತಿಯಲ್ಲಿಯೂ ಹಕ್ಕಿಲ್ಲವೆನ್ನುವ ತೀರ್ಪಿನೊಂದಿಗೆ ಹೊರಹಾಕಿದ್ದರು. ಆಗ ಅಯ್ಯಂಗಾರರಲ್ಲಿದ್ದ ಸ್ವಾಭಿಮಾನದ ಕಿಚ್ಚು, ಯೌವನದ ಹುಮ್ಮಸ್ಸು, ಬೇಡಿಯಾದರೂ ಬದುಕಿಯೇನು ಎನ್ನುವ ಛಲ, ಜೊತೆಗೆ ಪ್ರೀತಿಸಿ ಕಟ್ಟಿಕೊಂಡವಳನ್ನು ಬಿಡಲಾಗದ ಆತ್ಮಪ್ರಜ್ಞೆ ಎಲ್ಲವನ್ನೂ ಸೇರಿಸಿಕೊಂಡು ಬದುಕಿನ ದೋಣಿಗೆ ಹುಟ್ಟು ಹಾಕಿದರು. ಅವರು ಮತ್ತೆಂದೂ ಹುಟ್ಟಿದ ಮನೆಯ ಕಡೆ ತಲೆ ಹಾಕಲೇ ಇಲ್ಲ.

ತಿರುವೆಂಕಟರಿಗೆ ಮೂರು ಮಂದಿ ಹೆಣ್ಣುಮಕ್ಕಳು. ನಿರ್ಮಲ, ನಿರುಪಮ ಕೊನೆಯವಳು ಕಾಂತಿ. ಇದ್ದ ಮಧ್ಯಮ ಶ್ರೇಣಿಯ ವೇತನದಲ್ಲಿ ಮುಂಬೈಯ ಬಾಂದ್ರಾದ ಸಣ್ಣ ಮನೆಯೊಂದರಲ್ಲಿ ಬದುಕನ್ನು ಹೇಗೋ ಸಾಗಿಸುತ್ತಿದ್ದರು. ಯಾವತ್ತೂ ತಲೆಗೆ ಎಳೆದರೆ ಕಾಲಿಗಿಲ್ಲ ಕಾಲಿಗೆಳೆದರೆ ತಲೆಗಿಲ್ಲ ಎನ್ನುವ ತತ್ವಾರದ ಸ್ಥಿತಿ. ಹಾಗಂತ ಮನೆಯವರ ಹೊಟ್ಟೆಗೆ ಎಂದೂ ಕಡಿಮೆಮಾಡಿರಲಿಲ್ಲ. ಇದ್ದುದರಲ್ಲೇ ಜೀವನವನ್ನು ಹೊಂದಿಸಿಕೊಂಡು ಮಕ್ಕಳನ್ನು ಓದಿಸಿದರು. ಹೆಣ್ಣುಮಕ್ಕಳಾದರೂ ಅವರನ್ನು ಸಸಾರ ಮಾಡಿರಲಿಲ್ಲ. ತಮ್ಮ ಜೀವದ ಜೀವ ಎಂಬಂತೆ ಅವರನ್ನು ಅಕ್ಕರೆಯಿಂದ ಬೆಳೆಸುತ್ತ ಎಷ್ಟು ಓದಲು ಸಾಧ್ಯವೋ ಅಷ್ಟನ್ನು ಓದಿಸಿದರು. ಮಕ್ಕಳಾದರೋ ಅತಿ ಬುದ್ಧಿವಂತರು. ವ್ಯವಹಾರ ಕುಶಲಿಗಳು. ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದಂತೆ ಮೂವರೂ ಸ್ನಾತಕೋತ್ತರ ಪದವೀಧರರಾದರು. ಓದಿಗೆ ತಕ್ಕಂತೆ ಕೆಲಸವೂ ಸಿಕ್ಕಿತು. ಮುಂದೆ  ಅವರಿಷ್ಟದಂತೆ ಮದುವೆಯೂ ಆಯಿತು. ಹೆತ್ತವರಿಬ್ಬರ ಮನದಲ್ಲಿ ಆಗ ನಿರಾಳತೆಯ ಭಾವ. ಇವೆಲ್ಲ ಆಗುವುದಕ್ಕಿಂತ ಒಂದೆರಡು ವರ್ಷ ಮೊದಲು ಅಯ್ಯಂಗಾರರು ನಿವೃತ್ತರಾಗಿದ್ದರು.

ಅಯ್ಯಂಗಾರರ ಮನಸ್ಸಿನಲ್ಲಿ ಆಗ ಮುಂದೇನು ಎನ್ನುವ ಪ್ರಶ್ನೆ ಎದುರಾಯಿತು. ಅದಾಗಲೇ ಮುಂಬೈ ಜೀವನದಿಂದ ಅವರಿಬ್ಬರೂ ಬೇಸತ್ತಿದ್ದರು. ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಸಿಕ್ಕ ಇಡುಗಂಟನ್ನು ಜತನದಿಂದ ಉಳಿಸಿಕೊಂಡು ಗಂಡಹೆಂಡತಿ ಇಬ್ಬರೂ ಮಕ್ಕಳಿಗೆ ಭಾರವಾಗಿರುವುದು ಬೇಡವೆಂಬ ಇರಾದೆಯೊಂದಿಗೆ ಬೆಂಗಳೂರಿಗೆ ಬಂದಿಳಿದರು. ಮುಂಬೈಯಲ್ಲಾದರೋ ಅವರಿಗಿದ್ದುದು ಬಾಡಿಗೆಯ ಮನೆ. ಅಲ್ಲಿಯ ವಾತಾವರಣಕ್ಕೆ ದಶಕಗಳಿಂದ ಹೊಂದಿಕೊಂಡಿದ್ದರೂ ಬೆಂಗಳೂರಿನ ಪರಿಸರ, ಹವೆ ಅವರನ್ನು ಬಹುವಾಗಿ ಆಕರ್ಷಿಸಿತ್ತು. ಹೀಗಾಗಿ ಬೆಂಗಳೂರಿಗೆ ಬಂದ ಅವರು ಮೊದಲು ಚಿಕ್ಕ ಒಂದು ಬೆಡ್ ರೂಂ ಕಿಚನ್ ಫ್ಲ್ಯಾಟನ್ನು ಉತ್ತರಹಳ್ಳಿಯಲ್ಲಿ ಖರೀದಿಸಿದರು. ಆಗ ಉತ್ತರಹಳ್ಳಿ ಈಗಿನಂತೆ ಬೆಳೆದಿರಲಿಲ್ಲ. ಬೆಂಗಳೂರಿನ ಹೊರವಲಯ ಅಂತಲೇ ಅದನ್ನು ಪರಿಗಣಿಸಲಾಗಿತ್ತು. ಸ್ವಂತ ಮನೆಯಲ್ಲಿ ಇರಬೇಕೆನ್ನುವ ಅವರ ಬಹುದಿನಗಳ ಬಯಕೆ ಬದುಕಿನ ಸಂಧ್ಯಾಕಾಲದಲ್ಲಿ ಕೈಗೂಡಿತ್ತು. ಮೂವರು ಮಕ್ಕಳಲ್ಲಿ ದೊಡ್ಡವರಿಬ್ಬರು ಕ್ರಮೇಣ ಉದ್ಯೋಗಾವಕಾಶಗಳನ್ನು ಹುಡುಕುತ್ತಾ ಬೆಂಗಳೂರಿನ ಕಡೆ ಮುಖ ಮಾಡಿದರು. ಸಣ್ಣವಳು ಮುಂಬೈಯಲ್ಲಿಯೇ ಉಳಿದುಕೊಂಡಳು. ಮಕ್ಕಳಿಬ್ಬರು ತಾವಿದ್ದ ಕಡೆಗೇ ಬಂದುದು ಹೆತ್ತವರಿಗೆ ಸಂತಸ ತಂದಿದ್ದರೂ ಅವರ ಮನೆಯ ಕಡೆ ಅತಿಯಾಗಿ ಓಡಾಡಿಕೊಂಡಿರಲಿಲ್ಲ. ಯಾಕೆಂದರೆ ಮಕ್ಕಳಿಗೆ ಅವರದೇ ಆದ ಜವಾಬ್ದಾರಿಗಳ ಜೊತೆಗೆ ಗಂಡನ ಹೆತ್ತವರೂ ಜೊತೆಯಾಗಿಯೇ ಇದ್ದರು. ಸ್ವಾಭಿಮಾನಿಯಾದ ಅಯ್ಯಂಗಾರರಿಗೆ ಮೊದಲಿನಿಂದಲೂ ಸ್ವತಂತ್ರವಾಗಿ ಜೀವಿಸಬೇಕೆನ್ನುವ ಹಂಬಲ. ಅಲ್ಲದೆ ಮಕ್ಕಳ ಹಂಗಿನಲ್ಲಿ ಇರಲು ಅವರು ಎಂದೂ ಬಯಸಿರಲಿಲ್ಲ. 

ಕೆಲವರ್ಷಗಳ ಹಿಂದೆ ಪ್ರೇಮಾಬಾಯಿ ತೀರಿಕೊಂಡಾಗ ತಿರುವೆಂಕಟ ಅಯ್ಯಂಗಾರರು ವಿಹ್ವಲರಾದರು. ಅದುವರೆಗೆ ಪ್ರತಿಯೊಂದಕ್ಕೂ ಹೆಂಡತಿಯನ್ನೇ ಅವಲಂಬಿಸಿದ್ದ ಅವರ ಬದುಕು ಸಂಗಾತಿಯಿಲ್ಲದೆ ಒಂಟಿತನವನ್ನು ಅನುಭವಿಸಿತು. ಮುಂಜಾನೆ ಎದ್ದ ಕೂಡಲೆ ಹಬೆಯಾಡುವ ಕಾಫಿಯೊಂದಿಗೆ ಹಾಜರಾಗುತ್ತಿದ್ದ, ಇವತ್ತು ಯಾವ ಅಡುಗೆ ಮಾಡಲಿ ಎಂದು ಅಕ್ಕರೆಯಿಂದ ಕೇಳುತ್ತಿದ್ದ, ಮಾತುಮಾತಿಗೂ ಹತ್ತಿರವೇ ಇದ್ದು ಹರಟಬೇಕೆನ್ನುವ ಬಯಕೆಹೊತ್ತ ಹೆಂಡತಿ ಅನಿರೀಕ್ಷಿತವಾಗಿ ಮರೆಯಾದ ನಂತರದ ಕ್ಷಣಕ್ಷಣವೂ ಅಯ್ಯಂಗಾರರಿಗೆ ಭಾರವಾಗತೊಡಗಿತು. ಅವಳು ಜೊತೆಯಾಗಿದ್ದಾಗ ಅರಿಯದೆ ಜಾರುತ್ತಿದ್ದ ಕಾಲ ಯಾಕೋ ಕುಂಟುತ್ತಿದೆ ಅನಿಸಿತು. ಆದರೆ ಕಾಲ ಎಲ್ಲವನ್ನೂ ಮರೆಸುತ್ತದೆ ಎನ್ನುವುದು ಸುಳ್ಳಲ್ಲ. ಕ್ರಮೇಣ ಸತ್ತವರು ಎಂದೂ ತಿರುಗಿ ಬರಲಾರರು ಎನ್ನುವ ಸತ್ಯವನ್ನು ಅರಗಿಸಿಕೊಳ್ಳುತ್ತ ಬದುಕಿರುವವರೆಗೆ ಅವಳ ನೆನಪುಗಳೊಂದಿಗೆ ಬಾಳಲು ನಿಶ್ಚಯಿಸಿದರು. ನೆನಪುಗಳೇ ಬದುಕಿಗೆ ಜೀವ ತುಂಬುವುದು ಇಂತಹ ಸಂದರ್ಭಗಳಲ್ಲೆ. ಮಕ್ಕಳಿಬ್ಬರು ತಂದೆಯನ್ನು ತಮ್ಮಲ್ಲಿ ಬಂದು ಇರುವಂತೆ ಒತ್ತಾಯಿಸಿದ್ದರು. ಆದರೆ ಅಯ್ಯಂಗಾರರು ಇದಕ್ಕೆ ಸುತಾರಾಂ ಒಪ್ಪಲಿಲ್ಲ. ಯಾರ ಹಂಗಿಲ್ಲದೆ ತಮಗೆ ತಿಳಿದ ಅಷ್ಟಿಷ್ಟು ಅಡುಗೆಯನ್ನು ಬೇಯಿಸುತ್ತ ಒಂಟಿಯಾಗಿಯೇ ಬದುಕಿದ್ದರು.

ಈ ನಡುವೆ ಒಂದೆರಡು ತಿಂಗಳು ಅವರು ಎಲ್ಲಿಯೋ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಾರೆ ಎನ್ನುವ ಸುದ್ದಿ ಸಿಕ್ಕಿತ್ತು. ಆ ಬಗ್ಗೆ ಒಮ್ಮೆ ಭೇಟಿಯಾದಾಗ ವಿಚಾರಿಸಿದ್ದೆ. ಸಂಕೋಚದಿಂದ ಹಿಡಿಮುದ್ದೆಯಾಗಿದ್ದರು. ಮುಖ ಚಿಕ್ಕದು ಮಾಡಿಕೊಂಡ ಅವರು’ಟೈಂ ಪಾಸ್ ಆಗಬೇಕಲ್ಲ ಸಾರ್… ಅಲ್ಲದೆ ಬ್ಯಾಂಕಿನಲ್ಲಿದ್ದ ಒಂದಿಷ್ಟು ಹಣ ಕೂತು ತಿಂದರೆ ಎಷ್ಟು ದಿನ ಬಂದೀತು ಹೇಳಿ…’ ಅಂತ ತಮ್ಮ ಅಂತರಂಗದ ನೋವನ್ನು ತೋಡಿಕೊಂಡಿದ್ದರು. ಅವರ ಮಾತಿನಲ್ಲಿ ಭದ್ರತೆಯ ಅಭಾವ ಕಾಡುತ್ತಿತ್ತು. ನನಗೆ ಯಾಕೋ ಈ ವಯಸ್ಸಿನಲ್ಲಿ ಅವರು ದುಡಿಯುವುದು ಸರಿಕಾಣಲಿಲ್ಲ. ಹಾಗೆಂದು ನಾನು ಯಾವ ಅನ್ಯಮಾರ್ಗವನ್ನು ಸೂಚಿಸಲೂ ಸಾಧ್ಯವಿರಲಿಲ್ಲ. ಒಮ್ಮೆ ಬ್ಯಾಂಕಿಗೆ ಬಂದು ನನ್ನನ್ನು ಕಾಣಿರಿ ಎಂದು ಮಾತ್ರ ಹೇಳಿದ್ದೆ. ನಮ್ಮ ಬ್ಯಾಂಕಿನಲ್ಲಿ ಅವರು ಇಟ್ಟಿರುವ ಹಣದ ಮೇಲೆ ತಿಂಗಳಿಗೆ ಬರುವ ಬಡ್ಡಿ ಇತ್ತೀಚಿನ ದಿನಗಳಲ್ಲಿ ಅವರಿಗೆ ಜೀವನಕ್ಕೆ ಸಾಲುತ್ತಿರಲಿಲ್ಲ ಎನ್ನುವುದು  ಸತ್ಯ ಸಂಗತಿಯಾಗಿತ್ತು. ಹೀಗಾಗಿ ಕೆಲವೊಮ್ಮೆ ತೀರ ಹಚ್ಚಿಕೊಂಡಿರುವವರ ಹತ್ತಿರ ಹಿಂತಿರುಗಿಸುವ ಭರವಸೆಯಲ್ಲಿ ಸಾಲ ಕೇಳುತ್ತಿದ್ದರು ಎನ್ನುವ ವಿಷಯವನ್ನು ರಾಜು ನನಗೆ ಸೂಕ್ಷ್ಮವಾಗಿ ಹೇಳಿದ್ದ. ಕೇಳಿ ನನಗೆ ಬೇಸರವಾಗಿತ್ತು. ಮಕ್ಕಳೆಲ್ಲರೂ ಒಳ್ಳೆಯ ಸಂಪಾದನೆಯಲ್ಲಿದ್ದರೂ ತಂದೆ ಕಡೆ, ಅವರ ಬೇಕುಬೇಡಗಳ ಕಡೆ ಮುಖಮಾಡಿರಲಿಲ್ಲ. ಅನಾರೋಗ್ಯದಿಂದ ಒಂದೆರಡು ದಿನ ಹಾಸಿಗೆ ಹಿಡಿದರೂ ಬಂದು ವಿಚಾರಿಸಿರಲಿಲ್ಲ. ಹೆಚ್ಚೇಕೆ… ಎದುರಿನ ರಸ್ತೆಯಲ್ಲಿಯೇ ಮಕ್ಕಳು ಓಡಾಡುತ್ತಿದ್ದರೂ ಮೆಟ್ಟಿಲ ಮೇಲೆ ಕೂತಿರುತ್ತಿದ್ದ ತಂದೆಯನ್ನು ಕಂಡು ಯಾವತ್ತೂ ಮಾತಾಡಿಸಿರಲಿಲ್ಲ. ತಂದೆ ಮಕ್ಕಳ ನಡುವಿನ ಸಂಬಂಧದಲ್ಲಿ ಎಲ್ಲೋ ಒಂದೆಡೆ ಸಣ್ಣ ಬಿರುಕು ಕಾಣಿಸಿಕೊಂಡಿರಬೇಕು ಅನಿಸಿತ್ತು.

ತಿರುವೆಂಕಟರಿಗೆ ತಮ್ಮ ಸ್ವಾಭಿಮಾನವನ್ನು ಬಿಟ್ಟು ಮಕ್ಕಳಲ್ಲಿ ಅಂಗಲಾಚುವುದು ಬೇಡದ ವಿಷಯವಾಗಿದ್ದರೆ, ಮಕ್ಕಳು ತಂದೆ ತಾವಾಗಿ ಕೇಳಲಿ, ತಮ್ಮ ಮನೆಗೆ ಬಂದಿರಲಿ ಎನ್ನುವ ಹಟ. ಈ ಮಧ್ಯೆ  ಇರುವ ಫ್ಲ್ಯಾಟನ್ನು ಮಾರಿ ತಮಗೆ ಪಾಲು ಕೊಡಲಿ ಎನ್ನುವ ಸಣ್ಣತನ. ಅದನ್ನು ಮಾರಿ ಬಂದ ಹಣವನ್ನು ಮಕ್ಕಳ ಕೈಗಿಟ್ಟು ತಾನೇನು ಭಿಕ್ಷೆ ಬೇಡುವುದೇ ಎಂದು ಅಯ್ಯಂಗಾರರು ಒಂದೆರಡು ಬಾರಿ ನನ್ನೊಡನೆ ತೀರ ಇಳಿದ ದನಿಯಲ್ಲಿ ಹೇಳಿದ್ದರು.

‘ಮಕ್ಕಳಿಗೆ ನಾವು ಏನು ಕಡಿಮೆ ಮಾಡಿದ್ದೆವು. ತಲೆಯ ಮೇಲೆ ಹೊತ್ತು ಪ್ರೀತಿಯಿಂದ ಸಾಕಿದ್ದೆವು. ಕಲಿಸಿದೆವು. ಮದುವೆ ಮಾಡಿದೆವು… ಆದರೆ ಈಗ ಯಾರೊಬ್ಬರೂ ನಾನು ಸಾಯುತ್ತೇನೆಂದರೂ ಬರೊಲ್ಲ. ಈಗ ಅವಳು ಇರುತ್ತಿದ್ದರೆ ಎಷ್ಟು ನೊಂದುಕೊಳ್ಳುತ್ತಿದ್ದಳೋ… ಇವರು ನಾವು ಸಾಕಿದ ಮಕ್ಕಳೇ ಎಂದು ಖಂಡಿತಾ ಕಣ್ಣೀರಾಗುತ್ತಿದ್ದಳು. ಪುಣ್ಯಾತ್ಗಿತ್ತಿ.. ಬೇಗ ಹೋಗಿಬಿಟ್ಟಳು…’ ನೋವಿನ ಕಾಲನ್ನು ನೀವುತ್ತಾ ಹತಾಶರಾಗಿ ಮೊನ್ನೆದಿನ ನುಡಿದಾಗ ನನ್ನಲ್ಲಿ ಅವರನ್ನು ಸಮಾಧಾನಿಸುವ ಮಾತಿರಲಿಲ್ಲ. ಆಗಲೇ ನನ್ನ ತಲೆಯಲ್ಲಿ ಅವರಿಗೆ ಸಹಾಯ ಮಾಡಬಹುದಾದ ಒಂದು ವಿಚಾರ ಮಿಂಚಿ ಮಾಯವಾಗಿತ್ತು. ಬ್ಯಾಂಕಿಗೆ ಬಂದು ಕಾಣುವಂತೆ ಹೇಳಿದ್ದೆ.

ಇಷ್ಟೆಲ್ಲ ಕಷ್ಟಗಳ ನಡುವೆ ವರ್ಷವೂ ನೆನಪಿನಿಂದ ತಾವು ಮದುವೆಯಾದ ದಿನದಂದು ಹತ್ತಿರದ ಗುಡಿಗೆ ಹೋಗಿ ಪೂಜೆ ಸಲ್ಲಿಸಿ ಅಲ್ಲಿರುವ ಭಿಕ್ಷುಕರಿಗೆ ಊಟ ವಸ್ತ್ರ ನೀಡಿ ಬರುತ್ತಿದ್ದರು. ಅಂದು ಅವರ ಮುಖದಲ್ಲಿ ಎಂದೂ ಕಾಣದ ಗೆಲುವು ಇಣುಕಿರುತ್ತಿತ್ತು. ತಮ್ಮ ಬಾಳಸಂಗಾತಿಯನ್ನು ಲಕ್ಷ್ಮೀ ಎಂದೇ ಸ್ಮರಿಸುತ್ತಿದ್ದ ಅವರು ಬಾಳಿನುದ್ದಕ್ಕೂ ಅವಳೊಡನೆ ಹಂಚಿಕೊಂಡ ಕಷ್ಟಸುಖಗಳನ್ನು ಸಂಭ್ರಮದಿಂದ ಹೇಳುತ್ತಿದ್ದರು. ಇದು ನಿಜಕ್ಕೂ ಅಮರಪ್ರೀತಿ. ತಮ್ಮ ಬದುಕೇ ಕಂಗಾಲಾಗಿರುವ ಸ್ಥಿತಿಯಲ್ಲಿ ಇಂತಹ ನಿಯತ್ತನ್ನು ಉಳಿಸಿಕೊಂಡು ಬಂದ ಅವರ ಬಗ್ಗೆ ಹೆಮ್ಮೆಯೆನಿಸುತ್ತಿತ್ತು.

ನಿನ್ನೆ ದಿನ ಬೆಳಿಗ್ಗೆ ನಾನು ಛೇಂಬರಿನಲ್ಲಿ ಯಾವುದೋ ಕಡತದಲ್ಲಿ ಮುಳುಗಿದ್ದೆ. ಬಾಗಿಲ ಬಳಿ ಯಾರೋ ಸುಳಿದಂತಾಗಿ ತಲೆ ಎತ್ತಿ ನೋಡಿದರೆ ಅಯ್ಯಂಗಾರರು ನಿಂತಿದ್ದರು. ನೋಡಿದರೆ ಮುಖದಲ್ಲಿ ಎಂದಿನ  ಕಳೆಯಿರಲಿಲ್ಲ. ತೀರ ಬಸವಳಿದವರಂತೆ ಕಾಣುತ್ತಿದ್ದರು. ಒಳಗೆ ಕರೆಸಿ ಕೂಡಿಸಿದೆ. ಚಹ ತರಿಸಿ ಕುಡಿಸಿದೆ. ಮೌನಿಯಾಗಿಯೇ ಕುಳಿತ ಅವರನ್ನು ಏನು ಬಂದದ್ದು ಎನ್ನುವ ಭಾವದಲ್ಲಿ ನೋಡಿದೆ.

‘ಸಾರ್… ನಿನ್ನೆ ನೀವು ಬ್ಯಾಂಕಿಗೆ ಬನ್ನಿ ಅಂದಿದ್ರಲ್ಲ. ಅದಕ್ಕೆ ಬಂದೆ’ ನಾನು ಕರೆಸಿದ ವಿಚಾರ ಫಕ್ಕನೆ ನೆನಪಾಯಿತು.

‘ಅಯ್ಯಂಗಾರರೆ… ನಿಮ್ಮಲ್ಲಿ ಒಂದು ವಿಷಯ ಹೇಳಬೇಕೆಂದು ಕರೆಸಿದೆ. ನೀವು ಬೇಸರಪಟ್ಟುಕೊಳ್ಳದಿದ್ದರೆ ಹೇಳುತ್ತೇನೆ’ ಅಂದೆ.

‘ಹೇಳಿ ಸಾರ್… ಸಂಕೋಚ ಯಾಕೆ’

‘ನಿಮ್ಮ ಈಗಿನ ಸ್ಥಿತಿಯಲ್ಲಿ ನಾನೇನಾದರು ಸಹಾಯಮಾಡುವುದಿದ್ದರೆ ಒಂದು ದಾರಿ ಇದೆ…’ ವಿಷಯ ಹೇಳಲು ಕೊಂಚ ಹಿಂಜರಿದೆ.

‘ಅದೇನದು ಹೇಳಿ ಪರ್ವಾಗಿಲ್ಲ’

‘ನಮ್ಮಲ್ಲಿ ರಿವರ್ಸ್ ಮಾರ್ಟ್ಗೇನಜ್ ಅನ್ನುವ ಒಂದು ಸಾಲ ಸೌಲಭ್ಯವಿದೆ. ಅಂದರೆ ವಯಸ್ಸಾದವರು ತಮ್ಮ ಮಕ್ಕಳಿಂದ ಯಾವುದೇ ರೀತಿಯ ಸಹಾಯ ದೊರಕದ ಸಂದರ್ಭದಲ್ಲಿ ತಮ್ಮ ಹೆಸರಿನಲ್ಲಿ ಇರುವ ಸ್ಥಿರಾಸ್ತಿಯನ್ನು ಬ್ಯಾಂಕಿಗೆ ಅಡವಿಟ್ಟು ನಿಯಮಿತವಾಗಿ ತಮ್ಮ ಜೀವನಕ್ಕೆ ಬೇಕಾಗುವಷ್ಟು ಹಣವನ್ನು ಪಡೆಯುತ್ತ ಜೀವನ ಸಾಗಿಸಬಹುದು. ಸ್ಥಿರಾಸ್ತಿಯ ಮೌಲ್ಯವನ್ನು ಆಧರಿಸಿ ಕೊಡುವ ಸಾಲದ ಮೊತ್ತ ನಿಗದಿಯಾಗುತ್ತದೆ. ನಿಮ್ಮ ಆಸ್ತಿಗೆ ಏನಿಲ್ಲೆಂದರೂ ಇಪ್ಪತ್ತು ಲಕ್ಷ ಸಾಲ ಸಿಗಬಹುದು. ಅಂದ ಹಾಗೆ ಇದನ್ನು ನೀವು ಹಿಂತಿರುಗಿ ಕಟ್ಟುವ ಅಗತ್ಯವಿಲ್ಲ. ನಿಮ್ಮ ವಾರಸುದಾರರ ಹೆಸರನ್ನು ನಮೂದಿಸಿದರೆ ಮುಂದೆ ನಿಮ್ಮ ಕಾಲಾನಂತರ ಅವರು ಈ ಸಾಲವನ್ನು ತೀರಿಸಿ ಆಸ್ತಿಯನ್ನು ಹಿಂಪಡೆಯಬಹುದು. ನಿಮ್ಮ ಕೈಯಲ್ಲಿ ಆಸ್ತಿ ಇಟ್ಟುಕೊಂಡು ವೃಥಾ ಯಾಕೆ ಕಷ್ಟಪಡುತ್ತಿದ್ದೀರಿ…’

ಒಂದೇ ಉಸಿರಿಗೆ ಎಲ್ಲವನ್ನೂ ಹೇಳಿ ಮುಗಿಸಿದೆ. ಅವರ ಮುಖದಲ್ಲಿ ಯಾವ ರೀತಿಯ ಗೆಲುವೂ ಕಾಣಲಿಲ್ಲ. ತನಗೊಂದು ಬದುಕುವುದಕ್ಕೆ ದಾರಿ ಇದೆಯಲ್ಲ ಎನ್ನುವ ಸಮಾಧಾನದ ಗೆರೆಯೂ ಗೋಚರಿಸಲಿಲ್ಲ. ನನ್ನ ಮಾತನ್ನೆಲ್ಲ ಸಮಾಧಾನದಿಂದಲೇ ಕೇಳಿದವರು

‘ಉಪಾಯವೇನೋ ಚೆನ್ನಾಗಿದೆ. ಆದರೆ ಸಾರ್… ನನಗೊಂದಿಷ್ಟು ಕಾಲಾವಕಾಶ ಬೇಕು. ವಿಚಾರಮಾಡಿ ತಿಳಿಸುತ್ತೇನೆ ಆಗದೆ…’ ಎಂದರು.

ಬಹುಶಃ ಅವರು ತಮ್ಮ ಕಷ್ಟಕಾಲದಲ್ಲಿಯೂ ಆಸ್ತಿಯನ್ನು ಬ್ಯಾಂಕಿಗೆ ಅಡವಿಡುವ ಪ್ರಸಂಗ ಬಾರದಿರಲಿ ಅಂತ ಹಂಬಲಿಸಿದ್ದರೇನೋ.

‘ಅಯ್ಯಂಗಾರರೆ… ನಿಧಾನವಾಗಿ ಯೋಚಿಸಿ ಹೇಳಿ. ಅವಸರವೇನಿಲ್ಲ. ನಿಮ್ಮ ಕಷ್ಟಕಾಲದಲ್ಲಿ ಆಗದ ಆಸ್ತಿ ಇದ್ದರೆಷ್ಟು ಬಿಟ್ಟರೆಷ್ಟು ಅನ್ನುವ ಭಾವನೆಯಲ್ಲಿ ನಾನು ಯೋಚಿಸಿ ಹೀಗೆ ಹೇಳಿದೆ. ತಪ್ಪಿದ್ದರೆ ಕ್ಷಮಿಸಿ’ ಅಂದೆ.

‘ಛೆ.. ಛೆ.. ಹಾಗೇನಿಲ್ಲ ಸಾರ್. ನನಗೆ ಸಹಾಯ ಮಾಡುವ ಉದ್ದೇಶದಿಂದ ನೀವಾದರು ಇಷ್ಟು ಕಾಳಜಿ ತೋರಿಸಿದಿರಿ. ಆದರೆ ಮಕ್ಕಳು.. ಆಸ್ತಿ ಅವರಿಗೇ ಸೇರಬೇಕಾದದ್ದು ನ್ಯಾಯವಾದರೂ ಒಂದು ದಿನವೂ ನನ್ನನ್ನು ಕಣ್ಣೆತ್ತಿ ನೋಡಿಲ್ಲ… ಅಂತಹವರಿಗೆ ಆಸ್ತಿ ಹೋಗುವುದಕ್ಕಿಂತ ಜೀವನಕ್ಕೆ ಆಧಾರವಾಗಿ ನಿಲ್ಲುವ ಬ್ಯಾಂಕಿಗೆ ಆಸ್ತಿ ಹೋದರೂ ಪರ್ವಾಗಿಲ್ಲ… ನನಗೊಂದಿಷ್ಟು ಯೋಚಿಸಲು ಸಮಯ ಕೊಡಿ’ ಅಂದರು. ಕೊನೆಕೊನೆಯಲ್ಲಿ ಅವರ ಮಾತುಗಳು ಗದ್ಗದಿತವಾಗಿದ್ದವು.

ಮಾತು ಕೊನೆಗೊಂಡದ್ದರಿಂದ ಅವರೆದ್ದು ಭಾರವಾದ ಹೆಜ್ಜೆಗಳನ್ನು ಊರುತ್ತಾ ಹೊರನಡೆದರು. ಅದೇ ನನ್ನ ಅವರ ಕೊನೆಯ ಭೇಟಿ. ಯೋಚಿಸಿ ಹೇಳುತ್ತೇನೆಂದು ಹೋದವರು ಬಾರದ ಊರಿಗೇ ತೆರಳಿದರಲ್ಲ ಅನ್ನುವ ನೋವಿನಿಂದ ವಿಚಲಿತನಾದೆ. ಆಸ್ತಿಯನ್ನು ಅಡವಿಟ್ಟು ಬದುಕುವುದಕ್ಕಿಂತ ಸಾವೇ ಅವರಿಗೆ ಮೇಲೆನಿಸಿರಬೇಕು. ಇಲ್ಲಾ ನಾನು ಹೇಳಿದ ವಿಚಾರವನ್ನು ಮನಸ್ಸಿಗೆ ಬಹಳಷ್ಟು ಹಚ್ಚಿಕೊಂಡ ಕಾರಣ ಕೊನೆಯುಸಿರೆಳೆದರೆ? ಎಲ್ಲಿ ನಾನು ಈ ಒಂದು ಘಟನೆಗೆ ಕಾರಣನಾದೆನೆ…? ಉತ್ತರಿಸಬೇಕಾದ ವ್ಯಕ್ತಿಯೇ ಕಾಣದೂರಿಗೆ ಹೊರಟಿರುವಾಗ ಇಲ್ಲಸಲ್ಲದ ಯೋಚನೆಯಲ್ಲಿ ಪರಿತಪಿಸುವುದು ಸರಿಯಲ್ಲ ಅನಿಸಿತು. ಅಷ್ಟಕ್ಕೂ ನಾನು ಅವರಿಗೆ ಒಳ್ಳೆಯ ಉದ್ದೇಶದಿಂದಲೇ ಅಲ್ಲವೆ ಆ ವಿಚಾರವನ್ನು ಅರುಹಿದ್ದು… ಚಿಂತೆಯಲ್ಲಿಯೇ ನನ್ನ ಮನಸ್ಸು ಕದಡಿದ ಕೊಳವಾಯಿತು.

ಮೆಲ್ಲನೆದ್ದು ಅವರಿದ್ದ ಫ್ಲ್ಯಾಟಿನತ್ತ ಹೆಜ್ಜೆ ಹಾಕಿದೆ… ಅವರ ಕೊನೆಯ ದರ್ಶನಕ್ಕಾಗಿ.

*************

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

38 thoughts on “ಅನಾಥ”

  1. Raghavendra Mangalore

    ಕಥೆ ತುಂಬಾ ಭಾವನಾತ್ಕವಾಗಿದೆ. ಹಿರಿಯರಾದ ಅಯ್ಯಂಗಾರರು ನಮ್ಮ ನೆರೆ ಮನೆಯವರೇನೋ ಎನಿಸುವಷ್ಟು ಆಪ್ತರಾದರು ಕಥೆ ಓದುತ್ತಾ ಓದುತ್ತಾ.. ಇಂದಿನ ಎಲ್ಲ ವೃದ್ಧರ ಪಾಡು ಇದೇ ಎನ್ನುವ ಕಟು ಸತ್ಯ ಕಥೆಯಲ್ಲಿ ಚೆನ್ನಾಗಿ ಬಿಂಬಿಸಿರುವಿರಿ. ಅಭಿನಂದನೆಗಳು

  2. Dr. R N Nagaraj

    ವೃದ್ಧಾಪ್ಯದ ಕಾರ್ಪಣ್ಯಗಳ ನೈಜ ಚಿತ್ರಣ ಸುಂದರವಾಗಿ ಮೂಡಿಬಂದಿದೆ. ಕತೆಗಾರರ ಕಥನ ಶೈಲಿ ಮನಮಟ್ಟುವಂತಿದೆ!!🙏

  3. ತಿರುವೇಂಕಟ ಗಿರಿ ಅಯ್ಯಂಗಾರ್ (ಟಿ ವಿ) ಅವರ ಜೀವನದಲ್ಲಿ ಸಂಭವಿಸಿದ ಕಷ್ಟ ಸುಖಗಳನ್ನು ಒಳಗೊಂಡ ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ.
    ನಿಮ್ಮ ಕಥಾ ಪಯಣ ನಿರಂತರ ವಾಗಿ ಸಾಗಲಿ.
    ಶುಭಾಶಯಗಳು

    1. Gone through the article ‘Anaatha’
      Very well written,great piece of article.
      Writing is one kind of a profession that takes hours of dedication to craft the imagination into such meaningful, interesting creative stuff to read.
      Writing skill and passion for writing every article/story you write is just a unique experience.
      You presented your ideas and thoughts really well on the paper.
      Beautiful writing.I appreciate your writing and impressed with writing style.
      You are blessed with a creative mind and writing profession suites you.
      This article may deeply connects to many families.
      Keep doing your best work.My best wishes to you.

      1. ಧರ್ಮಾನಂದ ಶಿರ್ವ

        Thank you very much Purushottam.
        Your appreciation is an inspiration to me to write more…
        Thanks once again

  4. Jagannath Kulkarni

    ತುಂಬಾ ಸುಂದರ ನಿರೂಪಣೆ. ನಿಲ್ಲದೆ ಓದಿಸಿಕೊಂಡು ಹೋಗುವ ಶೈಲಿ. Keep it up.

  5. ಅನಾಥ ಎಂಬ ಪದಕ್ಕೆ ಅರ್ಥಪೂರ್ಣವಾದ ಕಥೆಯನ್ನು ಮಾರ್ಮಿಕವಾಗಿ ಮನ್ ಕಲಕುವ ವಂತೆ ಸರಳ ಹಾಗೂ ಸುಂದರವಾದ ಶೈಲಿಯಲ್ಲಿ ಮೂಡಿ ಬಂದಿದೆ.
    ನನ್ನ ಅನಿಸಿಕೆ:
    ಈ ಕಥೆ ನಿಜವಾಗಿ ನಡೆದು ಹೋದ ಘಟನೆಯನ್ನು ನಿರೂಪಿಸಿದ್ದೀರಿ ಅಂತ ನನ್ನ ಊಹೆ.
    ನಿಮ್ಮ ಕಥೆಗಳ ಪಯಣ ಹೀಗೆ ಮುಂದುವರಿಯಲಿ.
    ಶುಭಾಶಯಗಳು.

    1. ಧರ್ಮಾನಂದ ಶಿರ್ವ

      ನಿಮ್ಮ ಪ್ರೋತ್ಸಾಹದಾಯಕ ನುಡಿಗಳಿಗೆ ಧನ್ಯವಾದಗಳು

  6. ಟೀ.ವ್ಹೀ. ಯವರ ಕತೆ ಓದುತ್ತಾ ಹೋದಾಗ ದೈನಂದಿನ ಜೀವನದಲ್ಲಿ ಕಂಡು ಕೇಳಿದ ಸಮಾಚಾರದ ಅನಾವರಣ ಆಗ್ತಾ ಹೋಯಿತು. ಕಷ್ಟ ಜೀವಿ, ಸಹಾಯ ಪಡೆಯದೇ ಕೊನೆಯುಸಿರೆಳೆದದ್ದು ಓದಿ ಜೀವ ತಳಮಳಿಸಿತು.
    ತಮ್ಮ ಬರವಣಿಗೆ ಶೈಲಿ ಅತ್ಯುತ್ತಮವಾಗಿದೆ. ಕಥೆ ಓದುತ್ತಾ ಹೋದಂತೆ ಟೀವ್ಹೀ ಯವರ ಜೀವನ ಚರಿತ್ರೆಯ ಸುರುಳಿ ಬಿಚ್ಚತ್ತಾ ಹೋಗುತ್ತದೆ.
    ಖೇದಕರ ವಿಷಯವೆಂದರೆ, ಸರ್ಕಾರವೇ ಹಿರಿಯ ನಾಗರಿಕರಿಗೆ ಯಾವ ಸೌಲಭ್ಯ, ಸಹಾಯ ಮಾಡದೇ ಅಲ್ಪ ಸ್ವಲ್ಪ ಬ್ಯಾಂಕ್ ಬಡ್ಡಿಗೂ ಕಡಿತಮಾಡಿ ಕಷ್ಟ ಪಡುವ ಹಾಗೆ ಮಾಡಿದೆ, ಇನ್ನು ಖಾಸಗಿಯವರ ಸಹಾಯ ಭಗವಂತನೇ ಬಲ್ಲ.
    ಉತ್ತಮ ಕಥೆ, ಬರಹ. ಶುಭಾಶಯಗಳು.

    1. ಧರ್ಮಾನಂದ ಶಿರ್ವ

      ನಿಮ್ಮ ಮುಕ್ತಮನಸ್ಸಿನ ಬೆನ್ನುತಟ್ಟುವಂತಹ ಅನಿಸಿಕೆಗಳಿಗೆ ತುಂಬುಮನಸ್ಸಿನ ಧನ್ಯವಾದಗಳು

  7. ಕಥೆ ಬಹಳ ಚೆನ್ನಾಗಿದೆ ನಾಯಕರೆ. ಟಿ ವಿ ಅವರ ಯಾತನೆ ನಿಜ ಜೀವನದಲ್ಲಿ ಎಷ್ಟೋ ಜನರ ವ್ಯಥೆಯಾಗಿದ. ಎಲ್ಲೋ ಓದಿದ ಹಾಗೆ ಒಂಟಿ ಜೀವನ ತುಂಬಾ ಕಷ್ಟದಾಯಕ. ನಿಮ್ಮ ಸಾಹಿತ್ಯ ಪಯಣ ಹೀಗೇ ಮುಂದುವರಿಯಲಿ.

  8. JANARDHANRAO KULKARNI

    ಮುಪ್ಪಿನಲ್ಲಿ ಬಹಳ ಜನರು ಪಡುವ ಬವಣೆ, ಮಾನಸಿಕ ತುಮುಲ, ಅನಾಥ ಭಾವ ಎಲ್ಲವನ್ನೂ ಚನ್ನಾಗಿ ಬರೆದಿದ್ದೀರಿ. ಅಭಿನಂದನೆಗಳು ಧರ್ಮಾನಂದ ನಾಯಕ್.

  9. ಕಥೆಯಲ್ಲಿ ಇಂದಿನ ದಿನಗಳಲ್ಲಿ ಕಾಣಬಹುದಾದ ನೈತಿಕ ಮೌಲ್ಯ ಕಳೆದುಕೊಂಡ ಮಕ್ಕಳ ಬಗ್ಗೆ ಹಾಗೂ ಮಕ್ಕಳೊಂದಿಗೆ ಹೊಂದಿಕೊಳ್ಳಲಾರದ ತಂದೆತಾಯಿಯರು ಪಡುವ ಪಾಡನ್ನು ನೈಜ ವರ್ಣನೆ ಮತ್ತು ಹೊಂದಾಣಿಕೆ ಇಲ್ಲದೆ ಜೀವನ ದುಸ್ತರ ಎಂಬ ಸಂದೇಶ. ಅನಿರ್ವಾಯ ಸಂದರ್ಭದಲ್ಲಿ ಆಸ್ತಿಯನ್ನು ಬ್ಯಾಂಕಿಗೆ ಒತ್ತೆಯಿಟ್ಟು ಅದರ ಬಡ್ಡಿಯ ಆಧಾರದಲ್ಲಿ ಜೀವನ ನಿರ್ವಹಣೆ ಮಾಡುವ ಅವಕಾಶವಿದೆ ಎನ್ನುವ ವಿಷಯವನ್ನು ಬಹಿರಂಗಪಡಿಸಿದ್ದು. ಒಂದು ಚೌಕಟ್ಟಿನೊಳಗೆ ಕಥೆಗೆ ಬೇಕಾಗುವ ಅಂಶಗಳನ್ನು ಅನುಭವದಸಾರದೊಂದಿಗೆ ಕೃಢಿಕರಿಸಿ ಸುಂದರವಾಗಿ ಹೆಣೆದಿದ್ದೀರಿ.

    ಧನ್ಯವಾದಗಳು,
    ಸುಧೀಂದ್ರ. ಎಸ್.

  10. ನಂದಾ ಮಾನ್ವಿ

    ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಂತಹವರನ್ನು ನಿಜ ಜೀವನದಲ್ಲಿ ಸಾಕಷ್ಟು ಜನರನ್ನು ನೋಡುತಾಇದೇವೆ. ಅಂತಹ ಪರಿಸ್ಥಿತಿ ನಮ್ಮದಾಗಬಾರದು ಅಂಬುದೇ ದೇವರಲ್ಲಿ ಪ್ರಾರ್ಥನೆ. ಕಥೆಯ ತಿರುಳು ಮಾತ್ರವಲ್ಲದೆ ಬರೆಯುವ ಶೈಲಿ ಓದುಗರನ್ನು ಆಕರ್ಷಸುತದೆ. ತಮ್ಮ ಸೇವೆ ಸಾಂಗವಾಗಿ ಮುಂದಿವರೆಯಲಿ ಎಂದು ಆಶಿಸುವ 👌👌

  11. ಎಸ್ ಆರ್ ಸೊಂಡೂರು ಗಂಗಾವತಿ

    ಕೊನೆಗಾಲದಲ್ಲಿ ಮಕ್ಕಳುಇದ್ದೂ ಅನಾಥ ಭಾವ ಕಾಡುವುದು ಅತ್ಯಂತ ಘೋರವಾದುದು. ಈ ಕಾಲದಲ್ಲಿ ಯಾರಿಗೆ ಯಾರೋ ಪುರಂದರ ವಿಠಲ ಎನ್ನುವಂತಾಗಿದೆ. ಕಷ್ಟ ಕಾಲದಲ್ಲಿ ಸಾಕಿ ಸಲಹಿದ ಮುಪ್ಪಿನ ಸಮಯದಲ್ಲಿ ಉದಾಸೀನ ತೋರುತ್ತಾರೆ.ಆಸ್ಪತ್ರೆ ಸೇರಿದರಂತೂ ಹೋಗುವ ಜೀವಕ್ಕೆ ಯಾಕೆ ಖರ್ಚು ಮಾಡಬೇಕೆಂದು ಈಗಿನ ಪೀಳಿಗೆಯ ಮಕ್ಕಳು ಯೋಚಿಸುವರು .

  12. ಶೇಖರಗೌಡ ವೀ ಸರನಾಡಗೌಡರ್

    ಸರಳ ನಿರೂಪಣೆಯ ಸುಂದರ ಕಥೆ. ಇದೇ ಈಗ ಜೀವನವಾಗತೊಡಗಿದೆ. ಕಾಲನ ತಕ್ಕಡಿಯಲ್ಲಿ ಏನೇನು ಆಗಬೇಕೋ ತಿಳಿಯುತ್ತಿಲ್ಲ.
    ಅಭಿನಂದನೆಗಳು.

  13. ತುಂಬಾ ಭಾವನಾತ್ಮಕವಾಗಿದೆ. ಕಥೆಯ ಪ್ರಾರಂಭದಲ್ಲಿ ಹೆಣ್ಣು ಮಕ್ಕಳು ಅಂತ ಹೇಳಿದಾಗ ಒಳ್ಳೆಯ ಮುಂದುವರಿಕೆ ಇರಬಹುದು ಅಂದುಕೊಂಡೆ ಆದರೆ ಕೊನೆಯಲ್ಲಿ ಕಣ್ಣೀರು ಬರುವ ದೃಶ್ಯ ಬಂತು. ನಿಮ್ಮ ಈ ಬರಹ ಮನಸ್ಸಿಗೆ ತುಂಬಾ ತಟ್ಟಿತು. 👏👏👏

    1. ಧರ್ಮಾನಂದ ಶಿರ್ವ

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ತುಂಬ ಧನ್ಯವಾದಗಳು ಮೇಡಂ

    2. ಈರಪ್ಪ ಎಂ ಕಂಬಳಿ

      ನಿಮ್ಮ ‘ಅನಾಥ’ ಕತೆಯನ್ನು ಇದೀಗ ಓದಿದೆ. ಆಪ್ತವಾದ ಕಾವ್ಯಾತ್ಮಕ ನಿರೂಪಣೆಯಿಂದಾಗಿ ಓದುಗರ ಅಂತ:ಕರಣ ಕಲಕುವ ಗುಣ ಹೊಂದಿದೆ. ಉತ್ತರ ಹಳ್ಳಿ ಮುಖ್ಯ ರಸ್ತೆಯ ಎಸ್ ಬಿ ಐ ಶಾಖೆಯಲ್ಲಿನ ನನ್ನ ಖಾತೆ ಮತ್ತು ಹತ್ತಿರದ ಅಪಾರ್ಟ್‌ಮೆಂಟ್ ನಲ್ಲಿಯೇ ನಿವೃತ್ತಿಯ ನಂತರದ ನನ್ನ ವಾಸ ಕಾಕತಾಳೀಯವಾಗಿ ಕಾಡಿದವು. ಹಾಗೆಯೇ, ಬಹುತೇಕರಿಗೆ ವೃದ್ಧಾಪ್ಯದಲ್ಲಿ ಒಂಟಿತನವೇ ದೊಡ್ಡ ಶತೃ ಕೂಡ. ಮೊನ್ನೆ ಊರ ಕಡೆ ಹೋದಾಗ ಸ್ವತಃ ಮಕ್ಕಳೇ ಹಡೆದವರನ್ನು ಹೊರಗೆ ಹಾಕಿದ ಕರುಣಾಜನಕ ಪ್ರಕರಣಗಳನ್ನು ಕಣ್ಣಾರೆ ನೋಡಿದೆ. ಎಲ್ಲೋ ಒಂದು ಕಡೆ ಕೌಟುಂಬಿಕ ಆರೋಗ್ಯ ಹದ ತಪ್ಪಿದೆ ಅನ್ನಿಸಿತು! . . . . ಚೆನ್ನಾಗಿ ಕುದುರಿದ ಕೈ. ನಿಮ್ಮಿಂದ ಇಂತಹ ಬರೆವಣಿಗೆಯನ್ನು ನಿರೀಕ್ಷಿಸುತ್ತೇನೆ. ಅಭಿನಂದನೆಗಳು.

  14. ಶ್ರೀನಿವಾಸ ನಾಯಕ್

    ತುಂಬಾ ಭಾವನಾತ್ಮಕ ವಿಷಯವನ್ನೊಳಗೊಂಡ ಕಥೆ. ಶುರುವಿನಿಂದ ಕೊನೆಯವರೆಗೂ ಓದುಗರನ್ನು ಹಿಡಿದಿಟ್ಟುಕೊಳ್ಳುವ ಸೊಗಸಾದ ನಿರೂಪಣೆ. ಬಹಳ ಇಷ್ಟವಾಯಿತು. ಟಿ.ವಿ ಅಯ್ಯಂಗಾರರಂತವರು ನಮ್ಮ ನಡುವೆ ಅದೆಷ್ಟೋ ಜನರಿರಬಹುದು. ನೀವು ನೀಡಿದ ಸಲಹೆ ಉತ್ತಮವಾಗಿತ್ತು. ತಮ್ಮ ಕೊನೆಯ ಜೀವನಕ್ಕೆ ಉಪಯೋಗವಾಗದಿದ್ದರೆ ಆ ಆಸ್ತಿ ಕೂಡ ವ್ಯರ್ಥ. ಬಹಳ ಚೆನ್ನಾಗಿತ್ತು. ಧನ್ಯವಾದಗಳು.

  15. ಈರಪ್ಪ ಎಂ ಕಂಬಳಿ

    ಮರೆತಿದ್ದೆ. ಅನಿವಾರ್ಯ ಇರುವಾಗ ವಾಸದ ಮನೆಯನ್ನು ಬ್ಯಾಂಕ್ ಗೆ ಅಡವಿಟ್ಟು ನೆರವು ಪಡೆವ ಸಂಗತಿ ಗೊತ್ತಿರಲಿಲ್ಲ ನನಗೆ. ನಿಮ್ಮ ಈ ಕತೆಯಿಂದಲೇ ಗೊತ್ತಾದದ್ದು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter