ಬಾನಂಗಣದಲ್ಲಿ ಬಣ್ಣದೋಕುಳಿ ಆಡುವ ಸೂರ್ಯನೆಡೆಗೆ ಆಗಾಗ ದೃಷ್ಟಿ ಹಾಯಿಸುತ್ತ ಅಂಗಳಕ್ಕೆ ನೀರು ಚಿಮುಕಿಸಿ ರಂಗೋಲಿ ಇಕ್ಕುವಾಗ ಮನ ತುಂಬೆಲ್ಲ ಹರುಷ. ದಿನದ ದುಡಮೆಗೆ ಮನ ಸಜ್ಜಾಗಿಸುತ್ತ ತೂಗಿ ತೊನೆದಾಡುವ ದಾಸವಾಳದ ಟೊಂಗೆ ಬಾಗಿಸಿ ಹೂ ಕೊಯ್ಯುವಷ್ಟರಲ್ಲಿ ತಪ್ಪದೇ ಕೇಳುತ್ತದೆ ಅವರ ‘ಮರ್ಲೆ ಕನಕಾಂಬರ,ಸ್ಯಾವಂತಿಗಿ ಮಾಲೇರಿ’..ರಾಗವಾದ ದನಿ.
ಎಲ್ಲೊ, ಯಾರೋ, ಯಾವುದೋ ಹಿತ್ತಲಿನಲ್ಲೋ, ಹೊಲದಲ್ಲೋ ಬೆಳೆಸಿದ ಬಿಡಿ ಹೂವುಗಳನ್ನು ಮಾಲೆಯಾಗಿಸಿ ಅಥವಾ ದಂಡೆಯಾಗಿಸಿ ಬುಟ್ಟಿಯಲ್ಲಿ ತುಂಬಿ ಓಣಿ ಓಣಿ ಸುತ್ತುವವರು… ಅವರೇ ಹೂವಾಡಗಿತ್ತಿಯರು….ಅವರ ಕೂಗಿಗೇ ಕಾತರಿಸಿ ಕಿವಿಯಾಗುವರು..ಚೌಕಾಸಿ ಮಾಡಿ, ಖರೀದಿಸಿ ದೇವರಿಗರ್ಪಿಸಿ ಧನ್ಯತೆ ಪಡೆಯುವವರು ಗ್ರಾಹಕರು.. ಮತ್ತದೇ ಬೆಳಗು ಮತ್ತದೇ ಕೂಗಿನ ಆವರ್ತನ. . ಹೂವಿನ ಚೆಲುವು, ಕೋಮಲತೆ, ಪರಿಮಳದೊಡನೆ ಒಡನಾಡುವ ಇವರನ್ನು ಕೋಮಲೆಯರೆನ್ನುವಂತಿಲ್ಲ.. ಬಲೇ ಗಟ್ಟಿಗಿತ್ತಿಯರು ಅವರು. ಕಾಲಿಗೆ ಚಕ್ರವಿದ್ದವರಂತೆ ನಾಲ್ಕಾರು ಕಿಲೋಮೀಟರ್ ಸುತ್ತುವವರು ಕೆಲವರಾದರೆ, ಇನ್ನೂ ಕೆಲವರು ದೇವಸ್ಥಾನ ದೆದುರು, ಸಂತೆಯಲ್ಲಿ ಸ್ಥಳ ಹಿಡಿದು ಧ್ಯಾನಸ್ಥರಂತೆ ಮಾಲೆ ಕಟ್ಟುತ್ತಲೇ ಮಾರುವವರು.
ಹೂವಾಡಗಿತ್ತಿಯರ ಕೂಗಿನೊಂದಿಗೇ ಸಾಮಾನ್ಯವಾಗಿ ಕೇಳುವುದು ಸೊಪ್ಪು, ತರಕಾರಿ ಮಾರುವವರದ್ದು. ನಾಟಿಕೊತ್ತಂಬರಿ, ಕರಿಬೇವು, ಹರಿವೆ, ಬಸಳೆ, ರಾಜಗಿರಿ, ಚಕೋತಾ, ಎನ್ನುವ ಸೊಪ್ಪು ಮಾಡುವವರ ಕೂಗು ಮೀರಿಸುವಂತೆ ಬೆಂಡೆಕಾಯಿ ಬದನೆಕಾಯಿ, ಅವರೇಕಾಯಿ, ಮೆಣಸಿನ ಕಾಯಿ, ಹೂಸೋಸು ಮಾರುವವರೂ ಕೂಗುತ್ತಾ ಬರುತ್ತಾರೆ. ‘ಇದು ನಾನು ಖಾಯಂ ಹೂವ್ಹಾಕಾ ಮನೆ, ಆ ಮನೆಯವ್ರು ನನ್ನ ತಾಕೇ ಸೊಪ್ಪು ಖರೀದಿ ಮಾಡ್ತಾರೆ…ಎಂಬ ಹೆಮ್ಮೆಯ ನಂಟು ಬೇರೆ!. ಹೀಗೊಂದು ಬಗೆಯ ಬಾಂಧವ್ಯ ಬೆಳೆಸಿಕೊಳ್ಳುವವರ ಮಾತುಕತೆ, ಮಾರುವ ಕೌಶಲ ವೂ ವಿಭಿನ್ನವಾದದ್ದು. ‘ಹೊಲದಾಗಿಂದ ನಿನ್ನೆ ಸಂಜಿಕೆ ಹರಿದಿದ್ದು. ಪ್ರಿಜ್ಜಿನಾಗೆ ಇಟ್ಟರೆ ಹದಿನೈದು ದಿನ್ವಾದ್ರೂ ಈ ಗುಲಾಬಿ ಹೂವಾ ಕೆಡಾಕಿಲ್ಲಾ, ದಿನಾ ಅಷ್ಟಷ್ಟು ತಗ್ದು ಹಾಕಿ ಪೂಜೆ ಮಾಡ್ರವ್ವಾ’ ಎನ್ನುತ್ತಾರೆ!
‘ಅವರೇಕಾಳು ತಕಳಿ.. ಉಪ್ಪಿಟ್ಟು ಮಾಡಾಕೆ ಶ್ಯಾನೆ ಚೊಲೋ ಆಗ್ತದೆ. .. ಘಮಾ ಘಮಾ ಉಪ್ಪಿಟ್ಟು ತಿಂದ ಮ್ಯಾಕೆ ನಿಮ್ಮೆಜಮಾನ್ರೂ ಖುಸಿ ಆಗಿ ಮೈಸೂರು ಸಿಲಕ್ ಸೀರಿನೇ ಕೊಡುಸ್ತಾರೆ!’ ಎಂದು ಮೈಸೂರಿನಲ್ಲಿ ಅಜ್ಜಿಯೊಬ್ಬಳು ನುಡಿದಿದ್ದು, ‘ಜವಾರಿ ಚೌಳಿಕಾಯಿ ಇಳಕಲ್ ರೇಷ್ಮಿ ಸೀರಿ ಹಾಂಗ ಐತಿ, ಒಯ್ರೀ ಬಾಯಾರ’ ಎಂದ ಧಾರವಾಡದ ಸಂತೆಯ ಅಜ್ಜಿಯ ಮಾತುಗಳ ನೆನಪಾದರೆ ಇಂದಿಗೂ ತುಟಿಯ ಮೇಲೊಂದು ಮಂದಹಾಸ ಬಂದೇಬಿಡುತ್ತದೆ..
ಇಂತಹ ಅದೆಷ್ಟೋ ಜನರು ಶಾಲೆಯ ಮುಖವನ್ನೇ ಕಾಣದವರು. ಆದರೆ ದುಡಿಮೆಯ ಶಾಲೆಯಲ್ಲಿ ಬದುಕೆಂಬ ಪಾಠ ಕಲಿತವರು. ಹೆಚ್ಚಿನವರಿಗೆ ಮಾರಾಟ ಮಾಡಿ ಬಂದ ಹಣ ಜೀವನ ನಿರ್ವಹಣೆಯ ಆದಾಯಮೂಲ. ಅತಿ ಚಿಕ್ಕ ಹಿಡುವಳಿದಾರರಿಗೆ ಬೆಳೆದ ಸೊಪ್ಪು,ತರಕಾರಿ, ಹೂವನ್ನು ಮಧ್ಯವರ್ತಿಗಳಿಗೊಪ್ಪಿಸದೇ ನೇರವಾಗಿ ಗ್ರಾಹಕರಿಗೆ ಮಾರಿ ಲಾಭ ಗಳಿಸುವ ಅವಕಾಶ.. ನನಗೋ ಇಂತಹ ಮಾರಾಟ ಮಾಡುವ ಹೆಂಗಸರ ಬದುಕು ಅರಿಯುವ ಕುತೂಹಲ.. ಒಬ್ಬ ಹಣ್ಣು ಹಣ್ಣು ಮುದುಕಿಯೊಬ್ಬಳು ಮನೆಯ ಮುಂದೆ ಹಣ್ಣು ಮಾರಲು ಬಂದಿದ್ದಳು. ‘ಯಾಕವ್ವಾ ಈ ವಯಸ್ಸಿನ್ಯಾಗ ಇಂಥಾ ಪರಿ ಭಾರದ ಹಣ್ಣಿನ ಬುಟ್ಟಿ ಹೊತ್ತ ತಿರಗತೀದಿ. ಮನ್ಯಾಗ ದುಡಿಯಾವ್ರು ಯಾರೂ ಇಲ್ಲೇನು?’ ಕೇಳಿದೆ.
“”ಮೂರು ಮಕ್ಕಳು, ಸೊಸೆದೀರು ಎಲ್ಲಾರೂ ದುಡಿತಾರ್ರೀ. ನನಗ ಹೋಗಬ್ಯಾಡ ಅನತಾರ ಖರೇ. ಆದ್ರ ಕೆಲಸಾ ಬಿಟ್ಟು ಮನಿ ಮೂಲ್ಯಗ ಕುಂತ್ರ ಮರ್ವಾದಿ ಇರಂಗಿಲ್ರಿ. ನಲವತ್ತು ವರಸಾತ್ರೀ ಹಿಂಗ ಹಣ್ಣ ಮಾರಾಕ್ಹತ್ತಿ. ಸೊಂಟಕ್ಕೆ ಸಿಗಸಿದ ಚೀಲದಾಗ ಯಾವಾಗ್ಲೂ ರೊಕ್ಕ ಝಣಾ ಝಣಾ ರೊಕ್ಕಾ ಆಡತಿದ್ರ ನನಗ ಸಮಾಧಾನ ಇರ್ತತಿ. ದಿಂಬಿಗೆ ತೆಲಿ ಹಚ್ಚಿದಾಗ ನಿದ್ದಿ ಹತ್ತೈತಿ. ನಿಮ್ಮಂಥವ್ರ ಹತ್ತ ಮಂದಿಗೂಡ ಮಾತಾಡಿ ಕಷ್ಟಾ, ಸುಖಾ ಮಾತಾಡಿಕೊಂತ, ಯಾರ್ಯಾರ್ಯೋ ಕೊಟ್ಟ ನೀರು, ಚಾ ಕುಡಕೊಂತ ಊರು ಸುತ್ತೂದ್ರಾಗಿನ ಸಮಾಧಾನ ಮನ್ಯಾಗಿದ್ರೆ ಎಲ್ಲಿ ಬರ್ತತ್ರೀ?ಭಾಳ ಮಾತಾಡಿದ್ರ. ನಮ್ಮತ್ತಿ ಒಟಾ ಒಟಾ ಮಾಡಾಡಿ ತೆಲಿ ಚಿಟ್ಟ ಹಿಡಸ್ತಾಳ ಅನತಾರ, ಚಾ ಚಾ ಅಂತ ಹತ್ತ ಸರ್ತೆ ಕೇಳತಾಳ ಅಂತ ಸೊಸದೀರ ಅನ್ನಂಗಿಲ್ಲೇನ್ರೀ? ಹಾಂಗ ಅನ್ನಿಸಿಕೊಂತ ನಮ್ಮೂರಿನ್ಯಾಗ ಭಾಳ ಮುದಕ್ಯಾರು ಕುಂತಾರ್ರಿ. ಅವೆಲ್ಲ ನಮಗ ಪಾಠರೀ.. ಆದ್ರ ನನಗ ಯಾರೂ ಹಾಂಗ ಅನ್ನಂಗಿಲ್ಲ.. ಸಂತಿ ಸಾಮಾನಾ ತರಾಕ ವಾರಾ ವಾರಾ ರೊಕ್ಕಾ ಕೊಡತೇನಿ, ಹಬ್ಬಾ ಹುಣ್ಣವಿಗಿ ಮನ್ಯಾಗಿನ ಮಂದಿಗಿ ಚುಲೊ ಚುಲೋ ಅರಬಿ ನನs ಕೊಡಸ್ತೀನ್ರೀ!. ಜೀವ ಇರೂ ಮಟಾ ದುಡಕೊಂತಿರಬೇಕ್ರೀ… ಎಂದಾಗ ನಿಜಕ್ಕೂ ನನಗೆ ಬೆರಗುಂಟಾಯಿತು. ಅದೆಷ್ಟು ಸರಳವಾಗಿ ಬದುಕಿನ ಸತ್ಯವನ್ನು ಅರ್ಥೈಸಿಕೊಳ್ಳುವ ಕಲೆಗಾರಿಕೆ, ದುಡಿಮೆಗೊಡ್ಡಿಕೊಂಡು ಬದುಕನ್ನೆದುರಿಸುವ ಎದೆಗಾರಿಗೆ ಇಂತಹ ಜನರಿಗಿರುತ್ತದೆ!. .( ಎಷ್ಟೋ ವಿದ್ಯೆ ಕಲಿತವರಿಗೂ ಇಂತಹ ವಿಷಯಗಳು ಅರ್ಥ ವಾಗುವುದಿಲ್ಲ. ಖಿನ್ನತೆಗೊಳಗಾಗುತ್ತಾರೆ.)
ತೂಕದಲ್ಲಿ, ಅಳತೆಯಲ್ಲಿ ಕೆಲವರು ಅಲ್ಪ, ಸ್ವಲ್ಪ ಮೋಸ ಮಾಡುವವರೂ ಇಂತಹ ಮಾರಾಟಗಾರರ ನಡುವೆ ಇದ್ದಾರೆ… ಆದರೂ ಅಷ್ಟಿಷ್ಟಾದರೂ ಇಂತಹ ಜನರ ಬಳಿ ಖರೀದಿಸಿ ಪ್ರೋತ್ಸಾಹಿಸುವುದೂ ಮಾನವೀಯತೆಯ ಭಾಗವೇ ಎಂದು ನನಗನ್ನಿಸುತ್ತದೆ.. ಶ್ರಮಜೀವಿಗಳಾದ ರೈತರನ್ನೂ, ಗ್ರಾಹಕರನ್ನೂ ತಮ್ಮ ಪರಿಶ್ರಮದಿಂದ ಜೋಡಿಸುವ ಕೊನೆಯ ಕೊಂಡಿಯಂತೆ ಈ ಮಾರಾಟಗಾರರು ಕಾಣಿಸುತ್ತಾರೆ…ನಾನಂತೂ ಇಂಥವರಿಂದ ಖರೀದಿಸುತ್ತೇನೆ. ನೀವು?….
– ಮಾಲತಿ ಹೆಗಡೆ
1 thought on “ಕೊನೆಯ ಕೊಂಡಿಗಳು”
ಉತ್ತರಕರ್ನಾಟಕದ ಆಡುಭಾಷೆಯ ಸೊಗಡಿನೊಂದಿಗೆ ಮೂಡಿಬಂದ ಲಘುಬರಹ ಚಲೋ ಐತ್ರಿ….
ಜೀವನಪಾಠವನ್ನು, ಬದುಕಿನ ಕಷ್ಟಸುಖಗಳನ್ನು ಅಂತಹವರಿಂದಲೇ ಕಲಿಯಬೇಕು. ಅಲ್ಲೊಂದು ನೈಜತೆಯೊಂದಿಗೆ ಸೊಗಸಿರುತ್ತದೆ.
ಅಭಿನಂದನೆಗಳು