ಕನ್ನಡ ನವ್ಯ ಸಾಹಿತ್ಯದ ಸಂದರ್ಭದಲ್ಲಿ ಬರೆಯಲಾರಂಭಿಸಿದ ಕೆ.ವಿ. ತಿರುಮಲೇಶರು ಇದುವರೆಗೆ ಕವಿತೆ, ಕತೆ, ವಿಮರ್ಶೆ ಮತ್ತು ಅನುವಾದ ಕ್ಷೇತ್ರಗಳಲ್ಲಿ ಗಮನಾರ್ಹವಾದ ಸಾಧನೆಯನ್ನು ಮಾಡಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಭಾಷಾವಿಜ್ಞಾನಿಯಾಗಿ ಬಹುಕಾಲ ಕನ್ನಡನಾಡಿನ ಹೊರಗಿದ್ದುಕೊಂಡೇ ಬರೆದ ತಿರುಮಲೇಶರು ಮೂಲತಃ ಕಾಸರಗೋಡಿನ ಕಾರಡ್ಕ ಗ್ರಾಮದವರಾಗಿದ್ದು ಈಗ ಹೈದರಾಬಾದಿನಲ್ಲಿ ನೆಲೆಸಿದ್ದಾರೆ. ಅವರ ‘ಅಕ್ಷಯ ಕಾವ್ಯ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವ ವಿಷಯ.
ಕೆ.ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ವು ಕನ್ನಡ ಸಾಹಿತ್ಯದಲ್ಲೇ ಹೊಸ ಪ್ರಯೋಗ. ಧುಮ್ಮಿಕ್ಕಿ ಹರಿಯುವ ನದಿಯು ತನ್ನ ಸೆಳೆತಕ್ಕೆ ಸಿಕ್ಕಿದ್ದೆಲ್ಲವನ್ನೂ ಸ್ವೀಕರಿಸುವಂತೆ ಈ ಕಾವ್ಯ ನದಿಯು ಹಿರಿಕಿರಿದೆಂಬ ಭೇದವಿಲ್ಲದೆ ಸಕಲ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ರಭಸದಿಂದ ಹರಿದಿದೆ. ಎಲ್ಲೂ ನಿಲ್ಲದ ಈ ಪ್ರವಾಹವು ಒಂದರ್ಥದಲ್ಲಿ ಬತ್ತಲಾರದ ಗಂಗೆ. ಹಾಗಾಗಿ ಇದು ‘ಅಕ್ಷಯ ಕಾವ್ಯ’
ಈ ಕಾವ್ಯಕ್ಕೆ ಕೇಂದ್ರವಸ್ತು ಇಲ್ಲ. ಕಾವ್ಯವಿಡೀ ಕೇಂದ್ರವೇ. ಕ್ರಮಬದ್ಧತೆ-ಕಟ್ಟುಪಾಡುಗಳಿಗೆ ಒಗ್ಗದ, ಪ್ರತ್ಯೇಕ ಸೂತ್ರ-ಶೀರ್ಷಿಕೆಗಳಿಲ್ಲದ ಈ ಕಾವ್ಯವನ್ನು ಓದಿ ಆಸ್ವಾದಿಸಲು ಯಾವ ತೊಡಕೂ ಇಲ್ಲ. ಎಲ್ಲೇ ಓದನ್ನು ಆರಂಭಿಸಿ ಎಲ್ಲೇ ನಿಲ್ಲಿಸಿದರೂ ಕಾವ್ಯದ ಆಸ್ವಾದನೆಗೆ ತೊಂದರೆಗುವುದಿಲ್ಲ. ಕಾವ್ಯವನ್ನು ಇಡಿಯಾಗಿ ಅಥವಾ ಬಿಡಿಬಿಡಿಯಾಗಿ ಓದಿದರೂ ಕಾವ್ಯದ ತಾತ್ವಿಕತೆಯನ್ನು ಗ್ರಹಿಸಲು ಕಷ್ಟವಾಗುವುದಿಲ್ಲ.
‘ಅಕ್ಷಯ ಕಾವ್ಯ’ ಹೇಗಿದೆ? ಅದರೊಳಗೆ ಏನಿದೆ? ಎಂಬ ಪ್ರಶ್ನೆಗೆ ಎಲ್ಲವೂ ಇದೆ ಎಂಬುದೇ ಉತ್ತರ. ಮನುಕುಲದ ವರ್ತನೆ, ಅವರ ಚರ್ಯೆಗಳು, ಕರ್ಮಪ್ರವೃತ್ತಿ, ಮನುಷ್ಯ ನಡೆದು ಬಂದ ದಾರಿ ಮತ್ತು ಇನ್ನು ಮುನ್ನಡೆಯಬೇಕಾದ ಹಾದಿಗಳನ್ನು ಕುರಿತ ಚಿಂತನೆ ದೇಶ ಕಾಲಾತೀತ ನೆಲೆಯಲ್ಲಿ ವ್ಯಕ್ತವಾಗಿದೆ. ಹಾಗಾಗಿ ಈ ಕಾವ್ಯವು ಮನುಷ್ಯ ಜೀವನದ ಆಗುಹೋಗುಗಳು ಮತ್ತು ವಾಸ್ತವದ ಪ್ರತಿರೂಪವಾಗಿದೆ. ಕೇವಲ ಭ್ರಮೆಯಲ್ಲಿ ಕಳೆದುಹೋಗುವ, ಮಹಾ ಮಹಾ ಸಿದ್ಧಾಂತಗಳಿಂದ ಭಾರವಾಗಿರುವ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಜೀವನೋತ್ಸಾಹ ಮತ್ತು ಪ್ರೀತಿಗಳನ್ನು ಪ್ರತಿಬಿಂಬಿಸುವ ಇಂಥ ಕಾವ್ಯದ ಅಗತ್ಯವಿದೆ.
ಕಾವ್ಯದ ಭಿತ್ತಿಯಲ್ಲಿ ಜೀವನದರ್ಶನ ಅರಳಿದೆ. ಸಿದ್ಧಶೈಲಿಗೆ ಜೋತುಬೀಳದ ಕಾವ್ಯದಲ್ಲಿ ಸಂದರ್ಭಕ್ಕೆ ತಕ್ಕಂತೆ ಪಾತ್ರ, ಶೈಲಿ ಮತ್ತು ವಿವರಗಳು ಬದಲಾಗುತ್ತಾ ಹೋಗುತ್ತವೆ. ಪಾಶ್ಚಾತ್ಯ ಸಾಹಿತ್ಯ ಕೃತಿ-ಕರ್ತೃಗಳ ಪ್ರಸ್ತಾಪ ಬಹಳಷ್ಟಿದೆ. “ಇಲ್ಲಿನ ಕಾವ್ಯ ಖಂಡಗಳನ್ನು ಓದುತ್ತ ಓದುತ್ತ ಜೀವನವೆಂಬ ಮಹಾಕಾವ್ಯದ ದರುಶನ ಸಿಕ್ಕಿದರೆ ಆಶ್ಚರ್ಯವಿಲ್ಲ. ಅದರಲ್ಲಿ ಈ ಬದುಕಿನ ಗೂಢಗಳ ವಿಸ್ಮಯದ ಬಗ್ಗೆ ಚಿಂತಿಸಿದ ಜಗತ್ತಿನ ಅನೇಕಾನೇಕ ದಾರ್ಶನಿಕ ಹೊಳಹುಗಳ ಉಲ್ಲೇಖವೂ ಇದೆ. ಶೋಧನೆ ಮಾತ್ರ ಮುಂದುವರಿಯುತ್ತಲೇ ಇರುತ್ತದೆ. ಯಾವ ದರ್ಶನವೂ ಸಮಗ್ರವಾಗಲಾರದು. ಪರಿಪೂರ್ಣವಾಗಲಾರದು. ಅದಕ್ಕೆ ಕೊನೆಯೆಂಬುದೇ ಇಲ್ಲ. ಈ ಕಾರಣದಿಂದ ‘ಅಕ್ಷಯ ಕಾವ್ಯ’ದ ಓದು ಪರಿಪೂರ್ಣವಾದ ಅನುಭವವನ್ನು ಕೊಡುತ್ತದೆ. ಅನುಭಾವವನ್ನು ಕಲಿಸುತ್ತದೆ. ಕವಿಯೊಳಗಿನ ದಾರ್ಶನಿಕ, ದಾರ್ಶನಿಕನೊಳಗಿನ ಕವಿ ಸಮರಸದಿಂದ ಬೆರೆತ ಹದ ಈ ಕಾವ್ಯದ್ದು” ಎನ್ನುವ ಡಾ. ಯು. ಮಹೇಶ್ವರಿ ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು (ಗಡಿನಾಡಿನ ಬಾನಾಡಿ ಪ್ರತಿಭೆ ಡಾ. ಕೆ.ವಿ. ತಿರುಮಲೇಶ್- ಪುಟ 13) ಹೋಮರ್, ದೋಸ್ತೋವ್‍ಸ್ಕಿ, ಕಾಫ್ಕ, ಯೇಟ್ಸ್, ಬ್ರಾಖ್, ಷಿಲ್ಲರ್ ಮೊದಲಾದವರು ತಮ್ಮ ತತ್ವ ಚಿಂತನೆಗಳೊಂದಿಗೆ ಬಂದು ಹೋಗುತ್ತಾರೆ. ಈ ಸಾಹಿತಿಗಳ ಕೃತಿಗಳನ್ನು ಓದುವ ಮೂಲಕ ಇವರ ತತ್ವಚಿಂತನೆಗಳನ್ನು ಅರಗಿಸಿಕೊಳ್ಳುವುದು ಸಾಮಾನ್ಯ ಜನರ ಪಾಲಿಗೆ ತೀರಾ ಕಷ್ಟ. ಇಂಥ ಸಂದರ್ಭದಲ್ಲಿ ಅವರ ಬರಹಗಳ ಮರ್ಮವನ್ನರಿತ ತಿರುಮಲೇಶರು ಕೃತಿಗಳಲ್ಲಿ ಅಡಕಗೊಂಡ ತತ್ವಗಳನ್ನು ಸರಳವಾಗಿ ನಿರೂಪಿಸುವಾಗ ಪಾಶ್ಚಾತ್ಯ-ಪೌರಾತ್ಯ ಭೇದವಿಲ್ಲದೆ ಇವರೆಲ್ಲರೂ ಓದುಗರಿಗೆ ಹತ್ತಿರವಾಗುತ್ತಾರೆ.
‘ಅಕ್ಷಯ ಕಾವ್ಯ’ವನ್ನು ರಚಿಸುವುದರ ಮೊದಲೇ ತಿರುಮಲೇಶರು ಪ್ರಯೋಗಶೀಲರಾಗಿಯೇ ಮುಂದುವರಿದವರು ಎಂದು ಅವರ ಹಿಂದಿನ ಸಂಕಲನಗಳನ್ನು ಅವಲೋಕಿಸಿದಾಗ ತಿಳಿಯುತ್ತದೆ. ‘ಅವಧ’ ಮತ್ತು ‘ಪಾಪಿಯೂ’-ಈ ಎರಡು ಕೃತಿಗಳನ್ನು ಮುಖ್ಯವಾಗಿಟ್ಟುಕೊಂಡು ಡಾ. ಸಿ. ಎನ್. ರಾಮಚಂದ್ರನ್ ಅವರು ತಿರುಮಲೇಶರ ಕಾವ್ಯದ ಮುಖ್ಯ ಕಾಳಜಿಗಳನ್ನು ಹೀಗೆ ಗುರುತಿಸುತ್ತಾರೆ. “ಕಾಲ ಮತ್ತು ವ್ಯಕ್ತಿಗಳ ನಡುವಿನ ಸಂಕೀರ್ಣ ಸಂಬಂಧ ಅಥವಾ ಸಂಬಂಧವಿಲ್ಲದಿರುವುದು ಇವರನ್ನು ಕಾಡುವ ಪ್ರಶ್ನೆ” (ಕೆ.ವಿ.ತಿರುಮಲೇಶರ ಸಾಹಿತ್ಯ- ಪುಟ 67 ಸಂ: ಗಿರಡ್ಡಿ ಗೋವಿಂದರಾಜ) ಇದಕ್ಕೆ ಸಮರ್ಥನೆಯನ್ನು ಒದಗಿಸುವ ಕವಿತೆಗಳು ಈ ಕೃತಿಗಳಲ್ಲಿ ಹೇರಳವಾಗಿ ದೊರಕುತ್ತವೆ.
ತಿರುಮಲೇಶರ ಕವಿತೆಗಳಲ್ಲಿ ಬರುವ ಕಾಲ-ದೇಶಗಳ ವ್ಯಾಪ್ತಿ ವಿಸ್ತಾರಗಳ ಬಗ್ಗೆ ಓ. ಎಲ್ ನಾಗಭೂಷಣ ಸ್ವಾಮಿಯವರು ಹೇಳಿದ ಮಾತುಗಳು ಪರಿಶೀಲನಾರ್ಹವಾಗಿವೆ.
“ಅವರ ಕವಿತೆಯಲ್ಲಿ ದೇಶವಿಸ್ತಾರ ಮತ್ತು ಕಾಲವಿಸ್ತಾರಗಳೆರಡೂ ಓದುಗರಿಗೆ ಎದುರಾಗುತ್ತವೆ. ದೇಶವೆನ್ನುವುದು ಮೊದಮೊದಲ ನವ್ಯಚಹರೆಯ ಪದ್ಯಗಳಲ್ಲಿ ಕೇವಲ ಅಂತರಂಗದ ಭಾವದೇಶಕ್ಕಷ್ಟೇ ಸೀಮಿತವಾಗಿದ್ದರೆ ಅದೇ ಕಾಲದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಂಡು ಮುಂದೆ ಹೇರಳವಾಗಿ ದೊರೆಯುವ ಪ್ರದೇಶ ವಿಸ್ತಾರವಿದೆ. ಕುಂಬಳೆಯಂಥ ಪುಟ್ಟ ಊರು, ಪಟ್ಟಣದಿಂದ ಆರಂಭವಾಗಿ ಕೇರಳದ ನಾಡನ್ನೂ ಒಳಗೊಂಡು ಹೈದರಾಬಾದ್, ಹಿಮಾಲಯದ ಹೃಷಿಕೇಶ, ಇಂಗ್ಲೆಂಡ್, ಯುರೋಪಿನ ದೇಶಗಳವರೆಗೆ ಈ ದೇಶ ವಿಸ್ತಾರ ಹಬ್ಬುತ್ತದೆ. ಮಹಾಭಾರತದ ಕಾಲ, ಗೌತಮ ಅಹಲ್ಯೆಯರ ಪೌರಾಣಿಕ ಕಾಲ, ಈಜಿಪ್ತು ಮೆಸಪೊಟೋಮಿಯಾಗಳ ನಾಗರಿಕತೆಯ ಆರಂಭದ ಕಾಲ ಈ ಎಲ್ಲಾ ವಿಸ್ತಾರಗಳಲ್ಲಿ ತಿರುಮಲೇಶರ ಕಾವ್ಯ ವ್ಯವಹರಿಸುತ್ತದೆ. ಕಾಲ ಯಾವುದಾದರೂ ದೇಶ ಯಾವುದಾದರೂ ವಸ್ತುವನ್ನು ಗ್ರಹಿಸುವ ಪ್ರಜ್ಞೆಯ ಸಂದಿಗ್ಧ ಸ್ಥಿತಿ ಮತ್ತು ತೀರ್ಮಾನದ ನೆಲೆಯನ್ನು ಒಲ್ಲದ ಮನೋಭಾವ ಹಾಗೆಯೇ ಇರುತ್ತದೆ” (ಕೆ.ವಿ.ತಿರುಮಲೇಶರ ಸಾಹಿತ್ಯ- ಪುಟ 5- ಸಂ: ಗಿರಡ್ಡಿ ಗೋವಿಂದರಾಜ)
ಇಂಥ ಕಾವ್ಯ ಪ್ರಜ್ಞೆಯನ್ನು ಹೊಂದಿರುವ ತಿರುಮಲೇಶರ ‘ಅಕ್ಷಯ ಕಾವ್ಯ’ವು ತನ್ನದೇ ಆದ ‘ತಿರುಮಲೇಶತನ’ದಿಂದ ಸಮೃದ್ಧವಾಗಿದೆ.
‘ಅಕ್ಷಯ ಕಾವ್ಯ’ವು ತಿರುಮಲೇಶರ ಕಾವ್ಯದ ಕಾಳಜಿಯನ್ನು ವಿಸ್ತಾರವಾಗಿ ಬಿಚ್ಚಿಡುತ್ತದೆ. ಮನುಷ್ಯ ಪ್ರಪಂಚವೇ ಇಲ್ಲಿನ ವಸ್ತು. ಇವರ ‘ಮುಖಾಮುಖಿ’, ‘ಪಾಪಿಯೂ’ ಸಂಕಲನಗಳನ್ನು ಓದಿದವರಿಗೆ ‘ಅಕ್ಷಯ ಕಾವ್ಯದ ವಸ್ತು ಪ್ರಪಂಚ, ಕವಿತೆಯನ್ನು ಹೇಳುವ ರೀತಿ ಅಪರಿಚಿತವೆನಿಸಲಾರದು. ವಿಶಾಲವಾದ ಓದು ಮತ್ತು ತತ್ವಚಿಂತನೆಗಳಿಂದ ಪಕ್ವಗೊಂಡ ಕವಿಯ ಮನಸ್ಸು ಈ ಬೃಹತ್ ಕಾವ್ಯವನ್ನು ಸೃಷ್ಟಿಸಿದೆ.
ಓದು ಈ ಕಿಡಿಗೇಡಿಗಳ ಬರಹ
ಅರಸರ ಶಾಸನಗಳಂತಿರುವ ಗ್ರಾಫಿಟಿಗಳ
ಸತ್ಯವಾಕ್ಯಗಳಾಗಿದ್ದರೆ ಅವನ್ನು
ಶಿಲೆಯಲ್ಲಿ ಯಾಕೆ ಬರೆಯಬೇಕಿತ್ತು ನೀರಲ್ಲಿ
ಬರೆಯಬೇಕಿತ್ತು ಶಾಶ್ವತ (ಪುಟ 15)
ಎಂದು ಬರೆಯುವ ತಿರುಮಲೇಶರ ಕಾವ್ಯವು ಪುರಾಣ, ಇತಿಹಾಸ, ಮಹಾಕಾವ್ಯ, ತತ್ವಜ್ಞಾನ, ಸಮುದ್ರ, ಅನೇಕ ದೇಶ ಭೂಖಂಡಗಳನ್ನೊಳಗೊಂಡು ಅವರವರ ಓದು, ಅನುಭವ ಮತ್ತು ಸಂವೇದನೆಗೆ ತಕ್ಕಂತೆ ರೂಪುಗೊಳ್ಳುತ್ತಾ ಹೋಗುತ್ತದೆ. ಇದುವರೆಗಿನ ಕನ್ನಡದ ಮಹಾಕಾವ್ಯಗಳಲ್ಲಿರುವಂತೆ ಒಂದು ಕತೆ ಇಲ್ಲ. ಆದ್ದರಿಂದ ಇದು ಓದುಗರ ಮನದಲ್ಲಿ ರೂಪುಗೊಳ್ಳಬಹುದಾದ ಕತೆಯೂ ಹೌದು; ಕವಿತೆಯೂ ಹೌದು.
“ನೋಡಿ ಅವ ಎದ್ದೇ ಬಿಟ್ಟ. ನಾನಿನ್ನು ಕೂತಿರಲು ಸಾಧ್ಯವೇ ಇಲ್ಲ” ಎಂಬ ಸಾಲು ಅಥವಾ ಧ್ವನಿಯು ಏನೆಂದರಿಯದೆ ಏಕೆಂದರಿಯದೆ ಕಚ್ಚಾಡುವ ಮಂದಿಯ ತವಕ, ತಲ್ಲಣ ಮತ್ತು ದಮನಕಾರಿ ಮನೋವೃತ್ತಿಯನ್ನು ಬಯಲಿಗೆಳೆಯುತ್ತದೆ. ಈ ಕಾವ್ಯಕ್ಕೆ ಮನುಷ್ಯರ ಮನಸ್ಸಿನ ಮೂಲ ರಾಗ ಭಾವಗಳ ಕುರಿತು ವಿವಿಧ ನೆಲೆಗಳಲ್ಲಿ ಚಿಂತನೆಗೊಳಪಡಿಸುವ ಧ್ವನಿ ಪ್ರಾಪ್ತವಾಗಿದೆ. ಇಂಗ್ಲೆಂಡಿನಿಂದ ತಂದ ಮಿರಮಿರ ಮಿಂಚುವ ಸ್ವಚ್ಛ ಬೂಟುಗಳು ಊರಿನ ಕೊಳೆತ ಸಸ್ಯಾವಳಿಯ, ನೊಣಹಾರುವ ಗಲೀಜು ಬೀದಿಗೆ ಹೊಂದಲಾರದ ಪರಿಸ್ಥಿತಿಯು ಹಳ್ಳಿ ನಗರಗಳ ನಡುವಿನ ಬಿರುಕನ್ನು ಒಂದೇ ಮಾತಿನಲ್ಲಿ ವಿವರಿಸುತ್ತದೆ. ಕಾಚಿಗುಡ ನಿಲ್ದಾಣದಲ್ಲಿನ ಎಲ್ಲ ಹೊಸ ಯಾತ್ರಿಕರು, ಆದರೂ ಹೊಸದಾಗಿರದ ಅವರ ಮುಖಭಾವ ಎಲ್ಲೆಲ್ಲೋ ಎಷ್ಟೋ ಸಾರಿ ಕಂಡಂತೆನಿಸುವ ಭಾವಗಳೆಲ್ಲವೂ ಹೇಳಿಕೊಳ್ಳಲಾಗದ ತುಡಿತ, ಸಂಬಂಧಕ್ಕೆ ತೆರೆದುಕೊಳ್ಳಬಯಸುವವನ ಎದೆಯ ಮಿಡಿತಗಳನ್ನು ದಾಖಲಿಸುತ್ತದೆ. ಅಂತೆಯೇ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬ ಮನೋಸ್ಥಿತಿಯನ್ನೂ, ಗುಂಪಿನಲ್ಲಿ ಏಕಾಕಿಯೆನಿಸಿಕೊಳ್ಳುವ ಅವಸ್ಥೆಯನ್ನೂ ಕಟ್ಟಿಕೊಡುತ್ತದೆ. ಮಗಳ ಸ್ಕೂಲ್ ಬ್ಯಾಗಿನೊಳಗಿನ ಹಕ್ಕಿಯ ಗರಿ, ಒಣಹೂವಿನ ದಳ, ಪರಿಮಳದ ರಬ್ಬರ್‍ಗಳು ಬದಲಾಗಿ ಕ್ರಮೇಣ ಬೇರೇನೋ ವಸ್ತುಗಳು ಬರುವುದು ಜಗತ್ತಿನ ಬೆಡಗು ಬೆರಗುಗಳು ಮತ್ತು ಮಾನವೀಯ ಸಂಬಂಧಗಳತ್ತ ವ್ಯಕ್ತಿಯೊಬ್ಬನು ತೋರುವ ಅಗಾಧ ವಿಸ್ಮಯದ ಪ್ರತೀಕ. ಅಂತೆಯೇ ಪ್ರತಿ ತಂದೆಯೂ ಜೋಕರ್ ಎನಿಸಿಕೊಳ್ಳುವುದು, ಜೊತೆಯಾಗಿ ಬಂದ ರಾಜ ಮತ್ತು ವಿದೂಷಕ ಕೊನೆಗೆ ಒಬ್ಬನೇ ಆಗಿಬಿಡುವುದು ಬದುಕಿನ ವ್ಯಂಗ್ಯ.
ಹಾದಿಯ ನಡುವೆ ರೋಡ್ ರೋಲರ್ ನಿಂತು ಬಿಡುವುದು, ಎಷ್ಟು ಎಳೆದರೂ ಬರದೇ ಇದ್ದಾಗ “ಕ್ರಮೇಣ ಮಾರ್ಗ ಕ್ರಮಿಸದೆ ಇದ್ದೀತೆ” ಎಂಬ ಒಂದೇ ನಂಬಿಕೆಯಲ್ಲಿ ವ್ಯಕ್ತಿಯು ದೂರಕ್ಕೆ ದೃಷ್ಟಿ ಹಾಯಿಸುವುದು- ಮನುಷ್ಯರ ತಟಸ್ಥ ಬದುಕಿಗೊಡ್ಡಿದ ಸಮರ್ಥ ರೂಪಕ. ಜೀವನದ ಹಾದಿಯಲ್ಲಿ ಎದುರಾಗುವ ಒತ್ತಡಗಳ ನಡುವೆ ಎದ್ದು ಕಾಣುವ ಭರವಸೆಯ ಪ್ರತೀಕ. ಬದುಕಿನಲ್ಲಿ ನಿತ್ಯವೂ ಕಾಣುವ ಇಂಥ ಅನುಭವಗಳು ಪರಿಚಿತವೆಂದೆನಿಸಿದರೂ ಸಾಮಾನ್ಯ ಸಂಗತಿಯ ಮೂಲಕ ಜೀವನಕ್ಕೆ ಬೇಕಾದ ದಾರ್ಶನಿಕ ಹೊಳಹುಗಳನ್ನು ಹೊಳಪಿಸುವ ಕ್ರಮ ನಿಜಕ್ಕೂ ಬೆರಗುಗೊಳಿಸುವಂಥದ್ದು. ಸದಾ ಆಶಾವಾದಿಯಾಗಿರುವ ತಿರುಮಲೇಶರೊಳಗಿನ ದಾರ್ಶನಿಕ ಯಾವತ್ತೂ ಜಾಗೃತನಾಗಿರುತ್ತಾನೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ.
ನೆನಪುಗಳು ಬೆಚ್ಚಗೆ ಉಳಿಯುತ್ತವೆ. ಗತವೊಂದೇ ನಿರ್ದಿಷ್ಟ. ಭವಿಷ್ಯವೆಂಬುದು ಒಣಕಲ್ಪನೆ. ವರ್ತಮಾನವು ಹಿಡಿಯಲು ಅಸಾಧ್ಯವಾದ ಮಹಾಮಾಯೆ ಎಂಬ ವಿಚಾರಗಳು ‘ಅಕ್ಷಯ ಕಾವ್ಯ’ದ ಸಾಲುಗಳಲ್ಲಿ ಮೂಡಿವೆ. ಸೋಗಲಾಡಿಗಳ, ಗೋಮುಖ ವ್ಯಾಘ್ರರ ನಡುವೆ ಬದುಕುವ ಕಷ್ಟ ಇಲ್ಲಿದೆ. ಕವಿತೆಯು ಅಸಾಧ್ಯತೆಗಳಿಂದ ಉಂಟಾಗುತ್ತದೆ ಎಂಬ ಮಾತು ಕಾವ್ಯ ಸತ್ಯವಾಗಿ ಪರಿಣಮಿಸಿದೆ.
‘ಅಕ್ಷಯ ಕಾವ್ಯ’ವನ್ನು ಓದಿದಾಗ ಮನುಕುಲದ ಜೀವನ ಚಿತ್ರಣ ಲಭಿಸುತ್ತದೆ. ಕಾವ್ಯವನ್ನು ಓದಿ ಸವಿಯುವುದರೊಂದಿಗೆ ಅದರ ಅರ್ಥವನ್ನರಿತುಕೊಳ್ಳಲು ಒತ್ತಾಯಿಸುವ ಮಹತ್ವದ ಕೃತಿ ಇದು.
ಅಕ್ಷಯ ಕಾವ್ಯ : ಕೆ.ವಿ. ತಿರುಮಲೇಶ್
ಪ್ರಕಾಶಕರು : ಅಭಿನವ ಬೆಂಗಳೂರು
ಮೊದಲ ಮುದ್ರಣ : 2010
ಪುಟಗಳು : 480
ಬೆಲೆ : 250 ರೂಪಾಯಿಗಳು
1 thought on “ಕೆ. ವಿ. ತಿರುಮಲೇಶ ಅವರ ‘ಅಕ್ಷಯಕಾವ್ಯ’ ಕ್ಕೆ ಒಂದು ಪ್ರವೇಶಿಕೆ”
Tirumaleshara Akshaya Kavya da samikshe samagrau samraddhau aagide…ee kavyada odige upayuktavada lekhana.