ಗಜಲ್

ಅಜ್ಞಾನ ಅಂಧಕಾರದ ಮುಸುಕು ಕಿತ್ತಿ ಎಸೆದಾತಂಗೆ ಶರಣು
ಎಲ್ಲೆಡೆ ಸಮಾನತೆಯ ಸುಜ್ಞಾನ ಸುಧೆ ಹರಿಸಿದಾತಂಗೆ ಶರಣು

 ಅಂದು ಜಗದಲಿ ಎಲ್ಲೆಡೆ ಬೆಳೆದಿತ್ತು ಕಂದಾಚಾರದ ಕಳೆಯು
ಮೇಲು ಕೀಳುಗಳ ಕಸವ ಹರಗಿ ಭಕ್ತಿ ಬೆಳೆ ಬೆಳೆದಾತಂಗೆ ಶರಣು

ದೇವ ಭಾಷೆಯಲಿ ಮನುಜ ಬದುಕು ಕಗ್ಗಂಟಾಗಿ ನರಳುತಿತ್ತು ಅಂದು
ಅಚ್ಚ ಕನ್ನಡದಲಿ ಮಾನವೀಯ ಮೌಲ್ಯ ಬಿತ್ತಿದಾತಂಗೆ ಶರಣು

ಉಚ್ಚ ನೀಚ ವೆಂಬ ಮೇಲಾಟದಲಿ ಮರೆಯಾಗಿತ್ತು ಮಾನವೀಯತೆ
ದಯವೇ ಧರ್ಮ,ದಾಸೋಹವೇ ಸಹಬಾಳ್ವೆ ಎಂದಾತಂಗೆ ಶರಣು

ಕೋಮಲ ಸುಮಗಳ ತುಟಿಗಳನು ಹೊಲೆದಿತ್ತು ಮೂಢ ಪುರುಷ ಸಮಾಜ
ಅನುಭವ ಮಂಟಪದಲಿ ವಾಕ್ ಸ್ವಾತಂತ್ರ ನೀಡಿದಾತಂಗೆ ಶರಣು

ಅಂಧ ಶ್ರದ್ಧೆ ಅಸ್ಪೃಶ್ಯತೆಯಲ್ಲಿ ಸಮುದಾಯವು ಬಳಲಿತ್ತು
ಸಕಲ ಜೀವಿಗಳಿಗೆ ಸದಾ ಲೇಸನ್ನೇ ಬಯಸಿದಾತಂಗೆ ಶರಣು

ರಾಜ ದಂಡಾಳಿಕೆಯಲಿ ಜಗದ ಜೀವಿಗಳು ದಾಸರಾಗಿದ್ದರು
ವಿಶ್ವಕೆ ಪ್ರಜಾಪ್ರಭುತ್ವದ "ಪ್ರಭೆ" ಯನು ಹರಡಿದಾತಂಗೆ ಶರಣು

      *ಪ್ರಭಾವತಿ ಎಸ್ ದೇಸಾಯಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter