ಕೂರ್ಗ್ ರೆಜಿಮೆಂಟ್: ಕಥಾ ಸಂಕಲನ
ಲೇಖಕ:ಮೇಜರ್| ಡಾ| ಕುಶ್ವಂತ್ ಕೋಳಿಬೈಲು (ನಿ)
ಪ್ರಕಾಶಕರು: ಮೈತ್ರಿ ಪ್ರಕಾಶನ
ಬೆಲೆ: ರೂ.೯೦/-
ಇದು ಮೇಜರ್l ಡಾl ಕುಶ್ವಂತ್ ಕೋಳಿಬೈಲು ಅವರ ಚೊಚ್ಚಲ ಕಥಾಸಂಕಲನ. ಈ ಸಂಕಲನದಲ್ಲಿ ೧೨ ಪುಟ್ಟ ಕಥೆಗಳಿವೆ. ನಮ್ಮನ್ನು ಕೈ ಹಿಡಿದು ಎಳೆದು ಕೂರಿಸಿ ಕಥೆ ಹೇಳುವ ಕುಶಲತೆ ಕಥೆಗಾರ ಕುಶ್ವಂತ್ವರಲ್ಲಿದೆ. ಬಾಷೆ ಚೆನ್ನಾಗಿದೆ. ಕಥೆಗಳ ನಿರೂಪಣೆ ಚುರುಕಾಗಿದೆ. ಕೆಲವು ಕಥೆಗಳಲ್ಲಿ ನಿರೂಪಣೆ ಹಾಸ್ಯದಿಂದಲೂ , ವ್ಯಂಗ್ಯದಿಂದಲೂ ಸಾಗುತ್ತದೆ. ಕಥೆಗಾರರು ನಡು ನಡುವೇ ಒಳ್ಳೆಯ ಉಪಮೆಗಳನ್ನೂ ನೀಡಿ ಕಲ್ಪನೆಗೆ ಒಳ್ಳೆಯ ಬಣ್ಣ ಹಚ್ಚುತ್ತಾರೆ. ಇಲ್ಲಿನ ಕಥೆಗಳಲ್ಲಿ ವೈವಿದ್ಯತೆ ಇದ್ದರೂ ಎಲ್ಲಾ ಕಥೆಗಳು ಕೊಡಗಿನ ಸುತ್ತಮುತ್ತ ಮತ್ತು ಸೈನದ ವ್ಯಾಪ್ತಿಯಲ್ಲಿಯೇ ಸಾಗುತ್ತದೆ. ಕಥೆಗಾರರು ಚಿತ್ರಿಸುವ ಪಾತ್ರಗಳು ಬಹುಬೇಗನೆ ಓದುಗರಿಗೆ ಆಪ್ತವಾಗಿ ನಮ್ಮವರೇ ಆಗಿ ಸಂವಾದಕ್ಕೆತೊಡಗುತ್ತವೆ.
ಕೂರ್ಗ್ ರೆಜಿಮೆಂಟ್ ಕಥೆಯಲ್ಲಿ ಕಾವೇರಿ ತನ್ನ ಸೈನಿಕ ಗಂಡನನ್ನು ಕಳಕೊಂಡು ಬದುಕನ್ನ ಎದುರಿಸುವ ಚಿತ್ರಣವಿದೆ. ಸೈನಿಕ ದೇಶಕ್ಕಾಗಿ ನಡೆಸುವ ಯುದ್ಧಕಿಂತ ಸ್ವಂತ ಬದುಕಿನ ಸಂಘರ್ಷ ಭೀಕರವಾದುದು ಎನ್ನುವುದು ಇಲ್ಲಿನ ಧ್ವನಿ. ಸೈನಿಕ ಸತ್ತ ನಂತರ ಆತನ ಬಲಿದಾನವನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸುವ ರಾಜಕಾರಣಿಗಳು ಒಂದೆಡೆಯಾದರೆ, ಸೈನಿಕನಿಗೆ ಸಿಗಬೇಕಾದ ಸವಲತ್ತನ್ನು ಸುಲಭವಾಗಿ ನೀಡದ ಭ್ರಷ್ಟ ಅಧಿಕಾರಿಗಳು ಇನ್ನೊಂದೆಡೆ. ಕಥೆಯ ಕೊನೆಯಲ್ಲಿ ತನ್ನ ತಾಯಿಯನ್ನು ಬಿಟ್ಟು ತಾನು ಅಪ್ಪನಂತೆ ಸೈನಕ್ಕೆ ಸೇರಲು ಹೊರಟು ಹೋದ ಮಗನನ್ನು ನೋಡುತ್ತಾ ಕಾವೇರಿ ತನಗೆ ತಾನೇ ಕೇಳುವ ಪ್ರಶ್ನೆ ” ಮಗನ ಮೇಲೆ ಅಥವಾ ಮಣ್ಣಿನ ಮೇಲೆ – ಯಾವುದರ ಮೇಲೆ ತನಗೆ ಜಾಸ್ತಿ ಹಕ್ಕು ” ಅರ್ಥಪೂರ್ಣವಾದದ್ದು.
“ಗಣಿ ಬೋಪಣ್ಣ” ಉತ್ತಮವಾದ ಕಥೆ. ದುರಂತ ಕಥೆ. ಕಥಾ ನಾಯಕ ಸೈನದಿಂದ ನಿವೃತ್ತಿ ಹೊಂದಿ ಸಾಮಾಜಿಕ ಬದುಕಿನಲ್ಲಿ ಮೋಸಗೊಳಗಾಗಿ , ನಿರಪರಾದಿಯಾಗಿದ್ದು ಜೈಲು ಸೇರಿ , ಕೊನೆಗೆ ಊರುಬಿಟ್ಟು ಪರವೂರಿನಲ್ಲಿ ನೆಲೆಸಿ ಸಾವನ್ನಪ್ಪುತ್ತಾನೆ. ದೇಶಕ್ಕಾಗಿ ಗಡಿ ಪ್ರದೇಶದಲ್ಲಿ ಹೋರಾಡುವ ಸೈನಿಕರಿಗೆ ನಮ್ಮ ದೇಶವಾಸಿಗಳೇ ನೆಮ್ಮದಿಯ ಬದುಕು ನೀಡಲು ಅಸಮರ್ಥರಾಗುತ್ತಾರೆ.
ಸಂಕಲನದ ಮತ್ತೊಂದು ಯಶಸ್ವಿ ಕಥೆ ” ಬಾಲ” . ಕಥೆಗಾರರು ಬಾಲನ ಪಾತ್ರ ಚಿತ್ರಣವನ್ನುಸೊಗಸಾಗಿ ಹೆಣೆದಿದ್ದಾರೆ. ನಿರೂಪಣೆ ಸರಳವಾಗಿ ಸುಲಲಿತವಾಗಿ ಕುತೂಹಲ ಉಳಿಸಿಕೊಳ್ಳುತ್ತಾ ಸಾಗುತ್ತದೆ. ಕಥೆ ವಿಭಿನ್ನವಾದುದು ಯಾಕೆಂದರೆ ಕಥಾ ನಾಯಕ ಬಾಲ ಕಿಲಾಡಿ. ಬಾಲ ತನ್ನ ಕುಶಲತೆ ಮತ್ತು ಕುಟಿಲತೆಯಿಂದ ಜನರನ್ನು ಮೋಸ ಮಾಡುತ್ತ ಹೆಣ್ಣಿನ ಹಿಂದೆ ಸುತ್ತುವವನು. ದುರಂತವೆಂದರೆ ಒಂದು ಹೆಣ್ಣಿನಿಂದಲೇ ಮೋಸ ಹೋದ ಬಾಲ ದೊಡ್ಡಕಾಡು ಭೋಜಣ್ಣನಿಗೆ ೩೦,೦೦೦ ಮೋಸ ಮಾಡಿ ಊರುಬಿಟ್ಟು ಓಡುತ್ತಾನೆ. ಮುಂದೆ ದಾರವಾಡದಲ್ಲಿ ರಾಜಕೀಯ ಪ್ರವೇಶಿಸಿ ದೊಡ್ಡ ವ್ಯಕ್ತಿಯಾಗುತ್ತಾನೆ. ಕೊನೆಯಲ್ಲಿ ಕಥೆಗಾರರು ಅನಾವಶ್ಯಕವಾಗಿ ಬಾಲನ ಪಾತ್ರಕ್ಕೆ ಸಾವು ನೀಡುತ್ತಾರೆ
“ಬೊಳ್ಳು ಭಾಗ ೧ಮತ್ತು ಭಾಗ ೨ ” ಮತ್ತು “ಹುಲಿ ಮದುವೆ” ಪ್ರಕೃತಿಗೆ ಸಂಬಂದಿಸಿದ ಕಥೆಗಳ ನಿರೂಪಣೆ ರೋಚಕವಾಗಿದೆ. ತೇಜಸ್ವಿಯವರ ಪರಿಸರದ ಕಥೆಗಳನ್ನು ನೆನಪಿಸುತ್ತವೆ. ಹುಲಿ ಮದುವೆ ಕಥೆಯಲ್ಲಿ ಪ್ರಕೃತಿಯು ಕೊನೆಗೂ ಮನುಷ್ಯನನ್ನು ಸೋಲಿಸುವ ದ್ವನಿಯಿದೆ. ಬೊಳ್ಳು ಕಥೆಗಳು ಬಹಳ ಕುತೂಹಲಕರವಾಗಿ ಸಾಗಿ ಓದುಗರಿಗೆ ಮುದ ನೀಡುತ್ತವೆ. ಹಂದಿ ಬೇಟೆಯ ನಿಯಮಗಳನ್ನೂ ಇಲ್ಲಿ ಸ್ವಾರಸ್ಯಕರವಾಗಿ ಸಾದರ ಪಡಿಸಲಾಗಿದೆ.
“ಸ್ವರ್ಗಕ್ಕೆಏಣಿ ” ಒಂದು ದುರಂತ ಕಥೆ. ಸೈನ್ಯದಿಂದ ನಿವೃತ್ತಿಹೊಂದಿದ “ತಮ್ಮಿ” ಮಾನವ ಜಾತಿಯ ಅಸೀಮ ತಾಳ್ಮೆಯ ಮತ್ತು ಸಹನೆಯ ಸಂಕೇತವೆನ್ನ ಬಹುದು. ಕಥೆಯ ನಿರೂಪಣೆ ಸೊಗಸಾಗಿದೆ. ಇಲ್ಲಿಯೂ ಇತರ ಕಥೆಗಳಂತೆ ನಿವೃತ್ತ ಸೈನಿಕನ ಸಾಮಾಜಿಕ ಬದುಕಿನ ವೈಫಲ್ಯತೆ ಮತ್ತು ಇದಕ್ಕೆ ಕಾರಣವಾದ ಸಮಾಜದ ಚಿತ್ರಣವಿದೆ.
ಒಟ್ಟಿನಲ್ಲಿ ಸಂಕಲನ ಓದುಗರಿಗೆ ಉತ್ತಮ ಅನುಭವ ನೀಡುತ್ತದೆ. ಇಲ್ಲಿ ಬಳಸಲಾದ ರೇಖಾಚಿತ್ರಗಳು ಸೊಗಸಾಗಿವೆ. ಕಥೆಗಾರರು ಸ್ವತಃ ಸೇನೆಯಲ್ಲಿ ಸೇವೆ ಮಾಡಿದ ಕಾರಣ ಅವರ ವೈಯಕ್ತಿಕ ಅನುಭವಗಳು ಅಧಿಕ್ರತವಾಗಿ, ಗಾಢವಾಗಿ ನಮ್ಮನ್ನು ತಟ್ಟುತ್ತವೆ. ಕಥೆ ಹೇಳುವ ಕಲೆಯನ್ನು ಸಲೀಸಾಗಿ ಕರಗತ ಮಾಡಿ ಕೊಂಡಿರುವ ಕುಶ್ವಾನ್ತ್ರವರಿಂದ ಮುಂದೆ ಇನ್ನಷ್ಟು ಕಥೆಗಳು ಬರುವಂತಾಗಲಿ ಎಂದು ಹಾರೈಸೋಣ.
*****