ರೈಲು ಸ್ಟೇಷನ್ ದಾಟಿ ನಿಧಾನವಾಗಿ ಚಲಿಸಲಾರಂಭಿಸಿತು. ಸ್ವಲ್ಪ ದೂರ ಹೋದ ಕೂಡಲೇ ರೈಲ್ವೆ ಗೇಟ್ ಮಧ್ಯದ ಟ್ರ್ಯಾಕ್ ಮೇಲೆ ಒಂದು ಲಾರಿ ನಿಂತಿದ್ದು ನೋಡಿ ಗಾಬರಿಯಾದ ಡ್ರೈವರ್ ಮಂಜಣ್ಣ ಸಡನ್ ಆಗಿ ಎಮರ್ಜೆನ್ಸಿ ಬ್ರೇಕ್ ಹಾಕಿದ್ದಕ್ಕೆ ಲಾರಿಗೆ ಅತೀ ಸಮೀಪದಲ್ಲಿ ಕಿರ್ರೆನ್ನುತ್ತಾ ಕೀಚೆನ್ನುತ್ತಾ ದೊಡ್ಡ ಶಬ್ದ ಮಾಡಿ ಗಕ್ಕನೆ ನಿಂತಿತು ರೈಲು.
” ಮನೆಯಲ್ಲಿ ಮತ್ತೆ ವಾಪಾಸು ಬರೋದಿಲ್ಲ ಅಂತ ಹೇಳಿ ಬಂದಿಯೇನು… ಹೊಟ್ಟೆಗೆ ಅನ್ನ ತಿಂತೀಯಾ… ಇಲ್ಲಾ…. ಸ್ವಲ್ಪ ತಡ ಆಗಿದ್ದರೆ ಶಿವನ ಪಾದ ಸೇರುತ್ತಿದ್ದಿ…” ಎಂದು ಜೋರಾಗಿ ಬೈಯುತ್ತ ರೈಲಿನಿಂದ ಇಳಿದ ಎಜೆಂಟ್ ವಿಶ್ವ… ರೈಲಿಗೆ ಅಡ್ಡ ನಿಲ್ಲಿಸಿದ್ದ ಲಾರಿ ಮೈಲಾರಿ ನಿಧಾನವಾಗಿ ಕೆಳಗಿಳಿದ. ಆತನನ್ನು ನೋಡುತ್ತಲೇ ಪಿತ್ತ ನೆತ್ತಿಗೇರಿ ಬಿ. ಪಿ ಹೆಚ್ಚಾಗಿ ವಿಶ್ವ ” ಸಾಯೋದಕ್ಕೆ ನೂರಾರು ದಾರಿ ಇವೆ. ಎಲ್ಲಾ ಬಿಟ್ಟು ನನ್ನ ರೈಲೇ ಕಂಡಿತೇನು ನಿನಗೆ.. ” ಎಂದು ಅರಚಿದ.
“ನಿನ್ನ ರೈಲಿಗೆ ಅಡ್ಡ ನಿಂತಿದ್ದು ಸತ್ತು ಸ್ವರ್ಗ ಸೇರೋದಕ್ಕೆ ಅಲ್ಲ ಅಣ್ಣ…ರೊಕ್ಕ ವಸೂಲಿ ಮಾಡೋದಕ್ಕೆ ನಿಂತೀನಿ…ಇದು ಒಂದು ರೀತಿ ಟೋಲ್ ಗೇಟ್ ಅಂದರೂ ತಪ್ಪಿಲ್ಲ…” ಎಂದು ಶಾಂತ ಸ್ವರದಲ್ಲಿ ನುಡಿದ ಲಾರಿ ಮೈಲಾರಿ.
“ಎನು ರೈಲಿಗೆ ಟೋಲ್ ಗೇಟಾ! ತಲೆ ಕೆಟ್ಟಿದೆಯಾ! ಮೈಮೇಲೆ ಎಚ್ಚರ ಇದ್ದೇ ಮಾತಾಡ್ತಿರುವಿಯಾ…” ಎಂದು ಮತ್ತೊಮ್ಮೆ ಗದರಿದ ವಿಶ್ವ..
“ಈ ರೈಲು ಯಾರದು…?” ಪ್ರಶ್ನಿಸಿದ ಲಾರಿ ಮೈಲಾರಿ. “ನಮ್ಮ ಘನ ಸರ್ಕಾರದವರು ಸಸ್ತಾ ದರಕ್ಕೆ ಮಾರುವಾಗ ನಮ್ಮ ಕಂಪನಿ ಖರೀದಿ ಮಾಡಿದ್ದು… ಇದು ಈಗ ಪ್ರೈವೇಟ್ ಅಂದರೆ ನನ್ನ ಕಂಪನಿ ಸ್ವಂತ ರೈಲು ತಿಳಿಯಿತಾ..” ಎಂದ ರೈಲು ಏಜೆಂಟ್ ವಿಶ್ವ ಸ್ವಲ್ಪ ಗರ್ವದಿಂದ.
” ಚೆನ್ನಾಗಿ ಹೇಳಿದಿರಿ ..ಈಗ ನಾನು ಹೇಳೋದನ್ನ ಕೇಳಿ. ಇಲ್ಲಿಂದ ಐದು ಸ್ಟೇಷನ್ ಬರೋವರೆಗೆ ದಾರಿಯುದ್ಧಕ್ಕೂ ಬರುವ ರೈಲ್ವೆ ಟ್ರ್ಯಾಕ್ ಎಲ್ಲ ಸರ್ಕಾರದ ಆಕ್ಷನ್ ನಲ್ಲಿ ‘ಸಸ್ತಾ..’ರೇಟಿಗೆ ನಮ್ಮ “ಬೇವರ್ಸಿ ಗ್ರೂಪ್ ಆಫ್ ಕಂಪನಿಸ್ ಖರೀದಿಸಿದೆ ತಿಳಿಯಿತಾ…” ಎಂದು ವ್ಯಂಗ್ಯವಾಗಿ ಉತ್ತರಿಸಿದ ಲಾರಿ ಮೈಲಾರಿ. ” ಹೌದಾ… ಹೇಗೂ ರೈಲ್ವೆ ಟ್ರ್ಯಾಕ್ ಖರೀದಿ ಮಾಡಿರುವಿರಿ ಮತ್ತೆ ಅದನ್ನು ನಿಮ್ಮ ಕಂಪನಿ ಆಫೀಸಿನ ಹತ್ತಿರ ಮಡಚಿ ಭದ್ರವಾಗಿ ಇಟ್ಟುಕೊಳ್ಳಬೇಕೆಂಬ ಜ್ಞಾನ ಇರಬೇಕಿತ್ತಲ್ಲ ನಿಮಗೆ… ” ಎಂದ ರೈಲು ಏಜೆಂಟ್ ವಿಶ್ವ ವ್ಯಂಗ್ಯ ಸ್ವರದಿಂದ.
” ಯಾಕೆ… ನಮ್ಮ ರೈಲ್ವೆ ಟ್ರ್ಯಾಕ್ ಎಲ್ಲ ಹಳೇ ಕಬ್ಬಿಣ ಕೊಳ್ಳೋ ಸಾಬಿಗೆ ಮಾರಿ ನಮ್ಮ ಕಂಪನಿಯ ನಿರ್ದೇಶಕರೆಲ್ಲ ನೆತ್ತಿ ಮೇಲೆ ಹಸಿ ಬಟ್ಟೆ ಹಾಕಿಕೊಂಡು ತಿರುಗಾಡೋದಕ್ಕೇನು? ನೀನು.. ರೈಲನ್ನು ನಿಮ್ಮ ಆಫೀಸಿನ ಪಕ್ಕದಲ್ಲಿ ಪಾರ್ಕಿಂಗ್ ಮಾಡಿಕೊಳ್ಳದೆ ನಮ್ಮ ಟ್ರ್ಯಾಕ್ ಮೇಲೆ ಎಕೆ ಬಂದೆ? ಮೊದಲು ಅದನ್ನು ಹೇಳು…. ” ಎಂದು ಆವೇಶದಿಂದ ವಿಶ್ವನನ್ನು ಕೆಂಗೆಣ್ಣಿನಿಂದ ನೋಡುತ್ತಾ ಬುಸುಗುಟ್ಟಿದ ಲಾರಿ ಮೈಲಾರಿ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಿಶ್ವ ಏನೇ ಇರಲಿ ಎಂದು “ಗುಂಡಣ್ಣ ಗ್ರೂಪ್ ಆಫ್ ಕಂಪನಿಸ್” ಛೇರ್ಮನ್ ಗುಂಡಣ್ಣನಿಗೆ ವಿಷಯ ತಿಳಿಸಲು ಫೋನ್ ಮಾಡಿದ.. ಗುಂಡಣ್ಣನ ಪಿ ಎ ಫೋನ್ ರಿಸೀವ್ ಮಾಡಿ ವಿವರಣೆ ಕೇಳಿದ. ಎಲ್ಲ ವಿಷಯವನ್ನು ಒಂದೇ ಗುಕ್ಕಿನಲ್ಲಿ ಹೇಳಿ ಮುಗಿಸಿದ ವಿಶ್ವ….
ಐದು ನಿಮಿಷದಲ್ಲಿ ಗುಂಡಣ್ಣ ಫೋನ್ ಮಾಡಿ “ತಮ್ಮ ಕಂಪನಿ ಸದ್ಯ ರೈಲನ್ನಷ್ಟೇ ಈ ವರ್ಷ ಖರೀದಿಸಿದೆ. ಮುಂದಿನ ವರ್ಷ ಟ್ರ್ಯಾಕ್ ಖರೀದಿ ಮಾಡಲು ಸಿದ್ಧತೆ ನಡೆಸಿದೆ.. ಅಲ್ಲಿಯವರೆಗೆ ಬೇರೆಯವರ ಟ್ರ್ಯಾಕ್ ಮೇಲೆ ತಮ್ಮ ರೈಲು ಓಡಾಡಲು ಬಾಡಿಗೆ ಕರಾರಿನ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಲಾರಿ ಮೈಲಾರಿಗೆ ಬಾಡಿಗೆ ಹಣ ಸಂದಾಯ ಮಾಡಿ ತನಗೆ ಕನ್ಫರ್ಮ್ ಮಾಡಬೇಕೆಂದು ” ಅಪ್ಪಣೆ ಕೊಟ್ಟ ಗುಂಡಣ್ಣ….ಅದೇ “ಗುಂಡಣ್ಣ ಗ್ರೂಪ್ ಆಫ್ ಕಂಪನಿಸ್ ಛೇರ್ಮನ್” ಗುಂಡಣ್ಣ! “ಆಯಿತು ಸಾರ್…” ಎಂದು ಉತ್ತರಿಸಿದ ರೈಲು ಏಜೆಂಟ್ ವಿಶ್ವ ಬೇರೆ ದಾರಿ ಕಾಣದೆ ಟ್ರ್ಯಾಕ್ ಬಾಡಿಗೆಯನ್ನು ಲಾರಿ ಮೈಲಾರಿಗೆ ಕೊಟ್ಟು ರೈಲನ್ನು ಮುಂದೆ ಸಾಗಿಸಿದ.
****
ಕಡಿಮೆ ದರದಲ್ಲಿ ಸಿಕ್ಕರೆ ಪಾರ್ಲಿಮೆಂಟ್ ಅಥವಾ ವಿಧಾನಸೌಧವನ್ನೂ ಕೊಳ್ಳುವ ಛಾತಿ ಇರುವ “ಗುಂಡಣ್ಣ ಗ್ರೂಪ್ ಆಫ್ ಕಂಪನಿಸ್ ” ಛೇರ್ಮನ್ ಗುಂಡಣ್ಣ ತನ್ನ ಕಂಪನಿಯನ್ನು ನೂತನ ಬಗೆಯ ವ್ಯಾಪಾರಕ್ಕಿಳಿಸಿದ. ಅದೇನೆಂದರೆ… ಹೇಗೂ ಚೌಕಾಶಿ ಬೆಲೆಗೆ ಸಿಗುತ್ತೆ ಅಂತ ಸರ್ಕಾರದಿಂದ ಐದು ವಿಮಾನಗಳನ್ನು ಹೆಚ್ಚು ಬಿಡ್ ಮಾಡಿ ಖರೀದಿಸಿದ ವಿಮಾನಗಳು ಆಕಾಶದಲ್ಲಿ ಹಾರಲು ಬಿಟ್ಟರೆ ಹೆಚ್ಚು ವೆಚ್ಚ ಮತ್ತು ಹೈ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ . ಅದರ ಬದಲು ಐದು ಜಿಲ್ಲಾ ಕೇಂದ್ರಗಳಲ್ಲಿ ದೊಡ್ಡ ಜಾಗ ಲೀಸಿಗೆ ತೆಗೆದುಕೊಂಡು ಜಾತ್ರೆಗಳಲ್ಲಿ ವಸ್ತು ಪ್ರದರ್ಶನ ಇಟ್ಟು ನಿರ್ವಹಿಸುವಂತೆ ವಿಮಾನವನ್ನು ಒಂದೊಂದು ಜಿಲ್ಲೆಯಲ್ಲಿ ಇಡುವ ವ್ಯವಸ್ಥೆ ಮಾಡಿದ…
ವಿಮಾನಗಳನ್ನೇ ಹತ್ತದ ಸಾಮಾನ್ಯ ಜನರು ತಲಾ ನೂರು ರೂಪಾಯಿ ಟಿಕೆಟ್ ಖರೀದಿಸಿ ಒಳ ಹೊಕ್ಕು ಬರುವದಕ್ಕೆ ಏರ್ಪಾಟು ಮಾಡಿತು ಕಂಪನಿ. ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಎಲ್ಲಿ ನೋಡಿದರೂ ಜನ ಸಾಗರ…ಹೆಚ್ಚು ಕಡಿಮೆ ಪ್ರತಿ ದಿನ ಸಾವಿರಾರು ಜನ ನೆಲದ ಮೇಲೆ ಸ್ಥಿರವಾಗಿ ನಿಂತ ವಿಮಾನ ಹತ್ತಿ ಕುಳಿತುಕೊಂಡೇ ‘ಬಾಹ್ಯಾಕಾಶದ’ ಹೊಸ ಅನುಭವವನ್ನು ಪಡೆಯತೊಡಗಿದರು. ಕುಟುಂಬದವರಿಗೆ ಮತ್ತು ಶಾಲಾ ಮಕ್ಕಳಿಗೆ ವಿಶೇಷ ರಿಯಾಯಿತಿ ದರವನ್ನು ನಿರ್ಣಯ ಮಾಡಿತು ಗುಂಡಣ್ಣನ ಕಂಪನಿ. ‘ವಿತ್ ಸೆಲ್ಫಿ’ ಗೆ ಸ್ವಲ್ಪ ಹೆಚ್ಚಿನ ದರದ ಟಿಕೆಟ್ ನಿಗದಿ ಮಾಡಿತು. ಅಲ್ಲದೇ ಬರ್ತ್ ಡೇ, ಮ್ಯಾರೇಜ್ ಸಮಾರಂಭಕ್ಕೂ, ರಾಜಕೀಯ ಪುಟ್ಟ ಸಭೆಗಳಿಗೆ ಅಲ್ಲದೇ ಇನ್ನಿತರ ವಿಶೇಷ ಕಾರ್ಯಕ್ರಮಗಳಿಗೆ ವಿಮಾನವನ್ನು ಬಾಡಿಗೆ ಕೊಡಲು ತಮ್ಮ ಕಂಪನಿ ಸಿದ್ಧವಾಗಿದೆ ಎಂದು ಜಾಹಿರಾತು ಪ್ರಕಟಿಸಿತು. ದಿನಪತ್ರಿಕೆಗಳು ಹಾಗೂ ಟಿವಿ ಮಧ್ಯಮಗಳಲ್ಲೂ ಕಂಪನಿ ಭರ್ಜರಿ ಪ್ರಚಾರ ನೀಡಿತು.
ಸದಾ ಗಿಜಗಿಡುವ ಪ್ರೇಕ್ಷಣಿಯ ಸ್ಥಳವನ್ನು ಮತ್ತಷ್ಟು ಆಕರ್ಷಣೆ ಮಾಡಲು ಗುಂಡಣ್ಣನ ಕಂಪನಿಯಿಂದ ಹೋಟೆಲ್ – ಬಾರ್ & ರೆಸ್ಟೋರೆಂಟ್ – ಲಾಡ್ಜ್ – ಐಸ್ ಪಾರ್ಲರ್ – ಬ್ಯೂಟಿ ಪಾರ್ಲರ್ – ಮಿನಿ ಮಾಲ್ – ಪಬ್ ಇತ್ಯಾದಿಗಳನ್ನು ಸ್ಥಾಪಿಸಿ ಆ ಅವರಣವನ್ನು ‘ಟೂರಿಸಂ’ ಹಬ್ ಮಾಡಿತು. ಈಗ ನಾಲ್ಕೈದು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿದ ‘ಸ್ಟ್ಯಾಂಡಿಂಗ್ ಏರ್ ಹಬ್ ‘ ಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲು ನಿನ್ನೆ ನಡೆದ ‘ಗುಂಡಣ್ಣ ಗ್ರೂಪ್ ಆಫ್ ಕಂಪನಿಸ್ ‘ ನ ವಿಶೇಷ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಸರ್ಕಾರವನ್ನು ಆದಷ್ಟು ಬೇಗ ತನ್ನ ಒಡೆತನದಲ್ಲಿರುವ ವಿಮಾನಗಳನ್ನು ಕಡಿಮೆ ರೇಟಿಗೆ ಬಿಕರಿ ಮಾಡಲು ಒತ್ತಾಯಿಸಿತು
*****
ಭವಿಷ್ಯದಲ್ಲಿ ಸರ್ಕಾರ ಮೈನಿಂಗ್, ಗುಡ್ಡ ಬೆಟ್ಟಗಳು, ನದಿಗಳು, ಸ್ಟೀಲ್ ಪ್ಲಾಂಟ್ ಗಳು, ರಸ್ತೆಗಳು, ಟವರ್ ಗಳು, ಪಾರ್ಕ್ ಗಳು, ಸರ್ಕಾರಿ ಶಾಲಾ ಕಾಲೇಜುಗಳು, ವಿಮಾನ ನಿಲ್ದಾಣಗಳು, ರೈಲ್ವೆ ಸ್ಟೇಷನ್ ಗಳು, ಸ್ಟೇಡಿಯಂಗಳು, ಬ್ಯಾಂಕುಗಳು, ಇನ್ಶೂರೆನ್ಸ್ ಕಂಪನಿಗಳು, ಇತ್ಯಾದಿಗಳಿಗೆ ಹರಾಜಿನ ಟೆಂಡರ್ ಕರೆದಾಗ ತಡ ಮಾಡದೇ ಕೂಡಲೇ ಅರ್ಜಿ ಹಾಕಬೇಕೆಂದು ಗುಂಡಣ್ಣ ಗ್ರೂಪ್ ಆಫ್ ಕಂಪನಿಸ್ ಒಮ್ಮತದ ನಿರ್ಣಯ ಕೈಗೊಂಡಿತು. ಅಲ್ಲದೇ ಡಿಸ್ಕೌಂಟ್ ದರದಲ್ಲಿ ಅಥವಾ ಒಂದು ಕೊಂಡರೆ ಮತ್ತೊಂದು ಫ್ರೀ ಎನ್ನುವ ಸ್ಕೀಮಿನಲ್ಲಿ… ಉದಾಹರಣೆಗೆ ಒಂದು ಪ್ಯಾಸೆಂಜರ್ ರೈಲು ಕೊಂಡರೆ ಗೂಡ್ಸ್ ಗಾಡಿ ಫ್ರೀ … ಒಂದು ಹೈವೇ ಖರೀದಿಸಿದರೆ ಪಕ್ಕದಲ್ಲಿ ಹಾದು ಹೋದ ಸರ್ವಿಸ್ ರೋಡ್ ಫ್ರೀ …ಸರ್ಕಾರಿ ಕಾಲೇಜು ಕೊಂಡರೆ ಸ್ಕೂಲು ಫ್ರೀ ….ಇಂತಹ ಅವಕಾಶಗಳನ್ನು ಸರ್ವತಃ ಬಿಡಕೂಡದೆಂದು ಎಲ್ಲಾ ಶೇರುದಾರರು “ಗುಂಡಣ್ಣ ಗ್ರೂಪ್ ಕಂಪನಿಸ್” ಛೇರ್ಮನ್ ಗುಂಡಣ್ಣನಿಗೆ ಮೊನ್ನೆ ನಡೆದ ವಿಶೇಷ ಸಭೆಯಲ್ಲಿ ‘ಹಕ್ಕೊತ್ತಾಯ’ ಮಾಡಿದ್ದು ಇವೊತ್ತಿನ ಕಂಪನಿಯ ‘ಬ್ರೇಕಿಂಗ್’ ಸುದ್ದಿ!
****
23 thoughts on “ಸಸ್ತಾ ರೇಟಿಗೆ ಮಾರಾಟ!”
ಲಘುಬರಹ ಸೊಗಸಾಗಿದೆ.
ಅಭಿನಂದನೆಗಳು
ಧನ್ಯವಾದಗಳು
ಬಹಳ ಚೆನ್ನಾಗಿ ಬರೆದಿದ್ದೀರಿ
ಧನ್ಯವಾದಗಳು
ಖುಷಿ ನೀಡಿತು. ಹೊಸ ಪರಿಕಲ್ಪನೆ. ನಿಜ. ಮುಂದಿನ ದಿನಗಳಲ್ಲಿ ಹೀಗೂ ಆಗಬಹುದೇನೋ…? ಕಾಲಾಯ ತಸ್ಮೈ ನಮಃ.
ಧನ್ಯವಾದಗಳು
ಸೂಪರ್ ಐಡಿಯಾ ಸರ್…. ತುಂಬಾ ಚೆನ್ನಾಗಿದೆ
ಧನ್ಯವಾದಗಳು
ಶ್ರೀ. ರಾಘವೇಂದ್ರ ಮಂಗಳೂರು ಅವರ ಹಾಸ್ಯಮಯ ‘ಸಸ್ತಾ ರೇಟಿಗೆ ಮಾರಾಟ’ ಅದ್ಭುತವಾಗಿ ಮೂಡಿದೆ. ರೈಲ್ವೆ ಸ್ಟೇಶನ್ ನ್ನು ಇನ್ನೊಬ್ಬರಿಗೆ ಸಸ್ತಾ ರೇಟಿಗೆ ಮಾರಿದರೆ ಅವರು ಪ್ರಯಾಣಿಕರು ಸ್ಟೇಷನ್ನಿನಿಂದ ಹೊರಹೋಗುವುದಕ್ಕೆ ಒಂದು ಟಿಕೆಟ್ ಮಾಡಿ ಗಳಿಸಬಹುದು. ಒಟ್ಟಿನಲ್ಲಿ ತೀರುವಳಿ ಮಾರಾಟದ ಹೊಸ ಪರಿಕಲ್ಪನೆ ಚನ್ನಾಗಿ ಮೂಡಿಸಿದ್ದಾರೆ. ಇಂತಹ ಹೊಸ ಚಾಟಿಯ ಚುರುಕುಗಳು ಹೆಚ್ಚಾಗಲಿ. ಅಭಿನಂದನೆಗಳೊಂದಿಗೆ. ಮ.ಮೋ. ರಾವ್, ರಾಯಚೂರು.
ಧನ್ಯವಾದಗಳು
ಶ್ರೀ ರಾಘವೇಂದ್ರ ಅವರ ಈ ಹೊಸ idea ನೋಡಿ ಸರಕಾರ ಬೇಗ ಎಚ್ಚೆತ್ತು ಕೊಂಡರೆ “ಗುಂಡಣ್ಣ ಗ್ರುಪ್ ಆಫ್ ಕಂಪನಿಯ ಗತಿ ಏನು?
ಧನ್ಯವಾದಗಳು
ಶ್ರೀ ರಾಘವೇಂದ್ರ ಅವರ ಲೇಖನ ಉತ್ತಮವಾಗಿದೆ. ಈ ಬರಹ ಸಧ್ಯದ ನಮ್ಮ ಘನ ಸರ್ಕಾರದ ಆಡಳಿತ ವೈಖರಿಯ ಅಣಕವಾಗಿದೆ ಎಂದರೆ ತಪ್ಪಾಗಲಾರದು. ಬೆಲೆಯುಳ್ಳ ಸರ್ಕಾರಿ ಉದ್ಯಮಗಳನ್ನು ಸುಧಾರಿಸಲಾಗದೇ/ಸರಿಪಡಿಸಲಾಗದೇ ಖಾಸಗಿಯವರಿಗೆ ಮಾರಿ ಕೈ ತೊಳೆದುಕೊಳ್ಳುವ ಜಾಯಮಾನ, ನಂತರ ಅವರು ಉದ್ಯಮವನ್ನು ಸರಿಪಡಿಸಿ ಜನಸಾಮಾನ್ಯರನ್ನು ಲೂಟಿ ಮಾಡುವುದನ್ನು ಕಾಣಬಹುದು.
ಗಂಭೀರ ವಿಷಯವನ್ನು ಹಾಸ್ಯವಾಗಿ ಬರೆದು ಮುಚ್ಚುವಂತೆ ಮಾಡಿದ್ದಾರೆ. ಧನ್ಯವಾದಗಳು.
ಧನ್ಯವಾದಗಳು 🙏🏼
ಮೇಲಿನ ನನ್ನ ಪ್ರತಿಕ್ರಿಯೆಯಲ್ಲಿ ಕೊನೆಯ ಸಾಲಿನಲ್ಲಿ ಚಿಕ್ಕ ತಪ್ಪಾಗಿದೆ, *ಮುಚ್ಚುವಂತೆ* ಎನ್ನುವುದನ್ನು *ಮೆಚ್ಚುವಂತೆ* ಎಂದು ಸರಿಪಡಿಸಿಕೊಂಡು ಓದಬೇಕಾಗಿ ವಿನಂತಿ.
ಧನ್ಯವಾದಗಳು
ರಾಘವೇಂದ್ರ ಅವರೇ…
ನಿಮ್ಮೀ ಲೇಖನಕ್ಕಾಗಿ ನಿಮಗೆ ಅಭಿನಂದನೆಗಳು. ಲೇಖನವು ಸದ್ಯದ ವಾಸ್ತವಿಕತೆಯನ್ನು ಪ್ರತಿಬಿಂಬಿಸುತ್ತಿದೆ ಮತ್ತು ಭವಿಷ್ಯದ ಅಪಾಯವನ್ನು ಸಾರಿ ಸಾರಿ ಹೇಳುತ್ತಿದೆ.
ಅರ್ಥ ಮಾಡಿಕೊಳ್ಳಬೇಕಾದವರು ಅರ್ಥ ಮಾಡಿಕೊಳ್ಳಬೇಕು….
ಧನ್ಯವಾದಗಳು
gundanna group Coompanies ajenda koneyalli tumba channagide . higu samajadalli munde nadeyabhudu embudu sogasada nirupane.
MURALIDHAR JOSHI
ಧನ್ಯವಾದಗಳು
ಧನ್ಯವಾದಗಳು
HIGU TENDER KAREYA BAHUDU TORISI KOTTIRI
SRIDHAR PUROHIT , GANGAVATHI
ಧನ್ಯವಾದಗಳು