ಬದುಕು ಅನ್ನಿಸುತ್ತದೆ ನನಗೆ ನೂಕು ನುಗ್ಗಾಟದ ಬಸ್ಸಿನಂತೆ ಗುಂಪಿನಲ್ಲಿ ಗೋವಿಂದರಾಗುತ್ತ ಕೊನೆ ಮೆಟ್ಟಿಲಲ್ಲಿ ನೇತಾಡಬೇಕು ನಮ್ಮ ಹೊರೆಯನ್ನು ಇನ್ನೊಬ್ಬರ ಮೇಲೆ ಹೇರಿ ನಿರಾಳನಾಗಿ ನಿಂತು ಬಿಡಬೇಕು ಕೈಗಂಟಿನಿಂದ ಮುಖಕ್ಕೆ ತಿವಿಯುತ್ತಾ ನಿಂತ ಪಕ್ಕದವನನ್ನೊಮ್ಮೆ ದುರುಗುಟ್ಟಿ ನೋಡಬೇಕು ಅವನ ಭಂಡಧೈರ್ಯದ ಮುಂದೆ ಬೆದರಿ ಮನಸ್ಸಲ್ಲೇ ಲೊಚಗುಟ್ಟುತ್ತಾ ತೆಪ್ಪಗಾಗಬೇಕು ಯಾರೋ ಎದ್ದುಹೋಗಿ ಖಾಲಿಯಾದ ಸೀಟಿನ ಕಡೆಗೊಮ್ಮೆ ಆಶಾನೋಟವ ಬೀರಬೇಕು ನೋಡ ನೋಡುತ್ತಿದ್ದಂತೆ ಆಕ್ರಮಿಸಿ ಕುಳಿತ ದಪ್ಪತೋಳಿನವನನ್ನು ನೋಡಿಯೂ ನೋಡದಂತೆ ನಟಿಸಬೇಕು ಮುಂದೆ ಹೋಗಲೋ? ಇಲ್ಲಾ ಹಿಂದೆಯೇ ಉಳಿಯಲೋ? ಯೋಚಿಸುತ್ತಲೇ ಕ್ಷಣ ಹೊತ್ತು ನಿಂತುಬಿಡಬೇಕು ಕಂಬ ಹಿಡಿಯಲೋ? ಅಥವಾ ಸೀಟೋ? ಚಿಂತಿಸುತ್ತಲೇ ಅರ್ಧ ದಾರಿ ಕಳೆಯಬೇಕು ಘಕ್ಕನೆ ಬ್ರೇಕು ಒತ್ತಿದಾಗ ಕಂಬಕ್ಕೆ ಗುದ್ದಿದ ಹಣೆಯನ್ನೊಮ್ಮೆ ಮುಟ್ಟಿ ನೋಡಿಕೊಳ್ಳಬೇಕು ರಸ್ತೆ ಗುಂಡಿಯಲ್ಲಿ ತೊಳಲಾಡುತ್ತಿರುವ ಬಸ್ಸಿನ ಜೊತೆಗೆ ಕುಲುಕುತ್ತಾ, ಸರ್ಕಾರವನ್ನು ಬೈದು ಸುಮ್ಮನಾಗಬೇಕು ಪಕ್ಕದಲ್ಲಿ ನಿಂತ ಹುಟ್ಟಾ ಕುಡುಕನ ಬಾಯ ವಾಸನೆಗೆ ಬೇಸತ್ತು ಮೂಗು ಮುಚ್ಚಿಕೊಳ್ಳಬೇಕು ಕಾಲು ತುಳಿಸಿಕೊಂಡು ಕೋಪಗೊಂಡವನ ಬೈಗುಳದ ಮಾತಿಗೆ ಜಾಣ ಕಿವುಡನಾಗಬೇಕು ನಿಲ್ದಾಣ ಬರುತ್ತಿದ್ದಂತೆಯೇ, ಹತ್ತರೊಡನೆ ಹನ್ನೊಂದಾಗಿ ಸದ್ದಿಲ್ಲದೆ ಇಳಿದು ಬಿಡಬೇಕು ಇನ್ನೂ ನೂಕು-ನುಗ್ಗಾಟದಲ್ಲಿಯೇ ಉಳಿದವರನ್ನು ಕಂಡು ಸಮಾಧಾನದ ನಗುವನ್ನೊಮ್ಮೆ ಚೆಲ್ಲಬೇಕು *****

2 thoughts on “ಬಸ್ಸು- ಬದುಕು”
ನಿಜವಾದ ಬದುಕನ್ನು ಬಿಂಬಿಸುವ ಬಸ್ಸಿನ ಪ್ರಯಾಣದ ಕವಿತೆ ಅರ್ಥಪೂರ್ಣವಾಗಿದೆ. ಅಭಿನಂದನೆಗಳು
ಧನ್ಯವಾದಗಳು ಸರ್