ನೆಲದ ನಂಟು: ಹೊಸ ರೈತರನ್ನು ಪರಿಚಯಿಸಿದ ಮಾಲತಿ ಹೆಗಡೆ

ಪುಸ್ತಕ: ನೆಲದ ನಂಟು

ಲೇಖಕಿ: ಮಾಲತಿ ಹೆಗಡೆ

ಪ್ರಕಾಶನ: ನ್ಯೂ ವೇವ್ ಬುಕ್ಸ

ಸಂಪರ್ಕ: 9448050463

ನೆಲದ ನಂಟು ಪುಸ್ತಕದಲ್ಲಿ ಕೃಷಿ ಸಾಧಕರನ್ನು ಅಥವಾ ನೆಲದ ನಂಟುಳ್ಳ ಹೊಸ ರೈತರನ್ನು ಪರಿಚಯಿಸಿದ ಮಾಲತಿ ಹೆಗಡೆಯವರಿಗೆ ಪ್ರೀತಿಪೂರ್ವಕವಾದ ಮೊದಲ ನಮಸ್ಕಾರಗಳು. ಈ ಪುಸ್ತಕದ ನಂಟನ್ನು ಅಥವಾ ಪುಸ್ತಕದೊಳಗಿನ ವಿಚಾರದ ಗಂಟನ್ನು  ಹೇಗೆ ವಿಸ್ತರಿಸುವುದು ಎಂದು ವಿಚಾರ ಮಾಡಿದಾಗ ಇದರಲ್ಲಿರುವ ಮೂವತ್ತು ನಾಲ್ಕು ವ್ಯಕ್ತಿಗಳ ಕುರಿತೇ ಮೊದಲಾಗಿ ಬರೆಯಬೇಕೆನ್ನಿಸುತ್ತದೆ. ಮೊದಲ ಲೇಖನದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಿ ಸ್ವಂತ ಲಾಭ ಪಡೆದುಕೊಂಡ ದಯಾನಂದರ ಪರಿಚಯವಿದೆ. ಆಮೇಲೆ ಬತ್ತದ ಮೇಲೆ ಬತ್ತದ ಪ್ರೀತಿ ತೋರುವ ಕೈಲಾಸಮೂರ್ತಿಗಳು,  ಕಸಿ ಕೌಶಲದಿಂದ ಜೀವನ ಕುಶಲವಾಗಿಸಿದ ಕುಶಪ್ಪವರು, ವೃಕ್ಷಾಧಾರಿತವಾಗುತ್ತಾ ಕೃಷಿ ಸಂಪತ್ತನ್ನು ಏರಿಸಿಕೊಂಡು ಸಂಪನ್ಮೂಲ ವ್ಯಕ್ತಿಗಳಾದ ಬಸವನ ಗೌಡಾ ಪಾಟೀಲ-ಚೆನ್ನಮ್ಮನವರ ಪರಿಚಯ,  ಸರಳ ಬದುಕನ್ನು ಗಹನವಾಗಿಸಿಕೊಂಡ ಮಲ್ಲಿಕಾರ್ಜುನ ಕಿತ್ತೂರರ ಪರಿಚಯ, ನಾವು ನಮ್ಮ ಪೂರ್ವಿಕರಿಂದಾಗಿ ಇದ್ದೇವೆ, ಇದನ್ನು ನೆನೆದು ಬದುಕುವುದರಲ್ಲಿ ಬದುಕಿನ ಸಮೃದ್ಧಿ ಇದೆ ಎನ್ನುವ ಗಣಪತಿ ಹೆಗಡೆಯವರ ಪರಿಚಯ, ಅಂದದ ಗುಲಾಬಿಯಿಂದ ಬಾಳು ಚೆಂದ ಮಾಡಿಕೊಂಡ ಮಂಜುನಾಥರು, ತಿನ್ನುತ್ತಾ ತಿನ್ನುತ್ತಾ ಭಾರಿಯಾಗುವ ರೇಷ್ಮೆ ಹುಳ ಸಾಕಿ ಬದುಕಿನ ಭಾರ ಇಳಿಸಿಕೊಂಡ ಬಸವರಾಜ,-ಚನ್ನಪ್ಪನವರು, ಬೆಲ್ಲದ ಸವಿಯನ್ನು ಮಾವಿನ ಹಣ್ಣಿನಲ್ಲಿ ಕಂಡ ಬೆಲ್ಲದರು, ಗೋವು ಮತ್ತು ಭೂಮಿ ಸಂಸ್ಕ್ರತದ ಪ್ರಕಾರ ಸಮನಾರ್ಥಕ ಪದಗಳು ಇದನ್ನು ತಮ್ಮ ಜೀವನದಿಂದಲೇ  ನಿರ್ದೇಶಿಸುವ  ನಾಗಪ್ಪ ಕಮಲಮ್ಮ ದಂಪತಿಗಳು, ‘ನಾವೇಕೆ ವಿಷದ ಅನ್ನ ತಿನ್ನಬೇಕೆಂದು’ ಕೇಳುವ ಕುಮಾರ ಭಾಗವತರು, ಮನ,  ಜೀವನ, ಕಾನನಗಳ ಸಂಗಮ ಸಾಹಸಿ ಸಂಜೀವರು, ಹಳೆಬೇರಿಗೆ ಹೊಸ ಚಿಗುರು ಸೇರಿಸಿ ಮೌಲ್ಯಗಳ ನಡು ಕಟ್ಟುವ, ಸ್ವರ್ಣಲತಾ- ಬಸವರಾಜ ದಂಪತಿಗಳು, ಮಣ್ಣಿನ ಮಡಕೆಯೂ ಮಾವಾಗುವ ಹಾಗೆ ಮಣ್ಣ ದುಡಿಮೆಯಿಂದ ಬಾಳ ಮಡಕೆಯನ್ನು ಭದ್ರಗೊಳಿಸುವ ಬಸವಣೆಪ್ಪನವರು, ಖಾರದ ಮೆಣಸಿನಕಾಯಿ ಬೆಳೆದರೂ ಮಧುರವಾದ ಮಾತಾಡುವ ಸೋಮನಗೌಡರು, ನೆಲ ನನ್ನದಲ್ಲ ಬೆಳೆ ನನ್ನದು ಎನ್ನುವಲ್ಲಿ ಇರುವ ಆಧ್ಯಾತ್ಮದ ಔನ್ನತ್ಯದ ಅರಿವಿಲ್ಲದಿದ್ದರೂ ಬರದಲ್ಲೊಂದು ಬೆವರ ಹನಿಯಾಗಿ ಆದ್ರತೆ ಏರಿಸುವ ಫಕೀರಪ್ಪನವರು, ಸಾಲವೆಂದರೆ ಕೃಷಿ ಸೋಲೆನ್ನುವ ಹನುಮಂತಪ್ಪನವರು, ನಾವು ಬೆಳೆದಿದ್ದನ್ನು ನಾವು ಉಣ್ಣುತ್ತೇವೆ ಎಂದು ಅಭಿಮಾನದಿಂದ ಹೇಳುವ ಶಿವಲಿಂಗಯ್ಯನವರು,  ತೆಂಗಿನ ಮರ ಏರುವುದನ್ನು ಕಲಿತು ಬದುಕಿನ ಭಂಗ ನಿವಾರಿಸಿಕೊಂಡ ಸ್ವಾಮಿಗಳು, ಮನೋರಮ್ಯತೆಗೆ ಆಡುವ ಹೋಳಿ ಹಬ್ಬದ ಬಣ್ಣ ಕಾಯ ಕೆರೆಯದಂತೆ ನೈಸರ್ಗಿಕವಾಗಿ ಬಣ್ಣಗಳನ್ನು ಅನುಶೋಧನೆ ಮಾಡಿದ ಮನೋರಮಾ, ಉತ್ಸವ ಕಲಾಶಾಲೆಯ ಮೂಲಕ ಗ್ರಾಮ ಜೀವನ ಪ್ರತಿಪಾದಿಸುವ ಸೊಲಬಕ್ಕನವರು, ಮನೆಯಂಗಳದಲ್ಲೇ ತಿಂಗಳ ತರಕಾರಿ ಬೆಳೆಯುವ ವಸಂತರಾವ್- ಚಂದ್ರಕಲಾ   ಘಾಟಗಿ ದಂಪತಿಗಳು ಇದ್ದಾರೆ.

ಪೇಟೆಯ ಗಬ್ಬೇರದಂತೆ ಹಸಿರು ಹಬ್ಬಿಸಿದ ಕಬ್ಬೂರು ದಂಪತಿಗಳು, ಕೃಷಿ ತಪ್ಪಿ  ಹೋದ ಜೀವನಕ್ಕೆ  ಕೂಟ ಕಸಿ ಮಾಡಿ ಸಂಭ್ರಮಿಸಿದ ಗುನಗ ದಂಪತಿಗಳು, ಪೇಟೆಯಲ್ಲೊಂದು  ಪರಿಮಳ ದ ತೋಟ ಮಾಡಿದ  ಶೋಭಾ ಅನ್ಬನ್ ಕುಂಡದೊಳಗೆ ಬ್ರಹ್ಮಾಂಡ ಬೆಳೆಸಿ ಸಂಭ್ರಮ ಪಡುವ  ಪಂಡಿತರು, ಹಸಿರನ್ನು ಉಸುರುತ್ತಾ, ಉಸುರುತ್ತಾ ದುಗುಡ ಕಳೆದು ಸೊಗಡನನುಭವಿಸುವ ಜಯರತ್ನಾ,  ಹಾದಿಬದಿಯ ಸಸ್ಯಗಳನ್ನೂ ಸಂಗ್ರಹಿಸಿ ಬೆಳೆಸುವ ಡಾ. ರೂಪಾ, ಮುಳ್ಳಿನ ಕಿರೀಟ ಧರಿಸಿದಂ  ತಹ ಕೈತೋಟ ಮಾಡಿ ಸಂಭ್ರಮಿಸುವ  ಜಯಶೀಲಾ ಬೆಳಲದ, ತರಕಾರಿ ಮೇಳದಲ್ಲಿ ತಾಳ ತಟ್ಟಿ ಬಾಳ ಬಟ್ಟೆಗೆ  ಆನಂದ ತುಂಬುವ ಐತಾಳ ಕುಟುಂಬ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದರಲ್ಲಿ    ಆರೋಗ್ಯವನ್ನು, ಗೌರವವನ್ನೂ ಗುರುತಿಸಿಕೊಂಡಿರುವ  ಹೆರ್ಲೆಕರ್ ದಂಪತಿಗಳು,  ತೆರೆದ ಬಾವಿ ಆರದಂತೆ  ಹಸುರು ಮುಚ್ಚಿಗೆ ಮಾಡಿರುವ ಡಾ. ಇಂದುಮತಿ ತಾವರಗೇರಿ, ಅವರಿವರು ಕಸವೆಂದು ಮೋರಿಗೆಸೆಯುವ ಮೊದಲು ಕಸವನ್ನೂ ತಂದು ಹಸನಪ್ಪ ತರಕಾರಿ ಬೆಳೆದು ದಾನ ಮಾಡುವ ದೀಕ್ಷಿತರು, ಪೇಟೆಯ ನೋಟವನ್ನು ಬದಲಾಯಿಸುವಂತೆ ಸಾಮೂಹಿಕ ಸಹಭಾಗಿತ್ವದಲ್ಲಿ ಅರಳಿದ ಉದ್ಯಾನವನ  ನಿರ್ಮಿಸಿದವರು ಹೀಗೆ ಮೂವತ್ತ್ನಾಲ್ಕು ಕೃಷಿಕರನ್ನು ಮಾಲತಿ ಹೆಗಡೆಯವರು ಈ ‘ನೆಲದ ನಂಟು’ ಪುಸ್ತಕದಲ್ಲಿ ಪರಿಚಯಿಸಿದ್ದಾರೆ.

ಹೀಗೆ ಪರಿಚಯಿಸುವಾಗ ಅವರಿಗೆ ಕೃಷಿಯಲ್ಲಿ  ಇದ್ದಂತಹ ಅದಮ್ಯ ಪ್ರೀತಿ, ಮತ್ತೆ ಭಾಷೆಯಲ್ಲಿ ಇದ್ದಂತಹ ಹಿಡಿತ,  ಭಾವನೆಯಲ್ಲಿ, ಪರಿಕಲ್ಪನೆಯಲ್ಲಿ ಇರುವ ಪರಿಶುದ್ಧತೆ ಎಲ್ಲವೂ ಸಹ ಈ ಪುಸ್ತಕದಲ್ಲಿ ಸ್ಪಷ್ಟವಾಗಿ ಕಾಣ್ತಾ ಇದೆ. ಓದುತ್ತಾ ಹೋದ ಹಾಗೆ ನನಗೆ ಹೀಗೆ ನೆನಪಾಯ್ತು ನಾವು ಸಾಮಾನ್ಯವಾಗಿ ರುಚಿ ಎಂದು ಮಾವಿನ ಹಣ್ಣನ್ನೋ, ದ್ರಾಕ್ಷಿಯನ್ನೋ, ಸೇಬುವನ್ನೋ  ತರಕಾರಿಯಾಗಿ ಬಟಾಟೆಯನ್ನೋ, ಈರುಳ್ಳಿ ಯನ್ನೋ ಗುರುತಿಸಿ, ಪ್ರೀತಿಸಿ ಗೌರವಿಸಿ ಅಡುತ್ತೇವೆ. ಆದರೆ ಅದಲ್ಲದ ಕಾಡಿನ ಮೂಲೆಯಲ್ಲಿ ಯಾರೂ ಫಕ್ಕನೇ ಗುರುತಿಸದಂತಹ ಒಂದು ಕಳೆಯಲ್ಲಿ, ಸೊಪ್ಪಿನಲ್ಲಿ,  ಗಡ್ಡೆಯಲ್ಲಿ, ಕಾಯಿಯಲ್ಲಿ ತರಕಾರಿತ್ವವನ್ನು  ಗುರುತಿಸಿದರೆ,  ಅದು ವಿಶೇಷವಾಗುತ್ತದೆ. ಅಂತಹ ವಿಶೇಷತೆಯನ್ನು ಮಾಲತಿ ಹೆಗಡೆಯವರು  ಈ ಪುಸ್ತಕದಲ್ಲಿ ನಮಗೆ ಅನಾವರಣ ಮಾಡಿಕೊಟ್ಟಿದ್ದಾರೆ.     ಈ ಪುಸ್ತಕದ ಪ್ರತಿ ಲೇಖನದ ಪೀಠಿಕೆಯಲ್ಲಿ ಮುಖ್ಯಾಂಶ ಎಂಬಂತೆ ಪ್ರತಿ ರೈತರ ಬಗ್ಗೆ ಒಂದಿಷ್ಟು ಸೂಕ್ಷ್ಮ ಸಾರ ಸಂಚಯವನ್ನು ಪರಿಚಯವನ್ನು ಕೊಟ್ಟು  ಮತ್ತೆ ಆ ಬಗ್ಗೆ ವಿಸ್ತರಿಸುತ್ತಾ ಹೋಗಿದ್ದಾರೆ. ಇಲ್ಲಿ ಅವರು ಅವರ ಭಾವನೆಗಳನ್ನು ಹೇರದೇ ಅಲ್ಲಿ ಏನಾಗಿದೆ, ಆ ಕೃಷಿಕರು ಏನು ಮಾಡಿದ್ದಾರೆ ಎನ್ನುವುದಷ್ಟನ್ನೇ  ಹೇಳ್ತಾ ಮತ್ತುಳಿದ ವಿಚಾರಗಳನ್ನು ಓದುಗರಿಗೆ ಬಿಟ್ಟಿದ್ದಾರೆ ಎಂದು ಹೇಳಬಹುದು. 

ಇದು ತುಂಬಾ ಒಂದು ವಿಶೇಷ ಶಕ್ತಿ ಅಂತಲೆ ತೀರ್ಮಾನಿಸಬಹುದು. ಯಾಕೆಂದರೆ ನಮಗೆ ನಮ್ಮ  ಅಭಿಪ್ರಾಯಗಳು ಮೇಲುಗೈ ಪಡೆಯುವಂಥದ್ದು ಸಾಮಾನ್ಯ. ಈ ಒಟ್ಟೂ ಮೂವತ್ನಾಲ್ಕು ಜನರನ್ನು ಪರಿಚಯಿಸುವಾಗ ಗಮನಿಸುವಾಗ ಒಟ್ಟಾಗಿ ನಾವು ಅವರ ಬೇರೆ ಬೇರೆ ಗುಣವನ್ನು, ಕೌಶಲ್ಯವನ್ನು ಪ್ರಕೃತಿಯನ್ನು ಪ್ರೀತಿಸುವ, ಗೌರವಿಸುವ, ಆರಾಧಿಸುವ ರೀತಿಯನ್ನು ಗಮನಿಸುವುದಾದರೆ ಒಟ್ಟಾಗಿ ಕೃಷಿಯ,  ಜೀವನದ ಸಾಮರಸ್ಯಕ್ಕೆ  ಅಥವಾ ಸುಸಾಂಗತ್ಯಕ್ಕೆ  ಅಗತ್ಯವಾದಂತಹ ಇಷ್ಟು ಗುಣಗಳನ್ನು ಈ ಮೂವತ್ನಾಲ್ಕು ವ್ಯಕ್ತಿಗಳೊಳಗಿಂದ ಹೆಕ್ಕಿ ತೆಗೆಯಬಹುದು.   ಅದು ಎನಿದೆ ಎಂದು ಪಟ್ಟಿ ಮಾಡಿದೆ. ಒಂದು ಎಲ್ಲ ಕಡೆ ಎದ್ದು ಕಾಣುವುದು ರಾಸಾಯನಿಕ ಕೃಷಿಗೆ  ಭಿನ್ನ ವಾಗಿ ಎಲ್ಲರೂ ಮಿಶ್ರ ಬೆಳೆ ಬೆಳೆಯುವ ಪ್ರಯತ್ನ ಮಾಡಿದ್ದಾರೆ. ಮಿಶ್ರಬೆಳೆ ಬೆಳೆಯುವಲ್ಲಿ ಅಂತಿಮವಾಗಿ ಎಲ್ಲರೂ ಸಹಾ ಯಶಸ್ಸನ್ನು ಕಂಡಿದ್ದಾರೆ. ಅದಲ್ಲದೇ ಒಂದು ಆರ್ಥಿಕತೆ ಶಕ್ತಿ ತುಂಬಿಕೊಳ್ಳುವುದಕ್ಕಾಗಿ ವಿಶೇಷ ಬೆಳೆ. ಒಬ್ಬೊಬ್ಬರು ಒಂದೊಂದು ರೀತಿಯ ಪ್ರಯತ್ನ ಮಾಡಿದ್ದಾರೆ.  ಎಲ್ಲರಲ್ಲಿಯೂ ಎಲ್ಲ ಗುಣಗಳು ಇವೆ ಎಂದಲ್ಲ. 

 ಆದರೆ ಪ್ರತಿಯೊಬ್ಬರಿಗೆ ಇರುವ ಗುಣ ವಿಶೇಷಗಳನ್ನು ಗುರುತಿಸಿ ಮಾಲತಿಯವರು ಈ ಹೊತ್ತಿಗೆಯಲ್ಲಿ   ಆಯಾಯಾ ಲೇಖನದಲ್ಲಿ ಪರಿಚಯಿಸಿದ್ದಾರೆ.  ಈ ಎಲ್ಲ ರೈತರ ವಿಶೇಷತೆಯನ್ನು ವಿಷದವಾಗಿ ನೋಡುವಾಗ ನಮಗೆ  ಕಾಣುವುದು ಮಿಶ್ರಬೆಳೆ ಕೃಷಿಯ ಸಾರಕ್ಕೆ ಮತ್ತು ಶಕ್ತಿಗೆ ಮೂಲ ಎಂದು ಮೊದಲನೆಯದಾಗಿ ಹೇಳಿದರೆ, ಆಮೇಲೆ ವಿಶೇಷವಾದ ಆರ್ಥಿ ಕವಾದ ಬೆಳೆ ಯಾವುದು, ದೈಹಿಕ ಪರಿಶ್ರಮ ಮಾನಸಿಕ ಸಿದ್ದತೆ, ಮುಂದಾಲೋಚನೆ, ಸರಕಾರದ ಸವಲತ್ತುಗಳ ಸದುಪಯೋಗ, ಭೈಫ ಸಂಸ್ಥೆ ಯವರ ಆಶಯದ ಆಶ್ರಯ, ಸ್ವಾಭಿಮಾನ ಸ್ವಾವಲಂಬನೆ, ಹಸುರೀಕರಣ, ವೃಕ್ಷಾಧಾರಿತ ಕೃಷಿ ನಿರ್ವಹಣೆ, ಜಲ ಸಂರಕ್ಷಣೆ   ಔದಾರ್ಯದ ಬದುಕು, ಮಣ್ಣಿನ ಮೇಲೆ ಭರವಸೆ, ಮಾರಾಟದಲ್ಲಿ ಸ್ವಂತಿಕೆ  ಹೀಗೆ ಇಂತಹ ಗುಣಗಳು ಮೇಳೈಸುತ್ತಾ, ಮೇಳೈಸುತ್ತಾ ಒಬ್ಬೊಬ್ಬ ರೈತನೂ ಸಹಾ ಎಲ್ಲರ ಕಣ್ಣಿಗೆ ಕಾಣದಿದ್ದರೂ ಸಹಾ ಕಾಣುವ ಕಣ್ಣು ಇರುವವರಿಗೆ ಕಾಣುವಂತೆ ಈ ಪುಸ್ತಕದಲ್ಲಿ  ವಿವರಿಸಿದ್ದಾರೆ.   ನಾವು  ಮಾವನ್ನು ನೋಡಿದಾಗ ಗುಣ ವಿಶೇಷ ಇರುವಂತೆ ಅಂಬಟೆಯಲ್ಲಿಯೂ ಸಹಾ ಹಣ್ತನವಿದೆ.  ಗುಣ ವಿಶೇಷವಿದೆ. ಕಾಯಲ್ಲಿ ತಂಬುಳಿ, ಗೊಜ್ಜು ಮಾಡುತ್ತೇವೆ. ಅದು ಮಾಗಿ ಹಣ್ಣಾದಾಗ ತುಂಬಾ ರುಚಿಯಾಗಿರುತ್ತದೆ‌. ನಾವದನ್ನು ಸವಿಯಬಹುದು ಜ್ಯೂಸು, ಜ್ಯಾಮ್ ಮಾಡಬಹುದು.

 ಅಪುಳಕ,  ಅಂಜೂರ, ಕಾಡು ದ್ರಾಕ್ಷಿ, ಕಾಡು ಖರ್ಜೂರ,  ಕಾಡು ಹುಣಸೆ, ಇವುಗಳನ್ನು ಪರಿಚಯಿಸುವಂತಹ, ಸವಿಯುವಂತಹ  ಶಕ್ತಿ ಮತ್ತು ದೃಷ್ಟಿ   ಹೋಗಿರುವಂತಹ  ಈ ಸಂದರ್ಭದಲ್ಲಿ   ಒಂದು ಸಾಮಾನ್ಯ ಗರಿಕೆಯಂಥಹ ಅಥವಾ ಕೊನಾರಿಯಂತಹ, ಹುಲ್ಲಿನಂತಹ ರೈತರನ್ನು ಪರಿಚಯಿಸುವ ಮೂಲಕ ನಾವು ನೋಡಬೇಕಾದ ದೃಷ್ಟಿ ಗೆ ಹೊಸ ಹಸಿರನ್ನು ಹಚ್ಚಿದ್ದಾರೆ ಎಂದು ನಾವು ಸಂತೋಷಪಡಬೇಕು. ಒಟ್ಟೂ ಪ್ರಯತ್ನದ ಅನಂತರ ಹೀಗೆ ಒಂದಿಷ್ಟು ಯೋಚನೆ ಮಾಡಿದಾಗ ನನಗೆ ಹಾಗೆ ಬರುವ ವಿಚಾರ ಏನೆಂದರೆ ನಮ್ಮ ಬದುಕು ದುಡ್ಡಿನಿಂದ ಕಟ್ಟುವ ಕಡೆಗೆ ಎಲ್ಲ ರೈತರು ಸಹಾ ಪ್ರಯತ್ನ ಪಡ್ತಾ ಇದ್ದಾರೆ. ರೈತನಾಗಿ ನಾನಾದರೂ ಸಹಾ ಈ ಪ್ರಯತ್ನದಲ್ಲಿ ಹಿಂದೆ ಬೀಳುವ ಹಾಗಿಲ್ಲ. ಆದರೆ ದುಡಿಮೆಯಿಂದ  ಬದುಕು ಕಟ್ಟುವ ಸ್ಥಿತಿ ಬಾರದೇ ಹೋದರೆ  ಅಂತಿಮವಾಗಿ ನಮ್ಮ ಜೀವನಕ್ಕೆ ಅಥವಾ ನಮ್ಮ ಬದುಕಿಗೆ ಅಥವಾ ನಮಗೆ ಬದುಕು ಕೊಟ್ಟಂತಹ ಈ ಪ್ರಕೃತಿಗೆ, ಭೂಮಿಗೆ ಯಶಸ್ಸು ದೊರೆಯಬಲ್ಲದೇ ಎಂದು ಪ್ರಶ್ನೆ ಮಾಡಿದರೆ ಕಷ್ಟ ಕಷ್ಟ ಎಂದು ನನಗೆ ಕಾಣಿಸುತ್ತೆ. ಎಲ್ಲ ರೈತರು ಸಹಾ ಒಂದಲ್ಲ ಒಂದು ರೀತಿಯಿಂದ ತಮ್ಮ ಎಲ್ಲ ಸಾಧನೆ, ಸಾಹಸಗಳನ್ನು ದುಡ್ಡಿನ ಕಡೆಗೇ ಹರಿಸುವಂತಹ ಪರಿಸ್ಥಿತಿ ಇವತ್ತು ನಿರ್ಮಾಣ ಆಗಿದೆ.

 ಇದು ಒಂದು ಗಂಭೀರ ವಾದಂತಹ ಒಂದು ಆತಂಕದ ವಿಷಯವೂ ಇದೆ. ಯಾಕೆಂದರೆ ಪ್ರಪಂಚದಲ್ಲಿ ಕೋಟ್ಯಂತರ ಜೀವಿಗಳು ಅವುಗಳಲ್ಲಿ ಒಂದೊಂದು ಪ್ರಬೇಧಗಳಲ್ಲಿಯೂ ಕೋಟ್ಯಂತರ ಜೀವಿಗಳು ಈ ಇಷ್ಟೂ ಸಹಾ ದುಡ್ಡಿಲ್ಲದೇ ಬದುಕುತ್ತಿರುವಾಗ, ಪ್ರಕೃತಿ ಕೊಡುವಂತಹ ವಿಫುಲವಾದಂತಹ ಆಹಾರದಲ್ಲಿ, ಗಾಳಿಯಲ್ಲಿ ನೀರಿನಲ್ಲಿ, ತಮ್ಮ ಆನಂದವನ್ನು, ಆಹಾರವನ್ನು, ಬದುಕನ್ನೂ ಕಂಡುಕೊಳ್ಳುವ ವುದು ಸಾಧ್ಯ ಆಗ್ತಾ ಇರುವಾಗ ಅದಿಲ್ಲದೇ, ಅದಲ್ಲದೇ ಈ ಪ್ರಕೃತಿಯ ನೀರು, ಗಾಳಿ, ಗುಣಗಳನ್ನು ಪ್ರತಿ ದಿನವು ಪ್ರತಿ ಕ್ಷಣವೂ ಕಂಗೆಡಿಸ್ತಾ ರೈತನ ಬಗ್ಗೆ ನಾವು ಯೊಚನೆಯನ್ನೆ ಮಾಡದೇ ಇರುವಂತಹ ಸ್ಥಿತಿಗೆ ನಾವು ಹೋಗ್ತಾ ಇದ್ದೇವಲ್ಲಾ ಈ ಹಿನ್ನೆಲೆಯಲ್ಲಿ ವಿಚಾರ ಮಾಡಿದರೆ ಧಾರವಾಡದ ರೈತ ರಾಮನಗರಕ್ಕೆ ರೇಷ್ಮೆ ಗೂಡನ್ನು ತಂದು ಮಾರುವಂತಹ ಸ್ಥಿತಿ ಬಹಳ ಗಂಭೀರವಾದಂತಹ ಒಂದು ಲೋಪ ನಮ್ಮ ಕೃಷಿಯ ಲೋಪ ಎಂದು ನನಗೆ ಕಾಣಿಸ್ತದೆ‌. ನೂರಾರು ವರ್ಷ ಹಳೆಯ ಮರಗಳನ್ನೂ ಏರಿ ಹಣ್ಣು ಕೊಯ್ಯುವ ದುಡಿಯುವ ಅಸಾಧಾರಣ ಶಕ್ತಿ  ಹಲವು ಬಗೆಯ ಸಾಹಸೀಮನೋಭಾವ ರೈತರಿಗೆ ಇದ್ದಿದ್ದನ್ನು ಎಳವೆಯಿಂದ ನಾನು ನೋಡ್ತಾ ಬಂದಿದ್ದೇನೆ. 

ಕೌಶಲ ಕಡಿಮೆಯಾಗುತ್ತಿರುವ ಕಳವಳದ ಈ ಸಂದರ್ಭದಲ್ಲಿ  ಗರಿಕೆಯಲ್ಲಿ ನೆಗ್ಗಿಲ ಮುಳ್ಳಿನಲ್ಲಿ, ಕಾಡಿನ  ಒಂದೊಂದು ಸಸ್ಯಗಳಲ್ಲಿ ಇರುವ ಗುಣ ವಿಶೇಷ ಗಳನ್ನು ನಾವು ಅರಿಯದೇ, ಎತ್ತಿ ತೋರಿಸದೇ ಹೋದರೆ ಕೆಟ್ಟ ಭವಿಷ್ಯ ಇದ್ದೀತಾದ್ರಿಂದ ಈ ಪುಸ್ತಕ ಅಂತಹ ಹಲವು ಹೊಸ ಕೃಷಿಕರನ್ನ ,  ಸಾಧಕರನ್ನು ನಮಗೆ ಪರಿಚಯಿಸುವ ಸಾರ್ಥಕ ಕೆಲಸವನ್ನು ಮಾಡಿದೆ.   ನಾವು ಈ ಮೂವತ್ನಾಲ್ಕು ರೈತರ ತೋಟ ಅಥವಾ ಹೊಲಗಳಿಗೆ ಹೋಗಿ ಅಲ್ಲಿಯ ಕೃಷಿ ಅನುಭವಗಳನ್ನು ತಿಳಿತಾ ತಿಳಿತಾ ಅವರಿಗೆ ಸಹಕರಿಸ್ತಾ  ನಮ್ಮ ಶಕ್ತಿಯನ್ನು ಪ್ರಕೃತಿಯ ಶಕ್ತಿಯ ಜೊತೆಗೆ ಕೈಜೋಡಿಸ್ತಾ‌ ನಾವು, ಅವರು, ಪ್ರಕೃತಿ ಜೊತೆಗೆ ಒಂದಾಗುವಂತಹ ಒಂದು ಭೌತಿಕ ಸ್ಥಿತಿ, ವಾಸ್ತವ ದೃಷ್ಟಿ , ದೃಷ್ಟಿ ಗೋಚರವಾದಂತಹ ಸೃಷ್ಟಿಯ ಅನುಭೂತಿ ಎಲ್ಲರಿಗೂ ಆಗುವಂತಾಗಲಿ.

                                                                                                     *ಎ. ಪಿ ಚಂದ್ರಶೇಖರ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter