ಯುದ್ಧ

ಮನೆಯ ಪಕ್ಕದ ಮರದ ಮೇಲೆ ಬಂತೊಂದಳಿಲು
ವಾಸಕ್ಕೆ, ನೋಡಿದ ಇವಳು ಹೇಳಿದಳು ನನಗೆ
‘ಬಿಲ್ಲಿ ಇದೆ ಮನೆಯಲ್ಲಿ, ಹಿಡಿಯದಿದ್ದೇತೆ ಅದು?
ಏನು ಮಾಡುವುದೀಗ, ಹೇಳಿ ನೀವೇ?’

ಹೌದಲ್ಲ ಅನಿಸಿದರು, ಹೇಗೆ ಓಡಿಸುವುದದನು
ಅಥವಾ ಬಿಲ್ಲಿಯ ಕಾಯುವುದು ಹೇಗೆ ಸಾಧ್ಯ?
ಎಂದು ತಲ್ಲಣಗೊಂಡೆ, ಇವಳಿಗುತ್ತರ ಕೊಡದೆ
ಆದರೂ ಹೇಳುವಳವಳು ಆಗಾಗ ನನಗೆ!

ಆ ಸಂಜೆ ಮರದ ತುದಿಯಿಂದ ಕೇಳಿತು ಅಳಿಲು
ಚೀರುವುದು ಇಡೀ ಲೋಕ ಕೇಳಲೆನುವಂತೆ!
ಹೊರಬಂದು ನೋಡಿದರೆ, ಮರದ ಬುಡದಲಿ ಬಿಲ್ಲಿ
ಬಾಲವನ್ನಾಡಿಸುತ ನೋಡಿ ಮೇಲೆ

ಹೋಗಿ ಹಿಡಿಯಲು ಹೊರಟೆ ಬಿಲ್ಲಿಯನು ಮೆಲ್ಲ 
ಸಿಕ್ಕದೇ ಹಾರಿ ಹೋಯಿತು ಅದು ಮರದ ಮೇಲೆ
ಇನ್ನೇನು ಹಿಡಿದೇ ಹಿಡಿಯಿತು ಬಿಲ್ಲಿ ಅಳಿಲನ್ನು
ಎನುವಾಗ ಅಳಿಲು ಜಿಗಿಯಿತು ಆಚೆ ಈಚೆ

ಕೊನೆಗೊಂದು ಪುಟ್ಟಕೊಂಬೆಯ ಆಶ್ರಯಿಸಿತು ಅಳಿಲು
ಅದರ ಕೆಳಗಿನ ಕೊಂಬೆಯಲ್ಲಿ ಆ ಬಿಲ್ಲಿ
ದೃಷ್ಟಿನೆಟ್ಟು ಒಂದು ಇನ್ನೊಂದರಲಿ, ಕುಣಿಸು
ತ್ತಿದ್ದವು ಬಾಲವನು ಅಸಹನೆಯಲ್ಲಿ

ಸಣ್ಣ ಕಲ್ಲನ್ನೆತ್ತಿ ಎಸೆದೆ ಬಿಲ್ಲಿಗೆ ಒಡನೆ, 
ನೆಲಕೆ ಜಿಗಿಯಿತು ಅಸಮಾಧಾನದಿಂದ
ಅದರ ಕಣ್ಣಲಿ ಇತ್ತು ನನ್ನ ಮೇಲಿನ ಸಿಟ್ಟು
ಅದಕ್ಕಿಂತ ನಾ ಕ್ರೂರಿ ಎನುವ ನೆಲೆಯಿಂದ

ಇವಳು ಬಂದಳು ಹೊರಗೆ ಹಿಡಿದು ಬಿಲ್ಲಿಯ ಪೂಸಿ 
ಮಾಡುತ್ತ ನಡೆದಳು ಒಳಗೆ ಅಡಿಗೆಮನೆಗೆ
‘ಹಾಲು ನೀಡಿದರು, ಕುಡಿಯಲಿಲ್ಲ’ ಎಂದಳು. ನಾನು
ಮರಳಲ್ಲಿ ಅಳಿಲನೋಡಿಸಲು ಹೊರಟೆ

ಅಳಿಲು ಜಿಗಿದೋಡಿತು ಬಿಲ್ಲಿಗಿಂತಲು ನಾನು
ಕ್ರೂರಿ ಎಂಬಂತೆ, ಮರುದಿನ ಬೆಳಗ್ಗೆ
ಚಿಂವ್ ಚಿಂವ್ ಅಳಿಲು ಮರದಲ್ಲಿ ಅದನ್ನೆ ನೋಡುತ್ತ
ಕುಳಿತಿದೆ ಬಿಲ್ಲಿ ನೆಟ್ಟ ಬಾಣದಂತೆ !
                             					      *ಡಾ.ನಾ.ಮೊಗಸಾಲೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter