(ಹೊಸ ಧಾರವಾಹಿ ಪ್ರತಿ ರವಿವಾರ)
ಕಾದಂಬರಿ ಬಗ್ಗೆ:
“ಪಾಪ ಮತ್ತು ಪಶ್ಚಾತ್ತಾಪ ಇವೆರಡು ಮನುಷ್ಯಜೀವಿಗೆ ತಗುಲಿಕೊಂಡು ಬಂದಿರುವ ವಿದ್ಯಾಮಾನಗಳು. ಪಾಶ್ಚಾತ್ಯ ಸಾಹಿತ್ಯದಲ್ಲಿ ಗ್ರೀಕ್ ನಾಟಕಗಳಿಂದ ಹಿಡಿದು ಇತ್ತೀಚಿನ ಸಾಹಿತ್ಯದವರೆಗೂ ಪಾಪ ಮತ್ತು ಪರಿತಾಪ ಮುಖ್ಯ ಪಾತ್ರಗಳನ್ನು ವಹಿಸುತ್ತ ಬಂದಿವೆ. ಪಾಪವನ್ನು ಮಾಡಿಸುವ ಚಟ ಪಾಶ್ಚಾತ್ಯ ಧಾರ್ಮಿಕ ನಂಬಿಕೆಗಳ ಬುನಾದಿ. ಆದರೆ ಭಾರತೀಯ ಸಾಹಿತ್ಯ ಇದಕ್ಕಿಂದ ಭಿನ್ನವಾದ ಮಜಲುಗಳನ್ನು ಹೊಂದಿದೆ.
ಗೆಳೆಯ ಗುರುರಾಜ್ ಸನಿಲ್ ಅವರ ‘ವಿವಶ’ ಕಾದಂಬರಿ ಅನೇಕ ತಿಂಗಳುಗಳಿಂದ ನಮ್ಮ ನಡುವೆ ಒಂದು ಬಹು ಚರ್ಚಿತ ವಿಚಾರವಾಗಿ ಕೆಲಸ ಮಾಡುತ್ತಾ ಬಂದಿದೆ. ಮುಖ್ಯವಾಗಿ ಕನ್ನಡ ಸಾಹಿತ್ಯದಲ್ಲಿ ಡಾ. ಕಾರಂತ, ಕುವೆಂಪು, ಭೈರಪ್ಪ, ರಾವ್ ಬಹದ್ದೂರ, ಲಂಕೇಶ್, ತೇಜಸ್ವೀ, ಕಂಬಾರ, ದೇವನೂರು ಮುಂತಾದವರ ಕಾದಂಬರಿಗಳನ್ನು ನಾನು ಓದುತ್ತ ವಿಶಿಷ್ಟ ಅನುಭವಗಳನ್ನು ಪಡೆದಿದ್ದೇನೆ. ಜೀವನದ, ಬದುಕಿನ ಸ್ತರಗಳು ಬೇರೆ ಬೇರೆ. ಆದುದರಿಂದ ಪ್ರತಿಯೊಬ್ಬ ಬರಹಗಾರನೂ ಒಂದು ಭಿನ್ನ ಸ್ತರದಲ್ಲಿ ಬದುಕುತ್ತಿರುತ್ತಾನೆ. ಬಹುತೇಕ ಜನರು ನಾವೆಲ್ಲ ಒಂದಲ್ಲಾ ಒಂದು ಜಾತಿಯಲ್ಲಿ ಹುಟ್ಟಿಯೇ ಸಮಾಜದಲ್ಲಿ ಗುರುತಿಸಲ್ಪಡುತ್ತೇವೆ. ಹುಟ್ಟಿದ ಮಾತ್ರಕ್ಕೆ ಅದೇ ಜಾತಿಯಲ್ಲಿ ಸಾಯಬೇಕೆಂಬ ನಿಯಮವೇನೂ ಇಲ್ಲ. ಅದನ್ನು ಮೀರಬೇಕಾದ ಕೆಲಸವನ್ನು ಶಿಕ್ಷಣ ಹಾಗೂ ಸಂಸ್ಕೃತಿಯ ಮೂಲಕ ಮಾಡಬೇಕು. ತೀರಾ ಕೆಳಸ್ತರದ ಜೀವನವನ್ನು ಕಂಡಿರುವ ಗುರುರಾಜ್ ಸನಿಲ್ ಅವರು ತಮ್ಮ ಜೀವನಾನುಭವವನ್ನು ಪ್ರಾಮಾಣಿಕವಾಗಿ ವಿವಶ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.”
– ಗುರುರಾಜ ಮಾರ್ಪಳ್ಳಿ
ಕಾದಂಬರಿಕಾರರ ಮಾತು:
“ಇಲ್ಲಿನ ಕಥೆಯು ಸುಮಾರು ಸಾವಿರದಒಂಬೈನೂರ ಐವತ್ತರಿಂದ ಎರಡು ಸಾವಿರದ ಹತ್ತನೆಯ ಇಸವಿಯವರೆಗೆ ನಡೆದಿರುವ ವಿಲಕ್ಷಣ ಜನಜೀವನವೊಂದರ ವಿಸ್ತøತ ನೋಟವೆನ್ನಬಹುದು. ಆಗಿನ ಉಡುಪಿ ತಾಲೂಕಿನ ಸಣ್ಣದೊಂದು ಗ್ರಾಮದ ತಳಮಟ್ಟದ ಜನರ ಬದುಕನ್ನು ಪೀಡಿಸಿದ ಬಡತನ ಮತ್ತದಕ್ಕೆ ಜೊತೆಯಾದ ಅವರ ಅಜ್ಞಾನ ಹಾಗೂ ದುಶ್ಚಟ. ಅವಕ್ಕೆ ಅಂಟಿಕೊಂಡೇ ಸಾಗಿದ ಅವರ ಕಡಿವಾಣವಿಲ್ಲದ ಕಾಮ ಮತ್ತು ಕ್ರೌರ್ಯಗಳು. ‘ದೇವರು ಯಾಕೋ ಹುಟ್ಟಿಸಿದ್ದಾನೆ. ಹುಟ್ಟಿದ ಮೇಲೆ ಬದುಕಬೇಕು. ಅದಕ್ಕಾಗಿನಮಗೆ ತೋಚಿದಂತೆ ಬದುಕುತ್ತಿದ್ದೇವೆ. ಅದನ್ನು ಬಿಟ್ಟು ಬೇರೇನೂ ವಿಶೇಷವಿಲ್ಲ. ಇದ್ದರೂ ನಮ್ಮಂಥವರಿಗದು ಅನ್ವಯಿಸುವುದಿಲ್ಲ! ಎಂಬಂತೆಯೇ ಬದುಕಿದವರು ಇಲ್ಲಿನ ಮುಖ್ಯ ಪಾತ್ರಗಳು. ಅಂಥವರನ್ನು ಕರುಣೆ, ನ್ಯಾಯ ಮತ್ತು ಉದ್ಧಾರದ ನೆಪದಿಂದಲೂ ಲಾಭ, ದುರಾಸೆಯಿಂದಲೂ ಶೋಷಿಸುತ್ತ ನೆಮ್ಮದಿ ಕಾಣುತ್ತಿದ್ದ ಒಂದಷ್ಟು ಸ್ಥಿತಿವಂತವರ್ಗ ಹಾಗೂ ಅಂದಿನ ಕೆಲವು ಅಧಿಕಾರಿಗಳ ದೌರ್ಜನ್ಯಗಳನ್ನು ಸಮೀಪದಿಂದ ಕಾಣುತ್ತ ಬಂದವನು ನಾನು. ಆದ್ದರಿಂದ ಮನುಷ್ಯರು ಹೀಗೂ ಬದುಕಬಹುದೇ? ಸುತ್ತಮುತ್ತಲಿನ ನಾಗರಿಕ ಸಮಾಜದ ಮೇರುಮಟ್ಟದ ಸಂಸ್ಕೃತಿ, ಸಂಸ್ಕಾರಗಳು ಅವರನ್ನೆಲ್ಲ ತಾವೆಣಿಸಿದಂಥ ಪರಿಪೂರ್ಣತೆಯತ್ತ ಕೊಂಡೊಯ್ಯುತ್ತಿರುವಾಗ ಈ ಜನರು ಮಾತ್ರ ಯಾವೊಂದು ದೂರದೃಷ್ಟಿತ್ವವೂ ಇಲ್ಲದೆ ಪಶ್ಚಾತ್ತಾಪ ಅಥವಾ ಪಾಪಪ್ರಜ್ಞೆಗಳೆಲ್ಲ ತಮ್ಮ ಮನೆಯ ಹಿತ್ತಲ ಬೇಲಿಯ ಮುಳ್ಳುಕಂಟಿಗಳಿದ್ದಂತೆಯೇ ಎಂದು ನಿಸ್ಸಾರವಾಗಿ ಬದುಕಿಬಿಟ್ಟರಲ್ಲ! ಎಂಬ ಆಘಾತ ಮತ್ತು ಅನುಕಂಪದಿಂದ ಹುಟ್ಟಿದ ವಿಚಿತ್ರ ತಳಮಳವೇ ನನ್ನಿಂದ ಈ ಕೃತಿಯನ್ನು ಬರೆಯಿಸಿತೆಂದು ಕಾಣುತ್ತದೆ. ಇಲ್ಲಿ ಕಲ್ಪಿತವಾಗಿರುವ ಹೆಚ್ಚಿನ ಪಾತ್ರಗಳು ನಾನು ಸಮೀಪದಿಂದ ಕಂಡವು ಮತ್ತು ಒಡನಾಡಿದವು. ಹಾಗಾಗಿ ಈ ಕಾದಂಬರಿಯು ಕೆಲವು ದಶಕಗಳಷ್ಟು ಹಿಂದೆ ಸರಿದ ಕಾಲಮಾನದ ವಿಭಿನ್ನ ಜನಜೀವನವೊಂದರ ಚಿತ್ರಣವನ್ನು ವಸ್ತುನಿಷ್ಠವಾಗಿ ಪ್ರಿಯ ಓದುಗರಿಗೆ ಕಾಣಿಸಬಲ್ಲದು ಎಂಬುದು ನನ್ನ ನಂಬಿಕೆ.”
*ಗುರುರಾಜ ಸನಿಲ್
ಧಾರವಾಹಿ–1.
‘ನನ್ನ ಪಿತ್ರಾರ್ಜಿತ ಆಸ್ತಿಯಲ್ಲಿ ನನಗೇ ಸಮಪಾಲು ಕೊಡುವುದಿಲ್ಲವಂತೆ! ಎಷ್ಟೊಂದು ಕೊಬ್ಬು ಇವುಗಳಿಗೆ? ಅಪ್ಪ ಸಾಯುವ ಮುಂಚೆ ಎಲ್ಲವನ್ನೂಇತ್ಯರ್ಥ ಮಾಡಿಯೇ ಕಣ್ಣುಮುಚ್ಚಿದರಲ್ಲ? ಹಾಗಾದರೆ ಇವರು ನನಗೆ ಕೊಡುತ್ತಿರುವುದು ಇವರ ಹೆಂಡತಿಯರ ಮನೆಯ ಆಸ್ತಿಯನ್ನಾ? ಅಪ್ಪ ಇದ್ದಾಗ ನಾಯಿಗಳಂತೆ ಬಾಲ ಮುದುರಿಕೊಂಡಿದ್ದ ಈ ಅಣ್ಣಂದಿರು,ಈಗ ಒಡಹುಟ್ಟಿದ ಸಂಬಂಧವನ್ನೇ ಮರೆತು ಗುಳ್ಳೆ ನರಿಗಳಂತೆ ಆಡುತ್ತಿದ್ದಾರೆಂದರೆ ಏನರ್ಥ? ನನ್ನ ಅಜ್ಜ, ಅಪ್ಪನಿಂದ ನ್ಯಾಯವಾಗಿ ಬರಬೇಕಾದ ಆಸ್ತಿಯನ್ನು ನಾನು ಕೇಳುತ್ತಿರುವುದು. ಅದನ್ನು ಕೊಡದಿದ್ದರೆ ಇವರನ್ನು ಸುಮ್ಮನೆ ಬಿಡಲಿಕ್ಕುಂಟಾ! ಕಿರಿಯಣ್ಣ ಶಂಭು ಹೋಗಲಿ ಅವನು ಮೊದಲಿನಿಂದಲೂ ಕೆಡುಕ. ಆದರೆ ಹಿರಿಯಣ್ಣ ರಘುರಾಮ…?ನಿನ್ನೆ ಮೊನ್ನೆಯವರೆಗೆ ತಂದೆಯ ಸ್ಥಾನದಲ್ಲಿ ನಿಂತು ನಮ್ಮನ್ನೆಲ್ಲ ಅಕ್ಕರೆಯಿಂದ ನೋಡಿಕೊಳ್ಳುತ್ತ,‘ತಮ್ಮಾ… ನೀವೆಲ್ಲಾ ನನ್ನ ಮಕ್ಕಳಿದ್ದಂತೆ ಮಾರಾಯ. ಒಡಹುಟ್ಟಿದವರು ನಾವು, ಕೊನೆಯವರೆಗೂ ಒಗ್ಗಟ್ಟಿನಲ್ಲಿ ಬಾಳಬೇಕು ನೋಡು!’ ಎಂದು ಬೆಣ್ಣೆಯಂತೆ ಮಾತಾಡುತ್ತಿದ್ದವನುಈಗ ಬೆಳ್ಳಗಿನ ಹೆಂಡತಿಯೊಬ್ಬಳು ಬಗಲಿಗೆ ಬಂದು ನಿಂತ ಕೂಡಲೇರಕ್ತ ಸಂಬಂಧವನ್ನೇಕಡಿದುಕೊಳ್ಳಲು ಹೊರಟಿದ್ದಾನಲ್ಲ. ಇದೆಲ್ಲ ಇವರ ಒಳ್ಳೆಯದಕ್ಕೆಂದುಕೊಂಡರಾ ಮೂರ್ಖರು…!
ಆ ಹೆಂಗಸರಾದರೂ ಹೊರಗಿನಿಂದ ಬಂದವರು.ಅವರು ತಂತಮ್ಮಮಕ್ಕಳು ಮರಿಗಳ ಮತ್ತು ಸ್ವಂತ ಕುಟುಂಬದ ಮೋಹದಿಂದ ಹಾಗೆಲ್ಲಾ ಆಡುತ್ತಿರ ಬಹುದು. ಆದರೆ ಇವರಿಗೆ ಬುದ್ಧಿ ಬೇಡವಾ? ಪಿತ್ರಾರ್ಜಿತ ಆಸ್ತಿಯನ್ನು ಅಪ್ಪನೊಂದಿಗೆ ಕೂಡಿ ಇವರೇ ತಮ್ಮ ಜೀವ ತೇಯುತ್ತ ಕಾಪಾಡಿಕೊಂಡು ಬಂದವರಂತೆ. ಹಾಗಾಗಿ ಸಮ ಪಾಲು ಕೊಡಲು ಸಾಧ್ಯವಿಲ್ಲವಂತೆ. ಇದೆಂಥ ನ್ಯಾಯ? ಹಿರಿಯರ ಆಸ್ತಿಪಾಸ್ತಿಯನ್ನು ಅವರ ಕಿರಿಯವರಲ್ಲಿ ಯಾರಾದರೂ ದೊಡ್ಡವರು ರಕ್ಷಿಸಿಕೊಂಡು ಬರುವುದು ಸಹಜವಲ್ಲವಾ.ಅದಕ್ಕೆ ಪ್ರತಿಯಾಗಿ ಕಿರಿಯರ ಪಾಲನ್ನೇ ಕಬಳಿಸುವುದೆಂದರೆ…? ಅಲ್ಲಾ, ನಿನ್ನೆಯವರೆಗೆ ಅನ್ಯೋನ್ಯವಾಗಿದ್ದ ಈಶಂಭಣ್ಣ ಆಸ್ತಿ ಪಾಲಿನ ಮಾತೆತ್ತಿದ ಕೂಡಲೇ ನನ್ನನ್ನೇ ಕೊಲ್ಲಲು ಕತ್ತಿ ಹಿಡಿದು ಬಂದು ಬಿಟ್ಟನಲ್ಲಾ, ಎಂಥ ಅವಮಾನ! ಒಂದುವೇಳೆ ಆಕ್ಷಣ ನಾನೂ ದುಡುಕುತ್ತಿದ್ದರೆ ಅವನು ಉಳಿಯುತ್ತಿದ್ದನಾ? ಆದರೆ ನನಗೆ ನನ್ನದೇಆದ ಕನಸುಗಳಿವೆಯಲ್ಲ…! ಅವನ್ನು ಕಟ್ಟಿಕೊಂಡು ದಡ ಸೇರುವುದರ ಬಗ್ಗೆ ಯೋಚಿಸುತ್ತಿರುವುದರಿಂದ ಈವರೆಗೆ ಇವರನ್ನೆಲ್ಲ ಸಹಿಸಿಕೊಳ್ಳುತ್ತ ಬಂದೆ. ಹಾಗಾಗಿಯೇ ಬಹುಶಃ ಆ ಬೇವರ್ಸಿ ಇವತ್ತು ನನ್ನ ಕೈಯಿಂದ ಬಚಾವಾದುದು! ಅದಕ್ಕೆ ಸರಿಯಾಗಿ ಇವಳೊಬ್ಬಳು ನನ್ನ ಹೆಂಡತಿ.ಬರೇ ಒಂದು ಬೆಪ್ಪು ತಕ್ಕಡಿ ಹೆಂಗಸು! ಯಾವ ವಿಚಾರವನ್ನೂ ಗಂಭೀರವಾಗಿ ತೆಗೆದು ಕೊಳ್ಳುವವಳಲ್ಲ. ಎಲ್ಲದಕ್ಕೂ ಒಂದೇ ರಾಗ,‘ಅಯ್ಯೋ, ಸುಮ್ಮನಿರಿ…,ದುಡುಕ ಬೇಡಿ. ದೇವರಿದ್ದಾನೆ.ಎಲ್ಲವನ್ನೂ ಅವನೇ ನೋಡಿಕೊಳ್ಳುತ್ತಾನೆ!’ ಎನ್ನುತ್ತ ನನ್ನ ಆಸೆ, ಆಕಾಂಕ್ಷೆಗಳಿಗೆಲ್ಲ ಕಲ್ಲು ಹಾಕುತ್ತ ಬಂದಳು. ದೇವರು ಎಂಥದು ನೋಡಿಕೊಳ್ಳುವುದು ಕರ್ಮ…? ಅವನು ಯಾರಿಗೆ ಏನೇನು ಮತ್ತು ಎಷ್ಟೆಷ್ಟು ಕೊಡಬೇಕೋ ಅಷ್ಟಷ್ಟನ್ನುಕೊಟ್ಟು ಕೈತೊಳೆದುಕೊಂಡು ಎಲ್ಲೋ ಕುಳಿತಿದ್ದಾನೆ.ಆದರೆ ಅದನ್ನು ಉಳಿಸಿಕೊಳ್ಳುವುದು ಬಿಡುವುದು ನಮ್ಮ ನಮ್ಮ ಕೈಯಲ್ಲೇ ಇರುವುದು.
ಇನ್ನೂ ಎಷ್ಟು ಕಾಲಾಂತ ಈ ಒಡಹುಟ್ಟಿದ ಸ್ವಾರ್ಥಿಗಳ ಜೀತದಾಳಾಗಿ ಬದುಕ ಬೇಕು ನಾನು? ನನಗೂ ಸಂಸಾರವಿದೆ. ಅದಕ್ಕೊಂದು ಸ್ವತಂತ್ರ ನೆಲೆಯಾಗಬೇಕು ಮತ್ತುನನ್ನದೇ ಸ್ವಂತ ಆಸ್ತಿಪಾಸ್ತಿ ಮಾಡಬೇಕೆಂಬನನ್ನ ಹಂಬಲಇಂದು ನಿನ್ನೆಯದಾ? ಅದೆಲ್ಲಇವರಿಗೆಹೇಗೆ ತಿಳಿಯಬೇಕು? ಇಲ್ಲ, ನನ್ನ ಪಾಲಿನದ್ದು ಅದೊಂದು ಹಿಡಿ ಮಣ್ಣಾದರೂ ಸರಿ, ಯಾರಿಗೂ ಬಿಟ್ಟುಕೊಡುವುದಿಲ್ಲ. ಅದನ್ನು ಪಡೆಯುವಲ್ಲಿ ಯಾವಅಡೆತಡೆಗಳು ಬಂದರೂಅಥವಾ ಎಂಥರಕ್ತ ಸಂಬಂಧಗಳು ಕಡಿದು ಹೋದರೂ ಹಿಂಜರಿಯುವುದಿಲ್ಲ. ಅವಶ್ಯಕತೆ ಬಿದ್ದರೆ ಯಾರನ್ನಾದರೂ ಮುಗಿಸಲೂ ಸಿದ್ಧ! ಯಾರನ್ನು ಯಾಕೆ? ನ್ಯಾಯವಾಗಿ ಆಸ್ತಿ ಕೇಳಿದ್ದಕ್ಕೆ ಒಡಹುಟ್ಟಿದ ತಮ್ಮನನ್ನೇ ಕಡಿಯಲು ಬಂದನಲ್ಲ, ಆ ಅಣ್ಣ ಎನ್ನುವ ಶಂಭುವನ್ನೇ ಮುಗಿಸುತ್ತೇನೆ. ಅನಂತರ ದೊಡ್ಡಣ್ಣಂದಿರನ್ನು ಸಂಭಾಳಿಸುವುದು ಮಹಾ ಕೆಲಸವಲ್ಲ. ಆದರೆ ಇಂಥದ್ದಕ್ಕೆಲ್ಲ ಗೆಳೆಯ ಶಿವನೇ ಸರಿಯಾದ ವ್ಯಕ್ತಿ.ಅವನು ನನ್ನ ಬಾಲ್ಯ ಸ್ನೇಹಿತ ಮತ್ತುನನಗಾಗಿಜೀವಕೊಡಲೂ ಸಿದ್ಧನಿರುವವನು!’ಎಂದುನಡಂತೂರು ದೊಡ್ಡಮನೆಯ ಮುದ್ದು ಶೆಟ್ಟರ ಆರು ಜನ ಮಕ್ಕಳಲ್ಲಿ ಕೊನೆಯವರಾದ ಶ್ರೀಧರಶೆಟ್ಟರು ಸುಮಾರು ದೂರದ ತಮ್ಮ ಬಾಕಿಮಾರು ಗದ್ದೆಯ ಹುಣಿಯಲ್ಲಿ ಗಾಯಗೊಂಡ ಹುಲಿಯಂತೆ ಶತಪಥ ಹೆಜ್ಜೆ ಹಾಕುತ್ತ ಚಿಂತಿಸುತ್ತಿದ್ದರು.
ಅದೇ ಹೊತ್ತಲ್ಲಿ ಶೆಟ್ಟರನ್ನು ಅರಸಿಕೊಂಡು ಅವರ ಗೆಳೆಯ ಶಿವ ಅವರ ಮನೆಯತ್ತ ಹೋದ. ಆದರೆ ಅಲ್ಲಿ ಆಗಷ್ಟೇ ಅಣ್ಣತಮ್ಮಂದಿರ ನಡುವೆ ನಡೆದ ರಾದ್ಧಾಂತವನ್ನು ಶೆಟ್ಟರ ಪತ್ನಿ ಕಾವೇರಮ್ಮದುಃಖದಿಂದ ಹೇಳಿಕೊಂಡು ಅತ್ತರು. ತನ್ನ ಜೀವದ ಗೆಳೆಯನ ಪತ್ನಿಯ ಗೋಳಾಟವನ್ನು ಕಂಡ ಶಿವ ವಿಚಲಿತನಾದವನು,‘ನೋಡಿ ಕಾವೇರಕ್ಕಾ, ನೀವು ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ನಿಶ್ಚಿಂತೆಯಿಂದಿರಬೇಕು.ಎಲ್ಲವೂ ಸಮ ಆಗುತ್ತದೆ.ಶ್ರೀಧರಣ್ಣ ಎಲ್ಲಿದ್ದರೂ ಕರೆದು ಕೊಂಡು ಬರುವ ಜವಾಬ್ದಾರಿ ನನ್ನದು!’ ಎಂದು ಸಾಂತ್ವನ ಹೇಳಿ ಶೆಟ್ಟರನ್ನು ಹುಡುಕುತ್ತ ಗದ್ದೆಯತ್ತ ನಡೆದ.
ಅಲ್ಲೇ ಒಂದಷ್ಟು ದೂರದ ಗದ್ದೆಯ ಹುಣಿಯಲ್ಲಿ ಅತ್ತಿಂದಿತ್ತ ನಡೆದಾಡುತ್ತಿದ್ದ ಶ್ರೀಧರ ಶೆಟ್ಟರು ಹತಾಶೆಯಿಂದ ಕುದಿಯುತ್ತಿದ್ದರು. ಅವರೊಳಗಿನ ಕ್ರೋಧದ ಯೋಚನೆಯಷ್ಟೇ ವೇಗದಲ್ಲಿ ಅವರ ಒರಟು ಹೆಜ್ಜೆಗಳು ಗದ್ದೆಯ ಹುಣಿಯಲ್ಲಿ ಹುಲುಸಾಗಿ ಬೆಳೆದಿದ್ದ ದಟ್ಟ ಗರಿಕೆಹುಲ್ಲು ಮತ್ತು ಕೋಣದ ಹುಲ್ಲುಗಳನ್ನು ಜಜ್ಜಿ ತುಳಿಯುತ್ತ ಅಡ್ಡಾಡುತ್ತಿದ್ದವು. ಆದರೆ ಕೊನೆಯಲ್ಲಿ ಶತ್ರುವನ್ನು ಮುಗಿಸುವ ನಿರ್ಧಾರ ಬಲಗೊಳ್ಳುತ್ತಲೇ ಅವು ತುಸು ಶಾಂತವಾದವು. ಅಷ್ಟರಲ್ಲಿ ಶಿವ ಬರುತ್ತಿದ್ದುದನ್ನು ಕಂಡವರು ಮರಳಿ ಉನ್ಮತ್ತರಾದರು. ಶೆಟ್ಟರನ್ನು ಸಮೀಪಿಸಿದ ಶಿವ,‘ನೀವೆಂಥದು ಶ್ರೀಧರಣ್ಣ… ಎಲ್ಲಾ ಬಿಟ್ಟು ಹೀಗೆ ಬಂದು ಬಿಡುವುದಾ? ಅಲ್ಲಿ ಕಾವೇರಕ್ಕ ಕಂಗಾಲಾಗಿದ್ದಾರೆ ಗೊತ್ತುಂಟಾ!’ ಎಂದು ಆಕ್ಷೇಪಿಸಿದ.
‘ಅಯ್ಯೋ…! ಮತ್ತೇನು ಮಾಡುವುದು ಶಿವಾ…? ಒಡಹುಟ್ಟಿದವರೇ ಕಡಿದು ಕೊಲ್ಲುವಷ್ಟು ಮುಂದುವರೆದರೆಂದರೆ ಅಂಥ ಜಾಗದಲ್ಲಿ ಹೇಗೆ ನಿಲ್ಲುವುದು ಹೇಳು?’
‘ವಿಷಯ ನನಗೂ ತಿಳಿಯಿತು ಶ್ರೀಧರಣ್ಣ. ಆದರೆ ಅದಕ್ಕೆಲ್ಲಾ ನೀವು ಇಷ್ಟೊಂದು ಕುಗ್ಗಬಾರದು. ನಿಮ್ಮ ಪಾಲನ್ನು ನೀವು ಕೇಳಿದ್ದರಲ್ಲಿ ಅರ್ಥವಿದೆ. ಆದರೆ ಅದನ್ನವರು ಕೊಡದಿದ್ದರೆ ನಾವೂ ಬಿಡುವುದು ಬೇಡ. ಕೋರ್ಟಿಗೆ ಹೋಗುವ. ಪಂಚ ಪಾಂಡವರ ಮತ್ತು ಕೌರವರ ಮಧ್ಯೆನಡೆದ ಯುದ್ಧದ ಕಥೆ ಗೊತ್ತುಂಟಲ್ಲವಾ ನಿಮಗೆ. ಅದು ಚೂರೂ ಸುಳ್ಳಲ್ಲ.ಆಸ್ತಿಪಾಸ್ತಿಗಾಗಿ ಇಲ್ಲಿ ಯಾರು ಯಾರನ್ನಾದರೂ ಲಗಾಡಿ ತೆಗೆಯುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಗತಿಯಲ್ಲವಾ ಶ್ರೀಧರಣ್ಣಾ!’
‘ಅರೇ…! ಕೋರ್ಟಿಗೆ ಯಾಕೆ ಹೋಗಬೇಕು ಶಿವಾ? ನಾನೇನು ಅವರ ಆಸ್ತಿಯನ್ನು ಕೇಳುತ್ತಿದ್ದೇನಾ…? ಇಲ್ಲವಲ್ಲ! ಇಲ್ಲ ಶಿವಾ ನಾನಿದನ್ನು ಸುಮ್ಮನೆ ಬಿಡುವುದಿಲ್ಲ. ಆ ದುರಹಂಕಾರಿ ಶಂಭುವನ್ನು ಮುಗಿಸಿಯೇ ತೀರಬೇಕು. ಹಾಗಾದರೆ ಮಾತ್ರ ಉಳಿದವರು ಬಾಲ ಮುದುರಿಕೊಳ್ಳುತ್ತಾರೆ!’ಎಂದ ಶೆಟ್ಟರು ಕಟಕಟ ಹಲ್ಲು ಕಡಿದರು.
‘ಛೇ, ಛೇ!, ಹಾಗೆಲ್ಲ ಯೋಚಿಸುವುದು ಬೇಡ ಶ್ರೀಧರಣ್ಣ. ಎಷ್ಟಾದರೂ ಅಣ್ಣ ತಮ್ಮಂದಿರಲ್ಲವಾ? ಸ್ವಲ್ಪ ತಾಳ್ಮೆಯಿಂದ ಪರಿಸ್ಥಿತಿಯನ್ನುನಿಭಾಯಿಸುವ. ಕೊಡದೆ ಎಲ್ಲಿಗೆ ಹೋಗುತ್ತಾರೆ? ಇನ್ನೊಮ್ಮೆ ಎಲ್ಲರನ್ನೂ ಸೇರಿಸಿ ಪಂಚಾತಿಕೆಮಾಡಿಸಿ. ಅವರು ಆಗಲೂ ಒಪ್ಪದಿದ್ದರೆ ಮುಂದೇನು ಮಾಡಬೇಕೆಂಬುದನ್ನುಆಮೇಲೆ ನಿರ್ಧರಿಸುವ!’
‘ಇಲ್ಲ ಶಿವ ನನ್ನ ಅಣ್ಣಂದಿರ ಸ್ವಭಾವ ನಿನಗಿನ್ನೂ ಸರಿಯಾಗಿ ಗೊತ್ತಿಲ್ಲ. ಈ ಪಾಲುಪಟ್ಟಿಯ ಮಾತುಕತೆ ಅಪ್ಪ ಇದ್ದಾಗಿನಿಂದಲೂ ನಡೆದು ಬಂದಿದೆ.ಅವರು ಪಾಪ ಸಾಯುವ ಹೊತ್ತಲ್ಲೂ ಇವರಿಗೆಲ್ಲ ಬುದ್ಧಿವಾದ ಹೇಳಿಯೇ ಸತ್ತರು. ಆದರೆ ಆಗ ಅವರ ಮಾತಿಗೆ ಪೊಳ್ಳು ಗೌರವ ತೋರಿಸುತ್ತಿದ್ದ ಈ ನಾಯಿಗಳು ಈಗ ಬಾಲ ಬಿಚ್ಚಿವೆ. ಹೆದರಿಕೆ ಬೆದರಿಕೆಗಳಿಗೆಲ್ಲ ಬಗ್ಗುವ ಜನ ಇವರಲ್ಲ ಶಿವಾ. ಇವರಿಗೇನಿದ್ದರೂ ಪೆಟ್ಟೊಂದು ತುಂಡೆರಡು ಅಂತಾರಲ್ಲ ಹಾಗೆ ಮಾಡಿದರೆ ಮಾತ್ರ ಬುದ್ಧಿ ಬರುವುದು. ಯಾಕೆಂದರೆ ರಘುರಾಮಣ್ಣ, ಪುರಂದರಣ್ಣ ಒಪ್ಪಿದರೂ ಆ ಬೇವರ್ಸಿ ಖಂಡಿತಾ ಒಪ್ಪುವುದಿಲ್ಲ. ಹಾಗಾಗಿಯೇ ಇವತ್ತು ಅವನು ನನ್ನನ್ನು ಕೊಲ್ಲಲು ಬಂದಿದ್ದು.ಇವಳಲ್ಲದಿದ್ದರೆ ಕಡಿದೇ ಹಾಕುತ್ತಿದ್ದನೇನೋ! ಇನ್ನು ಸುಮ್ಮನಿರುವುದರಲ್ಲಿ ಅರ್ಥವಿಲ್ಲ ಶಿವಾ!’ಎಂದು ಶೆಟ್ಟರು ಕೋಪದಿಂದ ಕಂಪಿಸುತ್ತ ಅಂದಾಗ ಶಿವನಿಗೂ ಸಹಿಸದಾಯಿತು.
‘ಆಯ್ತು ಶ್ರೀಧರಣ್ಣ ನಿಮ್ಮ ಮೇಲೆ ಕೈ ಮಾಡಲು ಬಂದವರು ಯಾರೇ ಆಗಿರಲಿ ಅವರು ನನಗೂ ಶತ್ರುಗಳೇ! ಆದರೂ ಇನ್ನೊಮ್ಮೆ ಅವರನ್ನು ಪಂಚಾಯ್ತಿ ಕರೆಯಿಸಿ. ಅಲ್ಲಿ ಅವನು ಏನು ಹೇಳುತ್ತಾನೆ, ಏನು ಮಾಡುತ್ತಾನೆ ಎಂಬುದನ್ನುನೋಡಿಕೊಂಡು ಮುಂದಿನ ಹೆಜ್ಜೆಯಿಡುವ ಆಗದಾ…?’ ಎಂದುಶಿವ ಏನನ್ನೋಯೋಚಿಸುತ್ತಅಂದ.
‘ಸರಿ.ನಿನ್ನ ಮಾತಿಗೆ ಬೆಲೆಕೊಟ್ಟು ಅದನ್ನೂ ಮಾಡಿ ನೋಡುತ್ತೇನೆ. ಆದರೆ ಅದೂ ವ್ಯರ್ಥವಾದರೆ ಅವನನ್ನು ಮುಗಿಸಲೇಬೇಕು ಮತ್ತು ಆ ಕೆಲಸ ನಿನ್ನಿಂದಲೇ ಆಗಬೇಕುಶಿವಾ.ನಂತರ ಅದೇನಾಗುವುದೋ ನಾನು ನೋಡಿಕೊಳ್ಳುತ್ತೇನೆ. ನನ್ನ ಒಂದಷ್ಟು ಆಸ್ತಿಪಾಸ್ತಿ ಮಾರಿ ಹೋದರೂ ಚಿಂತೆಯಿಲ್ಲ. ಪ್ರಾಣ ಕೊಟ್ಟಾದರೂ ನಿನ್ನನ್ನು ಉಳಿಸಿಕೊಳ್ಳುತ್ತೇನೆ ಶಿವಾ.ನಿನಗೆ ನನ್ನ ಮೇಲೆ ವಿಶ್ವಾಸ ಉಂಟಲ್ಲವಾ?’
‘ಛೇ,ಛೇ! ಎಂಥ ಮಾತಾಡ್ತೀರಿ ಶ್ರೀಧರಣ್ಣಾ…? ಹಾಗೆಲ್ಲ ನನ್ನನ್ನು ಅಪನಂಬಿಕೆಯಿಂದ ನೋಡ ಬೇಡಿ. ನಮ್ಮ ದೇಹಗಳು ಎರಡಾದರೂ ಪ್ರಾಣವೊಂದೇ ಎಂಬಂತೆ ಬೆಳೆದವರು ನಾವು.ಅಂದ ಮೇಲೆ ವಿಶ್ವಾಸ, ಅವಿಶ್ವಾಸದ ಮಾತೆಲ್ಲಿ ಬಂತು.ನನ್ನ ಉಸಿರಿರುವತನಕ ನಿಮ್ಮ ಒಂದು ಕೂದಲು ಕೊಂಕಲೂಬಿಡುವುದಿಲ್ಲ. ಚಿಂತಿಸಬೇಡಿ. ನಾಳೆಯೇ ಪಂಚಾಯ್ತಿಸೇರಿಸಿ!’ ಎಂದು ಶಿವ ಆವೇಶದಿಂದ ಸೂಚಿಸಿದ.ಗೆಳೆಯನ ಭರವಸೆಯಿಂದ ಶೆಟ್ಟರ ಕಣ್ಣುಗಳುತೇವಗೊಂಡವು.
‘ನಿನ್ನಂತಹ ಸ್ನೇಹಿತನನ್ನು ಪಡೆದ ನನ್ನ ಜೀವನಸಾರ್ಥಕವಾಯಿತುಶಿವಾ. ನನಗಾಗಿ ನೀನು ಏನು ಮಾಡಲೂ ಸಿದ್ಧನಿರುವಿಯೆಂದು ಗೊತ್ತುಂಟು!’ ಎಂದು ಅವನನ್ನು ಬಾಚಿ ತಬ್ಬಿಕೊಂಡ ಶೆಟ್ಟರು,‘ನಡೆ ಮನೆಗೆ ಹೋಗುವ!’ ಎಂದು ಅವನ ಹೆಗಲ ಮೇಲೆ ಕೈ ಹಾಕಿಕೊಂಡು ಮನೆಯತ್ತ ನಡೆದರು.
(ಮುಂದುವರೆಯುವುದು)
2 thoughts on “ವಿವಶ”
ವಿಶ್ವಧ್ವನಿಯಲ್ಲಿ ಮೊದಲ ಬಾರಿ ಗುರುರಾಜ್ ಸನಿಲ್ ಅವರ ವಿವಶ ಕಾದಂಬರಿ ಧಾರಾವಾಹಿಯಾಗಿ ಪ್ರಕಟವಾಗುತ್ತಿರುವುದಕ್ಕೆ ವಿಶ್ವಧ್ವನಿ ಸಂಪಾದಕ ಮಂಡಳಿ ಹಾಗೂ ಕಾದಂಬರಿಕಾರರಾಗಿರುವ ಗುರುರಾಜ್ ಸನಿಲ್ ಅವರಿಗೆ ಶುಭ ಹಾರೈಕೆಗಳು.
ಮೊದಲ ಅಧ್ಯಾಯ ಕುತೂಹಲದಿಂದ ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಪ್ರಬುದ್ಧವಾದ ಭಾಷೆ ಹಾಗೂ ಸರಳ ನಿರೂಪಣೆಯ ಶೈಲಿ ಕಥೆಯ ಓಗಕ್ಕೆ ಇನ್ನಷ್ಟು ಮೆರುಗು ನೀಡಿದೆ. ಅಭಿನಂದನೆ
ಧನ್ಯವಾದ ಅನಿತಾ ಮೇಡಮ್…