ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರ ಹನ್ನೆರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಎಪ್ರಿಲ್ 16ರಂದು ಶನಿವಾರ ಕಲಿನಾ ಕ್ಯಾಂಪಸ್ಸಿನ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಡಾ. ಜಿ.ಎನ್.ಉಪಾಧ್ಯ ವಿರಚಿತ ಮುಂಬಯಿ ಕನ್ನಡ ಸಾಹಿತ್ಯ ಚರಿತ್ರೆ ಎರಡು ಸಂಪುಟಗಳು, ಗೋದಾವರಿ ತೀರದಲ್ಲಿ ಕನ್ನಡದ ಕುರುಹುಗಳು, ಅನುಭಾವ ಸಾಹಿತ್ಯ ವಿಹಾರ, ಅನಿಕೇತನ ಪ್ರಜ್ಞೆ ಮತ್ತು ಕನ್ನಡ, ಸಾಹಿತ್ಯ ಮಾರ್ಗ, ಸೊನ್ನಲಿಗೆಯ ಸಿದ್ಧರಾಮ, ವಾಙ್ಮಯ ವಿವೇಕ(ಜನಾರ್ದನ ಭಟ್ ಸಾಹಿತ್ಯ ಸಮೀಕ್ಷೆ), ಮಾಯಾನಗರಿಯಲ್ಲಿ ಕನ್ನಡ ಡಿಂಡಿಮ, ಕನ್ನಡ ಕಲಿಯೋಣ ಬನ್ನಿ(8ನೇ ಆವೃತ್ತಿ), ಬಣ್ಣಗಳ ಮಾಂತ್ರಿಕ ದೇವುದಾಸ ಶೆಟ್ಟಿ(ಡಾ.ಪೂರ್ಣಿಮಾ ಶೆಟ್ಟಿ ಅವರೊಂದಿಗೆ), ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ ಅಥವಾ ಕನ್ಯಾ ವಿಕ್ರಯದ ಪರಿಣಾಮವು(ಸಂ) ಕೃತಿಗಳನ್ನು ಏಕಕಾಲದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ.ಭರತ್ ಕುಮಾರ್ ಪೊಲಿಪು, ಆರ್.ಕೆ.ಶೆಟ್ಟಿ, ಡಾ.ವಿಶ್ವನಾಥ ಕಾರ್ನಾಡ್, ಡಾ.ದಾಕ್ಷಾಯಣಿ ಯಡಹಳ್ಳಿ, ದಯಾನಂದ ಶೆಟ್ಟಿ, ಶ್ರೀನಿವಾಸ ಜೋಕಟ್ಟೆ, ಅಶೋಕ ಸುವರ್ಣ, ಮಿತ್ರಾ ವೆಂಕಟ್ರಾಜ್, ದೇವುದಾಸ ಶೆಟ್ಟಿ, ಅಮಿತಾ ಭಾಗ್ವತ್, ಡಾ.ರಾಧಾ ಅಯ್ಯರ್, ವಿಶ್ವನಾಥ ಶೆಟ್ಟಿ, ನಿತ್ಯಾನಂದ ಕೋಟ್ಯಾನ್ ಮೊದಲಾದವರು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಕೃತಿಗಳ ಕುರಿತು ಡಾ.ರಮಾ ಉಡುಪ, ಡಾ.ಮಧುಸೂಧನ ರಾವ್, ಡಾ.ದಿನೇಶ್ ಶೆಟ್ಟಿ, ರೆಂಜಾಳ, ಶಶಿಕಲಾ ಹೆಗಡೆ, ಅನಿತಾ ಪೂಜಾರಿ, ಕಲಾ ಭಾಗ್ವತ್, ಗೀತಾ ಮಂಜುನಾಥ್, ಜಯ ಸಾಲ್ಯಾನ್, ಗೀತಾ ಹೇರಳ ಅವರು ಮಾತನಾಡಿದರು. ಕೃತಿಕಾರರಾದ ಡಾ.ಜಿ.ಎನ್.ಉಪಾಧ್ಯ ಅವರಿಗೆ ಕನ್ನಡ ವಿಭಾಗದ ವಿದ್ಯಾರ್ಥಿಗಳು ಗುರುವಂದನೆಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದ ಡಾ.ವೈ.ವಿ.ಮಧುಸೂಧನ ರಾವ್ ಅವರನ್ನು ಗೌರವಿಸಲಾಯಿತು. ಅದೇ ರೀತಿ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಂಬಯಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಶ್ರೀಧರ ಶೆಟ್ಟಿ(ಶಿಕ್ಷಣ), ಎಂ.ಟಿ.ಪೂಜಾರಿ(ಯಕ್ಷಗಾನ), ಕರ್ನಿರೆ ವಿಶ್ವನಾಥ ಶೆಟ್ಟಿ(ಸಮಾಜಸೇವೆ), ಕಡಂದಲೆ ಸುರೇಶ್ ಭಂಡಾರಿ(ಸಂಘಟನೆ) ಹಾಗೂ ನವೋದಯ ಕನ್ನಡ ಸೇವಾ ಸಂಘ, ಥಾಣೆ(ಶೈಕ್ಷಣಿಕ) ಇವರನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪರವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರ ಪರಿಸರದ ಕುರಿತ ಕಾಳಜಿಯನ್ನು ಗಮನಿಸಿ ಕೆ.ಎಂ.ಸುವರ್ಣ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿ ನಿರೂಪಿಸಿದರು. ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ನಳಿನಾ ಪ್ರಸಾದ್ ಅವರು ಧನ್ಯವಾದ ಸಮರ್ಪಿಸಿದರು.