ಕಪ್ಪು ಕನಸುಗಳು

ಹುಣ್ಣಿಮೆಯ ಕನಸುಗಳನಪ್ಪಿಕೊಂಡ
ಬೆಸುಗೆಗೆ ಸಾಕ್ಷಿದಾರರಿಲ್ಲದೆ
ಯಾರ ಜಾಮೀನೂ ಸಿಗದಿರುವಾಗ
ಸುಮ್ಮನಿರಲಾಗದೆ ಕಟಕಟೆಯನು ಹತ್ತಿ
ಅಂತರಾಳದ ತಾಕಲಾಟಗಳನು
ವಕಾಲತ್ತು ವಹಿಸಿದ ಕನ್ನಡಿಯೆದುರಿಗಿರಿಸಿ
ನನ್ನ ಪರವಾದ ತೀರ್ಪಿಗೆ ಕೈಮುಗಿದು ನಿಂತಿದ್ದೆ
	
ಕನ್ನಡಿ ಸಮಾಜದ ರೀತಿ ರಿವಾಜುಗಳನೆತ್ತಿ ತೋರಿಸಿದಾಗ
ಅದರಂತೆಯೇ ನನ್ನೊಡನೆ ಕೂಡಿರುವ ಬಂಧಗಳನು
ಒಂದೊಂದಾಗಿ ತೂಕಕ್ಕಿಟ್ಟೆ
ಒಮ್ಮೆ ಭಾರವಾಗಿ ತಕ್ಕಡಿ ನೆಲದಾಳಕ್ಕಿಳಿದರೆ
ಮಗದೊಮ್ಮೆ  ಹಗುರವಾಗಿ ಮೇಲಕ್ಕೇರಿದವು

ಸರ್ವಾನುಮತದಿಂದ ಆಯ್ಕೆಯಾದವುಗಳು 
ಸಾಲಾಗಿ ಇದಿರು ಬಂದು
ನನ್ನೊಂದಿಗೆ ಅವರ ಹೆಸರಿನ ಪಾತ್ರಗಳನು ದರ್ಶಿಸಿದಾಗ
ಕನ್ನಡಿ ಕಣ್ಣು ಮಿಟುಕಿಸಿ
‘ನಿನ್ನೊಳಗಿರುವ ಆ ಬಂಧ ಎಲ್ಲಿಯೂ ದಾಖಲಾಗಿಲ್ಲವಲ್ಲ...!
ಯಾವ ಹೆಸರಿಡುವೆ?’ಎಂದು ಅಣಕಿಸಿತು

ನಾನೂ ಬಿಡಲಿಲ್ಲ
ವಾದ ಪ್ರತಿವಾದಗಳು ಮುಂದುವರಿಯಿತು 
‘ಎನ್ನೊಳು ಗಾಢವಾಗಿ ಕೂಡಿ, ಕಾಡಿ, ಪಲ್ಲವಿಸಿದ
ಆಪ್ತರಲ್ಲಿ ಪರಮಾಪ್ತವೆನಿಸಿದ ಭಾವ ಬೆಸುಗೆಗೆ
ಯಾವ ನೆಲೆಯೂ, ಬೆಲೆಯೂ ಇಲ್ಲವೇ ಇಲ್ಲಿ...!’
ಮತ್ತೆ ಮತ್ತೆ ಕೇಳಿದೆ

ಕನ್ನಡಿ ಸಮಾಜದ ಪರ ವಕಾಲತು ವಹಿಸಿ,
ನೀ ನಡೆದ ಹಾದಿಯಲ್ಲಿ ಏಳುಹೆಜ್ಜೆಗಳ ಪಡಿಯಚ್ಚಿಲ್ಲ
ಬದುಕಿನ ಪಾಲುಗಾರಿಕೆಗೆ ಅಗ್ನಿ ಸಾಕ್ಷಿ ನುಡಿಯಲಿಲ್ಲ 
ನೆತ್ತರ ಸಂಬಂಧವಿಲ್ಲದೆ ಕರುಳಿನ ಕೊಂಡಿಯೂ ಸೇರದೆ
ಯಾರೊಪ್ಪುವರೆಂದು ಕಡ್ದಿಮುರಿದಂತೆ
ಸ್ವಯಂಘೋಷಿತ ತೀರ್ಪನಿತ್ತು ತಟಸ್ಥವಾಯಿತು

ಕೊನೆಯದಾಗಿ ನನ್ನೊಳಿದ್ದುದು ಒಂದೇ ಮಾತು...!
‘ಅದೇನೂ ಇಲ್ಲವಾದರೂ
ಆತ್ಮಸಾಕ್ಷಿಯೆಂಬುದೊಂದಿತ್ತಲ್ಲವೇ’
ನ್ಯಾಯ ದೇವತೆಯ ಕಣ್ಣಲ್ಲಿ ಕಣ್ಣಿಟ್ಟು ಕೇಳಿದೆ 

ಮರುಕ್ಷಣವೇ ಎಲ್ಲೆಡೆ ಮೌನ 
ಹೇಳದೇ ಉಳಿದಿರುವ ಅದೆಷ್ಟೋ ಮಾತುಗಳ ಅದುಮಿಟ್ಟು
ಸಹನಾಮೂರ್ತಿಯಂತೆ ನಿಂತೇ ಇದ್ದ
ನ್ಯಾಯದೇವತೆಯ ಕಣ್ಣ ಸುತ್ತಲಿರುವ 
ಕಪ್ಪು ಬಟ್ಟೆ ನೆನೆದು ಇನ್ನಷ್ಟು ಗಾಢ
ಆ ನೀರವದಲಿ ವಿಹರಿಸಿದ್ದು ಬರೀ ಕಪ್ಪು ಕನಸುಗಳು 

                          ಅನಿತಾ ಪಿ. ತಾಕೊಡೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

7 thoughts on “ಕಪ್ಪು ಕನಸುಗಳು”

  1. Shyamala Madhav

    ಎಂಥಾ ಪಾರಬುಧ್ಧ ಭಿವಗಳ ನೇಯ್ದ ಕವನ! ಅಭಿನಂದನೆ, ಅನಿತಾ.

  2. Shyamala Madhav

    ಎಂಥಾ ಪ್ರಬುಧ್ಧ ಭಾವಗಳ ಹೆಣೆದ ಅಪ್ರತಿಮ ಕವನ!
    ಅಭಿನಂದನೆ, ಅನಿತಾ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter