ಬನ್ನಂಜೆ ಎನ್ನುವ ಬೆಟ್ಟ

ಅದು 1963-64 ಇದ್ದಿರಬಹುದು. ನಾನು ಆಗ ಉಡುಪಿ ಆಯುರ್ವೇದ ಕಾಲೇಜಿನ ಮೂರನೆ ಅಥವಾ ನಾಲ್ಕನೇ ವರುಷದ ವಿದ್ಯಾರ್ಥಿ. ನನ್ನ ವಾಸ್ತವ್ಯ ಇದ್ದುದು ಉಡುಪಿಯ ಪೇಜಾವರ ಮಠದಲ್ಲಿ. ಉಚಿತವಾಗಿ ಊಟ ಸಿಗುತ್ತಿದ್ದುದು ಉಡುಪಿ ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ. ಅದೂ  ಪ್ರಾಣದೇವರ ಪ್ರಸಾದದ ರೂಪವಾಗಿ.

ನನಗೆ ಯಾಕೋ ಆಗ ಸಾಹಿತಿಯಾಗುವ ಕನಸಿತ್ತು. ಹಾಗೆಂದು ನಾನು ವೈದ್ಯನಾಗಬೇಕೆಂದು ಬಯಸಿ ಉಡುಪಿಗೆ ಹೋದವನಲ್ಲ. ಬಿ.ಎ.ಓದಬೇಕೆಂದು ಬಂದಿದ್ದೆ. ಹಳ್ಳಿಯ ಹುಡುಗನಾಗಿ ಬೆಳೆದಿದ್ದುದರಿಂದ ಯಾವಾಗ ಕಾಲೇಜುಗಳಿಗೆ ಅಪ್ಲಿಕೇಶನ್ ಹಾಕಬೇಕು ಎಲ್ಲೆಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಅವಕಾಶ ಇವೆ ಎನ್ನುವುದು ನನಗೆ ಸಹಜವಾಗಿ ತಿಳಿದಿರಲಿಲ್ಲ. ನನ್ನ ಹಿರಿಯರು (ಅಣ್ಣಂದಿರು ಕೂಡಾ) ಎಂಟನೇ ಈಯತ್ತೆಗಿಂತ ಹೆಚ್ಚು ಓದಿಲ್ಲದವರಾಗಿದ್ದುದರಿಂದ ಅವರಲ್ಲಿ ಈ ‘ಕೊರತೆ’ ಸಹಜವಾಗಿತ್ತು.

ನನ್ನ ಬಂಧುವೊಬ್ಬರು (ಸೋದರ ಮಾವನ ಹೆಂಡತಿಯ ತಂದೆ ಪದ್ಯಾಣ ಭೀಮಜ್ಜ) ಈ ವಿಚಾರದಲ್ಲಿ ನಮಗಿಂತ ಹೆಚ್ಚು ‘ಮಾಹಿತಿ’ ಬಲ್ಲವರೆಂದು ತಿಳಿದು, ಕೊನೆಗೆ ಅವರ ಮನೆಗೆ ತಡಕಾಡಿದ್ದೆ. ಅವರು  ‘ಕೊನೆಗಳಿಗೆಯಲ್ಲಿ ಬರುವುದಾ?’ ಎಂದು ‘ಹೌಹಾರಿ’ ನನ್ನನ್ನು ಕೈ ಹಿಡಿದು ಎಳೆದುಕೊಂಡೇ ಹೋದಂತೆ ಉಡುಪಿಗೆ ಕರೆದೊಯ್ದಿದ್ದರು. ಅಲ್ಲಿ ಆಗ ಪ್ರಸಿದ್ಧಿಯಲ್ಲಿದ್ದ ಎಂ.ಜಿ.ಎಂ. ಕಾಲೇಜ್ ಮತ್ತು ಹೊಸತಾಗಿ ಪ್ರಾರಂಭವಾಗಿದ್ದ ಪೂರ್ಣಪ್ರಜ್ಞ ಕಾಲೇಜಿಗೆ ನಾವು  ಇಬ್ಬರೂ ಅಲೆದಾಡಿಗ, ಅಲ್ಲಿ  ‘ಅಡ್ಮಿಶನ್’ ಪೂರ್ತಿಯಾಗಿತ್ತು ಎನ್ನುವ ವಿಚಾರ ತಿಳಿಯಿತು. ಆಗ ಅನಿವಾರ್ಯವಾದದ್ದು ಆಯುರ್ವೇದದ ವಿದ್ಯಾಭ್ಯಾಸ. ಅದು ಆಗ ತಾನೇ ನಾಲ್ಕು ವರುಷಗಳ ಹಿಂದೆ ಸ್ಥಾಪನೆಯಾದ ಕಾಲೇಜು ಆಗಿದ್ದು, ಸಾಕಷ್ಟು ವಿದ್ಯಾರ್ಥಿಗಳಿಲ್ಲದೆ ನನ್ನಂಥವರನ್ನು ‘ಕಾಯು’ವಂತಿತ್ತು. ಒಲ್ಲದ ಮನಸ್ಸಿನಿಂದ ಮತ್ತು ಉಚಿತ ಊಟ ಹಾಗೂ ವಾಸ್ತವ್ಯದ ನೆಲೆ ಇದೆ ಎಂದು ನಾನು ಆಯುರ್ವೇದ ಕಾಲೇಜಿಗೆ ಸೇರಬೇಕಾಯಿತು. ಅಲ್ಲಿ ವೈದ್ಯ ವಿದ್ಯೆ ಓದುತ್ತಿದ್ದರೂ ನನ್ನ ಮನಸ್ಸಿನಲ್ಲಿದ್ದುದು ಸಾಹಿತ್ಯವೇ! ಅದಕ್ಕೆ ಪೂರಕವಾಗುವ ವಾತಾವರಣ ಉಡುಪಿಯಲ್ಲಿ ಆಗ ‘ಓಯಸಿಸ್’ನ ಹಾಗೆ ಇತ್ತು.

ಪೇಜಾವರ ಮಠದಲ್ಲಿ ವಾಸ್ತವ್ಯ ಇದ್ದ ನಾನು ಆಯುರ್ವೇದವನ್ನು ಓದುತ್ತಾ ಆ ವೈದ್ಯಕೀಯದ ಜೊತೆಯಲ್ಲಿ ಖಾಸಗಿಯಾಗಿ ಅಭ್ಯಾಸ ನಡೆಸಿದ್ದು ಸಾಹಿತ್ಯದಲ್ಲಿ. ಇದರಿಂದಾಗಿ ನಾನು ಕತೆ, ಕವಿತೆ, ಲೇಖನಗಳನ್ನು ಬರೆಯತೊಡಗಿದೆ. ಮುಂದೆ ವಿದ್ಯಾರ್ಥಿ ದೆಸೆಯಲ್ಲೇ ಒಂದು ಗೀತಾ ನಾಟಕ (ಪುರೂರವ) ಮತ್ತು ಒಂದು ಕಾದಂಬರಿ (ಮಣ್ಣಿನ ಮಕ್ಕಳು)ಯನ್ನೂ ಬರೆದೆ.

ನಾನು ಕತೆ ಕವನಗಳನ್ನು ಬರೆಯುತ್ತಿದ್ದರೂ ಅವು ಹೇಗಿವೆ ಎಂದು ವಿಮರ್ಶಿಸುವವರು ಬೇಕು ಎನ್ನುವ ಮನೋಭಾವ ಆಗ ನನ್ನಲ್ಲಿತ್ತು. ನನ್ನ ವಿದ್ಯಾರ್ಥಿ ಸ್ನೇಹಿತರು ‘ಚೆನ್ನಾಗಿವೆ’ ಎಂದರೂ, ಪತ್ರಿಕೆಗಳಲ್ಲಿ ಅವು ಆಗಲೇ ಪ್ರಕಟವಾಗುತ್ತಿದ್ದರೂ, ನನ್ನೊಳಗೆ ‘ಇದು ಚೆನ್ನಾಗಿರಲಿಕ್ಕಿಲ್ಲ’ ಎಂಬ ಒಂದು ಸಣ್ಣ ಕೀಳರಿಮೆ ಇತ್ತು. ಇದರಿಂದ ಹೊರಬರಲು ನಾನು ಯಾರಾದರೂ ವಿದ್ವಾಂಸರನ್ನು ಕಾಣಬೇಕೆನಿಸಿತ್ತು. ನಾನು ವಾಸ್ತವ್ಯ ಇದ್ದ ಮಠದಲ್ಲಿ ಅಡ್ಡೆ ವೇದವ್ಯಾಸಾಚಾರ್ಯರೆಂಬ ಘನ ವಿದ್ವಾಂಸರಿದ್ದರು. ಆದರೆ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಆಳ ಅಗಲ ಗೊತ್ತಿರಲಿಲ್ಲ. ಅವರು ‘ಮಠದಲ್ಲಿರುವ ಮಾಣಿಯೊಬ್ಬ ಕತೆ, ಕವಿತೆ ಬರೆಯುತ್ತಿದ್ದಾನಲ್ಲ!’ ಎಂದು ನಾನು ಮಠದ ಗ್ರಂಥಾಲಯದಲ್ಲಿರುವಾಗ ಖುಶಿ ತೋರಿಸುತ್ತಿದ್ದರೂ, ನನ್ನ ಕೃತಿಗಳ ಬಗ್ಗೆ ತಪ್ಪಿಯೂ ಮಾತನಾಡಿದ್ದು ಕಡಿಮೆ. ಆದರೆ ಅವರಿಂದಾಗಿ ಮಠದಲ್ಲಿರುವ ಅಧಿಕಾರಿ ವರ್ಗಕ್ಕೆ ಮತ್ತು ವಾಸ್ತವ್ಯ ಇರುವ ಬೇರೆ ಬೇರೆ ಕಾಲೇಜುಗಳಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ನಾನೊಬ್ಬ ‘ಕವಿ’ ಎಂಬುದನ್ನು ಅವರು ಪ್ರಚುರಪಡಿಸಿ ಅವರೆಲ್ಲ ನನ್ನ ಬಗ್ಗೆ ‘ವಿಶೇಷವಾಗಿ ನೋಡುವ’ ಹಾಗೆ ಮಾಡಿದ್ದರು. ಇಷ್ಟಿದ್ದರೂ ನಾನು ತಪ್ಪಿಯೂ ಅವರಲ್ಲಿ ನನ್ನ ಬರೆಹಗಳು ‘ಹೇಗಿವೆ?’ ಎಂದು ಕೇಳಿರಲಿಲ್ಲ. ಕಾರಣ ಎರಡು : ಮೊದಲನೆಯದ್ದು ಭಯ, ಎರಡನೆಯದ್ದು ಸಂಕೋಚ.

ಈ ನಡುವೆ ನನ್ನ ಸಾಹಿತ್ಯ ಕೃಷಿಯ ಕಾರಣದಿಂದಲೇ ನನ್ನ ಮೇಲೆ ವಿಶೇಷ ಪ್ರೀತಿ ತೋರುತ್ತಿದ್ದ ಮಠದ ಪಾರುಪತ್ಯರಾದ ಪಾಂಗಣ್ಣಾಯರಲ್ಲಿ ನಾನು ಮಾತನಾಡುತ್ತಾ ‘ನನ್ನ ಕವಿತೆಗಳನ್ನು ಪೇಜಾವರ ಶ್ರೀಗಳಿಗೆ ತೋರಿಸಿ ಅಭಿಪ್ರಾಯ ಕೇಳಿದರೆ ಹೇಗೆ?’ ಎಂದು ಕೇಳಿದೆ. ಪಾಂಗಣ್ಣಾಯರು ‘ಬೇಡ’ ಎನ್ನದೆ ‘ತೋರಿಸೋಣ’ ಎನ್ನುವ ವ್ಯವಸ್ಥೆ ಮಾಡಿದರು. ಸ್ವಾಮೀಜಿಯವರ ಭೇಟಿಯೂ ಆಯಿತು. ಅವರು ಅದನ್ನು ಪರಿಶೀಲಿಸಿ ‘ನೋಡು ಮಗೂ ನಾನು ಸನ್ಯಾಸಿ. ನನಗೆ  ಕಾವ್ಯಗೀವ್ಯ ಸ್ವಲ್ಪ ಅರ್ಥವಾಗುತ್ತಾದರೂ, ನಿನ್ನ ಕೃತಿಗಳಲ್ಲಿ ಪ್ರೇಮವೇ ಮುಖ್ಯವಾಗಿದೆ. ಅದನ್ನು ಹೇಗೆ ನಾನು ಅರ್ಥೈಸಲಿ?’ ಎಂದು ಮುಗುಳ್ನಕ್ಕು, ‘ನೀನು ಈ ವಿಚಾರದಲ್ಲಿ ನನಗಿಂತ ಹೆಚ್ಚು ವ್ಯವಸಾಯ ಮಾಡಿದ ಫಲಿಮಾರು ಸ್ವಾಮೀಜಿಯವರನ್ನು ಭೇಟಿ ಮಾಡು. ಅಲ್ಲಿಗೆ ಬನ್ನಂಜೆ ಗೋವಿಂದಾಚಾರ್ಯ ಎನ್ನುವ ಅಪರೂಪದ ತರುಣ ಸಾಹಿತಿಯೊಬ್ಬರು ಬರುತ್ತಿರುತ್ತಾರೆ. ಅವರಿಬ್ಬರೂ ನಿನಗೆ ಸರಿಯಾದ ಮಾರ್ಗದರ್ಶನ ಮಾಡುತ್ತಾರೆ’ ಎಂದು ಹರಸಿದರು. ನಾನು ಫಲಿಮಾರು ಸ್ವಾಮೀಜಿಯವರನ್ನು ಒಂದು ಸಂಜೆ ಭೇಟಿ ಮಾಡಿ ನನ್ನ ಕವನಗಳ ಗುಚ್ಛ ನೀಡಿದೆ. ಅವರು ‘ಇದು ಒಂದು ದಿನ ನನ್ನಲ್ಲಿ ಇರಲಿ. ನಾಳೆ ಸಂಜೆ ಬಾ’ ಎಂದರು.

ಮರುದಿನ ನನ್ನನ್ನು ಪ್ರೀತಿಯಿಂದಲೇ ಮಾತನಾಡಿಸಿದ ಫಲಿಮಾರು ಸ್ಮಾಮೀಜಿಯವರು ‘ನಿನ್ನ ಹಸ್ತಪ್ರತಿ ನೋಡಿದೆ. ಅವುಗಳಲ್ಲಿ ಒಂದೇ ಒಂದೂ ಕವಿತೆಯೂ ನನಗೆ ಕಾಣಸಿಕ್ಕಿಲ್ಲ’ ಎಂದು ಗಂಭೀರವಾಗಿ ಹೇಳಿದರು. ಆಮೇಲೆ ‘ಹಾಗೆಂದು ನೀನು ನಿರಾಶನಾಗುವುದು ಬೇಡ. ಇನ್ನೂ ಹೆಚ್ಚು ಅಭ್ಯಾಸ ನಡೆಸಬೇಕು’ ಎಂದು ಹೇಳುತ್ತಾ  ‘ನಿನಗೆ ಬನ್ನಂಜೆಯವರು ಗೊತ್ತು ತಾನೇ? ಅವರು ಆಗಾಗ ಮಠಕ್ಕೆ ಬರುತ್ತಿರುತ್ತಾರೆ. ನಾನು, ಕುರಾಡಿ ಸೀತಾರಾಮ ಅಡಿಗರು ಮತ್ತು ಬನ್ನಂಜೆಯವರು ಫಲಿಮಾರು ಮೂಲ ಮಠ ಇರುವ ಫಲಿಮಾರಿನಲ್ಲಿ ಆಗಾಗ ಭೇಟಿಯಾಗುತ್ತಿದ್ದು ಅಲ್ಲಿ ಸಾಹಿತ್ಯದ ಬಗ್ಗೆ ಸಾಕಷ್ಟು ಚರ್ಚಿಸುತ್ತೇವೆ’ ಎಂದರು.

ನಾನು ಸ್ವಾಮಿಗಳಿಗೆ ನಮಸ್ಕರಿಸಿ ಹೊರಡುವಾಗ ‘ನಿನ್ನ ಹಸ್ತಪ್ರತಿ ಪ್ರಕೃತ ನನ್ನಲ್ಲಿರಲಿ. ಬನ್ನಂಜೆ ಬಂದಾಗ ತೋರಿಸುತ್ತೇನೆ. ಮಠಕ್ಕೆ ಆಗಾಗ ಬರುತ್ತಿರು’ ಎಂದು ಮುಗುಳ್ನಕ್ಕು ಕಳುಹಿಸಿದರು.

ಬನ್ನಂಜೆ ಅವರ ಹೆಸರು ಆಗ ಉಡುಪಿಯಲ್ಲಿ ಪ್ರಸಿದ್ಧಿಗೆ ಬರುತ್ತಿತ್ತು. ಅವರೊಬ್ಬ ಅಪರೂಪದ ವಿದ್ವಾಂಸ, ಏಕಪಾಠಿ, ಪ್ರಚಂಡವಾಗ್ಮಿ, ಪತ್ರಕರ್ತ ಇತ್ಯಾದಿಗಳ ಜೊತೆ ‘ಅಹಂಕಾರಿ ಅಲ್ಲ’ ಎನ್ನುವ ಮಾತು ಇತ್ತು. ಆದರೂ ಇಂಥ ಮಹಾವಿದ್ವಾಂಸರನ್ನು ನಾನು ಹೋಗಿ ಭೇಟಿ ಮಾಡಬೇಕು ಎಂದು ಅನಿಸಿತಾದರೂ, ಅವರಲ್ಲಿ ನಾನೇನು ಮಾತನಾಡುವುದು? ಎಂದು ಸುಮ್ಮನಾದೆ. ನಡುವೆ ಆಗಲೇ ನನ್ನ ಸಾಹಿತ್ಯದಿಂದ ಪರಿಚಿತರಾದ ಮತ್ತು ಆಗ ಉಡುಪಿಯಲ್ಲಿ ಉದಯೋನ್ಮುಖ ಸಾಹಿತಿಗಳೆಂದು ಪ್ರಸಿದ್ಧರಾಗುತ್ತಿದ್ದ ಎನ್.ನಾರಾಯಣ ಬಲ್ಲಾಳ ಮತ್ತು ಯು.ಕೆ.ವಿ.ಆಚಾರ್ಯರಲ್ಲಿ ನಾನು ಬನ್ನಂಜೆಯವರ ಬಗ್ಗೆ ವಿಚಾರಿಸಿದೆ. ಅವರಿಗೆ ಬನ್ನಂಜೆಯವರ ಬಗ್ಗೆ ಅಪಾರ ಗೌರವ ಇತ್ತು. ಅವರು “ನೀವು ಭೇಟಿಯಾಗಿ ಆದರೆ ನಿಮ್ಮ ಸಾಹಿತ್ಯವನ್ನು ಅವರು ಓದುವುದು ಕಷ್ಟ!’ ಎಂದರು. ನಾನು ಸ್ವಲ್ಪ ನಿರಾಶನಾದೆ. ಆದರೆ ಬನ್ನಂಜೆಯವರನ್ನು ನೊಡಬಯಸದೆ ಬರವಣಿಗೆಂ ಮುಂದುವರಿಸಿದೆ, ‘ಫಲಿಮಾರು ಸ್ವಾಮಿಗಳನ್ನಾಗಲೀ, ಬನ್ನಂಜೆಯವರನ್ನಾಗಲೀ ಇನ್ನು ಭೇಟಿಯಾಗುವುದಲ್ಲ’ ಎಂದು ಸುಮ್ಮನುಳಿದೆ.

ಅದೊಂದು ದಿನ ಸಂಜೆ ಐದೂವರೆಯ ಸುಮಾರಿಗೆ ಮಠದ ಪಾರುಪತ್ಯಗಾರರಾದ ಪಾಂಗಣ್ಣಾಯರು ಒಬ್ಬ ಮಾಣಿಯನ್ನು ನನ್ನ ರೂಮಿಗೆ ಕಳುಹಿಸಿ ನಾನು ಬೇಗ ಅವರಿದ್ದಲ್ಲಿಗೆ ಬರುವಂತೆ ಸೂಚಿಸಿದರು. ನಾನು ಪಾಂಗಣ್ಣಾಯರ ರೂಮಿಗೆ ದೌಡಾಯಿಸಿದಾಗ, ಶುಭ್ರವಾದ ಬಿಳಿ ಅಂಗಿ ಮತ್ತು ಪಂಚೆಯುಟ್ಟ ಮೂವತ್ತರ ಒಳಗಿನ, ಹೋತ ಗಡ್ಡದ ವ್ಯಕ್ತಿಯೊಬ್ಬರು ಪಾಂಗಣ್ಣಾಯರ ಜೊತೆ ನಗುನಗುತ್ತ ಮಾತನಾಡುತ್ತಿದ್ದುದು ಕಾಣಿಸಿತು.

ನಾನು ಪಾಂಗಣ್ಣಾಯರಿಗೆ ಕೈಮುಗಿದು ‘ಕರೆಸಿದಿರಲ್ಲ ಸರ್? ಯಾಕೆ?’ ಎನ್ನುವಂತೆ ನಿಂತೆ. ಪಾಂಗಣ್ಣಾಯರು ನಗುತ್ತಾ ‘ಇವರೇ ಮೊಗಸಾಲೆ’ ಎಂದು ತನ್ನ ಬಳಿ ಮಾತನಾಡುತ್ತಿದ್ದ ವ್ಯಕ್ತಿಗೆ ನನ್ನನ್ನು ಪರಿಚಯಿಸಿದರು. ನಾನು ಕೈಮುಗಿಯುವಷ್ಟರಲ್ಲಿ ನನ್ನ ಹೆಗಲ ಮೇಲೆ ಕೈ ಹಾಕಿದ ಆ ವ್ಯಕ್ತಿ ‘ನಾನು ಬನ್ನಂಜೆ’ ಎನ್ನುತ್ತಲೇ ‘ನೀವು ಮತ್ತೆ ಫಲಿಮಾರು ಮಠಕ್ಕೆ ಯಾಕೆ ಹೋಗಿಲ್ಲ?’ ಎಂದು  ಪ್ರಶ್ನಿಸಿ ‘ನಿಮ್ಮ ಹಸ್ತಪ್ರತಿಯನ್ನು ಆಗಲೇ ನಾನು ನೋಡಿದ್ದೇನೆ. ಸ್ವಾಮಿಗಳ ಮಾತಿನಿಂದ ನೀವು ನಿರಾಶರಾಗಬೇಕಿಲ್ಲ. ನೀವು ಬರೆಯುತ್ತಾ ಇರಿ,  ನಾನು ನಿಮ್ಮ ಜೊತೆ ಇದ್ದೇನೆ’ ಎಂದು ಪ್ರೀತಿಯ ಮಳೆಗರೆದರು.

ನನಗೆ ಮಾತು ಬಿದ್ದು ಹೋಯಿತು. ಬನ್ನಂಜೆ ಅಂದರೆ ಒಂದು ಬೆಟ್ಟ. ಅದರ ಇದಿರು ನಿಂತು ಕೂಗಿದರೆ ಅದು ಆ ಬೆಟ್ಟದ ತುದಿಗೆ ಕೇಳಿಸಲಾರದು ಎಂದುಕೊಂಡಿದ್ದೆ. ಆದರೆ ಸಾಕ್ಷಾತ್ ಬನ್ನಂಜೆ ನನಗೆ ಇದಿರಾದಾಗ, ನನ್ನ ಮಾತು ಬೆಟ್ಟದ ತುದಿಗೆ ಮಾತ್ರವಲ್ಲ ಅದರಾಚೆಗೂ ಕೇಳಿಸಿತಲ್ಲ ಅನಿಸಿ ಖುಶಿಯಾಯಿತು.

ಮುಂದೆ ಬನ್ನಂಜೆ ಅವರು ಪೇಜಾವರ ಮಠಕ್ಕೆ ಬಂದಾಗಲೆಲ್ಲ, ನನ್ನನ್ನು ತನ್ನ ಬಳಿ ಕರೆಸುತ್ತಿದ್ದರು. ಆಗ ನಾನು ಹೊಸತಾಗಿ ಬರೆದದ್ದನ್ನು ಅವರ ಮುಂದಿಡುತ್ತಿದ್ದೆ. ಒಂದು ಕ್ಷಣ ಕಣ್ಣಾಡಿಸಿ ‘ಹ್ಞೂ’ ಎಂದು ಮುಗುಳ್ನಗುತ್ತಿದ್ದರು. ‘ಚೆನ್ನಾಗಿದೆ’ ‘ಚೆನ್ನಾಗಿಲ್ಲ’ ಎಂಬ ಮಾತಿರಲಿಲ್ಲ. ಆದರೆ ಆ ನಗುವಿನ ಹಿಂದೆ ಒಂದು ಪ್ರೋತ್ಸಾಹದ ಮತ್ತು ಭರವಸೆಯ ಬೆಳಕು ಇರುತ್ತಿತ್ತು.

ನನ್ನ ಓದು ಮುಗಿದು, ನಾನು ಅರೆಕಾಲಿಕ ವೈದ್ಯಾಧಿಕಾರಿಯಾಗಿ ಕಾಂತಾವರಕ್ಕೆ ಬಂದೆ. ಇಲ್ಲಿ ಕಾಂತಾವರದಲ್ಲಿ ಫಲಿಮಾರು ಮಠದ ಶಾಖೆಯೊಂದಿದ್ದು, ಆ ಶಾಖೆಗೆ ಫಲಿಮಾರು ಸ್ವಾಮೀಜಿಯವರು ವರುಷದಲ್ಲಿ ನಾಲ್ಕಾರು ಬಾರಿ ಬರುತ್ತಿದ್ದರು. ಅವರು ಬರುವಾಗಲೆಲ್ಲ ಬನ್ನಂಜೆ ಜೊತೆಗಿರಲೇಬೇಕು ಎಂಬ ಸ್ನೇಹ ಅವರದ್ದು. ಹೀಗೆ ಇಬ್ಬರೂ ಕಾಂತಾವರಕ್ಕೆ ಭೇಟಿ ಕೊಡುವಾಗಲೆಲ್ಲ ಕಾಂತಾವರದ ಶಾಖಾ ಮಠದಿಂದ ನನಗೆ ಕರೆ ಬರುತ್ತಿತ್ತು ಮತ್ತು ಮಠದಲ್ಲಿ ಪ್ರೀತಿಯ ಸ್ವಾಗತ ಮತ್ತು ಮಾತುಕತೆ ಇತ್ತು.

ಮುಂದೆ ಬನ್ನಂಜೆಯವರು ‘ಉದಯವಾಣಿ’ಯಲ್ಲಿ ಸಾಪ್ತಾಹಿಕ ಸಂಪಾದಕರಾಗಿ ನಿಯುಕ್ತಿಗೊಂಡದ್ದು ನನ್ನಂಥವರನ್ನು ಬೆಳೆಸಲಿಕ್ಕೆ ಒಳ್ಳೆ ಅವಕಾಶ ಅವರಿಗೆ ಸಿಕ್ಕಂತಾಯಿತು. ಅವರು ನಾನು ಕಳುಹಿಸಿದ ಯಾವ ಕತೆ, ಕವಿತೆ ಲೇಖನವನ್ನು ಕೂಡಾ ತಿರಸ್ಕರಿಸಿದ್ದು ನೆನಪಿಲ್ಲ. ಒಂದು ಬಾರಿ ‘ಕಾಂತಾವರದ ವರ್ತಮಾನ’ ಎನ್ನುವ ಕವಿತೆಯನ್ನು (1971-72 ಅವಧಿಯಲ್ಲಿ ಇರಬೇಕು, ಸರಿಯಾಗಿ ನೆನಪಾಗದು) ಉದಯವಾಣಿ ಪ್ರಕಟಿಸಿದಾಗ, ಅದರಲ್ಲಿ ನೇರವಾಗಿ ಕಾಂತಾವರದ ಅನೇಕರನ್ನು ಕೀಳಂದಾಜಿಸಲಾಗಿದೆ ಎನ್ನುವ ಆಕ್ರೋಶ ಸ್ಥಳೀಯ ಮುಖಂಡರಿಂದ ಬಂತು. ಅದು ನನ್ನ ಮೇಲೆ ಹಲ್ಲೆ ನಡೆಯುವಷ್ಟು ಪ್ರಕೋಪಕ್ಕೆ ಹೋಯಿತು. ಆಗ ನಾನು ಬನ್ನಂಜೆ ಅವರನ್ನು ಭೇಟಿಯಾಗಿ ‘ಈಗೇನು ಮಾಡುವುದು?’ ಎಂದೆ. ಅವರು ಮುಗುಳು ನಗುತ್ತಾ ‘ಕಾವ್ಯವನ್ನು ಅರ್ಥ ಮಾಡಲು ಆಗದವರು ಹೀಗೆ ಮಾಡುವುದು ಸಹಜ’ ಎಂಬ ಸಮಾಧಾನ ಹೇಳಿ ಎಂದು ‘ಇದು ಕನ್ನಡದ ಅತ್ಯುತ್ತಮ ಕವನಗಳಲ್ಲಿ ಒಂದು’ ಎನ್ನುತ್ತಲೇ ನೀವು ಮುಂದೆ ಕಾಂತಾವರ ಎನ್ನುವ ಸ್ಥಳನಾಮದ ಬದಲು ಬೇರೆ ಹೆಸರು ಇಟ್ಟು ಬರೆಯಿರಿ. ಪ್ರಕೃತ ಅನಿವಾರ್ಯವಾಗಿ ಒಂದು ಕ್ಷಮಾಪಣೆ ಬರೆದುಕೊಟ್ಟು ಈ ಗದ್ದಲಕ್ಕೆ ಮಂಗಳ ಹಾಡಿ’ ಎಂದರು.

ನಾನು ಬನ್ನಂಜೆಯವರ ಇದಿರು ಕುರಿತು ‘ಕ್ಷಮಾಪಣೆ’ ಬರೆದುಕೊಟ್ಟೆ. ಅದನ್ನು ಅವರು ಮರುದಿನವೇ ಪ್ರಕಟಿಸಿದರು. ಆದರೂ ಈ ಪ್ರಕರಣಕ್ಕೆ ತಿರುವು ಕೊಟ್ಟ ಮುಖಂಡರು ಸುಮ್ಮನಿರಲಿಲ್ಲ. ಮುಂದೆ ಕಯ್ಯಾರ ಕಿಞ್ಞಣ್ಣ ರೈಗಳಲ್ಲಿ ‘ಈ ಕವನದಲ್ಲಿ ಊರಿಗೆ ಮಾನ ಹಾನಿಯಾಗುವ ವಿಷಯ ಇದೆಯೇ? ಇಲ್ಲವೇ? ಎಂದು ನೀವು ತಿಳಿಸಿ ಹೇಳಬೇಕು’ ಎಂಬ ಒತ್ತಡ ಊರ ಮುಖಂಡರಿಂದ ಬಂತು. ನಾನು ಕಯ್ಯಾರರ ಬಗ್ಗೆ ಬರೆದೆ’ ಅವರು ‘ಖಂಡಿತ ಇಲ್ಲ’ ಎಂದು ಬರೆದಲ್ಲಿಗೆ ಈ ಪ್ರಕರಣಕ್ಕೆ ಮುಕ್ತಾಯ ಬಿತ್ತು.

ಬನ್ನಂಜೆ ಅವರ ಸೂಚನೆ ಮೇರೆಗೆ ನಾನು ಮುಂದಿನ ನನ್ನ ಬರೆಹಗಳಲ್ಲಿ ‘ಸೀತಾಪುರ’ವನ್ನು ಸೃಷ್ಟಿಸಿದೆ. ಅದು ನನ್ನ  ಎಲ್ಲಾ ಕತೆ ಕಾದಂಬರಿ, ಕವನಗಳಿಗೆ ಒಂದು ಸಾಂಕೇತಿಕ ಪ್ರದೇಶವಾಗಿ ರೂಪುಗೊಂಡಿತು. ಬನ್ನಂಜೆಯವರು ಈ ಮೂಲಕ ನನ್ನ ಅಂತರಂಗದಲ್ಲಿ ಶಾಶ್ವತವಾದ ಸ್ಥಾನ ಪಡೆದರು.  ಮುಂದೆ ನಾನು ನನ್ನ ನೇತೃತ್ವದಲ್ಲಿ ಇರುವ ಕಾಂತಾವರ ಕನ್ನಡ ಸಂಘ, ವರ್ಧಮಾನ ಪ್ರಶಸ್ತಿ ಪೀಠವೇ ಮೊದಲಾದ ಸಂಸ್ಥೆಗಳ ಅನೇಕ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಿದೆ. ಕರೆದಾಗಲೆಲ್ಲ ಅವರು ‘ಒಲ್ಲೆ’ ಎಂದವರಲ್ಲ. ಭೇಟಿಯಲ್ಲಿ ಅದೇ ಮುಗುಳ್ನಗೆ, ಅದೇ ಹೊಳೆಯುವ ಕಣ್ಣು. ಅದರ ಹಿಂದೆ ಬೆಟ್ಟದ ಗಾತ್ರದಲ್ಲಿ ಇರುವ ‘ಇವ ನಮ್ಮವ’ ಎನ್ನುವ ಪ್ರೀತಿ.

2004ರಲ್ಲಿ ನಾನು ನನ್ನ ಆತ್ಮವೃತ್ತಾಂತ ‘ಬಯಲುಬೆಟ್ಟ’ವನ್ನು ಪ್ರಕಟಿಸಿದೆ. ಅದನ್ನು ಓದಿದ ಬನ್ನಂಜೆಯವರು ‘ತುಂಬಾ ಚೆನ್ನಾಗಿ ಬರೆದಿರುವಿರಿ ಮೊಗಸಾಲೆ’ ಎನ್ನುತ್ತಲೇ ಸಾಕಷ್ಟು ಅಕ್ಷರ ತಪ್ಪುಗಳು ಇದರಲ್ಲಿ ಉಳಿದಿವೆ. ಮುಂದೆ ಇದು ಮರುಮುದ್ರಣವಾಗುವಾಗ ಇದರ ಪ್ರೂಪ್ ನೋಡುವುದು ನಾನೇ’ ಎಂದಿದ್ದರು. ಜೊತೆಗೆ ‘ಬಯಲ ಬೆಟ್ಟ’ದ ಬಗೆಗೇ ಒಂದು ನಾಲ್ಕಾರು ಸಾಲಿನ ಕವಿತೆಯನ್ನೂ ಹೊಸೆದಿದ್ದರು. ಇವೆಲ್ಲ ಒಂದು ಅಂತರ್ದೇಶಿಯ ಪತ್ರದಲ್ಲಿ ಇತ್ತು. ‘ಬಯಲ ಬೆಟ್ಟ’ 2017ರ ಸುಮಾರಿಗೆ ಮತ್ತೆ ಮರುಮುದ್ರಣದ ಭಾಗ್ಯ ಕಂಡಿತು. ಆಗ ಆ ಹಿರಿಯರನ್ನು ನಾನು ಮುಜುಗರದಿಂದ ಸಂಪರ್ಕಿಸಲಿಲ್ಲ. ಅಷ್ಟರಲ್ಲಿ ಅವರು ಬರೆದಿದ್ದ ಪತ್ರವನ್ನು ನಾನು ಕಳೆದುಕೊಂಡಿದ್ದೆ.

ಬನ್ನಂಜೆಯವರ ಮೊದಲ ಸಂಕಲನ ‘ಕುಮುದಾತನಯ’ (ಫಲಿಮಾರು ಸ್ವಾಮೀಜಿಯ ಕಾವ್ಯನಾಮ) ಕುರಾಡಿ ಸೀತಾರಾಮ ಅಡಿಗರ ಜೊತೆ ‘ಮುಕ್ಕಣ್ಣ ದರ್ಶನ’ ಎನ್ನುವ ಹೆಸರಿನಲ್ಲಿ ಪ್ರಕಟವಾಯಿತು. ಆ ಮೇಲಿನ ಅವರ ಬಹು ಪ್ರಸಿದ್ಧ ಕವನ ಸಂಗ್ರಹ ‘ಹೇಳದೇ ಉಳಿದದ್ದು’ನ್ನು ಕಾಂತಾವರ ಕನ್ನಡ ಸಂಘವೇ ಪ್ರಕಟಿಸಿತು. 2006ರಲ್ಲಿ ಕಾಂತಾವರ ಕನ್ನಡ ಸಂಘವು ‘ನಾಡಿಗೆ ನಮಸ್ಕಾರ’ ಎಂಬ ಗ್ರಂಥಮಾಲೆಯನ್ನು ಸ್ಥಾಪಿಸಿದಾಗ ಅದರ ಮೊದಲ ಕುಸುಮ ಪೂಜ್ಯ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರದ್ದಾದರೆ, ಎರಡನೇ ಕುಸುಮ ಬನ್ನಂಜೆಯವರದ್ದೇ ಆಗಿದೆ.

ನಾನು ನಾಲ್ಕಾರು ಬಾರಿ ಅವರ ಮನೆಯಲ್ಲಿ ಉಂಡದ್ದಿದೆ. ಅವರಿಗೆ ಬಹಳ ಇಷ್ಟವಾದ ‘ಪೆಜಕ್ಕಾಯಿ’ (ಹಲಸಿನ ಪ್ರಭೇದ)ಯನ್ನು ಪೂರೈಸಿದ್ದೂ ಇದೆ. ಆ ಪೆಜಕ್ಕಾಯಿಯಿಂದ ತಯಾರಿಸಿದ ವಿವಿಧ ಬಗೆಯ ವ್ಯಂಜನಗಳನ್ನು ಅವರು ಮೆಲ್ಲುವಾಗ ‘ನಾನು ಅವರ ಬಳಿಯಲ್ಲಿದ್ದಷ್ಟು ಅವರು ಸಂತೋಷಪಡುತ್ತಾರೆ’ ಎನ್ನುತ್ತಿದ್ದರಂತೆ ಅವರ ಸೊಸೆ.

ಬನ್ನಂಜೆ ಅಂದರೆ ಇಷ್ಟೆ ಅಲ್ಲ, ಬೆಟ್ಟವನ್ನು ಮೀರಿದಷ್ಟು ಎನ್ನುವುದಕ್ಕೆ ಅಕ್ಷರಗಳಿಲ್ಲ! `                                       

(ಬನ್ನಂಜೆ ಸಂಸ್ಮರಣ ಗ್ರಂಥಕ್ಕಾಗಿ ಬರೆದ ವಿಶೇಷ ಲೇಖನ   )                                                                         

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

5 thoughts on “ಬನ್ನಂಜೆ ಎನ್ನುವ ಬೆಟ್ಟ”

  1. ಧರ್ಮಾನಂದ ಶಿರ್ವ

    ಬಹಳ ಸೊಗಸಾದ ಲೇಖನ. ಬೆಟ್ಟಸದೃಶದಂತಿದ್ದ ಬನ್ನಂಜೆಯವರೊಂದಿಗಿನ ಒಡನಾಟದ ಮಧುರಕ್ಷಣಗಳು ಓದುಗನನ್ನು ರೋಮಾಂಚನಗೊಳಿಸುತ್ತವೆ.
    ಅಭಿನಂದನೆಗಳು

    1. ಮ.ಮೋ.ರಾವ್ ರಾಯಚೂರು

      ಶ್ರೀ ಬನ್ನಂಜೆಯವರು ಸಾಹಿತ್ಯದ ಬೆಟ್ಟ, ಮುಸುಕಿಲ್ಲದ ಮಾಣಿಕ್ಯ. ಅವರು ಹಲವು ವರ್ಷಗಳ ಕೆಳಗೆ ರಾಯಚೂರಿಗೆ ಸತತ ಬರುತ್ತಿದ್ದರು. ಅವರ, ಅಂಕಿಸಂಖ್ಯೆ, ವಿವರಭರಿತ ಉಪನ್ಯಾಸ ಕೇಳುವುದೇ ರೋಮಾಂಚನ. ಅವರನ್ನು ಪುನಃ ನೆನಪಿಸಿದ ನಾ. ಮೊಗಸಾಲೆಯವರಿಗೆ ವಂದನೆಗಳು.

  2. Dr B. Janardana Bhat

    ತುಂಬಾ ಚೆನ್ನಾಗಿದೆ. ನನಗೆ ಗೊತ್ತಿರುವ ವಿವರಗಳೇ ಆದರೂ ಪ್ರತಿಬಾರಿಯೂ ಹೊಸದೇ ಅನ್ನುವಂತೆ ಆ ದಿನಗಳು, ಆ ವ್ಯಕ್ತಿತ್ವಗಳು ಮನೋರಂಗಕ್ಕೆ ಬರುತ್ತವೆ. ಯಕ್ಷಗಾನ ಪ್ರಸಂಗಗಳ ಹಾಗೆ.

  3. ಪ್ರಹ್ಲಾದ ಕುಷ್ಟಗಿ

    ಆ ’ಬೆಟ್ಟ’ವೇ ಸಾಹಿತ್ಯದಾಡೊಂಬಲ. ಯಾವ ದಾಕ್ಷಿಣ್ಯಕ್ಕೂ ಬೀಳದ ತಮ್ಮ ನುಡಿಯನ್ನೇ ನಡೆ ಮಾಡಿಕೊಂಡವರು. ವೇದಿಕೆಯ, ಅಥವ ಅದರ ನಡೆಸುವ ಹೊಣೆಯಿದ್ದರೆ ಸಭಾ ಗಾಂಭೀರ್ಯದ ಜೊತೆಗೆ ಸಮಯಪ್ರಜ್ಞೆಯನ್ನು ಕ್ಷಣದಲುಗಿಗಿಂತಲೂ ನಿಖರವಾಗಿ ಕಾಪಿಡುತ್ತಿದ್ದವರು.
    ದೂರದಿಂದ ನೋಡಿದ್ದೇನೆ. ಮಾತು ಕೇಳಿದ್ದೇನೆ. ಸಂಕಿರಣಗಳಲ್ಲಿ ವೇದಿಕೆ ಹಂಚಿಕೊಂಡವರನ್ನು ಕಕ್ಕಾಬಿಕ್ಕಿಯಾಗಿಸಿದ್ದನ್ನು ನೋಡಿದ್ದೇನೆ. ಆದರೆ ಪಕ್ಕದ ಮಣಿಪಾಲದಲ್ಲಿ ನಾನಿದ್ದರೂ ಅವರಿದ್ದಾಗ ಅವರಿದ್ದಲ್ಲಿ ಸುಳಿವ ಅವಕಾಶ ಉಪಯೋಗಿಸಿ ಕೊಳ್ಳಲಿಲ್ಲ.
    ನಮ್ಮ ವೃತ್ತಿ ಸಂಬಂಧಿತ ರಾಜ್ಯ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಂಡಿದ್ದಾಗ ಅವರೇ ಅದಕ್ಕೆ ಧ್ಯೇಯವಾಕ್ಯ ಬರೆದು ಕೊಟ್ಟಿದ್ದರು.
    **
    ಅವರನ್ನು ನೆನಪಿಸಿ ಕೊಳ್ಳುವುದೇ ಒಂದು ಸಾಹಿತ್ಯ ಕೃಷಿ.
    ಧನ್ಯವಾದಳು, ಜ್ಞಾಪಿಸಿ ಕೊಟ್ಟುದಕ್ಕೆ.

  4. ಡಾ.ಹ ವೆಂ ಕಾಖಂಡಿಕಿ

    ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ ನೆನಪಿನಲ್ಲಿ ಉತ್ತಮ ಲೇಖನ. ಖುಷಿಯಾಯಿತು.
    ಹ ವೆಂ ಕಾಖಂಡಿಕಿ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter