ಮೂಲ ಹಿಂದಿ: ಅಮೃತಾ ಪ್ರೀತಂ
ಅನುವಾದ: ಡಾ. ಮಾಧವಿ ಎಸ್. ಭಂಡಾರಿ
ಮನ-ಮಸ್ತಿಷ್ಕಗಳ ಕಟ್ಟೆಚ್ಚರದಲ್ಲಿಟ್ಟು ಬರೆಯುತ್ತಿದ್ದೇನೆ ನಾನಿಂದು ನನ್ನೀ ಉಯಿಲು! ನಾ ಸತ್ತಮೇಲೆ ತಡಕಾಡಿ ನನ್ನ ಕೋಣೆಯ ಮೂಲೆ-ಮೂಲೆ ಬಿಡಿಸಿ-ಬಿಚ್ಚಿ ನೋಡಿ ಪ್ರತಿವಸ್ತುಗಳ ಬೀಗವಿಲ್ಲದೆ ನನ್ನ ವಸ್ತುಗಳೆಲ್ಲ ಹರಡಿಬಿದ್ದಿವೆ ಸಿಕ್ಕಾಪಟ್ಟೆ ಮನೆತುಂಬೆಲ್ಲ! ಕೊಟ್ಟುಬಿಡಿ ನನ್ನೆಲ್ಲ ಕನಸುಗಳ ಕಿಚನ್ - ಬೆಡ್ರೂಮ್ ನಡುವಲ್ಲೇ ಹುದುಗಿಹೋಗಿರುವ ತಮ್ಮದೇ ಜಗತ್ತಿನಲ್ಲಿ ಕಳೆದುಹೋಗಿರುವ ಅದೆಷ್ಟೋ ವರುಷಗಳಿಂದ ಕನಸು ಕಾಣುವುದನ್ನೇ ಮರೆತಿರುವ ಆ ಎಲ್ಲ ಸತಿಸಾದ್ವಿಯರಿಗೆ ಹಂಚಿಬಿಡಿ ನನ್ನ ಗಹಗಹಿಸುವಿಕೆಯ ಅಮೇರಿಕಾದ ಝಗಮಗಿಸುವ ಶಹರಗಳಲ್ಲೇ ಕಳೆದುಹೋಗಿರುವ ಮಕ್ಕಳಿಂದಾಗಿ ಸಂದಿಗೊಂದಿಗಳಲ್ಲಿ ಎದ್ದಿರುವ ವೃದ್ಧಾಶ್ರಮಗಳಲ್ಲಿ ಸೋತು ಸುಣ್ಣವಾಗಿ ಬದುಕ ಸವೆಸುವ ಆ ಎಲ್ಲ ವೃದ್ಧರಿಗೆ ನನ್ನ ಮೇಜಿನಮೇಲೊಂದಿಷ್ಟು ದೃಷ್ಟಿಹಾಯಿಸಿ ಎಲ್ಲೆಂದರಲ್ಲ್ಲಿ ಹರಡಿಬಿದ್ದಿರುವ ಬಣ್ಣಗಳು ಸಿಗಬಹುದು ಹಾಕಿಬಿಡಿ ಆ ಬಣ್ಣಗಳ ತ್ರಿವರ್ಣ ಧ್ವಜ ಹೊದ್ದು ಗಾಢ ನಿದ್ದೆಗೆ ಜಾರಿದ ಗಡಿಕಾಯ್ವ ಗಂಡನ ಒಡೆದ ಗುಂಡಿಗೆಯ ರಕುತದಲಿ ಒದ್ದೆಯಾದ ಸೀರೆಯ ಅಂಚಿನ ಆ ಎಲ್ಲ ವಿಧವೆಯರಿಗೆ ನನ್ನ ಒಂದಿಷ್ಟು ಕಣ್ಣೀರನ್ನು ಕೊಟ್ಟುಬಿಡಿ ಆ ಶಾಯರುಗಳಿಗೆ ಅದರ ಪ್ರತಿಯೊಂದು ಹನಿಯಲ್ಲೂ ಒಂದೊಂದು ಗಜûಲ್ ಹುಟ್ಟೇಹುಟ್ಟುತ್ತದೆ ಇದು ನನ್ನ ವಾಗ್ದಾನ! ನನ್ನ ಮಾನ-ಮರ್ಯಾದೆಗಳೆಲ್ಲ ತಮ್ಮ ಮಕ್ಕಳನ್ನು ಓದಿಸಲೋಸುಗ ತಮ್ಮ ದೇಹವನ್ನೇ ಮಾರಿಕೊಳ್ಳುವ ಆ ವೇಶ್ಯೆಯರಿಗೆ ಸಲ್ಲಬೇಕು ನನ್ನ ಆಕ್ರೋಶವನ್ನೆಲ್ಲ ಸಿರಿಂಜ್ಗೆ ತುಂಬಿ ಈ ದೇಶದ ಪ್ರತಿಯೊಬ್ಬ ಯುವಕನನ್ನೂ ಹಿಡಿದು ಇಂಜೆಕ್ಶನ್ ಕೊಡಿಸಿಬಿಡಿ ಅದರ ಅವಶ್ಯಕತೆ ಬರಬಹುದು ಕ್ರಾಂತಿಯ ದಿನಗಳು ಮರಕಳಿಸುವಾಗ ನನ್ನ ಮರುಳುತನವೆಲ್ಲ ಇಹದ ಬದುಕನು ಬಿಟ್ಟು ಪರದಲ್ಲಿರುವುದನು ಹುಡುಕುವ ಆ ಸೂಫಿóüಕವಿಗಳ ಪಾಲಿಗಿರಲಿ ಆಯ್ತು ಇವಿಷ್ಟೇ...ಮಿಕ್ಕುಳಿದಂತೆ ನನ್ನ ಈರ್ಷೆ ನನ್ನ ಆಸೆಬುರುಕುತನ ನನ್ನ ಕ್ರೋಧದಾವೇಶ ನನ್ನ ಸುಳ್ಳು-ಸೋಗಲಾಡಿತನ ನನ್ನ ಸ್ವಾರ್ಥ...ಎಲ್ಲವನು ಒಟ್ಟುಸೇರಿಸಿ ನನ್ನೊಂದಿಗೆ ಸುಟ್ಟುಬಿಡಿ. ***
2 thoughts on “ಉಯಿಲು”
ಅದ್ಭುತವಾದ ಕವನ. ಮನ ಮುಟ್ಟುವಂತೆ ಇದೆ.
ಅಧ್ಬುತ