ಉತ್ತರ ಕರ್ನಾಟಕದ ಮಂದಿ

ಅಮೇರಿಕದ ನ್ಯೂಯಾರ್ಕಿನ ಬಹುರಾಷ್ಟ್ರೀಯ ಕಂಪನಿಯೊಂದರ ಮುಖ್ಯ ಕಛೇರಿಯಲ್ಲಿ ಸಂದರ್ಶನ ನಡೆದಿತ್ತು. ಸಂದರ್ಶನದ ಪಾಳಿಯಲ್ಲಿ ಹದಿನಾಲ್ಕನೆಯ ನಂಬರ್ರು ಹುಬ್ಬಳ್ಳಿಯ ವಿಜಯ ದೊಡ್ಡಮನಿಯದು. ತನ್ನ ಸರದಿ ಬಂದ ಕೂಡಲೇ ದೊಡ್ಡಮನಿ ಸಂದರ್ಶಕನ ಎದುರು ಹಾಜರಾದ.

“ಗುಡ್ ಮಾರ್ನಿಂಗ್ ಸರ್”

“ವೆರಿ ಗುಡ್ ಮಾರ್ನಿಂಗ್, ಪ್ಲೀಸ್ ಟೆಕ್ ಯುವರ್ ಸೀಟ್”

“ಥ್ಯಾಂಕ್ಯೂ ಸರ್”

“ಯುವರ್ ಫ್ರಂ ಇಂಡಿಯಾ?”

“ಯೆಸ್ ಸರ್”

“ಅಚ್ಛಾ, ಹಮ್ ಭೀ ಇಂಡಿಯಾ ಸೆ ಹೈ, ವಹಾ ಕಹಾಂ ಸೇ ಆಯೇ ಹೈ ಆಪ್?”

“ಮೈ ಕರ್ನಾಟಕ ಸೇ ಹೂಂ ಸರ್”

“ನಾವು ಕನ್ನಡದವರೇ, ನಿಮ್ಮದು ಯಾವೂರು?”

“ಹುಬ್ಬಳ್ಳಿ ಸರs”

“ಹೌದs, ನಾನು ಹುಬ್ಬಳ್ಳಿಯಾಂವನs”

“ಭಾಳs ಖುಷಿ ಆತ ಸರs”

“ಹುಬ್ಬಳ್ಳಿಯೊಳಗ ನಿಮ್ಮದು ಯಾವ ಕಾಲೇಜು?”

“ಭೂಮರೆಡ್ಡಿ ಕಾಲೇಜರಿ ಸರs”

“ಹೋಗೋs ಶಾಣ್ಯಾ! ನಂದೂs ಅದs ಕಾಲೇಜು! ಸುಪ್ರಿಯಾ ಕುಲಕರ್ಣಿ ಗೊತ್ತದಾಳೆನಲೇ ನಿನಗs?”

“ಸರs ಕಾಲೇಜದಾಗ ಅಕೀs ನಮ್ಮ ಸೂಪರ್ ಸೀನಿಯರ್ ಆಗಿದ್ದಳು”

“ಏs ಬಾರಲೇಪಾs ಮದಲ ಚಾ ಕುಡಿಯೂಣುs”

“ಆತು ನಡೀ ಮಾವಾ! ಚಹಾ ಕುಡಕೋತ ಮಾತಾಡೂಣುs”

ಇಬ್ಬರೂ ಸಂದರ್ಶನ ಅರ್ಧಕ್ಕೆ ನಿಲ್ಲಿಸಿ ಖುಷಿಯಿಂದ  ಚಹ ಕುಡಿಯಲು ತೆರಳುವರು. ಇದು ಹುಬ್ಬಳ್ಳಿ ಮಂದಿಯ ಸ್ವಭಾವವನ್ನು ಕುರಿತು ಪ್ರಚಲಿತದಲ್ಲಿರುವ ಒಂದು ಜೋಕು. ಇಂತಹ ಹಚ್ಚಿಕೊಳ್ಳುವ ಸ್ವಭಾವ ಉತ್ತರ ಕರ್ನಾಟಕದ ಮಂದಿಯ ಮೂಲಭೂತ ಲಕ್ಷಣಗಳಲ್ಲೊಂದು. ತಮಗೆ ಸಂಬಂಧವಿರಲಿ, ಬಿಡಲಿ ಬೇರೆಯವರ ವಿಷಯದಲ್ಲಿ ಮೂಗು ತೂರಿಸಿ ಪುಕ್ಕಟೆ ಸಲಹೆ, ಸೂಚನೆಗಳನ್ನು ಕೊಡುವುದು ಉತ್ತರ ಕರ್ನಾಟಕದ ಮಂದಿಯ ಸ್ವಭಾವ. ಇದರಿಂದ ಸಾಕಷ್ಟು ವೇಳೆ ಒಳ್ಳೆಯದೇ ಆಗಿದೆ. ಕೆಲವು ಅಪವಾದಗಳಿದ್ದರೂ ಅದು ನಗಣ್ಯ. ಉತ್ತರ ಕರ್ನಾಟಕದ ಮಂದಿಯ ಇಂತಹ ಸ್ವಭಾವ ಗೊತ್ತಿಲ್ಲದ ಕರಾವಳಿ, ಬೆಂಗಳೂರು ಮತ್ತು ಮೈಸೂರು ಮಂದಿಗೆ ಕಿರಿಕಿರಿಯಾಗುವುದು ಸಹಜ.

ಒಂದರ್ಥದಲ್ಲಿ ಹೇಳುವುದಾದರೆ ಉತ್ತರ ಕರ್ನಾಟಕದ ಮಂದಿ ನೀಳಕಂಠರು. ಉತ್ತರ ಕರ್ನಾಟಕದ ಮಂದಿ ತಮ್ಮ ಅತಿಯಾದ ಕುತೂಹಲ ಮತ್ತು ಅಧಿಕ ಪ್ರಸಂಗದ ಮೂಲಕ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡುವ ಒಳ್ಳೆಯ ಕಾರ್ಯಗಳ ಕುರಿತು ತಿಳಿದರೆ ಯಾರಾದರೂ ಮೆಚ್ಚಿ ಅಭಿನಂದಿಸದೇ ಇರಲಾರರು. ಅಂತಹ ಕೆಲವು ಪ್ರಸಂಗಗಳು ತುಂಬ ಸ್ವಾರಸ್ಯಕರವಾಗಿವೆ.

ಹುಬ್ಬಳ್ಳಿ – ಬೆಂಗಳೂರು ಪ್ಯಾಸೆಂಜರ್ ರೈಲೆಂದರೆ ಒಂಥರ ಮಿನಿ ಕರ್ನಾಟಕ. ವಾಯವ್ಯದಲ್ಲಿರುವ ಹುಬ್ಬಳ್ಳಿ ಮತ್ತು ಆಗ್ನೇಯದಲ್ಲಿರುವ ಬೆಂಗಳೂರನ್ನು ಬೆಸೆಯುವ ಕೊಂಡಿಯೂ ಹೌದು. ಉತ್ತರ ಕರ್ನಾಟಕದ ಮಂದಿಯ ಹೃದಯವಂತಿಕೆಯನ್ನು ಕಾಣಬೇಕಾದರೆ ಹುಬ್ಬಳ್ಳಿ – ಬೆಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಬೇಕು.

ಒಂದು ಬಾರಿ ಕಾಸಿಂಸಾಬನೆಂಬ ಮುಸ್ಲಿಂ ಮುದುಕನೊಬ್ಬ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಸೀಟಿನಲ್ಲಿ ಕೂತಲ್ಲಿ ಕೂರಲಾಗದೆ ಚಡಪಡಿಸುತ್ತಿದ್ದ. ತನ್ನ ಮೊಬೈಲಿನಿಂದ ಕೆಲವರಿಗೆ ಕರೆ ಮಾಡಲು ಯತ್ನಿಸುತ್ತಿದ್ದ. ಅವರಾರು ಕರೆ ಸ್ವೀಕರಿಸದಿದ್ದಾಗ ಉದ್ವಿಗ್ನನಾಗುತ್ತಿದ್ದ. ಕಳೆದ ಅರ್ಧ ಗಂಟೆಯಿಂದ ಆತನ ಎದುರಿನ ಸೀಟಿನಲ್ಲಿ ಕುಳಿತು ಇದನ್ನೆಲ್ಲ ಗಮನಿಸುತ್ತಿದ್ದ ಚಂದ್ರಪ್ಪ ಹೆಸರೂರನಿಗೆ ಇನ್ನು ಸಹಿಸಲಾಗಲಿಲ್ಲ. ಸರಿ, ದುಃಖದಲ್ಲಿದ್ದ ಮುದುಕನನ್ನು ತಡವಿಕೊಂಡ.

ಬಡವನಾದ ಮುದುಕ ಮಗಳ ಮದುವೆ ಮಾಡಲು ಯತ್ನಿಸುತ್ತಿದ್ದ. ಮೊದಲು ಮದುವೆಗೆ ಒಪ್ಪಿದ್ದ ಗಂಡಿನ ಕಡೆಯವರು ವರದಕ್ಷಿಣೆಗೋಸ್ಕರ ಚೌಕಾಸಿ ಮಾಡಿ ಮದುವೆ ಮುರಿದು ಬೀಳುವ ಹಂತದಲ್ಲಿತ್ತು. ಹೇಗಾದರೂ ಹಣ ಹೊಂದಿಸಲು ಮುದುಕ ಪರದಾಡುತ್ತಿದ್ದ. ಚಂದ್ರಪ್ಪ ಮುದುಕನಿಗೆ ಎಲೆಯಡಿಕೆ, ತಂಬಾಕು ಕೊಟ್ಟು ಅವನ ಕಥೆಯನ್ನೆಲ್ಲ ತುಂಬ ಸಮಾಧಾನದಿಂದ ಕೇಳಿದ. ಮುದುಕನಿಗೊದಗಿದ ಸ್ಥಿತಿಯ ಕುರಿತು ಚಂದ್ರಪ್ಪನೊಂದಿಗೆ ಉಳಿದ ಸಹಪ್ರಯಾಣಿಕರು ಸಹ ಮಮ್ಮಲ ಮರುಗಿದರು. ಸಂಕಷ್ಟದಲ್ಲಿರುವ ಮುದುಕನಿಗೆ ಸಹಾಯ ಮಾಡಲೇಬೇಕೆಂದು ಒಕ್ಕೊರಲಿನಿಂದ ನಿರ್ಧರಿಸಿದರು.

ಬರೀ ಮುದುಕನ ಸಮಸ್ಯೆಯಾಗಿದ್ದ ಮಗಳ ಮದುವೆ ಈಗ ಸಾರ್ವಜನಿಕ ಸಮಸ್ಯೆಯಾಗಿಬಿಟ್ಟಿತು. ಚಂದ್ರಪ್ಪ ಹೆಸರೂರನಂತೂ ಇದನ್ನೊಂದು ಸವಾಲಾಗಿ ಸ್ವೀಕರಿಸಿದರೆ, ಉಳಿದವರು ಅವನಿಗೆ ಬೆಂಬಲವಾಗಿ ನಿಂತರು.

“ಈಗs ಹಿಂಗs ಕಾಡೂs ಈ ಗಂಡಿನವರು ಮುಂದs  ನಿನ್ನ ಮಗಳನs ಚೆಂದ ನೋಡಿಕೊಳ್ಳೂದು ಅಷ್ಟರಾಗs ಐತೇನಪಾs. ಅದಕs ಇಂಥಾ ಮಂದಿs ಉಸಾಬರಿನಾs ಬ್ಯಾಡs” ಎಂದು ಪರಿಪರಿಯಾಗಿ ತಿಳಿಹೇಳಿದರು.

“ಹೌದ್ರಿs, ನೀವು ಹೇಳ್ತೀರೀs ಖರೆs, ಬ್ಯಾರೆ ಗಂಡು ಸಿಗಬೇಕಲ್ಲs?” ಎಂದು ಮುದುಕ ಚಿಂತಾಕ್ರಾಂತನಾಗಿ ನುಡಿದ.

“ಮುದುಕಾs ನೀನು ಚಿಂತಿ ಬೀಡೋs. ಈ ಚಂದ್ರಪ್ಪ ಅಂದ್ರ ಅಂತಿಂಥಾs ಮಗಾ ಅಲ್ಲ! ನಿನ್ನ ಮಗಳು ಬ್ಯಾರಲ್ಲ, ನನ್ನ ಮಗಳು ಬ್ಯಾರಲ್ಲ. ನಿನ್ನ ಮಗಳ ಮದುವಿ ಜವಾಬ್ದಾರಿ ನಂದೇನಪಾs” ಎಂದು ಧೈರ್ಯ ತುಂಬಿದ.

ಕೂಡಲೇ ರೈಲಿನಲ್ಲಿಯೇ ಸುದೀರ್ಘ ಚಿಂತನ ಮಂಥನ ನಡೆಯಿತು. ಗೌರಾಪುರದ ಮಾಬುಬವ್ವನ ಮಗ ನಜೀರ ಮುದುಕನ ಮಗಳಿಗೆ ಸೂಕ್ತ ವರ ಎಂದು ಯಾರೋ ಸೂಚಿಸಿದರು. ಇದನ್ನು ಉಳಿದವರು ಅನುಮೋದಿಸಿದರು. ಹುಡುಗ ಶ್ರಮಜೀವಿ, ಸ್ವಂತ ಮನೆಯಿದೆ. ಯಾವುದೇ ದುಶ್ಚಟಗಳಿಲ್ಲ. ನಿನ್ನ ಮಗಳನ್ನು ಸುಖವಾಗಿ ನೋಡಿಕೊಳ್ಳುತ್ತಾನೆ. ಎಂದೆಲ್ಲ ಹೇಳಿ ಮುದುಕನನ್ನು ಒಪ್ಪಿಸಿಯೇ ಬಿಟ್ಟರು. ಚಂದ್ರಪ್ಪ ಮರುದಿನವೇ ವರನನ್ನು ಕರೆದುಕೊಂಡು ಬರುವುದಾಗಿ ಮಾತು ಕೊಟ್ಟ. ಕೇವಲ ಎರಡೂವರೆ ಗಂಟೆಗಳ ಪ್ರಯಾಣದಲ್ಲಿ ಇಷ್ಟೆಲ್ಲವನ್ನು ಕಣ್ಣಾರೆ ಕಂಡ ನನ್ನ ಹಿರಿಯ ಮಿತ್ರರು ಕೆಲವು ತಿಂಗಳ ನಂತರ ಅದೇ ಪ್ಯಾಸೆಂಜರ್ ರೈಲಿನಲ್ಲಿ ಭೇಟಿಯಾದ ಚಂದ್ರಪ್ಪನವರಿಗೆ ಇದರ ಬಗ್ಗೆ ಕೇಳಿದಾಗ, ಆ ಮದುವೆಯಾಗಿ ಮೂರು ತಿಂಗಳಾಯಿತು ಗಂಡ – ಹೆಂಡತಿಯಿಬ್ಬರೂ ಸುಖವಾಗಿದ್ದಾರೆ ಎಂದು ಚಂದ್ರಪ್ಪ ತುಂಬ ಖುಷಿಯಿಂದ ಹೇಳಿದರಂತೆ.

ಈ ಘಟನೆಯ ಕುರಿತು ಪದೇ ಪದೇ ಪ್ರಸ್ತಾಪಿಸುವ ನನ್ನ ಹಿರಿಯ ಮಿತ್ರರು, “ಎಡಪಂಥ, ಬಲಪಂಥ ಎಂದು ತಮ್ಮ ಬೇಳೆ ಬೇಯಿಸಿಕೊಳ್ಳುವ, ಸ್ವಾರ್ಥಿ ಮತ್ತು ನೀಚರಾದ ಬುದ್ಧಿಜೀವಿಗಳಿಗಿಂತ ಚಂದ್ರಪ್ಪನಂತಹವರು ಎಷ್ಟೋ ಮೇಲಲ್ಲವೆ?” ಎಂದು ನಿಟ್ಟುಸಿರು ಬಿಡುತ್ತಾರೆ.

ನನ್ನ ಇನ್ನೊಬ್ಬ ಧಾರವಾಡದ ಮಿತ್ರ ತುಂಬ ಒಳ್ಳೆಯವ ಮತ್ತು ಸಹೃದಯಿ. ಸಾಹಿತ್ಯ, ಸಮಾಜ ಸೇವೆ ಎಂದು ಇಲ್ಲದ ಕೆಲಸಗಳನ್ನು ಹಚ್ಚಿಕೊಂಡು ತಿರುಗುವುದೆಂದರೆ ಅವನಿಗೆ ತುಂಬ ಖುಷಿ. ವಿವಿಧ ಬಗೆಯ ಸಾಹಿತ್ಯ ಚಟುವಟಿಕೆಗಳಿಗೆ ತನ್ನ ಕಿಸೆಯಿಂದ  ದುಡ್ಡು ಖರ್ಚು ಮಾಡುತ್ತ ಸಾಕಷ್ಟು ನಷ್ಟವಾದರೂ ಕೇರೇ ಮಾಡುವುದಿಲ್ಲ. ಕಾಲೇಜು ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿ ಹೆಚ್ಚಿಸಲು ಸ್ವಂತ ದುಡ್ಡಿನಿಂದ ಪುಸ್ತಕ ಖರೀದಿಸಿ ವಿತರಿಸುತ್ತಿದ್ದ.

ಉತ್ತರ ಕರ್ನಾಟಕದ ಸಣ್ಣ ಪಟ್ಟಣದ ಮಹಿಳಾ ಕಾಲೇಜೊಂದಕ್ಕೆ ಸುಮಾರು ನೂರು ಪುಸ್ತಕಗಳನ್ನು ಕೊಡುಗೆ ನೀಡಿದ. ಪುಸ್ತಕ ನೀಡಲು ಸ್ವತಃ ಆ ಮಹಿಳಾ ಕಾಲೇಜಿಗೆ ಹೋಗಿದ್ದ. ಪ್ರಾಂಶುಪಾಲೆ ಮತ್ತು ಇತರೆ ಪ್ರಾಧ್ಯಾಪಕರು ಪುಸ್ತಕಗಳನ್ನು ನೀಡಿದ್ದಕ್ಕೆ ಒಂದು ಒಳ್ಳೆಯ ಮಾತು ಹೇಳಲಿಲ್ಲ. ಬದಲಾಗಿ ಆ ಪ್ರಾಂಶುಪಾಲೆ, “ಇದು ಮಹಿಳಾ ಕಾಲೇಜು, ಇಲ್ಲಿ ಮರ್ಯಾದಸ್ಥ ಮನೆತನದ ಹುಡುಗಿಯರು ಕಲಿಯಲು ಬರುತ್ತಾರೆ. ನಿಮ್ಮಂತಹ ಯುವಕರು ಮತ್ತೆ ಮತ್ತೆ ಇಲ್ಲಿಗೆ ಬರುವುದು ಚೆನ್ನಾಗಿರುವುದಿಲ್ಲ!” ಎಂದು ಮುಖಕ್ಕೆ ಹೊಡೆದಂತೆ ಹೇಳಿದಳು. ಇದರಿಂದ ನನ್ನ ಮಿತ್ರನಿಗೆ ಮೂರು ದಿನ ಬೇಜಾರಾದರೂ ಮತ್ತೆ ಎಲ್ಲ ಮರೆತು ನಾಲ್ಕನೆಯ ದಿನ ಎಂದಿನಂತೆ ಸಾಹಿತ್ಯ, ಸಮಾಜಸೇವೆ ಎಂದು ಹೊರಟ.

ಹತ್ತು ಹಲವು ಜನರಿಗೆ ಕೇವಲ ಓದಿನ ಪ್ರೀತಿಗೆಂದು ದುಬಾರಿ ಬೆಲೆಯ ಪುಸ್ತಕಗಳನ್ನು ಉಚಿತವಾಗಿ ಅದೂ ಅಂಚೆ ಅಥವಾ ಕೊರಿಯರ್ ವೆಚ್ಚವನ್ನು ಸಹ ತಾನೇ ಭರಿಸಿ ಕಳಿಸುತ್ತಾನೆ. ಎಷ್ಟೋ ಜನ ಪುಸ್ತಕ ಪಡೆದವರು ಕೃತಜ್ಞತೆಯಿರಲಿ, ಕನಿಷ್ಠ ಪುಸ್ತಕಗಳು ತಲುಪಿವೆಯೆಂದು ಸಹ ಹೇಳುವುದಿಲ್ಲ. ಆದರೆ ಇಂತಹ ಯಾವ ಘಟನೆಗಳೂ ಈ ಮಹಾಶಯನ ಉತ್ಸಾಹ ಕುಂದಿಸುವುದಿಲ್ಲ.

ತುಂಬ ಚೆನ್ನಾಗಿ ಭರತ ನಾಟ್ಯ ಮಾಡುತ್ತಿದ್ದ ಕರಾವಳಿ ಹುಡುಗಿಯೊಬ್ಬಳು ನಮ್ಮ ಸಮಾಜ ಸೇವಕನಿಗೆ ಪರಿಚಯವಾದಳು. ಸರಿ, ಉತ್ತರ ಕರ್ನಾಟಕದ ಮಂದಿಯ ಅತ್ಯುತ್ಸಾಹ ಮತ್ತು ಹುಂಬತನವನ್ನು ಚೆನ್ನಾಗಿ ಮೈಗೂಡಿಸಿಕೊಂಡಿದ್ದ ನಮ್ಮ ಸಾಹಿತ್ಯಪ್ರೇಮಿ ಆ ಹುಡುಗಿಯನ್ನು ಪ್ರೋತ್ಸಾಹಿಸಲೆಂದು ಸುದೀರ್ಘ ವಾಟ್ಸಪ್ ಸಂದೇಶ ಕಳಿಸಿದ.

ಯಾವುದಾದರೂ ರಾಷ್ಟ್ರಮಟ್ಟದ ಪ್ರಶಸ್ತಿ ಪತ್ರದ ಒಕ್ಕಣಿಕೆಯಂತಿತ್ತು ನಮ್ಮ ಹುಡುಗನ ಸಂದೇಶ. ಅವಳಂತಹ ನಾಟ್ಯರತ್ನಕ್ಕೆ ಜನ್ಮ ನೀಡಿದ ಅವಳ ತಂದೆ ತಾಯಿಯರನ್ನು ಅಭಿನಂದಿಸುವುದರೊಂದಿಗೆ ಆರಂಭವಾಗುವ ಸಂದೇಶ ಅವಳ ಸೌಂದರ್ಯ, ಪ್ರತಿಭೆ, ಮತ್ತು ನಾಟ್ಯಕಲೆ ಮುಂತಾದವನ್ನು ಕಾವ್ಯಾತ್ಮಕವಾಗಿ ಬಣ್ಣಿಸಿತ್ತು. ಅವಳಿಗಿರುವ ಉಜ್ವಲ ಭವಿಷ್ಯದ ಕುರಿತು ಸಾಕಷ್ಟು ಭರವಸೆಯ ಮಾತುಗಳನ್ನಾಡಿ ಆ ಹುಡುಗಿಯನ್ನು ಸಾಕಷ್ಟು ಹುರಿದುಂಬಿಸಿದ್ದ.

22 ವರ್ಷದ ಹುಡುಗಿಗೆ 28 ವರ್ಷದ ಹುಡುಗ ಇಂತಹ ಸಂದೇಶ ಕಳುಹಿಸಿದರೆ ಏನಾಗುತ್ತದೆ? ತನ್ನ ಜೀವಮಾನದಲ್ಲೇ ಯಾರೂ ಅವಳನ್ನು ಇಷ್ಟೊಂದು ಹೊಗಳಿರಲಿಲ್ಲ. ಜೊತೆಗೆ ನಮ್ಮ ಸಾಹಿತ್ಯಪ್ರೇಮಿ ನೋಡಲು ಸುಂದರವಾಗಿದ್ದ. ಈ ಮಹಾಶಯ ಅವಳ ಕಲೆಯ ಆರಾಧಾಕನಾಗುವುದರ ಬದಲು ಆ ಹುಡುಗಿಯೇ ಇವನ ಆರಾಧಕಳಾದಳು. ಆದರೆ ಈ ಸಮಾಜ ಸೇವಕ ಸಾಕಷ್ಟು ಜನರಿಗೆ ಹೀಗೆಯೇ ಹುರಿದುಂಬಿಸಿದ್ದ. ಕಲೆ, ಸಾಹಿತ್ಯ, ಕಲಾವಿದರು, ಸಾಹಿತಿಗಳನ್ನು ಸಾಕಷ್ಟು ಪ್ರೋತ್ಸಾಹಿಸುವ ದೃಷ್ಟಿಯಿಂದ ಬಾಯಿಗೆ ಬಂದಂತೆ ಹೊಗಳುತ್ತಿದ್ದ. ಎರಡು ಒಳ್ಳೆಯ ಮಾತುಗಳಿಗೆ ಹಣವಂತೂ ಖರ್ಚಾಗುವುದಿಲ್ಲವಲ್ಲ ಎಂಬುದು ಬಹುತೇಕ ಉತ್ತರ ಕರ್ನಾಟಕದ ಮಂದಿಯ ನಿಲುವು. ನಮ್ಮ ಹುಡುಗನೂ ಅದಕ್ಕೆ ಹೊರತಲ್ಲ.

22ರ ಹರೆಯದ ನಾಟ್ಯರಾಣಿ ನಮ್ಮ ಸಾಹಿತ್ಯಪ್ರೇಮಿಯನ್ನು ನಿಜಕ್ಕೂ ತುಂಬ ಹಚ್ಚಿಕೊಂಡಿದ್ದಳು. ನಮ್ಮ ಸಮಾಜ ಸೇವಕನ ಕುರಿತು ನಾಟ್ಯರಾಣಿಗೆ ಅಪಾರ ಪ್ರೀತ್ಯಾದರವಿತ್ತು. ಇದರ ಮೊದಲ ವಾಸನೆ ಬಡಿದಿದ್ದು ನಾಟ್ಯರಾಣಿಯ ತಾಯಿಗೆ. ನಮ್ಮ ಸಾಹಿತ್ಯಪ್ರೇಮಿ ಎಂದಿನಂತೆ ನಾಟ್ಯರಾಣಿಯನ್ನು ಯದ್ವಾ ತದ್ವಾ ಹೊಗಳುತ್ತ ಹುರಿದುಂಬಿಸುತ್ತಿದ್ದ.

ಆದರೆ ಇದನ್ನು ಉಪಾಯವಾಗಿ ನಿಲ್ಲಿಸಲು ಯೋಚಿಸಿದ ನಾಟ್ಯರಾಣಿಯ ತಾಯಿ ತನ್ನ ಗಂಡನಿಗೆ ಹೇಗಾದರೂ ಮಾಡಿ ವರ್ಗ ಮಾಡಿಸಿಕೊಳ್ಳಬೇಕೆಂದೂ, ಇಲ್ಲದಿದ್ದರೆ ಮಗಳು ಕೈ ತಪ್ಪಿ ಹೋಗುವಳೆಂದೂ ಹೆದರಿಸಿದಳು. ನಾಟ್ಯರಾಣಿಯ ತಂದೆ ನಮ್ಮ ಸಾಹಿತ್ಯಪ್ರೇಮಿಯಿಂದ ಮಗಳನ್ನು ಕಾಪಾಡಿಕೊಳ್ಳಲು ಸಾಕಷ್ಟು ದುಡ್ಡು ಖರ್ಚು ಮಾಡಿ, ಶತಾಯಗತಾಯ ಪ್ರಯತ್ನಿಸಿ 420 ಕಿ.ಮೀ. ದೂರದ ಊರಿಗೆ ವರ್ಗ ಮಾಡಿಸಿಕೊಂಡು ಹೋದ. ನಾಟ್ಯರಾಣಿಯ ತಾಯಿ ನೆಮ್ಮದಿಯ ನಿಟ್ಟುಸಿರು ಬಿಟ್ಟಳು.

ಇದಾದ ಎರಡು ತಿಂಗಳ ತರುವಾಯ ಸಾಹಿತ್ಯಪ್ರೇಮಿಯ ಗುರುವಾದ ಲೇಖಕರೊಬ್ಬರು ಇದರ ಕುರಿತು ಕೇಳಿದಾಗ ಈ ಮಹಾಶಯ ತನಗೇನೂ ಗೊತ್ತೇ ಇಲ್ಲವೆಂದೂ ಕಲಾವಿದರು ಮತ್ತು ಸಾಹಿತಿಗಳ ಕುರಿತು ತನಗಿರುವ ಅಪಾರ ಪ್ರೀತಿಯ ಕುರಿತು ಯಾರಾದರೂ ತಪ್ಪು ತಿಳಿದರೆ ಅದು ತನ್ನ ತಪ್ಪಲ್ಲವೆಂದು ವಿನೀತನಾಗಿ ಹೇಳಿದ. ಜೊತೆಗೆ ಬರುವ ತಿಂಗಳು ಶ್ರೀವಲ್ಲಿ ಎಂಬ ಚಿತ್ರಕಲಾವಿದೆಯ ವರ್ಣಚಿತ್ರ ಪ್ರದರ್ಶನವಿದೆಯೆಂದು ಅವಳ ಪ್ರತಿಭೆಯ ಕುರಿತು ಅರ್ಧಗಂಟೆ ಮಾತಾಡಿದ. ಗುರುವಿಗೆ ಮಾತ್ರ ಇವನು ಬದಲಾಗುವುದಿಲ್ಲ ಎಂದು ಖಚಿತವಾಯಿತು. ಅತ್ಯುತ್ಸಾಹ ಮತ್ತು ಹುಂಬತನವೇ ಮೈವೆತ್ತಂತಿರುವ ಈ ಹುಡುಗ ನಮ್ಮ ಉತ್ತರ ಕರ್ನಾಟಕದ ಹುಡುಗರ ಪ್ರತಿನಿಧಿ ಎಂದು ಸಾಕ್ಷ್ಯಧಾರ ಸಮೇತ ನಿರೂಪಿಸಲು ಇಷ್ಟೆಲ್ಲ ಹೇಳಬೇಕಾಯಿತು.

ನಮ್ಮ ಬೆಂಗಳೂರು, ಮೈಸೂರು ಮತ್ತು ಕರಾವಳಿ ಕಡೆಯ ಮಂದಿ ತುಂಬ ವೈಯಕ್ತಿಕವೆಂದು ತಿಳಿದುಕೊಂಡಿರುವ ವಿಷಯಗಳ ಕುರಿತು ನಮ್ಮ ಉತ್ತರ ಕರ್ನಾಟಕದ ಮಂದಿ ಸಾರ್ವಜನಿಕವಾಗಿ ಚರ್ಚಿಸುತ್ತಾರೆ. ಹೆಂಗಸರ ವಯಸ್ಸು ಮತ್ತು ಗಂಡಸರ ಸಂಬಳದ ಬಗ್ಗೆ ಎಗ್ಗಿಲ್ಲದೆ ಕೇಳುತ್ತಾರೆ. ಏನನ್ನು ಕೇಳಬಾರದು ಎಂದು ಕೆಲವು ಜನ ಮನಪೂರ್ವಕ ಬಯಸುತ್ತಾರೊ ಅದನ್ನೇ ಮೊದಲು ಕೇಳುವುದು ಉತ್ತರ ಕರ್ನಾಟಕದ ಮಂದಿಯ ವಿಶೇಷತೆ.

ಬೆಂಗಳೂರಿನ ಖಾಸಗಿ ಹೈಸ್ಕೂಲಿನ ಶಿಕ್ಷಕನೊಬ್ಬ ಯಾವುದೋ ಕೆಲಸದ ನಿಮಿತ್ತ ಧಾರವಾಡ ಪ್ರಾಂತಕ್ಕೆ ಬಂದಿದ್ದ. ಸರಿ, ರೊಟ್ಟಿ ಊಟ ಮಾಡಲು ಧಾರವಾಡದ ಚನ್ನಬಸವೇಶ್ವರ ಖಾನಾವಳಿಗೆ ಹೋದ. ಇವನು ಕೂತಿದ್ದ ಟೇಬಲ್ಲಿಗೆ ಬಂದ ಕುಳಿತ ರಾಮಣ್ಣ ಮರಡ್ಡಿ ಎಂಬ ವ್ಯಕ್ತಿ ತಾನಾಗಿಯೇ ಇವನನ್ನು ಪರಿಚಯಿಸಿಕೊಂಡು ಇವನ ಕೆಲಸ, ಸಂಬಳ, ಹೆಂಡತಿ, ಮಕ್ಕಳು, ಬಂಧು-ಬಳಗ ಎಲ್ಲದರ ಕುರಿತು ಕೂಲಂಕಷವಾಗಿ ವಿಚಾರಿಸಿದ. ಇವನಿಗೆ ಬರುವ ಸಂಬಳ ತುಂಬ ಕಡಿಮೆ ಜೊತೆಗೆ ಗಿಂಬಳವೂ ಇಲ್ಲ ಎಂದು ತಿಳಿದು ಮಮ್ಮಲ ಮರುಗಿದ. ಯಾವುದೇ ಆಸ್ತಿಯಿರದ ಶಿಕ್ಷಕನ ಎರಡು ಹೆಣ್ಣುಮಕ್ಕಳ ಮುಂದಿನ ಭವಿಷ್ಯವೇನೆಂದು ಚಿಂತಾಕ್ರಾಂತನಾಗಿ ಕೇಳಿದ. ಬೆಂಗಳೂರಿನ ಶಿಕ್ಷಕನಿಗೆ ಮೊದಲು ಕಿರಿಕಿರಿಯಾದರೂ ಮರಡ್ಡಿಯ ಆತ್ಮೀಯತೆಗೆ ಮನಸೋತು ತನ್ನ ಇತ್ಯೋಪರಿಯನ್ನೆಲ್ಲಾ ಹೇಳಿಕೊಂಡಾಗ ಮನಸ್ಸು ಹಗುರವಾದಂತೆನಿಸಿತು.

ಊಟ ಮಾಡಿದ ನಂತರ ಮರಡ್ಡಿ ಬೆಂಗಳೂರಿನ ಶಿಕ್ಷಕನ ಮೊಬೈಲ್ ನಂಬರ್ ಪಡೆದು ಹೊರಟ. ಆ ಶಿಕ್ಷಕ ಅಂದು ರಾತ್ರಿ ಬೆಂಗಳೂರಿಗೆ ಹೊರಡಲು ಬಸ್ಸಿನಲ್ಲಿ ಕುಳಿತಿದ್ದ. ಇನ್ನೇನು ಬಸ್ಸು ಹೊರಡುವುದರಲ್ಲಿದ್ದಾಗ ವ್ಯಕ್ತಿಯೊಬ್ಬ ಓಡುತ್ತ ಬಂದ. ಯಾರೆಂದು ನೋಡಿದರೆ ರಾಮಣ್ಣ ಮರಡ್ಡಿ. ತಿಂಡಿ-ತಿನಿಸುಗಳಿಂದ ತುಂಬಿದ ದೊಡ್ಡ ಚೀಲವೊಂದನ್ನು ಬೆಂಗಳೂರಿನ ಶಿಕ್ಷಕನ ಕೈಗೆ ಕೊಡುತ್ತ ಮಕ್ಕಳಿಗೆ ಕೊಡಬೇಕೆಂದು ಹೇಳಿ ಕೈ ಕುಲುಕಿದ. ಬಸ್ಸು ಮರೆಯಾಗುವವರೆಗೂ ಮರಡ್ಡಿ ನಿಂತು ಕೈ ಬೀಸುತ್ತಲೇ ಇದ್ದ. ಬೆಂಗಳೂರಿನ ಶಿಕ್ಷಕನಿಗೆ ರಾಮಣ್ಣ ಮರಡ್ಡಿಯ ಹೃದಯವಂತಿಕೆಯನ್ನು ಕಂಡು ಕಂಗಳು ತುಂಬಿ ಬಂದವು.

ಉತ್ತರ ಕರ್ನಾಟಕದ ಮಂದಿ ಅವಶ್ಯವಿರಲಿ, ಇಲ್ಲದಿರಲಿ ತಮಗೆ ಯಾವುದಾದರೂ ವಿಷಯದ ಬಗ್ಗೆ ಆಸಕ್ತಿ ಮೂಡಿದರೆ ಸಾಕು ಪೊಲೀಸರಂತೆ ಕೂಲಂಕಷವಾಗಿ ವಿಚಾರಣೆ ನಡೆಸುತ್ತಾರೆ. ಇದರಿಂದ ಆಗುವ ಪರಿಣಾಮಗಳ ಕುರಿತು ಅವರು ಯೋಚಿಸುವುದಿಲ್ಲ. ಬಮ್ಮನಹಳ್ಳಿಯ ಕಲ್ಲನಗೌಡ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಹೊರಟಿದ್ದ. ಅರಮನೆಯನ್ನು ನಾಚಿಸುವಂತಹ ದೊಡ್ಡ ಕಟ್ಟಡವೊಂದರ ಕಾಮಗಾರಿ ಪ್ರಗತಿಯಲ್ಲಿತ್ತು. ಕಲ್ಲನಗೌಡನಿಗೆ ಸಹಜವಾಗಿಯೇ ಇಂತಹ ದೆವ್ವದಂತಹ ಕಟ್ಟಡ ಕಟ್ಟಿಸಲು ಎಷ್ಟು ಖರ್ಚು ಬಂದಿರಬಹುದೆಂಬ ಸಹಜ ಕುತೂಹಲ ಮೂಡಿತು. ಸರಿ, ಅದನ್ನು ತಿಳಿದುಕೊಳ್ಳದಿದ್ದರೆ ನಿದ್ದೆ ಹತ್ತುವುದಿಲ್ಲ. ಇದನ್ನು ತಿಳಿದೇ ಮುಂದಿನ ಕೆಲಸ ಎಂದು ನಿರ್ಧರಿಸಿದ. ಅಚ್ಚ ಬಿಳಿಯ ಬಣ್ಣದ ಜುಬ್ಬಾ ಪೈಜಾಮ ಧರಿಸಿ, ಹುಬ್ಬಳ್ಳಿಯ ದುರ್ಗದ ಬೈಲಿನಲ್ಲಿ 80=00 ರೂಪಾಯಿ ಕೊಟ್ಟು ಖರೀದಿಸಿದ್ದ ತಂಪು ಕನ್ನಡಕ ಧರಿಸಿದ್ದ ಕಲ್ಲನಗೌಡ ನೀಚ ರಾಜಕಾರಣಿ ಅಥವಾ ಭ್ರಷ್ಟ ಐಎಎಸ್ ಅಧಿಕಾರಿ ಅಥವಾ ದುಷ್ಟ ವ್ಯಾಪಾರಿ ಅಥವಾ ಸ್ವಾರ್ಥಿ ಬುದ್ಧಿಜೀವಿಯ ಸುಪುತ್ರನಂತೆ ಕಂಗೊಳಿಸುತ್ತಿದ್ದ.

ಕಲ್ಲನಗೌಡನನ್ನು ನೋಡಿದ್ದೇ ಕೆಲಸಗಾರರು “ಬರ್ರೀ ಸಾವ್ಕಾರ್ ಬರ್ರೀ, ಹಿಂಗ ಬರ್ರೀ, ಇಲ್ಲಿ ಕೂಡ್ರಿ” ಎಂದು ಒಂದು ಖುರ್ಚಿ ಕೊಟ್ಟು ಸೈಟ್ ಇಂಜಿನಿಯರಿಗೆ ಸುದ್ದಿ ಮುಟ್ಟಿಸಿದರು. ಇಂಜಿನಿಯರ್ ಒಬ್ಬ  ಕೊಂಕಣಿ ಮನುಷ್ಯ ಅವನಿಗೆ ಕಲ್ಲನಗೌಡನೆಂದರೆ ಯಾರೋ ರಾಜಕಾರಣಿಯಿರಬಹುದೆಂದು ತೋರಿ ತುಂಬ ಮರ್ಯಾದೆಯಿಂದ ಎಲ್ಲ ವಿವರ ನೀಡಿದ. ಕೊನೆಗೆ ತಂಪು ಪಾನೀಯ ತರಿಸಿ ಕುಡಿಸಿದ. ಯಾವಾಗ ಕಲ್ಲನಗೌಡ ಒಬ್ಬ ಫಾಲತೂ ಕೇವಲ ಕುತೂಹಲ ತಣಿಸಿಕೊಳ್ಳಲು ಬಂದವ ಎಂದು ತಿಳಿಯಿತೋ ಕೊಂಕಣಿಗೂ ತುಂಬಾ ಸಿಟ್ಟು ಬಂತು. ಕೊಂಕಣಿ ರೊಚ್ಚಿಗೆದ್ದಿದ್ದನ್ನು ಸೂಕ್ಷ್ಮವಾಗಿ ಗಮನಿಸಿದ ಕಲ್ಲನಗೌಡ ಜಾಗ ಖಾಲಿ ಮಾಡಿ ಜೀವ ಉಳಿಸಿಕೊಂಡ. ಆದರೇನು ಕಲ್ಲನಗೌಡನಿಗೆ ಬೇಕಾದ ಎಲ್ಲ ವಿವರಗಳೂ ದೊರೆತಿದ್ದವು. ಈಗವನು ನೆಮ್ಮದಿಯಿಂದ ನಿದ್ರಿಸಬಹುದು!

ಕುಮಾರವ್ಯಾಸನ ಊರಾದ ಗದುಗಿಗೆ ಒಂದು ಮದುವೆ ಸಮಾರಂಭಕ್ಕೆ ಹೋಗಿದ್ದೆ. ಮದುವೆ ಮನೆಯೆಂದ ಮೇಲೆ ಹುಡುಗಿಯರಿಗೆ ಬರವೇ? ಹತ್ತು ಹಲವು ಸುಂದರ ಕನ್ಯೆಯರು ಬಹಳ ಚೆನ್ನಾಗಿ ಶೃಂಗರಿಸಿಕೊಂಡು ನೋಡುವವರ ಕಣ್ಣಿಗೆ ಹಬ್ಬವನ್ನುಂಟುಮಾಡಿದ್ದರು. ಕೆಲವು ಹುಡುಗಿಯರು ಬಂದ ಅತಿಥಿಗಳಿಗೆ ತಂಪು ಪಾನೀಯ ಕೊಡುತ್ತಿದ್ದರು. ತಂಪು ಪಾನೀಯ ಕೊಡುತ್ತಿದ್ದ ಸುಂದರ ಹುಡುಗಿಯೊಬ್ಬಳು ಮುಗುಳ್ನಗುತ್ತಾ ನನ್ನ ಹೆಸರು, ಊರು ವಿಚಾರಿಸಿದಳು. ಇದರಲ್ಲೇನೂ ಅಸಹಜತೆ ಕಾಣಲಿಲ್ಲವಾದ್ದರಿಂದ ನಾನು ಸಹ ಎರಡು ಮಾತನಾಡಿದೆ. ಇದೆಲ್ಲವನ್ನೂ ಗಮನಿಸಿದ ನನ್ನ ದೂರದ ಬಂಧು ವಿರೂಪಾಕ್ಷಿ ಮಾವ ನನ್ನನ್ನು ಕರೆದು ತರಾಟೆಗೆ ತೆಗೆದುಕೊಂಡ.

“ರಾಜಾ, ಕನ್ಯಾ ಚೆಂದ ಇದ್ದಾಳ ಅಂತ ಬಿದ್ದಗಿದ್ದಿs. ಹರೇದ ಹುಡುಗೂರು ನೀವು. ಆ ಕನ್ಯಾಕs ನೀನು, ನಿನಗ ಆ ಕನ್ಯಾs ಪಸಂದ ಬಂದ್ರ ಅದರಾಗ ತಪ್ಪೇನಿಲ್ಲs. ಆದರ ನೋಡಪಾs ಕನ್ಯಾದ ಮನಿತನಾs ಎಂತಾದ್ದು? ಅವರದು ಹಿಂದಿಂದು ಮುಂದಿಂದು ಕಥಿs ಏನು? ಮಂದಿ ಅವರ ಬಗಿಗೆ ಏನೇನು ಮಾತಾಡ್ತಾರs ಅನ್ನೂದು ಜರಾ ತಿಳ್ಕೋಬೇಕೋs?” ಎಂದು ತಿಳಿ ಹೇಳಲು ಶುರು ಮಾಡಿದ.

ಪಾಪ, ಆ ಹುಡುಗಿಯೊಂದಿಗೆ ಎರಡು ನಿಮಿಷ ಮಾತನಾಡಿದ್ದನ್ನೇ ಈ ಮಹಾನುಭಾವ ದೊಡ್ಡದು ಮಾಡುತ್ತಿದ್ದಾನೆ. ಬಹುಶಃ ಇದರ ಹಿಂದೆ ಏನೋ ಕಥೆಯಿರಬಹುದು. ಸಾಹಿತ್ಯಪ್ರೇಮಿಯಾದ ನನಗೆ ಆ ಕಥೆ ತಿಳಿಯುವ ಉತ್ಸಾಹವುಂಟಾಯಿತು. “ಹಂಗs ಸಹಜ ಪರಿಚಯ ಆತು ಮಾವಾ, ಅಂಥಾದ್ದೇನಿಲ್ಲ ತಗೋs” ಎಂದರೂ ಸಂಶಯ ಪಿಶಾಚಿಯಾದ ವಿರೂಪಾಕ್ಷಿ ಮಾವ ಬಿಡಲಿಲ್ಲ.

ಆ ಹುಡುಗಿ ದೀಪಾ (ಹೆಸರು ತುಂಬ ಚೆನ್ನಾಗಿದೆ), ಅವಳ ಅಪ್ಪನಿಗೆ ಇಬ್ಬರು ಹೆಂಡತಿಯರು (ಎಲಾ! ನನಗಿದು ಗೊತ್ತಿರಲಿಲ್ಲ), ಆಸ್ತಿಯೇನೂ ಇಲ್ಲ (ಆಸ್ತಿ ಯಾವನಿಗೆ ಬೇಕು?), ಈ ಹುಡುಗಿ ಎರಡನೆಯ ಹೆಂಡತಿಯ ಮಗಳು (ಅದೆಲ್ಲಾ ನನಗೇಕೆ? ಹುಡುಗಿ ಚೆಂದವಾಗಿದ್ದಾಳೆ ಅಷ್ಟು ಸಾಕು!) ಎಂದೆಲ್ಲ ಆ ಹುಡುಗಿಯ ಮನೆತನದ ಬಗ್ಗೆ ಸುಮಾರು ಒಂದು ಗಂಟೆಯ ಕಾಲ ಕೊರೆದ.

ವಿರೂಪಾಕ್ಷಿ ಮಾವ ನನಗೆ ಆ ಹುಡುಗಿಯ ಮೇಲೆ ಮನಸ್ಸಾಗಿದೆಯೆಂದು ತಿಳಿದು ಅದನ್ನು ತಪ್ಪಿಸಲು ಇಷ್ಟೆಲ್ಲ ಕಷ್ಟಪಡುತ್ತಿದ್ದ. ಆದರೆ ವಿರೂಪಾಕ್ಷಿ ಮಾವನ ಕುತಂತ್ರ ಕಂಡು ನನಗೆ ಆ ಹುಡುಗಿ ನಿಜಕ್ಕೂ ಇನ್ನಷ್ಟು ಸುಂದರವಾಗಿ ಕಾಣತೊಡಗಿದಳು. ಆ ಸುಂದರ ಹುಡುಗಿಯತ್ತ ನನ್ನ ಮನಸ್ಸು ಎಳೆಯತೊಡಗಿತು. ಸುಂದರವಾದ ಹುಡುಗಿಯರು ಸುಲಭವಾಗಿ ಸಿಗುವುದು ದುರ್ಲಭವಾದ ಇಂದಿನ ದಿನಗಳಲ್ಲಿ ತಾನಾಗಿಯೇ ಒಲಿದು ಬಂದ ಒಳ್ಳೆಯ ಅವಕಾಶವೊಂದನ್ನು ಹಾಳುಮಾಡಬೇಕೆಂದು ಪಣತೊಟ್ಟ ವಿರೂಪಾಕ್ಷಿ ಮಾವನ ಮೇಲೆ ನನಗೆ ತುಂಬ ಕೋಪ ಬಂತು. ಇರಲಿ, ಸಮಯ ಬಂದಾಗ ಅವನಿಗೊಂದು ಪಾಠ ಕಲಿಸುವೆ!

ನಮ್ಮ ಉತ್ತರ ಕರ್ನಾಟಕದ ಮಂದಿಯ ಕಥೆಗಳನ್ನು ಹೇಳ ಹೊರಟರೆ ಬೃಹತ್ ಕಾದಂಬರಿಯಾದೀತು. ಇಲ್ಲಿ ಪ್ರಸ್ತಾಪಿಸಿದ ಘಟನೆಗಳು ನಮ್ಮಉತ್ತರಕರ್ನಾಟಕದಮಂದಿಯಸ್ವಭಾವವನ್ನು ತೋರಿಸುವ ಸಣ್ಣ ಝಲಕುಗಳಷ್ಟೇ. ಇಂತಹ ಘಟನೆಗಳನ್ನೆಲ್ಲ ಅವಲೋಕಿಸಿದಾಗ ಬಸವಣ್ಣನವರಪ್ರಖ್ಯಾತವಚನವೊಂದುನೆನಪಾಗುತ್ತದೆ.

“ಇವನಾರವ,  ಇವನಾರವ,

ಇವನಾರವನೆಂದಿಸದಿರಯ್ಯಾ

ಇವ ನಮ್ಮವ, ಇವ ನಮ್ಮವ,

ಇವನಮ್ಮವನೆಂದಿಸಯ್ಯಾ

ಕೂಡಲ ಸಂಗಮದೇವ

ನಿಮ್ಮ ಮನೆಯ ಮಗನೆಂದಿನಸಯ್ಯಾ”

ಬಸವಣ್ಣನವರ ಈ ವಚನ ಉತ್ತರ ಕರ್ನಾಟಕದ ಮಂದಿಯ ಗುಣಲಕ್ಷಣಗಳನ್ನು ತುಂಬ ಚೆನ್ನಾಗಿ ಪ್ರತಿಬಿಂಬಿಸುತ್ತದೆ. ನಮ್ಮ ಉತ್ತರ ಕರ್ನಾಟಕದ ಮಂದಿಯ ಸ್ವಭಾವವೇ ಹೀಗೆ ತುಂಬ ಬೇಗ ಯಾರನ್ನಾದರೂ ಹಚ್ಚಿಕೊಳ್ಳುತ್ತಾರೆ.ಅಪರಿಚಿರಾದರೂ ತಾವಾಗಿಯೇ ಪರಿಚಯಿಸಿಕೊಂಡು ಅವರ ಬಗ್ಗೆ ಸ್ನೇಹ, ಪ್ರೀತಿ ತೋರಿಸುತ್ತಾರೆ. ಕಷ್ಟವೆಂದು ಬಂದವರನ್ನು ಯಾವತ್ತೂ ಕೈ ಬಿಡುವುದಿಲ್ಲ. ದ್ರೋಹ ಬಗೆದವರನ್ನೂ ಉದಾರವಾಗಿ ಕ್ಷಮಿಸುತ್ತಾರೆ. ಕನ್ನಡ ನಾಡು – ನುಡಿಯ ನಿಜವಾದ ಸೊಬಗನ್ನು ಕಾಣಬೇಕಾದರೆ ಉತ್ತರ ಕರ್ನಾಟಕಕ್ಕೆ ಹೋಗಬೇಕು. ಇಂದಿಗೂ ಕನ್ನಡದ ದೇಸಿ ಸಂಸ್ಕೃತಿ ಜೀವಂತವಾಗಿ ಮತ್ತು ಶ್ರೀಮಂತವಾಗಿ ಉಳಿದಿದ್ದರೆ ಅದು ಉತ್ತರ ಕರ್ನಾಟಕದಲ್ಲಿ ಮಾತ್ರ. ನಾನೂ ಸಹ ಉತ್ತರ ಕರ್ನಾಟಕದ ಹುಡುಗನೆಂಬುದು ನಿಜಕ್ಕೂ ಹೆಮ್ಮೆಯ ಸಂಗತಿ.

********

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “ಉತ್ತರ ಕರ್ನಾಟಕದ ಮಂದಿ”

  1. ಚೆಂದದ ಬರಹ ವಿಕಾಸ ಹೊಸಮನಿಯವರೆ. ಉ.ಕ. ಮಂದಿಯ ಬಗ್ಗೆ ಬಹಳ ಅಂಬೋಣಗಳಿವೆ.
    ಅವರು ಜೊತೆಯಾದರೆಂದರೆ ಗುಂಪಿನ ಇತರರು ಸುಮ್ಮನೆ ಕೇಳಿಸಿಕೊಳ್ಳಬೇಕು…ಹಾಗೆ ಮಾತಾಡುತ್ತಾರೆ. ಬಹುಬೇಗ ಅವರದೇ ಗುಂಪನ್ನೂ ಮಾಡಿಕೊಂಡು ಬಿಡುತ್ತಾರೆ. ನೀವು ಹೇಳಿದಂತೆ ಇದೊಂದು ಝಲಕ್…ಅಷ್ಟೇ. ಇನ್ನೂ ಬರೆಯಿರಿ.

  2. Raghavendra Mangalore

    ಉತ್ತರ ಕರ್ನಾಟಕದವರು ನೋಡಲು ತುಸು ಒರಟು.. ಆದರೆ ಹೃದಯ ಶ್ರೀಮಂತಿಕೆ. ಎಲ್ಲರೊಂದಿಗೆ ಬೆರೆಯುವ – ಮಿಡಿಯುವ ಕಲೆ ಅವರಿಗೆ ಹುಟ್ಟಿನಿಂದಲೇ ಬರುತ್ತದೆ.ಲೇಖನ ಸೊಗಸಾಗಿದೆ. ಅಭಿನಂದನೆಗಳು

  3. ಧರ್ಮಾನಂದ ಶಿರ್ವ

    ಲಘಬರಹ ಸೊಗಸಾಗಿದೆ.
    ಉತ್ತರ ಕರ್ನಾಟಕ ಮಂದಿಯ ಒಳ್ಳೆಯತನ ನನಗೆ ಚಿರಪರಿಚಿತ. ಬ್ಯಾಂಕಿನಲ್ಲಿದ್ದ ನನ್ನ ಸೇವಾವಧಿಯ ಹೆಚ್ಚಿನ ಸಮಯ ಉತ್ತರಕರ್ನಾಟಕದಲ್ಲಿಯೇ ಕಳೆದುಹೋಗಿದೆ. ಅಲ್ಲಿಯ ಭಾಷೆಯೂ ಚಂದ…
    ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter