ಮೂಲ ಹಿಂದಿ: ಅಮೃತಾ ಪ್ರೀತಂ
ಅನುವಾದ: ಡಾ. ಮಾಧವಿ ಎಸ್. ಭಂಡಾರಿ
ಅವನು ಹೇಳುತ್ತಿದ್ದ ಇವಳು ಕೇಳುತ್ತಿದ್ದಳು ಹೇಳುವ ಮತ್ತು ಕೇಳುವ ಈ ಆಟ ನಡೆದೇ ಇತ್ತು. ಆಟದಲ್ಲಿತ್ತು ಎರಡು ಚೀಟಿ ಒಂದರಲ್ಲಿತ್ತು ‘ಹೇಳು’ ಇನ್ನೊಂದರಲ್ಲಿತ್ತು ‘ಕೇಳು’ ಈಗದು ಅವಳ ಅದೃಷ್ಟವೇ ಆಗಿಬಿಟ್ಟಿತ್ತು ಅಥವಾ ಕೇವಲ ಯೋಗಾಯೋಗವೋ ಅವಳಿಗೆ ಸಿಗುವ ಚೀಟಿಯಲ್ಲಿ ಬರೆದಿರುತ್ತಿತ್ತು ಯಾವತ್ತೂ ‘ಕೇಳು’ ಅವಳು ಕೇಳುತ್ತಲೇ ಇದ್ದಳು ಅವಳು ಕೇಳಿದ್ದು ಕೇವಲ ಅಪ್ಪಣೆ ಅವಳು ಕೇಳಿದ್ದು ಕೇವಲ ಉಪದೇಶ ಬಂಧನ ಅವಳ ಪಾಲಿಗಷ್ಟೇ ಇತ್ತು ಅವಳಿಗಾಗಿಯೇ ಇದ್ದವು ನಿರ್ಬಂಧಗಳು ಅವಳಿಗೂ ಗೊತ್ತಾಗುತ್ತಿತ್ತು ಹೇಳುವುದು-ಕೇಳುವುದು ಕೇವಲ ಕ್ರಿಯಾಪದಗಳಷ್ಟೇ ಅಲ್ಲ ರಾಜ ಹೇಳಿದ-‘ವಿಷ ಕುಡಿ’ ಅವಳು ಮೀರಾ ಆದಳು ಋಷಿ ಹೇಳಿದ-‘ಕಲ್ಲಾಗು’ ಅವಳು ಅಹಲ್ಯೆಯಾದಳು ಪ್ರಭು ಶ್ರೀರಾಮ ಹೇಳಿದ-‘ಹೊರಟುಬಿಡು’ ಅವಳು ಸೀತೆಯಾದಳು ಚಿತೆಯಿಂದ ಆರ್ತನಾದ ಹೊರಬಿತ್ತು ಯಾರ ಕಿವಿಗೂ ಬಡಿಯಲಿಲ್ಲ ಅವಳು ಸತಿಯಾದಳು ಮೂರು ಬಾರಿ ‘ತಲಾಕ್’ ಹೇಳಿದರು ಅವಳು ಪರಿತ್ಯಕ್ತೆಯಾದಳು ಅವಳ ಮೊರೆಗೆ ಉಸಿರುಗಟ್ಟಿತ್ತು ಶಬ್ದ ಸಿಕ್ಕಿಕೊಂಡಿತ್ತು ತುಟಿ ಹೊಲಿದುಕೊಂಡಿತ್ತು ಗಂಟಲು ಕಟ್ಟಿಬಂದಿತ್ತು. ಅವಳ ಕೈಗೆ ಎಂದೆಂದೂ ಸಿಗಲಿಲ್ಲ ‘ಹೇಳು’ಎಂದು ಬರೆದಿಟ್ಟ ಚೀಟಿ. ***
2 thoughts on “ಅವಳು ಹೇಳಲೇ ಇಲ್ಲ!”
ಹೆಣ್ಣಿನ ಶೋಷಣೆಯ ಹೂರಣವಿರುವ ಕವನ ಸತ್ವಯುತವಾಗಿ ಕನ್ನಡಕ್ಕೆ ಅನುವಾದಗೊಂಡಿದೆ.
ಅನಾದಿ ಕಾಲದಿಂದಲೂ ಕಥೆಯಾದ ಹೆಣ್ಣಿನ ನೋವು ಮತ್ತು ಆರ್ತನಾದ ಕವಿತೆಯಲ್ಲಿ ಧ್ವನಿತವಾಗಿದೆ.
ಅಭಿನಂದನೆಗಳು
ಮನಕಲಕುವ ಭಾವ.
ನೆಚ್ಚಿನ ಕವಯಿತ್ರಿ ಅಮೃತಾ ಪ್ರೀತಂ.
ಅಭಿನಂದನೆಗಳು ಮೇಡಂ.ತುಂಬ ಇಷ್ಟವಾಯಿತು.