—————-
“ಇದು ಮನುಷ್ಯ ಸಂಬಂಧಗಳನ್ನು ಅಭಿವೃದ್ಧಿಪಡಿಸಿ, ಜ್ಞಾನವನ್ನು ಬೆಳೆಸಿಕೊಳ್ಳುವ ತಾಣ”
ಸಾಮಾಜಿಕ ಜಾಲತಾಣಗಳ ಸಂವಾದದ ಗುಚ್ಛ ಅರವಿಂದ ಚೊಕ್ಕಾಡಿಯವರ ‘ಕಿರು ಸಂವಾದ’
‘ಕಿರು ಸಂವಾದ’
ಲೇ: ಅರವಿಂದ ಚೊಕ್ಕಾಡಿ (9740688698)
ಪ್ರ.ಮುದ್ರಣ- 2021
ಪುಟ:468, ಬೆಲೆ: 425 ರೂ.
ಪ್ರಕಾಶನ:ಪೃಥ್ವಿ ಪ್ರಕಾಶನ, ನಂ.-7,
9 ನೇ ಕ್ರಾಸ್, 7ನೇ ಮುಖ್ಯರಸ್ತೆ, ವಿವೇಕಾನಂದ ನಗರ, ಮೈಸೂರು -570023.
(ಮೊ- 8970414165)
ಇಂದು ನಮ್ಮ ದೇಶದ ಸುಮಾರು ಮುಕ್ಕಾಲು ಪಾಲು ಯುವಪೀಳಿಗೆ ಸೋಶಿಯಲ್ ನೆಟ್ವರ್ಕಿಂಗ್ ಸೈಟ್‌ನಲ್ಲಿ ಮುಳುಗಿ ಹೋಗಿದ್ದಾರೆ. ನಾನಾ ರೀತಿಯ ಅನಾಹುತಗಳ, ಅದರ ದುರುಪಯೋಗದ ವರದಿಗಳೂ ಆಗಾಗ ಬರುತ್ತಲೇ ಇವೆ. ಇಂತಹ ದುರುಪಯೋಗಗಳ ವರದಿಗಳನ್ನು ಗಮನಿಸಿ ಯುವ ಪೀಳಿಗೆಯನ್ನು ಜಾಗೃತ ಗೊಳಿಸುವುದಕ್ಕಾಗಿ ನಮ್ಮ ದೇಶದಲ್ಲಿ ಯುಜಿಸಿ ಕೆಲಸಮಯದ ಹಿಂದೆಯೇ ( ಬಹುಶ: 2019)ದೇಶಾದ್ಯಂತ ಸ್ನಾತಕ ಪಠ್ಯ ಕ್ರಮದಲ್ಲಿ ಸೋಶಿಯಲ್ ಮೀಡಿಯಾದ ನೈತಿಕತೆ ಮತ್ತು ಶಿಷ್ಟಾಚಾರ ವಿಷಯವನ್ನು ಸೇರಿಸುವ ತೀರ್ಮಾನವನ್ನು ಕೈಗೊಂಡಿರುವ ವರದಿಯೊಂದು ಬಂದಿತ್ತು. ಈ ಮಾತು ಮತ್ತೆ ನೆನಪಾಗುವುದಕ್ಕೆ ಕಾರಣ ‘ಕಿರು ಸಂವಾದ’ ಎಂಬ ಕೃತಿ. ಕನ್ನಡದ ಹೆಸರಾಂತ (‘ಮಧ್ಯಮ ಪಂಥದ’ಎಂದು ಬೇಕಾದರೂ ಸೇರಿಸಬಹುದೇನೋ) ವಿಮರ್ಶಕರಾದ ಅರವಿಂದ ಚೊಕ್ಕಾಡಿಯವರ ಸ್ನೇಹಿತರು ಫೇಸ್ ಬುಕ್ ನಲ್ಲಿ ಕೇಳಿದ ಪ್ರಶ್ನೆಗಳೊಂದಿಗೆ ಅವರು ನಡೆಸಿದ ಸಂವಾದಗಳ ಗುಚ್ಛವೇ ‘ಕಿರು ಸಂವಾದ’ ಕೃತಿ. ಇಲ್ಲಿ 195 ವಿವಿಧ ಸಮಕಾಲೀನ ವಿಷಯಗಳ ಕುರಿತು ಸಂವಾದ ನಡೆಸಲಾಗಿದೆ.
ಇಲ್ಲಿನ ಸಂವಾದದ ಕೆಲವು ವಿಷಯಗಳು ಹೀಗಿವೆ- ಎಡಪಂಥ ,ಬಲ ಪಂಥ, ಮಾನವ ಹಕ್ಕಿನ ಪ್ರಶ್ನೆ, ಕಾಶ್ಮೀರದಲ್ಲಿ ಮಾನವ ಹಕ್ಕು, ಅರ್ಥವಾಗದವರು,ಸಂವಾದದ ಅಗತ್ಯತೆ, ಗಾಂಧಿಯನ್ನು ವಿಲನ್ ಮಾಡಲು ಸಾಧ್ಯವಿಲ್ಲ, ಕವಿತೆಯನ್ನು ಅರ್ಥ ಮಾಡಿಕೊಳ್ಳುವ ಬಗೆ, ದೇಶಪ್ರೇಮದ ನಿರಾಕರಣೆ, ಅಂಬೇಡ್ಕರ್ ಬಗ್ಗೆ ಏಕೆ ಮಾತನಾಡುವುದಿಲ್ಲ?, ನೆಹರೂ ಪಂಥ, ಹೋರಾಟದ ಶೈಲಿ, ಚರ್ಚೆಯ ಸ್ವರೂಪ, ಮೀಸಲಾತಿಯ ಸ್ವರೂಪ,ಧಾರ್ಮಿಕ ಅರಿವು, ಸ್ತನ ತೆರಿಗೆ, ಅತಿ ಟೀಕೆ ಒಳ್ಳೆಯದಲ್ಲ, ಗಾಂಧಿಯ ಅಹಿಂಸೆ, ಗಾಂಧಿಯೇ ಅಂತಿಮವಾ?,ದೇವರ ಇತಿಹಾಸ, ಐಕಾನ್ ಗಳ ಅಗತ್ಯ, ಬ್ರಹ್ಮದ ಪರಿಕಲ್ಪನೆ, ವೈಚಾರಿಕ ಮತಾಂತರ, ಸೈನಿಕರ ಕಷ್ಟ, ಧರ್ಮ ಆಧಾರಿತ ಪೌರತ್ವ,ಸಂಪರ್ಕದ ಅಗತ್ಯ, ಎಲ್ಲರಿಗೂ ಉತ್ತರಿಸಬಾರದು…ಹೀಗೆ 195 ವಿಷಯಗಳ ಕುರಿತು ಚರ್ಚೆ ಸಂವಾದವನ್ನು ಇಲ್ಲಿ ನಡೆಸಿದ್ದಾರೆ. “ನಾನೇಕೆ ನಿಯಮಗಳನ್ನು ಹೇಳ್ತಿದ್ದೇನೆ ಅಂದರೆ ಸಾಮಾಜಿಕ ಜಾಲತಾಣಗಳು ಸುಂದರ ಸಮಾಜದ ಸುಸಂಸ್ಕೃತ ನಿರ್ಮಾಣಕ್ಕೆ ಸಹಾಯವಾಗಬಲ್ಲ ವೈಚಾರಿಕ ಚರ್ಚೆ ನಡೆಸುವ, ನಮ್ಮ ಜ್ಞಾನವನ್ನು ನಾವು ಬೆಳೆಸಿಕೊಳ್ಳುವ, ಮನುಷ್ಯ ಸಂಬಂಧಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವ ತಾಣಗಳಾಗಬಲ್ಲವು. ಆ ರೀತಿ ಅದನ್ನು ಉಪಯೋಗಿಸಬೇಕು” ಎಂದು ಆರಂಭದಲ್ಲೇ ಹೇಳಿರುವುದು ಚೊಕ್ಕಾಡಿಯವರ ಸಾಮಾಜಿಕ ಜಾಲತಾಣದ ಚರ್ಚೆಯ ಕುರಿತಂತೆ ಅವರ ನಿಲುವನ್ನು ಸ್ಪಷ್ಟ ಪಡಿಸುತ್ತದೆ.
“ಗಾಂಧಿಯೇ ಅಂತಿಮವಾ?” ಸಂವಾದದಲ್ಲಿ ಅರವಿಂದರು ಹೇಳುತ್ತಾರೆ-“ಈ ಭಾರತದ ರಾಷ್ಟ್ರೀಯ ಚಳವಳಿಯಿಂದ ಗಾಂಧೀಜಿಯನ್ನು ಡಿಸ್ಕನೆಕ್ಟ್ ಮಾಡಿ ಅರ್ಥಮಾಡಿಕೊಳ್ಳದಿದ್ದರೆ ಗಾಂಧೀಜಿಯ ಮಹತ್ವವೇ ಅರ್ಥವಾಗಲು ಸಾಧ್ಯವಿಲ್ಲ.ಗಾಂಧಿಯಿಂದಲೇ ಸ್ವಾತಂತ್ರ್ಯ ಬಂದಿಲ್ಲ,ಏಕೆಂದರೆ ಗಾಂಧಿ ಹೇಳಿದ ಸ್ವಾತಂತ್ರ್ಯಇನ್ನೂ ದೇಶಕ್ಕೆ ಬಂದೇ ಇಲ್ವಲ್ಲ”.ಎಂದಿದ್ದಾರೆ. ‘ಸ್ವಾತಂತ್ರ್ಯ ಎಂಬ ಜವಾಬ್ದಾರಿ ” ಸಂವಾದದಲ್ಲಿ ಅರವಿಂದರು ನೀಡುವ ಪ್ರತಿಕ್ರಿಯೆ ಇಲ್ಲಿ ದಾಖಲಾಗುವ ಬಹುಮುಖ್ಯ ಬರಹಗಳಲ್ಲಿ ಒಂದೆಂದು ಗುರುತಿಸಬಹುದು.
ಒಂದು ರೀತಿಯಲ್ಲಿ ಇಂದು ನಾವು ಕಾಣುತ್ತಿರುವ ಫೇಸ್ಟುಕ್ ಚರ್ಚೆ ಸಂವಾದಗಳಲ್ಲಿ ಹೆಚ್ಚಿನವು ದುರಸ್ತಿ ಸದ್ಯಕ್ಕೆ ಕಷ್ಟವೇನೋ ಎನ್ನುವಂತಹ ಗೊಂದಲಗಳದ್ದು. ಇಂದು ತಮಗೆ ತೋಚಿದಂತೆ ಬರೆಯಲು ಎಲ್ಲರೂ ಸ್ವತಂತ್ರರು. ಅದರಲ್ಲೂ ಮಾರ್ಕೆಟ್ ವಹಿವಾಟುಗಳಂತೆ ಅರ್ಥಾತ್ ಪ್ರಚಾರದ ತೆವಲಾಗಿಯೂ ಕೆಲವೊಮೆ ಕಾಣಿಸುತ್ತಿವೆಯೋ ಎನ್ನುವಂತಹ ದೃಶ್ಯವೂ ಇದೆ. ಈ ಕವಲು ದಾರಿಯ ದೃಶ್ಯಗಳಲ್ಲಿ ಗೆದ್ದು ಭ್ರಮೆ ಪಡುವವರೇ ಬಹುಶ ಹೆಚ್ಚು. ಇಂತಹ ಚರ್ಚೆಗಳಲ್ಲಿ ಅನೇಕರು ವೇಗದ ತಕ್ಷಣದ ಪ್ರತಿಕ್ರಿಯೆ ನೀಡುವವರೇ ಹೊರತು ಆಳದ ಪ್ರತಿಕ್ರಿಯೆಗಳು ಬರುವುದು ಬಹಳ ಕಡಿಮೆ. ಎಡಪಂಥ ಬಲಪಂಥಗಳ ನಡುವೆ ತಾವು ಸೃಷ್ಟಿಸಬಹುದಾದ ಸಾಮಾಜಿಕ ಗೋಡೆಗಳನ್ನು ಅರಿಯಲು ಹೆಚ್ಚಿನವರು ಹೋಗುವುದಿಲ್ಲ.
ಇಲ್ಲಿನ ಸಂವಾದಗಳಲ್ಲಿ ನಮಗೆ ವರ್ತಮಾನದ ಆಗುಹೋಗುಗಳ ಒಂದು ಸ್ತೂಲ ಚಿತ್ರಣಗಳು ಕಂಡುಬರುವುದು. ಪ್ರಧಾನಿಯನ್ನು ಹೊಗಳಿದರೆ ಬಲಪಂಥ ಟೀಕಿಸಿದರೆ ಎಡಪಂಥ, ಮುಸ್ಲಿಮರನ್ನು ಟೀಕಿಸಿದರೆ ಬಲಪಂಥ ಮುಸ್ಲಿಮರ ಕೃತ್ಯಗಳಿಗೆ ಮೌನವಾಗಿದ್ದು ಬೆಂಬಲಿಸಿದರೆ ಎಡಪಂಥ, ಸಂಸ್ಕೃತ ಹಿಂದಿ ಬಲಪಂಥ ,ಇಂಗ್ಲಿಷ್ ಉರ್ದು ಎಡಪಂಥ… ಇತ್ಯಾದಿ ಛಾಪು ಒತ್ತಿರುವ ವರ್ತಮಾನದಲ್ಲಿ ಸಂವಾದವನ್ನು ಮಾಡುವುದಾರೂ ಹೇಗೆ ಸಾಧ್ಯ? ಗೇಲಿ ಮಾಡಲಿಕ್ಕೆಂದೇ ಬರೆಯುವ ಕೆಲವರ ಕೆಟ್ಟ ಹವ್ಯಾಸವನ್ನು ಹೇಗೆ ಎದುರಿಸಬೇಕು? ತೀರಾ ಅನಾಮಧೇಯರೂ ಫೇಸ್ಟುಕ್ ಗೆ ಬರೆಯಬಹುದಾದ ಈ ಹೊತ್ತು, ನನ್ನ ಈ ಮಾತಿಗೆ ಕೃತಿಗಳಲ್ಲಿನ ಕೆಲವು ಚರ್ಚೆಗಳನ್ನು ಎತ್ತಿಕೊಳ್ಳಬಹುದು. “ಒಂದು ಸಂವಾದಕ್ಕೆ ಪೂರಕ ಮತ್ತು ಭಿನ್ನಾಭಿಪ್ರಾಯಗಳು ಅಗತ್ಯ”. “ಮಾನವ ಹಕ್ಕು ಪ್ರಶ್ನಿಸುವವರು ಆರೋಪಿಗಳ ಪರವೇ” “ಕಾಶ್ಮೀರಿ ಪಂಡಿತರ ವಿಚಾರಗಳು ಏನಿವೆ” “ಫಾಸ್ಟ್ರ್ಯಾಕ್ ಕೋರ್ಟು ಸಾಧ್ಯತೆ” “ಅತ್ಯಾಚಾರಿಗಳಿಗೆ ಕ್ಷಮೆಯೋ ಶಿಕ್ಷೆಯೋ” “ಉಪನಿಷತ್ತು ಬ್ರಾಹ್ಮಣರು ಬರೆದರೆ ಇಲ್ಲ ಶೂದ್ರರು ಬರೆದರೆ…” “ಚಾಣಕ್ಯ ಹೇಗೆ ಪ್ರಸ್ತುತ,” ಹೀಗೆ ಇಂದಿನ ಪ್ರಮುಖ ಸಂವಾದಗಳ ವಿಷಯಗಳು ಚರ್ಚೆಗೆ ಒಳಪಟ್ಟಿವೆ. ಅಧಿಕಾರ ಧಿಕ್ಕರಿಸಿ ನಡೆದು ಚಾಣಕ್ಯ ಹೇಗೆ ಪ್ರಸ್ತುತನಾದ? ಬಹಳ ಉತ್ತಮ ಚರ್ಚೆ.
ಬಹುಸಂಸ್ಕೃತಿಯನ್ನು ಕನೆಕ್ಟ್ ಮಾಡುವ ಸಾಂಸ್ಕೃತಿಕ ಶಕ್ತಿಯ ಚರ್ಚೆ ಬಹು ಅಮೂಲ್ಯ. ಅಧಿಕಾರವನ್ನು ತಿರಸ್ಕರಿಸುವ ಸಾಮರ್ಥ್ಯ ಇದ್ದಾಗ ಮಾತ್ರ ಚಾಣಕ್ಯ ಎನ್ನುತ್ತಾರೆ. ಅತ್ಯಾಚಾರಿಗಳಿಗೆ ಕ್ಷಮೆ ಕೊಡದೆ ಇರುವುದು ನಮ್ಮ ಆದ್ಯತೆಯಾಗಬಾರದು. ಅತ್ಯಾಚಾರ ನಡೆಯದೆ ಇರುವ ಹಾಗೆ ಮಾಡುವುದು ನಮ್ಮ ಆದ್ಯತೆಯಾಗಬೇಕು. ಅದು ಕುಟುಂಬ, ಶಾಲೆ ಪಠ್ಯಕ್ರಮ ತಿಳಿವಳಿಕೆ ನೀಡುವ ವಿಧಾನ ಇವೆಲ್ಲವೂ ಅವಲಂಬಿಸಿದೆ ಎನ್ನುತ್ತಾರೆ. ಸಂವಿಧಾನ ದಿನದ ಸಂದೇಶವನ್ನು ಅವರಿಗೆ ಬೇಕಾದ ಹಾಗೆ ನೀಡುತ್ತಿರುವಾಗಲೂ ಅಲ್ಲೊಂದು ಗಂಭೀರ ಹಾಸ್ಯ ಮಿಶ್ರಿತ ಚರ್ಚೆಯೊಂದು ಗಮನ ಸೆಳೆಯುತ್ತದೆ. ಮೊದಲೇ ಹೇಳಿದ ಹಾಗೆ “ಅನೇಕ ಬಾರಿ ಚರ್ಚೆಗಳಲ್ಲಿ ಅರಿವು ಕಮ್ಮಿ ಆವೇಶ ಜಾಸ್ತಿ”.
ನಾರಾಯಣ ಗುರುಗಳು ಶಂಕರಾಚಾರ್ಯರು ಒಂದೇ ನಾಡಿನವರು ಎನ್ನುವಾಗಲೂ ಅವರು ಸ್ಪಷ್ಟಪಡಿಸುತ್ತಾರೆ- ಗುರುಗಳು ಶಂಕರಾಚಾರ್ಯರ ಶತ್ರುವಾಗುವುದು ಹೇಗೆ? ಕೇಳುತ್ತಾರೆ. ಎಡಪಂಥಕ್ಕೆ ಭವಿಷ್ಯ ಇರಬೇಕಾದರೆ ಅದು ಹೇಗಿರಬೇಕು ಎನ್ನುವ ಮಾತುಗಳಂತೂ ಎಡಪಂಥೀಯರು ಎನ್ನುವವರೆಲ್ಲ ಮತ್ತೆ ಮತ್ತೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇತ್ತೀಚಿನ ಬಹುಮುಖ್ಯ ಚರ್ಚೆ ಎನ್ ಆರ್ ಸಿ ಬಗ್ಗೆ ಬರೆಯುವಾಗಲೂ ತಾನು ಯಾವ ಪಂಥದ ರಬ್ಬರ್ ಸ್ಟ್ಯಾಂಪ್ ಅಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆ ಇರುವ ಅವಕಾಶ ದುರ್ಬಲ ವರ್ಗದವರಿಗೆ ಇಲ್ಲ. ಆದ್ದರಿಂದ ಅವರಿಗೆ ಮೀಸಲಾತಿ ಕೊಡಬೇಕು ಎನ್ನುತ್ತಾರೆ. ಮೀಸಲಾತಿ ಇಲ್ಲದೆ ಬ್ರಾಹ್ಮಣನಾಗಿ ಅವರು ಕೆಲವು ಕಷ್ಟ ಎದುರಿಸಿಯೂ ಈ ಮಾತುಗಳನ್ನು ಹೇಳಿರುವುದು ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ. ಉಪನಿಷತ್ತು ಯಾರು ಬರೆದರು? ಚರ್ಚೆಯಲ್ಲಿ “ಆಗ ಜಾತಿ ವ್ಯವಸ್ಥೆ ಇರಲಿಲ್ಲ. ಇದ್ದುದು ವರ್ಣ ವ್ಯವಸ್ಥೆ, ಜಾತಿಯೇ ಇಲ್ಲದ ಕಾಲದಲ್ಲಿ ರಚನೆ ಬ್ರಾಹ್ಮಣರದೇ ಅಥವಾ ಶೂದ್ರರದ್ದೇ ಎನ್ನಲು ಹೇಗೆ ಸಾಧ್ಯ” ಎಂಬ ಪ್ರಶ್ನೆ ಮುಂದಿಡುತ್ತಾರೆ. ವಿದ್ಯೆ ಇಲ್ಲದವರು ಶೋಷಣೆ ಮಾಡ್ತಿಲ್ಲ ಎನ್ನುವುದಕ್ಕೆ ಆಧಾರವೇನು ಇಲ್ಲ. “ಬ್ರಾಹ್ಮಣರು ಮೂರು ಸಾವಿರ ವರ್ಷಗಳ ಹಿಂದೆ ನಮಗೆ ಅನ್ಯಾಯ ಮಾಡಿದ್ದಾರೆ ಎಂದರೆ ನಿಜವಾಗಿ ನೋಡಿದವರು ಯಾರಾದರೂ ಇದ್ದಾರೆಯೇ?” “ಗದರಿಸಿ, ಜಿಡಿಪಿ ಯನ್ನು ಮೇಲೆತ್ತಲು ಆಗುವುದಿಲ್ಲ”… ಹೀಗೆ ಅರವಿಂದ ಚೊಕ್ಕಾಡಿಯವರು ಗಾಢವಾಗಿ ವಿಚಾರ ಮಾಡಿಯೇ ಉತ್ತರಿಸುತ್ತಾರೆ. ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಗಟ್ಟಿ ಮಾತಿನಲ್ಲಿ ಅವರ ಚರ್ಚೆಮುಕ್ತಾಯವಾಗುತ್ತದೆ. ಖಾಸಗಿ ಗ್ರಹಿಕೆಗಳು ಮತ್ತು ಹೊರ ಜಗತ್ತಿನ ಅನುಭವಗಳ ಒಂದು ಚಿತ್ರಣ ಉದ್ದಕ್ಕೂ ಇಲ್ಲಿನ ಫೇಸ್ಟುಕ್ ಸಂವಾದಗಳಲ್ಲಿ ಗಮನಿಸಬಹುದು. ಈ ಚರ್ಚೆಯಲ್ಲಿ ಚೊಕ್ಕಾಡಿಯವರು ಸತ್ಯವನ್ನು ತಿರುಚುವುದಿಲ್ಲ. ಸುತ್ತಿಬಳಸಿ ಮಾತನಾಡುವುದಿಲ್ಲ. ಸ್ಪಷ್ಟತೆ ಮತ್ತು ವಿಶ್ವಾಸವನ್ನು ತರುವಂತಹ ಗಟ್ಟಿ ಮಾತುಗಳೇ ಇಲ್ಲಿವೆ. ಮಾನವ ಹಕ್ಕಿನ ಪ್ರಶ್ನೆ, ಕಾಶ್ಮೀರಿ ಪಂಡಿತರ ವಿಚಾರಗಳು, ಎಡಪಂಥ ಬಲಪಂಥ, ಫಾಸ್ಟ್ ಟ್ರ್ಯಾಕ್ ಕೋರ್ಟು, ಗಾಂಧೀಜಿ ಕುವೆಂಪು ವಿವೇಕಾನಂದ ಜಿನ್ನಾ ಉಪನಿಷತ್ತು ದುರ್ಯೋಧನ ಭೀಷ್ಮ. ……ಎಲ್ಲರೂ ಈ ಚರ್ಚೆಯಲ್ಲಿ ಬಂದು ಹೋಗುತ್ತಾರೆ. ‘ಒಂದು ಕಾದಂಬರಿ ಬರೆದರೆ ಹೇಗೆ ಸಾಹಿತಿಗಳೆಲ್ಲ ಗಮನಿಸಬೇಕಾದ ಬರೆಹ.
ಕೊನೆಗೂ ವಿಜ್ಞಾನಕ್ಕೂ ಮಿತಿಯಿದೆ ಆಧ್ಯಾತ್ಮಕ್ಕೂ ಮಿತಿ ಇದೆ ಎಂಬ ಸತ್ಯ ಗೊತ್ತಿದ್ದರೆ ಸಂವಾದವು ಸರಿಯಾದ ದಾರಿಯಲ್ಲಿ ಖಂಡಿತಾ ಮುನ್ನಡೆಯುವುದು ಎನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ.
———–
ಶ್ರೀನಿವಾಸ ಜೋಕಟ್ಟೆ, ಮುಂಬಯಿ
2 thoughts on “‘ಕಿರು ಸಂವಾದ’ – ಕೃತಿನೋಟ”
ಕಿರು ಸಂವಾದದ ಮೂಲಕ ಹೊಸ ಅರಿವಿನೆಡೆಗೆ ನಮ್ಮನ್ನು ಕೊಂಡುಹೋದ ಅರವಿಂದ ಚೊಕ್ಕಾಡಿ ಹಾಗೂ ಶ್ರೀನಿವಾಸ ಜೋಕಟ್ಟೆಯವರಿಗೆ ಧನ್ಯವಾದಗಳು.
ಅತ್ಯುತ್ತಮ ವಿಚಾರಗಳುಳ್ಳ ಬರಹ.