ಗ್ರಾಹಕರೊಬ್ಬರು ಕಿರಾಣಿ ಸಾಮಾನುಗಳನ್ನು ಖರೀದಿಸಿ ಕೊಟ್ಟ ಹಣವನ್ನು ವೆಂಕೋಬಯ್ಯ ಶೆಟ್ಟರು ಎಣಿಸಿಕೊಂಡು ಗಲ್ಲಾ ಪೆಟ್ಟಿಗೆಯಲ್ಲಿ ಹಾಕತೊಡಗಿದ್ದರು.
“ಅಯ್ಯಾ, ಅಮ್ಮ ಬಚ್ಚಲು ಮನೆಯಲ್ಲಿ ಬಿದ್ದುಬಿಟ್ಟಿದ್ದಾಳಂತೆ. ಬಿದ್ದು ಆಗಲೇ ತುಸು ಹೊತ್ತಾಯಿತಂತೆ…” ಆ ಕಡೆಗೆ ಹೋಗಿದ್ದ, ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗ ನಜೀರ್ ಹೇಳಿದಾಗ ವೆಂಕೊಬಯ್ಯನವರು ಗಾಬರಿಗೊಂಡರು.
“ಅಲ್ಲೇ ಪಕ್ಕದಲ್ಲೇ ಮಗ, ಸೊಸೆ, ಮೊಮ್ಮಕ್ಕಳು ಇದ್ದಾರಲ್ಲಪ್ಪ! ಯಾರೂ ನೋಡಲಿಲ್ಲವೇ…?”
“ಇಲ್ಲ ಅಯ್ಯ, ಯಾರೂ ನೋಡಿಲ್ಲವಂತೆ. ಅಮ್ಮ ಬಹಳ ಹೊತ್ತು ಚೀರಾಡಿದಳಂತೆ. ನೋವಿನಿಂದ ಅರಚಿದಳಂತೆ. ಆಕಡೆ ಮನೆಯ ಒಕ್ಕಲಿಗರ ಶಾಂತಲಿಂಗಪ್ಪ ಅಮ್ಮನನ್ನು ಬಚ್ಚಲು ಮನೆಯಿಂದ ಹಾಲಿಗೆ ಎತ್ತಿಕೊಂಡು ಹೋಗಿ ಮಲಗಿಸಿದ್ದಾರಂತೆ. ಕಾಲು…”
“ಕಾಲಿಗೆ ಏನಾಗಿದೆಯೋ…? ತುಂಬಾ ಪೆಟ್ಟಾಗಿದೆಯೇನೋ…?”
“ಬಲಗಾಲಿನ ಮೊಣಕಾಲಿನ ಕೆಳಗಿನ ಮೀನಖಂಡದಲ್ಲಿ ತುಂಬಾ ನೋವಿದೆಯಂತೆ. ಬಹುಶಃ ಮೂಳೆ ಮುರಿದಿರಬಹುದು ಅಂತ ಹೇಳುತ್ತಿದ್ದರು ಅಲ್ಲಿ ಸೇರಿರುವ ಜನರು.”
“ಹೌದೌ…? ಪ್ರಾಣೇಶಾ, ಗಲ್ಲೇದ ಹತ್ತಿರ ಕೂಡು ಬಾ. ನಾನು ಅಮ್ಮನನ್ನು ನೋಡಿಕೊಂಡು ಬರುವೆ” ಎಂದು ಮಗ ಪ್ರಾಣೇಶನಿಗೆ ಹೇಳುತ್ತಾ, ವೆಂಕೋಬಯ್ಯ ಶೆಟ್ಟರು ಅಮ್ಮನ ಮನೆಯತ್ತ ದೌಡಾಯಿಸಿದರು. ನೂರು ಹೆಜ್ಜೆಗಳಲ್ಲೇ ಮನೆ. ಅಲ್ಲಿ ನೆರೆದಿದ್ದ ಜನರು ಶೆಟ್ಟರು ಬಂದಿದ್ದನ್ನು ನೋಡಿ ಅವರಿಗೆ ದಾರಿ ಮಾಡಿಕೊಟ್ಟರು. ರುಕ್ಮಿಣಿದೇವಿಯವರು ವಿಪರೀತ ನೋವಿನಿಂದ ಮುಖವನ್ನು ಕಿವುಚುತ್ತಾ ಬಲಗಾಲನ್ನು ಚಾಚಿಕೊಂಡು ಕುಳಿತಿದ್ದರು. ವೆಂಕೋಬಯ್ಯನವರು ರುಕ್ಮಿಣಿದೇವಿಯವರ ಪಕ್ಕಕ್ಕೆ ಕುಳಿತುಕೊಂಡರು. ಬಚ್ಚಲು ಮನೆಯಲ್ಲಿ ಕೈಕಾಲು ಮುಖ ತೊಳೆದುಕೊಂಡು ಬರಲು ಹೋಗಿದ್ದಾಗ ಬಿದ್ದದ್ದು ಎಂದು ಹೇಳಿದ ರುಕ್ಮಿಣಿದೇವಿಯವರು ವೆಂಕೋಬಯ್ಯನವರ ಮುಖವನ್ನೇ ದಿಟ್ಟಿಸತೊಡಗಿದರು. ಬಲಗಾಲಿನ ಮೀನಖಂಡ ಆಗಲೇ ಊದಿಕೊಂಡಿತ್ತು. ಅದನ್ನು ಗಮನಿಸಿದ ಶೆಟ್ಟರು ತಕ್ಷಣ ತಮ್ಮ ಸಂಬಂಧಿಕ ಡಾಕ್ಟರ್ ಸತ್ಯನಾರಾಯಣರಿಗೆ ಫೋನಾಯಿಸಿ ಒಂದೈದು ನಿಮಿಷ ಮನೆಗೆ ಬಂದು ಹೋಗಲು ಕೇಳಿಕೊಂಡರು. ಹತ್ತು ನಿಮಿಷದಲ್ಲಿ ಡಾಕ್ಟರ್ ಅಲ್ಲಿದ್ದರು. ರುಕ್ಮಿಣಿದೇವಿಯವರನ್ನು ಪರಿಶೀಲಿಸಿದ ಅವರು, `ಮೀನಖಂಡದ ಮೂಳೆ ಮುರಿದಿರುವ ಹಾಗಿದೆ. ತಕ್ಷಣ ಗಂಗಾವತಿಯ ವಾಸವಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರಿ. ಅಲ್ಲಿ ಡಾ.ಬಸವರಾಜ್ ಪಾಟೀಲ್ ಎನ್ನುವ ಆರ್ಥೋ ಸರ್ಜನ್‍ರರಿಗೆ ತೋರಿಸಿರಿ. ಆದಷ್ಟು ಬೇಗ ಹೊರಡಿ. ತಡವಾದಂತೆ ನೋವು ಹೆಚ್ಚಾಗುತ್ತದೆ’ ಎಂದು ತಿಳಿಸುತ್ತಾ ನೋವು ನಿವಾರಕ ಇಂಜೆಕ್ಷನ್ ಕೊಟ್ಟು ಜೊತೆಗೆ ಒಂದಿಷ್ಟು ಮಾತ್ರೆಗಳನ್ನೂ ಕೊಟ್ಟರು. `ಅಮ್ಮಾ, ನಾವು ತಕ್ಷಣ ಗಂಗಾವತಿಗೆ ಹೋಗೋಣ’ ಎಂದಾಗ ರುಕ್ಮಿಣಿದೇವಿಯರು ಆಗಲಿ ಎನ್ನುವಂತೆ ಗೋಣಾಡಿಸಿದರು. ವೆಂಕೋಬಯ್ಯನವರು ತಕ್ಷಣ ಡ್ರೈವರ್ ಖಾಜಾನಿಗೆ ಫೋನಾಯಿಸಿ ಮನೆಗೆ ಹೋಗಿ ಕಾರನ್ನು ತೆಗೆದುಕೊಂಡು ಬರಲು ಹೇಳಿದರು. ಮಗ ಪ್ರಾಣೇಶನಿಗೆ ಫೋನಾಯಿಸಿ, `ಒಂದಿಪ್ಪತ್ತೈದು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ನಿನ್ನಮ್ಮನನ್ನು ಕರೆದುಕೊಂಡು ಆದಷ್ಟು ಬೇಗ ಬಂದುಬಿಡು’ ಎಂದರು. ಅಮ್ಮನ ಜೊತೆಗೆ ಗಂಗಾವತಿಗೆ ಹೋಗುವ ಬಗ್ಗೆನೂ ಹೇಳಿದರು. ಹೆಂಡತಿ ಕೌಸಲ್ಯಾದೇವಿಗೆ ಫೋನಾಯಿಸಿ, ಅಮ್ಮನ ವಿಷಯ ತಿಳಿಸಿ, `ಆಸ್ಪತ್ರೆಯಲ್ಲಿ ಇರಬೇಕಾಗಬಹುದೇನೋ ಗೊತ್ತಿಲ್ಲ. ಪ್ರಾಣೇಶನ ಜೊತೆಗೆ ಬರುವಾಗ ನಿನ್ನ ಒಂದಿಷ್ಟು ಬಟ್ಟೆಗಳನ್ನು ತೆಗೆದುಕೊಂಡು ಬಾ’ ಎಂದು ಹೇಳಿದರು. ಮನೆಗಳು ಅಲ್ಲೇ ಸಮೀಪದಲ್ಲೇ ಇರುವುದರಿಂದ ಹತ್ತು ನಿಮಿಷಗಳಲ್ಲಿ ಪ್ರಾಣೇಶ್ ದುಡ್ಡು ಮತ್ತು ತಾಯಿ ಕೌಸಲ್ಯಾದೇವಿಯ ಜೊತೆಗೆ ಬಂದ. ಕೌಸಲ್ಯಾದೇವಿ ರುಕ್ಮಿಣಿದೇವಿಯವರ ಆರೋಗ್ಯ ವಿಚಾರಿಸತೊಡಗಿದರು. ಅಷ್ಟರಲ್ಲಿ ಕಾರೂ ಬಂತು. ಇರಲಿ ಎಂದು ಕೌಸಲ್ಯಾದೇವಿ ರುಕ್ಮಿಣಿದೇವಿಯವರ ಒಂದಿಷ್ಟು ಬಟ್ಟೆಬರೆಗಳನ್ನು ಜೋಡಿಸಿಕೊಂಡರು. ಮೆಲ್ಲಗೇ ರುಕ್ಮಿಣಿದೇವಿಯವರನ್ನು ಎತ್ತಿಕೊಂಡು ಕಾರಲ್ಲಿ ಕೂಡ್ರಿಸಿಕೊಂಡರು. ಅಷ್ಟಾದರೂ ಪಕ್ಕದ ಮನೆಯಿಂದ ರುಕ್ಮಿಣಿದೇವಿಯವರ ಹಿರಿ ಮಗ ಶ್ರೀನಿವಾಸನಾಗಲೀ, ಸೊಸೆ ಚಂದ್ರಿಕಾ ಆಗಲೀ ಇತ್ತ ಮುಖ ಹಾಕಲಿಲ್ಲ. ಖಾಜಾನಿಗೆ ವೆಂಕೋಬಯ್ಯ ಶೆಟ್ಟರು ಮಾರ್ಗದರ್ಶನ ನೀಡಿದರು. ಕಾರು ಗಂಗಾವತಿಯತ್ತ ಪ್ರಯಾಣ ಶುರುಮಾಡಿತು.
****
ತಾವರಗೇರೆಯಿಂದ ಗಂಗಾವತಿಗೆ ಬರೀ ಮುಕ್ಕಾಲು ತಾಸಿನ ಪ್ರಯಾಣ ಅಷ್ಟೇ. ಕಾರು ವೇಗವಾಗಿ ಓಡುತ್ತಿತ್ತಾದರೂ ಮಧ್ಯದಲ್ಲಿ ಬರುವ ಸ್ಪೀಡ್ ಬ್ರೇಕರ್ ಹಂಪ್‍ಗಳಿಂದ ದಾರಿ ಸಾಗುತ್ತಿರಲಿಲ್ಲ. ನಲವತ್ತೆರಡು ಕಿಮೀಗೆ ಸುಮಾರು ಅರವತ್ತರಿಂದ ಎಪ್ಪತ್ತು ಸ್ಪೀಡ್ ಬ್ರೇಕರ್ ಹಂಪ್‍ಗಳು ಗಾಡಿಯ ವೇಗವನ್ನು ತಡೆಯುತ್ತಿದ್ದವು. ಪ್ರಯಾಣ ಆರಂಭವಾಗಿ ಎಂಟ್ಹತ್ತು ನಿಮಿಷಗಳಾದರೂ ಮಾತುಗಳೇನೂ ಕಳೆಗಟ್ಟಲಿಲ್ಲ. ವೆಂಕೋಬಯ್ಯ ಶೆಟ್ಟರಾಗಲೀ, ಕೌಸಲ್ಯಾದೇವಿಯಾಗಲೀ, ರುಕ್ಮಿಣಿದೇವಿಯವರಾಗಲೀ ಮಾತಿಗೆ ಮುಂದಾಗಲಿಲ್ಲ. ಎಲ್ಲರ ಮನಸ್ಸುಗಳಲ್ಲಿ ಮಂಥನ ನಡೆದಿತ್ತು. ವೆಂಕೋಬಯ್ಯ ಶೆಟ್ಟರು ಈಗ ಅರವತ್ತರ ಹರೆಯದವರಾದರೆ ರುಕ್ಮಿಣಿದೇವಿಯವರು ಎಪ್ಪತ್ನಾಲ್ಕರ ಹರೆಯದ ಹಿರಿಯ ನಾಗರೀಕರು.
ತಿಮ್ಮಯ್ಯ ಶೆಟ್ಟರು ಮತ್ತು ತಿರುಮಲಾದೇವಿ ದಂಪತಿಗಳ ಜೇಷ್ಠ ಸುಪುತ್ರ ವೆಂಕೋಬಯ್ಯ ಶೆಟ್ಟರು. ತಿಮ್ಮಯ್ಯ ಶೆಟ್ಟರದು ಕಿರಾಣಿ ವ್ಯಾಪಾರ. ತಲೆತಲಾಂತರದಿಂದ ಬಂದ ಮನೆತನದ ಕಸುಬು. ವೆಂಕೋಬಯ್ಯನ ಜನನದ ನಂತರ ತಿಮ್ಮಯ್ಯ ಮತ್ತು ತಿರುಮಲಾದೇವಿ ದಂಪತಿಗಳಿಗೆ ಐದು ವರ್ಷಗಳವರೆಗೆ ಮತ್ತೆ ಸಂತಾನ ಪ್ರಾಪ್ತಿಯಾಗಲಿಲ್ಲ. ವೆಂಕೋಬಯ್ಯನಿಗೆ ಆರನೇ ವರ್ಷ ನಡೆಯುತ್ತಿದ್ದಾಗ ತಿರುಮಲಾದೇವೆಯವರು ಮತ್ತೆ ಗರ್ಭಿಣಿಯರಾದಾಗ ಕುಟುಂಬದ ಜನರ ಮುಖಗಳಲ್ಲಿ ನಗೆ ಅರಳಿತ್ತು. ಯಾವುದೇ ಸಮಸ್ಯೆಗಳಿಲ್ಲದೇ ತಿರುಮಲಾದೇವಿಯವರಿಗೆ ನವಮಾಸಗಳು ತುಂಬಿದಾಗ ಮನೆಯವರೆಲ್ಲರೂ ಸಮಾಧಾನದ ಉಸಿರು ಹಾಕಿದ್ದರು. ದಿನಗಳು ತುಂಬಿ ಹೆರಿಗೆ ನೋವು ಕಾಣಿಸಿಕೊಂಡಾಗ ಊರಿನ ಸೂಲಗಿತ್ತಿ ಹಮೀದಾ ಬೇಗಂ ಮತ್ತು ಮನೆಯ ವೈದ್ಯರನ್ನು ಕರೆಸಿದ್ದರು ತಿಮ್ಮಯ್ಯ ಶೆಟ್ಟರು. ಅದೇನಾಯಿತೋ ಗೊತ್ತಿಲ್ಲ, ಹೆರಿಗೆಯ ಸಮಯದಲ್ಲಿ ತುಂಬಾ ತೊಡಕುಂಟಾಗಿ ಮಗು ಮತ್ತು ತಾಯಿ ಇಬ್ಬರೂ ವೈಕುಂಠವಾಸಿಗಳಾದರು. ತಿಮ್ಮಯ್ಯ ಶೆಟ್ಟರ ಕುಟುಂಬ ಶೋಕಸಾಗರದಲ್ಲಿ ಮುಳುಗಿತು. ವೆಂಕೋಬಯ್ಯ ತಾಯಿಯ ಪ್ರೀತಿಯಿಂದ ವಂಚಿತನಾದ.
ತಿಮ್ಮಯ್ಯ ಶೆಟ್ಟರು ಪ್ರೀತಿಯ ಹೆಂಡತಿಯ ಸಾವಿನ ನೆನಪಲ್ಲೇ ಬಡವಾಗತೊಡಗಿದರು. ಆಗಿನ್ನೂ ಅವರಿಗೆ ಬರೀ ಇಪ್ಪತ್ತೆಂಟು ವರ್ಷ ವಯಸ್ಸು ಅಷ್ಟೇ. ಅವರ ತಂದೆ-ತಾಯಿಗಳು ಸುಮ್ಮನಿರಲು ಸಾಧ್ಯವೇ…? ಮರುಮದುವೆಯಾಗಲು ವರಾತ ಹಚ್ಚಿದರು. ವರ್ಷೊಪ್ಪತ್ತಿನಲ್ಲಿ ಮಗನಿಗೆ ಮತ್ತೊಂದು ಮದುವೆ ಮಾಡಬೇಕೆಂಬ ಮಹದಾಸೆ ಅವರಿಗೆ. ಮಗನಿಗೆ ಸಂಗಾತಿಯಾಗುತ್ತಾಳೆ. ಮೊಮ್ಮಗ ವೆಂಕೋಬಯ್ಯನಿಗೆ ತಾಯಿಯ ಪ್ರೀತಿ, ಪರಾಮರಿಕೆ ಸಿಗುತ್ತದೆ ಎಂಬ ಅನಿಸಿಕೆ ಅವರದು. `ಬಂದವಳು ಹೇಗಿರುತ್ತಾಳೋ ಏನೋ? ಮಗನನ್ನು ಸ್ವಂತ ಮಗನಂತೆ ನೋಡಿಕೊಳ್ಳದಿದ್ದರೆ…? ಮಲತಾಯಿ ಎಷ್ಟಿದ್ದರೂ ಮಲತಾಯಿಯೇ ಅಲ್ಲವೇ…? ಅದಕ್ಕೆ ಸುಮ್ಮನೆ ಹೀಗೇ ಒಂಟಿಯಾಗಿದ್ದರೆ ಒಳ್ಳೆಯದೇನೋ?’ ಎಂಬ ವಿಚಾರಗಳು ತಿಮ್ಮಯ್ಯ ಶೆಟ್ಟರ ತಲೆಯಲ್ಲಿ ಸುಳಿದಾಡುತ್ತಿದ್ದುದರಿಂದ ಮರುಮದುವೆಗೆ ಮನಸ್ಸು ಮಾಡುತ್ತಿರಲಿಲ್ಲ. ಒಂದು ಕಡೆಗೆ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳಲು ಒಬ್ಬ ಸಂಗಾತಿ ಬೇಕು ಎಂಬ ತುಡಿತವೂ ಇತ್ತು ಅವರ ಮನದಲ್ಲಿ. `ನಾನೇನು ಮುದುಕನಲ್ಲ? ಇನ್ನೂ ಮೂವತ್ತು ಕೂಡಾ ಮುಟ್ಟಿಲ್ಲ. ಉಪ್ಪು, ಹುಳಿ, ಖಾರ ತಿನ್ನುವ ದೇಹ. ಈ ದೇವರು ಮನುಷ್ಯನ ಮೈಯಲ್ಲಿ `ಆ’ ತೀರದ ದಾಹವೊಂದನ್ನು ಇಟ್ಟುಬಿಟ್ಟಿದ್ದಾನಲ್ಲ? ಎಂಥೆಂಥ ಮಹಾಯೋಗಿಗಳು, ತಪಸ್ವಿಗಳು, ಋಷಿಮುನಿಗಳೂ ಹೆಣ್ಣಿನ ಸಂಗಕ್ಕೆ ಹಾತೊರೆಯುತ್ತಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖಿಸಿದ್ದಾರಲ್ಲ…? ಅಂದ ಮೇಲೆ ನನ್ನಂಥ ನರಮಾನವನ ಪಾಡೇನು? ಹೆಣ್ಣಿನ ಸಾಂಗತ್ಯ ಬೇಕಲ್ಲವೇ…? ಹೆತ್ತವರ ಮಾತಿಗೆ ಸುಮ್ಮನೇ ಹೂಂ ಅಂದು ಮದುವೆ ಮಾಡಿಕೊಳ್ಳುವುದೇ ಸರಿಯಾದದ್ದು.’ ಹೀಗೂ ವಿಚಾರಗಳ ಹೊಯ್ದಾಟವಿತ್ತು ಅವರ ಚಂಚಲ ಮನಸ್ಸಿನೊಳಗೆ. ಚಂಚಲ ಮನಸ್ಸಿನ ಹಪಹಪಿಯೇ ಹೆಚ್ಚಾದುದರಿಂದ ತಿಮ್ಮಯ್ಯ ಶೆಟ್ಟರು ಕೊನೆಗೂ ಹೆತ್ತವರ ಒತ್ತಾಯಕ್ಕೆ ಮಣಿದಿದ್ದರು. ಶೆಟ್ಟರ ತಾಯಿ ತನ್ನ ತವರಿನ ಕಡೆಯ ಸಂಬಂಧಿರ ರುಕ್ಮಿಣಿದೇವಿಯನ್ನು ತಂದುಕೊಂಡುಬಿಟ್ಟರು ತಮಗೆ ಸೊಸೆಯಾಗಿ, ಮಗನಿಗೆ ಹೆಂಡತಿಯಾಗಿ, ವೆಂಕೋಬಯ್ಯನಿಗೆ ತಾಯಿಯಾಗಿ. ತಿರುಮಲಾದೇವಿಯಂತೆ ಅಷ್ಟೇನೂ ರೂಪಸಿಯಲ್ಲದ ಇಪ್ಪತ್ತರ ವಸಂತ ಕಂಡ ರುಕ್ಮಿಣಿದೇವಿ ತಿಮ್ಮಯ್ಯ ಶೆಟ್ಟರಿಗೆ ಧರ್ಮಪತ್ನಿಯಾದಳು.
ತಿಮ್ಮಯ್ಯ ಶೆಟ್ಟರ ದಾಂಪತ್ಯದ ಎರಡನೇ ಅಧ್ಯಾಯ ಶುರುವಾಯಿತು ಒಳ್ಳೇ ಉತ್ಸಾಹದಲ್ಲಿ. ತಿರುಮಲಾದೇವಿ ಗತಿಸಿದ ನಂತರ ಒಂದಿಷ್ಟು ಡಲ್ಲಾಗಿದ್ದ ಶೆಟ್ಟರು ರುಕ್ಮಿಣಿದೇವಿಯ ಸಾಂಗತ್ಯದಲ್ಲಿ ಮತ್ತೆ ಮೊದಲಿನ ಲಯ ಕಂಡುಕೊಳ್ಳತೊಡಗಿದರು. ಮದುವೆಯಾದ ಹೊಸತರಲ್ಲಿ ರುಕ್ಮಿಣಿದೇವಿ ವೆಂಕೋಬಯ್ಯನ ಬಗ್ಗೆಯೂ ಒಂದಿಷ್ಟು ಆಸ್ಥೆ ವಹಿಸಿದಳು. ತಾಯಿಪ್ರೀತಿ, ಮಮಕಾರದಲ್ಲಿ ವೆಂಕೋಬಯ್ಯ ಒಂದಿಷ್ಟು ಗೆಲುವಾದ. ಮದುವೆಯಾದ ಮೂರನೇ ವರ್ಷದಲ್ಲಿ ರುಕ್ಮಿಣಿದೇವಿ ಮೊದಲ ಮಗು ಶ್ರೀನಿವಾಸನಿಗೆ ಜನ್ಮನೀಡಿದಾಗ ಶೆಟ್ಟರ ಮನೆಯಲ್ಲಿ ಮತ್ತೆ ವಸಂತನಾಗಮನವಾಗಿತ್ತು. ಮತ್ತೆರಡು ವರ್ಷಗಳ ನಂತರ ‘ಪಾಂಡುರಂಗ’ ಶೆಟ್ಟರ ದಂಪತಿಗಳ ಮಡಿಲು ತುಂಬಿ ಕಲರವ ಹುಟ್ಟಿಸಿದ. `ಶೆಟ್ಟರಿಗೆ ಮೂರೂ ಜನ ಗಂಡು ಮಕ್ಕಳು. ತುಂಬಾ ಅದೃಷ್ಟವಂತರು’ ಎಂದು ಜನರಾಡುವ ಮಾತುಗಳಿಂದ ಶೆಟ್ಟರು ಉಬ್ಬಿಹೋಗುತ್ತಿದ್ದರು. ಶ್ರೀನಿವಾಸ, ಪಾಂಡುರಂಗ ಮಡಿಲು ತುಂಬಿದ ನಂತರ ರುಕ್ಮಿಣಿದೇವಿಯವರಿಗೆ ವೆಂಕೋಬಯ್ಯನ ಮೇಲಿನ ಆಸ್ಥೆ ಕಡಿಮೆಯಾಗತೊಡಗಿತು. ತಾಯಿಪ್ರೀತಿ, ಮಮಕಾರ ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳ ಮೇಲೆ ಕೇಂದ್ರೀಕೃತವಾಗತೊಡಗಿತ್ತು. ದಿನಗಳೆದಂತೆ ವೆಂಕೋಬಯ್ಯ ಮಲಮಗನಾಗತೊಡಗಿದ್ದ. ಅವನ ಸಣ್ಣಪುಟ್ಟ ತಪ್ಪುಗಳು ದೊಡ್ಡವಾಗಿ ಕಾಣತೊಡಗಿದವು. ಅವನ ಮೇಲೆ ಹರಿಹಾಯತೊಡಗಿದಳು ಕಾರಣವಿಲ್ಲದೇ. ಸುಮ್ಮಸುಮ್ಮನೇ ಸಿಡುಕುವುದೂ ಸಾಮಾನ್ಯವಾಗತೊಡಗಿತು. ಊಟ-ಉಪಚಾರದಲ್ಲೂ ತಾರತಮ್ಯ ತೋರತೊಡಗಿದಳು. ಕೆಲವೊಂದಿಷ್ಟು ಸಿಹಿ ತಿನಿಸುಗಳನ್ನು ಬರೀ ತನ್ನ ಮಕ್ಕಳಿಗಷ್ಟೇ ತಿನ್ನಿಸುತ್ತಿದ್ದಳು. ಉತ್ತಮ ಗುಣ ಮಟ್ಟದ ಬಟ್ಟೆಗಳನ್ನು ತನ್ನ ಮಕ್ಕಳಿಗೆ ಆರಿಸಿಕೊಂಡರೆ ಸುಮಾರಾದ ಬಟ್ಟೆಗಳನ್ನು ವೆಂಕೋಬಯ್ಯನಿಗೆ ತರುತ್ತಿದ್ದಳು. ಕೆಲವೊಮ್ಮೆ ಹಾಳುಮೂಳು, ಹಳಸಿದ್ದೂ ವೆಂಕೋಬಯ್ಯನ ಪಾಲಿಗೆ ಅನಿವಾರ್ಯವಾಗತೊಡಗಿತ್ತು. ಆದರೂ ವೆಂಕೋಬಯ್ಯ ಯಾವುದೇ ರೀತಿಯ ರಂಪಮಾಡುತ್ತಿರಲಿಲ್ಲವಾದ್ದರಿಂದ ತಿಮ್ಮಯ್ಯ ಶೆಟ್ಟರಿಗೆ ಹೆಂಡತಿಯ ಪಕ್ಷಪಾತ ಧೋರಣೆ ಗೊತ್ತಾಗುತ್ತಿರಲಿಲ್ಲ. ವೆಂಕೋಬಯ್ಯ ಆಗಲೇ ಶಾಲೆಗೆ ಹೋಗುತ್ತಿದ್ದ. ಪಾಂಡುರಂಗನ ನಂತರ ಒಂದು ಹೆಣ್ಣು ಮಗುವಾದರೆ ಸಾಕು ಎಂದೆನ್ನುತ್ತಿದ್ದ ದಂಪತಿಗಳಿಗೆ ಮತ್ತೆ ಮಕ್ಕಳಾಗುವ ಯೋಗ ಕಾಣಲಿಲ್ಲ. ದಂಪತಿಗಳ ಕನಸು ನನಸಾಗಲಿಲ್ಲ.
ಶೆಟ್ಟರ ವ್ಯಾಪಾರ ಮಾತ್ರ ಒಳ್ಳೇ ಏರುಗತಿಯಲ್ಲಿ ಸಾಗಿದ್ದುದು ಖುಷಿಯ ಸಂಗತಿಯಾಗಿತ್ತು. ಶೆಟ್ಟರೂ ವ್ಯಾಪಾರದಲ್ಲಿ ಒಂದು ನಿಯತ್ತನ್ನು ಇಟ್ಟುಕೊಂಡ ಮನುಷ್ಯ. ಅತಿಯಾದ ಲಾಭದಾಸೆಗೆ ಬಿದ್ದವರಲ್ಲ. `ಶೆಟ್ಟರ ಅಂಗಡಿಯಲ್ಲಿ ದಿನಸಿ ಸಾಮಾನುಗಳು ವಾಜಿಮಿ ರೇಟಿಗೆ ಸಿಗುತ್ತವೆ’ ಎಂಬ ಪ್ರತೀತಿಯನ್ನು ಹುಟ್ಟುಹಾಕಿದ್ದರು ಊರಲ್ಲಿ. ಸುತ್ತಮುತ್ತಲಿನ ಊರುಗಳಲ್ಲೂ ಶೆಟ್ಟರಿಗೆ ಒಳ್ಳೇ ಹೆಸರಿತ್ತು. ಸುತ್ತಮುತ್ತಲಿನ ಊರಿನ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಕಡಿಮೆ ದರದಲ್ಲಿ ಕಿರಾಣಿಕೊಟ್ಟು ಹೆಸರು ಗಳಿಸಿಕೊಂಡಿದ್ದರು. ಉದ್ದರಿ ಕೊಟ್ಟಿದ್ದ ದುಡ್ಡಿನ ಪೇಮೆಂಟ್ ಕೆಲವೊಮ್ಮೆ ತಡವಾಗಿ ಬಂದರೂ ಕಿರಿಕ್ ಮಾಡದೇ ತೆಗೆದುಕೊಳ್ಳುತ್ತಿದ್ದುದು ಅವರ ಮಾನವೀಯ ಕಳಕಳಿಗೆ ಮೆರುಗು ತಂದಿತ್ತು. ಅಂಗಡಿಯಲ್ಲಿನ ಕೆಲಸಗಾರರಲ್ಲೂ ಸಂತೃಪ್ತ ಭಾವನೆ ಇತ್ತು.
****
ವೆಂಕೋಬಯ್ಯ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ. ಆಗಲೇ ಅವನಿಗೂ ಕಿರಾಣಿ ಅಂಗಡಿಯ ದೇಖರೇಕಿ ಶುರುವಾಗಿತ್ತು. ಬಿಡುವಿನ ವೇಳೆಯಲ್ಲಿ ಅಂಗಡಿಯಲ್ಲಿ ಕುಳಿತುಕೊಂಡು ತಂದೆಗೆ ನೆರವಾಗತೊಡಗಿದ. ಗ್ರಾಹಕರಿಗೆ ತಾನೇ ಸಾಮಾನುಗಳನ್ನು ಕಟ್ಟಿಕೊಡತೊಡಗಿದ್ದ. ಸಾಮಾನುಗಳ ಧಾರಣಿಯೂ ಅವನಿಗೆ ಗೊತ್ತಾಗತೊಡಗಿತ್ತು. ನಯವಿನಯದ ಅವನ ಮಾತುಗಳಿಂದ ಗ್ರಾಹಕರು ತೃಪ್ತರಾಗುತ್ತಿದ್ದುದೂ ವಿಶೇಷವಾಗಿತ್ತು. ವೆಂಕೋಬಯ್ಯ ಪಿಯುಸಿಗೂ ಸೇರಿಕೊಂಡ. ಬಿಕಾಂ, ಇಲ್ಲವೇ ಎಂಕಾಂ ಮಾಡಿಕೊಂಡು ಬ್ಯಾಂಕಿನ ನೌಕರಿಗೆ ಸೇರಿಕೊಳ್ಳಬೇಕೆಂಬ ಹಂಬಲವಿತ್ತು ಅವನೆದೆಯಲ್ಲಿ. ಪಿಯುಸಿ ಮುಗಿಸಿದ ವೆಂಕೋಬಯ್ಯ ಹದಿನೆಂಟರ ಹರೆಯದ ಉತ್ಸಾಹಿ ತರುಣ.
ಆಗೊಂದು ಅಹಿತಕರ ಘಟನೆ ನಡೆದು ಹೋಯಿತು. ಅದು ಅವನ ಭವಿಷ್ಯದ ದಿಕ್ಕನ್ನೇ ಬದಲಾಯಿಸಿಬಿಟ್ಟಿತು. ತಿಮ್ಮಯ್ಯ ಶೆಟ್ಟರು ಅದೊಂದು ದಿನ ಬೆಳ್ಳಂಬೆಳಿಗ್ಗೆ ವೈಕುಂಠವಾಸಿಗಳಾಗಿಬಿಟ್ಟರು. ರಾತ್ರಿ ಮಲಗಿದವರು ಬೆಳಿಗ್ಗೆ ಸೂರ್ಯದೇವನ ದರ್ಶನವನ್ನು ಮಾಡಿಕೊಳ್ಳದೇ ವೈಕುಂಠದ ಕಡೆಗೆ ನಾಗಾಲೋಟದಲ್ಲಿ ಸಾಗಿದ್ದರು. ಶೆಟ್ಟರ ಕುಟುಂಬ ಶೋಕಸಾಗರದಲ್ಲಿ ಮುಳುಗಿತು. ವೆಂಕೋಬಯ್ಯ ತಂದೆಯನ್ನು ಕಳೆದುಕೊಂಡು ನಿಜವಾಗಿಯೂ ಅನಾಥನಾಗಿಬಿಟ್ಟ. `ಮುಂದಿನ ನನ್ನ ಜೀವನದ ಹೇಗೋ ಏನೋ…? ಚಿಕ್ಕಮ್ಮ ನನ್ನ ಹೇಗೆ ನೋಡಿಕೊಳ್ಳುವಳೋ ಏನೋ? ತಮ್ಮಂದಿರು ನನ್ನ ಅಣ್ಣ ಅಂತ ಭಾವಿಸಿಕೊಳ್ಳುವರೋ ಏನೋ? ನನ್ನ ವಿದ್ಯಾಭ್ಯಾಸದ ಗತಿ ಎತ್ತ ಸಾಗುವುದೋ ಏನೋ? ಭವಿಷ್ಯದಲ್ಲಿ ನಾನು ಬೆಳಕು ಕಾಣುವೆನೋ ಇಲ್ಲವೋ?’ ಹೀಗೆ ಚಿಂತೆಗಳ ಕಾರ್ಮೋಡದಲ್ಲಿ ವೆಂಕೋಬಯ್ಯನ ಮೊಗದಲ್ಲಿನ ನಗೆ ಮರೆಯಾಗತೊಡಗಿತ್ತು.
ತಿಮ್ಮಯ್ಯ ಶೆಟ್ಟರು ವೈಕುಂಠವಾಸಿಗಳಾಗಿ ತಿಂಗಳೊಪ್ಪತ್ತಿನಲ್ಲಿ ಶೆಟ್ಟರ ಮನೆಯ ವಾತಾವರಣ ಸಂಪೂರ್ಣ ಬದಲಾಗಿ ಹೋಯಿತು. ರುಕ್ಮಿಣಿದೇವಿ ಕಿರಾಣಿ ವ್ಯಾಪಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡುಬಿಟ್ಟರು. ವೆಂಕೋಬಯ್ಯನ ವಿದ್ಯಾಭ್ಯಾಸ ಅಲ್ಲಿಗೇ ನಿಂತು ಹೋಯಿತು. ತೀರಾ ಸಮೀಪದ ಸಂಬಂಧಿಕರು ವೆಂಕೋಬಯ್ಯನ ಪರವಾಗಿ ವಾದಿಸಿದರೂ ರುಕ್ಮಿಣಿದೇವಿ ಯಾರ ಮಾತಿಗೂ ಮನ್ನಣೆ ಕೊಡಲಿಲ್ಲ. ಯಾರ ಮಾತಿಗೂ ಕ್ಯಾರೆ ಎನ್ನಲಿಲ್ಲ. ಅದೇನಿದ್ದರೂ ತನ್ನದೇ ಪರಮಾಧಿಕಾರ ಎಂದೆನ್ನತೊಡಗಿದಳು. ವೆಂಕೋಬಯ್ಯ ಸಂಬಳದಾಳಿನಂತೆ ದಿನವಿಡೀ ಅಂಗಡಿಯಲ್ಲಿ ದುಡಿಯುವುದೇ ಕೆಲಸವಾಯಿತು. ವೆಂಕೋಬಯ್ಯ ತಳಮಳಿಸತೊಡಗಿದ. ಕೊರಗಿನಲ್ಲಿ ಹೀಗೇ ಒಂದು ವರ್ಷ ಕಳೆದು ಹೋಗಿತ್ತು.
ಇನ್ನೊಂದು ಕರಾಳ ದಿನ ವೆಂಕೋಬಯ್ಯನ ಪಾಲಿಗೆ ಬಂದಿತ್ತು. ತಿಮ್ಮಯ್ಯ ಶೆಟ್ಟರ ಮೊದಲನೇ ಪುಣ್ಯತಿಥಿ ಮುಗಿದು ವಾರವೊಂದಾಗಿತ್ತು. ರುಕ್ಮಿಣಿದೇವಿ ಏಕಾಯೇಕಿ ವೆಂಕೋಬಯ್ಯನನ್ನು ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಗೆ ಹಾಕಿದ್ದಳು. ಬರಿಗೈಲೇ ಬದುಕು ಕಟ್ಟಿಕೊಳ್ಳಬೇಕಾಗಿತ್ತು ಇಪ್ಪತ್ತರ ಹರೆಯದ ಹುಡುಗ ವೆಂಕೋಬಯ್ಯ. ಸಮಾಜದ ಮುಖಂಡರು ರುಕ್ಮಿಣಿದೇವಿಗೆ ತಿಳಿಸಿ ಹೇಳಿ ನೋಡಿದರು. ಆದರೆ ಆಕೆ ತನ್ನ ನಿಲುವನ್ನು ಬದಲಿಸಲಿಲ್ಲ. ಬದಲಿಗೆ, `ಈ ಹುಡುಗ ಇರುವ ಮನೆ ಉದ್ಧಾರವಾಗುವುದಿಲ್ಲ. ಇವನ ಕೆಟ್ಟ ಕಾಲ್ಗುಣದಿಂದಲೇ ಇವರಪ್ಪ ಬೇಗ ತೀರಿಕೊಂಡಿದ್ದು. ಆದ್ದರಿಂದ ಇಂಥಹ ದರಿದ್ರದವನನ್ನು ಮನೆಯೊಳಗಿಟ್ಟುಕೊಂಡು ನಾನೂ ದರಿದ್ರದವಳಾಗಲಾರೆ’ ಎಂದು ದೊಡ್ಡ ಧ್ವನಿಯಲ್ಲಿ ಹೇಳಿ ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸಿದ್ದಳು. `ಅವನಿಗೊಂದಿಷ್ಟಾದರೂ ಹಣವನ್ನು ಕೊಡಿರಿ. ಏನಾದರೂ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಾನೆ’ ಎಂದು ಕೇಳಿದ ಸಮಾಜದವರ ಮಾತಿಗೆ, `ಇಷ್ಟು ದಿನ ಅವನು ಈ ಮನೆಯಲ್ಲಿ ತಿಂದುಂಡು ಬೆಳೆದಿದ್ದೇ ಹೆಚ್ಚಾಯಿತು. ಇನ್ನೇನಿದ್ದರೂ ಅವನ ದಾರಿ ಅವನಿಗೆ, ನಮ್ಮ ದಾರಿ ನಮಗೆ’ ಎಂದು ಕಠೋರವಾಗಿ ಹೇಳಿದ್ದಳು. ಅವಳ ಕಲ್ಲು ಮನಸ್ಸು ಒಂಚೂರೂ ಕರಗಲಿಲ್ಲ. `ಈ ಹೆಣ್ಣುಮಗಳಿಗೆ ಹೇಳುವುದು ಒಂದೇ, ಗುಡ್ಡಕ್ಕೆ ಕಲ್ಲು ಹೊರುವುದೂ ಒಂದೇ’ ಎಂದಂದುಕೊಂಡು ಸುಮ್ಮನಾಗಿದ್ದರು. `ನೀನು ಹೇಗಿದ್ದರೂ ನನಗೆ ಅಮ್ಮನೇ’ ಎಂದಿದ್ದ ವೆಂಕೋಬಯ್ಯ ರುಕ್ಮಿಣಿದೇವಿಯವರಿಗೆ. ಸಮಾಜದವರೆಲ್ಲರೂ ಸೇರಿಕೊಂಡು ಒಂದಿಷ್ಟು ದುಡ್ಡು ಜೋಡಿಸಿ ಅವನಿಗೊಂದು ಡಬ್ಬಿ ಅಂಗಡಿ ಮಾಡಿಕೊಟ್ಟರು. ಇರುವುದಕ್ಕೆ ಯಾರೋ ಒಬ್ಬರು ತಮ್ಮ ಒಂದು ಕೋಣೆಯನ್ನು ಬಿಟ್ಟುಕೊಟ್ಟರು. ವೆಂಕೋಬಯ್ಯನ ಹೊಸ ಜೀವನ ಉದಯವಾಗಿತ್ತು. ಸಮಾಜದ ಜನರ ಸಹಾಯಕ್ಕೆ ವೆಂಕೋಬಯ್ಯ ನಿಬ್ಬೆರಗಾಗಿದ್ದ. `ನಿಮ್ಮೆಲ್ಲರ ಋಣದಲ್ಲಿ ಜೀವಿಸುವೆ’ ಎಂದು ಹಿರಿಯರೆಲ್ಲರ ಪಾದಗಳನ್ನು ಹಿಡಿದುಕೊಂಡು ಹೃದಯತುಂಬಿ ಕೃತಜ್ಞತೆ ಅರ್ಪಿಸಿದ್ದ. ಧೈರ್ಯಗೆಡಲಿಲ್ಲ. ಪಾಲಿಗೆ ಬಂದಿದ್ದು ಪಂಚಾಮೃತ ಎಂದಂದುಕೊಂಡ. ಧೈರ್ಯಂ ಸರ್ವತ್ರ ಸಾಧನಂ ಎಂದು ಬಂದಿದ್ದನ್ನು ದಿಟ್ಟವಾಗಿ ಎದುರಿಸಿ ಮುನ್ನುಗ್ಗಲು ಮುಂದಾಗಿದ್ದ.
ಪ್ರಯತ್ನ, ಪರಿಶ್ರಮ ಇದ್ದರೆ ಫಲ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇತ್ತು ವೆಂಕೋಬಯ್ಯನ ಮನದಲ್ಲಿ. ನಿಷ್ಠೆಯಿಂದ ಕಾಯಕದಲ್ಲಿ ತೊಡಗಿಸಿಕೊಂಡ ತನ್ನನ್ನು ತಾನು. ಏಳೆಂಟು ವರ್ಷಗಳಲ್ಲಿ ವೆಂಕೋಬಯ್ಯ ಮನುಷ್ಯನಾದ ಊರಲ್ಲಿ. ದುಡಿತವೇ ದುಡ್ಡಿನ ತಾಯಿ ಎಂದಂದುಕೊಂಡ. ದುಡಿಮೆಯ ಉಳಿತಾಯದ ಹಣದಲ್ಲಿ ತನ್ನದೇ ಆದ ಸ್ವಂತ ಪ್ಲಾಟನ್ನು ಖರೀದಿಸಿ ಸ್ವಂತ ಕಟ್ಟಡವನ್ನೂ ಮಾಡಿಕೊಂಡ. ಎಲ್ಲರೂ `ವೆಂಕೋಬಯ್ಯನವರು’ ಎಂದು ಕರೆಯುವಂತಾದ. ಮುಂದಿನ ಎರಡು ವರ್ಷಗಳಲ್ಲಿ ಅಂಗಡಿಯ ಕಟ್ಟಡದ ಮೇಲೆಯೇ ಸ್ವಂತ ಮನೆಯನ್ನೂ ಮಾಡಿಕೊಂಡರು ವೆಂಕೋಬಯ್ಯನವರು. ಆಗ ಅವರಿಗೆ ನಾಮುಂದು, ತಾಮುಂದು ಎಂದು ಹೆಣ್ಣು ಕೊಡಲು ಮುಂದಾದರು ಸಂಬಂಧಿಕರು. ಹಿರಿಯರಿಚ್ಛೆಯಂತೆ ಬಡ ಮನೆತನದ ಕೌಸಲ್ಯಾದೇವಿಯ ಪಾಣಿಗ್ರಹಣ ಮಾಡಿದರು. ಕೌಸಲ್ಯಾದೇವಿಯವರು ವೆಂಕೋಬಯ್ಯನವರಿಗೆ ತಕ್ಕ ಹೆಂಡತಿಯಾದಳು. `ಬೆಚ್ಚನಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿತು ನಡೆಯುವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’ ಎಂಬಂತಾಯಿತು ವೆಂಕೋಬಯ್ಯ-ಕೌಸಲ್ಯಾದೇವಿಯವರ ದಾಂಪತ್ಯ. ಹಾಲು-ಜೇನಂಥ ಸಂಸಾರ ಅವರದು. ಪ್ರಾಣೇಶ್, ವಾಸವಿ, ಗೋಪಾಲಕೃಷ್ಣ ಅವರ ಮಡಿಲು ತುಂಬಿ ಮನೆಯನ್ನು ನಂದನವನ್ನಾಗಿ ಮಾಡಿದರು. ಊರಲ್ಲಿಯೇ ಬಿಎ ಪದವಿ ಮುಗಿಸಿಕೊಂಡು ಪ್ರಾಣೇಶ್ ತಂದೆಯ ವ್ಯಾಪಾರದಲ್ಲಿ ಕೈಜೋಡಿಸಿದರೆ, ವಾಸವಿ ಮತ್ತು ಗೋಪಾಲಕೃಷ್ಣ ಇಂಜಿನಿಯರಿಂಗ್ ಪದವಿ ಮುಗಿಸಿಕೊಂಡು ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡ. ಮೂವರಿಗೂ ಮದುವೆ ಮಾಡಿರುವ ವೆಂಕೋಬಯ್ಯ-ಕೌಸಲ್ಯಾದೇವಿ ದಂಪತಿಗಳಿಗೀಗ ಆರು ಜನ ಮೊಮ್ಮಕ್ಕಳು. ನಮ್ಮ ಸಂಸಾರ, ಆನಂದ ಸಾಗರ ಎಂಬಂತಿತ್ತು ವೆಂಕೋಬಯ್ಯನವರ ಸಂಸಾರ. ಮಕ್ಕಳೂ, ಸೊಸೆಯಂದಿರೂ ಹಿರಿಯರ ಮಧ್ಯೆ ತುಂಬಾ ಸಾಮರಸ್ಯ, ಹೊಂದಾಣಿಕೆ ಇವೆ. ಕಿರಿಯರು ಹಿರಿಯರನ್ನು ಅತ್ಯಂತ ಗೌರವ ಭಾವನೆಯಿಂದ ಕಾಣುತ್ತಿರುವರು.
****
ರುಕ್ಮಿಣಿದೇವಿಯವರೂ ವ್ಯವಹಾರವನ್ನು ತುಂಬಾನೇ ಏರುಗತಿಯಲ್ಲಿ ನಡೆಸಿದ್ದರು. ಹಿರಿಮಗ ಶ್ರೀನಿವಾಸ್ ಬಿಕಾಂ ಪದವಿ ಮುಗಿಸಿಕೊಂಡು ಅಮ್ಮನಿಗೆ ವ್ಯವಹಾರದಲ್ಲಿ ಸಾಥ್ ನೀಡಿದ್ದರೆ ಕಿರಿಮಗ ಪಾಂಡುರಂಗ ಬಿಇ ಮುಗಿಸಿಕೊಂಡು ಬೆಂಗಳೂರಲ್ಲೇ ನೌಕರಿಗೆ ಸೇರಿಕೊಂಡ. ಮಕ್ಕಳಿಬ್ಬರೂ ಮದುವೆಯಾಗುವವರೆಗೆ ಅಮ್ಮನ ಮಕ್ಕಳಾಗಿದ್ದರು. ಮದುವೆಯಾಗುತ್ತಲೇ ಹೆಂಡತಿಯರ ಗಂಡಂದಿರಾಗಿಬಿಟ್ಟರು. ಹೆಂಡತಿಯರ ಮಾತುಗಳನ್ನು ತೆಗೆದು ಹಾಕುತ್ತಿರಲಿಲ್ಲ. ದೊಡ್ಡ ಮನೆತನದ ಕನ್ಯೆಗಳನ್ನು ತಂದಿದ್ದರು ರುಕ್ಮಿಣಿದೇವಿಯವರು ಮಕ್ಕಳಿಗೆ. ಸೊಸೆಯಂದಿರಿಬ್ಬರೂ ತುಂಬಾ ಹೈಫೈ. ಅತ್ತೆಗೆ, ಸೊಸೆಯಂದಿರಿಗೆ ಬಹಳ ದಿನಗಳವರೆಗೆ ನಡೆಯಲಿಲ್ಲ. ಪಾಂಡುರಂಗ ಅವನ ಹೆಂಡತಿ ಪಕ್ಕಾ ಬೆಂಗಳೂರಿನವರೇ ಆಗಿಬಿಟ್ಟರು. ಮೊದಲು ಆಗಾಗ ಮೊಬೈಲಿನಲ್ಲಿ ಮಾತಾಡುತ್ತಿದ್ದರು. ಯೋಗಕ್ಷೇಮ ವಿಚಾರಿಸುತ್ತಿದ್ದರು. ಈಗ ಮಾತಿಲ್ಲ, ಕತೆಯಿಲ್ಲ. ಸಂಬಂಧವೇ ಕಡಿದು ಹೋದಂತಾಗಿದೆ. ಮದುವೆಯಾಗಿ ವರ್ಷೊಪ್ಪತ್ತೂ ಆಗಿರಲಿಲ್ಲ. ಶ್ರೀನಿವಾಸನ ಹೆಂಡತಿಗೆ ಅತ್ತೆ ಬೇಡವಾದಳು. ಶ್ರೀನಿವಾಸ ತಾಯಿಯಿಂದ ವ್ಯಾಪಾರವನ್ನು ತನ್ನ ಕೈಗೆ ತೆಗೆದುಕೊಂಡು ಆಗಲೇ ಬಹಳ ದಿನಗಳಾಗಿದ್ದವು. ಅತ್ತೆಗೆ ತಮ್ಮದೇ ಎರಡು ಕೋಣೆಯ ಚಿಕ್ಕ ಮನೆಯಲ್ಲಿರಲು ಶ್ರೀನಿವಾಸನ ಹೆಂಡತಿ ತಾಕೀತು ಮಾಡಿದಳು. ಅದರಂತೆ ಅತ್ತೆಯನ್ನು ಮನೆಯಿಂದ ಹೊರಗಟ್ಟಿಯೂ ಬಿಟ್ಟಳು. ಹೆಂಡತಿಯ ದಾಸನಾಗಿದ್ದ ಶ್ರೀನಿವಾಸ ಬಾಯಿಗೆ ಬೀಗ ಬಡಿದುಕೊಂಡಂತಿದ್ದ. ಅಂತೂ ರುಕ್ಮಿಣಿದೇವಿಯವರ ವಾನಪ್ರಸ್ಥಾಶ್ರಮದ ಜೀವನ ಊರಲ್ಲೇ ಆರಂಭವಾಯಿತು. ಸಮಾಜದ ಬಾಂಧವರೆಲ್ಲರೂ ಆಕೆಯ ದುಸ್ಥಿತಿಗೆ ಮರುಗುವವರೇ. ವೆಂಕೋಬಯ್ಯನವರು ಪತ್ನಿ ಸಮೇತ ರುಕ್ಮಿಣಿದೇವಿಯವರನ್ನು ಕಂಡು ತಮ್ಮ ಮನೆಗೆ ಕರೆದುಕೊಂಡು ಹೋಗಲು ಶತಾಯ-ಗತಾಯ ಪ್ರಯತ್ನಿಸಿದರೂ ಸ್ವಾಭಿಮಾನಿ ರುಕ್ಮಿಣಿದೇವಿಯವರು ಅವರ ಜೊತೆಗೆ ಹೋಗಲು ಇಚ್ಛಿಸಲಿಲ್ಲ. ಬಲಗೈ ಬಂಟನಂತಿದ್ದ ಮಗ ಶ್ರೀನಿವಾಸನ ಪ್ರೀತಿಯೂ ನಿಂತು ಹೋಯಿತು, ಸೊಸೆಯ ಆದರವೂ ಕೊನೆಗೊಂಡಿದ್ದರಿಂದ ಒಂಟಿ ಜೀವನ ಅನಿವಾರ್ಯವಾಯಿತು.
ಕಾರು ಗಂಗಾವತಿಯತ್ತ ವೇಗದಲ್ಲಿ ಧಾವಿಸುತ್ತಿತ್ತು. ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ರುಕ್ಮಿಣಿದೇವಿಯವರ ಮನಸ್ಸು ಚಲಿಸುತ್ತಿತ್ತು. `ನಾನು ನನ್ನ ಮಕ್ಕಳಿಗಾಗಿ ಎಷ್ಟೆಲ್ಲಾ ಮಾಡಿದರೂ ನನ್ನ ಮಕ್ಕಳು ಜೀವನದ ಕಷ್ಟದ ದಿನಗಳಲ್ಲಿ ನನ್ನ ಕೈಹಿಡಿಯಲಿಲ್ಲವಲ್ಲ…? ಮಕ್ಕಳಿಗಾಗಿ ನಾನು ಅದೆಷ್ಟು ಸ್ವಾರ್ಥಿಯಾದೆ…? ಮಲಮಗ ವೆಂಕೋಬನನ್ನು ಕರುಣೆಯಿಲ್ಲದೇ ಮನೆಯಿಂದಾಚೆ ದಬ್ಬಿದೆ. ಕುಟುಂಬದ ಆಸ್ತಿಯಲ್ಲಿ ಅವನೂ ಪಾಲುದಾರನಾಗಬಾರದೆಂದು ಹಾಗೆ ಮಾಡಿದೆ. ಯಾರಿಗಾಗಿ ಮಾಡಿದ್ದು…? ನಾನು ಮಾಡಿದ್ದು ನನ್ನ ಸ್ವಂತ ಮಕ್ಕಳಿಗಾಗಿ. ವೆಂಕೋಬನಿಗೆ ನಾನು ಮಾಡಿದ್ದಂತೂ ಅನ್ಯಾಯವೇ. ಪಾಪ ಆ ಅಸಹಾಯಕ ಸ್ಥಿತಿಯಲ್ಲಿ ವೆಂಕೋಬ ಅದೆಷ್ಟು ನೊಂದುಕೊಂಡನೋ ಏನೋ? ಆದರೂ ಅವನು ನನಗೆಂದೂ ಕೇಡು ಬಗೆಯಲಿಲ್ಲ. ನೀನೆಷ್ಟಾದರೂ ನನ್ನ ಚಿಕ್ಕಮ್ಮ. ಅಪ್ಪನ ಧರ್ಮಪತ್ನಿ ಎಂದೆನ್ನುತ್ತಿರುವನು. ಈಗ ನೋಡಿ, ನಾನು ಕಾಲು ಮುರಿದುಕೊಂಡು ಬಿದ್ದಿದ್ದರೂ ಮಗನಾಗಲೀ, ಸೊಸೆಯಾಗಲೀ ನನ್ನ ಕಡೆಗೆ ಮುಖಹಾಕಿ ನೋಡಲಿಲ್ಲ. ನನ್ನಿಂದ ಕಷ್ಟ ಅನುಭವಿಸಿ ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬಂದು ಜೀವನದ ಯುದ್ಧದಲ್ಲಿ ಗೆದ್ದಿರುವ ಅದೇ ಮಲಮಗ ವೆಂಕೋಬನೇ ನನಗಾಸರೆಯಾಗುತ್ತಿದ್ದಾನೆ ಕಷ್ಟ ಕಾಲದಲ್ಲಿ. ಅದ್ಯಾವ ಜನ್ಮದ ಋಣಾನುಬಂಧವೋ ಏನೋ? ನಿಜವಾಗಿಯೂ ಇವನು ಮಲಮಗನಲ್ಲ. ಸ್ವಂತ ಮಗನಿಗಿಂತಲೂ ಹೆಚ್ಚು.’ ಹೀಗೆ ನೂರೆಂಟು ಯೋಚನೆಗಳ ತಾಕಲಾಟ ರುಕ್ಮಿಣಿದೇವಿಯವರ ಮನದಲ್ಲಿ.
“ಅಮ್ಮಾ, ದವಾಖಾನೆ ಬಂತು. ಅದೇನು ಯೋಚಿಸುತ್ತಿರುವಿರಿ…? ನಾವು ಆಗಿನಿಂದ ಮಾತಾಡಿಸುತ್ತಿದ್ದೇವೆ. ನೀವು ಎಲ್ಲೋ ಕಳೆದು ಹೋಗಿರುವ ಹಾಗಿದೆ…? ನಾನು ಆಸ್ಪತ್ರೆಯ ಒಳಗೆ ಹೋಗಿ ಸ್ಟ್ರೆಚರ್ ತರಲು ವ್ಯವಸ್ಥೆ ಮಾಡುವೆ. ಅಲ್ಲಿಯವರೆಗೆ ನೀವು ಕಾರಲ್ಲೇ ಕುಳಿತುಕೊಳ್ಳಿರಿ” ಎಂದೆನ್ನುತ್ತಾ ವೆಂಕೋಬಯ್ಯನವರು ಆಸ್ಪತ್ರೆಯೊಳಗೆ ಹೆಜ್ಜೆಹಾಕಿದರು. ದವಾಖಾನೆಯಲ್ಲಿ ಡಾಕ್ಟರ್ ಸಹ ಪರಿಚಿತರೇ ವೆಂಕೋಬಯ್ಯನವರಿಗೆ. ತಕ್ಷಣ ಅಡ್ಮಿಷನ್ ಸಿಕ್ಕಿತು. ಡಾ.ಬಸವರಾಜ್ ಪಾಟೀಲರು ಎಕ್ಸ್‍ರೇ ತೆಗೆದು ಕೂಲಂಕಶವಾಗಿ ತಪಾಸಣೆ ಮಾಡಿದರು. `ಶೆಟ್ಟರೇ, ಗಾಬರಿ ಬೀಳುವಂಥಹದ್ದೇನಿಲ್ಲ. ಮೈನರ್ ಇಂಜುರಿಯಾಗಿದೆ. ಏರ್‍ಲೈನ್ ಫ್ರ್ಯಾಕ್ಚರ್ ಅಷ್ಟೇ. ಪ್ಲಾಸ್ಟರ್ ಹಾಕುವೆ. ಊರಿಗೆ ಕರೆದುಕೊಂಡು ಹೋಗಬಹುದು. ಆದರೆ ಕಾಲಿನ ಮೇಲೆ ಭಾರ ಹಾಕುವಂತಿಲ್ಲ. ಮನೆಯಲ್ಲಿ ಇವರಿಗೆ ಆಸರೆಯಾಗಿ ಒಬ್ಬರು ನಿಂತುಕೊಂಡರೆ ಸಾಕು ಅಷ್ಟೇ. ಒಂದು ತಿಂಗಳ ನಂತರ ಪ್ಲಾಸ್ಟರ್ ಬಿಚ್ಚೋಣ. ಒಂದಿಷ್ಟು ಮಾತ್ರೆ ಕೊಡುವೆ. ತಪ್ಪದೇ ತೆಗೆದುಕೊಳ್ಳಲಿ. ಎಲ್ಲವೂ ಸರಿಹೋಗುತ್ತೆ. ಅಮ್ಮ ಮೊದಲಿನಂತಾಗುತ್ತಾರೆ.’ ವೆಂಕೋಬಯ್ಯ ಶೆಟ್ಟರಿಗೆ ಹೇಳುತ್ತಾ ಡಾಕ್ಟರ್ ರುಕ್ಮಿಣಿದೇವಿಯವರ ಕಾಲಿಗೆ ಚಕಚಕನೇ ಪ್ಲಾಸ್ಟರ್ ಹಾಕಿಸಿ ಕಳುಹಿಸಿಕೊಟ್ಟರು. ಆಸ್ಪತ್ರೆಯಲ್ಲಿ ಉಳಿದುಕೊಳ್ಳುವ ಅವಕಾಶ ತಪ್ಪಿದ್ದರಿಂದ ಮತ್ತೆ ಕಾರು ತಾವರಗೇರಾದತ್ತ ಮುಖಮಾಡಿತು.
ಕಾರು ನೇರವಾಗಿ ವೆಂಕೋಬಯ್ಯನವರ ಮನೆಯ ಹತ್ತಿರ ಬಂದಾಗ, `ವೆಂಕೋಬ ಇಲ್ಯಾಕೋ…? ನನ್ನ ಮನೆಗೇ ಕರೆದುಕೊಂಡು ಹೋಗಿ ಬಿಟ್ಟುಬಿಡಲ್ಲ…?’ ಎಂದು ರುಕ್ಮಿಣಿದೇವಿಯವರು ರಾಗವೆಳೆದಳು.
“ಅಮ್ಮಾ, ಅಲ್ಲಿ ನಿನ್ನ ನೋಡಿಕೊಳ್ಳುವವರು ಯಾರಿದ್ದಾರೆ…? ನಾವೇನು ನಿನ್ನ ಪಾಲಿಗೆ ಸತ್ತು ಹೋಗಿರುವೆವೇನು…? ಮೊದಲನೆಯ ಮಾತಾಗಿ ನೀನು ಕಾಲಿನ ಮೇಲೆ ಹೆಚ್ಚಿನ ಭಾರ ಹಾಕುವ ಹಾಗಿಲ್ಲ. ಯಾವಾಗಲೂ ನಿನಗೊಬ್ಬರು ಆಸರೆಯಾಗಿರಬೇಕು ತಾನೇ…? ಇಲ್ಲಾದರೆ ನಿನಗೆ ನಾನು, ಕೌಸಲ್ಯಾ, ಪ್ರಾಣೇಶ್, ಅವನ ಹೆಂಡತಿ ಮಹಿಮಾ, ಮತ್ತೆ ಮೊಮ್ಮಕ್ಕಳು ಇದ್ದಾರೆ. ಮೊಮ್ಮಕ್ಕಳೊಂದಿಗೆ ಆಟವಾಡುವಾಗ ಹೊತ್ತು ಹೋಗಿದ್ದೇ ಗೊತ್ತಾಗುವುದಿಲ್ಲ. ನೀ ಸುಮ್ಮನೇ ಬಾ ನಮ್ಮೊಂದಿಗೆ. ಇನ್ನೊಂದೆರಡು ದಿನಗಳಲ್ಲಿ ನಿನಗೆ ವ್ಹೀಲ್ ಚೇರ್‍ದ ವ್ಯವಸ್ಥೆ ಮಾಡುವೆ.” ವೆಂಕೋಬಯ್ಯ ಮನಸಾರೆ ಒತ್ತಾಯ ಪಡಿಸಿದ.
“ಅಲ್ಲೋ, ನಿನಗೆ ನಾನು ಮಾಡಬಾರದ ಅನ್ಯಾಯ ಮಾಡಿದ್ದನ್ನು ಮರೆತುಬಿಟ್ಟಿಯೇನು…? ನನ್ನ ಮೇಲೆ ನಿನಗೆ ತುಂಬಾ ಸಿಟ್ಟು ಇರಬೇಕಲ್ಲ…?”
“ಯಾವ ಅನ್ಯಾಯ…? ಯಾವಾಗ ಮಾಡಿದ್ದು…? ನೀನು ಮಾಡಿದ್ದು ಅನ್ಯಾಯವೇ ಅಲ್ಲ. ನೀನು ಮಾಡಿದ್ದು ನನ್ನ ಒಳ್ಳೆಯದಕ್ಕೇ ಎಂದು ನಾನು ಭಾವಿಸಿರುವೆ. ಅಂದು ನೀನು ನಿರ್ದಾಕ್ಷಿಣ್ಯವಾಗಿ ಹೊರಹಾಕಿದ್ದರಿಂದಲೇ ನಾನೀ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ಅದು ನಿನ್ನ ಆಶೀರ್ವಾದವೆಂದೇ ನಾನು ತಿಳಿದಿರುವೆ. ಅಂದೂ ನೀನು ನನಗೆ ಅಮ್ಮನಾಗಿದ್ದಿ, ಈಗಲೂ ನೀನು ನನಗೆ ಅಮ್ಮನೇ. ಅಮ್ಮ ಎಂದ ಮೇಲೆ ಸಿಟ್ಟು, ಸೆಡವು, ದ್ವೇಷದ ಪ್ರಶ್ನೆಯೇ ಬರುವುದಿಲ್ಲ. ಅದೊಂದು ವಿಷ ಗಳಿಗೆ ಎಂದು ಭಾವಿಸಿ ಅಂದೇ ಅದನ್ನು ಮರೆತುಬಿಟ್ಟೆ.”
“ನೀನು ದೊಡ್ಡ ಮನಸ್ಸಿನ ಮನುಷ್ಯನಪ್ಪ. ಅದಕ್ಕೇ ಹೀಗೆ ಯೋಗಿಯಂತೆ ಮಾತಾಡುತ್ತಿರುವಿ. ಬೇರೆ ಯಾರಾದರೂ ನಿನ್ನ ಸ್ಥಾನದಲ್ಲಿದ್ದರೆ ಸಿಟ್ಟಿನ ಭರದಲ್ಲಿ ನನ್ನ ಸಿಗಿದು ಹಾಕುತ್ತಿದ್ದರೇನೋ? ನನ್ನ ಹೊಟ್ಟೆಯಿಂದ ಹುಟ್ಟಿದ ಮಕ್ಕಳಿಗೇ ನಾನು ಬೇಡವಾಗಿರುವೆ. ಹೆತ್ತೊಡಲಿಗೇ ಬೆಂಕಿ ಇಟ್ಟಿರುವರು ಅವರು. ಆದರೆ ನೀನು ನೋಡು! ನೀನು ಮಲಮಗನಲ್ಲ. ರಕ್ತವನ್ನು ಹಂಚಿಕೊಂಡು ಹುಟ್ಟಿದ ಮಗನಿಗಿಂತಲೂ ಮಿಗಿಲು. ನಿನ್ನ ಸದ್ಗುಣಗಳಿಗೆ ತಕ್ಕ ಹೆಂಡತಿ ಕೌಸಲ್ಯಾ. ಈಕೆಯ ಮುಂದೆ ನನ್ನ ಸೊಸೆಯಂದಿರನ್ನು ನಿವಾಳಿಸಿ ಒಗೆಯಬೇಕು. ಇರಲಿ ಬಿಡು. ಅದೇನೋ ಹೇಳ್ತಾರಲ್ಲ, ಈ ಜನ್ಮದಲ್ಲಿ ಮಾಡಿದ ಪಾಪವನ್ನು ಈ ಜನ್ಮದಲ್ಲೇ ಅನುಭವಿಸಬೇಕಂತೆ. ಅದರಂತೆ ನಾನು ಮಾಡಿದ ಪಾಪವನ್ನು ನಾನೀಗ ನಿಜವಾಗಿಯೂ ಅನುಭವಿಸುತ್ತಿದ್ದೇನೆ ಅಷ್ಟೇ. ಅದಕ್ಕೆ ನನಗೇನೂ ಬೇಸರವಿಲ್ಲ. ಏಕೆಂದರೆ ನಾನು ಮಾಡಿದ್ದು ಘನಘೋರ ತಪ್ಪೇ ಅಲ್ಲವೇ…?” ಎಂದೆನ್ನುವಷ್ಟರಲ್ಲಿ ರುಕ್ಮಿಣಿದೇವಿಯವರು ಭಾವುಕರಾದರು. ಕಣ್ಣಾಲಿಗಳು ತುಂಬಿಕೊಂಡು ಬಂದವು. ಕಣ್ಗಳಲ್ಲಿ ದಳದಳನೇ ನೀರು ಇಳಿಯತೊಡಗಿದವು.
“ಅಮ್ಮಾ, ಅನಾವಶ್ಯವಾಗಿ ಏನೂ ಚಿಂತಿಸಬೇಡ. ನಾವಿದ್ದೇವೆ. ಈಗ ಮೊದಲು ಒಳಗೆ ಬಾ ಅಷ್ಟೇ” ಎಂದೆನ್ನುತ್ತಾ ವೆಂಕೋಬಯ್ಯ ರುಕ್ಮಿಣಿದೇವಿಯ ಕಣ್ಣೀರು ತೊಡೆಯುತ್ತಾ ಅವರನ್ನು ಎತ್ತಿಕೊಂಡು ನಿಧಾನವಾಗಿ ಮನೆಯೊಳಗೆ ಹೆಜ್ಜೆಹಾಕತೊಡಗಿದ. ಆ ಅವಿಸ್ಮರಣೀಯ ಗಳಿಗೆಯನ್ನು ಕಣ್ಮನಗಳಲ್ಲಿ ತುಂಬಿಕೊಂಡು ಬೀಗತೊಡಗಿದಳು ಕೌಸಲ್ಯಾದೇವಿ.
******
5 thoughts on “ಮಲಮಗ”
ಕಥೆ ತುಂಬಾ ಚೆನ್ನಾಗಿದೆ. ಹಳ್ಳಿಯ ಸೊಗಡಿನ ಸಂಭಾಷಣೆ ಮನ ಸೆಳೆಯುತ್ತದೆ. ಅಭಿನಂದನೆಗಳು
ಮಾನವೀಯತೆಯನ್ನು ಮೆರೆಯುವಂತಹ ಕಥೆ ಸೊಗಸಾಗಿ ಮೂಡಿಬಂದಿದೆ.
ಅಭಿನಂದನೆಗಳು
ಅಭಿನಂದನೆಗಳು, ಕಥೆ ಚೆನ್ನಾಗಿದೆ
ಬಹಳ ಚನ್ನಾಗಿ ಬಂದಿದೆ. ಧನ್ಯವಾದ ಗಳು.
ಶೇಖರಗೌಡ ಅವರ ಕಥೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಉತ್ತಮವಾಗಿ ಚಿತ್ರಿಸಿದ್ದಾರೆ. ಕಥೆ ಚನ್ನಾಗಿ ಹೆಣೆದಿದ್ದಾರೆ. ಅಭಿನಂದನೆಗಳು