ತನ್ನ ಎದೆ ಸೀಳಿ ತೋರಿಸಿದರೆ ಒಂದೇ ಒಂದು ಇಂಗ್ಲೀಷ್ ಅಲ್ಲ ಕೊನೆಗೆ ಕನ್ನಡ ಅಕ್ಷರ ಕೂಡ ತೋರದ ಗುಂಡಣ್ಣ ಬಾಲ್ಯದಿಂದ ಮಹಾ ಕಲಾ ಪ್ರೇಮಿ… ಕನ್ನಡದ ಕಣ್ಮಣಿ ರಾಜಕುಮಾರ್ ಸಹಾ ತನ್ನಂತೆ ಮೂರನೇ ಕ್ಲಾಸಿಗೆ ಶಾಲೆ ಬಿಟ್ಟವರು ಎಂದು ಆ ಮಹಾ ನಟನನ್ನು ತನ್ನೊಂದಿಗೆ ಅನ್ವಯಿಸಿಕೊಂಡು ಹೆಮ್ಮೆ ಪಡುತ್ತಿದ್ದ ಗುಂಡಣ್ಣ… ತಾನು ಹುಟ್ಟು ಕಲಾವಿದನೆಂಬ ಅಪಾರ ನಂಬಿಕೆ ಗುಂಡಣ್ಣನಿಗೆ ತನ್ನ ಮೇಲೆ ತನಗೇ!..
ಮೊದ ಮೊದಲು ಮನೆಯ ನಿಲುವುಗನ್ನಡಿ ಮುಂದೆ ನಿಂತು ಅಭಿನಯ ಪ್ರದರ್ಶನ ಶುರು ಮಾಡಿದ ಗುಂಡಣ್ಣ .. ನಂತರ ಜೋರಾದ ಡೈಲಾಗ್ ಡೆಲಿವರಿಯ ಶಬ್ದ ಭಂಡಾರದ ಜೊತೆಗೆ ನಟನೆಯನ್ನು ಆರಂಭಿಸಿದ… ಆ ಭಯಂಕರ ಅಭಿನಯಕ್ಕೆ ಬೆದರಿದ ನೆರೆ ಹೊರೆಯ ಮಕ್ಕಳು ಗುಂಡಣ್ಣನನ್ನು ಕಂಡ ಕೂಡಲೇ ಹೆದರಿ ದುಃಖಿಸಿ ದುಃಖಿಸಿ ಅಳಲು ಶುರು ಮಾಡಿದರು…
ಆದರೂ ಗುಂಡನಿಗೆ ಕಿಂಚಿತ್ತೂ ಕರುಣೆ ಇರಲಿಲ್ಲ… ತನ್ನ ಅಮೋಘ ನಟನೆಯನ್ನು ಬೀದಿ ನಾಟಕದವರೆಗೆ ವಿಸ್ತರಿಸಿದ… ಸ್ಥಳೀಯ ಹವ್ಯಾಸಿ ಕಲಾವಿದರ ಒಂದು ತಂಡವನ್ನೇ ಕಟ್ಟಿ ಆಗಾಗ್ಗೆ ನಾಟಕಗಳನ್ನು ಏರ್ಪಡಿಸಿ ಊರಿನವರನ್ನು ಹಿಂಸಿಸುತ್ತಿದ್ದ…..ಆ ಹಳ್ಳಿಗೆ ಬರುತ್ತಿದ್ದ ಕಂಪನಿ ನಾಟಕಗಳಲ್ಲಿ ಅವರಿವರಿಂದ ವಶೀಲಿ ಮಾಡಿಸಿ, ಪುಟ್ಟ ಪಾತ್ರಗಳಲ್ಲಿ ಕೂಡ ತನ್ನ ಅಭಿನಯ ಚಾತುರ್ಯವನ್ನು ತೋರಿಸಿ ತನ್ನ ಊರಿನ ಜನತೆಯನ್ನು ತನ್ನ ನಟನೆಯಿಂದ ಹೆದರಿಸುತ್ತಿದ್ದ….
ಬದುಕಲು ಬ್ರಷ್ ಹಿಡಿದು ಮನೆ ಮನೆಗೆ ಬಣ್ಣ ಬಳಿಯುತ್ತಿದ್ದ ಗುಂಡಣ್ಣನಿಗೆ ತನ್ನ ಮುಖಕ್ಕೆ ಬಣ್ಣ ಹಚ್ಚಿಕೊಂಡು ನಟಿಸುವದೆಂದರೆ ಎಲ್ಲಿಲ್ಲದ ಸಂತೋಷ… ತನ್ನ ಕಲಾ ಪ್ರತಿಭೆಗೆ ಇಲ್ಲಿ ಸರಿಯಾದ ಬೆಲೆಯಿಲ್ಲವೆಂದು ಅರಿತ ಗುಂಡಣ್ಣ ಸಿನಿಮಾದಲ್ಲಿ ಅವಕಾಶ ಸಿಗದಿದ್ದರೆ ಕನಿಷ್ಠ ಟಿ ವಿ ಸೀರಿಯಲ್ ಗಳಲ್ಲಾದರೂ ನಟಿಸಿ ತನ್ನಲ್ಲಿನ ಪ್ರತಿಭೆಯನ್ನು ಹೊರ ಹಾಕಲು ಸಮಯ ಕಾಯುತ್ತಿದ್ದ… ಹಾಗೆ ನೋಡಿದರೆ ಟಿ. ವಿ ಸೀರಿಯಲ್ ಗಳಲ್ಲಿ ನಿರ್ಜಿವ ಬೊಂಬೆಗಳಂತೆ ಮುಖ ತೋರಿಸುವ ಹೆಸರಾಂತ ಕಲಾವಿದರಿಗಿಂತ ಗುಂಡಣ್ಣ ಸಾವಿರ ಪಾಲು ಮೇಲು…
ರಾತ್ರಿ ಹೊತ್ತಿಗೆ ಎಂತಹ ದೀರ್ಘ ಕತ್ತಲಿದ್ದರೂ ಮುಂಜಾನೆ ಸೂರ್ಯನ ಕಿರಣಗಳು ತಾಕಿದಾಗ ಕತ್ತಲು ಕರಗಲೇಬೇಕು…. ಹಾಗೆ ಗುಂಡನ ಕತ್ತಲಿನ ಬದುಕಿಗೆ ಬೆಳಕಾಗಿ ದೇವ ದೂತನಂತೆ ಬಂದವನೇ ಚಂದ್ರಶೇಖರ ಹಿತ್ತಲ ಮನಿ ಉರ್ಫ್ ಚಂದ್ರು… ಚಂದ್ರು ಗುಂಡಣ್ಣನ ಪಕ್ಕದ ಹಳ್ಳಿಯವನು… ಶವದ ನಟನೆಯಲ್ಲೂ ಸಹಜತೆ ತೋರುವ ಅದ್ಭುತ ಕಲಾವಿದ… ಗುಂಡಣ್ಣನಿಗಿಂತ ಒಂದು ಕ್ಲಾಸ್ ಹೆಚ್ಚು ಅಂದರೆ ನಾಲ್ಕನೇ ತರಗತಿ ಪಾಸ್ ಆಗಿ ಶಾಲೆ ಬಿಟ್ಟು ಅಭಿನಯಿಸಲು ಶುರು ಮಾಡಿ ನಿಧಾನವಾಗಿ ಒಂದೊಂದೇ ಮೆಟ್ಟಿಲು ಹತ್ತುತ್ತಾ ಈಗ ತನ್ನ ನಟನಾ ಕೌಶಲ್ಯವನ್ನು ಬೆಂಗಳೂರುವರೆಗೆ ವಿಸ್ತರಿಸಿದ್ದ… ಅವನು ಹೊಟ್ಟೆ ಪಾಡಿಗಾಗಿ ಅಲ್ಲಿ ಹಲವಾರು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ಮತ್ತು ಹಲವು ಅಸಿಸ್ಟೆಂಟ್ ಡೈರೆಕ್ಟರ್ ಬಳಿ ಅವರು ಹೇಳಿದ ಕೆಲಸ ಮಾಡುತ್ತ ಬದುಕುತ್ತಿದ್ದ…
ಇಂತಹ ಸಿನಿಮಾದ ಮೇರು ವ್ಯಕ್ತಿ ತನ್ನೂರಿಗೆ ಬಂದ ವಿಷಯ ತಿಳಿದು ಸುಮ್ಮನೆ ಕೂಡುವನೇ ಗುಂಡಣ್ಣ… ನೋ.. ನೆವರ್… ಸಾಧ್ಯವೇ ಇಲ್ಲ… ಓಡಿ ಬಂದು ಚಂದ್ರುವಿಗೆ ಪಾದಾಭಿವಂದನೆ ಮಾಡಿ ಮನವಿ ಮಾಡಿದ… ತನ್ನನ್ನು ಬೆಂಗಳೂರಿಗೆ ತನ್ನೊಂದಿಗೆ ಕರೆದುಕೊಂಡು ಹೋಗಿ ರಾಜಧಾನಿಯಲ್ಲಿ ‘ಕಲಾ ಸೇವೆ’ ಮಾಡುವ ಅವಕಾಶ ಮಾಡಿಕೊಡಬೇಕೆಂದು ಪ್ರಾರ್ಥಿಸಿದ. ಮೊದಲೇ ಸಾಕಷ್ಟು ಸಾಲ ಮಾಡಿದ್ದ ಚಂದ್ರು ಕೂಡಲೇ ಒಪ್ಪಿಕೊಂಡ, ಆದರೆ ಒಂದು ಷರತ್ತಿನೊಂದಿಗೆ… ಅಲ್ಲಿ ಕನಿಷ್ಠ ಅರು – ಏಳು ತಿಂಗಳಾದರೂ ಗುಂಡಣ್ಣ ತನ್ನ ರೂಮಿನಲ್ಲಿ ಇರಬೇಕಾಗುತ್ತದೆ. ಊಟ, ವಸತಿ, ಸ್ಟುಡಿಯೋ ಸುತ್ತಾಟ, ಸಿಟಿ ಬಸ್, ಆಟೋ ಚಾರ್ಜು ಇತ್ಯಾದಿ ಖರ್ಚುಗಳಿಗೆ ಏನಿಲ್ಲವೆಂದರೂ ಅಂದಾಜು ಒಂದು ಲಕ್ಷ ರೂಪಾಯಿಗಳು ಬೇಕಾಗುತ್ತವೆ ಮತ್ತು ಅದನ್ನು ಗುಂಡಣ್ಣ ವ್ಯವಸ್ಥೆ ಮಾಡಿಕೊಂಡ ಬಳಿಕ ತಿಳಿಸಿದರೆ ತಾನು ಮತ್ತೊಮ್ಮೆ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಧಿಡೀರ್ ಆಶ್ವಾಸನೆ ನೀಡಿದ ಸೀನಿಯರ್ ನಟ ಚಂದ್ರು….
ಗುಂಡಣ್ಣ ಅವನ ಅಪ್ಪ ರಾಮಣ್ಣ ಬಣ್ಣದಭಾವಿಯನ್ನು ಕಾಡಿ ಬೇಡಿದಾಗ ಗುಂಡಣ್ಣನಂತಹ ಹುಟ್ಟು ‘ಕಲಾವಿದ ಮಗ’ ನಿಂದ ತಾತ್ಕಾಲಿಕ ವಿಮುಕ್ತಿ ಹೊಂದಲು ತಮ್ಮ ಹಳ್ಳಿಯ ಧಣಿ ಬಸನಗೌಡನಿಂದ ಬಡ್ಡಿಗೆ ಸಾಲ ತಂದು ಮಗನನ್ನು ಬೆಂಗಳೂರಿಗೆ ಹೊತ್ತಾಕಿದ ಅರ್ಜೆಂಟ್ ಆಗಿ… ಗುಂಡಣ್ಣನ ಸವಾರಿ ಚಂದ್ರು ಮತ್ತೊಮ್ಮೆ ಹಳ್ಳಿಗೆ ಬರುವ ಮುನ್ನವೇ ಬೆಂಗಳೂರು ಸೇರಿತು. ಅಲ್ಲಿಂದ ಶುರುವಾಯಿತು ಚಂದ್ರುಗೆ ಸಾಡೆ ಸಾಥ್!… ಪ್ರತಿ ದಿನವೂ ಗುಂಡಣ್ಣ ಕಾಡತೊಡಗಿದ ಚಂದ್ರುವನ್ನು ಆದಷ್ಟು ಬೇಗ ತನ್ನಲ್ಲಿನ ‘ಕಲಾವಿದ’ ನಿಗೆ ಕೆಲಸ ನೀಡುವಂತೆ…
ಗುಂಡಣ್ಣನಿಗಿಂತ ಹಿರಿಯ ನಟನಾದ ಚಂದ್ರು ನಿಜ ನಾಟಕಗಳಲ್ಲಿ ಪ್ರೇಕ್ಷಕರ ಮುಂದೆ ಅಬ್ಬರಿಸಿ ಬೊಬ್ಬಿರಿದರೂ ಸಿನಿಮಾ ಇಂಡಸ್ಟ್ರೀಯಲ್ಲಿ ‘ಜೂನಿಯರ್ ಕಲಾವಿದ’ ಎಂದಷ್ಟೇ ಹೆಸರು ಗಳಿಸಲು ಸಾಧ್ಯವಾಗಿತ್ತು….. ಪ್ರತಿಯೊಂದು ಪುಟ್ಟ ವೇಷಕ್ಕಾಗಿ ಕೂಡ ಅಸಿಸ್ಟೆಂಟ್ ಡೈರೆಕ್ಟರ್ ಅವರ ಮುಂದೆ ಹಲ್ಕಿರಿಯುವದು ತಪ್ಪುತ್ತಿರಲಿಲ್ಲ .. ತನಗೇ ಇನ್ನೂ ಸರಿಯಾದ ನೆಲೆಯಿಲ್ಲ.. ಅದೇನೋ ಅಂತಾರಲ್ಲ ” ಹನುಮಪ್ಪನೇ ಹಗ್ಗ ಕಡಿಯುವಾಗ ಪೂಜಾರಿಗೆಲ್ಲಿ ಶಾವಿಗೆ ಸಿಗಬೇಕು”…. ಅಂತಹ ವಿಷಮ ಪರಿಸ್ಥಿತಿ ಚಂದ್ರುವಿನದು ಪಾಪ….ಇನ್ನು ‘ನಟ ಭಯಂಕರ’ ಗುಂಡಣ್ಣನನ್ನು ಹೇಗೆ ಸಿನಿಮಾ ನಟನಾಗಿ ಮಾಡಬೇಕೋ ಗೊತ್ತಾಗದೇ ಚಿಂತಾಕ್ರಾಂತನಾದ ಚಂದ್ರು….
ಆದರೆ ಒಂದು ಒಳ್ಳೆಯ ದಿನ ಬಂದೇ ಬಿಡ್ತು ಗುಂಡಣ್ಣನಿಗೆ… ತನ್ನ ಸ್ನೇಹಿತ ಅಸಿಸ್ಟೆಂಟ್ ಡೈರೆಕ್ಟರ್ ಬಂಡೋಜಿ ರಾವ್ ಒಂದು ಸಿನಿಮಾದಲ್ಲಿ ಮೂರು ಅಥವಾ ನಾಲ್ಕು ನಿಮಿಷದ ಅವಧಿಗೆ ಒಬ್ಬ ಸಾಧುವಿನ ವೇಷದ ಭಿಕ್ಷುಕರ ತಂಡದ ನಾಯಕನ ಪಾತ್ರಕ್ಕಾಗಿ ಯಾರಾದರೂ ಹೊಸ ನಟರಿದ್ದರೆ ಹೇಳು ಎಂದು ಚಂದ್ರುವಿಗೆ ಹೇಳಿದ್ದ… ಅದನ್ನೇ ಗುಂಡಣ್ಣನಿಗೆ ಹೇಳಿದ ಚಂದ್ರು…ಬೆಂಗಳೂರಿಗೆ ಬಂದು ನಾಲ್ಕು ಐದು ತಿಂಗಳಾದರೂ ಗುಂಡಣ್ಣನಿಗೆ ಸಿನಿಮಾದಲ್ಲಿ ಒಂದೇ ಒಂದು ಅವಕಾಶ ಕೂಡ ಸಿಕ್ಕಿರಲಿಲ್ಲ… ‘ಸಿಲ್ವರ್ ಸ್ಕ್ರೀನ್’ ಮೇಲೆ ತನ್ನ ಮುಖ ಕೆಲವೇ ಕೆಲವು ಸೆಕೆಂಡುಗಳು ಕಂಡರೂ ಸಾಕು ಎನ್ನುವ ಮಹತ್ವಾಕಾಕ್ಷೆ ಹೊಂದಿದ್ದ ಗುಂಡಣ್ಣ ಕೂಡಲೇ ‘ಉಹೂ’ ಎನ್ನದೆ ‘ಹೂ’ ಎಂದದ್ದು ನೋಡಿ ಅಚ್ಚರಿಗೊಂಡ ಚಂದ್ರು…
ಮರು ದಿನ ಮಧ್ಯಾಹ್ನ ಒಂದು ಘಂಟೆಗೆ ಎಂ. ಜಿ. ರಸ್ತೆಯ ಶೂಟಿಂಗ್ ಸ್ಪಾಟ್ ಗೆ ಬರಬೇಕೆಂದು ಅಲ್ಲಿಯೇ ಮೇಕಪ್ ಮಾಡಿಸಿಕೊಂಡು ಪಾತ್ರಕ್ಕೆ ಸಿದ್ಧನಾಗಬೇಕೆಂದು ಅಸಿಸ್ಟಂಟ್ ಡೈರೆಕ್ಟರ್ ಬಂಡೋಜಿ ರಾವ್ ರಾತ್ರಿಯೇ ಗುಂಡಣ್ಣನ ಮೊಬೈಲ್ಗೆ ಫೋನ್ ಮಾಡಿದ್ದ… ತನ್ನ ಜೀವನದಲ್ಲಿ ಇಂತಹ ‘ಮಹತ್ತರ’ ತಿರುವಿಗಾಗಿ ಕಾತರಿಸುತ್ತಿದ್ದ ಗುಂಡಣ್ಣ ಯಾವಾಗ ಬೆಳಗಾಗುವದೋ ಎಂದು ನಿರೀಕ್ಷಿಸುತ್ತಾ ಇಡೀ ರಾತ್ರಿ ನಿದ್ದೆಯನ್ನೇ ಮಾಡಲಿಲ್ಲ…
ಆ ದಿನ ಬೆಳಿಗ್ಗೆ ಹನ್ನೊಂದು ಘಂಟೆಗೆ ಗುಂಡಣ್ಣ ಹಾಲಿನ ಬಣ್ಣದ ಮೀಸೆ, ಗಡ್ಡ ಹಚ್ಚಿಸಿಕೊಂಡು ತಲೆಗೂ ಅದೇ ಬಿಳಿ ಬಣ್ಣ ಮೇಕಪ್ ಮ್ಯಾನ್ ನಿಂದ ಹಚ್ಚಿಸಿಕೊಂಡು ಕಾಷಾಯ ಬಣ್ಣದ ನಿಲುವಂಗಿ ಧರಿಸಿಕೊಂಡು ಸಿದ್ಧನಾದ… ಆದರೆ ಅಲ್ಲಿಗೆ ಆಗ ತನ್ನಂತೆ ನಟಿಸಲು ಒಂದು ಉತ್ಸಾಹಿ ತಂಡವೇ ಬಂತು… ಆದರೆ ಕುಂಟ, ಕುರುಡ, ಗೂನು ಬೆನ್ನು, ಅಂಗವಿಕಲ ಇತ್ಯಾದಿ ಭಿಕ್ಷುಕರ ಪಾತ್ರ ಮಾಡುವ ತಂಡಕ್ಕೆ ತಾನು ನಾಯಕನೆನ್ನುವ ಫೀಲಿಂಗೇ ಸಂತೋಷ ತಂದಿತು ಗುಂಡಣ್ಣನಿಗೆ…ಸಿನಿಮಾದಲ್ಲಿ ಹೀರೋ ತನ್ನ ಹೀರೋಯಿನ್ ಜೊತೆ ಮೆರ್ಸಡಿಸ್ ಬೆಂಜ್ ಕಾರಲ್ಲಿ ಸ್ಪೀಡಾಗಿ ಬರುವಾಗ ಟ್ರಾಫಿಕ್ ನಲ್ಲಿ ‘ರೆಡ್’ ಸಿಗ್ನಲ್ ಬೀಳುತ್ತದೆ.. ಆಗ 8-10 ಭಿಕ್ಷುಕರ ತಂಡ ‘ನಾಯಕ’ ಗುಂಡಣ್ಣನನ್ನು ಹಿಂಬಾಲಿಸುತ್ತ ಜೋರಾಗಿ ‘ಭಂ ಭಂ ಭಂಗಿರಾಜ್ ಮಹಾರಾಜ್ ಕೀ ಜೈ’ ಎಂದು ಗುಂಡಣ್ಣ ಕೂಗಿದಾಗ ಅದನ್ನೇ ಕೊರಸ್ ಆಗಿ ರಿಪೀಟ್ ಮಾಡುತ್ತಾ ಹೀರೊ ಕಾರಿನ ಮುಂದೆ ರೋಡ್ ಕ್ರಾಸ್ ಮಾಡುವ ಸೀನ್ ಅದು..
ಐದು ನಿಮಿಷದಲ್ಲಿ ಯಾವ ರಿಟೇಕ್ ಇಲ್ಲದೆ ಚಿತ್ರೀಕರಣಗೊಂಡ ಬಳಿಕ ‘ಪ್ಯಾಕ್ ಅಪ್’ ಎಂದು ಜೋರಾಗಿ ಕೂಗಿದ ಅಸಿಸ್ಟೆಂಟ್ ಡೈರೆಕ್ಟರ್ ಬಂಡೋಜಿ ರಾವ್.. ಆದರೆ ವಾಹನಗಳ ಟ್ರಾಫಿಕ್ ಶಬ್ದದಲ್ಲಿ ಅದನ್ನು ಕೇಳಿಸಿಕೊಳ್ಳದ ಗುಂಡಣ್ಣ ಮುಂದೆ ಸಾಗಿದ…. ಅಷ್ಟರಲ್ಲಿ ರಸ್ತೆಯಲ್ಲಿ ಹಿಂಬಾಲಿಸಿ ಬರುತ್ತಿದ್ದ ಬೈಕ್ ನಿಂದ ಇಳಿದ ಅಜಾನುಬಾಹು ವ್ಯಕ್ತಿಯೊಬ್ಬ ಛಟಿರ್ ಎಂದು ಗುಂಡಣ್ಣನ ಎರಡೂ ಕೆನ್ನೆಗೆ ಬಾರಿಸಿದ.. ಆ ಅಘಾತ ಹಾಗೂ ಅತೀವ ನೋವಿಗೆ ಸ್ಪಂದಿಸಿದ ಗುಂಡಣ್ಣ ಕೂಡಲೇ ಮೂರ್ಛೆ ಬಂದು ಬಿದ್ದುಬಿಟ್ಟ!… ಎಚ್ಚರವಾದಾಗ ನೋಡುತ್ತಾನೆ ಗುಂಡಣ್ಣ… ಒಂದು ಹೈ ಟೆಕ್ ಜೋಪಡಿಯಂತಹ ಆಶ್ರಮದ ಮುಂದೆ ಹಾಕಿದ ಮಂಚದ ಮೇಲೆ ತಾನು..ತನಗೆ ಬೀಸಣಿಗೆಯಿಂದ ಗಾಳಿ ಹಾಕುತ್ತಿರುವ ಹುಡುಗನೊಬ್ಬ..ದೂರದಲ್ಲಿ ತನ್ನನ್ನು ಅಪ್ಯಾಯತೆಯಿಂದ ನೋಡುತ್ತಿದ್ದ ಖಾದಿ ಧರಿಸಿದ ಮೂವರು ಹಿರಿಯರು…ತಾನು.. ಇಲ್ಲಿ… ಯಾಕೆ.. ಅರ್ಥವಾಗುತ್ತಿಲ್ಲ? ಏನೇ ಆಗಲಿ.. ಮೊದಲು ತನಗೆ ಮೇಕಪ್ ಮಾಡಿದವನನ್ನು ಮನದಲ್ಲಿ ನೆನೆಯುತ್ತ ಗಡ್ಡ ಮೀಸೆಯನ್ನೊಮ್ಮೆ ಮುಟ್ಟಿ ನೋಡಿ ಭದ್ರಪಡಿಸಿಕೊಂಡ..
ಅದನ್ನು ನೋಡಿದ ಖಾದಿಧಾರಿ ಹಿರಿಯರೊಬ್ಬರು ನುಡಿದರು “ಗುರುಗಳೇ.. ನಿನ್ನೆ ಅದ್ಯಾರೊ ಬೃ. ಬೆಂ. ಮ. ನ. ಪಾ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಭಿಕ್ಷುಕರ ಸಂಘದ ಗೌರವ ಅಧ್ಯಕ್ಷನಂತೆ… ಅವನು ತನ್ನ ಅನುಮತಿ ಪಡೆಯದೆ ತಂಡ ಕಟ್ಟಿಕೊಂಡು ಭಿಕ್ಷಾಟನೆಯನ್ನು ಬೆಂಗಳೂರಿನಲ್ಲಿ ಮಾಡುತ್ತಿದ್ದಾನೆ ಎಂಬ ಕೋಪದಿಂದ ನಿಮ್ಮ ಕಪಾಳಕ್ಕೆ ಹೊಡೆದನು..ಆಗ ನೀವು ಮೂರ್ಛೆ ಹೋದಿರಿ…ಅದನ್ನು ನೋಡಿ ನಿಮ್ಮ ಹಿಂಬಾಲಕರೆಲ್ಲ ದಿಕ್ಕಾಪಾಲಾಗಿ ಒಡಿದರು…ಆದರೆ ನೀವು ಭಿಕ್ಷುಕರಲ್ಲ ಮಹಾ ಸ್ವಾಮೀಜಿಗಳು ಎಂದು ಮನಗಂಡ ನಾವು ನಿಮ್ಮನ್ನು ನಮ್ಮ ಆಶ್ರಮಕ್ಕೆ ಕರೆದುಕೊಂಡು ಬಂದು ಹಗಲಿರುಳು ಆರೈಕೆ ಮಾಡಿದ್ದೇವೆ…..” ಎಂದರು
“ನಮ್ಮ ಹಿಂದಿನ ಆಶ್ರಮ ಪೀಠಾಧಿಪತಿಗಳು ಇಲ್ಲಿ ಕೆಲಸ ಮಾಡಿಕೊಂಡಿದ್ದ ಒಬ್ಬ ಹೆಂಗಸನ್ನು ಹಾರಿಸಿಕೊಂಡು ಹೋಗಿ ಈಗಾಗಲೇ ಎರಡು ವರ್ಷ ದಾಟಿದವು…ಆಗಿನಿಂದ ಆ ಪೋಸ್ಟ್ ವೇಕೆಂಟ್ ಇದೆ…ಒಬ್ಬ ಉತ್ತಮ ಉತ್ತರಾಧಿಕಾರಿ ಸಲುವಾಗಿ ನಾವು ದುರ್ಬಿನು ಹಾಕಿಕೊಂಡು ಹುಡುಕುತ್ತಿದ್ದೆವು….ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ…ನೀವು ದೇವರಂತೆ ಎಂ.ಜಿ.ರೋಡಿನಲ್ಲಿ ಪ್ರತ್ಯಕ್ಷರಾದಿರಿ…ಈಗ ನೀವೇ ನಮ್ಮ ನೂತನ ಪೀಠಾಧಿಪತಿಗಳು..ನಾನು ಈ ಆಶ್ರಮ ಸುಧಾರಣೆ ಸಮಿತಿಯ ಅಧ್ಯಕ್ಷ…” ಎಂದು ಎಲ್ಲ ವಿವರಣೆ ನೀಡಿ ತನ್ನ ಪರಿಚಯ ಮಾಡಿಕೊಂಡರು ಮತ್ತೊಬ್ಬ ಹಿರಿಯ ಜೀವಿಗಳು.. ಸಣ್ಣ ಹಳ್ಳಿಯ ಗಮಾರನೆಲ್ಲಿ… ಸಿನಿಮಾ ನಟ ಗುಂಡಣ್ಣನೆಲ್ಲಿ… ಆಶ್ರಮದ ಪೀಠಾಧಿಪತಿಯೆಲ್ಲಿ… ಒಂದಕ್ಕೊಂದು ಸಂಭಂದವೆಲ್ಲಿ… ಹೀಗೆಂದು ರಾಗವಾಗಿ ಆಲೋಚನೆ ಮಾಡುತ್ತಿರುವ ಗುಂಡಣ್ಣನನ್ನು ನೋಡಿ ಹಿರಿಯರು ಮತ್ತೆ ಮಾತಿಗಾರಂಭಿಸಿದರು
“ಪೂಜ್ಯರೇ… ಇದು ನೂತನ ಸಂಸ್ಥಾನದ ಆಶ್ರಮ.. ಇದಕ್ಕೆ ಒಂದು ದಶಕದ ಇತಿಹಾಸವಿದೆ… ಸಾವಿರಾರು ಭಕ್ತರಿದ್ದಾರೆ…ನೂರಾರು ಎಕರೆ ಭೂಮಿ ಇದೆ ಮಠಕ್ಕೆ… ಅಂತೆಯೇ ಹಲವಾರು ವಾಣಿಜ್ಯ ಸಂಕೀರ್ಣಗಳು, ಸ್ಕೂಲು ಕಾಲೇಜುಗಳಿವೆ ಈ ಮಠದ ಆಡಳಿತದಲ್ಲಿ …ನೀವು ದಯಮಾಡಿ ಖಾಲಿಯಿರುವ ಈ ಪೀಠವನ್ನು ಅಲಂಕರಿಸಿ ನಮ್ಮನ್ನು ಉದ್ಧರಿಸಬೇಕು … ಅಲ್ಲದೇ ಮುಂದೆ ನೀವು ಒಪ್ಪಿದರೆ ನಿಮ್ಮ ಹುಟ್ಟು ಊರಲ್ಲೂ ಒಂದು ಶಾಖಾ ಮಠ ಮಾಡೋಣ…” ಎಂದು ಪರಿ ಪರಿಯಾಗಿ… ವಿನಯದಿಂದ ಬಿನ್ನವಿಸಿದರು ಹಿರಿಯರು…
ಗುಂಡಣ್ಣ ತನ್ನಷ್ಟಕ್ಕೆ ತಾನು ಅರೆ ಕ್ಷಣ ಯೋಚಿಸಿದ..ಮತ್ತೊಮ್ಮೆ ಯೋಚಿಸಿದ..ಮಗದೊಮ್ಮೆ ಯೋಚಿಸಿದ… ತಾನು ಸಿನಿಮಾದಲ್ಲಿ ಯಾವ ಸಣ್ಣ ಪಾತ್ರಕ್ಕಾದರೂ ಸಿದ್ಧವಾಗಿದ್ದು ನೆನಪಾಯಿತು ಗುಂಡಣ್ಣನಿಗೆ. ಸಿನಿಮಾ ‘ಸ್ಟಾರ್’ ಪಟ್ಟಕ್ಕಿಂತ ಬಹಳ ಪವರ್ ಫುಲ್ ಈ ‘ ಮಠಾಧೀಶ ‘ ಸ್ಟಾರ್ ಪಟ್ಟ…ಅನಾಯಸವಾಗಿ ಕಾಲ ಬುಡಕ್ಕೆ ಬಂದು ಬಿದ್ದಿದೆ ಅವಕಾಶವೆಂಬ ಅದೃಷ್ಟ….ಅಲ್ಲದೇ ತಾನು ತನ್ನ ಊರಿಗೆ ಯಾವಾಗ ಹೋದರೂ ಅಲ್ಲಿ ವಿಶ್ರಮಿಸಿಕೊಳ್ಳಲು ‘ಮಠದ ಬ್ರಾಂಚ್’ ಬೇರೆ….ತನ್ನ ಸುಖಿ ಜೀವನಕ್ಕೆ ಇನ್ನೇನು ಬೇಕು! ಕೊನೆಗೊಮ್ಮೆ ತನ್ನ ಸುಭದ್ರ ‘ಭವಿಷ್ಯ’ ದ ದೃಷ್ಟಿಯಿಂದ ಕಣ್ಣುಗಳನ್ನು ಮುಚ್ಚಿ ಬಲಗೈನ ‘ಹಸ್ತ’ ದಿಂದ ಆಶೀರ್ವಾದ ಮಾಡುವ ಫೋಜನ್ನು ಕೊಡುತ್ತಾ ‘ಹೂ’ ಅಂದುಬಿಟ್ಟ ಗುಂಡಣ್ಣ…
ಒಟ್ಟಿನಲ್ಲಿ ಸಿನಿಮಾ ರಂಗವು ಗುಂಡಣ್ಣನಂತಹ ಒಬ್ಬ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡು ಬಡವಾದರೂ ಒಂದು ಮಠ ‘ಉದ್ಧಾರ’ ವಾಗಿದ್ದು ಮಾತ್ರ ಸುಳ್ಳಲ್ಲ!
*****
12 thoughts on “ಸಿನಿಮಾ ನಟ ಗುಂಡಣ್ಣ ಮಠಾಧೀಶನಾದ ಕಥೆ…”
ಸಿನೆಮಾ ನಟ ಗುಂಡಣ್ಣ ಮಠಾಧೀಶನಾದ ವಿಡಂಬನಾತ್ಮಕ ಬರಹ ಸೊಗಸಾಗಿದೆ.
ಅಭಿನಂದನೆಗಳು
ಭಯಂಕರ ನಟನಾದ ಗುಂಡಣ್ಣ ತನ್ನ ವಿಹ್ವಲಗೊಳಿಸುವ ನಟನೆಯಿಂದ ಕಲಾರಾಧಕರನ್ನು ಮುಕ್ತಗೊಳಿಸಿದರೂ, ಮಠಾಧೀಶನಾಗಿ ನಾಡಿಗೇ ಕಂಟಕನಾದುದು ವಿಡಂಬನೆಯೇ ಸರಿ.
ಉತ್ತಮ ಕಥೆ. ಅಭಿನಂದನೆಗಳು.
ಧನ್ಯವಾದಗಳು 🙏
ಧನ್ಯವಾದಗಳು
ಸೂಪರ್ ರಾಘವೇಂದ್ರ ಮಂಗಳೂರು ಅವರೇ. ಅದ್ಭುತವಾಗಿದೆ ನಿಮ್ಮ ವಿಡಂಬನಾತ್ಮಕ ಬರಹ. ಅಭಿನಂದನೆಗಳು.
Super !
Thank you 🙏
ತಮ್ಮ ಪ್ರೀತಿಯ ಓದಿಗೆ ಧನ್ಯವಾದಗಳು 🙏
ತುಪ್ಪ ಜಾರಿ ರೊಟ್ಟಿಯಲ್ಲಿ ಬಿದ್ದ ಹಾಗಾಯಿತು ಗುಂಡಣ್ಣನ ಪರಿಸ್ಥಿತಿ. ವಿಡಂಬನೆ ಚೆನ್ನಾಗಿ ಇದೆ.
ಧನ್ಯವಾದಗಳು
ಹಳ್ಳಿ ಯಲ್ಲಿ ಇರುವ ಗುಂಡಣ್ಣ ಬಗ್ಗೆ ಬರೆದಿರುವ ವಿಡಂಬನಾತ್ಮಕ ಲೇಖನ ಚೆನ್ನಾಗಿದೆ.
ಅಭಿನಂದನೆಗಳು
ಧನ್ಯವಾದಗಳು