ಶಾಲಿನಿಗೇ ಗೊತ್ತಾಗುತ್ತಿದೆ, ಇತ್ತೀಚಿನ ಕೆಲ ವರ್ಷಗಳಿಂದ ಅವಳ ಕೋಪತಾಪಗಳು ಹದ್ದು ಮೀರುತ್ತಿವೆ. ಸಣ್ಣದೊಂದು ನೆಪ ಸಿಕ್ಕರೆ ಸಾಕು, ಸ್ಫೋಟಿಸಲು ಕಾದು ನಿಂತಿರುತ್ತದೆ ಒಳಗುದಿ. ಮಧ್ಯಾಹ್ನ ಆಗಿದ್ದಾದರೂ ಏನು? “ಸಾರಿಗೆ ಎರಡು ಸಲ ಉಪ್ಪು ಹಾಕಿದೀಯಾ?” ಸಹಜವಾಗಿ ಕೇಳಿದ್ದ ಶ್ರೀಕಾಂತ. ʼಇರಬಹುದೇನೋ, ಮರೆತಿರ್ಬೇಕು..ʼ ಎನ್ನುವ ಪ್ರತಿಕ್ರಿಯೆ ಕೇಳಿದವರ ಮನಸ್ಸಿಗೇ ತಾಕುತ್ತಿತ್ತೇನೋ. ʼಹೋಗ್ಲಿಬಿಡು. ಸ್ವಲ್ಪ ಗಟ್ಟಿಯಾಗಿ ಕಲೆಸಿಕೊಂಡ್ರಾಯ್ತು. ಇನ್ನೊಂಚೂರು ತುಪ್ಪ ಹಾಕ್ಕೊಂಡ್ರೆ ಸೈ..ʼ ಎನ್ನುವಷ್ಟು ಔದಾರ್ಯ ಶ್ರೀಕಾಂತನಿಗಿದೆ. ಸಮಾಧಾನಿ ಅವನು. ಎಲ್ಲವನ್ನೂ ಸೈರಿಸಿಕೊಂಡು ಹೋಗುತ್ತಾನೆ. ಆದರೆ ಅಷ್ಟು ಸಣ್ಣ ಮಾತಿಗೆ ಸಿಡಿದು ಬಿದ್ದಿದ್ದಳು ಶಾಲಿನಿ.
“ನನ್ನನ್ನೇನು ನಿಮ್ಮನೆ ಅಡುಗೆಯವಳು ಅಂದ್ಕೊಂಡಿದೀರಾ? ಸಾಯೋವರೆಗೆ ನಿಮ್ಮನೇಲಿ ಅಡುಗೆ ಮಾಡ್ಕೊಂಡು ಬಿದ್ದಿರ್ತೀನಿ ಅಂತ ನಾನು ಬರ್ಕೊಟ್ಟಿದೀನಾ? ಅಡುಗೆಯವರಿಗಾದ್ರೂ ಒಂದು ಮಾತು ಹೇಳೋಕೆ ನಾಲಿಗೆ ತಡೆಯುತ್ತೆ. ಅದಕ್ಕಿಂತಾ ಸಸಾರ ಆಗಿದೀನಿ ನಾನು. ಒಂದೊಂದಿನ ಏನೋ ಹೆಚ್ಚುಕಮ್ಮಿ ಆಗುತ್ತಪ್ಪಾ. ಅದಕ್ಕೆ ಈ ಥರ ಕೊಂಕು ಮಾತಾಡ್ಬೇಕಾ? ಸಾಕಾಗಿ ಹೋಗಿದೆ ನಂಗೆ..”
ಶ್ರೀಕಾಂತನಿಗೆ ಹೆಂಡತಿಯ ಈ ಸ್ವಭಾವ ಹೊಸದೇನಲ್ಲ. ʼಇಲ್ಲ, ಇವಳ ತಂಟೆಗೆ ಹೋಗಬಾರದುʼ ಎಂದು ಗಂಟಲಲ್ಲಿದ್ದುದನ್ನು ಬಾಯಿಗೆ ಬರದಂತೆ ತಡೆದುಕೊಂಡಿದ್ದು ಅದೆಷ್ಟುಸಲವೋ? ಆದರೂ ಒಮ್ಮೊಮ್ಮೆ ತುಟಿ ಮೀರಿ ಬಂದುಬಿಡುತ್ತದೆ ಮಾತು. ʼಬೇಕುʼ ಎಂದು ಉದ್ದೇಶಪೂರ್ವಕವಾಗಿ ಅವಳನ್ನು ಕೆಣಕುವುದು ಅವನ ಜಾಯಮಾನವಲ್ಲ. ಆದರೆ ಸಂದರ್ಭ ಹಾಗಿದ್ದಾಗ ಒಂದು ಮಾತು ಹೇಳಿದರೆ ಅದೇ ದೊಡ್ಡ ತಪ್ಪಾಗಿಬಿಡುತ್ತದೆ. ʼಮೆನೋಪಾಸ್ʼ, ʼಮೆನೋಪಾಸ್ʼ ಎಂದು ಸಮಾಧಾನ ಕಂಡುಕೊಳ್ಳುವಂತಿಲ್ಲ. ಅದಕ್ಕಿಂತಾ ಎಷ್ಟೋ ಮುಂಚಿನಿಂದಲೇ ಕಡ್ಡಿಯನ್ನು ಗುಡ್ಡ ಮಾಡುವುದು ಶಾಲಿನಿಗೆ ಮೈಯುಂಡುಹೋಗಿಬಿಟ್ಟಿದೆ. ಮದುವೆಯಾಗಿ ನಾಲ್ಕಾರು ವರ್ಷಗಳವರೆಗೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದ ಸಂಸಾರ ದಾರಿ ತಪ್ಪಿದ್ದು ಹೇಗೆ ಎಂದು ಶ್ರೀಕಾಂತನಿಗೆ ಅರ್ಥವಾಗುವುದಿಲ್ಲ. ಈ ಬಗ್ಗೆ ಅವನು ವೃಥಾ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಇರುತ್ತಾರೆ ಒಬ್ಬೊಬ್ಬರು ಒಂದೊಂದು ಥರ. ಪುರಾಣದಲ್ಲೇ ಚಂಡಿಯ ಕತೆ ಇದೆಯಲ್ಲ? ಅನುಸರಿಸಿಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾ ಮಾಡಿಕೊಳ್ಳುತ್ತಾ ಅವನಿಗೆ ಅದೇ ರೂಢಿಯಾಗಿಬಿಟ್ಟಿದೆ. ಆದರೆ ಈ ಹೊಂದಾಣಿಕೆ ಕೂಡಾ ಹೆಂಡತಿಯ ಕಣ್ಣಲ್ಲಿ ಚುಚ್ಚುವುದೆಂಬ ಅರಿವಾದಾಗ ಅವನಿಗೆ ದಿಗ್ಭ್ರಮೆ. ಸುಮ್ಮನಿರುವುದಕ್ಕೆ ʼಕಡೆಗಣಿಸುವುದುʼ ಎನ್ನುವ ಅರ್ಥ ಕಟ್ಟುತ್ತಾಳೆ ಶಾಲಿನಿ. ʼನನ್ನ ಕಂಡರೆ ತಾತ್ಸಾರʼ ಎಂದು ಸಿಡಿದು ಬೀಳುತ್ತಾಳೆ. ಅಂದರೆ ಹೇಗಿರಬೇಕು ತಾನು? ಅವಳು ಕಾಲು ಕೆರೆದುಕೊಂಡು ಅಸಹನೆಯ ಮಾತು ಸಿಡಿಸಿದಾಗಲೆಲ್ಲಾ ಪ್ರತಿವಾದ ಹೂಡುತ್ತಾ, ಏತಿ ಅಂದರೆ ಪ್ರೇತಿ ಅನ್ನುತ್ತಾ, ಛೇ, ಸಂಸಾರ ಅಂದರೆ ಇಷ್ಟೊಂದು ಗೋಜಲು, ಕಗ್ಗಂಟು ಅಂದುಕೊಂಡಿರಲಿಲ್ಲ ಶ್ರೀಕಾಂತ. ʼಸಾರಿಗೆ ಉಪ್ಪು ಹೆಚ್ಚಾಗಿದೆʼ ಅಂದಿದ್ದರಲ್ಲಿ ಏನಿದೆಯಂತೆ ಕೊಂಕು? ಯಾವತ್ತೂ ಭಾವನೆಯ ಮೇಲೆ ಹಿಡಿತ ಇಟ್ಟುಕೊಂಡಿರುತ್ತಿದ್ದ ಶ್ರೀಕಾಂತ ಇವತ್ತು ಅಪರೂಪಕ್ಕೆ ಎನ್ನುವಂತೆ ವ್ಯಗ್ರನಾಗಿದ್ದ. “ಆಡಿದ ಮಾತಿಗೆಲ್ಲಾ ವಿಪರೀತದ ಅರ್ಥ ಕಟ್ಟೋಕೆ ಹೋದ್ರೆ ಮನೆ ಮನೆಯಾಗಿರೋಲ್ಲ. ಸಂಸಾರ ಸಂಸಾರ ಆಗಿರಲ್ಲ. ನಿನಗೆ ನನ್ನಂತೋನು ಸಿಗಬಾರ್ದಿತ್ತು ಕಣೇ. ಮಾತೆತ್ತಿದ್ರೆ ದವಡೆಹಲ್ಲು ಉದುರಿಸೋನು ಸಿಕ್ಕಿದ್ರೆ ಸರಿಯಾಗ್ತಿತ್ತು ನಿಂಗೆ..ʼ ಅರ್ಧಕ್ಕೇ ಊಟ ಬಿಟ್ಟು ಎದ್ದು ಹೋಗಿದ್ದ ಶ್ರೀಕಾಂತ. ಅರ್ಧಕ್ಕಾ? ಊಹೂಂ. ಮೊದಲ ತುತ್ತಲ್ಲೇ ಊಟ ಬಿಟ್ಟು ಎದ್ದಿದ್ದ ಅಂದರೆ ಸರಿ. ಅವನು ಮರಳಿ ಕಾಲೇಜಿಗೆ ಹೊರಟು ಹೋದ ಸುಳಿವು ಸಿಗುತ್ತಿದ್ದಂತೆ ಶಾಲಿನಿ ಎದ್ದು ಮುಂಬಾಗಿಲು ಹಾಕಿಕೊಂಡಿದ್ದಳು. ಶ್ರೀಕಾಂತನ ಜೊತೆಗೇ ಊಟಕ್ಕೆ ಕೂರುತ್ತಿದ್ದ ಅವಳು ಅವತ್ತು ಆ ಸಂದರ್ಭವನ್ನು ತಪ್ಪಿಸಿಕೊಂಡಿದ್ದಳು ಎನ್ನುವಷ್ಟರಿಂದಲೇ ಅವಳ ಉದ್ವಿಗ್ನ ಮನೋಸ್ಥಿತಿ ಅರ್ಥವಾಗಿರಬೇಕಿತ್ತು ಶ್ರೀಕಾಂತನಿಗೆ. ಆದರೆ ಅರ್ಥವಾಗಿರಲಿಲ್ಲ.
*******
ಒಂದು ಚಮಚದಷ್ಟು ಸಾರನ್ನು ಸೌಟಿನಿಂದ ಅಂಗೈಕುಳಿಗೆ ಹಾಕಿಕೊಂಡು ಬಾಯಿಗಿಟ್ಟುಕೊಂಡಳು ಶಾಲಿನಿ. ಮುಖ ಸಿಂಡರಿಸಿಹೋಯ್ತು. ಹೌದು, ಉಪ್ಪು ಜಾಸ್ತಿ ಬಿದ್ದಿದೆ. ರಾತ್ರಿಯ ಊಟಕ್ಕೆ ಸರಿ ಮಾಡಿಡದಿದ್ದರೆ ತರಾಟೆಗೆ ತೆಗೆದುಕೊಳ್ಳುತ್ತಾಳೆ ಮಗಳು. ಮಧ್ಯಾಹ್ನ ಕಾಲೇಜಿನ ಕ್ಯಾಂಟೀನಿನಲ್ಲಿ ಏನೋ ತಿಂದು ಹೊಟ್ಟೆ ತುಂಬಿಸಿಕೊಂಡ ಅವಳಿಗೆ ರಾತ್ರಿ ಸರಿಯಾದ ಅಡುಗೆ ಮಾಡಿ ಬಡಿಸದಿದ್ದರೆ ಇವಳಿಗೇ ಒಂಥರಾ ತಪ್ಪಿತಸ್ಥ ಮನೋಭಾವ. ಗಂಡನೊಡನೆ ನಾಲಿಗೆ ಹರಿಬಿಡುವಂತೆ ಅವಳೊಡನೆ ಬೇಕಾಬಿಟ್ಟಿ ಮಾತಾಡಲು ಮನಸ್ಸು ಒಪ್ಪುವುದಿಲ್ಲ. ಇರುವವಳೊಬ್ಬಳು ಮಗಳು. ಅವಳ ಮೇಲೆ ಪಂಚಪ್ರಾಣ ಇಟ್ಟುಕೊಂಡಿದ್ದಾಳೆ ಶಾಲಿನಿ.ಗಂಡ ಕೂಡಾ ಅವಳಿಗೆ ಅಪ್ರಿಯನೇನಲ್ಲ. ಅವನನ್ನು ಮೆಚ್ಚಿ ಮದುವೆಯಾದವಳು ಶಾಲಿನಿ. ಹಸೆಮಣೆಯ ಮೇಲೆ ಅವನ ಜೊತೆ ಕೂತು ಬೀಗಿದವಳು. ʼಹೇಳಿ ಮಾಡಿಸಿದ ಜೋಡಿʼ ಎಂದು ಮದುವೆಗೆ ಬಂದವರು ಮೆಚ್ಚು ಮಾತಾಡಿದಾಗ ಹಿಗ್ಗಿದವಳು. ಈಗ್ಯಾಕೆ ಅವನನ್ನು ಕಂಡರೆ ಬುದ್ಧಿ ಸ್ವಾಧೀನ ಕಳೆದುಕೊಂಡವಳಂತೆ ಆಡುತ್ತಿದ್ದೇನೆ? ಯಾವಾಗಲೂ ಅಲ್ಲ, ಒಮ್ಮೊಮ್ಮೆ ಮನಸ್ಸು ಕೆರಳಿದಾಗ ನಾಲಿಗೆ ತೀಕ್ಷ್ಣವಾಗಿಬಿಡುತ್ತದೆ. ʼತಪ್ಪು, ತಪ್ಪು, ತಪ್ಪುʼ ಎಂದು ಅಂತರಂಗ ಎಚ್ಚರಿಸುತ್ತಿದ್ದರೂ ಅದನ್ನು ಮೀರಿ ಮಾತು ಕಠಿಣವಾಗುತ್ತದೆ. ಅವನನ್ನು ನೋಯಿಸುವುದರಿಂದ ತನ್ನ ನೋವಿಗೆ ಮುಲಾಮು ಸವರಿದಂತೆ ಹಿತವಾಗುವುದೇ? ಹಾಗೂ ಅಲ್ಲ. ಹಳೆಯದರ ನೆನಪಿನಿಂದ ಉದ್ವಿಗ್ನವಾಗುವ ಚಿತ್ತಕ್ಕೆ ಈ ಬಗೆಯ ಪ್ರತಿಕ್ರಿಯೆ ಒಂದು ಹೊರಹರಿವು. ಯಾಕೆ ಉದ್ವಿಗ್ನವಾಗಬೇಕು ಚಿತ್ತ ಅಂದರೆ ಅವಳ ನಿಯಂತ್ರಣವನ್ನೂ ಮೀರಿ ಹಾಗಾಗಿಬಿಡುತ್ತದೆ. ʼಆಸೆಯೇ ದುಃಖಕ್ಕೆ ಮೂಲʼ ಎನ್ನುವುದರ ಜೊತೆ ಇದನ್ನೂ ಸೇರಿಸಿಕೊಳ್ಳಬಹುದೇನೋ, ʼಹೋಲಿಕೆಯೇ ದುಃಖಕ್ಕೆ ಮೂಲʼ.
*****
ಕೆಲವರಿರುತ್ತಾರೆ, ಸ್ವಂತಿಕೆಯೇ ಇಲ್ಲದೆ ಇನ್ನೊಬ್ಬರ ನೆರಳಾಗಿ ಹಿಂಬಾಲಿಸಿಕೊಂಡಿರುವವರು. ಅವರನ್ನು ಅಟ್ಟಕ್ಕೇರಿಸಿ ಕೂರಿಸುವವರು. ತಮ್ಮನ್ನು ಕಮ್ಮಿ ಎಂದು ಪರಿಗಣಿಸುವಂತವರು. ಶಾಂತಿಯ ಈ ಸ್ವಭಾವವೇ ಶಾಲಿನಿಯೊಡನೆ ಅವಳ ಮಿತ್ರತ್ವ ಗಾಢವಾಗಿ ಬೆಸೆದುಕೊಳ್ಳುವಂತೆ ಮಾಡಿತ್ತು. ಅವಳ ಮುಗ್ಧ ಹೊಗಳಿಕೆ ಶಾಲಿನಿಯ ಅಹಂಗೆ ತೃಪ್ತಿ ತರುತ್ತಿತ್ತು. ʼಎಷ್ಟು ಚಂದ ಕಾಣಿಸ್ತಿ ಕಣೇ. ನನ್ನ ಕಣ್ಣೇ ತಾಗುತ್ತೆʼ ಎನ್ನುವ ಸರ್ವೇಸಾಧಾರಣ ಮಾತು ಕೂಡಾ ಪಿತ್ಥ ನೆತ್ತಿಗೇರಿಸುತ್ತಿತ್ತು. ʼಅರೆರೇ ಎನ್ನಯ ಸಮಾನರಾರು?ʼ ಎಂದು ಕೋಡು ಬರಿಸುತ್ತಿತ್ತು. ಶಾಲಿನಿ ಡಿಗ್ರಿ ಮುಗಿಸುವುದನ್ನೇ ಕಾದು ಕೂತಿದ್ದರು ಅನ್ನುವಂತೆ ನಾಗೇಂದ್ರನ ಅಮ್ಮ ಹುಡುಗಿ ಕೇಳಿಕೊಂಡು ಮನೆಯ ಮೆಟ್ಟಿಲು ಹತ್ತಿದ್ದರು. ದೂರದ ಸಂಬಂಧಿಕರು. ಯಾವತ್ತಿನಿಂದ ಕಣ್ಣಿಟ್ಟಿದ್ದರೋ, ಅಥವಾ ಅವನೇ..
ನಾಗೇಂದ್ರನ ನೆನವರಿಕೆಯಿಂದ ತುಟಿಗಳೆಡೆಯಲ್ಲಿ ವ್ಯಂಗ್ಯ ನಗು ಹಾದುಹೋಗಿತ್ತು. ಮದುವೆಮುಂಜಿಗಳಲ್ಲಿ ಭೇಟಿಯಾಗುವ ಪ್ರಸಂಗ ಬಂದರೆ ಅವನು ತನ್ನನ್ನು ನೋಡುವ ಆರಾಧನಾದೃಷ್ಟಿಯಿಂದಲೇ ಅವನ ಮನಸ್ಸನ್ನು ಓದಿಬಿಟ್ಟಿದ್ದಳು ಶಾಲಿನಿ. ಅವನ ಅಮ್ಮ ಹೇಳಿದ್ದೂ ಅದೇ ಮಾತು, ʼನಮ್ಮ ಹುಡುಗ ಇಷ್ಟಪಟ್ಟಿದಾನೆ. ನಿಮ್ಮ ಹುಡುಗಿ ಒಪ್ಪಿದ್ರೆ ಜಾತಕಗೀತಕದ ಪಂಚಾತಿಕೆ ಬೇಡ. ಮನೋಕೂಟ ಆದ್ರೆ ಸೈಯಪ್ಪಾ..ʼತನ್ನ ಕೋಣೆಯಲ್ಲಿ ಕೂತು ಎಲ್ಲವನ್ನೂ ಕೇಳಿಸಿಕೊಂಡಿದ್ದ ಶಾಲಿನಿ ಅವನ ಧೈರ್ಯಕ್ಕೆ ಬೆಟ್ಟು ಕಚ್ಚಿದ್ದಳು. ಕೈ ತೊಳೆದು ಮುಟ್ಟಬೇಕೆನಿಸುವಂತಾ ಅಪರೂಪದ ಚೆಲುವೆ ತಾನೆಲ್ಲಿ? ಮುಟ್ಟಿದರೆ ಕೈ ತೊಳೆಯಬೇಕೆನಿಸುವಂತಾ ತೀರಾಸಾಧಾರಣ ರೂಪಿನ ಅವನೆಲ್ಲಿ? ಹೋಗಲಿ, ಭರ್ತಿ ಓದಿಕೊಂಡಿದ್ದಾನಾ ಅಂದರೆ ಅದೂ ಇಲ್ಲ. ಬಿ,ಕಾಂ, ಮುಗಿಸಿ ಬ್ಯಾಂಕಿನಲ್ಲಿ ಉದ್ಯೋಗ. ಮನೆಯಲ್ಲೂ ಹೇಳಿಕೊಳ್ಳುವಂತಾ ಸ್ಥಿತಿವಂತಿಕೆ ಇಲ್ಲ. ಅವರು ಹೊರಟು ಹೋದ ಮೇಲೆ ಇವಳನ್ನು ಕರೆದಿದ್ದರು ಅಮ್ಮ. “ಏನೇ? ಏನಂತಿ? ನಿನ್ನ ಕೇಳ್ಕೊಂಡು ಮನೆಬಾಗಿಲಿಗೆ ಜನ ಬರೋಕೆ ಶುರುವಾಯ್ತು..”
ಅಮ್ಮ ಕೂಡಾ ನಗೆಚಾಟಿಕೆ ಮಾಡಿದಳಾ? ವರಸಾಮ್ಯ ಎನ್ನುವುದು ಅವಳ ಮನಸ್ಸಿನಲ್ಲಿಯೂ ಬಂದಿರಬಹುದಾ? ತಾನು ಒಂದೂ ಮಾತಾಡದೆ ಮೂತಿ ತಿರುಪಿ ತನ್ನ ಅಸಂತೋಷವನ್ನು ತೋರ್ಪಡಿಸಿದ ಪರಿ ಇವತ್ತಿಗೂ ನೆನಪಿದೆ ಶಾಲಿನಿಗೆ. ಆಮೇಲೂ ಒಂದೆರಡು ಸಲ ಬಂದಿದ್ದರು ಅವನ ಅಮ್ಮ, ಈ ಪ್ರಸ್ತಾಪ ಹಿಡಿದುಕೊಂಡು. ʼಇಷ್ಟು ಬೇಗ ಮದುವೆಯಾಗಲ್ಲಂತೆ ಅವಳು..ʼ ಎಂದೇನೋ ಸಮಜಾಯಿಷಿ ಹೇಳಿ ಕಳಿಸಿದ್ದಳು ಅಮ್ಮ. ಕಾಯುವುದಕ್ಕೆ ಅವರೇನೋ ಸಿದ್ಧ. ಆದರೆ ಅಮ್ಮನ ಮಾತಿನ ವರಸೆಯಿಂದ ಒಳಗುಟ್ಟು ಗೊತ್ತಾಗಿರಬೇಕು. ʼಋಣಾನುಬಂಧ ಇಲ್ಲ, ಹೋಗ್ಲಿ ಬಿಡಿ..ʼ ಎಂದು ಕೈ ತೊಳೆದುಕೊಂಡಿದ್ದರಂತೆ. ಈ ವಿಷಯದಲ್ಲಿ ಅಪ್ಪ ಕೂಡಾ ಶಾಲಿನಿಗೆ ಸಪೋರ್ಟು. ದುಬಾರಿಯಾಯಿತಾ ಸಪೋರ್ಟು? ಹಾಗೇಕೆಂದುಕೊಳ್ಳಬೇಕು?
*******
ʼಬೇಗ ಮದುವೆಯಾಗಲು ಇಷ್ಟವಿಲ್ಲದ ಹುಡುಗಿʼ ಮತ್ತೆ ಆರು ತಿಂಗಳೆನ್ನುವುದರಲ್ಲಿ ಶ್ರೀಕಾಂತನನ್ನು ಮನಸಾ ಒಪ್ಪಿ ಕೈ ಹಿಡಿದಿದ್ದಳು. ವಾರಗಟ್ಟಲೆ ಬೆನ್ನು ಬಿಡದೆ ಜೊತೆಗಿದ್ದಳು ಇದೇ ಶಾಂತಿ. ʼಲಕ್ಕು ಕಣೇ.., ಲಕ್ಕು ಕಣೇ..ʼ ಎನ್ನುವ ಮಾತು ಎಷ್ಟು ಸಲ ಅವಳ ಬಾಯಿಂದ ಉದುರಿ ಬಿದ್ದಿತ್ತೋ?
ʼನಿಂಗೂ ಲಕ್ಕು ಒದ್ಗೊಂಡು ಬರುತ್ತೆ ಕಣೇ. ನಿಮ್ಮನೇಲೂ ಗಂಡು ನೋಡ್ತಿದಾರಂತಲ್ಲ?ʼ ಲೋಕಾರೂಢಿಯ ಮಾತಾಡಿದ್ದಳು ಶಾಲಿನಿ. ಮನಸ್ಸಿನೊಳಗೆ ಅನಿಸಿತ್ತು, ʼಲಕ್ಕು ಒದ್ಗೊಂಡು ಬರೋದಕ್ಕೂ ಒಂದು ಯೋಗ್ಯತೆ ಬೇಡವಾ? ನೋಡಲು ಅಷ್ಟಕ್ಕಷ್ಟೇ. ಕೆಳಮಧ್ಯಮವರ್ಗದವಳ ಕನಸಿಗೆ ಎಷ್ಟು ಬೆಲೆ ಬಂದೀತು?ʼ
******
ಇಲ್ಲ, ಇಲ್ಲ, ಇಲ್ಲ. ಅದೃಷ್ಟ ಎನ್ನುವುದು ಯಾರ ಎಣಿಕೆಗೂ ನಿಲುಕದ ಒಂದು ಪವಾಡ. ಕಾಲೇಜುಮೇಷ್ಟ್ರ ಕೈ ಹಿಡಿದು ಸುಖಸಂಸಾರ ನಡೆಸುತ್ತಿದ್ದ ಈ ಶಾಲಿನಿ ತನ್ನ ಅಬೋಧ ಗೆಳತಿಯ ಅದೃಷ್ಟ ಕಂಡು ಕರುಬುವ ಮಟ್ಟಕ್ಕೆ ಬಂದಿದ್ದಾಳೆಂದರೆ ಅವಳಿಗೇ ನಂಬಿಕೆ ಬರುತ್ತಿಲ್ಲ. ಗುಗ್ಗು ತರಹ ಹೇಗಿದ್ದಳು ಆ ಶಾಂತಿ? ಈಗಿನ ಅವಳಿಗೂ, ಆಗಿನ ಅವಳಿಗೂ ಹೋಲಿಕೆಯೇ ಇಲ್ಲ. ಅವಳು ಬೇರೆ ಯಾರನ್ನೋ ಮದುವೆಯಾಗಿ ಸಮಾಜ ಗುರ್ತಿಸುವಂತಾ ದೊಡ್ಡ ಮಟ್ಟಕ್ಕೆ ಬೆಳೆದಿದ್ದರೆ ಹೀಗೆ ಹೊಟ್ಟೆ ಉಬ್ಬರಿಸುತ್ತಿರಲಿಲ್ಲ, ಸಂಕಟವಾಗುತ್ತಿರಲಿಲ್ಲ, ಬಹುಶಃ. ಆಗಿದ್ದರೂ ಈ ಮಟ್ಟಕ್ಕೆ ಉಲ್ಬಣಿಸುತ್ತಿರಲಿಲ್ಲ. ಇವಳು ನಿರಾಕರಿಸಿದ ನಾಗೇಂದ್ರನನ್ನು ವಿಧಿ ಶಾಂತಿಯ ಪಾಲಿಗೆ ಕೊಡಮಾಡಿತ್ತು. ಯಾವ ತಕರಾರೂ ಇಲ್ಲದೆ ʼಪಾಲಿಗೆ ಬಂದಿದ್ದು ಪಂಚಾಮೃತʼ ಎನ್ನುವ ಮನೋಭಾವದಿಂದ ಅವನನ್ನು ಮನಸಾ ಒಪ್ಪಿ ಮದುವೆಯಾಗಿದ್ದಳು ಶಾಂತಿ. ಮದುವೆಮನೆಯಲ್ಲಿ ಸಂಭ್ರಮದಿಂದ ಓಡಾಡಿಕೊಂಡಿದ್ದರೂ ʼಕಂತೆಗೆ ತಕ್ಕ ಬೊಂತೆʼ ಎನ್ನುವ ತಾತ್ಸಾರ ಒಳಮನಸ್ಸಲ್ಲಿ ಹೊರಳಾಡುತ್ತಿತ್ತೇ? ತಾನು ಹಿಂದೊಮ್ಮೆ ನಿರಾಕರಿಸಿದ್ದು ಇವನನ್ನು ಎನ್ನುವ ಸತ್ಯ ಶಾಂತಿಗೆ ಗೊತ್ತಿತ್ತೋ, ಇಲ್ಲವೋ? ಅವಳಿಗೆ ಗೊತ್ತೇ ಇರದಿದ್ದವನ ಕುರಿತು ಪೂರ್ಣ ವಿವರವನ್ನೇನು ತಾನು ಕೊಟ್ಟಿರಲಿಲ್ಲ ಎನ್ನುವುದು ಒಳ್ಳೆಯದೇ ಆಯಿತು ಎಂದೆನಿಸಿದ್ದು ಅದೆಷ್ಟು ಸಲವೋ. ಆವಶ್ಯಕತೆಗಿಂತಾ ಹೆಚ್ಚು ಸಿಂಗರಿಸಿಕೊಂಡು, ಆವಶ್ಯಕತೆಗಿಂತಾ ಹೆಚ್ಚು ಉತ್ಸಾಹ ತೋರಿಸುತ್ತಾ, ತನ್ನ ಇರಸರಿಕೆ, ನಡವಳಿಕೆ ನಾಗೇಂದ್ರನನ್ನು ಚುಚ್ಚಿರಬಹುದೇ? ಅಥವಾ ಚುಚ್ಚಲೆಂದೇ..
******
ಬರೀ ಐದಾರು ವರ್ಷ, ಪುಟ ಮಗುಚಿದಂತೆ ಬದುಕು ಮಗ್ಗುಲು ಬದಲಿಸಿತ್ತು. ಬುದ್ಧಿವಂತ ನಾಗೇಂದ್ರ. ಆ ಬಗ್ಗೆ ಅರಿವಾಗಿದ್ದೇ ಅವನು ಸಿ.ಎ. ಮಾಡಿಕೊಂಡಾಗ. ಮೊದಲಿನಂತೆಯೇ ಸಂಬಂಧ ಉಳಿಸಿಕೊಂಡಿದ್ದ ಶಾಂತಿ ʼಇನ್ನು ಇವರು ಚಾರ್ಟೆಡ್ ಅಕೌಂಟೆಂಟ್ ಕಣೇ..ʼ ಎನ್ನುತ್ತಾ ಅರಳಿದ ಮುಖದಿಂದ ಸಿಹಿ ತಂದುಕೊಟ್ಟಾಗ ಹೊಟ್ಟೆಯೊಳಗೆ ಹೊರಳಾಡಿತ್ತು ಮತ್ಸರ. ಶ್ರೀಕಾಂತನೊಡನೆ ವಿನಾಕಾರಣ ಮುನಿಸು ತೋರಿಸಲು ಆರಂಭಿಸಿದ್ದು ಆವಾಗಿನಿಂದಲೇ? ಕಾಲು ಕೆರೆದು ಜಗಳ? ಹೌದು.
ಆಕಾಶಕ್ಕೆ ಏಣಿ ಹಾಕಿದವಳಂತೆ ಶಾಂತಿಯ ಬದುಕು ಹಂತ ಹಂತವಾಗಿ ಮೇಲೇರುತ್ತಾ ಹೋಯ್ತು. ಕಳೆದ ಹದಿನೈದು ವರ್ಷಗಳಲ್ಲಿ ನಾಗೇಂದ್ರ ಶಾಲಿನಿ ಊಹಿಸಲೂ ಅಸಾಧ್ಯವಾದ ಉನ್ನತ ಹಂತ ತಲುಪಿದ್ದ. ವಿಶ್ವಮಟ್ಟದಲ್ಲಿ ಪ್ರಸಿದ್ಧಿಯ ಶಿಖರವೇರಿದ್ದ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಪ್ರಮುಖ ಲೆಕ್ಕಾಧಿಕಾರಿಯ ಉದ್ಯೋಗ. ಕೋಟಿಗಟ್ಟಲೆ ಲೆಕ್ಕದಲ್ಲಿ ಸಂಬಳ. ದೊಡ್ಡ ಬಂಗಲೆ. ಆಳುಕಾಳು. ದುಬಾರಿ ಕಾರು. ಕಣ್ಣು ಕುಕ್ಕುವ ವೈಭೋಗ. ಕೆರೆಯ ಒಡ್ಡು ಹರಿದು ನೀರು ಧುಮ್ಮಿಕ್ಕುವಂತೆ ಸಿರಿಸಂಪತ್ತು ಅವರ ಮನೆಯಲ್ಲಿ ಹರಿದಾಡುತ್ತಿತ್ತು. ಶಾಂತಿ, ಈ ಶಾಂತಿ ಈ ಪರಿ ಬದಲಾಗಿದ್ದು ಹೇಗೆ? ಅನೇಕ ಪ್ರತಿಷ್ಠಿತ ಸಂಘಸಂಸ್ಥೆಗಳ ಒಡನಾಟವಿಟ್ಟುಕೊಂಡಿದ್ದಾಳೆ. ಅಧ್ಯಕ್ಷಗಿರಿ ನಿಭಾಯಿಸಿದ್ದಾಳೆ. ನಿಭಾಯಿಸುತ್ತಿದ್ದಾಳೆ. ಉತ್ತಮ ಭಾಷಣಕಾರ್ತಿಯೆಂದು ಹೆಸರಾಗಿದ್ದಾಳೆ. ದಾನಧರ್ಮಗಳಿಂದ ಪಟ್ಟಣದಲ್ಲಿ ಗೌರವಾರ್ಹಳೆನಿಸಿಕೊಂಡಿದ್ದಾಳೆ. ವರ್ಷಕ್ಕೆ ನಾಲ್ಕು ಸಲ ಎನ್ನುವಂತೆ ವಿದೇಶಪ್ರವಾಸ ಮಾಡುತ್ತಾಳೆ. ದುಡ್ಡು ಅನ್ನುವುದು ತಂದುಕೊಡುವ ಆತ್ಮವಿಶ್ವಾಸ ಅವಳ ನಡೆನುಡಿಗಳಲ್ಲಿ ಎದ್ದು ಕಾಣುತ್ತದೆ. ಸತ್ಯ ಹೇಳಬೇಕೆಂದರೆ ಅತ್ಯಾಧುನಿಕ ಉಡುಗೆತೊಡುಗೆ, ಅಲಂಕಾರಗಳಿಂದ ಅವಳ ಮುಖದ ಕಳೆಯೇ ಬದಲಾಗಿದೆ.ಅಚ್ಚೊತ್ತಿದಂತೆ ಕಾಣುತ್ತದೆ ಸಿರಿವಂತಿಕೆ. ಹೀಗಿದ್ದೂ ಅವಳು ಶಾಲಿನಿಯ ಸ್ನೇಹವನ್ನು ಕಾಪಾಡಿಕೊಂಡು ಬಂದಿರುವುದು ಅವಳ ಸಜ್ಜನಿಕೆಯಾಗಿರಬಹುದಾದರೂ ಶಾಲಿನಿಗೆ ಈ ಸಾಹಚರ್ಯ ಗಂಟಲಲ್ಲಿ ಇಳಿಯದ ಕಡುಬಾಗಿದೆ. ಶಾಂತಿಯದಾಗಿರುವ ಹೆಸರು, ಪ್ರಸಿದ್ಧಿ, ಅಷ್ಟೈಶ್ವರ್ಯ, ತನ್ನದಾಗಿರಬಹುದಾಗಿತ್ತು. ಕಾಲಿಗೆ ತೊಡರಿದ ಅಮೃತಬಳ್ಳಿಯನ್ನು ಕಸ ಎನ್ನುವಂತೆ ಕಿತ್ತೆಸೆದ ದುರದೃಷ್ಟವಂತೆ ತಾನು. ಚಂದ ಅನ್ನುವುದೆಲ್ಲಾ ಒಂದು ವಯಸ್ಸಿನಲ್ಲಿ ಅತಿರೇಕದ ಬೆಲೆ ಕೊಡುವ ಒಂದು ಭ್ರಮೆ. ನಂತರದ ಬದುಕು ರೂಪುಗೊಳ್ಳುವುದು ಅದು ಕೊಡಮಾಡುವ ಸುಖಸೌಕರ್ಯಗಳಿಂದ ಎಂದೆನಿಸುವಾಗ ತನ್ನ ಮೂರ್ಖತನದ ಕುರಿತು ಅವಳಿಗೇ ಸಂಕಟ. ಉರಿವ ಬೆಂಕಿಗೆ ಆಜ್ಯ ಹುಯ್ಯುವಂತೆ ಮತ್ತಷ್ಟು ಕೆರಳಿಸುವ ಅಮ್ಮನ ಮಾತು, ʼಅದರ ಅದೃಷ್ಟ ನೋಡೇ. ಕಾಲು ನೆಲಕ್ಕಿಡೋ ಪಂಚಾತಿಕೆ ಇಲ್ಲ. ಅವಳು ನೋಡ್ದಿದ್ದ ದೇಶಾನೇ ಇಲ್ವೇನೋ..ʼ ಅಮ್ಮ ಬುಸ್ಸೆಂದು ನಿಟ್ಟುಸಿರಿಡುತ್ತಿದ್ದಳು. ತನ್ನ ಅಮ್ಮಅಂತಲ್ಲ, ಅದೆಷ್ಟು ಜನ ಹೆತ್ತವರು, ಒಲ್ಲೆನೆಂದು ಸಂಬಂಧ ನಿರಾಕರಿಸಿದ ತನ್ನಂತವರು, ಹೀಗೆ ತಮ್ಮದೇ ನಿರ್ಣಯಕ್ಕೆ ನಿಟ್ಟುಸಿರಿಡುವ ಪರಿಸ್ಥಿತಿಗೆ ಪಕ್ಕಾಗಿರುತ್ತಾರೋ ಲೆಕ್ಕವೆಲ್ಲಿದೆ? ಕೆಲವರು ಸಕಾರಣವಾಗಿ, ಇನ್ನು ಕೆಲವರು ತನ್ನ ಹಾಗೆ ಅಕಾರಣವಾಗಿ. ಹೊಟ್ಟೆಉರಿ. ಅರಿಷಡ್ವರ್ಗಗಳಲ್ಲಿ ಪ್ರಮುಖ ಸ್ಥಾನ ಇದಕ್ಕೇ. ದೇವರು ತನಗೆ ಯಾತಕ್ಕೂ ಕಮ್ಮಿ ಮಾಡಿಲ್ಲ. ಆದರೆ ಶಾಂತಿಯೊಡನೆ ಹೋಲಿಸಿಕೊಂಡರೆ ತಾನು ಏನೂ ಅಲ್ಲ. ಯಾವ್ಯಾವುದೋ ನೆಪದಿಂದ ಶಾಂತಿಯ ಮನೆಯಲ್ಲಿ, ಅಲ್ಲಲ್ಲ, ಬಂಗಲೆಯಲ್ಲಿ ಪೂಜೆಪುನಸ್ಕಾರಗಳು, ವೈಭೋಗದ ಪಾರ್ಟಿಗಳು ನಡೆಯುತ್ತಲೇ ಇರುತ್ತವೆ. ಒತ್ತಾಯಪೂರ್ವಕವಾಗಿ ಆಮಂತ್ರಿಸುತ್ತಾಳೆ ಶಾಂತಿ. ಹೋಗದೆ ತಪ್ಪಿಸಿಕೊಳ್ಳಬಹುದಾದರೂ ಹಾಗೂ ಮಾಡದೆ, ಒಂದು ಪ್ರತಿಷ್ಠೆಯ ಸಂಕೇತದಂತೆ ಸಮಾಜದ ಕಣ್ಣಲ್ಲಿ ಕಾಣುವ ನಿಕಟ ಸ್ನೇಹವನ್ನು ದೂರ ಮಾಡಿಕೊಳ್ಳುವ ಮನಸ್ಸಾಗದೆ, ಹಾಜರಿ ಹಾಕುತ್ತಿದ್ದಳು ಶಾಲಿನಿ, ಹಿಂದೆ ನಡೆದದ್ದೇನೆಂಬುದು ತನಗೆ ಗೊತ್ತೇ ಇಲ್ಲದ ಅಮಾಯಕಿಯಂತೆ ನಟಿಸುತ್ತಾ. ನಾಗೇಂದ್ರ ಕೂಡಾ ವಿಶ್ವಾಸದಿಂದ ತನ್ನ ಮಡದಿಯ ಸ್ನೇಹಿತೆಯನ್ನು ನಡೆಸಿಕೊಳ್ಳುತ್ತಿದ್ದ. ಹೀಗೆ ಹೋಗಿ ಬಂದ ದಿನಗಳಲ್ಲಿ ಶಾಲಿನಿಯ ಅಸಹನೆ ಪರಾಕಾಷ್ಠೆಗೇರುತ್ತಿತ್ತು. ತಾನು ತಿರಸ್ಕರಿಸಿದ ಆ ನಾಗೇಂದ್ರ ಹಣದ ಪ್ರಭಾವಳಿಯ ನಡುವೆ ಪ್ರಕಾಶಮಾನವಾಗ್ಗಿ, ಆಕರ್ಷಕವಾಗಿ ಕಂಗೊಳಿಸುತ್ತಾ ಅವಳನ್ನು ಪಶ್ಚಾತ್ತಾಪದ ಕಂದಕದಲ್ಲಿ ದೂಡಿಬಿಡುತ್ತಿದ್ದ. ಪ್ರೀತಿ ಹುಟ್ಟಲು, ಬೆಳೆಯಲು, ಬೆಸೆಯಲು ಮೊದಲ ಕಾರಣ ಸುರೂಪ. ಹಣವೂ ಜೊತೆಗಿದ್ದರೆ ಚಿನ್ನಕ್ಕೆ ಕುಂದಣವಿಟ್ಟಂತೆ. ಇದು ತನ್ನ ನಂಬಿಕೆಯಾಗಿತ್ತು. ಸಾಮಾನ್ಯನೊಬ್ಬನಿಗೆ ದುಡಿದು ಗುಡ್ಡೆ ಹಾಕುವ ಸಾಮರ್ಥ್ಯ ಇದೆಯೋ, ಇಲ್ಲವೋ ಎಂದು ಹೇಳಬೇಕಾದ್ದು ಕಾಲ. ʼಚಂದʼ ಅನ್ನುವುದೊಂದನ್ನೇ ಮಾನದಂಡವಾಗಿಟ್ಟುಕೊಂಡು ಅಳೆಯುವ ಜಾಯಮಾನ ತಪ್ಪು ಎನ್ನುವುದು ತಡವಾಗಿ ಅರಿವಾಗಿದೆ ಶಾಲಿನಿಗೆ. ʼಎಲ್ಲಾ ಅವರವರ ಅದೃಷ್ಟ, ಪಡೆದುಕೊಂಡು ಬಂದಿದ್ದುʼ ಎನ್ನುವ ಸತ್ಯ ಗೊತ್ತಿದ್ದೂ ಯಾಕೆ ಮನಸ್ಸಲ್ಲಿ ಈ ಬಗೆಯ ವಿಕಲ್ಪ? ಅಲ್ಲೋಲ ಕಲ್ಲೋಲ? ʼತಾನೇ ಕೈಯಾರೆ ತನ್ನ ಮನಶ್ಶಾಂತಿಯನ್ನು ಹಾಳುಮಾಡಿಕೊಳ್ಳುತ್ತಿದ್ದೇನೆ, ತನ್ನ ಸಂಸಾರವನ್ನು ಕೆಡಿಸಿಕೊಳ್ಳುತ್ತಿದ್ದೇನೆ, ತಾನು ನಡೆದುಕೊಳ್ಳುವ ರೀತಿ ತಪ್ಪುʼ ಎಂದು ಗೊತ್ತಿದ್ದೂ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲಾಗದ ಇಬ್ಬಂದಿತನದಲ್ಲಿ ಒದ್ದಾಡುತ್ತಿದ್ದಳು ಶಾಲಿನಿ. ಒಂದೊಮ್ಮೆ ನಾಗೇಂದ್ರ ಬೇರೆ ಯಾರನ್ನಾದರೂ ವಿವಾಹವಾಗಿದ್ದರೆ ಅಥವಾ ಶಾಂತಿ ತನ್ನ ಅತ್ಯಾಪ್ತ ಗೆಳತಿಯಾಗಿರದಿದ್ದರೆ ಇಂತಾ ಯೋಚನೆಗಳು ತನ್ನನ್ನು ಕಾಡುತ್ತಿರಲಿಲ್ಲವೇನೋ. ಆದರೆ ಹಾಗಾಗಿಲ್ಲವಲ್ಲ? ಇವತ್ತು ಸಾರಿಗೆ ಉಪ್ಪು ಜಾಸ್ತಿ ಬಿದ್ದಿದ್ದರ ಹಿನ್ನೆಲೆಯಲ್ಲಿ ಇಂತದೇ ಕಾರಣ. ಶಾಂತಿಯ ಮಗ ಎಂ,ಎಸ್, ಮಾಡಲು ಅಮೆರಿಕಾಕ್ಕೆ ಹೊರಟಿದ್ದಾನೆ. ಮನೆಯಲ್ಲೊಂದು ಬೀಳ್ಕೊಡುಗೆಯ ಪಾರ್ಟಿ, ಅತ್ಯಾಪ್ತರಿಗೆ ಆಹ್ವಾನ. ಒಟ್ಟಾರೆ ಪಾರ್ಟಿ ಮಾಡಲು ಏನೋ ಒಂದು ನೆಪ. ʼಇಂಜಿನಿಯರಿಂಗ್‌ಗೆ ಸೇರ್ಕೋ..ʼ ಅಂದರೆ ಕೇಳಿರಲಿಲ್ಲ ತನ್ನ ಮಗಳು. ʼಪ್ಯೂರ್ ಸೈನ್ಸ್..ʼ ಎನ್ನುವ ಹಟ. ಅವಳ ತಾಳಕ್ಕೆ ತಕ್ಕಂತೆ ಕುಣಿಯುವ ಅಪ್ಪ. ಶಾಂತಿಯ ಮಗ ಇಂಜಿನಿಯರಿಂಗ್ ಮುಗಿಸಿ, ಎರಡು ವರ್ಷದ ಉದ್ಯೋಗದ ಅನುಭವ ಪಡೆದು ಮುಂದೆ ಓದಲು ಹೊರಟು ನಿಂತಿದ್ದಾನೆ.
“ಓದು ಮುಗೀತಿದ್ಹಾಗೆ ಮದುವೆ ಮಾಡ್ಬಿಡ್ಬೇಕು. ಕಾಲ ಎಷ್ಟು ಬೇಗ ಓಡುತ್ತೆ ನೋಡು. ನಂಗೆ ಸೊಸೆ ಬರೋ ವಯಸ್ಸಾಯ್ತು. ನಿಂಗೆ ಅಳಿಯ..” ನಕ್ಕಿದ್ದಳು ಶಾಂತಿ. ಅವಳ ನಗು ಫೋನಿನಲ್ಲಿ ಅಲೆಅಲೆಯಾಗಿ ಕಿವಿ ತಲುಪಿ ಎದೆಬಡಿತ ಏರಿತ್ತು ಶಾಲಿನಿಗೆ. ವಿನಾಕಾರಣ ಯಾಕೆ ಈ ಮಾತು? ಅಥವಾ ಸಕಾರಣವಾಗಿ? ಹುಡುಗ ತೀರಾ ಚಂದದವನೇನಲ್ಲ. ಆದರೆ ತೆಗೆದು ಹಾಕುವಂತಾ ಕೇಸೂ ಅಲ್ಲ. ಅನುಭವ ಕಲಿಸಿದ ಪಾಠ ಇದೆಯಲ್ಲ?ಅದೆಷ್ಟೋ ಕತೆಕಾದಂಬರಿಗಳಲ್ಲಿ ಪರಸ್ಪರ ಪ್ರೇಮಿಸಿದವರ ಮದುವೆ ಕಾರಣಾಂತರಗಳಿಂದ ಅಸಾಧ್ಯವಾಗಿ, ಮುಂದೆ ಅವರಿಬ್ಬರ ಮಕ್ಕಳು ವಿವಾಹಬಂಧನದಲ್ಲಿ ಒಗ್ಗೂಡುವುದರ ಉದಾಹರಣೆ ಇರುತ್ತದೆಯಲ್ಲ? ಇಲ್ಲಿ ಹಾಗೇನಿಲ್ಲ. ಆದರೂ..
“ಹುಡುಗಿ ನೋಡಿಟ್ಟಿದೀಯೇನೇ?” ಕೇಳಿದ್ದಳು ಶಾಲಿನಿ, ಏರಿದ್ದ ಎದೆಬಡಿತವನ್ನು ತಹಬಂದಿಯಲ್ಲಿ ಇಟ್ಟುಕೊಳ್ಳಲೆತ್ನಿಸುತ್ತಾ. ʼಹೊಸದಾಗಿ ನೋಡೋಕೇನಿದೆ? ಇದಾಳಲ್ಲ ನಿನ್ನ ಮಗಳು..ʼ ಎನ್ನುವ ಉತ್ತರಕ್ಕಾಗಿ ಇಡೀ ಮೈ ಕಿವಿಯಾಗಿ ಕಾದಿತ್ತು. ತನ್ನ ಮಗಳಿಗೂ ಒಂದು ಮನಸ್ಸಿದೆ, ವ್ಯಕ್ತಿತ್ವವಿದೆ, ಅವಳ ತೀರ್ಮಾನಕ್ಕೆ ಬೆಲೆಯಿದೆ ಎನ್ನುವ ಅರಿವು ಆ ಕ್ಷಣದಲ್ಲಿ ಅವಳ ಮನಸ್ಸಿಂದ ಮರೆಯಾಗಿಬಿಟ್ಟಿತ್ತು. ಏನೆಂದಳು ಶಾಂತಿ?
“ಇನ್ನೂ ಇಲ್ಲಪ್ಪಾ. ಯಾರಾದ್ರೂ ಇಂಜಿನಿಯರಿಂಗ್ ಓದಿದ ಹುಡುಗಿ, ನಮ್ಮನೆಗೆ ಹೊಂದಿಕೆಯಾಗುವಂತೋಳು ಇದ್ರೆ ನೆನಪಿಟ್ಕೊಂಡಿರೇ. ಇಂಜಿನಿಯರ್ ಹುಡುಗೀನೇ ಆಗ್ಬೇಕಂತೆ ಅವನಿಗೆ..”
ಸಾರಿಗೆ ಮಾತ್ರವಲ್ಲ, ಒಲೆಗೇ ಉಪ್ಪು ಬಿದ್ದಂತೆ ಶಾಲಿನಿ ಚಟಪಟಗುಟ್ಟತೊಡಗಿದ್ದು ಆವಾಗಿನಿಂದ.
******
“ಯಾಕೆ ಬರಲಿಲ್ಲ ನಿನ್ನ ಫ್ರೆಂಡು? ಕರೆದಿರಲಿಲ್ವಾ?” ನೆನಪಿಟ್ಟುಕೊಂಡು ಕೇಳಿದ್ದ ನಾಗೇಂದ್ರ.
“ಕರೀದೇ ಇರ್ತೀನಾ? ಯಾವುದಕ್ಕೂ ತಪ್ಪಿಸ್ತಿರಲಿಲ್ಲ. ಏನು ತೊಂದರೆಯಾಯ್ತೋ? ನಾಳೆ ವಿಚಾರಿಸ್ಬೇಕು..” ಉತ್ತರಿಸಿದ್ದಳು ಶಾಂತಿ. ತಂತಮ್ಮ ಅಮ್ಮಂದಿರ ನಡುವೆ ನಡೆದ ಮಾತುಕತೆ ಪರಸ್ಪರ ಗೊತ್ತಿಲ್ಲವೆಂಬಂತೆ ವರ್ತಿಸುತ್ತಿದ್ದರೂ ನಾಗೇಂದ್ರನಿಗೆ ಶಾಲಿನಿಯ ಮೇಲೆ ಗೌರವವಿದೆ. ಕೃತಜ್ಞತಾಭಾವನೆಯಿದೆ. ಅವಳಿಂದಲೇ ತಾನು ಈ ಮಟ್ಟಕ್ಕೇರಿದ್ದು ಎನ್ನುವ ಸ್ಪಷ್ಟ ಅರಿವಿದೆ. ಅವಮಾನ ಕೂಡಾ ಸಾಧನೆಗೆ ಏಣಿಯಾಗಬಹುದೆಂಬುದಕ್ಕೆ ತಾನೂ ಒಂದು ಉದಾಹರಣೆ ಅಂದುಕೊಂಡಿದ್ದಾನೆ ನಾಗೇಂದ್ರ. ಇಲ್ಲದಿದ್ದರೆ ಹಟ ಹಿಡಿದು ಈ ಮಟ್ಟಕ್ಕೇರಲು ಸರ್ವಶಕ್ತಿಯನ್ನೂ ಉಪಯೋಗಿಸುವ ಇಚ್ಛಾಶಕ್ತಿ ತನ್ನಿಂದ ಸಾಧ್ಯವಾಗುತ್ತಿತ್ತೇ? ಇಲ್ಲವೇನೋ ಅಂದುಕೊಂಡರೆ ತಪ್ಪಲ್ಲ. ತಿರಸ್ಕಾರ ಮಾಡಿದವರ ಎದುರು ತಲೆಯೆತ್ತಿ ನಿಲ್ಲುವ ಸಂತೃಪ್ತಿ ಸಣ್ಣದೇನಲ್ಲ. ಒಂದೊಂದೇ ಮೆಟ್ಟಿಲು ಮೇಲೇರಿದ ಹಾಗೆ ಸಿಗುವ ಆತ್ಮಸಂತೋಷವೂ..
*********
6 thoughts on “ಏಣಿ”
ವಸುಮತಿ ಯವರೇ
ದಿನ ನಿತ್ಯ ದ ಸರಳ ವಿಚಾರಗಳ ಬಗ್ಗೆ ಅದೆಷ್ಟು ಸಲೀಸಾಗಿ ಬರೆಯುತ್ತೀರಿ. ಆ ಸರಳ ವಿಚಾರಗಳು ಗೌಣವಾದವೇನಲ್ಲ.
ನೀವು ಅದೆಷ್ಟೊಂದು
ಕಥೆಗಳನ್ನು ಬರೆಯುತ್ತೀರಿ ಅನ್ನೋದು ಇನ್ನೊಂದು ಸೋಜಿಗ.
ಈ ಕಥೆಯೂ ಚೆನ್ನಾಗಿದೆ. ಹೆಂಗೆಳೆಯರಿಗೆ ಅಪ್ಯಾಯಮಾನವೆನಿಸುವಂತದ್ದು ಕೂಡ.
ಚೆನ್ನಾಗಿದೆ
ಕಥೆ ನೈಜವಾಗಿ ಮೂಡಿ ಬಂದಿದೆ. ಶೈಲಿ, ನಿರೂಪಣೆ ಸೊಗಸಾಗಿದೆ.
ತಿರಸ್ಕಾರದಿಂದ ಉದಯಿಸಿದ ಶಕ್ತಿ ಎಷ್ಟೊಂದು ಸಶಕ್ತವಾಗಿದೆ! ಚಂದದ ಕತೆ
ಕಥೆ ಚೆನ್ನಾಗಿದೆ
ಒಳ್ಳೆಯ ನಿರೂಪಣೆ ಮತ್ತು ಹೆಣಿಗೆಯ ಸುಂದರ ಕಥೆ