ಕೊನೆಯ (ಮರಣ) ಪತ್ರ ಎನ್ನುವುದು ಬೇಕೇ?

ಕೊನೆಯ (ಮರಣ) ಪತ್ರ ಎನ್ನುವುದು ಬೇಕೇ? ಅಕ್ಕಪಕ್ಕದ ಮಂದಿಯ
ಹನಿಗಣ್ಣಾಗಿಸಲು ಪ್ರಾಯಃ ಬೇಡ. ನೀವು ಏನು ಬರೆದರೂ ಪತ್ರದಲ್ಲಿ
ಅದು ಕವಿತೆಯ ಓದಿ ಮರೆತಂತೆ	
ಅಥವಾ ಊಟ ಮುಗಿಸಿದ ಮೇಲೆ ಕೈ ತೊಳೆದು ಒರಸಿಕೊಂಡಂತೆ
ಅಬ್ಬಬ್ಬ! ಇನ್ನೂ ಬೇಕು ರೂಪಕ ಅಂದರೆ
ಬರೆಯದ ಕವಿತೆ ತನ್ನದೇ ಎಂದಂದುಕೊಂಡು
ತನ್ನ ಕಾವ್ಯಕ್ಕೆ ತಾನೇ ಮಣಿವ ಕವಿಯಂತೆ

ನಾವು ಬದುಕಿದ್ದೇವೆ ಅನ್ನುವುದನ್ನು ಆಗಾಗ
ರುಜು ಮಾಡಬಯಸುತ್ತೇವೆ: ಉಸಿರಿನ ಮೂಲಕ
ತಿಂದುಂಡು ತೇಗುವ ಮೂಲಕ, ಜಗಳ ಪ್ರೀತಿ ಕೋಪ
ಗಳನ್ನೆಲ್ಲ ಅನುಭವಿಸುವ ಮೂಲಕ, ಅಥವಾ ಇಸೀಚಯರಿನಲ್ಲಿ ಕುಳಿತು
ಇದಿರಿದ್ದವರನ್ನು ಗೆಲ್ಲುವೆ ಎಂಬ ಅಹಂಕಾರದ ಮೂಲಕ
ಇಲ್ಲವೇ ಕಪೋಲಕಲ್ಪಿತ ಸತ್ಯ ಅಸತ್ಯಗಳ ನಡುವೆ
ನಾವೇ ಗೆರೆ ಎಳೆದು ನಾವೇ ಗೆರೆ ಅಳಿಸಿ ಹಾಕಿ

ಆದರೆ ಇದಾವುದೂ ನಮ್ಮ ಕೊನೆಯ ಪತ್ರಕ್ಕೆ ರುಜು
ಆಗುವುದಿಲ್ಲ. ರುಜುಆಗುವುದೆನ್ನುವುದು ಇರುವುದು -
ಮರ ಒಣಗಿ ಬಿದ್ದಾಗ, ಹರಿಯುವ ನದಿ ಭೋರೆಂದು ಹರಿದು
ಮತ್ತೆ ಬತ್ತಿ ಒಣಗಿದಾಗ, ಮಳೆಗಾಲದಲ್ಲಿ ಬಲವಾಗಿ ಬೀಸುವ ಗಾಳಿ
ಶ್ರಾವಣದಲ್ಲಿ ಅರಳಿದ ಹೂಗಳಲ್ಲಿ ದಳ ದಳಗಳಾದಾಗ
ಇಲ್ಲವೇ ನೀರು ಮಂಜಾಗಿ, ಮಂಜು ನೀರಾಗಿ ಸ್ಥಿತ್ಯಂತರಗಳನ್ನು
ಅನುಭವಿಸುವಾಗ

ಇಂಥ ಗುರುತೆನ್ನುವುದು ಇದೆಯೇ ನಮಗೆ? ಮಾತು
ಮುಗಿದ ನಂತರ ಅದು ದಿಗಂತದಲ್ಲಿ ಕಂತಿ
ಮಿಂಚಾಗದುಳಿದಾಗ ಅಲ್ಲಿ ತನ್ನಿಂತಾನೆ ಮಿಂಚುವ ಮಿಂಚು ಒಮ್ಮೆಯೂ
ನಮ್ಮ ಅಡಿಗೆ ಮನೆಯಲ್ಲಿ ಒಲೆ ಉರಿಸದಿರುವುದು 
ಹೇಗೋ ಹಾಗೇ, ಇದೂ ಕೂಡಾ!

ಒಪ್ಪುವುದಾದರೆ ಒಪ್ಪಿ, ಒಪ್ಪದಿದ್ದರೆ ಬಿಟ್ಟು ಬಿಡಿ
ಬದುಕೆನ್ನುವುದು ಹೇಗೆ ಅಕಸ್ಮಿಕವೋ ಹಾಗೇ 
ಅರಳಿದ ಹೂವು ಬಾಡಿ ಗಿಡದ ಬುಡದಲ್ಲಿ ಬಿದ್ದು ಅದೇ ಮತ್ತೆ 
ಆ ಜೀನನ್ನೇ ಹೊತ್ತು ಹೂವಾಗುವುದು ಹೇಗೋ ಹಾಗೆ
ಈ ಎಚ್ಚರ ಇದ್ದರೆ ಸಾಕು
ಯಾಕೆ ರುಜು ಬೇಕು ಕೊನೆಯ ಪತ್ರಕ್ಕೆ?

         -ಡಾ.ನಾ.ಮೊಗಸಾಲೆ	

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on “ಕೊನೆಯ (ಮರಣ) ಪತ್ರ ಎನ್ನುವುದು ಬೇಕೇ?”

  1. ನಾ.ದಾಮೋದರ ಶೆಟ್ಟಿ

    ಕೊನೆಯ ಪತ್ರಕ್ಕೆ ರುಜುಬೇಡ
    ಎಂದರೆ
    ಸರಿ.

  2. Raghavendra Mangalore

    ಕೊನೆಯ ಪ್ಯಾರ ಅದ್ಭುತ ಸಂದೇಶ ನೀಡುತ್ತದೆ ಮನು ಕುಲಕ್ಕೆ.. ಸರಿಯಾಗಿ ಬದುಕುವ ಎಚ್ಚರ ಇದ್ದರೆ ಸಾಕು ಮನುಷ್ಯನಿಗೆ….ಇನ್ನು ರುಜು ಯಾಕೆ ಬೇಕು ಕೊನೆಯ ಪತ್ರಕ್ಕೆ.. ಚಂದದ ಕವಿತೆ. 💐

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter