“ಹತ್ತಿ… ಹತ್ತಿ…ಬೇಗ, ರಾಯಿಟ್…” ಧೂಳಿನಿಂದಲೇ ಮುಚ್ಚಿಹೋಗಿದ್ದ ಆ ಕೆ.ಎಸ್.ಆರ್.ಟಿ.ಸಿ. ಬಸ್ ಧೂಳೆಬ್ಬಿಸುತ್ತ ಮುಂದೆಸಾಗಿತು. “ಏನೇ ಸರಸು… ಮುಸ್ಸಂಜೆ ಹೊತ್ತಲ್ಲೂ ಇಲ್ಲೇ ಇದ್ದೀಯಾ?” ಗಂಡ ಸುಬ್ರಾಯರ ಮಾತಿನಿಂದ ನಿದ್ದೆಯಿಂದ ಎದ್ದವಳಂತೆ ಹೌಹಾರಿದಳು ಸರಸು. ಆಕೆಯ ಐವತ್ತರ ಹರೆಯದ ಕ್ಷೀಣ ಕಣ್ಣುಗಳು ಯಾರನ್ನೋ ಹುಡುಕುತ್ತಲಿದ್ದವು.
ಸುಬ್ರಾಯರಿಗೆ ಕಾಲು-ಕೈ ತೊಳೆಯಲು ನೀರನ್ನು ಕೊಟ್ಟು ಸರಸು, ತುಳಸೀಕಟ್ಟೆಗೆ ದೀಪ ಇಡಲು ಹೋದಳು. ಸುಬ್ರಾಯರು ತುಸು ತಗ್ಗಿದ ಸ್ವರದಲ್ಲೇ, “ಸರೂ…ಇನ್ನೂ ಅಂವ ಬರ್ತಾ ಹೇಳಿ ನೀನು ಯಾಕ ಕಾಯ್ತಿಯೆ? ಅಂವ ಬದುಕಿದ್ದರೆ ಈ ಅಪ್ಪ, ಆಯೀನ ನೋಡುಕೆ ಬರೂದಿಲ್ಲಾಗಿತ್ತ…?” ಏನೂ ಕೇಳಿಸಿಕೊಳ್ಳದವಳಂತೆ ಸರಸು ದೇವರ ಕೋಣೆಯಲ್ಲಿ ದೀಪ ಹೊತ್ತಿಸಿಟ್ಟವಳು ಎಂದಿನಂತೆ ತನ್ನ ಮಗ ಶಂಕರ ಬದುಕಿದ್ದಿರಲೇ ಬೇಕು, ನಾಳೆಯಾದರೂ ಬರಲೇಬೇಕು, ಬರುವಂತೆ ನೀನು ಮಾಡಲೇಬೇಕು, ಎಂದು ಮನಸ್ಸಿನಲ್ಲೇ ಬೇಡುತ್ತಿದ್ದಳು. ಆತ ಬಂದ ದಿನವೇ ಪಕ್ಕದ ಭುವನೇಶ್ವರಿ ದೇವಸ್ಥಾನಕ್ಕೆ ಹೋಗಿ ದೇವಿಗೆ ಬೆಳ್ಳಿ ಪಾದ ಅರ್ಪಿಸುವುದಾಗಿ ತಾನು ನೀಡಿದ ಹರಕೆಯನ್ನೂ ನೆನೆದಳು. ಬೆಳ್ಳಿ ಪಾದ ಎದುರು ಬಂದಂತಾಗಿ, ಕೈ ಮುಂದೆ ಚಾಚಿದಳು. ಚಾಚಿದ ಕೈಗಳನ್ನೇ ಮುಗಿದು ಸೊಂಟ ಬಗ್ಗಿಸಿ, ಅಲ್ಲೇ ದೇವರಿಗೆ ನಮಸ್ಕರಿಸಿ ಹೊರಬಂದಳು.
ಶಂಕರ, ಸುಬ್ರಾಯ ಮತ್ತು ಸರಸೂರ ಎರಡನೆಯ ಮಗನಾಗಿದ್ದ. ವಿಧಿಯು ತನ್ನ ಕ್ರೂರ ವರ್ತನೆಯಿಂದ ಶಂಕರನ ಅಕ್ಕ ಲಕ್ಷ್ಮಿಯನ್ನು ವಿಷಮ ಜ್ವರದಿಂದ ಸಾಯಿಸಿತ್ತು. ಇದ್ದೊಬ್ಬ ಮಗನನ್ನು ಎರಡೂ ಕಣ್ಣುಗಳಲ್ಲಿ ತುಂಬಿಕೊಂಡು ಜೋಪಾನ ಮಾಡಿ ಸಾಕಿದ್ದರು.ಒಂದು ಎಕರೆ ಅಡಿಕೆ ತೋಟ, ಎರಡು ಎಕರೆ ಜಮೀನು ಇದ್ದರೂ ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟಕ್ಕಷ್ಟೇ ಆಗಿತ್ತು. ಶಂಕರ ಬುದ್ಧಿವಂತ, ಊರಿನಲ್ಲೇ ಇದ್ದ ಸರಕಾರಿ ಶಾಲೆಯಲ್ಲಿ ಹತ್ತನೆಯ ತರಗತಿಯ ವರೆಗೂ ಕಲಿತ. ಮಗ ಕಾಲೇಜಿಗೆ ಹೋಗಬೇಕೆಂಬುದು ಅಪ್ಪ-ಅಮ್ಮನ ಬಯಕೆಯಾಗಿತ್ತು. ಊರಲ್ಲಿ ಕಾಲೇಜಿರಲಿಲ್ಲ. ಹದಿನೆಂಟು ಮೈಲು ದೂರದ ಕಾಲೇಜಿಗೆ ಕಳಿಸುವುದೆಂದರೆ ದಿನದ ಬಸ್ಸ್ ಓಡಾಟದ ಖರ್ಚು, ಮೇಲಾಗಿ ಮಧ್ಯಾಹ್ನದ ಊಟದ ಖರ್ಚು. ಹೊಂದಿಸುವುದಾದರೂ ಹೇಗೆ? ಇಲ್ಲವೆಂದಾದರೆ, ಇದ್ದ ಜಮೀನಿನಲ್ಲಿ ಅಪ್ಪ ಮಗ ಒಟ್ಟಿಗೆ ದೇಹವನ್ನು ಸವೆಸುವುದು. ಇದು ಹೇಗೆ ಸಾಧ್ಯ? ಏನೇ ಆಗಲಿ ದೂರದ ಬೆಳ್ತಂಗಡಿಯಲ್ಲಿ ತಕ್ಕ ಮಟ್ಟಿಗೆ ಸಂಸಾರ ಹೂಡಿಕೊಂಡಿದ್ದ ತನ್ನ ತಂಗಿ ಸುಮತಿಯನ್ನೊಮ್ಮೆ ಕೇಳುವುದೆಂದು ಸರಸು ನಿರ್ಧರಿಸಿದಳು. ಅವಳಿಗೆ ವಿಷಯ ತಿಳಿಸಿದಾಗ ‘ತನಗೂ ಗಂಡುಮಕ್ಕಳಿಲ್ಲ. ಹೇಮಾ-ಪ್ರೇಮರಿಗಂತೂ ಶಂಕರಣ್ಣ ಅಂದರೆ ಪಂಚಪ್ರಾಣ. ಅವನು ಇಲ್ಲೇ ಇದ್ದುಕೊಂಡು ಕಾಲೇಜಿಗೆ ಹೋದರೆ ನಮ್ಮೆಲ್ಲರಿಗೂ ಸಂತೋಷ’ ಎಂಬ ಹಸಿರು ನಿಶಾನೆ ಸಿಕ್ಕಿದ್ದೇ ತಡ, ಸರಸು ಹಿರಿಹಿರಿ ಹಿಗ್ಗಿದಳು. ಅಂತೂ ಶಂಕರನನ್ನು ಕಾಲೇಜಿಗೂ ಕಳಿಸಿಯಾಯಿತು. ದ್ವಿತೀಯ ಪಿಯುಸಿ ಮುಗಿಯುತ್ತಿದ್ದಂತೆ ಮನೆಗೆ ಬಂದಾತ ಸೈನ್ಯಕ್ಕೆ ಸೇರುವ ಇಚ್ಛೆ ವ್ಯಕ್ತ ಪಡಿಸಿದ. ತಾಯಿಗೆ ಆಕಾಶವೇ ಕಳಚಿ ಬಿದ್ದಂತಹ ಅನುಭವ. ಮಗಳನ್ನು ಕಳೆದುಕೊಂಡ ವೇದನೆ ಇನ್ನೂ ಕಡಿಮೆಯಾಗಿರಲಿಲ್ಲ. ಈಗ ಇದ್ದೊಬ್ಬ ಮಗನೂ ಹೀಗಂದರೆ ಹೆತ್ತೊಡಲಿಗೆ ಹೇಗಾಗಬೇಡ? ಅತ್ತಳು, ಗೋಗರೆದಳು, ಗಂಡನ ಮೊರೆಗೂ ಹೋದಳು. ಮನೆಯ ಆರ್ಥಿಕ ಸ್ಥಿತಿ ಹೀಗಿರುವಾಗ ಮಗ ನಾಲ್ಕು ಕಾಸು ದುಡಿದರೆ ಒಳ್ಳೆಯದು ಎನ್ನುವ ಭಾವನೆ ಅದಾಗಲೇ ಸುಬ್ರಾಯರ ಮನಸ್ಸಿನಲ್ಲಿ ಮೊಳಕೆಯೊಡೆದಿತ್ತು. ಹಾಗಿರುವಾಗ ಮಗನಿಗೆ ತಿದ್ದಿ- ತೀಡಿ ಬುದ್ಧಿ ಹೇಳುವ ಪರಿಸ್ಥಿತಿಯಲ್ಲಿ ಅವರಂತೂ ಇರಲಿಲ್ಲ.
ಮಗ ಸೈನ್ಯಕ್ಕೆ ಸೇರಿದ. ಅಕ್ಕ-ಪಕ್ಕದ ಮನೆಯವರೆಲ್ಲ ಸೈನ್ಯದ ಬಗ್ಗೆ, ಯುದ್ಧದ ಬಗ್ಗೆ ಹೇಳಿ-ಹೇಳಿ ಸರಸೂಳ ತಲೆ ಕೆಡಿಸುತ್ತಿದ್ದರು. ಮೊದಲೇ ತಾಯಿ ಕರುಳು; ಮಗ ಯಾವಾಗ ಬರುತ್ತಾನೆ ಎಂದು ಕಾಯುವುದೇ ಆಕೆಯ ದಿನಚರಿ ಆಗಿಹೋಗಿತ್ತು. ಆ ದಿನ ಖಂಡಿತವಾಗಿ ಬಂತು. ದೀಪಾವಳಿಗೆ ಬಂದಾತ ತಿಂಗಳ ಕೊನೆಯವರೆಗೂ ಇರುವುದಾಗಿ ಹೇಳಿದ್ದ. ಬರುವಾಗ ಕಾಶ್ಮೀರದಿಂದ ಸಿಹಿ ತಿಂಡಿಗಳು, ತಾಯಿಗಾಗಿ ಒಂದು ಸೀರೆ, ಅಪ್ಪನಿಗಾಗಿ ಶರ್ಟ್‍ನ್ನೂ ತಂದಿದ್ದ.
ಊರಿಗೆ ಬಂದಾತನೇ ಮನೆಯಲ್ಲೊಂದು ಬಾವಿ ತೋಡಿಸಿದ. ಊರಲ್ಲಿ ಯಾರ ಮನೆಯಲ್ಲೂ ಇಲ್ಲದ ಶೌಚಾಲಯದ ನಿರ್ಮಾಣವೂ ಆಯಿತು. ತಂದೆಯ ಹೃದಯ ತುಂಬಿ ಬಂದಿತ್ತು. ದೀಪಾವಳಿಯ ಹೋಳಿಗೆ ತಿಂದು ಮತ್ತೆ ತನ್ನ ಕಾರ್ಯಕ್ಕೆ ವಾಪಸಾಗಲು ಹೊರಟುನಿಂತ. ತಾಯಿಯ ಕಣ್ಣುಗಳು ಮಗನ ಕಣ್ಣುಗಳನ್ನು ನೇರವಾಗಿ ನಿಂತು ನೋಡದಾದವು. ಹೋಗುವಾಗ ಆತನೇ ಅಡುಗೆ ಮನೆಗೆ ಬಂದು “ಬರ್ತೇನೆ ಆಯಿ…” ಅಂದ. “ಹಂ…” ಎಂದು ಸಿಂಬಳವನ್ನು ಸೀರೆ ಸೆರಗಿಂದ ಒರಸುತ್ತ ಹೊರಬಂದಳು. ಒಂದಿಷ್ಟು ತಿಂಡಿ ಮಾಡಿಟ್ಟಿದ್ದಳು. ಎಲ್ಲವನ್ನೂ ಅವನ ಬಳಿಯಿಟ್ಟು, “ಟ್ರೇನ್ ನಲ್ಲಿ ತಿನ್ನು.” ಎಂದಳು. “ಇಲ್ಲ ಆಯಿ…ಇದೆಲ್ಲ ನನ್ನ ಫ್ರೆಂಡ್ಸ್ ಗೆ” ಎಂದು ಸೂಟ್ ಕೇಸ್‍ನಲ್ಲೇ ಜಾಗಮಾಡಿದ.
ಹೋದ ನಾಲ್ಕೇ ತಿಂಗಳಲ್ಲಿ ಪತ್ರವೊಂದು ಮನೆಗೆ ಬಂತು. ಪಕ್ಕದ ಮನೆ ಸಂತೋಷ ಓದಿ ಹೇಳಿದ “ಸರಸತ್ತೆ… ಶಂಕರಣ್ಣನಿಗೆ ಕಾರ್ಗಿಲ್‍ಗೆ ಯುದ್ಧದಲ್ಲಿ ಪಾಲ್ಗೊಳ್ಳಬೇಕಂತೆ…” ‘ಯುದ್ಧ’ ಎಂಬ ಶಬ್ದ ಕೇಳಿದೊಡನೆಯೆ ಹೃದಯಕ್ಕೆ ಯಾರೋ ಚೂರಿಯಿಂದ ತಿವಿಯುತ್ತಿರುವ ಅನುಭವವಾಯಿತು. ಓಡಿಹೋಗಿ ದೇವರ ಕೋಣೆಯಲ್ಲಿ ತುಪ್ಪದ ದೀಪ ಹಚ್ಚಿದಳು.
ಏನು ಆಗಬಾರದೆಂದಿತ್ತೋ ಅದೇ ನಡೆದಂತಿತ್ತು! ಶಂಕರನ ನಿಧನವಾಗಿದೆಯೆಂದು ತಿಳಿದು ಬಂದಾಗ ತಂದೆ ಮಂಜಿನಂತೆ ತಣ್ಣಗಾಗಿ ಕುಳಿತುಬಿಟ್ಟರು. ತಾಯಿ ಮೂರ್ಛೆ ಹೋದಳು. ಶಂಕರನ ಹೆಣ ಸಿಕ್ಕಿರಲಿಲ್ಲ. ದಿನ ಕಳೆಯಿತು. ಗೋಕರ್ಣಕ್ಕೆ ಹೋಗಿ ಶಂಕರನ ಕಾರ್ಯವನ್ನೂ ಪೂರೈಸಿದರು. ಆದರೆ ಹೆತ್ತೊಡಲು ಇನ್ನೂ ತನ್ನ ಕೂಸಿನ ನಿರೀಕ್ಷೆಯಲ್ಲಿತ್ತು. ಆತ ಬಂದೇ ಬರುತ್ತಾನೆನ್ನುವ ಭ್ರಮೆಯೊಂದು ಮೂಡಿತ್ತು.
ಸರಸು ಈಗಲೂ ಕಾಯುತ್ತಲೇ ಇದ್ದಾಳೆ. ಕಾರ್ಗಿಲ್ ಯುದ್ಧ ಮುಗಿದು ನಾಲ್ಕು ವರ್ಷಗಳಾಗುತ್ತ ಬಂತು. ಸ್ಫೋಟಗೊಂಡ ಟ್ಯಾಂಕರ್ ನಲ್ಲಿದ್ದ ವೀರಯೋಧ ಶಂಕರ ಹುತಾತ್ಮನಾಗಿದ್ದನ್ನು ಕಂಡವರಿದ್ದಾರೆ. ಆದರೆ ಆ ತಾಯಿ ನಂಬಬೇಕಲ್ಲ. ಬೆಳಿಗ್ಗೆ ಮತ್ತು ಸಂಜೆಯ ಬಸ್ಸನ್ನು, ಬಸ್ಸ್‍ನಿಂದ ಇಳಿಯುವವರನ್ನು ದಿನಾ ಅಂಗಳದಲ್ಲಿ ನಿಂತು ನೋಡುತ್ತಾಳೆ. ಆದರೆ ಶಂಕರನನ್ನು ಬಿಟ್ಟು ಎಲ್ಲರೂ ಹತ್ತುತ್ತಾರೆ, ಇಳಿಯುತ್ತಾರೆ.
“ದೊಡ್ಡಾಯಿ…” ಹೊರಗಿನಿಂದ ಯಾವುದೋ ಯುವಕನ ಕೂಗು. ತಟ್ಟನೆ ಹೊಳೆಯಿತು, ಇದು ಥೇಟ್ ಶಂಕರನದೇ ದನಿ. ಸುಬ್ರಾಯರು ಕವಳ ಜಗಿಯುತ್ತ, “ಸರೂ… ನೋಡೇ, ಯಾರು ಬಂದವರೆ ಅಂತ…” “ದೊಡ್ಡಾಯಿ… ದೊಡ್ಡಾಯಿ…” “ಸರೂ…ಯಾವ ಲೋಕದಲ್ಲಿದ್ದಿಯೇ? ಹಂ…ಅಂವ ನಿನ್ನ ತಂಗಿ ಅದೇ … ಸರೋಜಾಳ…ಕಿರೀ ಮಗ ಪ್ರಮೋದ.” “ಓ! ಪ್ರಮೋದ…ಒಲೆ ಮುಂದೆ ಕೂತಿದ್ದೆ. ಕಣ್ಣು ಮಂಜಾಗಿದೆ…” ಪ್ರಮೋದನನ್ನು ಗಟ್ಟಿಯಾಗಿ ಹಿಡಿದಳು. ಆಕೆಯ ಕಣ್ಣಿನಿಂದ ಬಿದ್ದ ಎರಡು ಹನಿಗಳು ಪ್ರಮೋದನ ಬೂಟಿನ ಮೇಲೆ ಬಿದ್ದದ್ದು ಆತನಿಗೆ ತಿಳಿಯಿತೋ ಇಲ್ಲವೋ, ಆ ಭಗವಂತನೇ ಬಲ್ಲ!
1 thought on “ನಿರೀಕ್ಷೆ”
ಕತೆ ಚೆನ್ನಾಗಿದೆ