‘ಅಮ್ಮಾ ನೀನು ಫ್ರೈಡ್‍ರೈಸ್‍ಐಟಂ ಮಾಡಕ್ಕಾದ್ರೆ ಈರುಳ್ಳಿಯನ್ನು ಇನ್ನೂ ಬ್ರೌನಿಷ್ ಆಗುವವರೆಗೆ ಹುರಿದಿದ್ರೆ ಇನ್ನೂ ಹೆಚ್ಚು ರುಚಿ ಬರತಿತ್ತು. ಮೊದಲು ಈರುಳ್ಳಿ, ಬೆಳ್ಳುಳ್ಳಿಯನ್ನು ಫ್ರೈ ಮಾಡಿ ಒಂದ್ಕಡೆ ತೆಗೆದಿಟ್ಟು ಉಳಿದ ತರಕಾರಿಯನ್ನು ಒಂದೊಂದಾಗಿ ಹುರಿದು ಮಸಾಲೆ ಹಾಕಿ ಅನ್ನಾ ಹಾಕವು’ಎಂದು ಮಗ ಹೇಳಲಾರಂಭಿಸಿದ. ‘ಈಗ ಏನಾಗಿದೆ ಊಟ ಮಾಡು ಸುಮ್ಮನೆ..ಎಂದೆ.‘ಅಮ್ಮಾನಿನ್ನೆಯೂಟ್ಯೂಬಿನಲ್ಲಿ ಸಂಜೀವ್‍ಕಪೂರ್ ಮಾಡುವ ಫ್ರೈಡ್‍ರೈಸ್ ನೋಡಿದ್ದೆ. ಅವನು ಎಲ್ಲವನ್ನೂ ಸಪರೇಟ್ ಆಗಿ ಹುರಿದಿದ್ದ.ಅದು ಇನ್ನೂ ಹೆಚ್ಚು ರುಚಿ ಆಗಿತ್ತು!’ಎಂದ.ನೋಡಿದ್ರೆ ರುಚಿ ಹೇಗೋ ಗೊತ್ತಾಗುತ್ತದೆ.ತಿಂದರಲ್ಲವೇನೋ ತಿಳಿಯುವುದು? ಎಂದು ವಾದ ಮಾಡಿದೆ.ನನಗೆ ಆಹಾರವನ್ನು ನೋಡಿದರೆ ತಿಳಿಯುತ್ತದೆ ಎಂದ. ಸರಿ ಹಾಗದರೆ ಯೂಟ್ಯೂಬಿನಲ್ಲಿ ನೋಡಿದ ಪದ್ದತಿಯಲ್ಲಿ ಒಂದು ದಿನ ಅದನ್ನು ಮಾಡು, ಆಮೇಲೆ ನಾನು ಸೋಲೊಪ್ಪಿಕೊಳುತ್ತೇನೆ ಎಂದೆ.(ಮನದೊಳಗೆ ಒಂದು ದಿನ ಅಡುಗೆ ಮಾಡುವ ಕೆಲಸ ಕಡಿಮೆಆಗುತ್ತದೆಎನ್ನುವ ಆಸೆಯೂ ಇತ್ತು) ಅವನೊಪ್ಪಿದ.
ಮರುದಿನ ಮಗನ ಬಳಿ ಇವತ್ತು ಅಡುಗೆ ಮಾಡುತ್ತೀಯೇನೋಎಂದೆ ಮೂಡಿಲ್ಲ ಎಂದ.ಇನ್ನೊಂದು ಪ್ರಿಜ್ಜಿನ ತರಕಾರಿ ಬಾಕ್ಸ ನೋಡಿ ನನಗೆ ಬೇಕಾದ ತರಕಾರಿಗಳಿಲ್ಲ ಎಂದ.ಮತ್ತೊಂದು ದಿನ ಪರೀಕ್ಷೆ ತಯಾರಿ ಮಾಡುವುದಿದೆ ಎಂದ.ಆದರೂ ನಾನು ದಿನ ದಿನವೂ ಇವತ್ತು ಅಡುಗೆ ಮಾಡುತ್ತೀಯೇನೋ ಎಂದು ತಲೆ ತಿನ್ನಲಾರಂಭಿಸಿದೆ.ಒಂದು ವಾರದ ನಂತರಇವತ್ತು ಫ್ರೈಡ್‍ರೈಸ್ ಮಾಡುವೆನೆಂದ.ಅವನು ಅಡುಗೆ ಮಾಡಿದರೆ ನಾನು ಆರಾಮವಾಗಿ ಕುಳಿತು ಕತೆ ಪುಸ್ತಕ ಓದಬಹುದೆಂದು ಸೋಪಾದಲ್ಲಿ ಕುಳಿತೆ. ನೀ ಹಾಗೆ ಕುಳಿತರೆ ನಾನು ಅಡುಗೆ ಮಾಡುವುದು ಹೇಗೆ? ತರಕಾರಿ ಹೆಚ್ಚಿಕೊಡು ಎಂದ. ಗಜ್ಜರಿಯನ್ನು ಈ ಸೈಜಿಗೆ ಹೆಚ್ಚು, ಡೊಣ್ಣ ಮೆಣಸಿನಕಾಯಿ ತೆಳ್ಳಗೆ ಉದ್ದಕೆ ಹೆಚ್ಚು ಎಂದೆಲ್ಲ ಹೇಳುತ್ತ ಹೋದ.ಅಂತೂ ಅವನು ಹೇಳಿದ್ದನ್ನೆಲ್ಲ ಪಾಲಿಸಿ ಮತ್ತೆ ಸೋಫಾದತ್ತ ಹೊರಟೆ.ಅಮ್ಮಾ ಬಾ ಇಲ್ಲಿ ನಾನು ಹೇಗೆ ಒಗ್ಗರಣೆ ಹಾಕುತ್ತೇನೆ ನೋಡಿಕೋ. ನಾನು ಇವತ್ತೊಂದೇ ದಿನ ಇದನ್ನು ಮಾಡುವುದು ನೀನು ನೋಡಿ ಕಲಿತು ಬಿಟ್ಟರೆ ನಂತರ ಆಗಾಗ ಇದೇ ರೀತಿ ರೈಸ್ ಮಾಡಿ ಕೊಡಬಹುದು ಎಂದ!.ತರಕಾರಿಯನ್ನು ಒಂದೊಂದಾಗಿ ಹುರಿದು ಮಸಾಲೆ ಹಾಕಿದ. ಒಗ್ಗರಣೆ ಹಾಕುವಾಗ ಇಷ್ಟು ತಾಳ್ಮೆ ಬೇಕು. ನೀನು ಸ್ವಲ್ಪಅವಸರ ಮಾಡುತ್ತೀಯಾ ಎಂದವನೇ ನನ್ನ ಕೆಲಸ ಮುಗಿಯಿತು ಒಗ್ಗರಣೆಗೆ ಉಪ್ಪುಅನ್ನ ಹಾಕಿ ಹುರಿದು ಬಿಡು. ನಾನು ಮಿಕ್ಸ ಮಾಡಲು ಹೋದರೆ ಅಭ್ಯಾಸ ಇಲ್ಲದಿರುವುದರಿಂದ ಪಾತ್ರೆಯಿಂದ ಹೊರಗೆಲ್ಲ ಚೆಲ್ಲಿಹೋಗುತ್ತದೆ ಎಂದ.ಅಯ್ಯೋ ಈ ಮುದ್ದಿನ ಮಗನ ಅಡುಗೆ ಎಂದರೆ ಒಗ್ಗರಣೆ ಭಾಗ್ಯ ಅಷ್ಟೇಎಂದು ಮನದಲ್ಲೇ ನಕ್ಕೆ. ನೆನಪು ಗತಕ್ಕೆಜಾರಿತ್ತು…
ಬಾಲ್ಯದಲ್ಲಿ ಅಮ್ಮಾ ಏ ಅಮ್ಮಾಎಂದು ಕರೆಯುವುದೇನು ಕೂಗಿದರೂ ಪಾತ್ರೆಯತ್ತಲೇ ಕಣ್ಣು ಕೀಲಿಸಿ ಧ್ಯಾನಸ್ಥ ಮನಸ್ಥಿತಿಯಲ್ಲಿ ಅವಳು ಕೆಲಸ ಮಾಡುತ್ತಿದ್ದಾಳೆಂದರೆ ಒಗ್ಗರಣೆ ಹಾಕುತ್ತಿದ್ದಾಳೆಂದರ್ಥ ಮಾಡಿಕೊಳ್ಳಬೇಕಿತ್ತು. ‘ಒಗ್ಗರಣೆ ಹಾಕಕಾದ್ರೆ ನಿನ್ನಮ್ಮ ಕಿವಿ ಕೆಪ್ಪಾಗ್ತು’ ಎಂದು ಅಜ್ಜಗೇಲಿ ಮಾಡಿದರೂ ಅಮ್ಮ ತನ್ನ ಸ್ವಭಾವದಲ್ಲಿ ಸ್ವಲ್ಪವೂ ಬದಲಾವಣೆ ಮಾಡಿಕೊಳ್ಳುತ್ತಿರಲಿಲ್ಲ. ನಾನು ಕಾಲು ಕೆದರಿ ನಾಲ್ಕಾರು ಬಾರಿ ಅವಳೊಂದಿಗೆ ಅದೇ ವಿಷಯದಲ್ಲಿ ಕೋಳಿ ಜಗಳ ಕಾದಿದ್ದೂ ಆಯ್ತು. ಸೋತಿದ್ದೂ ಆಯ್ತು.ಮತ್ತೊಂದು ದಿನ ತಾಳ್ಮೆಯಿಂದ ಕೇಳಿದೆ ಅಮ್ಮಾ ಒಗ್ಗರಣೆ ಮಾಡುವಾಗ ಯಾಕೆ ಮಾತನಾಡುವುದಿಲ್ಲ? ಆಹಾರವನ್ನು ತಿನ್ನುವುದಕ್ಕಿಂತಲೂ ಮೊದಲು ಏನನ್ನಾದರೂ ತಿನ್ನಬೇಕು ಎನ್ನಿಸುವುದು ಅದರ ಪರಿಮಳದಿಂದ.ಒಗ್ಗರಣೆ ಕಡಿಮೆ ಹುರಿದರೆ ಹಸಕಲಾಗ್ತು ಹೆಚ್ಚು ಹುರಿದರೆ ಕಹಿ ಆಗ್ತು.ಒಗ್ಗರಣೆ ಹದತಪ್ಪಿದರೆ ಇಡೀ ಅಡುಗೆ ಹಾಳಾಗ್ತು ಎಂದು ಒಗ್ಗರಣೆಯ ಮಹತ್ವ ತಿಳಿಸಿ ಹೇಳಿದಳು.ಅವಳು ಮಾಡುವ ಅಪ್ಪೆಹುಳಿಯ ಇಂಗಿನ ಒಗ್ಗರಣೆಉಂಡು ಕೈ ತೊಳೆದ ಮೇಲೂ ಘಮ್ಮೆನ್ನುವ ಪರಿಮಳ ಸೂಸುತ್ತಿತ್ತು!
ನನಗೆ ಮದುವೆ ನಿಶ್ಚಯವಾಗಿತ್ತು.ನಾನು ಸೇರುವ ಮನೆಯ ಎಲ್ಲರ ಬಗ್ಗೆ ಒಂದಿಷ್ಟು ಕುತೂಹಲವಿತ್ತು.ನಿನ್ನಅಮ್ಮ ಹೇಗಿದ್ದಾರೆ?ಎಂದು ಹುಡುಗನ ಬಳಿ ಕೇಳಿದೆ.ನೋಡಲು ಬೆಳ್ಳಗೆ ಚೆನ್ನಾಗಿದ್ದಾಳೆ, ಬಲು ಜಾಣೆ ನನ್ನಮ್ಮರುಚಿಯಾಗಿಅಡುಗೆ ಮಾಡುತ್ತಾಳೆ. ನೀರಿಗೆಒಗ್ಗರಣೆ ಹಾಕಿದರೂ ಹೊಟ್ಟೆತುಂಬಾ ಊಟ ಮಾಡುವಷ್ಟು ಸ್ವಾದಿಷ್ಟಕರವಾಗಿರುತ್ತದೆಎನ್ನಬೇಕೆ!ನನಗೆ ಮುಂದೇನೂ ಕೇಳುವ ಧೈರ್ಯವೇ ಬರಲಿಲ್ಲ.ಕಾಲೇಜು, ಸಂಗೀತಾಭ್ಯಾಸ, ಬಿಡುವಿದ್ದಾಗಲೆಲ್ಲಕಾದಂಬರಿಯ ಓದಿನಲ್ಲಿ ಮುಳುಗುತ್ತಿದ್ದ ನನಗೆ ಪಾಕಶಾಸ್ತ್ರದ ಪರಿಚಯಕಡಿಮೆಯೇಇತ್ತು.ಪಾಕ ಪ್ರವೀಣೆ ಅಮ್ಮನ ಮಗ ನನ್ನನ್ನು ಮದುವೆಯಾಗಿ ಏನೇನು ಪಾಡು ಪಡಬೇಕೋ ಪಾಪ ಎಂದು ಮರುಕಪಟ್ಟೆ ಮನದಲ್ಲಿ.ಆ ಕನಿಕರದಲ್ಲಿಯೇ ಮದುವೆಯಾದ ಮೇಲೆ ಒಂದಷ್ಟುಅಡುಗೆಯನ್ನುಅತ್ತೆಯ ಬಳಿಯೇ ಕಲಿತೆ.
ಒಂದುಕ್ಯಾಮರಾಇದ್ದರೆ ಪೋಟೋ ಹೊಡೆದು ಒಂದಿಷ್ಟು ಲೇಖನ ಬರೆದುಬಿಡಬಹುದು ಎನಿಸಿದಾಗ ರೀ ನನಗೊಂದುಕ್ಯಾಮರಾ ಕೊಡಿಸ್ರೀ ಎಂದು ಪತಿರಾಯನಿಗೆ ದುಬ್ಬಾಲು ಬಿದ್ದು ಅವರು ಕೊಡಿಸಿದ್ದೂ ಆಯ್ತು.ಮೊದಲ ದಿನ ಕೊರಳಿಗೆ ಕ್ಯಾಮರಾ ತೂಗು ಹಾಕಿಕೊಂಡು ಕೈತೋಟದಲ್ಲಿ ಆದ ಎಲ್ಲ ಹೂವುಗಳ ಫೋಟೋ ಹೊಡೆಯುತ್ತಿದ್ದೆ.ಮನೆ ಮುಂದಿನ ಕರೆಂಟ್ ಲೈನ್ ಮೇಲೆ ನೀಲಕಂಠ ಪಕ್ಷಿಯೊಂದು ಬಂದು ಕುಳಿತಿತು. ಅದರ ಫೋಟೋ ಹೊಡೆದು ಎಲ್ಲರ ಮುಂದೆ ಡೌಲುಬಡಿಯಬೇಕೆಂಬ ಆಸೆಯಲ್ಲಿ ಕ್ಯಾಮರಾ ಕ್ಲಿಕ್ಕಿಸಿದೆ. ಅಷ್ಟರೊಳಗೆ ಹಕ್ಕಿ ಹಾರಿ ಹೋಗಿ ಮೂರು ತಂತಿಯ ಚಿತ್ರವೊಂದೇ ಸೆರೆಯಾಗಿ ಪೆಚ್ಚಾದೆ.ಅದನ್ನೆಲ್ಲ ಗಮನಿಸುತ್ತಿದ್ದ ನನ್ನ ಗಂಡ ಇದನ್ಯಾವ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆಯೋ ಮಾತಿನ ಒಗ್ಗರಣೆ ಕೊಡಬೇಕೆ?
ಶಿರಸಿಯಲ್ಲಿದ್ದಾಗ ಇಂಗು, ಕರಿಬೇವು, ಒಣಮೆಣಸಿನಕಾಯಿ ಒಗ್ಗರಣೆಯ ಕಂಪಿನ ಘಮ ನಿತ್ಯವೂ ಮೂಗಿಗೆ ಬಡಿಯುತ್ತಿತ್ತು, ಧಾರವಾಡದಲ್ಲಿದ್ದಾಗ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಘಮದ ಕಂಪು ದಿನವೂ ಮೂಡಿಗಗಡರುತ್ತಿತ್ತು. ಮೈಸೂರಿನಲ್ಲಿ ಗೂಡಂಗಡಿಗಳ ಮುಂದೆ ಫೇರಿ ಹೊರಟರೆ ಹುರಿದ ಈರುಳ್ಳಿ ಘಮ, ಗರಂ ಮಸಾಲೆಯ ಘಾಟು ಒಗ್ಗರಣೆಯ ಮುಗಿದಿದ್ದನ್ನು ತಿಳಿಸುತ್ತದೆ. ಊರಿಂದೂರಿಗೆ, ವ್ಯಕ್ತಿಯಿಂದ ವ್ಯಕ್ತಿಗಳಿಗೆ ಒಗ್ಗರಣೆಯ ಶಿಸ್ತು ಬದಲಾಗುವುದಂತೂ ಹೌದೇ ಹೌದು..ಯಾವುದಕ್ಕೆ ಎಣ್ಣೆ ಒಗ್ಗರಣೆ ಯಾವುದಕ್ಕೆ ಬೆಣ್ಣೆ ತುಪ್ಪದ ಒಗ್ಗರಣೆ, ಯಾವುದನ್ನು ಹೆಚ್ಚು ಹುರಿಯಬೇಕು ಯಾವುದು, ಬೇಗ ಹುರಿಯುತ್ತದೆಎಂದೆಲ್ಲಒಂದು ಬಗೆಯ ಅಧ್ಯಯನಶೀಲತೆಯಿಂದ ನೋಡುವ ಪಾಕಪ್ರವೀಣೆಯರು ಕೆಲವರಾದರೆಒಗ್ಗರಣೆಗೆ ಹಾಕಬೇಕದದ್ದನ್ನೆಲ್ಲ ಬಾಣಲೆಗೆ ಹಾಕಿ ಒಂದಿಷ್ಟು ಎಣ್ಣೆ ಸುರುವಿ ಒಂದಷ್ಟು ಬಿಸಿಮಾಡಿಬಿಡುವ ಅಸಡ್ಡೆಯವರೂ ಒಂದಿಷ್ಟು ಜನ. ಮಾಡಿದ ಅಡುಗೆ ಊಟ ಮಾಡಕ್ಕಾದ್ರೆ ನೀನು ಕೊತ್ತಂಬ್ರೀ ಬೀಜ ಹೆಚ್ಗೆ ಹುರಿದು ಹಾಕಿದ್ದೆಅದಕ್ಕೇ ಸಾರು ರುಚಿಆಜಿಲ್ಲೆಎಂದುಕೊಂಕು ತೆಗೆಯುವವರೂ ಇದ್ದಾರೆ! ಇಂಥವರಿಗೆ ಒಗ್ಗರಣೆಗೂ ಮೂಗಿಗೂ ನಾಲಿಗೆಗೂ ನೇರಾ ನೇರ ಸಂಬಂಧ ಇದ್ದವರು ಎಂದು ಬಿಡಬಹುದು! ನಮ್ಮ ಮನೆಯ ಕೆಲಸದವಳು ಒಗ್ಗರಣೆಗೆ ಒಗ್ಗರಾಣಿ ಎನ್ನುತ್ತಿದ್ದಳು.ಒಗ್ಗರಣೆ ಅಡುಗೆಯ ರಾಣಿಯೇ ಖರೇಎಂದು ನನಗನ್ನಿಸುತ್ತದೆ.
ಸಾರಿಗೆ ಇಂಗು ಸಾಸಿವೆ ಒಗ್ಗರಣೆ ಕೊಟ್ಟರೆ ಅಡುಗೆ ಮುಗಿತು ಎಂದೊಂದು ದಿನ ಕಬ್ಬಿಣದ ಸೌಟಿನ್ನಿಒಲೆಯ ಮೇಲಿಟ್ಟುಒಂದು ಚಮಚ ತುಪ್ಪಹಾಕಿ ಬಿಸಿ ಮಾಡಲುಇಟ್ಟೆ.ಅಷ್ಟರಲ್ಲಿಕಾಲಿಂಗಬೆಲ್ಲ ಸಪ್ಪಳ ಮಾಡಿತು.ಒಲೆಯಉರಿಆರಿಸಲು ಮರೆತು ಬಾಗಿಲು ತೆರೆಯಲು ಹೋದೆ.ಬಂದ ಅತಿಥಿಗಳನ್ನು ಸ್ವಾಗತಿಸಿ ತಿರುಗಿಅಡುಗೆ ಮನೆಗೆ ಬರುವಷ್ಟರಲ್ಲಿ ಇಡೀ ಒಗ್ಗರಣೆ ಸೌಟಿಗೇ ಬೆಂಕಿ ಹೊತ್ತಿ ಧಗಧಗನೆ ಉರಿಯುತ್ತಿತ್ತು. ಮನೆ ತುಂಬ ಘಾಟು.ನನಗೋ ಬಂದವರೆದುರು ಮಂಗಳಾರತಿ ಎತ್ತಿಸಿ ಕೊಂಡಂತಾಗಿತ್ತು.ಎಲ್ಲಾ ಕಿಟಕಿ ಬಾಗಿಲುಗಳನ್ನು ತೆಗೆದು ಫ್ಯಾನ್ ತಿರುಗಿಸಿ ಘಾಟು ಹೊರಗೆ ಹಾಕಿದ ಮೇಲೆಯೇ ಮನೆ ಮನಸ್ಸು ಶಾಂತವಾಗಿದ್ದು.ಅಪರೂಪಕ್ಕೆಇಂತಹ ಅಧ್ವಾನಗಳೆಲ್ಲ ಇದ್ದರೂ ಕಮ್ಮನೆಯ ಒಗ್ಗರಣೆ ಇಲ್ಲದಿದ್ದರೆ ಅಮೃತದಂತಹ ಅಡುಗೆ ಆಗಲಾರದು ಅಲ್ವೇ?
ಅಕ್ಷರಗಳಲ್ಲಿ ಒಗ್ಗರಣೆ ಬಗ್ಗೆ ಬರೆಬರೆದು ಸಾಕಾಗಿ ಫೇಸ್ಬುಕ್‍ಖಾತೆ ತೆಗೆದಿದ್ದೇ ತಡ ಹೆಣ್ಣುಗಂಡೆಂಬ ಬೇಧವಿಲ್ಲದೇ ತರಹೇವಾರಿ ಅಡುಗೆ ಮಾಡುವವರು ಚ್ಯೊಂಯ್ಯ ಚೊಂಯ್ಯ ಒಗ್ಗರಣೆ ಹಾಕುತ್ತ ಸಾಸಿವೆ ಸಿಡಿಸಿದಂತೆ ಮಾತು ಸಿಡಿಸುತ್ತಿದ್ದನ್ನು ಕಂಡು ಮೂಗರಳಿಸಿದೆ.. ಛೇಚೂರು ಪರಿಮಳ ಬರುತ್ತಿಲ್ಲ.. ಗೊಣಗಿದೆ!ಎಡ_ಬಲ ಸಿದ್ದಾಂತದವರು, ಹೆಂಗಸರು_ ಗಂಡಸರು, ಸಂಪ್ರದಾಯವಾದಿಗಳು ಬಿಂದಾಸ್ ಪ್ರವೃತ್ತಿಯವರು. ವಿವಿಧ ಜಾತಿ ಮತದವರು, ವೆಜ್ಜು- ನಾನ್ವೆಜ್ಜಿನವರು, ಘೋರಾಭಿಮಾನಿಗಳು- ಕಡು ವಿರೋಧಿಗಳು, ಪರಸ್ಪರ ಬರಹದೊಗ್ಗರಣೆಯನ್ನುಕಮೆಂಟ್ ಬಾಕ್ಸಿನಲ್ಲೂ ಹಾಕುವುದನ್ನು ನೋಡುತ್ತ ಅಕಟಕಟಾ… ಒಗ್ಗರಣೆಯೇ! ಎಂದುಲಿದೆ.
****
4 thoughts on “ಒಗ್ಗರಣೆ”
ಲಘುಬರಹ ಒಗ್ಗರಣೆ ಚೆನ್ನಾಗಿದೆ.
ಇದು ಹೊಗಳಿಕೆಯ ಒಗ್ಗರಣೆ ಅಲ್ಲ ಆಯ್ತಾ ಮೇಡಂ….
ಓಕೆ,
ಧನ್ಯವಾದಗಳು ಸರ್
ಒಗ್ಗರಣೆಯ ಘಮ ಜೋರಾಗಿದೆ. ತುಪ್ಪದ ಒಗ್ಗರಣೆಯೇ ಇರಬೇಕು.
ಹೌದು ಹೌದು.. ನಮನಮೂನಿ ಒಗ್ಗರಣೆ. ಧನ್ಯವಾದಗಳು ಮೇಡಂ