ಸೂಜಿ ಬಿದ್ದ ಸದ್ದಿಗೆ ನೆಗೆದು ಬಿದ್ದು ಕಣ್ತೆರೆದು ಚುರೆಂದು ಕೂಗಿ ಚಡಪಡಿಸುವಾಗ ಜೋಲು ಮೊಲೆಯ ತೊಟ್ಟನ್ನು ಬಾಯೊಳಗೆ ತುರುಕಿಸಿದರೂ ಹಠ ಬಿಡದಾಗ ತಲೆ ನೇವರಿಸಿ ಲಾಲಿ ಹಾಡುತ್ತಾ ಮುದ್ದು ಮಾಡುವವಳು ಅವಳಲ್ಲದೆ ಮತ್ಯಾರು ಮಣ್ಣಿನ ಮಡಕೆ ಯೊಳಗಿನ ಗಂಜಿ ಕೊತ ಕೊತ ಕುದಿಯುತಿದೆ ನೀರಿಲ್ಲದೆ ಒಲೆಯ ಬೆಂಕಿ ಆರಿ ಕೆಂಡವನ್ನು ಬೂದಿ ಮುಚ್ಚಿದೆ ಊದು ಗೊಳವೆಯ ಹಿಡಿದು ಉಸಿರು ಗಟ್ಟಿ ಊದಿದಾಗ ಬೇತಾಳನಂತೆ ಕಾಣುವವಳು ಅವಳಲ್ಲದೆ ಮತ್ಯಾರು ಚಿಪ್ಪಿನ ಕೈಲನ್ನು ಕೊಡವಿ ಸೆರಗಿನಿಂದಲೇ ಒರಸಿ ಕತ್ತಲೆ ಯೊಂದಿಗೆ ಹೊಂದಿಕೆ ಮಾಡಿಕೊಂಡ ಕಪ್ಪು ಮಡಕೆ ಯೊಳಗೆ ತುರುಕಿಸಿ ಅರೆ ಬೆಂದ ಅಗುಳಿನೊಂದಿಗೆ ಅನುನಯದಿ ಮಾತನಾಡಿ ಹೊರ ಬರುವ ಚಿಪ್ಪಿಗೂ ಕಾಣುವುದು ಅವಳಲ್ಲದೆ ಮತ್ಯಾರು ಮನೆ ಎದುರಿನ ಓಣಿಯಲ್ಲಿ ಓಲಾಡಿ ತೂರಾಡುತ್ತ ಮತ್ತನಾಗಿ ಶವದಂತೆ ಬಿದ್ದ ಅಪ್ಪನನ್ನು ಎದೆಗೊರಗಿಸಿ ಕರಗದೆ ಕಲ್ಲಾಗುವವಳು ಮನೆಯ ಮೂಲೆಯಲ್ಲಿ ಮಕಾಡೆ ಮಲಗಿದ ಬಡತನ ಹುಚ್ಚು ದೈವಗಳಂತೆ ಕುಣಿದು ಕುಪ್ಪಳಿಸಿ ನರ್ತಿಸುವಾಗ ಒಡಲೊಡೆದು ಬಿಕ್ಕಳಿಸದೆ ಮುಚ್ಚಿದ ಕಣ್ಣಿನ ಭಾಷೆಯಲ್ಲಿ ಮೌನವಾಗಿರುವವಳು ಅವಳಲ್ಲದೆ ಮತ್ಯಾರು ಕಾಲ ಚಕ್ರ ಉರುಳಿದೆ ಬವಣೆಗಳ ಪೊರೆ ಕಳಚಿಕೊಂಡು ಸಾವಿರ ಸಮಸ್ಯೆಗಳು ತಮ್ಮ ದಾರಿ ಬದಲಿಸಿವೆ ವಿವಿಧಾಕೃತಿಯ ವಿದೇಶಿ ಬ್ರಾಂಡ್ ಗಳು ನಗುತಿವೆ ಕನ್ನಡಿ ಹಿಂದೆ ಬುದ್ಧನ ಅನುಕರಣೆಯಲ್ಲಿ ವೈರಾಗ್ಯಕ್ಕೆ ಬದಲಾದ ಅಪ್ಪ ಇದ್ದುದೆಲ್ಲವ ಬಿಟ್ಟು ಇಲ್ಲದನ್ನು ಹುಡುಕುತಿದ್ದಾನೆ ಅವಳಲ್ಲದೆ ಮತ್ಯಾರು
ಅವಳಲ್ಲದೆ ಮತ್ಯಾರು …..
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಲಕ್ಷ್ಮೀ ರಾಜೀವ ಹೇರೂರು
ಲಕ್ಷ್ಮೀ ರಾಜೀವ್ ಹೇರೂರು ಅವರ ಹುಟ್ಟೂರು ಬ್ರಹ್ಮಾವರದ ಹತ್ತಿರದ ಹೇರೂರು, ಈಗ ಮುಂಬೈಯಲ್ಲಿ ವಾಸ. ಬ್ರಹ್ಮಾವರ ಮಣಿಪಾಲದಲ್ಲಿ ಬಿ. ಎ. ಬಿ. ಎಡ್ ಪದವಿ ಮುಗಿಸಿ ಇತ್ತೀಚಿಗೆ ಮುಂಬೈ ವಿಶ್ವವಿದ್ಯಾಲಯದಿಂದ ಎಂ. ಎ ಪದವಿ ಪಡೆದಿದ್ದಾರೆ . ಒಂದು ಕಥಾ ಸಂಕಲನ ಬೆಳಕು ಕಂಡಿದೆ. ಲೇಖನ ಗಳು , ಕಥೆಗಳು ಕವನಗಳು ಹಲವು ಪತ್ರಿಕೆ ಗಳಲ್ಲಿ ಬೆಳಕು ಕಂಡಿವೆ.
All Posts
4 thoughts on “ಅವಳಲ್ಲದೆ ಮತ್ಯಾರು …..”
ಅತ್ಯುತ್ತಮ ಕವನ
ಘನವಾದ ಸಂದೇಶವನ್ನು ಸಾರುತ್ತದೆ
ಹೊಸತನದ ಬರವಣಿಗೆ
ಅಭಿನಂದನೆಗಳು
ಅವಳಿಲ್ಲದೆ ಜಗವೆಲ್ಲ ಕತ್ತಲೆ. ಎಲ್ಲೆಲ್ಲೂ ಮೆರೆಯುವವಳು. ಅವಳಲ್ಲದೆ ಮತ್ಯಾರು. ಅಭಿನಂದನೆಗಳು 👍💐💐
ಸುಂದರ ಮತ್ತು ಸತ್ಯ ಅಬಲೆಯ ಅಭಿವ್ಯಕ್ತಿ 🥲
ಕಾಲ ಚಕ್ರ ಉರುಳಿದೆ ಬವಣೆಗಳ ಪೊರೆ ಕಳಚಿಕೊಂಡು
ಊದು ಗೊಳವೆಯ ಹಿಡಿದು ಉಸಿರು ಗಟ್ಟಿ
ಊದಿದಾಗ ಬೇತಾಳನಂತೆ ಕಾಣುವವಳು
ವಿವಿಧಾಕೃತಿಯ ವಿದೇಶಿ ಬ್ರಾಂಡ್ ಗಳು ನಗುತಿವೆ ಕನ್ನಡಿ ಹಿಂದೆ
ಬುದ್ಧನ ಅನುಕರಣೆಯಲ್ಲಿ ವೈರಾಗ್ಯಕ್ಕೆ
ಬದಲಾದ
ಅಪ್ಪ ಇದ್ದುದೆಲ್ಲವ ಬಿಟ್ಟು ಇಲ್ಲದನ್ನು ಹುಡುಕುತಿದ್ದಾನೆ
ಅವಳಲ್ಲದೆ ಮತ್ಯಾರು
ಮೆಡಮ್
ಓದಿ ಚೆಂದದ ಕವನ ಅಂತ ಸುಮ್ಮನೇ ಹೇಳುವ ಜಾಯಮಾನ ನನ್ನದಲ್ಲ
ನನಗೆ ತಿಳಿದ ವಿವರಣೆ ನಿಡುವೆ ಸೂಚ್ಯವಾಗಿ.
ಒಂದು ತ್ಯಾಗ, ಪುರುಷನಿಗೂ ಮೀರಿದ
ಗೃಹಸ್ತಿ,ಕುಟುಂಬ ಜವಾಬ್ದಾರಿ,ಗಮನಿಸಿದಾಗ
ನಿಮ್ಮ ಕಾವ್ಯದ ಹಂದರ ನವೋದಯದ ಕೊನೆ ಕೊನೆಗೆ ಹಾಕಿದ್ದು ನೆನಪಾಗುವುದು.
ನಮ್ಮ ಕಾಲದ ತಾಯಂದಿರು ನೆನಪಿಗೆ ಬರುತ್ತಾರೆ.
ಒಲೆ,ಊದುಗೊಳಿವೆ ,ಗಂಡನ ಕುಡಿತ,
ಆಣೆ ಪ್ರಮಾಣ,ಹಾಲೂ ಬತ್ತಿದ ಮೊಲೆಯನ್ನು
ಮಕ್ಕಳ ಬಾಯಿಗೆ ತುರುಕುವ,
ಹಾಗೇ , ಒಡಲೊಡೆದು ಬಿಕ್ಕಳಿಸದೆ ಮುಚ್ಚಿದ ಕಣ್ಣಿನ ಭಾಷೆಯಲ್ಲಿ
ಇದೇ ನಿಜವಾದ ತಾಯ್ತನ ಹಾಗೂ
ಅವಳ ಮೇಲಾಗುವ ಶೋಷಣೆ.
ಇದು ಕೇವಲ ಒಂದು ಕುಟುಂಬ ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ, ಇಡೀ ಸಮುದಾಯದ ಚಿಂತನೆ .
ಒಂದು ಉತ್ತಮ ಕಾವ್ಯದ ಬಹಳಷ್ಟು ಲಕ್ಷಣ
ಇದರಲ್ಲಿವೆ
ಅಭಿನಂದನೆಗಳು 🌹