ನುಮನಹಳ್ಳಿ ಗ್ರಾ. ಪಂ. ಖಾಯಂ ಸದಸ್ಯ ಶ್ರೀ ಗುಂಡಣ್ಣ….

    “ಕಳೆದ ಐವತ್ತು  ವರ್ಷಗಳಿಂದ  ಹನುಮನಹಳ್ಳಿ ಪಂಚಾಯತಿಗೆ  ಸತತವಾಗಿ ಗೆದ್ದು  ಬಂದು  ‘ಸೋಲಿಲ್ಲದ  ಸರದಾರ’ ಎನ್ನುವ ಬಿರುದು ಪಡೆದ  ಶ್ರೀ ಗುಂಡಣ್ಣ…  ಎಂದು  ಅನೇಕ ಪತ್ರಿಕೆಗಳಲ್ಲಿ ಬಂದ  ಸುದ್ದಿಗಳನ್ನು   ನೋಡಿದ  ‘ಟಿ. ವಿ – 111′(ಮೂರು ನಾಮ!) ಸಂಪಾದಕರಿಂದ ರಾತ್ರಿ ಒಂಭತ್ತು ಗಂಟೆಗೆ  ನಾಳೆಯೇ  ಗುಂಡಣ್ಣನವರನ್ನು  ಸಂದರ್ಶನ ಮಾಡಬೇಕೆಂದು ಫೋನ್ ಬಂದಾಗ   ಗೆಳೆಯರೊಂದಿಗೆ ಇದ್ದ ಚಂದ್ರು ಆಗಲೇ ತುಸು ‘ಟೈಟ್’ ಆಗಿದ್ದ.  

ಬೆಳಿಗ್ಗೆ ಹತ್ತು ಘಂಟೆಗೆ ಹನುಮನ  ಹಳ್ಳಿಗೆ ಹೊರಟ ‘ಟಿ. ವಿ – 111’ ನ (ಮೂರು ನಾಮದ!) ಏಕೈಕ ವರದಿಗಾರ ಚಂದ್ರು.   ಇಂದೋ ನಾಳೆಯೋ ಬಿದ್ದು ಹೋಗಬಹುದಾದ ಹನುಮನಹಳ್ಳಿಯ ಪಂಚಾಯತಿ  ಹಳೆಯ  ಕಟ್ಟಡದ  ಎದುರು ಮೂರು ಅಂತಸ್ತಿನ ಭವ್ಯ ಅರಮನೆ ‘ಗಾಂಧಿ  ವಾದಿ ಮತ್ತು ಸಮಾಜ  ಸೇವಕ’ ಗುಂಡಣ್ಣನದು ಎಂದು ಯಾರೂ ಬೇಕಾದರೂ  ಹೇಳಬಲ್ಲರು  ಆ ಹಳ್ಳಿಯಲ್ಲಿ.   ತನ್ನನ್ನು ಸಂದರ್ಶಿಸಲು ಚಂದ್ರು ಎನ್ನುವ ಪತ್ರಕರ್ತ ಬಂದಿದ್ದಾನೆ ಎಂದು   ‘ಅಪರಜ್ಞಾನಿ’  ಗುಂಡಣ್ಣನಿಗೆ ಗೊತ್ತಾಗಲು ತಡವಾಗಲಿಲ್ಲ.  ಕೂಡಲೇ  ತನ್ನ ಓಡ್ಡೋಲಗದೊಂದಿಗೆ  ವರದಿಗಾರನನ್ನು  ಸ್ವಾಗತಿಸಲು ಮನೆಯ  ಅಂಗಳದ ಮುಂದೆ ಬಂದು ನಿಂತ.  

ಚಂದ್ರು  ಮನೆಯತ್ತ ಬರುತ್ತಿದ್ದಂತೆಯೇ,  ಅರೆಕ್ಷಣದಲ್ಲಿ ಗುಂಡಣ್ಣನ ಪಟಾಲಂನ ಅಂತರಂಗಿಕ ಶಿಷ್ಯನೊಬ್ಬ  ಚಂದ್ರುಗೆ ಶಾಲು ಹೊದಿಸಿ ಹೂವಿನ ಹಾರ ಹಾಕಿಯೇ ಬಿಟ್ಟ.  ಸನ್ಮಾನದ  ಬಳಿಕ  ಗಾಂಧಿಜಿ ಚಿತ್ರವಿದ್ದ  ಹಲವು  ಹಸಿರು ಬಣ್ಣದ  ಐದು  ನೂರು ಬೆಲೆಯ ಗರಿ  ಗರಿ  ನೋಟುಗಳು ತುಂಬಿದ್ದ ಕವರನ್ನು ಮತ್ತೊಬ್ಬ ಶಿಷ್ಯ ಚಂದ್ರುವಿನ ಕಿಸೆಯೊಳಗೆ ತುರುಕಿ ನಮಸ್ಕರಿಸಿದ. ಜೊತೆಗೆ ತರಹೇವಾರಿ  ಹಣ್ಣುಗಳು ತುಂಬಿದ ಬುಟ್ಟಿಯನ್ನು ಕೂಡ ಚಂದ್ರುವಿನ  ಕೈಗೊಪ್ಪಿಸಿದ. ಈ ಅನಿರೀಕ್ಷಿತ  ಧಿಡೀರ್ ಗೌರವದ ಸಂಭ್ರಮಕ್ಕೆ  ಚಂದ್ರು ಪಾಪ ಕಕ್ಕಾಬಿಕ್ಕಿಯಾಗಿಬಿಟ್ಟ!  ಹಲವು ಸನ್ಮಾನ  ಮಾಡಿ ಅಭ್ಯಾಸವಿದ್ದ  ವರದಿಗಾರ ಚಂದ್ರು  ಸನ್ಮಾನಿತನಾಗಿದ್ದು  ಇದೇ ಮೊದಲ ಬಾರಿ. ಹಣದ  ಕವರನ್ನು ಕಿಸೆಯಲ್ಲಿ ಮುಟ್ಟಿ ನೋಡಿಕೊಂಡ ಚಂದ್ರು  ಕೂಡಲೇ ಹಿರಿಯರಾದ  ಗುಂಡಣ್ಣ ಅವರ  ಪಾದಪದ್ಮಗಳಿಗೆ  ತಲೆ ಇಟ್ಟು ನಮಸ್ಕರಿಸಿದ. ಇವೆಲ್ಲವನ್ನೂ ಗುಂಡಣ್ಣನ ಅಭಿಮಾನಿಯೊಬ್ಬ ತನ್ನ ವಿಡಿಯೋದಲ್ಲಿ ದಾಖಲಿಸಿದ.  

ಗುಂಡಣ್ಣ ಅವರ  ಹಿಂದೆ ವಿಧೇಯ  ಶಾಲಾ  ಬಾಲಕನಂತೆ  ಚಂದ್ರು ಮನೆಯೊಳಗೆ ಹಿಂಬಾಲಿಸಿದ. ನಂತರ  ಗುಂಡಣ್ಣನ ಆಫೀಸ್ ರೂಮು ಒಳ  ಹೊಕ್ಕು ನೋಡುತ್ತಾನೆ ಚಂದ್ರು,  ನಾಲ್ಕು ದಿಕ್ಕಿನ ಗೋಡೆಗಳಲ್ಲೂ ಮಂತ್ರಿಗಳು –  ಶಾಸಕರು – ಸಂಘ  ಸಂಸ್ಥೆಗಳು –  ಸ್ವ ಸಹಾಯ  ಗುಂಪುಗಳು ಮತ್ತು ಹಳ್ಳಿಯ  ಜನತೆ (ಹೆಚ್ಚಾಗಿ ಬಂಧುಗಳು ಮತ್ತು ಕುಲ ಬಾಂಧವರು) ಜತನದಿಂದ ಗುಂಡಣ್ಣನನ್ನು ಸನ್ಮಾನಿಸಿದ  ನೂರಾರು ಫೋಟೋಗಳು ಅಲಂಕರಿಸಿದ್ದವು. ಎಲ್ಲೋ ಮೂಲೆಯಲ್ಲಿ ಗಾಂಧೀಜಿಯ ಒಂದೇ ಫೋಟೋವನ್ನು ಗೋಡೆಯ ಎತ್ತರದಲ್ಲಿ ನೇತು ಹಾಕಿದ್ದು ಕಂಡು  ಬೇಸರವಾಯಿತು  ಚಂದ್ರುವಿಗೆ. ಆದರೆ  ಈಗಿನ ಕಾಲಘಟ್ಟದಲ್ಲಿ ‘ಗಾಂಧಿ’ ಗಿಂತ ‘ಗಾಂಧಿ ಅನುಯಾಯಿಗೆ’ ಹೆಚ್ಚು ಬೆಲೆ ಅಲ್ವೇ? ಹೀಗಾಗಿ ಮೌನಿಯಾದ.  

  ಊಟದಷ್ಟೇ  ಅಲ್ಲ ಅದಕ್ಕಿಂತ ಹೆಚ್ಚಿನ ಸ್ವಾಧಭರಿತ  ಪೌಷ್ಟಿದಾಯಕ ಫಲಹಾರವನ್ನು   ತಿಂದು ಮತ್ತು  ದೊಡ್ಡ ಗ್ಲಾಸ್ ನಲ್ಲಿಯ  ಬಿಸಿ ಬಿಸಿ ಬಾದಾಮಿ ಹಾಲನ್ನು ಕುಡಿದು ಎರಡೆರಡು  ಬಾರಿ ಡರ್ರೆಂದು ತೇಗಿ ಸಂತುಷ್ಟನಾಗಿ  ಸಂದರ್ಶನ ಆರಂಭಿಸಿದ  ಚಂದ್ರು.   “ಸರಿ  ಸುಮಾರು ಐವತ್ತು ವರ್ಷಗಳಿಂದ ಹನುಮನಹಳ್ಳಿ  ಗ್ರಾಮ ಪಂಚಾಯತಿಯಿಂದ ನೀವು ಸತತವಾಗಿ ಗೆದ್ದು  ಗಿನ್ನಿಸ್ ದಾಖಲೆ ಮಾಡಿರುವಿರಿ…. ಅದಕ್ಕೆ ನಮ್ಮ ಟಿ .ವಿ ತಂಡದಿಂದ ನಿಮಗೆ ಹಾರ್ಧಿಕ ಅಭಿನಂದನೆಗಳು… ನಿಮ್ಮ  ಅಖಂಡ ಜನಪ್ರಿಯತೆ ಮತ್ತು ಗೆಲುವಿನ ಗುಟ್ಟನ್ನು ನಮ್ಮ ಟಿ. ವಿ – 111(ಮೂರು ನಾಮ!) ದೊಂದಿಗೆ ದಯವಿಟ್ಟು ಹಂಚಿಕೊಳ್ಳಬೇಕು ಸಾರ್..” ಎಂದು  ಕೈ  ಮುಗಿದು ಪ್ರಾರ್ಥಿಸಿದ  ಚಂದ್ರು.    ಯಾವಾಗಲೂ ಬಿಳಿ ಖಾದಿ  ವಸ್ತ್ರಧರಿಸುವ ಗುಂಡಣ್ಣನ ಮನಸು ಕೂಡ ಬಿಳಿ ಹಾಲಿನಷ್ಟೇ  ಸ್ವಚ್ಛ. ಚಂದ್ರುವಿನ ಪ್ರಶ್ನೆ ಕೇಳಿ ನಕ್ಕು ಉತ್ತರಿಸಿದ…  

“ನಾನು ಅಪ್ಪಟ ಗಾಂಧಿ  ಪ್ರೇಮಿ. ಸ್ವದೇಶೀ ವಸ್ತುಗಳನ್ನಷ್ಟೇ ಬಳಸೋದು. ಬೇಕಿದ್ದರೆ ನಾನು ಧರಿಸಿದ  ಪೈಜಾಮ  ಜುಬ್ಬಾ ನೋಡಿ…ತಲೆಗೆ ಹಾಕಿದ ಗಾಂಧಿ ಟೋಪಿ ನೋಡಿ….ಎಲ್ಲಾ ಖಾದಿಮಯ… ಗಾಂಧೀಜಿ ಕನಸು  ಕಂಡ  ನನಸು  ಮಾಡೋದಷ್ಟೇ  ನನ್ನ ಗುರಿ. ನನ್ನ ಕ್ಷೇತ್ರದ ಎಲ್ಲರೂ ನನ್ನ ಸ್ವಂತ  ಬಂಧುಗಳೇ ನನಗೆ!…ನನ್ನ ಕ್ಷೇತ್ರದಲ್ಲಿ ಯಾರ  ಮನೆಯಲ್ಲಾದರೂ  ಹೆರಿಗೆಯಾದರೆ ಆ ಮಗುವಿನ  ತಂದೆಗಿಂತ  ಮೊದಲು  ಹಾಜರಾಗುವೆ   ಕೂಸನ್ನು ನೋಡಲು.. (ಏಕೆಂದರೆ  ಈಗ ಮಗು  ಮುಂದೆ ಭಾವಿ  ಮತದಾರ)….ಯಾರ  ಮನೆಯಲ್ಲಾದರೂ  ಮದುವೆ ಸಂಭ್ರಮ ಇದೆಯಂದರೆ  ಮದುವೆ ಮಾಡಿಸುವ ಪುರೋಹಿತ  ಬರುವ  ಮುಂಚೆಯೇ ನಾನೇ ಮೊದಲು  ಹೋಗುವೆ ವಧು- ವರರನ್ನು ಆಶೀರ್ವದಿಸಲು (ಆಶೀರ್ವಾದವೇ  ಉಡುಗೊರೆ –  ಹೀಗಾಗಿ ಅಲ್ಲಿ ಕಾಣಿಕೆ ಅವಶ್ಯಕತೆ ಇಲ್ಲ)….ಇನ್ನು ನನ್ನ ಕ್ಷೇತ್ರದಲ್ಲಿ ಯಾರಾದರೂ ಶಿವನ  ಪಾದ  ಸೇರಿದರೆ (ಸತ್ತರೆ)  ಅವರ  ಚಟ್ಟವನ್ನು  ಹೋರುವ ನಾಲ್ಕು ಜನರಲ್ಲಿ  ನಾನೂ ಒಬ್ಬ (ಸ್ವಜಾತಿ ಬಂಧುಗಳಾಗಿದ್ದಾರೆ  ಮಾತ್ರ)….    

ಹಗಲೂ – ರಾತ್ರಿ ಎನ್ನದೆ ನೂರೆಂಟು ಯೋಜನೆಗಳನ್ನು  ನಮ್ಮ ಜನರಿಗೋಸ್ಕರ ಪಂಚಾಯತಿಯಿಂದ  ಮಂಜೂರಿ  ಮಾಡಿಸಿಕೊಳ್ಳುವೆ (ಸ್ವಂತ ಲಾಭಕ್ಕಾಗಿ)…..ಉದಾಹರಣೆಗೆ ಗ್ರಾಮಕ್ಕಾಗಿ ಮಂಜೂರಾದ ವಸತಿ  ಯೋಜನೆಗಳು (ಅರ್ಧದಷ್ಟು ಗುಂಡಣ್ಣನ ಹಿಂಬಾಲಕರಿಗೆ) ಶೌಚಾಲಯಗಳು (ಬಂಧುಗಳಿಗಾಗಿ) ಒಳ  ಚರಂಡಿ ಕಾಮಗಾರಿ (ಪಂಚಾಯತಿಯ   ಕಾರ್ಯಾಲಯದ  ಮುಂದೆ ಅಲ್ಲ – ಎದುರಿನ ಗುಂಡಣ್ಣನ ಮನೆಯ  ಸುತ್ತ ಮುತ್ತ) ಎರಡು ವರ್ಷಕ್ಕೊಮ್ಮೆ ಹಾಕುವ  ಸಿಮೆಂಟ್ ರಸ್ತೆಗಳು ( ಗುಂಡಣ್ಣನ ಮನೆಯ  ಮುಂಭಾಗದಲ್ಲಿ) ಶಾಲೆಗಳ ಕಾಂಪೌಂಡ್ ನಿರ್ಮಾಣ (ಗುಂಡಣ್ಣನ ಮನೆಗೆ ಹೊಂದಿಕೊಂಡು) ಕೆರೆಗೆ ನೀರು ತುಂಬಿಸುವ ಕಾರ್ಯಗಳು (ಗುಂಡಣ್ಣನ ಹೊಲ ಇರುವುದೇ ಕೆರೆ ಪಕ್ಕದಲ್ಲಿ) ನರೇಗಾ  ಯೋಜನೆಯಡಿಯ  ಅನೇಕ ಕಾಮಗಾರಿಗಳು (ಗುಂಡಣ್ಣನ ಎಲ್ಲ ಕುಟುಂಬದ ಹಾಗೂ ಬಂಧು  ಬಾಂಧವರ ಹೆಸರಿನಲ್ಲಿ ಜಾಬ್ ಕಾರ್ಡ್ ಗಳು  ಇವೆ )…ಇತ್ಯಾದಿ ಯೋಜನೆಗಳನ್ನು ತಂದು ಸಕ್ರಮವಾಗಿ (ಅಕ್ರಮವಾಗಿ) ಬಳಸುವದು  ನನ್ನ ಆದ್ಯತೆ. ಅಲ್ಲದೇ ನಮ್ಮ ಊರಿನ ದುರ್ಗಾ ದೇವಿಯ ಜಾತ್ರೆಯಲ್ಲಿ ನನ್ನ ಕ್ಷೇತ್ರದ ಹೆಣ್ಣು ಮಕ್ಕಳಿಗೆ, ಸಹೋದರಿಯರಿಗೆ  ಹಸಿರು ಬಳೆಯ ಸೇವೆಯನ್ನು ನಮ್ಮ ಕುಟುಂಬದಿಂದ  ಒದಗಿಸುತ್ತೇವೆ . ಅಂತೆಯೇ ಯುವಕರ ಬಾಯಿ ಚಟ  ನೀಗಲೆಂದು ವರ್ಷದಲ್ಲೊಮ್ಮೆ ಕಡ್ಡಾಯವಾಗಿ ‘ಬಾಡೂಟ’ ವ್ಯವಸ್ಥೆ ಮಾಡುತ್ತದೆ ನಮ್ಮ ಕುಟುಂಬ. ನಮ್ಮ ಊರಿನ ಗಂಡಸರು ಮುಸ್ಸಂಜೆಯಲ್ಲಿ ಕೇವಲ ‘ಕುಡಿಯುವ’ ಸಲುವಾಗಿ  ಬೇರೆ ಊರಿಗೆ ಹೋಗುವ   ಸಂಕಷ್ಟಕ್ಕೆ ಈಡಾಗಬಾರದೆಂದು  ನನ್ನ ಹಿರಿಯ  ಮಗ ತನ್ನ  ‘ವ್ಯೆನ್’ ಶಾಪ್  ನಿಂದ ಊರಿನ ಎಲ್ಲ ಕಿರಾಣಿ ಅಂಗಡಿಗಳಿಗೆ ‘ಲಿಕ್ಕರ್’ (ದುಬಾರಿ ದರದಲ್ಲಿ) ಸರಬರಾಜು ಮಾಡುತ್ತಾನೆ ಪಾಪ… ನಾನು ಅಪ್ಪಟ ಗಾಂಧಿವಾದಿ… ಆದರೆ  ನನ್ನ ಮಗ  ನನ್ನ  ಹಾಗೆ ಗಾಂಧಿ  ಅನುಯಾಯಿ ಅಲ್ಲವಲ್ಲ!…ಅದೇ ರೀತಿ ನನ್ನ ಎರಡನೆಯ  ಮಗ  ನಡೆಸುವ  ನ್ಯಾಯ ಬೆಲೆ (ತೂಕದಲ್ಲಿ ಮಾತ್ರ ಅನ್ಯಾಯ) ಅಂಗಡಿಯಿಂದ  ಉಚಿತವಾಗಿ  ಬಿ ಪಿ ಎಲ್/ಎ ಪಿ ಎಲ್ ಕಾರ್ಡುದಾರರಿಗೆ  ಕೊಟ್ಟ  ರೇಷನನ್ನು ಸ್ವ- ಇಚ್ಛೆಯಿಂದ  ಮಾರಾಟ ಮಾಡುವವರಿಂದ    ಹಣ  ಕೊಟ್ಟು ಮರು ಖರೀದಿಸಿ (ಕಡಿಮೆ ದರದಲ್ಲಿ) ಜನರಿಗೆ ಉಪಕಾರ ಮಾಡುತ್ತಾನೆ. ತದ ನಂತರ  ಹತ್ತಿರದ ನಗರದ  ದೊಡ್ಡ ಕಿರಾಣಿ ಅಂಗಡಿಗೆ ಆ ‘ರೇಷನ್ ಅನ್ನ ಭಾಗ್ಯ’ ವನ್ನು  ವರ್ಗಾಯಿಸುತ್ತಾನೆ….  

ನಿಮಗೆ ಗೊತ್ತಿರಲಿ… ನಾನು ಎಂದೂ ಅಧ್ಯಕ್ಷ – ಉಪಾಧ್ಯಕ್ಷ ಪದವಿಯ ಹಿಂದೆ ಬಿದ್ದವನಲ್ಲ ( ಆಯ್ಕೆಯಾದ ಅವರೇ  ಗುಂಡಣ್ಣನ ಹಿಂದೆ ಬೀಳಬೇಕು!). ಸಾಮಾನ್ಯ (ಅಸಾಮಾನ್ಯ) ಸದಸ್ಯನಾಗಿ  ಸದಾ ಜನರ  ಸೇವೆ (ಶೇವ್!) ಮಾಡುವದು ನನ್ನ ಗುರಿ. ಅದನ್ನು ಪ್ರಾಮಾಣಿಕವಾಗಿ ನನ್ನ ಜೀವ ಹೋಗೋವರೆಗೆ (ನಂಬಿದವರ) ಮಾಡುತ್ತೇನೆ… ಯಾವ ಪಿ ಡಿ. ಓ ಅಧಿಕಾರಿಯೇ ಇರಲಿ  ಅಥವಾ ಅಧ್ಯಕ್ಷರೇ ಇರಲಿ  ಅವರೊಂದಿಗೆ ನಮ್ಮ ಜನತೆಯ  ಒಳಿತಿಗಾಗಿ ಹೊಂದಿಕೊಂಡು (ಕಮಿಷನ್ ದರದಲ್ಲಿ) ಹೋಗುವೆ. ನನ್ನ ಸ್ವಾಭಿಮಾನಕ್ಕೆ (ಕಮಿಷನ್ ವ್ಯವಹಾರಕ್ಕೆ) ಪೆಟ್ಟು ಬಿದ್ದರೆ ಮಾತ್ರ ನಾನು ಜ್ವಾಲಾಮುಖಿಯಾಗಿಬಿಡುತ್ತೇನೆ ” ಎಂದು ಎಲ್ಲವನ್ನೂ ಸಾವಧಾನದಿಂದ ವಿವರಿಸಿದ  ಗುಂಡಣ್ಣ.   “ತುಂಬಾ ಸಂತೋಷ. ನಿಮ್ಮಂತಹ  ಜನ  ಪ್ರತಿನಿಧಿಗಳು ಇದ್ದುದರಿಂದಲೇ ನಮ್ಮ ಹಳ್ಳಿಗಳು  ಇನ್ನೂ ಸುಭೀಕ್ಷವಾಗಿವೆ.. ನೀವು ತಾಲೂಕು ಪಂಚಾಯಿತಿಯ ಅಥವಾ ಜಿಲ್ಲಾ ಪಂಚಾಯತಿಯ  ಸದಸ್ಯರಾಗಲಿಲ್ಲವೇಕೆ?  ನೀವು  ಮನಸು  ಮಾಡಿದರೆ  ಅದೇನು ಕಷ್ಟದ  ಕೆಲಸವಲ್ಲ  ತಮಗೆ…ಬಹಳ  ಸುಲಭವಾಗಿ  ಗೆದ್ದು  ಬರುವಷ್ಟು  ಜನಪ್ರಿಯತೆ ತಮಗಿದೆ….” ಎಂದ  ಚಂದ್ರು.

  “ನೀವು ಹೇಳೋದೇನು ಸರಿ  ಇದೆ… ಆದರೆ ತಾಲೂಕು ಅಥವಾ ಜಿಲ್ಲಾ ಪಂಚಾಯತಿಗಿಂತ  ಹೆಚ್ಚಿನ ಅನುದಾನ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಹಳ್ಳಿ ಪಂಚಾಯತಿಗಳಿಗೆ ಈಗ ನೇರವಾಗಿ ನೀಡುತ್ತಿವೆ. ಅವುಗಳ ಸದುಪಯೋಗ (ಗುಂಡಣ್ಣನಿಗೆ )  ನಮ್ಮ ಊರಿನ ಜನತೆಗೆ ದೊರಕಿಸಿಕೊಡಬೇಕೆಂಬ  ಏಕೈಕ ಹಂಬಲದಿಂದ  ನಾನು ಹಳ್ಳಿಯ ಪಂಚಾಯತಿ  ಸದಸ್ಯನಾಗೇ  ಉಳಿಯಲು  ಇಚ್ಚಿಸುತ್ತೇನೆ….” ಎಂದು ಗುಂಡಣ್ಣ ತನ್ನನ್ನು  ತಾನು ಸಮರ್ಥಿಸಿಕೊಂಡ.   ಸಂದರ್ಶನ  ಮತ್ತೆ ಮುಂದುವರೆಯಿತು..   ” ಅದು ಸರಿ… ಒಂದು ವೇಳೆ ನಿಮ್ಮ ಕ್ಷೇತ್ರ ಸಾಮಾನ್ಯದಿಂದ ಮೀಸಲಾತಿ ಕ್ಷೇತ್ರವಾಗಿ ಬದಲಾದರೆ  ಏನು ಮಾಡುವಿರಿ ಗುಂಡಣ್ಣನವರೇ…” ಎಂದು ಪ್ರಶ್ನಿಸಿದ  ಚಂದ್ರು.   “ನಿಮಗೆ ಗೊತ್ತಿಲ್ಲ… ಆಗಲೇ  ಎರಡು  ಬಾರಿ ಆಗಿದೆ.  ಮೊದಲನೆಯ  ಬಾರಿ ನನ್ನ ಖಾಯಂ ಕ್ಷೇತ್ರ ಮಹಿಳೆಯರಿಗೆ ಮೀಸಲಿಟ್ಟಾಗ  ನನ್ನ ಹೆಂಡತಿಯನ್ನು ನಿಲ್ಲಿಸಿ ( ಅಲ್ಲಲ್ಲ… ಆಕೆ ತುಂಬಾ ದಪ್ಪಾಗಿದ್ದರಿಂದ ಕೂಡಿಸಿ) ಗೆಲ್ಲಿಸಿದೆ. ಎರಡನೇ ಸಲ  ಅಲ್ಪ ಸಂಖ್ಯಾತರ ಕ್ಷೇತ್ರವಾದಾಗ  ನಮ್ಮ ಹೊಲ ಮನೆ ಮತ್ತು ನಮ್ಮ ಮಕ್ಕಳ ವ್ಯಾಪಾರದಲ್ಲಿ ಸಹಾಯ  ಮಾಡುವ ಅಲ್ಪ ಸಂಖ್ಯಾತ ಹುಡುಗನನ್ನು  ನಿಲ್ಲಿಸಿ ಗೆಲ್ಲುವಂತೆ ಮಾಡಿದೆ…  ಆಗ ನಾನು ಬೇರೆ ಸಾಮಾನ್ಯ ಕ್ಷೇತ್ರದಿಂದ  ನಿಂತು ಅದರ ಮತ್ತು ಈ ಕ್ಷೇತ್ರದ ‘ಜನ  ಸೇವೆ ಜನಾರ್ಧನ  ಸೇವೆ’ ಎನ್ನುವ ತತ್ವದಡಿ ಅನೇಕ ಯೋಜನೆಗಳ  ಮುಖಾಂತರ( ಪರ್ಸಂಟೇಜ್ ಪಡೆದು) ಅವರ  ಸೇವೆ  ನಿರಂತರವಾಗಿ ಮಾಡಿದ್ದೇನೆ.  ಮುಂದೆ ಒಂದು ವೇಳೆ ಈ ಕ್ಷೇತ್ರ ಹಿಂದುಳಿದವರ  ಪಾಲಾದರೆ  ಆ ಜಾತಿಗೆ ಸೇರಿದ ನನ್ನ ಮೊದಲನೆಯ  ಸೊಸೆಯನ್ನು ನಿಲ್ಲಿಸುವೆ….ಇನ್ನು  ಪರಿಶಿಷ್ಟ  ಪಂಗಡಕ್ಕೆ  ಏನಾದರೂ ಮೀಸಲಿಟ್ಟರೆ  ನನ್ನ ಎರಡನೇ  ಸೊಸೆಯನ್ನು ಕಣಕ್ಕಿಳಿಸುವೆ. ಆ ಮುಂದಾಲೋಚನೆಯಿಂದಲೇ  ನನ್ನ ಎರಡೂ ಗಂಡು  ಮಕ್ಕಳಿಗೆ ಬೇರೆ  ಬೇರೆ ಜಾತಿಯ ಹೆಣ್ಣು ಮಕ್ಕಳನ್ನು  ತಂದು ಗಾಂಧಿ  ಹೇಳಿದ  ಹಾಗೆ ಅಂತರ್ಜಾತಿಯ ಮದುವೆಗೆ ಪ್ರೋತ್ಸಾಹ ನೀಡಿದ್ದೇನೆ   ಗೊತ್ತಾ…..  

ಏನೇ ಆಗಲಿ  ಹನುಮನಹಳ್ಳಿ ಗ್ರಾಮ ಪಂಚಾಯತಿಯ ಸ್ವರಾಜ್ಯದ ಸೇವೆಯನ್ನು (ಅದರಿಂದಲೇ  ಗುಂಡಣ್ಣನ ಪರಿವಾರ ಶ್ರೀಮಂತರಾಗಿದ್ದು)  ನಮ್ಮ ಕುಟುಂಬ  ಇನ್ನೂ ಎರಡು  ಮೂರು ತಲೆಮಾರು ನಿರಂತರವಾಗಿ  ನಡೆಸಲಿ  ಎಂದು ನಾನು ಉಸಿರಿರುವರೆಗೆ  ನಮ್ಮ ಹಳ್ಳಿಯ ಆರಾಧ್ಯ ದೈವ ‘ಹನುಮ’ ನನ್ನು ಪ್ರತಿದಿನವೂ ಪ್ರಾರ್ಥಿಸುತ್ತಿರುವೆ ” ಎಂದು ಮಾತು ಮುಗಿಸಿದ  ಗುಂಡಣ್ಣ.   “ಮುತ್ಸದ್ದಿ ಗುಂಡಣ್ಣನವರೇ.. ಒಂದು ನಿಮಿಷ ನನ್ನ ಮೊಬೈಲ್ ಕಡೆ  ನೋಡಿ. ಒಂದು ಫೋಟೋ ತೆಗೆದುಕೊಳ್ಳುವೆ..” ಎಂದ  ವರದಿಗಾರ  ಚಂದ್ರು.   “ವಿಡಿಯೋನೇ ತೆಗೆದಿರುವೆ… ಮತ್ತೆ ಪ್ರತ್ಯೇಕವಾಗಿ ಫೋಟೋ ಯಾಕೆ..?” ಎಂದು ಗುಂಡಣ್ಣ ಪ್ರಶ್ನಿಸಿದ.   “ಏನಿಲ್ಲ… ನಿಮ್ಮ ಫೋಟೋವನ್ನು  ಭಾರತದ ಅತೀ ದೊಡ್ಡ ಚುನಾವಣೆಗಳ ಚಾಣಕ್ಯ  ಚತುರರಾದ  ಅಮಿತ್ ಶಾ ಮತ್ತು ಪ್ರಶಾಂತ್ ಕಿಶೋರ್ ಅವರಿಗೆ  ಕಳಿಸಿ ನಿಮ್ಮ ಫೋನ್ ನಂಬರ್ ಕೊಡುವೆ….. ಮುಂದೆ ಖಂಡಿತ ಅವರಿಂದ  ನಿಮಗೆ ಫೋನ್ ಬಂದಾಗ  ಅವರಿಗೆ ಸ್ವಲ್ಪ ಗೈಡ್  ಮಾಡಿ ಗುಂಡಣ್ಣನವರೇ…” ಎಂದು ಮಾತು ಮುಗಿಸಿ ಗುಂಡಣ್ಣನ ಕಾಲುಗಳಿಗೆ  ಮತ್ತೊಮ್ಮೆ ನಮಸ್ಕರಿಸಿ  ಎದ್ದು ಕೈ ಕುಲುಕಿ ಹೊರ  ನಡೆದ  ವರದಿಗಾರ ಚಂದ್ರು.          
    *****

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ನುಮನಹಳ್ಳಿ ಗ್ರಾ. ಪಂ. ಖಾಯಂ ಸದಸ್ಯ ಶ್ರೀ ಗುಂಡಣ್ಣ….”

  1. ಮ.ಮೋ.ರಾವ್

    ತುಂಬ ಚನ್ನಾಗಿದೆ. ಇಂದಿನ ಸಮಾಜಕ್ಕೆ, ಕುರುಡು ಕಾನೂನಿಗೆ ಕನ್ನಡಿ ಹಿಡಿದಿದೆ.

  2. ಧರ್ಮಾನಂದ ಶಿರ್ವ

    ರಾಜಕೀಯದ ಒಳನೋಟವನ್ನು ವ್ಯಂಗಭರಿತ ಶೈಲಿಯಲ್ಲಿ ನಿರೂಪಿಸಿದ ವಿಡಂಬನಾ ಬರಹ ಸೊಗಸಾಗಿದೆ.
    ಅಭಿನಂದನೆಗಳು

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter