ಬೀಜದ ಕನಸು ಮತ್ತು ಕಾಫಿ ಕಪ್ಪು

ಬರೆಯಬೇಕೆನಿಸಿದ್ದನ್ನು
ಬರೆಯಲಾಗುತ್ತಿಲ್ಲ
ಖಾಲಿಯೆಂದರೇನು?
ಒಂದೇ ಉತ್ತರವಿಲ್ಲ
ಕಾಫಿ ಕಪ್ಪಿನ ತಳದಂತೆ
ಖಾಲಿಯಾದಾಗಲೂ
ಗಸಿ ಮತ್ತೆ ಮಾತಾಡಬಹುದಲ್ಲ?

ಯಾರನ್ನೋ ಮೆಚ್ಚಿಸಲಿಕ್ಕಾಗಿ ಬರೆಯುತ್ತಿಲ್ಲ
ಖಾಲಿ ಕಪ್ಪಿಗೆ
ತುಂಬಿಕೊಳ್ಳುವುದ ಬಿಟ್ಟು
ಬೇರೆ ಹಂಗಿಲ್ಲ
ಕಪ್ಪಿನ ಪಕ್ಕದಲ್ಲಿದ್ದ
ದಿನಪತ್ರಿಕೆ ಜೋರಾಗಿ ಮಾತಾಡುತ್ತಿತ್ತು
ಕವಿಯೆಂದು ಭ್ರಮಿಸುತ್ತಿದ್ದ ಕವಿಯೇ
ಸುದ್ದಿ ಓದಿ ಗರ ಬಡಿದವನಂತಾದ

ಕಾಫಿಯು ರುಚಿಯು ಕವಿಯು ಪತ್ರಿಕೆಯು
ಅನ್ನ ಹುಟ್ಟಿಸಲಾಗದ ಸಂಕಟಕ್ಕೆ
ಬಿಕ್ಕುತ್ತಿದ್ದವು
ಒಂದೇ ಒಂದೇ ಒಂದೇ ಎಂದು ಅರುಚುತ್ತಿದ್ದ
ಹಿಂದು ಮುಂದಿಲ್ಲದ ಸರ್ಕಾರ
ಸತ್ತರೂ ಗೊಬ್ಬರವಾಗದ
ನಾಚಿಕೆಗೇಡಿಯಂತಾಗಿತ್ತು
ಸತ್ತ ಜನರ ನಾಲಿಗೆಯಲ್ಲಿ
ಎಂಜಲು ಸ್ರವಿಸುವುದಿಲ್ಲ
ಹೆಣಕ್ಕೆ ಗುಣವಿದೆಯೇ ಹೊರತು
ಅಸೂಯೆಯೆಂಬ ಅಸ್ತ್ರವಿಲ್ಲ

ಒಬ್ಬರು ಇಬ್ಬರಾಗಿ
ಇಬ್ಬರು ಒಬ್ಬರೇ ಆದ
ಕವಿ ಗೆಳೆಯರು ಕಾಫಿ ಕುಡಿದರು
ಬರೆದರು ಗೀಚಿದರು ಭಾಷಣ ಬಿಗಿದರು
ವಟ ವಟ ವಟಗುಟ್ಟಿದ್ದರು
ಮಾತು ಅಕ್ಷರ ಕಾವ್ಯ
ಮಣ್ಣಂತೆ ಮಣ್ಣಾಗಿ
ಬೀಜದಂತೆ ತೆನೆಯೊಡೆಯಬೇಕೆಂಬ
ಕನಸು ಕಂಡರು

           - ಡಾ. ಬೇಲೂರು ರಘುನಂದನ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಬೀಜದ ಕನಸು ಮತ್ತು ಕಾಫಿ ಕಪ್ಪು”

  1. Raghavendra Mangalore

    ಮಾಗಿಯ ಚಳಿಯಲ್ಲಿ ಬಿಸಿ ಬಿಸಿ ಕಾಫಿ ಕುಡಿದಂತಹ ಹಿತವಾದ ಅನುಭವವಾಯ್ತು ಬೀಜದ ಕನಸು ಮತ್ತು ಕಾಫಿ ಕಪ್ ಓದಿದ ಬಳಿಕ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter