ವಿಶಾಲವಾದ ಅಂಗಳದ ತುಂಬೆಲ್ಲ ಚೆಂದನೆಯ ಹೂಗಿಡಗಳು, ತರಕಾರಿ ಸಸ್ಯಗಳು,ಮಲೆನಾಡಿನ ಮಳೆ ತಾಳಿಕೊಂಡು ಬದುಕಲನುವಾಗುವಂತೆ ಕಟ್ಟಿದ ವಿಶಾಲವಾದ ಮನೆ, ಹಿಂಭಾಗದಲ್ಲಿ ಕೊಟ್ಟಿಗೆ.. ದಟ್ಟ ಅಡವಿಯ ಪರಿಸರದ ನಡುವೆ ನಮ್ಮದು ಒಂಟಿ ಮನೆ. ಮಗಳಿಗೆ ಮದುವೆಯಾಗಿದೆ.ಮಗ ಅಗ್ರಿ ಬಿ ಎಸ್ಸಿ ಓದಲೆಂದು ಧಾರವಾಡಕ್ಕೆ ಸೇರಿದ ಮೇಲೆ ನಾನು, ನಮ್ಮೆಜಮಾನ್ರು ಇಬ್ಬರೇ ಮೂರು ವರ್ಷಗಳಿಂದ ಈ ಮನೆಯಲ್ಲಿರುವುದು.ದುಡಿಯಲು ಬರುವ ಆಳುಗಳು ಆಗೀಗ ಬರುವ ನೆಂಟರನ್ನು ಹೊರತು ಪಡಿಸಿದರೆ ನಾವಾಯ್ತು ನಮ್ಮ ಕೆಲಸವಾಯ್ತು ಎಂಬಂತೆ ನಿಧಾನಕ್ಕೆ ದಿನಗಳು ಸರಿಯುತ್ತಿದ್ದವು. ಪ್ರಕೃತಿ ಪ್ರೀತಿ, ಕೃಷಿ ಪ್ರೀತಿ ಇದ್ದರೂ ಒಮ್ಮೊಮ್ಮೆ ಕಾಡು ತೋಟಗಳ ನಡುವೆ ಇರುವ ಒಂಟಿ ಮನೆಯಲ್ಲಿ ಇಬ್ಬರೇ ಇರುವುದಕ್ಕೆ ಬೇಸರವಾಗುತ್ತಿತ್ತು..
ಅಗ್ರೀ ಬಿ.ಎಸ್ಸಿ ಮುಗಿಸಿದ ಮೊನ್ನೆ ಮನೆಗೆ ಬಂದ ಮಗ ಅಭಿ “ಅಮ್ಮಾ ನಿಂಗ್ಳಿಬ್ಬರನ್ನೇ ಬಿಟ್ಟಿಕ್ಕಿರದಕ್ಕೆ ಪಾಪ ಅನ್ನಿಸ್ತು, ಈಗೇನೋ ಗಟ್ಟಿ ಇದ್ದಿ ನಡಿತು.ಮತ್ತೆ ಮುಂದೆ ಕಲ್ತಗಂಡು ನೌಕರಿಗೆ ಹೋದ್ರೆ ನಿಂಗಳ ಬಗ್ಗೆ ಅಲಕ್ಷ ಆಗೋಗ್ತು.ಅದ್ರ ಬದ್ಲಿಗೆ ಪುಸ್ತಕದಲ್ಲಿ ಕಲ್ತ ಕೃಷಿ ತ್ವಾಟದಲ್ಲಿ ಉಪಯೋಗ ಮಾಡಿ ನೋಡ್ತಿ.ಊರಲ್ಲೇ ಇರ್ತಿ’ ಎಂದ.ಮಗನ ಮಾತು ನನಗೆ ಅಮೃತ ಕುಡಿದಷ್ಟು ಆನಂದ ತಂದಿತು.ನಮ್ಮವರ ಮೊಗವೂ ಅರಳಿತ್ತು.
ಅಲ್ಲಿ ಆ ಬೆಳೆ.ಇಲ್ಲಿ ತಂತಿ ಬೇಲಿ. ಹೊಸಾ ಕೊಟ್ಟಿಗೆ. ಆರ್.ಸಿ.ಸಿ ಮನೆ ಮೂವರು ಕೊನೆ ಮೊದಲಿಲ್ಲದೇ ಚರ್ಚೆ ಮಾಡಿದೆವು, ಕನಸು ಕಟ್ಟಿದೆವು. ಚೌತಿ ಹಬ್ಬಕ್ಕೆ ತೌರು ಮನೆಗೆ ಆಮಂತ್ರಣ ನೀಡಲು ಅಣ್ಣಯ್ಯ ಬರುವವರೆಗೂ ಅದೇ ಸಂಭ್ರಮ ಮುಂದುವರಿದಿತ್ತು. ಮಧ್ಯಾಹ್ನ ಊಟಕ್ಕೆ ಕುಳಿತಾಗ ಅಭಿಯ ನಿರ್ಧಾರವನ್ನು ಅಣ್ಣನೆದುರು ಹೇಳಿದೆ. “ನಿಂಗೆ ಬುದ್ದಿ ಗಿದ್ದಿ ಇದ್ದ ಇಲ್ಯ ಕೃಷಿಕರ ಮನೆ ಹುಡುಗರೆಲ್ಲ ನಲವತ್ತು ವರ್ಷಗಳಾದ್ರೂ ಮದುವಿಲ್ಲದೇ ಕುಂತಿದ್ದ. ಮಗನ್ನ ಎಮ್‍ಎಸ್ಸಿ ಮಾಡ್ಸಿ ನೌಕರಿಗೆ ಕಳಿಸು.ಇಲ್ಲಾ ಅಂದ್ರೆ ಸೊಸೆ ಮೊಮ್ಮಕ್ಕಳ ವಿಚಾರ ಕೈ ಬಿಡು” ಅಂದ.ಉತ್ಸಾಹದ ಬಲೂನಿಗೆ ಸೂಜಿ ಚುಚ್ಚಿದಂತಾಗಿತ್ತು ಗಂಡ ಹೆಂಡತಿ ಮುಖ ಮುಖ ನೋಡಿಕೊಂಡೆವು.ಅಣ್ಣಯ್ಯ ಅವರೂರಿನಲ್ಲಿ ಇದ್ದ ಅವಿವಾಹಿತ ಗಂಡುಮಕ್ಕಳ ಬವಣೆಯ ಕತೆಗಳನ್ನು ತನಗೆ ತಿಳಿದಂತೆ ಬಣ್ಣಿಸಿದ. ಹೋಗುವಾಗ ಮತ್ತೊಮ್ಮೆ ‘ಅಭಿಯನ್ನು ಹೈಯರ್ ಎಜುಕೇಶನ್ನಿಗೆ ಕಳಿಸಿ’ ಎಂದು ಅಧಿಕಾರಯುತವಾಗಿ ಹೇಳಿ ಹೋದ. ಮನಸ್ಸು ಜರ್ಜರಿತವಾಗಿತ್ತು.ಕಣ್ಣು ತೇವವಾಗಿತ್ತು.ಮೌನವಾಗಿ ಕೆಲಸ ಮುಗಿಸಿ ಹಾಸಿಗೆಯಲ್ಲಿ ಉರುಳಿಕೊಂಡೆ.ಅಣ್ಣನ ಮಾತಿನಲ್ಲಿ ಸತ್ಯಾಂಶ ಇತ್ತು.. ಬುದ್ದಿಗೆ ಅರ್ಥವಾಗಿದ್ದು ಮನಸ್ಸಿಗೆ ಅರ್ಥವಾಗುತ್ತಿರಲಿಲ್ಲ. ಅಭಿ ಶಿರಸಿಗೆ ಗೆಳೆಯನನ್ನು ಭೇಟಿ ಮಾಡಲು ಹೋಗಿದ್ದರಿಂದ ನಡೆದಿದ್ದೇನೂ ಅವನಿಗೆ ಗೊತ್ತಾಗಲಿಲ್ಲ.
*********
ಮರುದಿನ ಬೆಳಿಗ್ಗೆ ಐದೂವರಿಗೆ ಎದ್ದು ಯಮ್ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಬೊಮ್ಮನಕೊಡ್ಲು ನಾರಾಯಣ ಹೆಗಡೆರ ಮನೆಗೆ ಬೆಳಿಗ್ಗೆ ತರಕಾರಿ ಕೊಚ್ಚಲ್ಲೆ ಹೋದಿ.ಊರಲ್ಲಿ ಯಾರ ಮನೆಲಿ ವಿಶೇಷ ಕಾರ್ಯ, ಶ್ರಾದ್ಧ, ಮದುವೆ ಮುಂಜಿ ಇದ್ರೂ ಎಲ್ಲರ ಮನೆಯ ಹೆಂಗಸರು ಬೆಳಂ ಬೆಳಿಗ್ಗೆ ಅವರ ಮನೆಗೆ ಹೋಗಿ ಪದಾರ್ಥ( ತರಕಾರಿ) ಕೊಚ್ಚಿಕ್ಕೆ ಬರದು ವಾಡಿಕೆ ಮಾಡಿಕ್ಯಂಡಿದ್ಯ. ಆನು ಹೋಗುವಷ್ಟರಲ್ಲಿಓರಿಯಲ್ಲಿ ಐದಾರು ಹೆಂಗಸರು ತರಕಾರಿ ಕೊಚ್ಚತಾ ಕುತ್ಗಂಡಿದ್ದ.ಆನು ಕಂಕಳಲ್ಲಿ ಇದ್ದ ಮೆಟ್ಗತ್ತಿ ಕೆಳಗಿಸಿ ನಾಲ್ಗೆ ಸೌತೆಕಾಯಿ ಸಿಪ್ಪೆ ಕೆತ್ತಲ್ಲೆ ಶುರು ಮಾಡ್ದಿ.
‘ಬಂದ ಕೂಡ್ಲೆ ಕೆಲಸಕ್ಕೆ ಶುರು ಮಾಡಿದ್ಯಲೆ ಗಂಗತ್ತೆ.ಕುಡಿಯಲ್ಲೆ ಕಷಾಯ ಕೊಡಲನೆ’ ಎಂದು ಆ ಮನೆಯ ಸೊಸೆ ಉಪಚಾರಕ್ಕೆ ಹೇಳ್ಚು.
‘ಈಗೆಂತಾ ಬ್ಯಾಡದೇ ತೆಳ್ಳೇವು ತಿನ್ನಲ್ಲಿವರಿಗೆ ಎಂತಾ ಕುಡಿಯ ಅಭ್ಯಾಸ ಇಲ್ಲೆ’ ಎನ್ನುತ್ತ ಆರಾಮನೇ ಎಂದು ಕೇಳಿದವರಿಗೆ ಪರಿಚಯದ ನಗೆ ಬೀರಿ ಕೆಲಸ ಚುರುಕುಗೊಳಿಸಿದೆ.ಅಷ್ಟರಲ್ಲಿ ಅದೇ ಊರಿನ ಶಾಂತತ್ತಿಗೆ ಹತ್ರ ಮಗಳ ಮದುವೆ ಮಾಡತ್ರನೇ ಕೇಳ್ಚು ಕಾನ್ಮನೆ ರಮತ್ತಿಗೆ.
‘ಹೌದೇ ಹುಡುಕ್ತಾ ಇದ್ಯ.ಬೆಳಿಗ್ಗೆ ಎದ್ದು ಸಗಣಿ ಬರಗಂವಾ ಬ್ಯಾಡಾ ಹೇಳಿದ್ದು ಯನ್ನ ಮಗಳು, ಕಲಿತಿದ್ದಲೇ ಪಾಪಾ! ಬೆಂಗಳೂರಲ್ಲಿ ನೌಕರಿ ಇದ್ದವರನ್ನೇ ಹುಡುಕಿ ಹೇಳಿದ್ದಿ ಯಮ್ಮನೆಯವಕ್ಕೆ ….ಎಂದು ಹೆಮ್ಮೆಯಿಂದ ಹೇಳಿದಳು ಶಾಂತತ್ತಿಗೆ.ರಮತ್ತಿಗೆ ‘ಸರಿ ಇದ್ದೇ ಶಾಂತತ್ತಿಗೆ, ಹಳ್ಳಿ ಮನೆ, ತ್ವಾಟಾ, ಗದ್ದೆ, ಕೊಟ್ಟಿಗೆ ಆಳುಕಾಳಗಳನ್ನ ಸುಧಾರಿಸದು..ಆನು ಅನುಭವಿಸಿದ ಈ ಕಷ್ಟ ಯನ್ನ ಮಗಳಿಗೆ ಬ್ಯಾಡದಪ್ಪಾ ಹೇಳಿಗಿದಿ ಆನೂವಾ’ ಎಂದಳು. ‘ನೌಕರಿ ಮಾಡವು ಅಂತಾನೇ ಇಷ್ಟು ಕಷ್ಟಪಟ್ಟು ಕಲಿತಿದ್ದಿ ಹಳ್ಳಿಲಿ ಹೆಂಗಿಪ್ಪಲಾಗ್ತು ಕೇಳ್ತು ಯನ್ನ ಮಗಳು’ ಎಂದಳು ಸಾವಿತ್ರತ್ತಿಗೆ.ಒಟ್ಟಾರೆ ಎಲ್ಲರ ಮಾತೂ ಮಾತು ಮದುವೆಯ ಸುತ್ತಲೂ ಗಿರಕಿ ಹೊಡೆಯುತ್ತಿತ್ತು. ಅಂದಿನ ಶ್ರಾದ್ಧದ ಅಡುಗೆಗೆ ಬೇಕಾದಷ್ಟು ತರಕಾರಿಯನ್ನು ಕೊಚ್ಚಿಟ್ಟು ಆಸರಿಗೆ ಕುಡಕಂಡು‘ಇವತ್ತು ಮಧ್ಯಾಹ್ನ ಊಟಕ್ಕೆ ಬಪ್ಪಲ್ಲಾಗ್ತಿಲ್ಲೆ ಧಾರವಾಡದಿಂದ ಮಗಾ ಬಂಜಾ.ರಾತ್ರಿ ಬರ್ತಿ ಅಕಾ ಎಂದು ಹೇಳಿ ಮಗಾ ಮಧ್ಯಾನ್ನ ಹೊತ್ತಿಗೆ ಬರ್ತಿ’ ಎನ್ನುತ್ತಾ ಅವರ ಮನೆಯಿಂದ ಹೊರಬಂದೆ. ಅಂಗಳದಲ್ಲಿ ನಾಲ್ಕೈದು ಮಕ್ಕಳು ‘ಅದಲು ಬದಲು ಕಂಚಿ ಕದಲು ಅವ್ರನ್ನ ಬಿಟ್ಟು ಇವ್ರನ್ನ ಬಿಟ್ಟು ಅವ್ರ್ಯಾರು?ಎಂದು ಹಾಡಿಕೊಳ್ಳುತ್ತಾ ಆಟ ಆಡುತ್ತಿದ್ದರು. ‘ಇಷ್ಟ ಲಗೂ ಆಡಲ್ಲೆ ಶುರು ಮಾಡಿಬುಟ್ರ?’ ಎಂದು ಅವರನ್ನು ಕೇಳಿ ಮನೆಯ ಹಾದಿ ಹಿಡಿದೆ..
‘ಕಾಲಚಕ್ರಾ ಎತ್ತಿನಗಾಡಿ ಗಾಲಿ ಹಂಗೆ ತಿರುಗ್ತು ಮ್ಯಾಲಿದ್ದವು ಕೆಳಗೆ ಬರಲೇಬೇಕು’ ಎಂದು ಅಮ್ಮ ಹೇಳಿದ್ದು ನನ್ನ ಮದುವೆ ಕಾಲದಲ್ಲಿ. ಹುಡುಗಿಯರಿಗೆ ತಮ್ಮ ಬದುಕನ್ನು ನಿರ್ಣಯಿಸುವ ಸ್ವಾತಂತ್ಯ್ರ ಬಂದಾಗ ಸಮಾಜ ಉದ್ಧಾರ ಆಗುತ್ತದೆ ಎಂದು ಆಗ ವಿಚಾರ ಮಾಡುತ್ತಿದ್ದೆನಲ್ಲವೇ ನಾನು. ಅಣ್ಣನ ಮಾತನ್ನು ಹಾಗೂ ಈಗ ಕೇಳಿದ ನಮ್ಮೂರಿನವರ ಮಾತುಗಳನ್ನು ಮೆಲುಕು ಹಾಕುವಾಗ ಮನ ನನ್ನ ಬಾಲ್ಯದ, ಯೌವನದ ನೆನಪನ್ನು ಹೆಕ್ಕಿ ತೆಗೆಯಲಾರಂಭಿಸಿತ್ತು.
‘ಅಯ್ಯೋ ಈ ಕರಿ ಕೂಸಿನ್ ಯಾರು ಮದುವೆ ಮಾಡಿಕ್ಯತ್ವನ?’ ಎಂಬ ರಾಗದ ಟೀಕೆ ಬುದ್ದಿ ಬಲಿತಾಗಿಂದ ಕೇಳಿಸಿಕೊಂಡಿದ್ದೆಷ್ಟು ಸಲವೋ ತಾನು. ಒಡಹುಟ್ಟಿದ ತಂಗಿಯರಿಬ್ಬರು ಅಣ್ಣ ತಮ್ಮ ಎಲ್ಲರೂ ಗೌರ ವರ್ಣದವರೆ.‘ಇದೊಂದು ಕೂಸು ನಿಮ್ಮನೆಲಿ ತಪ್ಪಿ ಹುಟ್ಟಿದ್ದು.ಉಳಿದರೆಲ್ಲಾ ಬೆಳ್ಳಗಿದ್ದ.ಇದರದ್ದು ಸ್ನೋ ಪೌಡರು ಯಾವದೂ ಹಿಡಿಯ ಬಣ್ಣಲ್ಲಾ ಗ್ಯಾರೆಂಟಿ ಕಲರು’ ನೆರೆಹೊರೆಯವರ ಬತ್ತಳಿಕೆಯಲ್ಲಿ ಅಸಂಖ್ಯಾತ ಮಾತಿನ ಬಾಣಗಳು.
ಅವರೆಲ್ಲ ಹಾಳಾಗಲಿ ಅಪ್ಪನೂ ಒಮ್ಮೊಮ್ಮೆ ಕರಿ ಕೂಸೆ. .ಒಂದು ತಟ್ಟೆ ನೀರು ತಗಂಡು ಬಾ’ ಎನ್ನುತ್ತಿದ್ದ.ತಂಗಿಯರು ಜಗಳ ತೆಗೆದಾಗ ‘ಕರ್ಪಿ ಗಿರ್ಪಿ ಸುಮ್ಮಂಗಿರು ಸಾಕು’ ಎಂದಾಗ ನೋವಿನಿಂದ ಮನೆಯ ಯಾವುದಾದರೂ ಮೂಲೆಯಲ್ಲಿ ಕುಳಿತು ಬಿಕ್ಕುತ್ತಿದ್ದೆ. ‘ಯಾಕೆನ್ನ ಈ ರಾಜ್ಯಕೆಳೆತಂದೆ ಹರಿಯೇ ಸಾಕಲಾರದೆ ಎನ್ನ ಏಕೆ ಪುಟ್ಟಿಸಿದೆ’ ಎಂದು ಕಪ್ಪು ಕೃಷ್ಣನಲ್ಲಿಯೇ ಮೊರೆ ಇಡುತ್ತಿದ್ದೆ. ಊರಿನ ನನ್ನ ಓರಗೆಯ ಹುಡುಗಿಯರಿಗೂ ನನ್ನ ಸ್ನೇಹ ಬೆಳೆಸಲು ಬಣ್ಣವೇ ಅಡ್ಡಿಯಾಗುತ್ತಿತ್ತು. ಕ್ಲಾಸಿನಲ್ಲಿ ಪಕ್ಕದಲ್ಲಿ ಕುಳಿತರೆ ನನ್ನ ಬಣ್ಣ ತಮಗೂ ಬರುತ್ತದೆಯೇನೂ ಎಂಬಂತೆ ಮಾಡುವ ಬಿನ್ನಾಣಗಿತ್ತಿಯರನ್ನು ನೋಡಿ ಕೀಳರಿಮೆ ಶುರು ಆಗಿತ್ತು. ಎಲ್ಲರೊಂದಿಗೂ ಆಟವಾಡುವ ಆಸೆಯನ್ನು ಅದುಮಿ ಒಂಟಿಯಾಗಿ ಶಾಲೆಯ ಹಿಂದಿನ ಗುಡ್ಡದಲ್ಲಿರುವ ಬಿಕ್ಕೆಹಣ್ಣು, ಕೌಳಿಹಣ್ಣು,ಇಂತವುಗಳನ್ನು ಹರಿದು ತಿನ್ನುತ್ತಿದ್ದೆ. ಎಲ್ಲಾರಿಗೂ ಕೊಟ್ಟಂಥಹ ಹಣ್ಣನ್ನೇ ನನಗೂ ಕೊಡೊ ಗಿಡಗಳು ಮನುಷ್ಯರಿಗಿಂತ ಒಳ್ಳೆಯವು ಅಂತಲೂ ಅನಿಸ್ತಿತ್ತು.
ಐದನೇ ಕ್ಲಾಸಿಗೆ ಬಂದಾಗ ಹೊಸಾ ಅಕ್ಕೋರು ಬಂದಿದ್ದರು. ಅವರ ಹೆಸರು ಗಾಯತ್ರಿ.ಅವರು ನಾನು ಸೇಮ್ ಪಿಂಚ್ ಎನ್ನುವಂತೆ ಕಪ್ಪು ಬಣ್ಣದವರು.ಒಳ್ಳೆಯದನ್ನು ಮೆಚ್ಚುವ ಅವರು ತಪ್ಪು ಮಾಡಿದರೆ ಶಿಕ್ಷಿಸಲೂ ಕೂಡಾ ಗಟ್ಟಿ ಇದ್ದರು. ಬಂದ ಮಾರನೇ ದಿನ ಆಟದ ಸಮಯದಲ್ಲಿ ಮಗ್ಗಿ ಬರೆಯಲಾರಂಭಿಸಿದೆ. ‘ನೀ ಯಾಕೆ ಆಟಕ್ಕೆ ಹೋಗಿಲ್ಲ’ ಎಂದು ಬೆನ್ನು ಸವರುತ್ತಾ ಸ್ನೇಹಪೂರ್ಣ ದ್ವನಿಯಲ್ಲಿ ವಿಚಾರಿಸಿದರು. ಹೇಳಲೋ ಬ್ಯಾಡವೊ ಎಂದು ಅನುಮಾನಿಸುತ್ತಲೇ ನಾ ಕರಿ ಬಣ್ಣದೋಳು ಅಂತ ಯಾರೂ ಆಟಕ್ಕೆ. . ಎಂದ ಒಡನೆ ಅವರಿಗೆಲ್ಲವೂ ಅರ್ಥವಾಗಿಬಿಟ್ಟಿತು.ನನ್ನ ಕೈ ಹಿಡಿದು ಆಟದ ಮೈದಾನಕ್ಕೆ ನಡೆದರು.ಪಿರ್ರನೇ ಸೀಟಿ ಹೊಡೆದು ಎಲ್ಲರನ್ನು ಬಳಿಗೆ ಕರೆದರು.’ನೀವೇನು ಇವಳ ಜೊತಿಗೆ ಆಟ ಆಡ್ತೀರೋ ಬಣ್ಣಾ ತೇಯ್ದು ಕುಡಿತ್ರೊ’ ಎಂದು ಕೆಂಗಣ್ಣು ಬಿಟ್ಟು ಅಬ್ಬರಿಸಿದರು. ಅಂದಿನಿಂದ ಯಾರೂ ನನ್ನ ಬಣ್ಣದ ಸುದ್ದಿ ಎತ್ತುತ್ತಿರಲಿಲ್ಲ ಆಟಕ್ಕೂ ಸೇರಿಸಿಕೊಳ್ಳುತ್ತಿದ್ದರು..ಆ ವರ್ಷ ಶಾಲೆಯ ವಾರ್ಷಿಕೋತ್ಸವದಲ್ಲಿ ನಾನೇ ನಾಟಕದ ನಾಯಕಿ.ಕ್ರಮೇಣ ಅಕ್ಕೋರ ಹೆದರಿಕೆಯಿಂದಲೋ ನನ್ನ ಬುದ್ದಿವಂತಿಕೆಯಿಂದಲೋ ಒಂದಿಷ್ಟು ಗೆಳತಿಯರು ಆದರು. ‘ನಿಮ್ಮ ಗಂಗಾ ಭಾರಿ ಚುರುಕು ಅದೆ’ ಎಂದು ನಮ್ಮ ಮನೆಗೇ ಬಂದು ಅಕ್ಕೋರು ಹೊಗಳಿದಾಗ ಅಮ್ಮನ ಮುಖದಲ್ಲೂ ನೂರು ಕ್ಯಾಂಡಲ್ ಬಲ್ಬಿನ ಕಳೆ. ಅದೇ ಮೊದಲೇನೋ ನನ್ನ ಕುರಿತು ಹೊರಗಿನವರೊಬ್ಬರು ಪ್ರಶಂಸೆಯ ಮಾತು ಹೇಳಿದ್ದನ್ನು ಮನೆಯವರು ಕೇಳಿದ್ದು.
ಹೈಸ್ಕೂಲಿಗೆ ಪ್ರಥಮ ಸ್ಥಾನ ಪಡೆದು ಎಸ್.ಎಸ್‍ಎಲ್.ಸಿ. ಪರೀಕ್ಷೆ ಪಾಸಾದೆ.ಅಕ್ಕೋರ ಶಿಪಾರಸ್ಸು, ಗಂಗಾನ ಕಾಲೇಜಿಗೆ ಕಳಿಸನ ಎಂಬ ಅಮ್ಮನ ಕ್ಷೀಣ ದ್ವನಿ ಕೇಳಲು ಅಪ್ಪ ತಯಾರಾಗಲೆ ಇಲ್ಲ.‘ನೀ ಕೊಡತ್ಯೇನು ಖರ್ಚಿಗೆ’ ಎಂಬ ಅಪ್ಪನ ಬೊಬ್ಬೆಯಲ್ಲಿ ಅಮ್ಮನ ದನಿ ಕರಗಿಹೋಯಿತು. ಅಪ್ಪ ಮುಂದೆ ಓದಿಸಲು ಒಪ್ಪಲೇ ಇಲ್ಲ. ಹೂವಿನ ಗಿಡ, ತರಕಾರಿ ಬೆಳೆಸೋದು, ಹಾಡು ಹಸೆ ಕಲಿಯೋದು, ಅಡಿಗೆ ಮಾಡೋದು ಹೀಗೆ ಅನೇಕ ಕೆಲಸಗಳನ್ನು ನಿರಾಶೆಯನ್ನು ನುಂಗುತ್ತಲೇ ಕಲಿತು ಅಮ್ಮನ ಬಲಗೈಯಾದೆ. ಇಪ್ಪತ್ತು ವರ್ಷವಾದ ಕೂಡಲೇ ಜಾತಕಾ ಹೊರ ಹಾಕಿದರು.‘ಕಪ್ಪಿದ್ರು ಲಕ್ಷಣಿದ್ದು ಹುಡುಗಿ’ ಎನ್ನುವಂತೆ ಬಂದ ಪ್ರಾಯ ಒಂದಿಷ್ಟು ಚೆಲುವನ್ನೂ ತಂದಿತ್ತಿತ್ತು. ಆದರೂ ಜಾತಕ ಹೊಂದಾಣಿಕೆ ಆಗುತ್ತದೆ ಎಂದವರೂಕೂಡಾ ‘ಕೂಸು ಕರಿಕಿದ್ದಡಾ’ ಎಂದು ನೋಡಲು ಬಾರದವರೆಷ್ಟೋ ಮಂದಿ. ಬಂದವರೂ ಶಿರಾ ಉಪ್ಪಿಟ್ಟು ತಿಂದು ಅದೇ ಕಾರಣ ಹೇಳಿ ತಿರಸ್ಕರಿಸುತ್ತಿದ್ದರು.ಐದು ವರ್ಷಗಳ ಕಾಲ ಅಣ್ಣ ತಮ್ಮ ನನಗೆ ವರನನ್ನು ಹುಡುಕುವ ಉದ್ಯೋಗವನ್ನೇ ಮಾಡಿದರು.
‘ಯಮ್ಮನೆ ಗಂಗಿಗೆ ಗಂಡು ಹುಡಕಲ್ಲೆ ತಿರುಗಿ ಐದು ಜೊತೆ ಚಪ್ಪಲ್ಲು ಹರಿದು ಹೋತು, ಆ ಬ್ರಹ್ಮ ಗಂಗಿಗೆ ಮದವೆ ಆಗ ಗಂಡು ಎಲ್ಲಿ ಹುಟ್ಟಿಸಿದ್ನನ’ ಎಂದು ಅಣ್ಣ ಅವರಿವರ ಬಳಿ ಹೇಳುವ ಮಾತು ಕಿವಿಗೆ ಬೀಳುವಾಗ ಹಿಂಸೆ ಎನಿಸುತ್ತಿತ್ತು.ತಂಗಿಯರೂ ಮದುವೆ ವಯಸ್ಸಿಗೆ ಬಂದ ಮೇಲಂತೂ ನೋಡಲು ಬಂದ ಒಬ್ಬ ವರ ಮಹಾಶಯ ‘ಅಕ್ಕನ ಬದ್ಲಿಗೆ ತಂಗಿ ಕೊಡದಾದ್ರೆ ಮದುವೆ ಆಗ್ತಿ’ ಎಂದ.
ಅವತ್ತಿನಿಂದ ಯಾರಾದರೂ ನನ್ನನ್ನು ನೋಡಲು ಬರುವ ದಿನ ತಂಗಿಯರಿಬ್ಬರೂ ಅವರಿಗೆ ಕಾಣದಂತೆ ಅಟ್ಟವೇರಿ ಅವಿತು ಕುಳಿತುಕೊಳ್ಳುತ್ತಿದ್ದರು.ನೋಡಲು ಬಂದ ಗಂಡುಮಕ್ಕಳೇನು ಸುಂದರಾಂಗ ಎನ್ನುವಂತೆ ಇರುತ್ತಿರಲಿಲ್ಲವಾದರೂ ಗಾಳಿ ಅವರ ಪರವಾಗಿತ್ತು.ಕನ್ಯಾಮಣಿಗಳು ಅಂದು ತುಟಿ ಬಿಚ್ಚುವಂತಿರಲಿಲ್ಲ, ಅವರೊಪ್ಪಿದರೆ ನಮ್ಮ ಭಾಗ್ಯ ಎಂದುಕೊಂಡು ನಮಗಿಷ್ಟ ಇಲ್ಲದೇ ಇದ್ದರೂ ಕೂಡಾ ಮದುವೆ ಆಗಬೇಕಿತ್ತು. ಹಾಡು ಬರ್ತ? ಶೇಡಿ ಬರ್ತ? ಹೊಲಿಗೆ ಕಲ್ತಿದ್ಯ? ಕಾಲು ಸರಿ ಇದ್ದ ನೋಡ್ತ್ಯ ನಾಲ್ಕು ಹೆಜ್ಜೆ ನಡಿ ನೋಡನ. ಯಮ್ಮನೆಲಿ ಐದು ಶಿದ್ದೆ ಅನ್ನದ ಚರಿಗೆ ಬಸಿಯವು ಮತ್ತೆ.ಆಹಾ. . ವರನ ಕಡೆಯವರ ಪ್ರಶ್ನೆಗಳೋ? ಪರೀಕ್ಷೆಯೋ?. . ಬಿಸಿ ಅನ್ನದ ಚರಿಗೆಯನ್ನು ಇವರ ತಲೆಯ ಮೇಲೆ ಇಡವು ಎನ್ನುವಷ್ಟು ಸಿಟ್ಟು ಬರುತ್ತಿದ್ದರೂ ತುಟಿ ಕಚ್ಚದೇ ವಿಧಿ ಇರಲಿಲ್ಲ. ಇದು ನನ್ನ ಪಾಡೊಂದೆ ಆಗಿರಲೂ ಇಲ್ಲ. ಪಕ್ಕದ ಮನೆಯ ಶಾರಿ ಮೇಲಿನ ಮನೆ ಪದ್ಮಾ. . ಹೀಗೆ ಎಲ್ಲರೂ ವರಪರೀಕ್ಷೆಗೆ ಆಗಾಗ ಅಟೆಂಡ್ ಆಗಿ. . ನಪಾಸಾಗಿ ವರನ ಧಿಮಾಕಿಗೆ ಧಿಕ್ಕಾರ ಹೇಳುವವರೆ.ನಮಗೂ ಇವರನ್ನು ಹದ ಹಾಕುವ ಅವಕಾಶ ಸಿಕ್ಕರೆ. .ಎಂದು ಮಾತನಾಡಿಕೊಂಡಿದ್ದು ಇತ್ತೀಚೆಗೆ ಎನ್ನುವಷ್ಟು ಗಾಯದ ನೋವು ಹಸಿಯಾಗಿಯೇ ಇದೆ.
“ಹೆಣ್ಣು ದಿಕ್ಕಿಲ್ಲದ ಮನೆ ಮಾಣಿ ಅಪ್ಪ,ಮಗಾ ಇಬ್ಬರೇ ಇದ್ವಡಾ ಇವತ್ತು ಬರ್ತ ತಯಾರಾಗು’ ಎಂದು ಅಮ್ಮ ಹೇಳಿದಾಗ ಇನ್ನೂ ಎಷ್ಟು ಎದುರಿಸಬೇಕೋ ಈ ನಾಟಕದಲ್ಲಿ ಎಂದು ಅಲವತ್ತುಕೊಳ್ಳುತ್ತಲೇ ಅಣಿಯಾದೆ. ‘ತಂಗಿ ನೀನೂ ಯನ್ನ ಮಗನ್ನ ನೋಡಿಬಿಡು’ ಎಂದು ಹುಡುಗನ ಅಪ್ಪ ಹೇಳಿದಾಗ ತಲೆ ಎತ್ತಿದೆ, ತೆಳ್ಳಗೆ ಬೆಳ್ಳಗಿದ್ದ ಹುಡುಗನಿಗೆ ಒಂದು ಕಾಲು ಉದ್ದ ಒಂದು ಕಾಲು ಗಿಡ್ಡ. ಒಪ್ಪಿದ್ದೇವೆಂದು ತಿಳಿಸಿ ಹೋದರು.ನನ್ನ ಇಷ್ಟ ಕೇಳುವವರಿರಲಿಲ್ಲ, ಒಟ್ಟಿನಲ್ಲಿ ಮದುವೆಯಾಯ್ತು.ಒಡಹುಟ್ಟಿದ ನಾಲ್ವರ ಮದುವೆಯ ಹಾದಿ ಸುಗಮವಾಯಿತು.
ಮದುವೆ ಆಗಿ ವರ್ಷದೊಳಗೆ ಗರ್ಭಿಣಿ ಎಂದು ಡಾಕ್ಟರ್ ಹೇಳಿದಾಗ ಅಮ್ಮನಾಗುವ ಪುಳಕದೊಂದಿಗೆ ನನಗೆ ಅವ್ಯಕ್ತ ಭಯ.ಒಂಭತ್ತು ತಿಂಗಳು ಆತಂಕದ ನೆರಳಿನಲ್ಲಿಯೇ ಇದ್ದೆವು. ಆರು ತಾಸಿನ ಬ್ಯಾನೆ ತಿಂದು ಹೈರಾಣಾಗುವ ಹೊತ್ತಿನಲ್ಲಿ ಮಗ ಉಂವೆ. .ಎಂಬ ರಾಗದೊಂದಿಗೆ ಜನಿಸಿದ.ಮಗು ಬಣ್ಣದಲ್ಲಿ ಅಪ್ಪನನ್ನು ಹೋಲುತ್ತಿದ್ದ.ಆದರೆ ಅಂಗವೈಕಲ್ಯವಿರಲಿಲ್ಲ. ದೇವರೆ ನನ್ನನ್ನು ಸಂಕಷ್ಟದಿಂದ ಪಾರು ಮಾಡಿದ ಎಂದುಕೊಂಡೆ.ತಾಯ್ತನದ ಹೆಮ್ಮೆಯಲ್ಲಿ ಅದುವರೆಗಿನ ಕೀಳರಿಮೆಯನ್ನೆಲ್ಲ ಕಳೆದುಕೊಂಡೆ. ಅವನೊಂದಿಗೆ ಆಟವಾಡುತ್ತ ಮತ್ತೊಮ್ಮೆ ಬಾಲ್ಯವನ್ನನುಭವಿಸಿದೆ. ಅವನಿಗೆ ಕಲಿಸುತ್ತ ನಾನದೆಷ್ಟೋ ಹೊಸ ಹೊಸ ವಿಷಯಗಳನ್ನು ಕಲಿತೆ. ..ಅವನು ಹುಟ್ಟಿದ ನಾಲ್ಕು ವರ್ಷಕ್ಕೆ ಮಗಳೂ ಹುಟ್ಟಿದಳು..
‘ಅರೇ ಇಷ್ಟು ಲಗೂನೆ ಕೆಲ್ಸಾ ಮುಗ್ಸಿಕ್ಕೆ ಬಂದ್ಬುಟ್ಯನೇ’ ಎಂದು ಅಂಗಳದಲ್ಲಿ ನಿಂತ ಗಂಡ ಅಚ್ಚರಿಯಿಂದ ಕೇಳಿದಾಗಲೇ ನೆನಪಿನಿಂದಾಚೆ ಬಂದೆ.ಅವಮಾನಕ್ಕೆ ಆಯುಷ್ಯ ಹೆಚ್ಚು. ಅದಕ್ಕೇ ಇರವು ಈ ಎಲ್ಲಾ ವಿಷ್ಯಾ ವಿಕ್ರಮಾದಿತ್ಯನ ಹೆಗಲನ್ನೇರಿದ ಬೇತಾಳದ ಹಾಗೆ ಯನ್ನ ಹೆಗಲೆರಿದ್ದು ಎಂದು ತಲೆ ಕೊಡವಿಕೊಂಡು ಗೃಹಕೃತ್ಯದಲ್ಲಿ ತೊಡಗಿಕೊಂಡೆ. ‘ಅಮ್ಮಾ ಆಸರಿಗೆ ಆತನೆ’ ಎನ್ನುತ್ತಾ ಕಣ್ಣುಜ್ಜುತ್ತಾ ಎದ್ದು ಬಂದ ಅಭಿ. ‘ಡೊಣಗ ಇಷ್ಟು ಹೊತ್ತು ಮನಗಿದ್ಯಲಾ, ನಡಿ ಮುಖ ತೊಕ್ಕಂಡು ಬಾ..ಯಂಗ ಶ್ರಾದ್ಧದ ಮನೆಗೆ ಬೇಕಾದಷ್ಟು ತರಕಾರಿ ಕೊಚ್ಚಿಕ್ಕಿ ಬಂದ್ಯ’.ಎಂದು ಮಗನ ಕ್ರಾಪ್ ಕೆದರಿ ಮಮತೆಯಿಂದ ಭುಜ ತಟ್ಟಿದೆ.ಬಾಳೆಲೆ ಹಾಕಿ ತುಪ್ಪ ಬೆಲ್ಲ ಚಟ್ನಿ ಬಡಿಸಿ ತೆಳ್ಳೇವು ಎರೆದೆ.ಅಭಿ ಬಂದು ಚಕ್ಕಳ ಮಕ್ಕಳ ಹಾಕಿ ಕುಳಿತು ‘ಆಹಾ ತೆಳ್ಳೇವು, ಏನ ರುಚಿ ಆಜು ಅಮ್ಮಾ ಧಾರವಾಡÀಲ್ಲಿದ್ದಾಗ ದಿನಾ ನೀ ಮಾಡ ತೆಳ್ಳೇವು ನೆನಪು ಮಾಡಿಕ್ಯತ್ತಿದ್ದಿ. ಹಾಸ್ಟೆಲ್ಲಿನಲ್ಲಿ ವಾರದಲ್ಲಿ ಎರಡು ದಿನಾ ಅಷ್ಟೇ ದ್ವಾಸೆ ಮಾಡತಿದ್ದ.ಒಂದ್ರಾಶಿ ಎಣ್ಣೆ ಹಾಕಿ ಅರ್ಧ ಕರದಾಂಗೆ ಮಾಡತದ್ದ ಯನಗೆ ಸೇರತಿತ್ತೇ ಇಲ್ಲೆ.’ಎಂದು ಸಂಭ್ರಮಿಸಿ ಅವನು ತಿನ್ನುವಾಗ ನನ್ನ ಮನವೂ ಮನ ಹಿಗ್ಗಿತು.
***********
ಮಧ್ಯಾಹ್ನದ ಅಡುಗೆ ಮಾಡಿ ಮುಗಿಸುವಷ್ಟರಲ್ಲಿ ಬೈಕ್ ಸಪ್ಪಳ ಕೇಳಿತು.ಕಿಡಕಿಯಲ್ಲಿ ಇಣುಕಿ ನೋಡಿದೆ. ಬಂದವನು ಶಣ್ಮನೆ ರಾಘು. ‘ಪಾಪ ಪರದೇಶಿ ಜೀವ’ ಎಂದು ಮರುಗುತ್ತ ಬಾಗ್ಲು ತೆಗೆದೆ ‘ತಮಾ ಬಾರಾ ಕೂತ್ಗ.ನೀ ಬರದೇಯಾ ರಾಶಿ ದಿನಾಗಿತ್ತು’ಎಂದು ಮಾತನಾಡುತ್ತಾ ಹದ ಮಾಡಿದ ಮಜ್ಜಿಗೆ ತಟ್ಟೆಅವನ ಕೈಗಿತ್ತೆ.
ಎರಡು ವರ್ಷದ ಹಿಂದೆ ಯಾತ್ರೆಗೆಂದು ಹೋದ ರಾಘುನ ಅಪ್ಪ – ಅಮ್ಮ ಇಬ್ಬರೂ ಅಪಘಾತದಲ್ಲಿ ತೀರಿಕೊಂಡ ಮೇಲೆ ರಾಘುವಿನದು ಒಂಟಿ ಬದುಕು.‘ಅತ್ಗೆ ಇವತ್ತು ಸ್ವಲ್ಪ ಸಾರು ಕೊಡೆ ಯನ್ನ ಅಡುಗೆ ಯನಗೇ ಸೇರತಿಲ್ಲೆ’..ಎಂದು ರಾಘು ಪುಟ್ಟ ಸ್ಟೀಲ್ ಕ್ಯಾನು ಕೊಟ್ಟ.‘ಇಲ್ಲೇ ಉಂಡಕಂಡು ಹೋಗಲಕ್ಕಡಾ’ ಎಂದೆ. ‘ಬ್ಯಾಡದೇ ಅತ್ಗೆ, ಅನ್ನಾ ಮಾಡಿಟ್ಟಿಕ್ಕೆ ಬಂಜಿ ಅದು ದಂಡಾಗೋಗ್ತು ಮತ್ಯಾರು ಉಂಬವ್ವಿಲ್ಯಲಿ, ಮನಿಗೆ ಕೀಲಿ ಹಾಕಿಕ್ಕೆ ಬಂಜಿ ಎಂದ. ‘ಇವತ್ತು ಕಳಲೆ ಹುಳಿ ಮಾಡಿದ್ದಿ ತಗ’ ಎಂದು ಕ್ಯಾನು ತುಂಬಿಸಿಕೊಟ್ಟೆ .ನಾಲ್ಕೆಕರೆ ಭಾಗಾಯಿತ ಅಡಿಕೆ ತೋಟ, ಆರೆಕರೆ ಗದ್ದೆ, ಸುಸಜ್ಜಿತವಾದ ದೊಡ್ಡ ಮನೆಯಲ್ಲಿ ಈ ಮಾಣಿ ಒಂಟಿ ಎನ್ನಿಸಿತು. ‘ಎಲ್ಲಾದ್ರೂ ಹೆಣ್ಣ ನೋಡಿದ್ಯನಾ?’ ರಾಘು ಕುತೂಹಲದಿಂದ ವಿಚಾರಿಸಿದೆ. ‘ಒಂದು ಕೂಸಿನ್ನಾ ನೋಡಿಕ್ಯಂಡು ಬಂಜಿ. ಅವಳÀಪ್ಪ ಮಾಡಿದ ನಾಲ್ಕು ಲಕ್ಷ ರೂಪಾಯಿ ಸಾಲಾ ಆನು ಮುಟ್ಟಿಸಿದರೆ ಕೂಸಿನ್ನ ಕೊಟ್ಟು ಮದುವೆ ಆಗಲಕ್ಕಡಾ, ಕೂಸು ಚೊಲೋ ಇದ್ದು’ ರಾಘು ಎರಡು ವರ್ಷದಲ್ಲಿ ಮದುವೆ ಮಾಡಿಕೊಳ್ಳಲು ಸತತ ಯತ್ನಿಸುತ್ತಾ ವಿಫಲನಾಗುತ್ತಾ ಎಷ್ಟೋ ಅನುಭವಗಳನ್ನು ಹೇಳುತ್ತಿದ್ದರೂ ಇದು ಸ್ವಲ್ಪ ಬೇರೆಯೇ ಆಗಿತ್ತು. ಹಿಂದೆ ವರದಕ್ಷಿಣೆ ಇದ್ದಿದ್ದು ಈಗ ವಧು ದಕ್ಷಿಣೆಯರೂಪ ತಾಳಿದೆಯೇ ಎನ್ನಿಸಿದರು ಯಾವ ಭಾವ ವ್ಯಕ್ತ ಪಡಿಸದೇ ‘ಕೂಸು ಅಕ್ಕು ಅಂದ್ಯ ಬ್ಯಾಡಾ ಅಂದ್ಯಾ ರಾಘು’ ಕೇಳಿದೆ.ಈಗ ಒಂದಸಲ ಸಾಲ ತೀರ್ಸದಾದರೆ ಹ್ಯಾಂಗೋ ಮಾಡಲಾಗಿತ್ತು.ರಕ್ತದ ರುಚಿ ಕಂಡ ಹುಲಿ ಕತೆ ಆದ್ರೆ ಕಷ್ಟ ಕೂಸಿನ ಅಪ್ಪ ಇಸ್ಪಿಟ್ ಆಟದಲ್ಲಿ ಶೂರನಡಾ, ಮತ್ತೆ ಮತ್ತೆ ದುಡ್ಡು ಕೇಳಿದ್ರೆ ಹೇಳಿ ಹೆದರ್ತಾ ಇದ್ದಿ ಇನ್ನೂ ಎಂತದೂ ಹೇಳಿದ್ನಿಲ್ಲೆ.‘ಸಾರು ಕೊಟ್ಟಿದ್ದಕ್ಕೆ ಥ್ಯಾಂಕ್ಸ ಅತ್ತಿಗೆ’ ಎನ್ನುತ್ತಾ ಬೈಕನ್ನೇರಿದ.
ಮುಂದೆ ಹಳ್ಳಿಯಲ್ಲೇ ಉಳಿದರೆ ನನ್ನ ಮಗನಿಗೂ ಇದೇ ಪಾಡಾಗಬಹುದೆ?ಶೋಷಣೆಯ ಚಿತ್ರ ಬದಲಾಗಿ ಪಾತ್ರಗಳು ಬದಲಾಗಿಬಿಟ್ಟಿವೆಯೇ? ಹಸಿರಕ್ಕುವ ತೋಟ, ಹಾಲು ಹಯನಿನ ಸಮೃದ್ಧಿ, ಅನ್ನ ಸ್ವಾತಂತ್ಯ್ರದ ಬದುಕನ್ನು ಬಿಟ್ಟು ಮದುವೆಗೆ ಕಷ್ಟ ಶಹರವಾಸಿಯಾಗು ಎಂದು ಮಗನ ಬಳಿ ಹೇಳುವುದೇ? ಇಲ್ಲೇ ಇದ್ದು ಬದುಕನ್ನು ಎದುರಿಸು ಎಂದು ಹೇಳುವುದೇ?ವೃದ್ಧಾಪ್ಯದ ಅಸಹಾಯಕ ಸ್ಥಿತಿಯಲ್ಲೂ ನಾವಿಬ್ಬರೇ ಇರಬೇಕೆ?ಮನ ಹೊಯ್ದಾಡಲಾರಂಭಿಸಿತು.ಅಷ್ಟರಲ್ಲಿ ಮಹಡಿಯಿಂದ ಇಳಿದು ಬಂದ ಅಭೀ ‘ನಾಳೆಯಿಂದ ತ್ವಾಟಕ್ಕೆ ಕರೆಂಟ್ ಬೇಲಿ ಹಾಕಲ್ಲೆ ಬಾ ಹೇಳಿ ಶಿವರಾಮ ಭಟ್ರಿಗೆ ಹೇಳನನೆ ಅಮಾ?’ಎಂದು ಕೇಳಿದ.ಯಾವ ಪ್ರಶ್ನೆಗಳಿಗೂ ಉತ್ತರ ಹೊಳೆಯದೇ ಮಂಕಾಗಿ ಮಗನನ್ನೇ ನೋಡುತ್ತ ನಿಂತೆ.
13 thoughts on “ಅದಲು ಬದಲು ಕಂಚಿ ಕದಲು”
ಇವತ್ತು ಎಲ್ಲೆಡೆ ಕಾಂಡು ಬರೋ ವಾಸ್ತವ ದ ಚಿತ್ರಣ ಮನ ಮುಟ್ಟುವಂತ ಬರವಣಿಗೆ.ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🏻🌷 ಅಭಿನಂದನೆಗಳು
ಧನ್ಯವಾದಗಳು ಶೈಲಜಾ
ನಮ್ಮ ಬದುಕಿನ ಅಸ್ತವ್ಯಸ್ತ ಮಗ್ಗಲುಗಳು ನೈಜವಾಗಿ ಅನಾವರಣಗೊಂಡಿವೆ. ಕೃಷಿಕ ಯುವಕರಿಗಷ್ಟೇ ಹೆಣ್ಣು ಸಿಗುವುದಿಲ್ಲ ಅಂದರೆ ತಪ್ಪಾಗುತ್ತದೆ. ಸಾಫ್ಟವೇರ್ ಹುಡುಗರಿಗೂ ಹೆಣ್ಣು ಸಿಗದ ಪ್ರಕರಣಗಳು ಹಲವಾರು. ಒಟ್ಟಾರೆ ಸನ್ನಿವೇಶ ಮತ್ತು ಪಾತ್ರ ಬದಲಾಗಿದೆ. ಆರ್ಥಿಕ ಸ್ವಾತಂತ್ರ್ಯ ಹೆಣ್ಣುಮಕ್ಕಳಿಗೆ ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕು ಕೊಟ್ಟಿದೆ. ಇದು ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ತಿಳಿಯದು. ಆದರೆ ಕೌಟುಂಬಿಕವಾಗಿ ಇದೊಂದು ಹಿನ್ನಡೆ, ಮಹಿಳೆಯ ದೃಷ್ಟಿಯಿಂದ ಇದು ಪ್ರಗತಿ ಎನ್ನಬಹುದು
ನಿಜ. ನನಗೆ ಕಾಡುವುದೂ ಇದೇ ಆತಂಕವೇ..
ಹವ್ಯಕ ಭಾಷೆಯ ಸೊಗಡು ಬೀರುವ ಕಥಾ ಚಿತ್ರಣ. ಮನಮುಟ್ಟುವ ಕಥೆ.
ಧನ್ಯವಾದಗಳು ಅರ್ಚನಾ
Super
ಧನ್ಯವಾದಗಳು ಯಶೋದಾ ಮೇಡಂ
ವಾಸ್ತವದ ಚಿತ್ರಣ ಹೃದಯ ಸ್ಪರ್ಷಿ ಯಾಗಿ ಮೂಡಿ ಬಂದಿದೆ ಮಾಲತಿ ಅಕ್ಕ
ಧನ್ಯವಾದಗಳು ಸುನೀತಾ
ಗ್ರಾಮೀಣ ಭಾಗದಲ್ಲಿ ಕೃಷಿಯನ್ನು ಅವಲಂಬಿಸಿದ ಗಂಡುಗಳಿಗೆ ಹೆಣ್ಣು ಸಿಗಲಾರದ ಪ್ರಸ್ತುತ ಸ್ಥಿತಿಯನ್ನೇ ವಸ್ತುವಾಗಿಸಿ ಹೆಣೆದ ಕಥೆ ಸೊಗಸಾಗಿದೆ.
ಬದಲಾದ ಕಾಲಗತಿಯಲ್ಲಿ ಹೆಣ್ಣು ಸಿಗಬೇಕಾದರೆ ಪಟ್ಟಣದಲ್ಲಿ ನೌಕರಿ ಅಗತ್ಯ ಎನ್ನುವ ಹಂತಕ್ಕೆ ನಾವು ತಲುಪಿದ್ದೇವೆ. ಇಂತಹ ಸಂದಿಗ್ಧತೆಯಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ಸಾಧ್ಯವಾಗದ ಹೆತ್ತವರ ಚಿಂತೆ ಕಥೆಯ ಜೀವಾಳವಾಗಿ ಮುಂದುವರಿದಿದೆ.
ಹಳ್ಳಿಯ ಅನುಕೂಲಗಳಿಂತ ಅನಾನುಕೂಲಗಳನ್ನೇ ಎಲ್ಲರೂ ವೈಭವೀಕರಿಸುವುದರಿಂದಲೂ ಇಂತಹ ಸ್ಥಿತಿನಿರ್ಮಾಣವಾಗಿದೆ. ಯಾರಿದರನ್ನು ಸರಿಪಡಿಸುವರೋ ನಾಕಾಣೆ. ಧನ್ಯವಾದಗಳು ಸರ್
ಸತ್ಯ ಆದರೂ ಏನೂ ಮಾಡಲಾಗದ ಗೊಂದಲ. ಸೊಗಸಾಗಿದೆ