(ಡಾ. ಚೆನ್ನವೀರ ಕಣವಿಯವರನ್ನು ಮುಂಬಯಿ ಆಕಾಶವಾಣಿಗೆ ಸಂದರ್ಶನ ಮಾಡಿದ ಆ ಕ್ಷಣ)
“ಕಾವ್ಯಾಕ್ಷಿ’ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಚೆಂಬೆಳಕಿನ ಕವಿ 93ರ ನಾಡೋಜ ಡಾ.ಚೆನ್ನವೀರ ಕಣವಿಯವರು ನವ್ಯ ವಿಮರ್ಶಕರ ಪ್ರಕಾರ ಸಮನ್ವಯ ಕವಿ . ಇಂತಹ ಕವಿಯನ್ನು ಭೇಟಿ ಮಾಡಿ ಸಂದರ್ಶನ ಮಾಡುವ ಅವಕಾಶ ನನಗೆ ದೊರೆತದ್ದು ಮುಂಬೈಯಲ್ಲಿ . ಅದು 2011ರ ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ. ಮುಂಬೈ ಆಕಾಶವಾಣಿಯ ಕನ್ನಡ ವಿಭಾಗದ ನಿರ್ವಾಹಕಿ ಸುಶೀಲಾ ದೇವಾಡಿಗರು ಫೋನ್ ಮಾಡಿ “ನಾಡೋಜ ಡಾ. ಚೆನ್ನವೀರ ಕಣವಿಯವರು ಮುಂದಿನ ವಾರ ಮುಂಬೈಗೆ ಬರುತ್ತಿದ್ದಾರೆ .ಅವರನ್ನು ಆಕಾಶವಾಣಿಗೆ ಸಂದರ್ಶನ ಮಾಡಬಹುದೇ?” ಎಂದು ಕಣವಿಯವರು ಮುಂಬೈಗೆ ಬರುವ ಒಂದು ವಾರದ ಮೊದಲೇ ನನಗೆ ಕೇಳಿದ್ದರು .
ನಾನು ಖುಷಿಯಿಂದಲೇ ಒಪ್ಪಿಗೆ ನೀಡಿದೆ. ಕಣವಿಯವರನ್ನು ಸಂದರ್ಶನ ಮಾಡುವ ಭಾಗ್ಯ ದೊರೆತಾಗ ಅದಕ್ಕಿಂತ ದೊಡ್ಡ ಖುಷಿ ಮತ್ತೇನು ಬೇಕು . ಸರಿ, ಆ ದಿನವೇ ಆಫೀಸ್ ಬಿಟ್ಟವನು ಸಂಜೆಗೆ ಕರ್ನಾಟಕ ಸಂಘದ ಗ್ರಂಥಾಲಯಕ್ಕೆ ತೆರಳಿ ಕಣವಿಯವರ ಕಾವ್ಯಾಕ್ಷಿ ಯಿಂದ ಹಿಡಿದು ಹಲವಾರು ಸಂಕಲನಗಳನ್ನು ಓದಲು ಪಡೆದೆ .
ಕಣವಿಯವರು ಮುಂಬೈಗೆ 2011ರ ಏಪ್ರಿಲ್ 14ರಂದು ಕರ್ನಾಟಕ ಸಂಘ ಮುಂಬಯಿ ಇದರ ಕಲಾ ಭಾರತಿಯ ವತಿಯಿಂದ ಡಾ. ಭರತ್ ಕುಮಾರ್ ಪೊಲಿಪು ಅವರ ನಿರ್ದೇಶನದ ಶ್ರೀರಂಗರ ನಾಟಕ ‘ಗುಮ್ಮನೆಲ್ಲಿಹ ತೋರಮ್ಮ’ರಂಗ ಪ್ರದರ್ಶನದ ಸಭಾಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು .ಅದಕ್ಕಿಂತ ಮೊದಲೇ ಆಕಾಶವಾಣಿಗೆ ಸಂದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು ಕನ್ನಡ ವಿಭಾಗದ ಸುಶೀಲಾ ದೇವಾಡಿಗರು.
ಕಣವಿಯವರನ್ನು ಆ ದಿನ ಕರ್ನಾಟಕ ಸಂಘದ ವಾಚ್ ಮೆನ್ ಬಹದ್ದೂರ್ ಆಕಾಶವಾಣಿಗೆ ಮಧ್ಯಾಹ್ನ ಹೊತ್ತಿಗೆ ಕರಕೊಂಡು ಬಂದಿದ್ದ .ನಾನು ಅರ್ಧ ಗಂಟೆ ಮೊದಲೇ ಆಕಾಶವಾಣಿಗೆ ಹೋಗಿ ಕೂತಿದ್ದೆ. ಕಣವಿಯವರಿಗೆ ಆಕಾಶ ವಾಣಿಯ ಒಳಗೆ ಬಂದ ನಂತರ ರೆಕಾರ್ಡಿಂಗ್ ರೂಮಿಗೆ ಬರಬೇಕಾದರೆ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಹಿಡಿಯಿತು. ಅವರು ಆಕಾಶವಾಣಿಯ ಒಳಗೆ ಬಂದು ಸುತ್ತು ಹಾಕುತ್ತಲೇ ಇದ್ದರು. ಅನೇಕ ರೆಕಾರ್ಡಿಂಗ್ ರೂಮುಗಳು ಇರುವುದರಿಂದ ಹಾಗೂ ಎರಡು ಬಿಲ್ಡಿಂಗ್ ಗಳು ಇರುವುದರಿಂದ ಒಳಗಡೆ ಸುತ್ತು ಹಾಕಿದ್ದೇ ಹಾಕಿದ್ದು. ಕೊನೆಗೆ ನಾವೇ ಅವರನ್ನು ಹುಡುಕಬೇಕಾಯಿತು.
ಆವಾಗ ಕಣವಿಯವರಿಗೆ 84 ವರ್ಷ ಆಗಿತ್ತು. ಆದರೆ ಅವರ ಲವಲವಿಕೆಯ ಉತ್ತರ ಕಂಡು ನಾನೇ ಆಶ್ಚರ್ಯ ಪಡುವಂತಾಯ್ತು. ಅವರು ನನ್ನ ಪ್ರಶ್ನೆಗಳಿಗೆಲ್ಲ ನಿರರ್ಗಳವಾಗಿ ಉತ್ತರಿಸಿದ್ದರು.
ಕಣವಿಯವರು ಜನಿಸಿದ್ದು 28 ಜೂನ್ 1928.
1945 ರಿಂದ ಕವಿತೆಗಳನ್ನು ಬರೆಯುತ್ತಿರುವ ಕಣವಿಯವರ ಪ್ರಥಮ ಸಂಕಲನ ‘ಕಾವ್ಯಾಕ್ಷಿ’ ಯಿಂದ ಹಿಡಿದು ಮುಂದಿನ ಸಂಕಲನಗಳು , ಅವರು ಬರೆಯುತ್ತಿದ್ದ ಸಾನೆಟ್ಟುಗಳು , ಕಾವ್ಯಕ್ಷೇತ್ರವನ್ನು ಆಯ್ಕೆಮಾಡಲು ಕಾರಣ ,ನವೋದಯ- ಪ್ರಗತಿಶೀಲ ಸಾಹಿತ್ಯದ ನೋಟ, ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪಸ್ಥಿತರಿದ್ದ ಸಂದರ್ಭ, ಸುಗಮ ಸಂಗೀತದ ಪ್ರಸ್ತುತ ದಿನಗಳು, ಬೇಂದ್ರೆಯವರು ಬರೆದ ಮುನ್ನುಡಿಗಳು, ಗೋಪಾಲಕೃಷ್ಣ ಅಡಿಗರ ಕುರಿತಂತೆ ಮಾತುಗಳು ,ಐದನೆಯ ಕವನಸಂಗ್ರಹ ದೀಪದಾರಿಯ ಕುರಿತಂತೆ ಹೆಚ್ಚಿನ ಪ್ರತಿಕ್ರಿಯೆಗಳು , ಶಾಸ್ತ್ರೀಯ ಭಾಷೆಯ ಮಾನ್ಯತೆ …..ಇತ್ಯಾದಿಗಳನ್ನೆಲ್ಲ ಸಂದರ್ಶನದ ಸಮಯ ಚರ್ಚಿಸಿದೆವು. ಕಣವಿಯವರಂತಹ ಹಿರಿಯ ಕವಿಯ ಈ ಸಂದರ್ಶನ ಯಾವತ್ತೂ ಮರೆಯಲಾರದು.
ಕಣವಿಯವರನ್ನು ನಾನು ಮಾಡಿದ ಈ ಸಂದರ್ಶನ ಮುಂಬೈ ಆಕಾಶವಾಣಿಯಲ್ಲಿ ಮೇ 28, 2011 ರ ಶನಿವಾರ ಮಧ್ಯಾಹ್ನ 12.30 ಕ್ಕೆ ಪ್ರಸಾರ ಆಗಿತ್ತು.
ಕಣವಿಯವರು ಕರ್ನಾಟಕ ಸಂಘ ಮುಂಬಯಿ ಇದರ ಕಲಾ ಭಾರತೀಯ ನಾಟಕ ಪ್ರದರ್ಶನವನ್ನು ಎ. 14 ರಂದು ದೀಪ ಬೆಳಗಿಸಿ ಉದ್ಘಾಟಿಸಿದರು. ಅಂದು ವೇದಿಕೆಯಲ್ಲಿ ಅವರಾಡಿದ ಮಾತು ಬಹಳ ಪ್ರಾಮುಖ್ಯವಾದುದು. “ಶ್ರೀರಂಗರು ಇಂದು ನಮ್ಮ ಜೊತೆಗಿರುತ್ತಿದ್ದರೆ ಖಂಡಿತಾ ಕನ್ನಡಕ್ಕೆ ಇನ್ನೊಂದು ಜ್ಞಾನಪೀಠ ಪ್ರಶಸ್ತಿ ಬರುತ್ತಿತ್ತು”.
ನಾಡೋಜ ಡಾ. ಚೆನ್ನವೀರ ಕಣವಿ ಯವರನ್ನು ಇನ್ನೋರ್ವ ಕವಿ ಡಾ.ಜಿ ಎಸ್. ಶಿವರುದ್ರಪ್ಪರ ಜೊತೆ ಸಮನ್ವಯ ಕವಿಗಳೆಂದು ಆ ದಿನಗಳ ನವ್ಯ ವಿಮರ್ಶಕರು ಹೇಳಿದ್ದಿದೆ .ಡಾ.ಜಿ ಎಸ್ ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿಯವರು ಕನ್ನಡ ಕಾವ್ಯಕ್ಷೇತ್ರದ ಅಪರೂಪದ ಜೋಡಿ .ಕಣವಿಯವರ ಸುಂದರ ಟೋಪಿ, ಸಪೂರವಾದ ಮೈಕಟ್ಟು, ಬಿಳಿ ಉಡುಪು ಅವರ ಆಕರ್ಷಕ ವ್ಯಕ್ತಿತ್ವ. ಕಣವಿಯವರನ್ನು ಕುವೆಂಪು ,ಬೇಂದ್ರೆ, ಮಧುರಚೆನ್ನ ,ಕೆ ಎಸ್ ನರಸಿಂಹಸ್ವಾಮಿ… ಮುಂತಾದವರ ಕವಿತೆಗಳು ಭಾವ ಜೀವಿಯಾಗಿ ರೂಪಿಸುವುದರಲ್ಲಿ ಪ್ರಭಾವ ಬೀರಿದೆ . ಕಣವಿಯವರು ಗದುಗಿನ ಹೊಂಬಾಳ ಗ್ರಾಮದಲ್ಲಿ ಹುಟ್ಟಿದವರು .ಕಳೆದ ಏಳೂವರೆ ದಶಕ ಗಳಿಂದ ಧಾರವಾಡದಲ್ಲಿ ವಾಸವಾಗಿದ್ದಾರೆ. ಜವಾರಿ ಭಾಷೆ .
ಪ್ರಥಮ ಸಂಕಲನ ಕಾವ್ಯಾಕ್ಷಿ ಬಂದದ್ದು 1949 ರಲ್ಲಿ .ಇದನ್ನು ತಂದವರು ಗ್ರಂಥ ಪ್ರಕಾಶನ ಸಮಿತಿ ಹುಬ್ಬಳ್ಳಿ.ಇದಕ್ಕೆ ಬೇಂದ್ರೆಯವರ ಮುನ್ನುಡಿ .ಆನಂತರ ನೆಲಮುಗಿಲುಗೂ ಬೇಂದ್ರೆಯವರದೇ ಮುನ್ನುಡಿ.
ಕಾವ್ಯಾಕ್ಷಿ,, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ ,ದೀಪಧಾರಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತಿಕದ ಮೋಡ ….ಇವೆಲ್ಲ ಇವರ ಕಾವ್ಯ ಸಂಕಲನಗಳು . ‘ಚಿರಂತನ ದಾಹ ‘ ಆಯ್ದ ಕವಿತೆಗಳ ಸಂಗ್ರಹ . ಎರಡು ದಡ ಸಂಕಲನದಲ್ಲಿ ಸಾನೆಟ್ ಗಳು ಇವೆ. ಸಾನೆಟ್ ಕಣವಿಯವರ ಮನಸ್ಸನ್ನು ಆಕರ್ಷಿಸಿತ್ತು . ಇಂಗ್ಲೀಷ್ ಸಾಹಿತ್ಯದಲ್ಲಿ ಹೆಚ್ಚಿನವರು ಸಾನೆಟ್ ಗಳನ್ನು ಬರೆದವರು. ಭಾವಪರ ಚಿಂತನೆಗಳ ಬಗೆಗಿನ ಒಲವು ಕಣವಿಯವರ ಸಾನೆಟ್ ಗಳಲ್ಲಿ ಕಾಣಬಹುದು ..ಹಿರಿಯ ಕವಿಗಳ ಕಾವ್ಯಾಭ್ಯಾಸ ಮಾಡುತ್ತಿರುವಾಗ ಅವರು ಸಾನೆಟ್ ಪ್ರಕಾರಕ್ಕೆ ಆಕರ್ಷಿಸಲ್ಪಟ್ಟರು. ಶೂದ್ರದ ಸಂದರ್ಶನವೊಂದರಲ್ಲಿ( ಕಣವಿ ಅರುವತ್ತರ ಸಂದರ್ಭದಲ್ಲಿ) ಕಣವಿಯವರು ಪ್ರತಿಕ್ರಿಯಿಸುತ್ತಾ” ನಾನು ಭಾವಜೀವಿ ಆಗುವುದಕ್ಕೆ ಕಾರಣವಾದ ಪರಿಸರ ಹೊಂಬಾಳದಲ್ಲಿ ಇತ್ತು. ನಮ್ಮ ಹಳ್ಳಿಯ ಕಪಿಲೆ ಭಾವಿಯ ಲಯ, ಭಾವಿಯ ರಾಟೆಯ ಶಬ್ದ, ನವಿಲುಗಳ ಲಾಸ್ಯ ನನ್ನಲ್ಲಿದ್ದ ಕವಿ ಮನಸ್ಸನ್ನು ಎಚ್ಚರ ಗೊಳಿಸಿದವು. ನಮ್ಮ ಹಳ್ಳಿಯ ಆಚೀಚೆ ಇದ್ದ ಲಂಬಾಣಿ ತಂಡದ ಜನಗಳು, ಎಲ್ಲಕ್ಕಿಂತ ಹೆಚ್ಚಾಗಿ ಕಮ್ಮಾರನ ಕುಲುಮೆ, ಕುಂಬಾರನ ತಿಗುರಿ ಈ ಎರಡೂ ಪ್ರಥಮಬಾರಿಗೆ ಹಾಗೂ ಇಂದಿಗೂ ನನ್ನ ಮನಸ್ಸಿನಲ್ಲಿ ಉಳಿದುಬಂದಿದೆ.” ಎಂದಿದ್ದರು. ಶಿರಹಟ್ಟಿಯ ಜಾತ್ರೆ, ಅಲ್ಲಿನ ಹಿಂದೂ-ಮುಸ್ಲಿಂ ಬಾಂಧವ್ಯ ಅವರನ್ನು ಸದಾ ಕಾಡುತ್ತಿರುವ ಸಂಗತಿಯಾಗಿತ್ತು.
ಕಣವಿಯವರ ಮೊದಲ ಕವಿತೆಗಳು ಪ್ರಕಟವಾದದ್ದು ಶಾಲಾ ಹೊತ್ತುಗೆಯಲ್ಲಿ.
ಮೊದಲ ಸಂಕಲನ ಕಾವ್ಯಾಕ್ಷಿ ಯಲ್ಲಿ
ದ.ರಾ.ಬೇಂದ್ರೆ ಅವರು ಮುನ್ನುಡಿ ಬರೆಯುತ್ತಾ “ಉದಿತವಾದ ಕನ್ನಡದ ಹೊಸ ಹುಮ್ಮಸ್ಸಿನ ದಂಡೆಗೆ ಸೇರಿದ ವೀರರು ಕಣವಿಯವರು” ಎಂದು ಪ್ರಶಂಸೆ ಕೂಡಾ ಮಾಡಿದ್ದರು . ತಮ್ಮ “ಆಕಾಶಬುಟ್ಟಿ” ಕವನಸಂಕಲನದಲ್ಲಿ ಕಣವಿಯವರು ಬರೆಯುತ್ತಾ ” ಇಲ್ಲಿನ ಕವಿತೆಗಳಲ್ಲಿ ಶ್ರೀ ಬಸವರಾಜ ಕಟ್ಟೀಮನಿಯವರ ಪ್ರೋತ್ಸಾಹ ನೆಯ ಫಲ ಇದೆ . ಅವರ ಕಾವ್ಯಾನು ರಾಗವೇ ಕಾರಣ” ಎಂದಿದ್ದರು. ಅದೇ ರೀತಿ
‘ದೀಪಧಾರಿ’ ಸಂಕಲನದಲ್ಲಿ ” ಕನ್ನಡ ಕವಿತೆ ಈಚೆಗೆ ಒಂದು ಹೊಸ ಆಕೃತಿಯಲ್ಲಿ ನೂತನ ರಚನಾ ವಿಧಾನದೊಂದಿಗೆ ರೂಪುಗೊಳ್ಳುತ್ತಿದೆ .ನವ್ಯಕಾವ್ಯ ಹೆಸರಿನಲ್ಲಿ ಅದು ಮತ್ತೊಂದು ಮಜಲು ಮುಂದುವರೆಯುತ್ತಿದೆ .ಒಂದೇ ಗಿಡದ ಕೊಂಬೆಗಳಾದರೂ ಅವುಗಳ ಆಕಾರ, ಭಂಗಿ ,ರಸವೃಷ್ಟಿ ಬೇರೆ ಬೇರೆಯಾಗಿದೆ . ಈ ಸಂಗ್ರಹದ ಕೆಲವು ಕವಿತೆಗಳಲ್ಲಿ ನವ್ಯ ಮಾರ್ಗದ ಹಲವು ಅಂಶಗಳನ್ನು ಓದುಗರು ಕಾಣಬಹುದು. ಆಧುನಿಕ ಭಾವಗೀತೆ ಹಾಗೂ ನವ್ಯ ಮಾರ್ಗಗಳ ನಡುವೆ ನಿರ್ಮಾಣಗೊಂಡಿರುವ ಕಂದರಕ್ಕೆ ಇದು ಸೇತುವೆಯಾದೀತು ಎಂಬ ನಮ್ರ ಭಾವನೆ ನನಗಿದೆ” ಎಂದಿರುವ ಮಾತುಗಳು ಗಮನಿಸಬೇಕು.
ಕಣವಿಯವರ ಎರಡನೇ ಕೃತಿ “ಭಾವಜೀವಿ” ಅವರೇ ಹೇಳಿದಂತೆ ಒಂದು ತರಹದ ‘ಸೆಮಿ ಅಟೋಬಯೋಗ್ರಫಿಕಲ್ ಕೃತಿ’. ‘ಭಾವ ಜೀವಿ’ಯನ್ನು ಮಧುರಚೆನ್ನರಿಗೆ ಅರ್ಪಿಸಿದ್ದಾರೆ.
ಕಣವಿಯವರ ಕವಿತೆಗಳಿಗೆ “ಅವರದೇ ಆದ ಸಹಜವಾಣಿಯಲ್ಲಿ ಭಾವಗಳನ್ನು ವ್ಯಕ್ತಪಡಿಸುವ ಶಕ್ತಿ, ತಮಗೆ ಬೇಕಾದ ಹಾಗೆ ಶಬ್ದಗಳನ್ನು ಕುಣಿಸಬಲ್ಲ ಶಕ್ತಿ, ನಯದ ನಾಜೂಕಿನ ಕುಸುರಿ ಕೆಲಸದ ನೈಪುಣ್ಯ , ಯಥಾರ್ಥವಾದ ಪ್ರಕೃತಿಪ್ರೇಮ ,ಕವಿ ಗುಣ ಎಂದು ಹೇಳಬಹುದಾದ ಒಂದು ಬಗೆಯ ಶುಚಿ ಪಾರಾಯಣತೆ.,,,” ಇತ್ಯಾದಿಗಳನ್ನು ವಿಮರ್ಶಕರು ಗುರುತಿಸಿದ್ದಾರೆ. ಕಣವಿಯವರು ಮಕ್ಕಳ ಸಾಹಿತ್ಯದಲ್ಲಿ ಆರಂಭದಿಂದಲೂ ಆಸಕ್ತಿ ಇರಿಸಿದವರು. ಬಾಲ್ಯದಲ್ಲಿ ಮಕ್ಕಳ ಆಟದ ಹಾಡುಗಳಲ್ಲಿ ಜನಪದ ಕಾವ್ಯವನ್ನು ಅವರು ಗಮನಿಸಿದವರು. ನವೋದಯ ಸಾಹಿತಿಗಳಿಗೂ ಮಕ್ಕಳ ಬಗ್ಗೆ ಕಾಳಜಿ ಇರುತ್ತಿದ್ದುದನ್ನು ಅವರು ನೆನಪಿಸುತ್ತಾರೆ. ಗ್ರಾಮೀಣ ಬದುಕಿನ ನಿರಾಳತೆ ಕಣವಿ ಯವರಿಗೆ ಯಾವತ್ತೂ ಇಷ್ಟವಾಗುತ್ತದೆ.
ಕನ್ನಡಿಗರು ಔದಾರ್ಯ ಗುಣದವರು. ಕನ್ನಡ ಅನ್ನ ನೀಡಲು ನೆರವಾಗುವ ಭಾಷೆ ಎನಿಸಿಕೊಂಡಾಗಲೇ ಕನ್ನಡದ ಏಳಿಗೆ ಸಾಧ್ಯ ಎಂದು ಭಾವಿಸಿದವರು. ಇಂಗ್ಲಿಷ್ ಪ್ರಭಾವಕ್ಕೆ ಬೀಳುತ್ತಿರುವ ಕನ್ನಡದ ಬಗ್ಗೆ ಅವರಿಗೆ ಕಳವಳ ಆಗುತ್ತದೆ .ಕನ್ನಡ ಎನ್ನುವುದು ಭಾಷೆ ಮಾತ್ರ ಅಲ್ಲ ,ಅದು ಸಂಸ್ಕೃತಿಯೂ ಹೌದು ಎನ್ನುತ್ತಾರೆ .ಸಾಹಿತ್ಯ ಸಮ್ಮೇಳನಗಳು ಕನ್ನಡದ ಸಂಸ್ಕಾರ ಸಿಗಲು ನೆರವಾಗುತ್ತವೆ ಎಂದು ನಂಬಿದವರು.
ಡಿ ಎಸ್ ನಾಗಭೂಷಣ ಅವರು ಚೆನ್ನವೀರ ಕಣವಿಯವರ ಕಾವ್ಯದತ್ತ ಒಂದು ನೋಟವನ್ನು ಬೀರುತ್ತ “ಸಂಪ್ರದಾಯದ ವಿಮರ್ಶಾ ಪರಿಭಾಷೆಯ ಭಾರವಿಲ್ಲದೆ ಓದಿದಾಗ ,ಯಾವ ಸಮನ್ವಯದ ಪ್ರಯತ್ನವೂ ಕಾಣದೆ ನಿರಾಯಾಸವಾಗಿ ಓದಿಸಿಕೊಂಡು ಹೋಗುವ ನಿರ್ಭರತೆ ಹಾಗೂ ತಮ್ಮ ಕಾಲದಲ್ಲಿ ಬರೆಯುತ್ತಿದ್ದ ಅನೇಕ ಪ್ರಮುಖ ಕವಿಗಳಿಗಿಂತ ಸುಲಭವಾಗಿ ಅನುಭೂತಿಗೆ ದಕ್ಕುವ ಸರಳತೆಗಳಿಂದ (ಇದೇ ನವ್ಯರ ಸಿಟ್ಟಿಗೆ ಕಾರಣವಾಗಿರಬಹುದು)ಗಮನಸೆಳೆಯುತ್ತದೆ . ಅಂತರಂಗದಿಂದಷ್ಟೇ ಅಸ್ಖಲಿತವಾಗಿ ಹರಿಯುವ ಕಾವ್ಯ ಕಣವಿಯವರದು” ಎಂಬ ಮಾತನ್ನು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಿಂದ ಬಂದಿರುವ ಕಣವಿಯವರ ಕವಿತೆಗಳಲ್ಲಿ ಅವರದೇ ರೀತಿಯ ಕಾವ್ಯಭಾಷೆ ನಿರ್ಮಿಸಿಕೊಂಡ ‘ಕಣವಿತನ’ ಎದ್ದು ಕಾಣುತ್ತದೆ.
ಅವರ ಬಾಳ ಸಂಗಾತಿ ಕತೆಗಾರ್ತಿ ಶಾಂತಾದೇವಿ ಕಣವಿಯವರು.68 ವರ್ಷಗಳ ಕಾಲದ ದಾಂಪತ್ಯ ಬದುಕು ಇವರದ್ದಾಗಿತ್ತು. ಲೇಖನವೊಂದರಲ್ಲಿ ಶಾಂತಾದೇವಿ ಹೇಳಿದಂತೆ “ಕಣವಿಯವರನ್ನು ಹೊಗಳಿದರೆ ಕಣವಿಯವರು ಸಂಕೋಚದಿಂದ ಮುದುಡಿ ಮುದ್ದೆಯಾಗುತ್ತಾರಂತೆ. ಅಲ್ಲಿಂದ ಓಡಿ ಹೋಗಬೇಕು ಅನಿಸುತ್ತದಂತೆ ಅವರಿಗೆ. ಪರನಿಂದೆ, ಆತ್ಮಪ್ರಶಂಸೆ ಎರಡರಿಂದಲೂ ಕಣವಿಯವರು ವಿಮುಖರು”.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಿದ್ದಗಂಗಾ ಶ್ರೀ ಪ್ರಶಸ್ತಿ …..ಮುಂತಾದುವುಗಳನ್ನು ಪಡೆದಿರುವ ಚೆನ್ನವೀರ ಕಣವಿಯವರು
ಸಾಹಿತ್ಯ ಕ್ಷೇತ್ರದಲ್ಲಿ ‘ಅಜಾತಶತ್ರು, ‘ ಹೂ ಮನಸ್ಸಿನ ಕವಿ’.
ಕಣವಿಯವರದು ಬೆಳಕಿನ ಅನ್ವೇಷಣೆ. ಬೆಳಕು ಅವರ ಕಾವ್ಯದಲ್ಲಿ ಅನೇಕ ರೂಪಗಳನ್ನು ಪಡೆದಿದೆ .ಹಾಗೆಂದೇ ಅವರನ್ನು ಚೆಂಬೆಳಕಿನ ಕವಿ ಎಂದೂ ಪ್ರೀತಿಯಿಂದ ಕರೆಯುತ್ತಾರೆ. ಕಣವಿಯವರು ಒಂದೆಡೆ ಹೇಳಿದಂತೆ “ಜನವಿರೋಧಿ ಕಾವ್ಯ ಎಂಬುದನ್ನು ನಾನು ಕಲ್ಪಿಸುವುದು ಕೂಡ ಸಾಧ್ಯವಿಲ್ಲ ಎನ್ನಿಸುತ್ತದೆ. ನನ್ನ ಕಾವ್ಯದ ಗುರಿಯೇನಿದ್ದರೂ ಓದುಗರನ್ನು ಸಹೃದಯರನ್ನು ಜನಸಾಮಾನ್ಯರನ್ನು ಅದು ಗೌರವದಿಂದ ಕಾಣುತ್ತದೆ ಎಂದು ಮಾತ್ರ ಹೇಳಬಲ್ಲೆ”. ಸಾಹಿತ್ಯದ ಬಗ್ಗೆ ಅವರಿಗೆ ಸ್ಪಷ್ಟ ನಿಲುವಿತ್ತು ‘ಕನ್ನಡ ಸಾಹಿತ್ಯ ನಿರಂತರವಾಗಿ ಹರಿಯುವ ವೇಗದ ಹೊಸನೀರು. ಯಾವ ಚಳವಳಿಯೂ ಇಲ್ಲದೆ ಸಾಹಿತ್ಯ ಬೆಳೆಯಬಲ್ಲುದು ಎನ್ನುವ ವಿಶ್ವಾಸ ಅವರಿಗಿತ್ತು. ಯಾಕೆಂದರೆ ಸಾಹಿತ್ಯ ವೈಯಕ್ತಿಕವಾದದ್ದು. ತನ್ನೊಳಗೆ ತಾನೆ ಹೋರಾಟ ನಡೆಸಿ ಸೃಷ್ಟಿಯಾಗುವ ಕ್ರಿಯೆ ಎಂದಿದ್ದರು. ಲೇಖಕ ಒಬ್ಬ ಸಮಾಜ ಜೀವಿ ಎಂದವರು ಕಣವಿ. ಅವೆರಡರ ಸಮನ್ವಯವನ್ನು ಸದಾ ಹೇಳುತ್ತಾ ಬಂದವರು.
ಕಣವಿ ಅವರು ಈಗ ಕೊರೊನಾ ಸೋಂಕಿತರಾಗಿರುವರು ಎಂಬ ಸುದ್ದಿ ಬಂದಿದೆ. ಶೀಘ್ರದಲ್ಲಿಯೇ ಗುಣಮುಖರಾಗಿ ಬನ್ನಿ ಎಂದು ಹಾರೈಕೆ.
—————–
2 thoughts on “‘ಚೆಂಬೆಳಕಿನ ಕವಿ’ ನಾಡೋಜ ಡಾ. ಚೆನ್ನವೀರ ಕಣವಿ”
ಹೂ ಮನಸಿನ ಕವಿಯ ಬಗ್ಗೆ ಬರೆದ ಲೇಖನ ಚೆನ್ನಾಗಿದೆ. ಕಣವಿ ಶೀಘ್ರ ಗುಣ ಮುಖರಾಗಲಿ.
ತುಂಬಾ ಚೆನ್ನಾಗಿದೆ