‘ಸಂಕ್ರಮಣ’ದ ಚಂಪಾ

“ಕನ್ನಡ’ ಮತ್ತು ‘ಬಂಡಾಯ’ ದ ನಡುವಿನ ಆಯ್ಕೆ ಪ್ರಶ್ನೆ ಬಂದಾಗ  ನನ್ನ ಮೊದಲ ಆಯ್ಕೆ ಕನ್ನಡವೇ” : ಚಂಪಾ

ಇಂದು ಅಸ್ತಂಗತರಾದ ಹಿರಿಯ ಸಾಹಿತಿ ಚಂಪಾ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸುವ ’ವಿಶ್ವಧ್ವನಿ’ ಬಳಗ.

ಎಂಭತ್ತರ ದಶಕದ ಸಂಗತಿ ಇದು. ಮುಂಬಯಿಯ ಕರ್ನಾಟಕ ಸಂಘದ ಡಾ.ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಗಣ್ಯ ಸಾಹಿತಿಗಳಿದ್ದ ವೇದಿಕೆಯಲ್ಲಿ ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯ ಕುರಿತಂತೆ ವಿಚಾರ ಗೋಷ್ಟಿ ನಡೆದಿತ್ತು.ಅಲ್ಲಿ ಸಂಕ್ರಮಣದ ಚಂದ್ರಶೇಖರ ಪಾಟೀಲರೂ ಇದ್ದರು.ಎಲ್ಲರೂ ಕನ್ನಡಿಗರ ಕೊಡುಗೆಯನ್ನು ಹೇಳಿದ್ದೇ ಹೇಳಿದ್ದು. ನೆರೆದಿದ್ದ ಕನ್ನಡಿಗರೆಲ್ಲ ಚಪ್ಪಾಳೆ ಮೂಲಕ ಸಂತೋಷ ವ್ಯಕ್ತ ಪಡಿಸಿ ಹೆಮ್ಮೆ ಪಟ್ಟಿದ್ದರು. ನಂತರ ಮಾತಾಡಿದ ಚಂದ್ರಶೇಖರ ಪಾಟೀಲರು “ರೆಡ್ ಲೈಟ್ ಕ್ಷೇತ್ರಕ್ಕೆ ಕನ್ನಡಿಗರ ಕೊಡುಗೆ ಯಾರೂ ಹೇಳಿಲ್ಲವಲ್ಲ” ಎಂದಾಗ ಇಡೀ ಸಭೆ ಮೌನವಾಯ್ತು.

ಇಲ್ಲಿ ಚಂಪಾ ರೆಡ್ ಲೈಟ್ ಕ್ಷೇತ್ರಕ್ಕೆ ಕನ್ನಡಿಗರ ‘ಕೊಡುಗೆ’ ..ಎಂದದ್ದು ಕೊಡುಗೆ ಅರ್ಥದಲ್ಲಿ ಅಲ್ಲ, ಅಲ್ಲಿದ್ದುದು ವ್ಯಂಗ್ಯ.  ಅಹಂಕಾರಕ್ಕೆ ಛಾಟಿ ಏಟು. ಅದಕ್ಕೆ ಉತ್ತರ ಕಷ್ಟ ಇತ್ತು. ಚಂಪಾ ಮಾತು ಅಂದರೆ ಹೀಗೆ.

ಪ್ರಖ್ಯಾತ ಬಂಡಾಯ ಸಾಹಿತಿ , ಸಂಕ್ರಮಣ ಪತ್ರಿಕೆಯ ಸಂಪಾದಕ , ಕವಿ, ನಾಟಕಕಾರ, ಕನ್ನಡ ಹೋರಾಟಗಾರ ಪ್ರೊ.ಚಂದ್ರಶೇಖರ್ ಪಾಟೀಲ್ (ಚಂಪಾ)  ಜನವರಿ 10 ರ ಮುಂಜಾನೆ( 2022) ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಂಪಾ ಅವರು ಜನವರಿ 10 ರ ಬೆಳಗ್ಗೆ ನಗರದ ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆಯಲ್ಲಿ ನಿಧನಹೊಂದಿದರು.ಚಂಪಾ ಅವರು ಒಬ್ಬ ಪುತ್ರ, ಒಬ್ಬರು ಪುತ್ರಿ ಸಹಿತ ಬಂಧುಮಿತ್ರರು, ಅಪಾರ ಕನ್ನಡಾಭಿಮಾನಿಗಳನ್ನು ಅಗಲಿದ್ದಾರೆ.

ಕನ್ನಡದ ರಕ್ಷಣೆಗೆ ‘ಕನ್ನಡ ಸಾಹಿತ್ಯ ಪರಿಷತ್’ ಬಲಾಢ್ಯ ವೇದಿಕೆ ಆಗಬೇಕಿದೆ  ಎಂದು ಆಶಿಸಿ ಕಸಾಪ  ಕೇಂದ್ರಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಒಮ್ಮೆ ಸೋತರೂ ಮತ್ತೊಮ್ಮೆ ಗೆದ್ದು ಬಂದವರು ಚಂಪಾ.

2003ರಲ್ಲಿ ಗೋರೆಗಾಂವ್ ವಿಚಾರ ಭಾರತಿ ಸಮ್ಮೇಳನದ ಸ್ವಾತಂತ್ರ್ಯೋತ್ತರ ಭಾರತ: ಪರಂಪರೆ- ಪ್ರಯೋಗ” ಸಮ್ಮೇಳನದ ಅಧ್ಯಕ್ಷರಾಗಿ ಮುಂಬಯಿಗೆ ಬಂದಿದ್ದಾಗ ಚಂಪಾ ರಿಗೆ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಾವೆಲ್ಲ ಗೆಲುವು ಹಾರೈಸಿದ್ದೆವು. ಆ ಹಾರೈಕೆ ಮುಂದೆ ನಿಜವೇ ಆಯ್ತು. ಅವರು ನಂತರ ಕೇಂದ್ರ ಕಸಾಪ ಅಧ್ಯಕ್ಷರಾದರು.  ಅವರ ಅಂದಿನ ಭಾಷಣ ನನ್ನ ಸಂಪಾದಕತ್ವದ  ‘ವಿಚಾರ ಭಾರತಿ’ ಕೃತಿಯಲ್ಲಿ ಪ್ರಕಟವಾಗಿತ್ತು.

“ಕಾಲದ ಯಾವುದೇ ಒಂದು ಕ್ಷಣಕ್ಕೂ ಸ್ವಂತದ ಅಸ್ತಿತ್ವವಾಗಲಿ, ಅನನ್ಯತೆಯಾಗಲಿ ಇರುವುದಿಲ್ಲ. ಅದೊಂದು ನಿರಂತರ ಪ್ರವಾಹ, ನಮ್ಮ ಸೀಮಿತ ಕಣ್ಣನೋಟಕ್ಕೆ, ಗ್ರಹಿಕೆಗೆ ಅನುಕೂಲವಾಗಲೆಂದು ಕಾಲವನ್ನು, ನಾವೇ ಸೃಷ್ಟಿಸಿಕೊಂಡ ಭಾಷೆಯ ಶಬ್ದಗಳ ಮೂಲಕ, ಭೂತ-ವರ್ತಮಾನ-ಭವಿಷ್ಯ ಅಂತ ವಿಭಜಿಸಿಕೊಂಡಿದ್ದೇವೆ. ವರ್ತಮಾನ ಎಂಬುದು ಭೂತವನ್ನು ತಲೆ ಮೇಲೆ ಹೊತ್ತುಕೊಂಡು ಭವಿಷ್ಯತ್ತಿನತ್ತ ನಡೆಯುತ್ತಿರುವ ಒಂದು ಕಾಲಬಿಂದು.” ಎಂದು ತಮ್ಮ ಭಾಷಣದ ಆರಂಭದಲ್ಲಿ ಅಂದು ಚಂಪಾ ಹೇಳಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಂತರ ಅದೇ ವರ್ಷ ನನಗೆ ಸಂದರ್ಶನ ಮಾಡುವ ಅವಕಾಶವೂ ಬಂದಿತ್ತು.

2005ರಲ್ಲಿ ನನಗೆ ‘ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ’ ಬಂದಿದ್ದಾಗ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿತ್ತು. ಪ್ರಶಸ್ತಿ ಸ್ವೀಕಾರದ ನಂತರ ನಾನು ಕಸಾಪ ಕೇಂದ್ರಕಛೇರಿಗೆ ಹೋದಾಗ ಅಲ್ಲಿ ಚಂಪಾ ಇದ್ದರು.  ಅವರು ಆಗ ಕಸಾಪ ಅಧ್ಯಕ್ಷರು.ತುಂಬಾ ಹೊತ್ತು ಅವರ ಜೊತೆ ಮಾತುಕತೆ ನಡೆಸಿದ್ದೆ. ಆ ಸಮಯ ಜರಗನಹಳ್ಳಿ ಶಿವಶಂಕರ್ ಕೂಡಾ ಇದ್ದರು. ವಿಶೇಷ ಅಂದರೆ ಆವಾಗ ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಎಚ್ ಬಿ ಎಲ್ ರಾವ್ ಆಯ್ಕೆ ಆಗಿದ್ದರು.ರಾಯರು ಘಟಕದ ಸಹ ಪ್ರಾಯೋಜಕತ್ವದಲ್ಲಿ ಇತರ ಸಂಸ್ಥೆಗಳ ಜೊತೆಗೂಡಿ ಮುಂಬಯಿಯಲ್ಲಿ ಯಾವುದೋ ಯಜ್ಞದ ಕಾರ್ಯಕ್ರಮ ಹಮ್ಮಿ ಕೊಂಡ ಆಮಂತ್ರಣ ಚಂಪಾ ಅವರ ಟೇಬಲ್ ಮೇಲಿತ್ತು.

ಅದನ್ನು ತೋರಿಸಿ ಚಂಪಾ “ಈ ರಾಯರು ಕಸಾಪ ಮೂಲಕ ಯಜ್ಞ ಮಾಡಿಸಿ ನಮಗೆಲ್ಲ ಉತ್ತರಿಸುವಂತೆ ಮಾಡುತ್ತಿದ್ದಾರೆ” ಎಂದಿದ್ದರು.

ಕಸಾಪ ಕೇಂದ್ರ ಅಧ್ಯಕ್ಷರಾಗಿ ಆಯ್ಕೆಯ ನಂತರ ಚಂಪಾ ಮುಂಬಯಿಗೆ ಬಂದಿದ್ದಾಗ ನಾನು ಸಂದರ್ಶನ‌ ಮಾಡಿದ್ದೆ. ಅವರು  ಕಸಾಪ ಮಹಾರಾಷ್ಟ್ರ ಘಟಕದ ಕಾರ್ಯಕ್ರಮಗಳಿಗೆ ಮುಂಬಯಿಗೆ ಬಂದಿದ್ದರು.

ಕಸಾಪ ವನ್ನು ಆ ಸಮಯ ಇದ್ದುದಕ್ಕಿಂತ  ಬದಲಿಸಲು ಚಂಪಾ ಅವರು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದರು.

“ಕನ್ನಡದ ಸಾಂಸ್ಕೃತಿಕ ವಲಯದ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಆಗಿದೆ. ನಾನು ಇಂಗ್ಲಿಷ್ ಪ್ರಾಧ್ಯಾಪಕ ಆಗಿದ್ದರೂ ಕನ್ನಡ ನನ್ನ ಜೀವನ, ಇಂಗ್ಲಿಷ್ ಉಪಜೀವನ, ಚುನಾವಣೆಯ ಸಂದರ್ಭದಲ್ಲಿ ನನ್ನ ಪ್ರಣಾಳಿಕೆಯಲ್ಲಿ ಸಪ್ತಸೂತ್ರಗಳನ್ನು ಹೇಳಿದ್ದೆ. ಅವುಗಳೆಂದರೆ ಕರ್ನಾಟಕದ ಎಲ್ಲ ಬಗೆಯ ಹಿತಾಸಕ್ತಿಗಳ ಪ್ರತಿಪಾದನೆ ಮತ್ತು ರಕ್ಷಣೆಗಾಗಿ ಪರಿಷತ್ತು ಬಲಾಢ್ಯ ವೇದಿಕೆಯಾಗಬೇಕು. ಸಾಹಿತ್ಯದ ಎಲ್ಲ ಪ್ರಮುಖ ಧಾರೆಗಳಿಗೆ ಮುಕ್ತ ಅವಕಾಶ, ಕನ್ನಡ ಪರ ಸಂಘಟನೆಗಳೊಂದಿಗೆ ಎಲ್ಲ ಬಗೆಯ ಸಹಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ ಮತ್ತು ಎಲ್ಲಾ ಅಕಾಡೆಮಿಗಳೊಂದಿಗೆ ನಿಕಟ ಸಂಬಂಧ ಸಹಯೋಗ, ಪರಿಷತ್ತಿನ ಎಲ್ಲಾ ಸ್ತರದ ಕಾರ್ಯ ಕಲಾಪಗಳಲ್ಲಿ ಮಹಿಳಾ ಸಾಹಿತಿಗಳಿಗೆ ಸಮಾನ ಪಾಲುಗಾರಿಕೆ, ನಾಡಿನ ಎಲ್ಲಾ ಪ್ರದೇಶಗಳಿಗೆ ಸಮಾನ ಪ್ರಾತಿನಿಧ್ಯ ಯುವ ಘಟಕಗಳಿಗೆ ಕೇಂದ್ರ ಘಟಕದಿಂದ ವಿಶೇಷ ಉತ್ತೇಜನ, ಪುಸ್ತಕ ಮಳಿಗೆಗಳ ಪ್ರಾರಂಭ ,ಸಾಹಿತಿಗಳಿಗೆ  ಕಾರ್ಯಾಗಾರಗಳು, ವಿಕೇಂದ್ರಿಕರಣದ ನೆಲೆಯಲ್ಲಿ ತಾಲೂಕು ಮತ್ತು ಜಿಲ್ಲಾಘಟಕಗಳಿಗೆ ಕೇಂದ್ರ ಘಟಕದಿಂದ ವಿಶೇಷ ಉತ್ತೇಜನ,ಪುಸ್ತಕ ಮಳಿಗೆಗಳ ಪ್ರಾರಂಭ, ಗಡಿನಾಡು-ಹೊರ ನಾಡುಗಳಲ್ಲಿ ನಿರಂತರ ಕಾರ್ಯಕ್ರಮಗಳು, ಪರಿಷತ್ತಿಗೆ ಭದ್ರ  ಬುನಾದಿ ಹಾಕಲು ಕೆಲವು ಯೋಜನೆಗಳು, ಕೇಂದ್ರ ಕಚೇರಿ ಆಡಳಿತದ ಆಧುನೀಕರಣ…. ಇತ್ಯಾದಿ ಇತ್ಯಾದಿಗಳು ನನ್ನ ಅವಧಿಯ ಕನಸ್ಸುಗಳು” ಎಂದಿದ್ದರು ಚಂಪಾ. 

“ಇಂದು ಪುಸ್ತಕ ಪ್ರಕಾಶನ, ಪುಸ್ತಕ ಮಾರಾಟದ ವಿಷಯದಲ್ಲಿ ಹೆಚ್ಚಿನ ಲೇಖಕ ಪ್ರಕಾಶಕರು

ತೊಂದರೆಯನ್ನೇ ಅನುಭವಿಸುತ್ತಿದ್ದಾರಲ್ಲ?” ಎಂದು ನಾನು ಪ್ರಶ್ನೆಯೊಂದನ್ನು ಮುಂದಿಟ್ಟಿದ್ದೆ.

ಅದಕ್ಕೆ ಚಂಪಾ, “ಒಂದು ರೀತಿಯಲ್ಲಿ ನಿಜ. ಅದಕ್ಕೆಂದೇ ಕೆಲವು ಯೋಜನೆಗಳನ್ನೂ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನ ಕೇಂದ್ರ ಕಸಾಪ ಕಚೇರಿಯ ಆವರಣದಲ್ಲಿ ಪ್ರತಿ ಶನಿವಾರ ‘ಪುಸ್ತಕ ಸಂತೆ’ ಎನ್ನುವುದು ಅವುಗಳಲ್ಲೊಂದು. 2005 ರ ಜನವರಿ 20 ರಿಂದ ಇದನ್ನು ಆರಂಭಿಸಿದ್ದೇವೆ, ಪ್ರತೀ ಶನಿವಾರ ಮಧ್ಯಾಹ್ನ 3 ರಿಂದ ರಾತ್ರಿ 9ರ ತನಕ ಇಲ್ಲಿಬಂದು ಪುಸ್ತಕಗಳನ್ನು ಮಾರಾಟ ಮಾಡಬಹುದು. ಯಾರೂ ಇಲ್ಲಿಗೆ ಬಂದರೂ ಪುಸ್ತಕ ಮಾರಾಟಕ್ಕೆ ಅನುಮತಿ ನೀಡಲಾಗುತ್ತದೆ. ಎಲ್ಲರಿಗೂ ಟೇಬಲ್-ಕುರ್ಚಿ ಕೊಡುತ್ತೇವೆ. ಜಿಲ್ಲಾ ಘಟಕಗಳಲ್ಲೂ ಪುಸ್ತಕ ಮಾರಾಟ ಮಳಿಗೆಗೆ ಪ್ರೋತ್ಸಾಹಿಸಲಾಗುತ್ತದೆ. ಕಸಾಪ ಅಧ್ಯಕ್ಷರಿಗೆ ಕಾರ್ಯಕ್ರಮಗಳಲ್ಲಿ ಹೂಮಾಲೆ ಕೊಡುವ ಬದಲು ಓದುವ ಪುಸ್ತಕ ಕೊಡಿ. ಆ ಪುಸ್ತಕಗಳ ಸಂಗ್ರಹವನ್ನು ಗ್ರಾಮಾಂತರ ಮತ್ತು ಗಡಿ ಪ್ರದೇಶಗಳ ವಾಚನಾಲಯಗಳಿಗೆ ತಲುಪಿಸುತ್ತೇವೆ.”( ಚಂಪಾ ಈ ಮಾತನ್ನು ಹೇಳಿದ್ದು 2005 ರಲ್ಲಿ.ಕಳೆದ ವರ್ಷ ಸಚಿವ ಸುನಿಲ್ ಕುಮಾರ್ ಈ ರೀತಿಯ ಮಾತನಾಡಿದ್ದು ಇಲ್ಲಿ ನೆನಪಿಸುವೆ.)

ಸಂಕ್ರಮಣ ಪ್ರಕಾಶನದಿಂದ ಅನೇಕ ಕೃತಿಗಳನ್ನು ಪ್ರಕಟಿಸಿದ್ದ ಚಂಪಾ ಹೇಳುತ್ತಾರೆ-

” ಒಳ್ಳೆಯ ಸಾಹಿತ್ಯದ ಜೊತೆ ಕೈಗೆಟುಕುವ ಬೆಲೆಯೂ ಇದ್ದರೆ ಮಾತ್ರ ಓದುಗರಿಗೆ ಪುಸ್ತಕ ವ್ಯಾಪಾರಿಗಳ ಹಂಗಿಲ್ಲದೆ ನೇರವಾಗಿ ತಲುಪಿಸಬಹುದು. ಇಂದು ಇಲೆಕ್ಟ್ರಾನಿಕ್ ಮಾಧ್ಯಮಗಳು ಸಾಂಸ್ಕೃತಿಕ ವಿಷಯಗಳಿಗೆ ಏನೂ ಸ್ಪಂದಿಸುತ್ತಿಲ್ಲ. ಒಂದು ಕೃತಿಯ ಬಗ್ಗೆ ಲೇಖಕರ ಬಗ್ಗೆ 5-10 ನಿಮಿಷ ಕೂಡಾ ಟಿ.ವಿ. ಚ್ಯಾನಲ್ ಗಳಲ್ಲಿ ಪರಿಚಯ ಬಂದರೆ ದೊಡ್ಡ ಕ್ರಾಂತಿ ಆಗಲು ಸಾಧ್ಯ. ಅದನ್ನು ಈಡಿಯಟ್ ಬಾಕ್ಸ್ ಅಂತಲೇ ನಾವೆಲ್ಲ ಬೈಯುತ್ತೇವೆ. ನಾವೇ ಈಡಿಯಟ್. ಅದನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಆಧುನಿಕ ತಂತ್ರಜ್ಞಾನ ಮತ್ತು ಜ್ಞಾನದ ಪ್ರಸಾರದ ನಡುವಿನ ಅಂತರ ಹೆಚ್ಚುತ್ತಿದೆ. ನಾವಿಂದು ಓದುಗರಿಗೆ ಸಾಹಿತ್ಯ ಪೂರೈಕೆ ಮಾಡುವುದರಲ್ಲಿ ಫೈಲ್ ಆಗಿದ್ದೇವೆ. ಆಕರ್ಷಕ ಮುದ್ರಣ ಇದ್ದರೆ ಸಾಲದು, ಕೈಗೆಟಕುವ ಬೆಲೆ ಇದ್ದಾಗಲೇ ಅದನ್ನು ಕೊಳ್ಳುತ್ತಾರೆ, ನಮ್ಮಲ್ಲಿ ಜ್ಞಾನದಾಹಿಗಳು ಇದ್ದಾರೆ. ಅವರಿಗೆ ಸರಿಯಾಗಿ ಪೂರೈಕೆ ಮಾಡುವ ವ್ಯವಸ್ಥೆಯಲ್ಲಿ ಹಿಂದುಳಿದಿದ್ದೇವೆ, ಅದನ್ನು ಸರಿಪಡಿಸಬೇಕಾಗಿದೆ.” ಎಂದಿದ್ದರು ಚಂಪಾ.

ಹಿಂದೊಮ್ಮೆ ಚುನಾವಣೆಯಲ್ಲಿ ಪುನರೂರು ವಿರುದ್ಧ ಸೋತಿದ್ದರು ಚಂಪಾ. ಆದರೆ 2004 ರಲ್ಲಿ ಗೆದ್ದು ಬಂದರು.ಗೋಕಾಕ ಚಳುವಳಿ ಮತ್ತು ಬಂಡಾಯ ಸಾಹಿತ್ಯ ಚಳುವಳಿಯಲ್ಲಿ ಚಂಪಾ ಮುಂಚೂಣಿಯಲ್ಲಿ ಇದ್ದವರು. ಈ ಎರಡೂ ಚಳುವಳಿ ಬಗ್ಗೆ ತಮ್ಮ ಅನಿಸಿಕೆ ಈಗ ಯಾವ ರೀತಿಯಲ್ಲಿ ವ್ಯಕ್ತಪಡಿಸುವಿರಿ? ಎಂದು ಕೇಳಿದ್ದೆ ನಾನು.

“ಗೋಕಾಕ ಚಳುವಳಿ ಅದು ಶಿಕ್ಷಣಕ್ಕೆ ಸಂಬಂಧಿಸಿದ ಸಣ್ಣ ವಿಷಯವಾಗಿತ್ತು. ಸಂಸ್ಕೃತದ ಸ್ಥಾನ ಮತ್ತು ಕನ್ನಡದ ಸ್ಥಾನ ಏನಿರಬೇಕು ಎನ್ನುವ ಚರ್ಚೆ ಅಲ್ಲಿತ್ತು. ಸಾಂಸ್ಕೃತಿಕ ಚಳುವಳಿ ರಾಜಕೀಯ ಪಲ್ಲಟವನ್ನೇ ಕಾಣಿಸಿತ್ತು, ರೈತ ಚಳುವಳಿಯೂ ಸೇರಿ ಇವರ ಒತ್ತಡ ಬಹಳ ಪರಿಣಾಮ ಬೀರಿತ್ತು. ಗೋಕಾಕ ಚಳುವಳಿ ಸಂದರ್ಭದಲ್ಲಿ ನನ್ನ ಮತ್ತು ಬಂಡಾಯ ಸಾಹಿತ್ಯ ಸಂಘಟನೆಯ ನಡುವೆ ಮೊದಲ ಬಾರಿ ಬಿರುಕು ಕಾಣಿಸಿಕೊಂಡಿತು. ಎಡಪಂಥೀಯ ಒಲವುಳ್ಳವರು ಆಂದೋಲನದಲ್ಲಿ ಭಾಗವಹಿಸಬೇಕೋ-ಬೇಡವೋ ಎಂಬ ಗೊಂದಲ ಹುಟ್ಟಿಕೊಂಡಿತು. ಮಾರ್ಕ್ಸ್‌ವಾದಿಗಳು ಚಳುವಳಿಯನ್ನು ವಿರೋಧಿಸಿದರು. ‘ಕನ್ನಡ’ ಮತ್ತು ‘ಬಂಡಾಯ’ ಈ ಎರಡರ ನಡುವಿನ ಆಯ್ಕೆಯ ಪ್ರಶ್ನೆ ಬಂದಾಗ ಹಿಂದೆಯೂ ಹೇಳಿದಂತೆ ನನ್ನ ಮೊದಲ ಆಯ್ಕೆ ಕನ್ನಡವೇ ಆಗಿದೆ. ಅನಿವಾರ್ಯ ಪರಿಸ್ಥಿತಿ ಬಂದೊದಗಿದರೆ ಸಂಘಟನೆ ಬಿಡುತ್ತೇನೆ, ಆದರೆ ‘ಬಂಡಾಯ’ವನ್ನಲ್ಲ. ಬಂಡಾಯ ಅದು ಮನೋಧರ್ಮ. ಹಾಗಿದ್ದೂ ಒಮ್ಮೆ ಸಂಘಟನೆ ಬಿಟ್ಟರೂ ಸಹ ಮತ್ತೆ ಬಂದೆ. ಈ ದಿನಗಳಲ್ಲಿ ಓದುಗರ ಬರಹಗಾರರ ಸಂಖ್ಯೆಯೂ ಸಾಕಷ್ಟು ಬೆಳೆದಿದೆ. ಮೊದಲಿನ ಆ ಸಿಟ್ಟು ಆಕ್ರೋಶ ತಣ್ಣಗಾಗಿದೆ. ಇನ್ನೊಂದೆಡೆ ಬಂಡಾಯದಿಂದಾಗಿ ಇಂದು ಮಹಿಳೆಯರೂ ಪ್ರಬುದ್ಧವಾಗಿ ಬರೆಯುತ್ತಿದ್ದಾರೆ.  ಅದು ಸಂತೋಷ, ಅಂತೂ ಸಂಘಟನೆ ಸ್ವಲ್ಪ ರಿಪೇರಿ ಆಗಬೇಕಾಗಿದೆ.” ಎಂದಿದ್ದರು.

ಮತ್ತೊಂದು ಪ್ರಶ್ನೆ ಅಲ್ಲಿ ಮುಂದಿಟ್ಟಿದ್ದೆ- “ನವ್ಯ ಸತ್ತಿದೆ ಅನ್ನುತ್ತಾರೆ. ಆದರೆ, ಹಾಗೆ ಅಂದವರೂ ಸಹ (ಬಂಡಾಯದವರೂ)ನವ್ಯರ ಕಾಲದಲ್ಲಿದ್ದ ಕೆಲವು ವಿಮರ್ಶಕರು ‘ತಮ್ಮ ಕೃತಿಗಳಿಗೆ ಏನು ಪ್ರತಿಕ್ರಿಯಿಸುತ್ತಾರೆ’ ಎಂದು  ನಿರೀಕ್ಷಿಸುವುದು ಯಾಕೆ?

 ಆಗ ಚಂಪಾ ಶಾಂತವಾಗಿ- “ಕಾರಣ ಇದೆ, ನವ್ಯರ ಕಾಲದ ವಿಮರ್ಶಕರು ಅನುಭವದ ಹಿನ್ನೆಲೆಯಲ್ಲಿ ಬರೆಯುತ್ತಾರೆ. ಹೀಗಾಗಿ ಯುವ ಲೇಖಕರು ಸಹಜವಾದ ನಿರೀಕ್ಷೆ ಇರಿಸುತ್ತಾರೆ. ಇಂದು ‘ದೊಡ್ಡ ಜನ’ಗಳು ತಮ್ಮ ಕೃತಿಯನ್ನು ಹೊರತುಪಡಿಸಿ ಇನ್ನಿತರರನ್ನು ಓದುವುದಿಲ್ಲ, ಚರ್ಚೆ ಇಲ್ಲ, ಸಂವಾದ ಇಲ್ಲ, ಒಳ್ಳೆಯ ಕೃತಿ ಬಂದರೂ ಗಂಭೀರವಾದ ಚರ್ಚೆ ಆಗುವುದಿಲ್ಲ. ರಿವ್ಯೂ, ಎಷ್ಟೇ ಚಿಕ್ಕದಾಗಿ ಬರಲಿ: ಬಂತು ಎಂದರೆ ವಿಮರ್ಶಕರೂ ಬರಹಗಾರನೂ ಧನ್ಯ ಎನ್ನುವಂತಹ ಪರಿಸ್ಥಿತಿ.” ಎಂದು ನಗುತ್ತಾ ಹೇಳಿದ್ದಿದೆ.

“ಸಂಕ್ರಮಣ’ ಪತ್ರಿಕೆ 1964ರಿಂದ ನಿಯಮಿತವಾಗಿ ಪ್ರಕಟವಾಗುತ್ತಾ ಬಂದ ಸಾಹಿತ್ಯ ಪತ್ರಿಕೆ. ಸಾಹಿತ್ಯ ಪತ್ರಿಕೆಗಳೆಲ್ಲ ಈ ದಿನಗಳಲ್ಲಿ ಒಂದೊಂದೇ ನಿಂತು ಬಿಡುತ್ತಿವೆ. ಲೇಖನಗಳ ಅಭಾವವೇ? ಓದುಗರ ಅಭಾವವೇ?” ಎನ್ನುವ ನನ್ನ ಅನುಮಾನ‌ ಮುಂದಿಟ್ಟೆ.

 ಅದಕ್ಕೆ ಚಂಪಾ- “60ಮತ್ತು70ರ ದಶಕದಲ್ಲಿ ಸಾಹಿತ್ಯ ಪತ್ರಿಕೆಗಳು ಸುದ್ದಿ ಮಾಡುತ್ತಿತ್ತು. ಅಂದಂತೆ ನಾನೂ ಪತ್ರಿಕೆಗಾಗಿ ಚಂದಾದಾರರ ನಿರೀಕ್ಷೆ ಇರಿಸುತ್ತೇನೆ. ಕಾಲ ಕ್ರಮೇಣ ಒಂದೊಂದೇ ಪತ್ರಿಕೆಗಳು ನಿಂತು ಹೋಗಲು ಶುರುವಾಯಿತು. ಆದರೆ ನನಗೆ ಅಂತಹ ಕಷ್ಟವೇನೂ ಕಂಡು ಬರಲಿಲ್ಲ. ಸಂಕ್ರಮಣ ಮೊದಲಿನಿಂದಲೂ ಮುಕ್ತ ವೇದಿಕೆಯಾಗಿತ್ತು. ಆಶಯವೂ ಪ್ರಗತಿಪರವೇ ಇದೆ. ಮುಂಚಿನ ಹಾಗೆ ಈಗ ಲೇಖನಗಳು ಬರುತ್ತಿಲ್ಲವೆಂದು ಕೆಲವರು ಹೇಳುವುದುಂಟು. ಅದನ್ನು ನಂಬಲಾರೆ, ದೈನಿಕಗಳಲ್ಲಿ ದೀರ್ಘ ಲೇಖನಕ್ಕೆ ಅವಕಾಶವಿಲ್ಲ ಆದರೆ ಸಂಕ್ರಮಣ ಕೆಲವೊಮ್ಮೆ ಇವತ್ತು ಪುಟದ  ದೀರ್ಘಲೇಖನವನ್ನೂ ಪ್ರಕಟಿಸುತ್ತದೆ. ಹಾಗಾಗಿ ಇಂತಹ ಲೇಖಕ ಓದುಗರಿಗೆ ಸಂಕ್ರಮಣವೇ ಬೇಕು”.

ಕೊನೆಯ ಪ್ರಶ್ನೆ- “ತಾವು ನಾಟಕಕಾರರಾಗಿಯೂ ಪ್ರಸಿದ್ಧರಿದ್ದೀರಿ,  ಮುಂಬಯಿಯ ಗೋಷ್ಠಿಯಲ್ಲಿ ತಾವು ಮತ್ತೆ ನಾಟಕ ಬರೆಯಬೇಕು ಅಂದಿದ್ದೀರಿ. ಇಂದಿನ ಒಟ್ಟು ನಾಟಕರಂಗದ ಸ್ಥಿತಿ ಹೇಗಿದೆ?

ಚಂಪಾ -“ವೃತ್ತಿ ನಾಟಕರಂಗ ಇಂದು ಬಿದ್ದು ಹೋಗಿದೆ. ಸಿನಿಮಾ-ಟಿ.ವಿ. ಎದುರು ವೃತ್ತಿ ನಾಟಕಕ್ಕೆ ಮೊದಲಿನಂತಹ ವೈಭವ ಇಲ್ಲ. ಆದರೆ ಬೆಂಗಳೂರಿನಲ್ಲಿ ಪ್ರತೀದಿನ ವೃತ್ತಿ ನಾಟಕ ತಂಡದ ಏನಾದರೂ ಪ್ರದರ್ಶನ ಇದ್ದೇ ಇದೆ ಎನ್ನುವುದೂ ಗಮನಾರ್ಹ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡ ರಂಗಭೂಮಿ ಇಳಿಮುಖದತ್ತ ಸಾಗುತ್ತಿದೆ. ಅನುವಾದ, ಕತೆ, ಕಾದಂಬರಿಯ ರೂಪಾಂತರದ ಹೊರತು 70-80ರ ದಶಕದ ‘ವೇವ್’ ಈಗ ಕಾಣಿಸುತ್ತಿಲ್ಲ. ಆದರೆ ಇಂದಿಗೂ ಒಳ್ಳೆಯ ನಾಟಕಗಳಿಗೆ ಪ್ರೇಕ್ಷಕರು ಇದ್ದೇ ಇರುತ್ತಾರೆ.”

ಮೈಸೂರಿನಲ್ಲಿ ಜರಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಂಪಾ ಆಯ್ಕೆಯಾಗಿದ್ದರು.ಆ ಸಮಯ “ಇದು ಇಡೀ ನಾಡು ಕೊಡುವ ಗೌರವದ ಸಂಕೇತ, ಅಕ್ಷರ, ಬದುಕು, ಕ್ರಿಯೆಗಳ ಮೂಲಕ ಕೊಡುಗೆ ನೀಡಿದವರಿಗೆ ಸಮ್ಮೇಳನದ ಅಧ್ಯಕ್ಷ ಪಟ್ಟ ನೀಡುತ್ತಾರೆ. ಆ ಪಟ್ಟಿಯಲ್ಲಿ ನಾನು ಸೇರಿದೆನಲ್ಲ ಎಂಬುದು ಸಮಾಧಾನಕ ಸಂಗತಿ” ಎಂದು ಆ ದಿನ ಅವರ ಪ್ರತಿಕ್ರಿಯೆಯಾಗಿತ್ತು.

ಚಂಪಾ ಅವರು ಕನ್ನಡಪರ ಹೋರಾಟಗಾರರೂ ಹೌದು. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹತ್ತೀಮತ್ತೂರಿನಲ್ಲಿ 1939 ಜೂನ್ 18 ರಂದು ಜನಿಸಿದ ಚಂಪಾ ಅವರು ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನ ಮೂಲಕ ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಭಾಷಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಇಂಗ್ಲಿಷ್ ಭಾಷಾ ವಿಷಯದಲ್ಲಿ ಭೋದನಾ ವೃತ್ತಿಯನ್ನು ಆರಂಭಿಸಿದವರು. ಇದರ ಜತೆಜತೆಗೆ ಕಾವ್ಯ, ನಾಟಕ ಕ್ಷೇತ್ರಗಳಲ್ಲೂ ಎಂ.ಎ. ಪದವಿ ಗಳಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿಯೂ ಸೇವೆ ಮಾಡಿದವರು‌

2010ರ ಇವರ ‘ದೇವಬಾಗ’ ಸಂಕಲನದ ನಂತರದ ಎಲ್ಲ ನಮೂನೆಯ ಎಲ್ಲ ಕವನಗಳು ಇಲ್ಲಿವೆ ಎಂದು ಹೇಳಿರುವ ‘ಮತ್ತೊಂದು ಎಲೆ’ ಕವನ ಸಂಕಲನ ಬಂದಿತ್ತು. ಇದರಲ್ಲೊಂದು ಮಾತು ಹೇಳಿದ್ದಾರೆ, “ನನ್ನ ಮೊದಲ ಪ್ರೀತಿ ಯಾವಾಗಲೂ ಕಾವ್ಯವೇ, ನನ್ನ ಅರಿವಿನ ಒಳಗೋ ಅರಿವಿನ ಆಚೆಗೋ ನನಗೆ ದಕ್ಕುವುದೆಲ್ಲ (ರೂಪಕ) ಮೆಟಫರುಗಳ ಮೂಲಕವೇ. ಅದೇ ಮುಂದೆ ಕವನವೋ, ನಾಟಕವೋ, ಪ್ರಬಂಧವೋ,ಕತೆಯೋ ಅಥವಾ ಬರೀ ಮಾತೋ ಆಗಿ ಒಂದು ರೂಪ ತಾಳುತ್ತದೆ”. ಮತ್ತೊಂದು ಎಲೆ’ ಇವರ ಹದಿಮೂರನೆಯ ಕವನ ಸಂಕಲನವಾಗಿದೆ.

ಚಂಪಾ ಎಂದೊಡನೆಯೇ ‘ಸಂಕ್ರಮಣ’ ಮಾಸಿಕ ನೆನಪಾಗಬೇಕು. 1964 ರಲ್ಲಿ ಸಮಾನ ಮನಸ್ಕರಾದ ಮೂವರು ಸೇರಿ ಈ ಪತ್ರಿಕೆ ಆರಂಭಿಸಿದವರು. ನಂತರ ಇಬ್ಬರು ಬಿಟ್ಟರೂ ತಾವೇ ಮುನ್ನಡೆಸಿದರು. ಎಪ್ಪತ್ತರ ದಶಕದ ಕೊನೆಗೆ ಕಾಣಿಸಿಕೊಂಡ ದಲಿತ ಬಂಡಾಯ ಸಾಹಿತ್ಯ ಚಳುವಳಿಗೆ ಈ ‘ಸಂಕ್ರಮಣವೂ ಪ್ರಮುಖ ವೇದಿಕೆ ಕಲ್ಪಿಸಿತ್ತು.

‘ಸಂಕ್ರಮಣ’ ಪತ್ರಿಕೆಯ ‘ಚಂಪಾ’ ಕಾಲಂ ಬಹು ಪ್ರಖ್ಯಾತಿ. ಅಂತೆಯೇ ಪ್ರತಿವರ್ಷ ಸಂಕ್ರಮಣ ಸಾಹಿತ್ಯ ಸ್ಪರ್ಧೆಯ ಮೂಲಕ ಉತ್ತಮ ಸಾಹಿತ್ಯ ರಚನೆಗೆ ಸ್ಫೂರ್ತಿ ನೀಡುತ್ತಾ ಬಂದವರು.

1992, 2003, 2012 ಹೀಗೆ ಮೂರು ಬಾರಿ ನನಗೆ ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಬಂದಿರುವುದಕ್ಕೂ ಖುಷಿ ಆಗಿದೆ. ಗೋಕಾಕ್ ಚಳುವಳಿ, ಬಂಡಾಯ ಸಾಹಿತ್ಯ ಚಳುವಳಿಗಳಲ್ಲಿ ಚಂಪಾ ಅವರ ಕೊಡುಗೆ ಅಪಾರ. ಬೆಂಗಳೂರಲ್ಲಿ ನಡೆಯುವ ಪ್ರಗತಿಪರ ಚಳುವಳಿಗಳಲ್ಲಿ ಚಂಪಾ ಅವರು ಬಂದೇ ಬರುತ್ತಿದ್ದರು. ಕನ್ನಡದ ಬಗ್ಗೆ ಚಂಪಾ ಅವರಿಗೆ ಅಪಾರ ಪ್ರೀತಿ, 

‘ಒಂದು ಲೇಖನದಲ್ಲಿ ಚಂಪಾ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಪ್ರಯತ್ನಿಸಿದ ಸಾಹಿತಿಗಳಿಗೆ ಅದು ಸಿಗದಿದ್ದಾಗ ಅವರ ಆತ್ಮ ಸತ್ತ ನಂತರ ಪರಿಷತ್ತಿನ ಕಟ್ಟಡದ ಸುತ್ತಾ ಭೂತಗಳಾಗಿ ತಿರುಗುತ್ತಿರುವುದಾಗಿ ತಮಾಷೆ ಮಾಡಿದ್ದಿದೆ. ಅಂತೆಯೇ ಪ್ರಶಸ್ತಿ ಸಿಗಬೇಕಾದರೆ, ಆಯ್ಕೆ ಸಮಿತಿಯವರನ್ನು ಹಿಡಿದಿಟ್ಟು’ಕೊಳ್ಳಬೇಕು.ಅವರನ್ನು ಹಿಡಿದುಕೊಳ್ಳಲು’ ಯಾರಿಗೆ ಸಾಧ್ಯವೋ ಅವರನ್ನು ಮೊದಲು ‘ಹಿಡಿದು ಕೊಳ್ಳಬೇಕು’ ಎಂದೂ ವ್ಯಂಗ್ಯವಾಡಿದ್ದಿದೆ. ಇದೊಂದು ಗಮ್ಮತ್ತಿನ ಚದುರಂಗದಾಟ ಎಂದಿದ್ದರು.

ಚಂಪಾ ಬರಹ ಅಂದರೆ ಅಲ್ಲಿ ಹಾಸ್ಯ ಕೂಡ ಸೇರಿಕೊಂಡಿರುತ್ತದೆ. ಆದರೆ, ಅಷ್ಟೇ ಮೊನಚೂ ಇದೆ. ಕಾವ್ಯ, ನಾಟಕ, ಪ್ರಬಂಧ, ಅಂಕಣ ಬರಹ, ಸಂಪಾದಿತ…. ಎಂದೆಲ್ಲ ಕೃತಿಗಳು ಹೊರಬಂದಿವೆ. 1996-99 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, 2004-2008 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಸೇವೆಗೈದಿರುವ ಚಂಪಾ ಅವರು, 83 ನೇ ಅ.ಭಾ.ಕ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 

ಚಂಪಾ ಅವರ ಕೈಯಿಂದ ನನಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಸ್ವೀಕರಿಸುವ ಭಾಗ್ಯ 2014 ರಲ್ಲಿ  ಬೆಂಗಳೂರಲ್ಲಿ ಸಿಕ್ಕಿತ್ತು.ಐದು ವರ್ಷದ ಹಿಂದೆ ಬೆಂಗಳೂರಿನ ಸುಂದರ ಪ್ರಕಾಶನದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ  ಚಂಪಾ ಅವರನ್ನು ನಾನು ಭೇಟಿಯಾಗಿದ್ದೆ.ನಂತರ 2019ರಲ್ಲಿ ಧಾರವಾಡದಲ್ಲಿ ಜರಗಿದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಹೊರನಾಡ ಕನ್ನಡಿಗರ ಸಮಸ್ಯೆಗಳು ಗೋಷ್ಟಿಯಲ್ಲಿ  ಪ್ರಬಂಧ ಮಂಡನೆ ಇತ್ತು.ಅಲ್ಲಿ ಚಂಪಾ ಅವರನ್ನು ನೋಡಿರುವುದೇ ನಮ್ಮ ಕೊನೆಯ ಭೇಟಿ ಆಯಿತು.

———

ಶ್ರೀನಿವಾಸ ಜೋಕಟ್ಟೆ, ಮುಂಬಯಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

3 thoughts on “‘ಸಂಕ್ರಮಣ’ದ ಚಂಪಾ”

  1. ಚಂಪಾರವರ ಅದ್ಭುತ ಪರಿಚಯ. ಅಗಲಿದ ದಿವ್ಯಾತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ.

  2. Dr B. Janardana Bhat

    ತುಂಬಾ ಮಾಹಿತಿಪೂರ್ಣವಾಗಿದೆ. ಅವರ ವಿಚಾರಗಳು, ಲೇಖಕರ ಜತೆಗಿನ ಚರ್ಚೆಗಳ ವಿವರಗಳು ಸೇರಿಕೊಂಡು ಸಂಗ್ರಹಯೋಗ್ಯವಾಗಿದೆ.

  3. Raghavendra Mangalore

    “ಪ್ರೀತಿ ಇಲ್ಲದೇ ನಾನು ಏನನ್ನೂ ಮಾಡಲಾರೆ, ಕೊನೆಗೆ ದ್ವೇಷವನ್ನು ಸಹಾ..” ಇದು ಅವರ ಮನದಾಳದ ಮಾತುಗಳು. ವಿರೋಧಾಭಾಸದ ಬದುಕು ಅವರದಾದರೂ ಅವರ ಕನ್ನಡ ಪ್ರೀತಿ ಮಾತ್ರ ಅನನ್ಯ. ಅದಕ್ಕೆ ಒಂದು ಉದಾಹರಣೆ ಅವರೇ ಹೇಳಿದ್ದು – “ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ”. ಚಂಪಾ ಅವರ ಸಾವು ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ನಷ್ಟ ಉಂಟು ಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರಿಗೆ ಭಾವಪೂರ್ಣ ಶೃದ್ಧಾಂಜಲಿ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter