(2021ರ 3k ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಫೋಟೋ ಕವನ)
ಹಿಡಿದ ಮೇಲೆ ಬಿಡದೆ ಜಡಿವ ಮಳೆ,ಈ ಇಳೆ ನಾಳೆಗಳ ಭಯದಿ ಇಂದು ಬದುಕುವ ಜನಕೆ ಜೀವಸೆಲೆಯ ಬೆಂಕಿ, ಆರದಂತೆ ಕೊಡೆಹಿಡಿದ ಭರವಸೆಗೆ ಬೆಚ್ಚಗಿನ ಕನಸ ಮಾರುವ ಚಿಂತೆ ಜೀವನ ಚಕ್ರಕೆ ಸಿಕ್ಕ ಕಾಲುಗಳಿವು, ಕಸುವು ಕಳೆಯುವವರೆಗೆ ತುಳಿಯಬೇಕು ಹೊತ್ತೊಯ್ವ ಸರುಕುಗಳು ನೆನೆಯದಂತೆ ಜತನ ಮಾಡಿ ಗುರಿ ತಲುಪುವವರೆಗೆ ನೀರು ತುಂಬಿದ ಹೊಂಡಗಳು, ನೊರಜು ಗಲ್ಲಿನ ರಸ್ತೆಗಳು, ದಾರಿ ಮರೆಯಾಗಿಸಿ ರಾಚಿ ಹೊಡೆವ ಮಳೆಯಲ್ಲು ರಹದಾರಿ -ಯ ನಿಲ್ದಾಣಗಳ ತಲುಪಬೇಕು ರಸ್ತೆಯುದ್ದಕು ತರತಮದ ತಕ್ಕಡಿಗಳು ತೂಗುವ ಮನುಜ ಮಾನದಂಡನೆಗಳು ಉರಿವ ಕೆಂಡ, ಸೂರಿಲ್ಲದ ಇಹಕೆ ಮಳೆ ಬಿಸಿಲೇನು ಹಾದಿ ಕ್ರಮಿಸಲು ತೊಡಲಿಲ್ಲ ಪಾದರಕ್ಷೆ ಬದುಕಿಗೊಂದು ತೂಗುವ ಫಲಕ ಬಿಕರಿಗೆಂದೇ ಇರುವ ಜಾಹೀರಾತು ನೆನೆ ನೆನೆದು ನಿಂತು ನೀರಾಗುವ ಹೊತ್ತು ತಟ್ಟನೆ ಭಣಗುಡುವ ಭರವಸೆಯ ಗಲ್ಲಿಗಳು ಹೆಗಲೇರಿ,ಮೈಗಂಟಿ ಜಂಟಿಯಾಗುವ ಬಟ್ಟೆ ಒದ್ದೆಯೋ, ಒಣಗಿತೋ ಅರಿಯಲಾಗದ ಹೊಟ್ಟೆ ಮಿಂಚೊ, ಸಿಡಿಲೋ ಕೈ ಬಿಡದೆ ಪೊರೆವ ಕಾಯಕದಿ ತೊಯ್ಯಲಾರದು ಜೀವಶ್ರಮದ ಘನತೆ!
2 thoughts on “ತೊಯ್ಯಲಾರದು ಘನತೆ”
ಕವನ ತುಂಬಾ ಭಾವನಾತ್ಮಕವಾಗಿದೆ ಮತ್ತು ಎದೆಯನ್ನು ತಟ್ಟುವಲ್ಲಿ ಯಶಸ್ವಿಯಾಗಿದೆ. ಚೆನ್ನಾಗಿದೆ.
ಧನ್ಯವಾದಗಳು ರಾಘವೇಂದ್ರ ಅವರೆ.