ಪ್ರಶಸ್ತಿ ಪುರಾಣದ ಕುರಿತು ಬರೆಯ ಹೊರಟರೆ ಅದೊಂದು ದೀರ್ಘ ಕಾದಂಬರಿಯಾಗುತ್ತದೆ. ಬರೆದಂತೆಲ್ಲಾ ಭಗವಾನ್ ವೀರಾಂಜನೇಯನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ನಮ್ಮ ಶ್ರೇಷ್ಠ ಕವಿ ಗೋಪಾಲಕೃಷ್ಣ ಅಡಿಗರು ಹೇಳಿದಂತೆ “ಹನುಮದ್ವಿಕಾಸಕ್ಕೆ ಎಲ್ಲಿದೆ ಎಲ್ಲೆ!” ಎಂಬುದನ್ನು ಸ್ವಲ್ಪ ಬದಲಿಸಿ (ಅಡಿಗರ ಕ್ಷಮೆ ಕೋರಿ) “ಪ್ರಶಸ್ತಿ ಪುರಾಣಕ್ಕೆ ಎಲ್ಲಿದೆ ಕೊನೆ!” ಎಂದು ಧೈರ್ಯವಾಗಿ ಹೇಳಬಹುದು.
ಹುಬ್ಬಳ್ಳಿ ದೇಶದ ಕಡೆಯ ಪ್ರಖ್ಯಾತ ಲೇಖಕಿಯೊಬ್ಬಳು (ತನ್ನನ್ನು ತಾನೇ ಕನ್ನಡದ ಮಹತ್ವದ ಲೇಖಕಿ ಎಂದು ಈ ಮಹಿಳೆ ಸ್ವಯಂಘೋಷಿಸಿಕೊಂಡಿದ್ದಾಳೆ!) ಪ್ರಶಸ್ತಿ-ಪುರಸ್ಕಾರಗಳಿಗೋಸ್ಕರ ಮಾಡುವ ಕುತಂತ್ರಗಳು ಎಂತಹ ನೀಚ ರಾಜಕಾರಣಿಗಳೂ ನಾಚುವಂತೆ ಮಾಡುತ್ತವೆ. ಕನ್ನಡದ ಬಹುತೇಕ ಹಿರಿಯ-ಕಿರಿಯ ಸಾಹಿತಿಗಳೊಡನೆ ತಾನಾಗಿಯೇ ಪರಿಚಯ ಮಾಡಿಕೊಂಡು ಅವರವರ ವಯಸ್ಸು, ಸ್ಥಾನ-ಮಾನ ಮತ್ತು ಅವರಿಂದ ತನಗೆ ಭವಿಷ್ಯದಲ್ಲಿ ಉಂಟಾಗಬಹುದಾದ ಪ್ರಯೋಜನಗಳನ್ನು ಆಧರಿಸಿ ಅವರನ್ನು ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ, ಮಗ-ಮಗಳು, ಅಳಿಯ-ಸೊಸೆ ಮತ್ತು ಅತ್ತೆ-ಮಾವ ಎಂದು ಕರೆದು ತಾತ್ಕಾಲಿಕ ಸಂಬಂಧ ಸ್ಥಾಪಿಸಿಕೊಳ್ಳುತ್ತಾಳೆ.
ಇಂತಹ ತಾತ್ಕಾಲಿಕ ಬಂಧುಗಳು ಹುಬ್ಬಳ್ಳಿ ದೇಶದ ಕಡೆ ಬಂದರೆ ಇವಳ ಮನೆಗೇ ಬಂದಿರಬೇಕು. ಇಲ್ಲದಿದ್ದರೆ ದೊಡ್ಡ ರಾದ್ಧಾಂತ ಮಾಡಿಬಿಡುತ್ತಾಳೆ. ಇಂತಹ ಅತಿಥಿಗಳನ್ನು ಬಕರಾ ಮಾಡಲೆಂದೇ ತನ್ನ ಮನೆಗೆ ಹೊಂದಿಕೊಂಡಂತೆ ಸುಸಜ್ಜಿತ ಗೆಸ್ಟ್ ರೂಮೊಂದನ್ನು ಕಟ್ಟಿಸಿದ್ದಾಳೆ. ಇದರಿಂದ ಸಾಕಷ್ಟು ಪ್ರಯೋಜನವಾಗಿದೆ. ಇವಳ ಗಂಡನನ್ನು ಮಹಾನ್ ಲೇಖಕ ಬೀಚಿಯವರು ನೋಡಿದ್ದರೆ ತುಂಬ ಸಂತೋಷ ಪಡುತ್ತಿದ್ದರು. ಏಕೆಂದರೆ ಬೀಚಿಯವರ ಕಾದಂಬರಿಗಳಲ್ಲಿ ಬರುವ ‘ಅಮ್ಮಾವ್ರ ಗಂಡ’ ಅಥವಾ ‘ಮೇಡಮ್ಮನ ಗಂಡ’ ಎಂಬ ಪಾತ್ರಕ್ಕೆ ಈ ಭೂಪ ಅತ್ಯಂತ ಸೂಕ್ತ ಉದಾಹರಣೆ!
ಕಲ್ಲು ಹೃದಯದವರೆಂದು ಖ್ಯಾತರಾದ ಅನೇಕ ದೊಡ್ಡ ವಿಮರ್ಶಕರಿಂದ ತನ್ನ ದ್ವಿತೀಯ ದರ್ಜೆಯ ಕೃತಿಗಳಿಗೆ ‘ವಹವ್ವಾ! ವಹವ್ವಾ!’ ಎಂಬಂತಹ ಮುನ್ನುಡಿಗಳನ್ನು ಬರೆಸಿಕೊಂಡಿದ್ದಾಳೆ. ತುಂಬ ಚೆನ್ನಾಗಿ ಬರೆಯುತ್ತಿದ್ದ ಹಿರಿಯ ಕವಿಯೊಬ್ಬರು ಎಷ್ಟು ಅನುನಯಿಸಿದರೂ ಮುನ್ನುಡಿ ಬರೆಯದ ಕಲ್ಲು ಹೃದಯದ ವಿಮರ್ಶಕನೊಬ್ಬ ಈ ಖತರ್ನಾಕ್ ಲೇಖಕಿ ‘ನನ್ನ ಪುಸ್ತಕಕ್ಕೆ ನೀವೊಂದು ಮುನ್ನುಡಿ ಬರೆಯುವುದಿಲ್ಲವೇ ಚಿಕ್ಕಪ್ಪ?’ ಎಂದು ಕೇಳಿದ್ದೇ ತಡ ಅವಳ ಪ್ರೀತಿ-ವಾತ್ಸಲ್ಯಕ್ಕೆ ತತ್ತರಿಸಿ ‘ಆಹಾ! ಓಹೋ! ಅಬ್ಬಬ್ಬ!’ ಎಂಬಂತಹ ಮುನ್ನುಡಿ ಬರೆದುಕೊಟ್ಟರು.
ವಿಶ್ವವಿದ್ಯಾಲಯವೊಂದರಲ್ಲಿ ಕೆಲಸ ಮಾಡುವ ಲೇಖಕಿಯೊಬ್ಬರು ಹುಬ್ಬಳ್ಳಿ ದೇಶದ ಕಡೆ ಬಂದಾಗ ಈಕೆ ಎಂದಿನಂತೆ ಹಠ ಮಾಡಿ ಆ ಲೇಖಕಿಯ ಕುಟುಂಬವನ್ನು ತನ್ನ ಮನೆಯಲ್ಲೇ ಉಳಿಸಿಕೊಂಡಳು. ಈಕೆಯ ನಾಟಕಕ್ಕೆ ಮನಸೋತ ಅತಿಥಿಗಳು ಇನ್ನೆರಡು ದಿನ ಇರಬಯಸಿದರು. ಇದೇ ಸಮಯಕ್ಕೆ ಸರಿಯಾಗಿ ಖ್ಯಾತ ವಿಮರ್ಶಕನೊಬ್ಬ ಬೆಂಗಳೂರಿನಿಂದ ಹುಬ್ಬಳ್ಳಿ ದೇಶದ ಕಡೆ ಬರುವ ವಾರ್ತೆ ಬಂತು. ಆ ವಿಮರ್ಶಕನಾದರೋ ಪ್ರಶಸ್ತಿ-ಪುರಸ್ಕಾರ ಕೊಡಿಸಬಲ್ಲ ಭೂಪ! ಇಲ್ಲಿ ನೋಡಿದರೆ ಇರುವುದೊಂದೇ ಗೆಸ್ಟ್ ರೂಮು ಆದರೆ ಈ ಲೇಖಕಿಯನ್ನು ಕಳಿಸುವುದು ಹೇಗೆ?
ಒಂದೆರಡು ಗಂಟೆಗಳಲ್ಲಿ ಅದಕ್ಕೊಂದು ಪ್ಲಾನು ಸಿದ್ಧವಾಯಿತು. ಈಕೆ ತನ್ನ ಗಂಡನ ಸಂಬಂಧಿಯೊಬ್ಬ ಘೋರವಾದ ರಸ್ತೆ ಅಪಘಾತದಲ್ಲಿ ಸತ್ತನೆಂದೂ ತಾವು ಈ ಕೂಡಲೇ ಹೊರಡಬೇಕೆಂದೂ ಅವಸರ ಮಾಡಲು ಶುರು ಮಾಡಿದಳು! ಪೆಚ್ಚಾದ ಅತಿಥಿಗಳು ಇವರಿಗೆ ಸಮಾಧಾನ ಪಡಿಸಿ ಹೊರಡಲು ತಯಾರಾದರು. ಆದರೆ ಈಕೆಯ ಮಗಳನ್ನು ‘ಅಕ್ಕ, ಅಕ್ಕ’ ಎಂದು ಕರೆಯುತ್ತ ತುಂಬ ಹಚ್ಚಿಕೊಂಡಿದ್ದ ಅತಿಥಿಗಳ ಮಗು ಮಾತ್ರ ‘ತಾನು ಇಲ್ಲೇ ಅಕ್ಕನ ಜೊತೆಗೇ ಇರುತ್ತೇನೆ!’ ಎಂದು ಹಠ ಮಾಡಿತಾದರೂ ಕೊನೆಗೂ ಆ ಲೇಖಕಿಯನ್ನು ಸಾಗಹಾಕುವಲ್ಲಿ ಗಂಡ-ಹೆಂಡತಿ ಯಶಸ್ವಿಯಾದರು.
ಹುಬ್ಬಳ್ಳಿ ದೇಶದ ಕಡೆ ಹೆಚ್ಚಾಗಿ ಬಂದಿರದ ಬೆಂಗಳೂರು ವಿಮರ್ಶಕ ಈ ನರಿಬುದ್ಧಿಯ ದಂಪತಿಗಳ ಆದಾರಾತಿಥ್ಯಕ್ಕೆ ಮನಸೋತ. ಇವರ ಬಗ್ಗೆ ಆತನಿಗೆ ಎಷ್ಟು ಒಳ್ಳೆಯ ಅಭಿಪ್ರಾಯ ಮೂಡಿತೆಂದರೆ ಈ ಲೇಖಕಿಗೆ ನಾಲ್ಕಾರು ತಿಂಗಳಲ್ಲಿ ಬೆಂಗಳೂರಿನ ಪ್ರತಿಷ್ಠಾನವೊಂದು ನೀಡುವ ಪ್ರಶಸ್ತಿಯನ್ನು ಕೊಡಿಸಿದ. ಹತ್ತು ಸಾವಿರ ರೂಪಾಯಿಗಳ ನಗದು, ಪ್ರಶಸ್ತಿ ಫಲಕ, ಶಾಲು ಮತ್ತು ಹೂವು-ಹಣ್ಣು ಒಳಗೊಂಡ ಪ್ರಶಸ್ತಿ ಸಿಕ್ಕ ನಂತರ ಅವರ ನಡುವಿನ ಪ್ರೀತ್ಯಾದರ ಹೆಚ್ಚಾಗಿದೆ. ಈಗ ಇವಳ ಮಗಳು ಸಹ ಲೇಖಕಿಯಾಗಿದ್ದಾಳೆ! ಕನ್ನಡ ಸಾಹಿತ್ಯಕ್ಕೆ ಇನ್ನೇನು ಗ್ರಹಚಾರ ಕಾದಿದೆಯೋ?
ಕಲ್ಯಾಣ ಕರ್ನಾಟಕದ ಲೇಖಕನೊಬ್ಬನ ಅಭಿಪ್ರಾಯದಲ್ಲಿ ಅವನು ಕನ್ನಡ ಸಾಹಿತ್ಯಲೋಕದ ಮಹತ್ವದ ವ್ಯಕ್ತಿ. ಆದರೆ ಇನ್ನುಳಿದ ಕೆಲವು ಜನರ ಅಭಿಪ್ರಾಯದಲ್ಲಿ ಆತ ಕೃತಿಚೋರ! ಈತನೂ ತನ್ನ ಯೋಗ್ಯತೆಗೆ ತಕ್ಕಂತೆ ನಾಲ್ಕಾರು ಸಣ್ಣಪುಟ್ಟ ಪ್ರಶಸ್ತಿಗಳನ್ನು ಹೊಡೆದುಕೊಂಡಿದ್ದಾನೆ. ತುಂಬ ಪ್ರಭಾವಶಾಲಿಯಾದ ದೊಡ್ಡ ದೊಡ್ಡ ಲೇಖಕರನ್ನೇ ಬಕರಾ ಮಾಡಲು ಯತ್ನಿಸುವುದು ಇವನ ವಿಶೇಷತೆಗಳಲ್ಲೊಂದು. ಸುಮ್ಮನೆ ದೊಡ್ಡ ಲೇಖಕರಿಗೆ ಕರೆ ಮಾಡಿ “ನಾನು ಇಂತಿಂತಹ ಪ್ರಶಸ್ತಿ ಸಮಿತಿಗಳಲ್ಲಿದ್ದೇನೆ. ಇಂತಿಂತಹ ಲೇಖಕರಿಗೆ ಇಂತಿಂತಹ ಪ್ರಶಸ್ತಿ ಸಿಗಲು ನನ್ನ ಕೈವಾಡವೇ ಕಾರಣ!” ಎಂದು ಅವರನ್ನು ನಂಬಿಸಲು ಯತ್ನಿಸುತ್ತಿದ್ದ.
ಈ ಲೇಖಕ ಇತ್ತೀಚೆಗೆ ಬಹುದೊಡ್ಡ ಲೇಖಕರೊಬ್ಬರಿಗೆ ಕರೆ ಮಾಡಿ “ನಿಮಗೆ ರಾಷ್ಟ್ರಮಟ್ಟದ ಪ್ರಶಸ್ತಿ ಕೊಡಿಸುತ್ತೇನೆ. ಹಿಂದೆ ನಾನು ತೀರ್ಪುಗಾರನಾಗಿದ್ದಾಗ ಇಂತಿಂತಹವರಿಗೆ ಪ್ರಶಸ್ತಿ ಕೊಡಿಸಿದ್ದೇನೆ!” ಎಂದು ಬುರುಡೆ ಬಿಟ್ಟ. ಆ ದೊಡ್ಡ ಲೇಖಕರು ಇವನ ಜಾತಕ ತೆಗೆಸಿ ನೋಡಿದಾಗ ಇವನ ನಿಜವಾದ ಬಣ್ಣ ಬಯಲಾಯಿತು. ಆತ ತೀರ್ಪುಗಾರನಿರಲಿ ಕನಿಷ್ಠ ಪಕ್ಷ ಆ ಪ್ರಶಸ್ತಿಯ ತೀರ್ಪುಗಾರರು ಯಾರೆಂಬುದೂ ಅವನಿಗೆ ಗೊತ್ತಿರಲಿಲ್ಲ. ವಾಸ್ತವವಾಗಿ ಅವನಿಗೆ ಈ ಹಿರಿಯರ ವಶೀಲಿಯಿಂದ ಪ್ರಶಸ್ತಿಯೊಂದು ಬೇಕಾಗಿತ್ತು ಅದಕ್ಕಾಗಿ ಇಷ್ಟೆಲ್ಲ ನಾಟಕ. ಆ ಹಿರಿಯರು ಒಳ್ಳೆಯವರಾದ್ದರಿಂದ ಅಷ್ಟಕ್ಕೇ ಸುಮ್ಮನಾದರು. ಇನ್ನೂ ಕೆಲವು ಹಿರಿಯ ಲೇಖಕರಿಗೆ ಈ ರೀತಿ ಯಾಮಾರಿಸಲು ಹೊಗಿ ಈತ ಅವರಿಂದ ಸಾಕಷ್ಟು ಉಗಿಸಿಕೊಂಡಿದ್ದಾನೆ. ಈ ಭಂಡ ಲೇಖಕನಿಗೆ ಇಷ್ಟೆಲ್ಲ ಅವಮಾನವಾದರೂ ಬುದ್ಧಿ ಮಾತ್ರ ಬಂದಿಲ್ಲ. ಏನೂ ಆಗಿಯೇ ಇಲ್ಲವೆಂಬಂತೆ ಎದೆಯುಬ್ಬಿಸಿ ಬದುಕುತ್ತಿದ್ದಾನೆ. ಇದನ್ನೇ ಬೀಚಿಯವರು ‘ಭಂಡ ಬಾಳು’ ಎಂದು ಕರೆದಿದ್ದಾರೆ.
ವಿಶ್ವವಿದ್ಯಾಲಯವೊಂದರಲ್ಲಿ ದೊಡ್ಡ ಕೆಲಸದಲ್ಲಿರುವ ಲೇಖಕನೊಬ್ಬ ತನ್ನ ಕಥೆ, ಕಾದಂಬರಿಗಳ ಕುರಿತು ಯಾವ ರೀತಿ ಪ್ರಚಾರ ಮಾಡುತ್ತಾನೆಂದರೆ ಇವನು ವಿಶ್ವವಿದ್ಯಾಲಯಲ್ಲಿರುವುದಕ್ಕಿಂತ ಬೆಂಗಳೂರಿನ ಯಾವುದಾದರೂ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿರಬೇಕಿತ್ತೆಂದು ಬಹಳ ಜನರ ಅಭಿಪ್ರಾಯ. ಇದು ಸುಳ್ಳು! ಏಕೆಂದರೆ ವಾಸ್ತವವಾಗಿ ಈ ಖಾಸಗಿ ಕಂಪನಿಗಳಲ್ಲಿ ‘ಕೆಲಸ ಜಾಸ್ತಿ, ಸಂಬಳ ಕಡಿಮೆ! ಆದರೆ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಕಡಿಮೆ, ಸಂಬಳ ಜಾಸ್ತಿ!’ ಬುದ್ಧಿವಂತನಾದ ನಮ್ಮ ಲೇಖಕ ಎರಡನೆಯದನ್ನೇ ಆಯ್ದುಕೊಂಡು ಸುಖವಾಗಿದ್ದಾನೆ.
ವಿಶ್ವವಿದ್ಯಾಲಯದಲ್ಲಿ ಕೆಲಸ ತುಂಬ ಅಂದರೆ ತುಂಬ ಕಡಿಮೆ ಜೊತೆಗೆ ಬಹುದೊಡ್ಡ ಸಂಬಳ. ಆರಂಕಿ ಮೊತ್ತದ ಸಂಬಳದ ಜೊತೆಗೆ ಸಾಕಷ್ಟು ದೊಡ್ಡ ಮೊತ್ತದ ಭತ್ಯೆಗಳು ಆತನನ್ನು ಕನ್ನಡದ ದೊಡ್ಡ ಲೇಖಕನಾಗುವಂತೆ ಪ್ರಚೋದಿಸಿದವು. ಸರಿ, ಇವನು ಕನ್ನಡದ ಮಹತ್ವದ ಲೇಖಕನೆನಿಸಿಕೊಳ್ಳಲು ಕಂಕಣ ತೊಟ್ಟ. ಅದಕ್ಕೆ ತಕ್ಕ ಹಾಗೆ ಸಾಹಿತ್ಯ ಸೃಷ್ಟಿ ಶುರು ಮಾಡಿದ. ಪ್ರಕಾಶಕರಿಗೆ ತಾನೇ ದುಡ್ಡು ಕೊಟ್ಟು ಪುಸ್ತಕ ಪ್ರಕಟಿಸಿದ. ಪ್ರಶಸ್ತಿಯೇ ಬರದಿದ್ದ ಮೇಲೆ ಲೇಖಕನಾಗಿ ಪ್ರಯೋಜನವೇನು? ನಮ್ಮ ವಿಶ್ವವಿದ್ಯಾಲಯದ ಲೇಖಕ ಮೊದಮೊದಲು ಸಣ್ಣಪುಟ್ಟ ಪ್ರಶಸ್ತಿಗಳನ್ನು ಪಡೆದು ಬೀಗಿದ. ಆದರೂ ಜನ ಅವನನ್ನು ಮಹತ್ವದ ಲೇಖಕನೆಂದು ಪರಿಗಣಿಸುತ್ತಿಲ್ಲವೆಂದು ಚಡಪಡಿಸಿದ. ತನ್ನನ್ನು ಕಡೆಗಣಿಸಿದ ಓದುಗರ ಮೇಲೆ ರೊಚ್ಚು ತೀರಿಸಿಕೊಳ್ಳಲು ಶಬ್ದಕೋಶವನ್ನು ಹೋಲುವ ಬೃಹತ್ ಗಾತ್ರದ ಕಾದಂಬರಿಯನ್ನು ಬರೆದ. ರಾಜ್ಯದ ಹಲವು ನಗರಗಳಲ್ಲಿ ಸ್ವಂತ ವೆಚ್ಚದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಮಾಡಿದ. ದೊಡ್ಡ ದೊಡ್ಡ ಲೇಖಕರನ್ನು ಇನ್ನಿಲ್ಲದಂತೆ ಸತಾಯಿಸಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕರೆಸಿದ. ಆಸೆಬುರುಕರಾದ ಕೆಲವು ಸಮಯಸಾಧಕ ಲೇಖಕರು ಪುಸ್ತಕವನ್ನು ಓದದಿದ್ದರೂ ಆತನ್ನು ಹಾಡಿ ಹೊಗಳಿದರು. ಒಬ್ಬ ಶ್ರೇಷ್ಠ ಲೇಖಕರು ಮಾತ್ರ ಸಮಾರಂಭದಲ್ಲೇ “ಪುಸ್ತಕ ಗಾತ್ರದಲ್ಲಿ ಮಾತ್ರ ದೊಡ್ಡದು ಸತ್ವದಲ್ಲಿ ಚಿಕ್ಕದು” ಎಂದು ಅಪ್ರಿಯ ಸತ್ಯವನ್ನು ನುಡಿದರು.
ಇನ್ನು ಈ ವಿಶ್ವವಿದ್ಯಾಲಯದ ಲೇಖಕನಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬೇಕು ಎಂಬ ಆಸೆ ಹುಟ್ಟಿದೆ. ಶಬ್ದಕೋಶದಂತಿರುವ ಬೃಹತ್ ಕಾದಂಬರಿಗೆ ಅಷ್ಟಾದರೂ ಬೇಡವೇ? ಅದಕ್ಕಾಗಿ ತನ್ನ ಪ್ರಯತ್ನವನ್ನು ಈಗಲೇ ಆರಂಭಿಸಿದ್ದಾನೆ. ಕಲ್ಲು ಹೃದಯದವರಾದ ವಿಮರ್ಶಕರು ಮತ್ತು ಸೂಕ್ಷ್ಮ ರಾಜಕಾರಣ ಮಾಡುವ ಬುದ್ಧಿಜೀವಿಗಳು ಸಹ ಇವನ ರಭಸಕ್ಕೆ ಭಯಪಡುತ್ತಿದ್ದಾರೆ.
ಕರಾವಳಿ ಭಾಗದಿಂದ ಬಂದು ಹುಬ್ಬಳ್ಳಿ ದೇಶದಲ್ಲಿ ನೆಲೆಸಿದ ಮತ್ತೊಬ್ಬ ಲೇಖಕಿ ತುಂಬ ಮಹತ್ವಾಕಾಂಕ್ಷಿ. ಕೆಪಾಸಿಟಿಯಿಲ್ಲದಿದ್ದರೂ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡುವ ಬಯಕೆ ಬೆಟ್ಟದಷ್ಟಿದೆ. ತಾನು ಬರೆದದ್ದೆಲ್ಲ ಶ್ರೇಷ್ಠ ಎಂಬ ಭ್ರಮೆಯಲ್ಲಿರುವ ಲೇಖಕಿಗೆ ಎಲ್ಲ ಪ್ರಶಸ್ತಿಗಳೂ ತನಗೇ ಸಿಗಬೇಕು ಎಂಬ ದುರಾಸೆ. ಈ ಲೇಖಕಿಗೆ ಪ್ರಶಸ್ತಿಗಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧಳೆಂಬ ಖ್ಯಾತಿಯಿದೆ.
ಈಕೆ ಪ್ರಶಸ್ತಿಯ ಆಯ್ಕೆ ಸಮಿತಿಗಳಲ್ಲಿರುವ ಲೇಖಕರಿಗೆ ಮೋಡಿ ಮಾಡಿ ಪ್ರಶಸ್ತಿ ಪಡೆದದ್ದನ್ನು ನೋಡಿ ಪ್ರಶಸ್ತಿ ಸಿಗದೆ ನಿರಾಶರಾದ ಅನೇಕ ಅತೃಪ್ತ ಲೇಖಕಿಯರು ಈಕೆಯ ಹತ್ತಿರ ‘ಪ್ರಶಸ್ತಿ ಪಡೆಯುವುದು ಹೇಗೆ?’ ಎಂಬುದರ ಕುರಿತು ತಮಗೂ ಟ್ಯೂಶನ್ ಕ್ಲಾಸ್ ಕೊಡಬೇಕೆಂದು ದುಂಬಾಲು ಬಿದ್ದ ಘಟನೆ ಹುಬ್ಬಳ್ಳಿ ದೇಶದಲ್ಲಿ ತುಂಬ ಖ್ಯಾತಿಯಾಗಿದೆ.
ಶ್ರೇಷ್ಠ ಲೇಖಕಿ, ಚಿಂತಕಿ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವ ಇನ್ನೊಬ್ಬ ಲೇಖಕಿಯದು ವಿಚಿತ್ರ ಕಥೆ. ಇವಳ ಪುಸ್ತಕಗಳ ಪ್ರಕಾಶಕ ಇವಳ ಅಂತರಂಗದ ಮಿತ್ರ. ಹೆಚ್ಚೇನು ಹೇಳುವುದು ದೇಹವೆರಡು ಜೀವವೊಂದು! ಈ ಲೇಖಕಿ ತನಗಾಗದ ವಿರೋಧಿಗಳ ಹೆಸರು ಕೇಳಿದರೆ ಕಿಡಿಕಿಡಿಯಾಗಿ ಹಿಸ್ಟೀರಿಯಾ ಬಂದಂತೆ ವರ್ತಿಸುತ್ತಾಳೆ. ಈ ಲೇಖಕಿ ಬಾಯಿಬಿಟ್ಟರೆ ಸಂಸ್ಕೃತ ಶಬ್ದಗಳು ಪುಂಖಾನುಪುಂಖವಾಗಿ ಹೊರಬರುತ್ತವೆ. ಅವಳು ಯಾವುದೇ ಸಮಾರಂಭಕ್ಕೆ ಹೋದರೂ ವಿರೋಧಿಗಳನ್ನು ಬೈದೇ ಮಾತು ಆರಂಭಿಸುತ್ತಾಳೆ. ಆ ಪಂಥ, ಈ ಪಂಥವೆಂದು ಕಿಡಿ ಹಚ್ಚಿ ಯುವ ಮನಸ್ಸುಗಳನ್ನು ಕೆಡಿಸುವುದರಲ್ಲಿ ಈಕೆಗೆ ವಿಕೃತ ಖುಷಿ.
ಇರಲಿ, ಈ ಲೇಖಕಿ ವರ್ಷಕ್ಕೆ ಏನಿಲ್ಲವೆಂದರೂ ಹತ್ತಿಪ್ಪತ್ತು ಪುಸ್ತಕ ಪ್ರಕಟಿಸುತ್ತಾಳೆ. ಏನೇ ಬರೆದರೂ ಪ್ರಕಟಿಸಲು ಅಂತರಂಗದ ಮಿತ್ರ ಮತ್ತು ಖರೀದಿಸಲು ಸರ್ಕಾರದ ಗ್ರಂಥಾಲಯ ಇಲಾಖೆಯಿರುವಾಗ ಯಾವ ಚಿಂತೆಯಿದೆ? ಪುಸ್ತಕ ಪ್ರಕಟಿಸಿದ ನಂತರ ಸಾಕಷ್ಟು ಲಾಭಿ ಮಾಡಿ ಪ್ರಶಸ್ತಿಯನ್ನೂ ಪಡೆಯುತ್ತಾಳೆ. ಒಂದೊಂದು ವರ್ಷವಂತೂ ಒಂದೇ ಬಾರಿಗೆ ಎರಡೆರಡು ಪ್ರಶಸ್ತಿ ಸಹ ಪಡೆದು ಬೀಗಿದ್ದಾಳೆ. ಯೋಗ್ಯತೆಯಿರಲಿ, ಬಿಡಲಿ ಯಾವುದೇ ಪ್ರಶಸ್ತಿಯಾದರೂ ಸರಿ ಒಂದು ಬಾರಿ ಪ್ರಯತ್ನಿಸಿ ನೋಡಲೇಬೇಕೆಂಬುದು ಇವರಿಬ್ಬರ ಹಠ. ಈ ಲೇಖಕಿ ಮತ್ತು ಪ್ರಕಾಶಕ ಸೇರಿ ಒಂದು ಪ್ರಶಸ್ತಿ ಪಡೆಯಲು ಇನ್ನಿಲ್ಲದಂತೆ ಪ್ರಯತ್ನಿಸಿ ವಿಫಲರಾದದ್ದು ತುಂಬ ಸ್ವಾರಸ್ಯಕರ ಘಟನೆ.
ಬೆಂಗಳೂರಿನ ಪ್ರತಿಷ್ಠಾನವೊಂದು ದೊಡ್ಡ ಮೊತ್ತದ ಪ್ರಶಸ್ತಿ ಕೊಡುವುದನ್ನು ತಿಳಿದು ಇವರಿಬ್ಬರೂ ತಮ್ಮ ಪ್ರಯತ್ನ ಆರಂಭಿಸಿದರು. ಈಕೆ ಬಹಳ ಮಂದಿಯನ್ನು ತನ್ನ ದೇಹಸಿರಿ, ವಯ್ಯಾರ ಮತ್ತು ಬುದ್ಧಿವಂತಿಕೆಯಿಂದ ಮರಳು ಮಾಡಿದ್ದರೂ ಪ್ರತಿಷ್ಠಾನದ ಮುಖ್ಯಸ್ಥ ಜಗ್ಗಲಿಲ್ಲ. ಏಕೆಂದರೆ ಅವನೊಬ್ಬ ಸಲಿಂಗಕಾಮಿ! ಈ ವಿಷಯ ತಿಳಿದು ಪೇಚಾಡಿದರೂ ಲೇಖಕಿ ಹಠಕ್ಕೆ ಬಿದ್ದಳು. ಪ್ರಶಸ್ತಿಗಾಗಿ ತನ್ನ ಗೆಳೆಯನಾದ ಪ್ರಕಾಶಕನ ಶೀಲವನ್ನೇ ಬಲಿಕೊಡಲು ತಯಾರಾದಳು! ಅಂತರಂಗದ ಗೆಳತಿಗಾಗಿ ಜೀವ ಕೊಡಲು ಸಿದ್ಧನಾಗಿದ್ದ ಇವನಿಗೆ ಶೀಲ ಯಾವ ಲೆಕ್ಕ? ಆದರೆ ದುರದೃಷ್ಟವಶಾತ್ ಆ ಸಲಿಂಗಕಾಮಿಗೆ ಈ ಪ್ರಕಾಶಕ ಇಷ್ಟವಾಗಲಿಲ್ಲ!
ಸಿನಿಕನಾದ ಲೇಖಕನೊಬ್ಬನ ದೃಷ್ಟಿಯಲ್ಲಿ ಅವನೊಬ್ಬನೇ ಪ್ರಾಮಾಣಿಕ (ಉಳಿದವರೆಲ್ಲ ಅಪ್ರಾಮಾಣಿಕರೆಂದು ಇವನ ಮಾತಿನ ಅರ್ಥ!) ತಾನು ಪದೇ ಪದೇ ಪ್ರಾಮಾಣಿಕನೆಂದು ಹೇಳಿಕೊಳ್ಳುವುದು ಅವನಿಗೆ ಅಭ್ಯಾಸವಾಗಿಬಿಟ್ಟಿದೆ. ಆತನ ಹೆಂಡತಿ ಕಥೆಗಾರ್ತಿ. ಹೆಂಡತಿಯನ್ನು ಗಂಡ, ಗಂಡನನ್ನು ಹೆಂಡತಿ ಪರಸ್ಪರ ಹೊಗಳಿಕೊಳ್ಳುತ್ತಿರುತ್ತಾರೆ.
“ನನ್ನ ಹೆಂಡತಿ ಎಂದು ಹೇಳುವುದಲ್ಲ, ನಿಜಕ್ಕೂ ಅವಳೊಬ್ಬ ಮಹಾನ್ ಲೇಖಕಿ!” ಎಂದು ಪತಿ ಹೇಳುತ್ತಾನೆ.
“ಅವರು ತುಂಬ ಪ್ರಾಮಾಣಿಕರು!” ಎಂದು ಪ್ರಾಮಾಣಿಕತೆ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಸತಿ ಹೇಳುತ್ತಾಳೆ.
ದುರದೃಷ್ಟವಶಾತ್ ಇವನ ಕೈಯಲ್ಲಿ ಸಿಕ್ಕರೆ ಶಿಕ್ಷೆ ತಪ್ಪಿದ್ದಲ್ಲ. ಕಿವಿಯಲ್ಲಿ ರಕ್ತ ಬರುವವರೆಗೆ ಪ್ರಾಮಾಣಿಕತೆಯ ಬಗ್ಗೆ ಕೊರೆಯುತ್ತಾನೆ. ಇತ್ತೀಚೆಗೆ ಇವನ ಹಳೆಯ ಮಿತ್ರರ ಹತ್ತಿರ ಈ ಪ್ರಾಮಾಣಿಕ ಲೇಖಕನ ಬಗ್ಗೆ ಪ್ರಸ್ತಾಪ ಮಾಡಿದಾಗ ಅವರ ಮುಖ ನಿಸ್ತೇಜವಾಯಿತು. ಆ ಹಿರಿಯರು ಸವದತ್ತಿ ಯಲ್ಲಮ್ಮನ ಗುಡ್ಡವಿರುವ ದಿಕ್ಕಿನೆಡೆಗೆ ಆರ್ತರಾಗಿ ಕೈಮುಗಿದರು. ಪಾಪ, ಇವರೂ ಸಹ ಅವನಿಂದ ಶೋಷಣೆಗೊಳಗಾಗಿ ನೊಂದಿದ್ದಾರೆ.
ಹೆಂಡತಿಗೆ ಪ್ರಶಸ್ತಿ ಕೊಡಿಸಬೇಕೆಂದು ಗಂಡನಿಗೆ, ಗಂಡನಿಗೆ ಪ್ರಶಸ್ತಿ ಕೊಡಿಸಬೇಕೆಂದು ಹೆಂಡತಿಗೆ ಸಾಕಷ್ಟು ಆಸೆಯಿತ್ತು. ಆದರೆ ಈ ದಂಪತಿ ಅದಕ್ಕೆ ತಕ್ಕ ಲಾಭಿ ಮಾಡುವಷ್ಟು ಚಾಣಾಕ್ಷರಲ್ಲ. ನಾಲ್ಕಾರು ವರ್ಷಗಳಿಂದ ಬರೀ ಅಯೋಗ್ಯರಿಗೆ ಪ್ರಶಸ್ತಿ ಕೊಟ್ಟು ಎಲ್ಲರಿಂದ ಸಾಕಷ್ಟು ಟೀಕೆಗೊಳಗಾಗಿದ್ದ ರಾಷ್ಟ್ರೀಯ ಸಂಸ್ಥೆಯೊಂದು ಯಾರಾದರೂ ನಿರುಪದ್ರವಿ ಲೇಖಕರೊಬ್ಬರಿಗೆ ಈ ವರ್ಷದ ಪ್ರಶಸ್ತಿ ಕೊಟ್ಟು ಟೀಕಾಕಾರರ ಬಾಯಿ ಮುಚ್ಚಿಸಲು ಯತ್ನಿಸುತ್ತಿತ್ತು.
ಯೋಗಾಯೋಗವೆಂಬಂತೆ ಈ ದಂಪತಿಗಳ ಆತ್ಮೀಯರೇ ಆಯ್ಕೆ ಸಮಿತಿಯಲ್ಲಿದ್ದದ್ದು ತುಂಬ ಅನುಕೂಲವಾಯಿತು. ಬೇರೆ ಕೆಲವು ಯೋಗ್ಯ ಲೇಖಕರಿದ್ದರೂ ಆಯ್ಕೆ ಸಮಿತಿಗೆ ಅವರಿಗೆ ಪ್ರಶಸ್ತಿ ಕೊಡಲು ಮನಸ್ಸಿರಲಿಲ್ಲ. ತೀರ್ಪುಗಾರರೂ ಪೂರ್ವಗ್ರಹಪೀಡಿತರಾಗಿದ್ದರು ಜೊತೆಗೆ ಅವರಿಗೆ ಬೇಕಾದವರ ಪುಸ್ತಕಗಳು ಅಂತಿಮ ಪಟ್ಟಿಯಲ್ಲಿರಲಿಲ್ಲ ಬದಲಾಗಿ ಅವರಿಗೆ ಹಿಡಿಸದ ಲೇಖಕರ ಪುಸ್ತಕಗಳೇ ಅಂತಿಮ ಪಟ್ಟಿಯಲ್ಲಿದ್ದವು. ಹೀಗೆ ಹಲವು ಆಕಸ್ಮಿಕಗಳ ಸರಮಾಲೆಯೇ ಉಂಟಾಗಿ ಸಿನಿಕನಾದ ಲೇಖಕನಿಗೆ ಪ್ರಶಸ್ತಿ ಒಲಿಯತು. ಇದನ್ನೇ ಪ್ರಾಜ್ಞರಾದವರು ತುಂಬ ಸಣ್ಣಗಾಗಿ ಮತ್ತು ಸುಂದರವಾಗಿ ‘ಅದೃಷ್ಟ’ ಎಂದು ಕರೆದಿದ್ದಾರೆ.
ಇರಲಿ, ಪ್ರಶಸ್ತಿ-ಪುರಸ್ಕಾರಗಳ ಹಿಂದಿನ ಕಥೆಗಳನ್ನು ಹೇಳುತ್ತ ಹೋದರೆ ಮುಗಿಯವುದೇ ಇಲ್ಲ. ಒಂದಾದ ಮೇಲೊಂದರಂತೆ ಸ್ವಾರಸ್ಯಕರ ವಿವರಗಳು ಹೊರಬರುತ್ತಲೇ ಇರುತ್ತವೆ. ಪ್ರಶಸ್ತಿ-ಪುರಸ್ಕಾರ ಸಿಗದಿದ್ದ ಮೇಲೆ ಬಾಳೇ ವ್ಯರ್ಥ! ಎಂಬಂತಹ ಭಾವನೆ ಅನೇಕರಲ್ಲಿದೆ. ಪ್ರಶಸ್ತಿಗಾಗಿ ಅಯೋಗ್ಯ ಜನ ನಡೆಸುವ ಪ್ರಯತ್ನ, ಲಾಭಿ ಮತ್ತು ರಾಜಕೀಯ ಕಂಡರೆ ಆಶ್ಚರ್ಯಾಘಾತವಾಗುತ್ತದೆ. ಪ್ರಶಸ್ತಿ-ಪುರಸ್ಕಾರಗಳಿಗೂ ಒಳ್ಳೆಯ ದಿನಗಳು ಬರಲಿ ಎಂಬುದು ನನ್ನ ಆಶಯ. ಇದು ಅಸಾಧ್ಯವೆಂದು ತಿಳಿದೂ ನಾನು ಆಶಾವಾದಿಯಾಗಿದ್ದೇನೆ.
1 thought on “ಮತ್ತೊಂದು ‘ಪ್ರಶಸ್ತಿ ಪುರಾಣ’”
ಮೊದಲ ಪ್ರಶಸ್ತಿ ಪುರಾಣ ಹಾಗೂ ಈಗಿನ ಮತ್ತೊಂದು ಪ್ರಶಸ್ತಿ ಪುರಾಣ ನಮ್ಮ ಲೇಖಕರ ಮನಸಿನ ಅಳವನ್ನು ಬಗೆದು ತೆಗೆದು ಮೇಲೆತ್ತಿ ಎಲ್ಲರ ಮುಂದೆ ಹರಾಜಿಗೆ ಇಟ್ಟಂತೆ ಆಗಿದೆ. ಈ ಪುರಾಣಗಳು ಸತ್ಯವೂ ಹೌದು..ವಿಡಂಬನೆಯ ಮತ್ತೊಂದು ಅನಾವರಣವೂ ಹೌದು.