ಗುಂಡಣ್ಣ ಅಭಿಮಾನಿಗಳ ಸಂಘ

ಇತ್ತೀಚಿಗೆ 3-4 ವರ್ಷದವರೆಗೆ ಕರೋನ  ಮತ್ತು ಇತರ  ಕಾರಣಗಳಿಂದಾಗಿ ನನ್ನ ಸ್ವಂತ ಊರಿಗೆ ಹೋಗಿರಲಿಲ್ಲ. ಅಂತೂ ಕೊನೆಗೊಮ್ಮೆ ಒಂದು ವಾರ ರಜೆ  ಹಾಕಿ ಹೊರಟು ಊರು ತಲುಪಿದಾಗ  ಬೆಳಿಗ್ಗೆ ಏಳು ಘಂಟೆ.

ನೋಡುತ್ತೇನೆ…..ಊರಿನ  ಆಯಕಟ್ಟಿನ ಜಾಗದಲ್ಲೆಲ್ಲ  ಗುಂಡನ ಫ್ಲೆಕ್ಸಿಗಳು. ನಗುತ್ತಿರುವ ಗುಂಡನ ಫೋಟೊ  ಮಧ್ಯದಲ್ಲಿ ಮತ್ತು ದೊಡ್ಡದಾಗಿ. ಅದರ  ಕೆಳಗೆ ಇರುವೆ ಸಾಲುಗಳಂತೆ ಸಾಲುಸಾಲಾಗಿ  ಅಭಿಮಾನಿಗಳ ಭಾವಚಿತ್ರಗಳನ್ನು  ನೋಡಿ ಆಶ್ಚರ್ಯಗೊಂಡೆ. ಈ ಮೂರು ವರ್ಷದಲ್ಲಿ  ನನ್ನ ಸ್ನೇಹಿತ ಗುಂಡ ಬೃಹದಾಕಾರವಾಗಿ  ಬೆಳೆದು ಗುಂಡಣ್ಣನಾಗಿ ಇಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿದ್ದು  ನೋಡಿ ನನಗೆ  ಆಶ್ಚರ್ಯವಾಯಿತು.
ಕೆಲವು ಫ್ಲೆಕ್ಸಿಗಳಲ್ಲಿ  ಜನಪ್ರಿಯ ಚಿತ್ರ ನಟ ಗುಂಡಣ್ಣ ಅಂತಿದ್ದರೆ  ಮತ್ತೆ ಕೆಲವುಗಳಲ್ಲಿ ಸಮಾಜ  ಸೇವಕ, ಪತ್ರಕರ್ತ, ಶಿಕ್ಷಣ  ಪ್ರೇಮಿ ಗುಂಡಣ್ಣ  ಎಂಬ ಬಿರುದುಗಳೊಂದಿಗೆ ಗುಂಡ ಎಲ್ಲ ಫ್ಲೆಕ್ಸಿಗಳಲ್ಲೂ ರಾರಾಜಿಸುತ್ತಿದ್ದ.

ನಾನು ಮನೆಗೆ ಬಂದರೂ  ಮನಸಿಗೆ ಸಮಾಧಾನವಿಲ್ಲ.  ಕೊನೆಗೊಮ್ಮೆ ಗುಂಡನಿಗೆ ಫೋನ್ ಮಾಡಿದರೆ ಯಾರೋ ಎತ್ತಿ  “ಸರ್.. ಬಿಜಿಯಾಗಿದ್ದಾರೆ.  ಅರ್ಧ ಘಂಟೆ ಬಿಟ್ಟು ಮತ್ತೆ ಮಾಡಿ ” ಎಂದು ಹೇಳಿ ಕಟ್ ಮಾಡಿದರು.  ಸರಿ  ಎಂದು ಬಾಯಿ ಮುಚ್ಚಿಕೊಂಡು ಸುಮ್ಮನಾದೆ. ಆಮೇಲೆ ಮತ್ತೆ ಫೋನಾಯಿಸಿದೆ. “ಸರ್  ಅಭಿಮಾನಿಗಳೊಂದಿಗೆ  ಮಾತನಾಡುತ್ತಿದ್ದಾರೆ… ಸ್ವಲ್ಪ ಹೊತ್ತು ತಡೆದು  ಮಾತನಾಡಿ…” ಎಂದು ರಿಪ್ಲೈ ಬಂತು. ನನ್ನ ಬಿ. ಪಿ ತರಕಾರಿ  ಟೊಮೊಟೊ ಬೆಲೆಯ ಏರಿಕೆಯಂತೆ ಸರ್ರನೆ  ಮೇಲೆ ಏರಿಬಿಟ್ಟು ಮತ್ತೊಮ್ಮೆ ಫೋನ್ ಮಾಡಿದೆ. ಈ ಸಲ  ಫೋನ್ ರಿಂಗ್ ಅದಕೂಡಲೇ  ನಾನೇ ಮೊದಲು ಜೋರಾಗಿ ಕಿರುಚಿದೆ “ಗುಂಡ ನಾನು  ನಿನ್ನ ಕುಚುಕು.. ಅದೇ ಚಡ್ಡಿ ದೋಸ್ತ್  ಚಂದ್ರು… ನಿನ್ನ ಕ್ಲಾಸ್ಮೇಟ್ ಮತ್ತು ಬಾರ್ ಮೇಟ್…. ನನ್ನ ಮುಂದೆ ಇವೆಲ್ಲಾ ಫೋಸ್ ಹೊಡಿಬೇಡ.. ಇದಕ್ಕೂ ಮುಂಚೆ  ನಾನು ಫೋನ್ ಮಾಡಿದಾಗ ಉತ್ತರಿಸಿದ್ದು ನೀನೇ ಅಂತ ಗೊತ್ತು…”

” ತಪ್ಪಾಯ್ತು ಕ್ಷಮಿಸು  ಚಂದ್ರು.. ಏನೋ ಅಭ್ಯಾಸ ಬಲ… ಫೋನ್ ರಿಂಗ್ ಅದ  ಕೂಡಲೇ  ನಾನು ಎತ್ತಿ ಮಾತನಾಡಿದರೆ  ಇವನಿಗೇನು  ಕೆಲಸವಿಲ್ಲ  ಸದಾ  ಖಾಲಿಯಾಗಿರ್ತಾನೆ ಎನ್ನುವ ಭಾವನೆ ಅಭಿಮಾನಿಗಳಲ್ಲಿ ಬರಬಾರದಲ್ಲ… ಅದಕ್ಕೆ ತುಸು ಲೇಟ್ ಮಾಡಿದೆ ಅಷ್ಟೇ…” ಎಂದು ಗುಂಡನ  ಸಮಜಾಯಿಷಿ.

“ಆಯ್ತು.. ಸಂಜೆ 7 ಘಂಟೆಗೆ ನಮ್ಮ ಮಾಮೂಲು ಅಡ್ಡ ಖುಷಿ ಬಾರ್ &  ರೆಸ್ಟೋರೆಂಟ್ ಗೆ ಬಂದು  ಬಿಡು. ನಿನ್ನೊಂದಿಗೆ ಬಹಳ ಮಾತನಾಡಬೇಕಾಗಿದೆ..” ಎಂದೆ ಗುಂಡನನ್ನು  ಆದಷ್ಟು ಬೇಗನೆ ಕಾಣುವ ಕುತೂಹಲದಿಂದ.

“ಇವೊತ್ತು ನಾನು ತುಂಬಾ ಬಿಜಿ. ಆದರೂ  ನಿನಗಾಗಿ   ಬರುತ್ತೇನೆ ದೋಸ್ತ್. ಓಕೆ…”ಎಂದು ಗುಂಡ ಉತ್ತರಿಸಿದ ಮೇಲೆ ನಾನು ಕೊಂಚ ಸಮಾಧಾನಗೊಂಡೆ.

ನಾನು ಸರಿಯಾದ  ಸಮಯಕ್ಕೆ  ಹೋದೆ ಅಡ್ಡಕ್ಕೆ… ಒಂದು ತಾಸು ಕಾದರೂ ಗುಂಡನ ಪತ್ತೆ ಇಲ್ಲ. ಆದರೆ  ಕೊನೆಗೂ ಒಂದು ಮಹಿಂದ್ರಾ ಜೀಪಿನಲ್ಲಿ ಗುಂಡನ
ಒಡ್ಡೋಲಗ  ಬಂದು  ಇಳಿಯಿತು.


ಜೀಪಿನಿಂದ   ಇಳಿದ ಗುಂಡನನ್ನು  ಒಮ್ಮೆ ದೃಷ್ಟಿ  ಹಾಯಿಸಿ ನೋಡಿದೆ.  ಮೊದಲಿನಂತೆ  ಗುಂಡ ಈಗ ಈಚಲಕಡ್ಡಿ  ಅಲ್ಲ ಬದಲಾಗಿ  ಬೇವಿನ ಮರದಷ್ಟು  ದಪ್ಪ… ಮೊದಲೇ  ಅಮಾವಾಸ್ಯೆಯ ಕಡು ಕತ್ತಲಿನ  ಮೈ  ಬಣ್ಣ…ಮುಖದ ಮೇಲೆ ಟಾರಿನ ಮೀಸೆ…ಅದರೊಂದಿಗೆ   ಗದ್ದಕ್ಕೆ  ಸರಿಹೊಂದುವ  ಕಪ್ಪು ಗಡ್ಡ…ಕಣ್ಣುಗಳನ್ನು  ಮುಚ್ಚುವ ದೊಡ್ಡ  ಕನ್ನಡಕ …. ಬಿಳಿ ಪ್ಯಾಂಟ್… ಅದರ  ಮೇಲೆ ಖಾದಿ  ಕುರ್ತಾ….. ಎರಡೂ  ಕೈನ  ಎಂಟೇ ಬೆರಳಿಗಷ್ಟೇ ಉಂಗುರಗಳು… ಕತ್ತಿನಲ್ಲಿ ನಾಯಿ ಚೈನಿನಷ್ಟು ದಪ್ಪದ  ಬಂಗಾರದ  ಸರ… ಬಲ  ಮುಂಗೈಯನ್ನು ಮುತ್ತಿಕ್ಕಿದ ದೊಡ್ಡ ಬ್ರಾಸ್ ಲೆಟ್… ಕಾಲಲ್ಲಿ ಬಾಟಾ  ಬ್ರಾಂಡಿನ ಕಪ್ಪು  ಬೂಟುಗಳು….

ನೋಡಿ ನನಗೆ  ಸಂತಸ ತಡೆಯದೆ  ಹಸ್ತ ಲಾಘವ  ಮಾಡಿ ಗುಂಡನನ್ನು ಒಮ್ಮೆ ಬಿಗಿದಪ್ಪಿದೆ…

ಒಳಗೆ ಆಗಲೇ  ಗುಂಡನಿಗಾಗಿ ರಿಸರ್ವ್ ಮಾಡಿದ  ಟೇಬಲ್ ನತ್ತ   ಹೆಗಲ  ಮೇಲೆ ಕೈ  ಹಾಕಿ ಕರೆದೋಯ್ದೆ….ಆತನ  ಪಟಾಲಂ  ಸ್ವಲ್ಪ ದೂರದಲ್ಲಿ  ಆಸೀನರಾದರು.

ಸ್ನಾಕ್ಸ್  ಜೊತೆ  ಕೋಲ್ಡ್ ಕಿಂಗ್ ಫಿಷರ್  ಸುರುವಿ ಒಂದು ಗ್ಲಾಸ್ ಕೊಟ್ಟೆ ಗುಂಡನಿಗೆ… ಇಬ್ಬರೂ ನಿಧಾನವಾಗಿ ತಿನ್ನುತ್ತಾ ಕುಡಿಯುತ್ತಾ ಮಾತು – ಹರಟೆ ಶುರು  ಮಾಡಿದೆವು. ಸುಮಾರು ಒಂದು ತಾಸಿನ ಬಳಿಕ  ನಾವು ಕುಡಿದದ್ದು ತುಸು ಅಲ್ಲ   ಸ್ವಲ್ಪ ಜಾಸ್ತಿನೇ ಆಯ್ತು ಎಂದು ಇಬ್ಬರ ಅನುಭವಕ್ಕೂ  ಬಂತು…ಈಗ ನಮ್ಮ ಪ್ರಯಾಣ  ಸುಳ್ಳಿನ ಲೋಕದಿಂದ ಸತ್ಯದ ರಾಜ ಮಾರ್ಗದತ್ತ!

”  ಪಿ ಯು ಸಿ ವರೆಗೆ ಹೇಗೋ ಇಷ್ಟಪಟ್ಟು ಅಲ್ಲ ಕಷ್ಟಪಟ್ಟು ಓದಿದ್ದೀಯಾ…ಎಲ್ಲರಂತೆ
…..ಶ್ರೀಸಾಮಾನ್ಯನಾದ ಗುಂಡ, ಗುಂಡಣ್ಣನಾಗಿ  ಬೆಳೆದ  ಪರಿ  ಮತ್ತು ಗುಂಡಣ್ಣ ಅಭಿಮಾನಿಗಳ ಸಂಘ  ಹುಟ್ಟಿದ ಬಗ್ಗೆ ಸ್ವಲ್ಪ ವಿವರವಾಗಿ ಹೇಳು… ಈಗ  ಜನಪ್ರಿಯ ಚಿತ್ರ ನಟ  …ಸಮಾಜ  ಸೇವಕ… ಪತ್ರಕರ್ತ.. ಶಿಕ್ಷಣ  ಪ್ರೇಮಿ ಎಲ್ಲವೂ ನೀನು.. ಈ ಕಡಿಮೆ ವರ್ಷಗಳಲ್ಲಿ  ಅಲ್ ಇನ್ ಒನ್ ಹೇಗೆ ಅದೆ… ಸ್ವಲ್ಪ ವಿವರಿಸಿ ಹೇಳು” ಎಂದು ಗೋಗರೆದೆ ಗುಂಡನಿಗೆ…


” ನಾನು ಪಿ ಯು ಸಿ ಯಲ್ಲಿ ಡುಮುಕಿ ಹೊಡೆದೆ. ನೀನು ಪಾಸ್ ಆಗಿ ಇಂಜಿನಿಯರಿಂಗ್ ಕೋರ್ಸ್ ಗಾಗಿ ಬೆಂಗಳೂರು ಸೇರಿದೆ. ನಾನು ಊರಲ್ಲೇ ಇದ್ದು ಕೆಲಸಕ್ಕಾಗಿ ಹಲವು  ಪ್ರಯತ್ನ ಮಾಡಿದೆ. ಒಂದು ದಿನ ಪತ್ರಿಕೆಯಲ್ಲಿ ತಮ್ಮ ಸಿನಿಮಾಗೆ ನೂತನ  ನಟರು  ಬೇಕಾಗಿದ್ದಾರೆ ಎನ್ನುವ ಪುಟ್ಟ ಜಾಹಿರಾತು ನೋಡಿ ನಾನು ಬೆಂಗಳೂರಿಗೆ ಬಂದು ಸ್ವತಃ  ಹಣವನ್ನು ಕೊಟ್ಟು ಒಂದೆರಡು – ಮೂರು ಚಿತ್ರಗಳಲ್ಲಿ  ಹೀರೋ  ಅಥವಾ ಹೀರೋಯಿನ್  ಪಕ್ಕದಲ್ಲಿ ನಿಂತು, ಕೂತು, ಗ್ರೂಪ್ ಹಾಡುಗಳಲ್ಲಿ (ನನ್ನ ಮುಖ ಕಾಣುವಂತೆ ಕೆಲವು ಕ್ಲೋಸ್ ಅಪ್ ಶಾಟ್ ಗಳಲ್ಲಿ ) ನಟಿಸಿದೆ. ಹೀಗಾಗಿ ಚಿತ್ರ ನಟನೆಂಬ ಹೆಸರಿಗೆ ಪಾತ್ರನಾದೆ.

ನಂತರ  ಊರಿಗೆ ಬಂದು ನನ್ನದೇ  ನೇತೃತ್ವದಲ್ಲಿ   ‘ಹಾಯ್.. ನನ್ನೂರು’  ಎನ್ನುವ ಪಾಕ್ಷಿಕ ಪತ್ರಿಕೆ ಶುರು ಮಾಡಿದೆ. ಬೇಡವೆಂದರೂ  ಕೇಳದೆ ನಮ್ಮ ಜನರನ್ನು ಜಾತಿ ಪ್ರೇಮದ ಮೂಲಕ ಒತ್ತಾಯ ಮಾಡಿ ಪತ್ರಿಕೆಯ ಚಂದಾದಾರರನ್ನಾಗಿ  ಮಾಡಿದೆ.  ಊರಿನ ಸುದ್ದಿಗಳ  ಜೊತೆ ಲೋಕಲ್ ಪುಢಾರಿಗಳ, ಅಧಿಕಾರಿಗಳ  ಭ್ರಷ್ಟಾಚಾರ ಮತ್ತು ನಾಯಕರ  ‘ಕಚ್ಚೆ ಪುರಾಣ’ ದ ಸುದ್ದಿಗಳಿಗೆ ನಾನು ಫೋಕಸ್ ಮಾಡಿದೆ.  ಮೊದ ಮೊದಲು  ಅನನುಭವಿಯಾದ  ಎಲ್ಲವನ್ನೂ ನಾನು ಬಿಟ್ಟಿಯಾಗಿ ಪ್ರಕಟಿಸಿಬಿಟ್ಟೆ.  ಕೊಂಚ ಅನುಭವ ಬಂದ ನಂತರ  ಆ ‘ ಬಿಸಿಬಿಸಿ  ಮತ್ತು ಹಸಿಬಿಸಿ’ ಸುದ್ದಿಗಳು ಹೊರಬರದಂತೆ  ಮಾಡಲು ಅವರುಗಳ ಜೊತೆ  ‘ಡೀಲ್’ ಮಾಡಿಕೊಂಡು ಅವರ  ‘ಗೌರವ’  ಕಾಪಾಡುತ್ತಿದ್ದೆ….
ಅದರಿಂದ  ನನಗೂ  ಹಣ  ಸರಾಗವಾಗಿ ಬರುತ್ತಿತ್ತು…ಅವರೂ  ತಮ್ಮ ಧಂದೆ ಮುಂದುವರೆಸಿಕೊಂಡು ಹೋಗಲು  ಅನುಕೂಲವಾಗುತ್ತಿತ್ತು.  ಒಟ್ಟಿನಲ್ಲಿ ಒಬ್ಬರಿಗಾಗಿ ಒಬ್ಬರು ಎನ್ನುವ ಸಹಕಾರಿ  ತತ್ವವನ್ನು  ಕಟ್ಟುನಿಟ್ಟಿನಿಂದ ಪರಸ್ಪರ
ಪಾಲಿಸುತ್ತಿದ್ದೆವು.. ಪತ್ರಿಕೆಯ ಕಾರಣದಿಂದಾಗಿ ನಾನು ಹೆಸರಾಂತ
(ಕುಖ್ಯಾತ! ) ಪತ್ರಕರ್ತನಾದೆ
ಸಮಾಜದಲ್ಲಿ.  ನಿಜ ಹೇಳಬೇಕೆಂದರೆ  ನನ್ನ ಪಾಕ್ಷಿಕ  ಪತ್ರಿಕೆ  ಒಂದಲ್ಲ ಎರಡು – ಮೂರು ತಿಂಗಳಿಗೆ  ಒಮ್ಮೆ ಹೊರಬಂದರೂ ( ಹೊರ ಬರೋದೇ  ಅಪರೂಪ!) ಜನ  ಅದನ್ನು  ಓದಲು  ಕಾತುರದಿಂದ  ಕಾಯುತ್ತಿರುತ್ತಾರೆ ಗೊತ್ತಾ…”  ಎಂದು ಗರ್ವದಿಂದ  ಹೇಳಿ ಗುಂಡ ಮಾತು ನಿಲ್ಲಿಸಿದ.

ಗುಂಡ ಬಾರ್ ನಲ್ಲಿ ಕೂತು ಸುಳ್ಳು ಹೇಳುತ್ತಿದ್ದಾನೆ ಅಂತ  ಈ ಕ್ಷಣದಲ್ಲಿ ನನಗೆ  ಅನಿಸಲಿಲ್ಲ. ಮತ್ತೊಮ್ಮೆ ಅವನ ಗ್ಲಾಸಿಗೆ ಬೀರು ತುಂಬಿಸಿ  ಅವನಿಗೊಂದು  ಸಿಗರೇಟ್  ದಯಪಾಲಿಸಿದೆ…

ನಾನೂ ಸಿಗರೇಟ್ ಹಚ್ಚಿ… ಗ್ಲಾಸಿನ ತಣ್ಣನೆಯ  ಬೀರನ್ನು ಹೀರುತ್ತಾ “ಅದು ಸರಿ.. ನಿನಗೆ ಈಗಾಗಲೇ ಸಮಾಜ  ಸೇವಕ  ಅಂತ ಬಿರುದು ಬಂದಿದೆ…ಈ ಸಮಾಜಕ್ಕೆ ನಿನ್ನ ಕೊಡುಗೆ ಏನು?” ಎಂದು ಕೇಳಿದೆ ಕುತೂಹಲದಿಂದ.

ಗುಂಡ ನಸು ನಗೆ  ನಕ್ಕು ಮುಂದುವರೆಸಿದ.

“ಸರ್ಕಾರಿ ಶಾಲೆಯಲ್ಲಿ ಓದುವ  ಮಕ್ಕಳಿಗೆ  ಇಪ್ಪತ್ತೈದರಿಂದ ಐವತ್ತು ನೋಟ್ ಬುಕ್ ಹಂಚಿ  ಗ್ರೂಪ್ ಫೋಟೋ ತೆಗೆಸಿಕೊಳ್ಳುವದು. …’ನೇತ್ರ ದಾನ  ಮಹಾ  ದಾನ’ ಎನ್ನುವ ವಾಕ್ಯದಂತೆ ನೇತ್ರ ಶಸ್ತ್ರ ಚಿಕಿತ್ಸೆಗಳನ್ನು  ಸ್ಥಳೀಯ  ರೋಟರಿ ಕ್ಲಬ್  ಸಹಯೋಗದೊಂದಿಗೆ (ಹೆಚ್ಚು ಕಡಿಮೆ  ಅವರೇ  ಎಲ್ಲವನ್ನು ಖರ್ಚು ಮಾಡುತ್ತಿದ್ದರು! ) ಏರ್ಪಾಡು ಮಾಡುವದು…
….ಸ್ವಾತಂತ್ರ್ಯ ದಿನದಂದು  ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಯ ಐದಾರು ರೋಗಿಗಳಿಗೆ ಬ್ರೆಡ್ – ಹಣ್ಣುಗಳನ್ನು  ವಿತರಿಸಿ ಫೋಟೋಗೆ  ಫೋಜ್ ಕೊಡುವದು…… ಸ್ವ ಸಹಾಯ  ಗುಂಪುಗಳಿಗೆ  ಬ್ಯಾಂಕಿನಿಂದ ಸಾಲ ಸೌಲಭ್ಯ ಕೊಡಿಸುವದು (ಆಮೇಲೆ ಸದಸ್ಯರಿಂದ  ಸೇವಾ ಶುಲ್ಕ ವಸೂಲಿ!)….ರಸ್ತೆಯ ಬದಿಯಲ್ಲಿ  ಸಸಿಗಳನ್ನು  ನೆಡವುದು (ಈಗಿದ್ದ ಗಿಡಗಳನ್ನು  ಕಡಿದು!)… ಉಚಿತ ವಧು  ವರ ಕೇಂದ್ರದಿಂದ ವಯಸ್ಕರ  ಅದೂ 40-45 ವರ್ಷವಾದರೂ  ಮದುವೆ ಭಾಗ್ಯ ಕಾಣದೆ ಕಷ್ಟ  ಪಡುತ್ತಿರುವ ಸೀನಿಯರ್ ವಧೂವರರ  ಮದುವೆಗೆ ಸಹಾಯ ಹಸ್ತ ಚಾಚುವದು (ನಿಗದಿತ  ಶುಲ್ಕ  ತುಸು ಹೆಚ್ಚೇ ಪಡೆದು!)… ಕರೋನ  ಸೇವೆ… ಇತ್ಯಾದಿಗಳು…ಈಗ ಹೇಳಿದ್ದು ಕೆಲವು  ಸ್ಯಾಂಪಲ್ ಮಾತ್ರ.  ಹೇಳಬೇಕಾದ್ದು ಇನ್ನೂ ಬಹಳ  ಇದೆ…ಆದರೆ  ನನಗೆ ಈಗ ಸಮಯ ಬಹಳ ಕಡಿಮೆ ಇದೆ…ನನ್ನ ಹಗಲಿರುಳು ಸಮಾಜ  ಸೇವೆಗೆ  ಪುಕ್ಕಟೆ ಪ್ರಚಾರ ಮಾಡಲು  ಹೇಗೂ ಸ್ವಂತ ಪತ್ರಿಕೆ ಇದ್ದೇ ಇದೆ. ” ಎಂದು ಮಾತು ಮುಗಿಸಿದ ಗುಂಡ.

“ಸರಿಯಾಗಿ  ನಿನಗೇ  ಶಿಕ್ಷಣವಿಲ್ಲ.. ಇನ್ನು ಶಿಕ್ಷಣ  ಪ್ರೇಮಿ ಹೇಗಾದೆ?” ಎಂದು ವ್ಯಂಗ್ಯದಿಂದ ಪ್ರಶ್ನಿಸಿದೆ ಗುಂಡನನ್ನು.

“ಚಂದ್ರು.. ನಿನಗೆ ಗೊತ್ತಿರಲಿ ಶಿಕ್ಷಣ  ಸಂಸ್ಥೆ ತೆಗೆದು ಅಕ್ಷರ ವ್ಯಾಪಾರ ಮಾಡುವವರೆಲ್ಲ  ಒಂದು ರೀತಿಯಲ್ಲಿ ಶಿಕ್ಷಣ  ಪ್ರೇಮಿಗಳೇ… ನಾನು ಒಂದು ದೊಡ್ಡ ಗೋಡೌನ್ ಅಂತಹ  ಕಟ್ಟಡವನ್ನು  ಬಾಡಿಗೆ ಪಡೆದು  ಅದಕ್ಕೆ ‘ಗುಂಡಣ್ಣ ಇಂಟರ್ ನ್ಯಾಷನಲ್ ಇಂಗ್ಲೀಷ್ ಪಬ್ಲಿಕ್ ಸ್ಕೂಲ್’  ಎನ್ನುವ ಬೋರ್ಡ್ ನೇತು  ಹಾಕಿ ಪ್ರೀ – ಪ್ರೈಮರಿ ಸ್ಕೂಲ್ ಆರಂಭಿಸಿದೆ. ನೋ ಡೊನೇಷನ್ ಎಂದು ಮೊದಲು ಭರ್ಜರಿ ಪ್ರಚಾರ ಮಾಡಿ ಆ ಫಂಡ್ ಈ ಫಂಡ್ ಅಂತ  ಪಾಲಕರಿಂದ ನಂತರ ವಸೂಲಿ  ಮಾಡಿ  ಶಿಕ್ಷಕರಿಗೆ  ಅರೆ ಬರೆ  ಸಂಬಳ  ಕೊಟ್ಟು ಈಗ ಎರಡು  ವರ್ಷಗಳಿಂದ  ಸ್ಕೂಲ್  ಯಶಸ್ವಿಯಾಗಿ ನಡೆಸುತ್ತಿದ್ದೇನೆ .. ಹೀಗಾಗಿ ನಾನೂ ಕೂಡಾ ಈಗ ಶಿಕ್ಷಣ  ಪ್ರೇಮಿ ಎನ್ನುವ ಗೌರವಕ್ಕೆ  ಪಾತ್ರನಾದೆ…..” ಎಂದು  ಚಂದ್ರುವಿನ  ಕೊಂಕು ನುಡಿಗೆ ಸ್ವಲ್ಪವೂ ಬೇಸರ  ಪಟ್ಟುಕೊಳ್ಳದೆ ಸಿಗರೇಟಿನ  ಹೊಗೆ ಆಕಾಶದತ್ತ  ತೂರಿ ಮಾತು ಮುಗಿಸಿದ  ಗುಂಡ.


” ಆಯ್ತು… ಕೊನೆ ಐಟಂ…ನಿನ್ನ ಅಭಿಮಾನಿಗಳ ಸಂಘದ ಬಗ್ಗೆ ಸ್ವಲ್ಪ ಹೇಳು..” ಎಂದು ಮನವಿ ಮಾಡಿದೆ ಗುಂಡನಿಗೆ.

ಗುಂಡ ಮತ್ತೊಂದು ಗ್ಲಾಸ್ ನಲ್ಲಿನ ಚಿಲ್ಡ್ ಬೀರು ಹೀರುತ್ತ  ಮತ್ತೆ ಸಿಗರೇಟ್ ಹೊತ್ತಿಸಿ ಮಾತಿಗಾರಂಭಿಸಿದ.

“ಇತ್ತೀಚಿಗೆ ಯಾವುದಕ್ಕೂ ಕೆಲಸಕ್ಕೆ ಬಾರದ ಯಕಶ್ಚಿತ್  ಪುಂಡು ಪೋಕರಿಗಳು  ತಮ್ಮ ಅಭಿಮಾನಿಗಳ (ಅಭಿಮಾನ ಶೂನ್ಯ!) ಸಂಘಗಳನ್ನು 
ಸ್ಥಾಪಿಸಿ ಪೋಷಿಸಿಕೊಂಡು ಮುನ್ನಡೆಸುವಾಗ  ಚಿತ್ರ ನಟ, ಪತ್ರಕರ್ತ,  ಸಮಾಜ  ಸೇವಕ ಮತ್ತು ಶಿಕ್ಷಣ  ಪ್ರೇಮಿಯಾದ   ನಾನು ಅಭಿಮಾನಿಗಳ ಸಂಘ  ಯಾಕೆ ಮಾಡಬಾರೆದೆಂದು ತಲೆಯಲ್ಲಿ ಹುಳ ಕೊರೆಯತೊಡಗಿತು…. ತಡ  ಮಾಡಲಿಲ್ಲ…  ನನ್ನ ಪಾಲಿಗೆ ಬಂದ  ಐದು ಎಕರೆ  ನೀರಾವರಿ ಭೂಮಿಯಲ್ಲಿ  ಎರಡು ಎಕರೆ ನನ್ನದಲ್ಲ  ಸಾರ್ವಜನಿಕರಿಗೆ ಸೇರಿದ್ದು ಎಂದು ಭಾವಿಸಿ ಮಾರಿ ಅದನ್ನೇ ಬಂಡವಾಳವಾಗಿಸಿ ಈ ಫೀಲ್ಡ್ ಗೆ ಇಳಿದೆ….” ಎಂದು  ಅರೆಕ್ಷಣ ಮಾತು ನಿಲ್ಲಿಸಿದ ಗುಂಡ.

” ನಿನ್ನ ಅಭಿಮಾನಿಗಳ ಸಂಘದ  ಸದಸ್ಯರು  ಯಾರು? ಅವರಿಗೆ ನಿನ್ನ ಮೇಲೇಕೆ ಹುಚ್ಚು ಅಭಿಮಾನ.. ಇದರಿಂದ  ಅವರಿಗೆ ಏನು ಪ್ರಯೋಜನ…ಇದನ್ನೆಲ್ಲಾ ಹೇಗೆ ನಿಭಾಯಿಸುತ್ತಿಯ? ” ಎಂದು ಮನಸಿನಲ್ಲಿ ಅನಿಸಿದ್ದು  ಬಾಯಿ ಬಿಟ್ಟು ಕೇಳಿಯೇ ಬಿಟ್ಟೆ.


ಗುಂಡ ಮುಗುಳುನಗೆ ಸೂಸುತ್ತ  ಮತ್ತೆ ಮಾತು ಮುಂದುವರೆಸಿದ.

” ಈ ಅಭಿಮಾನಿಗಳ ಸಂಘ  ನನ್ನ ಮುಂದಿನ ರಾಜಕೀಯದ ಆರಂಗೇಟ್ರಂ  ಅಷ್ಟೇ.. ಸುಲಭ ಹಣ, ಹೆಸರು ಸಂಪಾದಿಸುವದಕ್ಕೆ  ರಾಜ  ಮಾರ್ಗ ಈ ರಾಜಕೀಯ  ಪ್ರವೇಶ ಅಂತ ನನಗೆ   ಚೆನ್ನಾಗಿ ಗೊತ್ತು….
ಸಂಘದ ಅಧ್ಯಕ್ಷ ನನ್ನ ಬೆಂಬಲಿಗನೂ  ಮತ್ತು ಪ್ರಿಯ ಮಿತ್ರನೂ  ಅದ ಬಸ್ಯ ಉರ್ಫ್ ಬಸವರಾಜ  ಅಂತ… ಅಲ್ಲದೇ ಆತ  ನನ್ನ  ಅಭಿಮಾನಿಗಳ ಸಂಘದ ವಿವಿಧ ಗ್ರೂಪ್ ಗಳಿಗೆ ಅಡ್ಮಿನ್ ಬೇರೆ…ಆತನಿಗೆ ತಿಂಗಳಿಗಿಷ್ಟು  ಎಂದು ಖರ್ಚಿಗೆ ಕೊಡುವೆ. ..  ಅಭಿಮಾನಿಗಳ  ಸಂಘದ ಸುಗಮ ಕಾರ್ಯ ನಿರ್ವಹಣೆಗಾಗಿ ಒಂದು ಕೋರ್  ಕಮಿಟಿ  ರಚನೆ ಮಾಡಿದ್ದೇನೆ… ಒಬ್ಬ ಇನ್ನೊಬ್ಬ ಸದಸ್ಯನನ್ನು ಹೊಸದಾಗಿ  ಸೇರ್ಪಡಿಸಿದರೆ  ಅವನಿಗಿಷ್ಟು  ಅಂತ ಪ್ರೋತ್ಸಾಹ ಧನವಿರುತ್ತದೆ… ಆ ಹೊಸದಾಗಿ  ಸೇರ್ಪಡೆಯಾದವನು  ಮತ್ತೊಬ್ಬನನ್ನು ಕರೆ  ತಂದರೆ  ಅವನಿಗೂ ಅಷ್ಟೇ… ನಿಜ ಹೇಳಬೇಕೆಂದರೆ   ಇದೊಂದು ಚೈನ್  ಸಿಸ್ಟಮ್… ನನ್ನ ಹುಟ್ಟುಹಬ್ಬದ ದಿನ  ಅಥವಾ ವಿಶೇಷ ದಿನಗಳಂದು ಮೊದಲು ಸಮಾಜ  ಸೇವೆಯ ನೆಪದಲ್ಲಿ  ಏನು ಮಾಡುತ್ತಿದ್ದೆನೋ  ಅದನ್ನೇ ಈಗ  ಅಭಿಮಾನಿಗಳ ಸಂಘವು  ಅಧಿಕೃತವಾಗಿ ಮಾಡುತ್ತಿದೆ…. ನನ್ನನ್ನು ಆಗಾಗ್ಗೆ ಸಮಾರಂಭಗಳಲ್ಲಿ  ಹೊಗಳಿ  ಮಾತನಾಡುವದು ಸಂಘದ  ಕೆಲ ಸದಸ್ಯರ  ಕೆಲಸ… ಅದನ್ನು ‘ಯು ಟ್ಯೂಬ್’  ನಲ್ಲಿ ಪ್ರಚಾರ ಮಾಡಲು  ಒಂದು ಪ್ರತ್ಯೇಕ ತಂಡವೇ ಇದೆ. ಅಲ್ಲದೇ ಈ ವಿಷಯದಲ್ಲಿ  ನನ್ನ ಪತ್ರಿಕೆಯು ಅಳಿಲು ಸೇವೆ ಸಲ್ಲಿಸುತ್ತದೆ…ನನ್ನ ಫೋಟೋ ಜೊತೆಗೆ ತಮ್ಮವೂ  ಫ್ಲೆಕ್ಸಿಯಲ್ಲಿ ಹಾಕಿ ಊರಿನ ಆಯಕಟ್ಟಿನ ಜಾಗದಲ್ಲಿ  ಹಾಕುವುದಕ್ಕೆ ಒಂದು ಜಾಹಿರಾತು ವಿಭಾಗವನ್ನೇ ಮಾಡಿದ್ದೇನೆ… ನನ್ನ ಹಿಂದೆ ಮುಂದೆ ಓಡಾಡಲು  ಮತ್ತು ನಾನು ಜನ  ನಾಯಕ ಎಂದು ಬಿಂಬಿಸಲು ಕೆಲವು  ಚೇಲಾಗಳನ್ನು  ಇಟ್ಟುಕೊಂಡಿರುವೆ… ಅವರು ಸಮಯ  ಬಂದಾಗ  ಬೌನ್ಸರ್ ಆಗಿ ಕೂಡ ಕೆಲಸ  ಮಾಡಬಲ್ಲರು… ಆದರೆ  ಇದಕ್ಕೆಲ್ಲ ಸ್ವಲ್ಪ ಖರ್ಚು  ಮಾಡಬೇಕಾಗುತ್ತೆ…. ಸಾರ್ವಜನಿಕ  ರಂಗದಲ್ಲಿ  ಇದ್ದ ಮೇಲೆ ಇದೆಲ್ಲಾ ಮಾಮೂಲಿ….”

ಎಂದು ಅರೆಕ್ಷಣ  ನನ್ನನ್ನು ದಿಟ್ಟಿಸಿ ನೋಡಿ   ಸಿಗರೇಟು ಹಚ್ಚಿ ಹೊಗೆ ತೂರುತ್ತ ಮಾತು ಮುಂದುವರೆಸಿದ ಗುಂಡ.

“ಗುಂಡಣ್ಣ ಅಭಿಮಾನಿಗಳ  ಸಂಘ ಸದಸ್ಯರ  ಒತ್ತಾಯದ ಮೇರೆಗೆ ನಾನು ನಮ್ಮ ವಿಧಾನ ಸಭಾ ಕ್ಷೇತ್ರದ  ಪ್ರಬಲ
ಆಕಾಂಕ್ಷಿ ( ಮಾನ್ಯ ಮತದಾರರ ಸೇವೆ ಮಾಡುವ   ಅವಕಾಶಕ್ಕಾಗಿ ಸದಾ ಸಿದ್ಧ!) ಎಂದು  ಒಂದೂವರೆ  ವರ್ಷಗಳ ಬಳಿಕ  ಬರುವ ವಿಧಾನ  ಸಭೆಯ ಚುನಾವಣೆ ಪ್ರಚಾರವನ್ನು   ಈಗಲೇ ಆರಂಭಿಸಿದರೆ ಎದುರಾಳಿಗಳು ನನ್ನನ್ನು ಸಂಪರ್ಕಿಸಲು  ಅನುಕೂಲವಾಗುತ್ತದೆ.  ನನ್ನ ಹಿಂದೆ ಅಭಿಮಾನಿಗಳ  ಸದಸ್ಯರ  ದೊಡ್ಡ ಬಳಗವೇ  ಇದೆ ಎಂದು ಅವರಿಗೆ ಮನವರಿಕೆ  ಮಾಡುತ್ತೇನೆ.  ಅಭಿಮಾನಿಗಳ ಸಂಘದ ‘ಹೆಚ್ಚು ಸದಸ್ಯರು – ಹೆಚ್ಚು ಮತದಾರರು’ ಎಂಬ ಸ್ಲೋಗನ್  ಅಭ್ಯರ್ಥಿಗಳಿಗೆ ಜೋರಾಗಿ ಕೇಳಿಸುವಂತೆ  ಮಾಡುತ್ತೇನೆ…ಯಾರು ನಾನು ಕೇಳಿದಷ್ಟು ಹಣದ  ಸಹಾಯ  ಮಾಡುವರೋ  ಅವರ  ಪರವಾಗಿ  ಮತ್ತು ಅಭಿಮಾನಿಗಳ  ಸಂಘದ ಸದಸ್ಯರ  ಒತ್ತಾಸೆಯ  ಮೇರೆಗೆ ಚುನಾವಣೆ ಕಣದಿಂದ  ಕಡೆಯ  ಕ್ಷಣದಲ್ಲಿ ಇಂತಹ ಅಭ್ಯರ್ಥಿಯ ಮನವಿಯ ಮೇರೆಗೆ ಹಿಂದೆ  ಸರಿಯುತ್ತಿದ್ದೇನೆ ಎಂದು ಸ್ವಯಂ ಘೋಷಿಸುತ್ತೇನೆ….ನಾನು ರಾಜಕೀಯ ಕ್ಷೇತ್ರಕ್ಕೆ ಬಂದು ಹಾಕಿದ  ಬಂಡವಾಳ ವಾಪಾಸು ಪಡೆಯಲು ಶತ  ಪ್ರಯತ್ನ ಮಾಡುತ್ತೇನೆ….ಒಟ್ಟಿನಲ್ಲಿ ನಾನು ‘ಕಿಂಗ್’ ಆಗುವ ಬದಲು  ‘ಕಿಂಗ್ ಮೇಕರ್’ ಆಗಲು  ಇಷ್ಟಪಡುತ್ತೇನೆ…. ತಿಳಿಯಿತಾ…” ಎಂದು ಅಭಿಮಾನಿ  ಸಂಘಗಳ ನಿಜ
ಸ್ವರೂಪವನ್ನು  ಅನಾವರಣೆಗೊಳಿಸಿದ ಗುಂಡ… ಅದೇ ‘ಗುಂಡಣ್ಣ ಅಭಿಮಾನಿಗಳ  ಸಂಘದ’  ಸೃಷ್ಟಿಕರ್ತ…

ಇಷ್ಟೆಲ್ಲ ಗುಂಡನ  ಮಾಸ್ಟರ್  ಪ್ಲಾನ್ ಕೇಳಿದ ಬಳಿಕ ನಾನು ಬೆಂಗಳೂರಿನಲ್ಲಿ ಜೀತದೆತ್ತಿನಂತೆ ಹಗಲೂ  ಇರುಳು ದುಡಿದು ‘ಪುಡಿ ಕಾಸು’ ಸಂಪಾದಿಸುವದಕ್ಕಿಂತ  ಇಲ್ಲೇ ಇದ್ದು ‘ಪುಢಾರಿ ಕಾಸು’  ಗಳಿಸುವದು ಸೂಕ್ತವಲ್ಲವೇ  ಎಂದು ಅರೆಕ್ಷಣ  ಅನಿಸಿದ್ದು ಮಾತ್ರ ಸುಳ್ಳಲ್ಲ….

“ಜೈ.. ಜೈ…ಗುಂಡಣ್ಣ ಅಭಿಮಾನಿಗಳ ಸಂಘಕ್ಕೆ” ಎಂದು ಒಂದಲ್ಲ ಎರಡು  ಬಾರಿ ನಾನು ನನಗರಿವಿಲ್ಲದಂತೆ ಆವೇಶದಿಂದ ಜೋರಾಗಿ  ಕೂಗಿ ಜೈಕಾರ  ಹಾಕಿದ್ದು ನೋಡಿ ಗುಂಡನ ಮುಖದಲ್ಲಿ ಈಗ ಸಂತೃಪ್ತಿಯ ಕಳೆ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ಗುಂಡಣ್ಣ ಅಭಿಮಾನಿಗಳ ಸಂಘ”

  1. JANARDHANRAO KULKARNI

    ಶ್ರೀ ರಾಘವೇಂದ್ರ ಮಂಗಳೂರು ಅವರ ವಿಡಂಬನಾತ್ಮಕ ಲೇಖನ ಚೆನ್ನಾಗಿದೆ. ಈಗಿನ ರಾಜಕಾರಣಿಗಳು ಹೇಗೆ ತಯಾರಾಗುತ್ತಾರೆ ಎನ್ನುವ ವಾಸ್ತವವನ್ನು ತೆರೆದಿಟ್ಟಿದ್ದಾರೆ. ಇವರ ಲೇಖನ ಉದಯೋನ್ಮುಖ ಪುಡಾರಿಗಳಿಗೆ ದಾರಿ ದೀಪವೂ ಆಗಬಹುದು.

  2. ಧರ್ಮಾನಂದ ಶಿರ್ವ

    ಬರಿಯ ಗುಂಡ ಗುಂಡಣ್ಣನಾಗಿ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸುತ್ತಾ ರಾಜಕೀಯವಾಗಿ ಬೆಳೆಯುತ್ತಿರುವ ಪರಿಯ ಅಣಕು ಬರಹ ಸೊಗಸಾಗಿದೆ. ಒಳಗೆಲ್ಲಾ ಟೊಳ್ಳಾದರೂ ತೋರಿಕೆಯ ಪ್ರತಿಷ್ಠೆ ಇವತ್ತಿನ ಬಂಡವಾಳ. ಇದನ್ನೇ ಮೂಲಸೊತ್ತಾಗಿಸಿ ಮೆರೆವ ಗುಂಡಣ್ಣನಿಗೆ ಜೈ ಅನ್ನುವ ನಮ್ಮಂತಹವರನ್ನು ಎಚ್ಚರಿಸುವ ಸೂಕ್ಷವೂ ಬರಹದ ಎಳೆಯಲ್ಲಿದೆ.

    ರಾಘವೇಂದ್ರ ಮಂಗಳೂರು ಅವರಿಗೆ ಅಭಿನಂದನೆಗಳು

  3. ಮುರಳಿಧರ ಜೋಷಿ

    ರಾಘವೇಂದ್ರ ಮಂಗಳೂರು ಅವರ ವಿಡಂಬನ ಲೇಖನಗಳು ನಮ್ಮ ವ್ಯಕ್ತಿತ್ವಕ್ಕೆ, ಸೋಗಲಾಡಿತನಕ್ಕೆ ಹಿಡಿದ ಕನ್ನಡಿ. ಗುಂಡಣ್ಣನಂತಹ ವ್ಯಕ್ತಿಗಳು ಸಮಾಜದಲ್ಲಿ ಹೇರಳವಾಗಿ ಸಿಗುತ್ತಾರೆ. ಎಲ್ಲರಿಂದಲೂ ಪ್ರಶಂಸೆಗೊಳಗಾಗಬೇಕು. ನಾನೂ ಸಮಾಜದಲ್ಲಿ ದೊಡ್ಡ ವ್ಯಕ್ತಿ ಎನಿಸಿಕೊಳ್ಳುವುದು ಒಂದು ಮಾನಸಿಕ ರೋಗವಾಗಿ ಹೊರ ಹೊಮ್ಮಿದೆ. ಪ್ರಾಮಾಣಿರು , ಪ್ರಾಮಾಣಿಕತೆ ಸತ್ತು ಹೋಗಿದೆ.
    ಬರೀ.. ಜೈ ಅನ್ನುವ ಹೊಗಳು ಭಟ್ಟರ ಗುಂಪುಗಳು ಮೆರೆತಿವೆ.
    ರಾಘವೇಂದ್ರ ಸರ್ ರಾಜ್ಯ ಮಟ್ಟದ ಪ್ರಮುಖ ಪತ್ರಿಕೆಯಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆಯುತ್ತಿವೆ.

    ಮುರಳಿಧರ ಜೋಷಿ

  4. ಶ್ರೀಧರ ಪುರೋಹಿತ

    ಡಾಂಭಿಕತೆಯ ಎತ್ತಿ ಹಿಡಿಯುವ ವಿಡಂಬನ ಲೇಖನ ತುಂಬಾ ಸೊಗಸಾಗಿದೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter