ಮನುಷ್ಯ ಜನ್ಮ ಎಷ್ಟೋ ಜೀವ ಸಂಕುಲಗಳ ಜನ್ಮಕ್ಕಿಂತ ಶ್ರೇಷ್ಠ. ಸುಖ ದುಃಖವಂತೂ ಪ್ರತಿ ಜೀವ ಸಂಕುಲಕ್ಕೂ ಕಡ್ಡಾಯ.ಬಂದಂತೆ ಜೀವನವನ್ನು ಸ್ವೀಕರಿಸಿ ಮುಕ್ತಿ ಹೊಂದುವುದು ಸತ್ಯ ಮತ್ತು ಅನಿವಾರ್ಯ. ಯಾರ ಯಾರದ್ದೋ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವುದು ಉತ್ತರಿಸಲಾರದ ಪ್ರಶ್ನೆ.ಪ್ರತೀ ಕಾರ್ಯದ ಹಿಂದೆ ದೇವರ ಅನುಗ್ರಹ ಇದ್ದೇ ಇರುತ್ತದೆ ಅಂದಾಗ ಅದನ್ನು ಸ್ವೀಕರಿಸದೇ ಬೇರೆ ದಾರಿಯಿಲ್ಲ.ಹುಟ್ಟು ಸಾವುಗಳ ರಹಸ್ಯದಲ್ಲಿ ಜೀವನ ಅನಿವಾರ್ಯ. ಜೀವನ ದೇವರು ಕೊಟ್ಟ ಕೊಡುಗೆ ಎಂದು ನಿರ್ಧರಿಸಿದಾಗ ಸುಖವೋ ದುಃಖವೋ ಅದನ್ನು ಆಸ್ವಾದಿಸಬೇಕು; ಖುಷಿಯಿಂದ ಅನುಭವಿಸಬೇಕು.ಇದನ್ನೇ ಪುಷ್ಟಿಸುವಂತಿದೆ ಗೈರ ಸಮಜೂತಿ ಕಾದಂಬರಿ.
ಶ್ರೀ ರಾಘವೇಂದ್ರ ಪಾಟೀಲರು ಬರೆದ ಕಾದಂಬರಿ “ಗೈರ ಸಮಜೂತಿ” ಆಕರ್ಷಿಸಿದ್ದೇ ಅದರ ಹೆಸರಿನಿಂದ. ಗೈರ ಸಮಜೂತಿ ಅಂದರೆ ತಪ್ಪು ತಿಳಿವಳಿಕೆ ಅಥವಾ ತಪ್ಪು ಭಾವಿಸುವುದು. ಬಳಸಿದ ಶಬ್ದ ಬಹಳ ವಿಶೇಷ ಮತ್ತು ವಿಶಿಷ್ಟ ಎನಿಸಿತು. ಕಾದಂಬರಿಯಲ್ಲಿ ಯಾರು, ಯಾರನ್ನು, ಏತಕ್ಕಾಗಿ ಗೈರ ಸಮಜೂತಿ ಮಾಡಿಕೊಂಡರು ಎಂಬ ಪ್ರಶ್ನೆ ಓದುವಂತೆ ಪ್ರಚೋದಿಸಿದ್ದು ನಿಜ.ಪಕ್ಕಾ ಉತ್ತರ ಕರ್ನಾಟಕದ ಪ್ರಾದೇಶಿಕತೆಯನ್ನು ಸೂಚಿಸುವ ಭಾಷೆಯ ಬಳಕೆ, ಅದರಲ್ಲೂ ಎಲ್ಲರನ್ನೂ ಸೆಳೆಯುವ ವಿಶಿಷ್ಟ ಶಬ್ದಗಳ ಬಳಕೆ ಕಾದಂಬರಿಯನ್ನು ಓದುವಂತೆ ಬರಸೆಳೆಯುತ್ತದೆ.
ಸ್ವಾತಂತ್ರ್ಯ ಪೂರ್ವದ ಮತ್ತು ನಂತರದ ದಿನಗಳ ವರ್ಣನೆಯ ಜೊತೆಗೆ, ಜೀವನದ ಏರಿಳಿತಗಳು, ಎದುರಿಗಿರುವ ಕ್ಲಿಷ್ಟ ಸಂದರ್ಭಗಳು, ಮಾರ್ಗಗಳು, ಕಟ್ಟು ಪಾಡುಗಳು, ಸಂಪ್ರದಾಯಗಳನ್ನು ಎದುರಿಸುವ ಪರಿ, ನೋವು ಮಧ್ಯೆ ಬರುವ ಅಲ್ಪ ಸ್ವಲ್ಪ ಖುಷಿಯ ಘಟನೆಗಳು ಕಾದಂಬರಿಯನ್ನು ಹಾಸು ಹೊಕ್ಕಿವೆ.
ಕಥೆಯಲ್ಲಿ ಪ್ರಮುಖವಾದ ಎರಡು ಗೈರ ಸಮಜೂತಿಗಳೆಂದರೆ ಒಂದು ವಚ್ಚಕ್ಕನ ಗಂಡ ಅಚ್ಯುತನ ಸಾವು. ಸ್ವಾತಂತ್ರ್ಯ ಹೋರಾಟಗಾರನಾದ ಕಾಕಾ ಕೃಷ್ಣಾಜಿ ಎಂದು ತಿಳಿದು ಪುಣೆಯ ರೈಲ್ವೆ ಸ್ಟೇಷನ್ ನಲ್ಲಿ ಯುವಕ ಅಚ್ಯುತನನ್ನು ಗುಂಡು ಹಾರಿಸಿ ಕೊಲೆ ಮಾಡಲಾಗುತ್ತದೆ.ಕಾಕಾ ಕೃಷ್ಣಾಜಿಯ ರೂಪ ಅಚ್ಯುತನ ರೂಪಕ್ಕೆ ಸಾಮ್ಯತೆ ಹೊಂದಿರುವುದು ಈ ಗೈರ ಸಮಜೂತಿಗೆ ಕಾರಣ. ಸ್ವಾತಂತ್ರ್ಯ ಹೋರಾಟದ ಗಂಧ ಗಾಳಿಯೇ ಗೊತ್ತಿಲ್ಲದ ಅಮಾಯಕ ನಿರಪರಾಧಿ ಅಚ್ಯುತನ ಸಾವು ಓದುಗರನ್ನು ದುಖಿಸುವಂತೆ ಮಾಡುತ್ತದೆ. ಇದರ ಬೆನ್ನಲ್ಲೇ ವಚ್ಚಕ್ಕನ ಕಾಕಾ ಸತ್ಯಬೋಧರ ಸಾವು ಎರಡನೇ ದೊಡ್ಡ ಗೈರ ಸಮಜೂತಿ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಸಕ್ರಿಯವಾಗಿದ್ದ ಕಾಲದಲ್ಲಿ, ಸತ್ಯಬೋಧರು ತಮ್ಮ ಆದರ್ಶಗಳಿಂದ ಮತ್ತು ಗಾಂಧೀಜಿಯ ಅಹಿಂಸಾ ತತ್ತ್ವಗಳ ಪರಿಣಾಮದಿಂದ ಅವರೂ ಕಾರ್ಯನಿರತರಾಗಿದ್ದರು. ಮೇಲಿಂದ ಮೇಲೆ ಕಾಂಗ್ರೆಸ್ ನ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು.ಅತ್ತ ಗಾಂಧೀಜಿಯವರ ಹತ್ಯೆಯಾದ ಕೂಡಲೇ ದೇಶದಲ್ಲಿ ಅಲ್ಲಲ್ಲಿ ಗಲಭೆ ದೊಂಬಿಗಳು, ವಿವಿಧ ಜಾತಿ ಧರ್ಮಗಳಲ್ಲಿ ತಪ್ಪು ತಿಳುವಳಿಕೆಗಳು ತುಂಬಿ ತೇಲಾಡಿ ಅದೇ ಗೈರ ಸಮಜೂತಿಯಿಂದ ಅಹಿಂಸಾ ಪರವಾಗಿದ್ದ ಸತ್ಯದ ಮೂರ್ತಿಯಂತೆಯೇ ಇದ್ದ ಸತ್ಯಬೋಧ ಕಾಕಾರನ್ನು ಪೈಲ್ವಾನರು ಆಕ್ರಮಣ ಮಾಡಿ ಕೊಲೆಗೈಯ್ಯುತ್ತಾರೆ. ವೈಧವ್ಯದ ಕಹಿ ನೆರಳಿನಲ್ಲೇ ಬದುಕಿತ್ತಿರುವ ವಚ್ಚಕ್ಕನ ಬಾಳಿನಲ್ಲಿ ಓದು, ಬರಹ, ಉಪನಿಷತ್ತು, ದೇವರು ದಿಂಡಿರು ಎಂಬಲ್ಲಿ ಕಾಲ ಕಳೆಯುತ್ತಿದ್ದವಳಿಗೆ ಅವರ ಸಾವು ಬರಸಿಡಿಲು ಬಡಿದಂಗಿತ್ತು. ಜೀವನದಲ್ಲಿ ತುಸುವಾದರೂ ಬದಲಾವಣೆ ಬೇಕೆಂದು ಸತ್ಯಬೋಧರು ವಚ್ಚಕ್ಕನಿಗೆ ಓದು ಬರಹದ ಕಡೆಗೆ ಮನ ಒಲಿಸಿ, ಅದೇ ಮುಂದೆ ವೈದ್ಯಕೀಯ ಪುಸ್ತಕಗಳನ್ನು ತಾನಾಗಿಯೇ ಓದುವಂತೆ ಮಾಡಿತ್ತು.
ಬರೀ ವಚ್ಚಕ್ಕನ ಜೀವನವನ್ನೇ ಸಾರುವಂತೆ ಅಥವಾ ವಚ್ಚಕ್ಕನೇ ಮುಖ್ಯ ಪಾತ್ರವಾಗಿ, ಅವಳದೇ ಜೀವನಗಾಥೆಯನ್ನು ಕಾದಂಬರಿ ಹೇಳುವಂತೆ ಮೇಲ್ನೋಟಕ್ಕೆ ಅನಿಸಿದರೂ ಅವಳಿಗೆ ಹೊಂದಿಕೊಂಡಂತೆ, ಸಂಪರ್ಕಕ್ಕೆ ಬರುವ ಅನೇಕ ಪಾತ್ರಗಳ ಸಣ್ಣ ಸಣ್ಣ ಕಥೆಗಳು ಓದುಗರನ್ನು ಆಕರ್ಷಿಸುತ್ತವೆ. ಮಹಾಕಾವ್ಯ ಮತ್ತು ಪುರಾಣಗಳಲ್ಲಿ ಬರುವಂತೆ ಮುಖ್ಯ ಕಥೆಯೊಂದಿಗೆ ಇತರ ಕಥೆಗಳು ಸ್ವಾರಸ್ಯದಿಂದ ಕೂಡಿವೆ.ಮುಖ್ಯ ಕಥೆಯಿಂದ ಸಣ್ಣ ಕಥೆ ಎಲ್ಲೋ ಹೊರಟುಹೋಗುತ್ತಿದೆ ಎನ್ನುತ್ತಿದ್ದಂತೆ ಅದು ಮುಖ್ಯವಾಹಿನಿಗೆ ಹೊಂದಿಕೊಂಡಿರುವುದು ಗಮನಕ್ಕೆ ಬರುತ್ತದೆ.
ಮುಗ್ಧ ಅಚ್ಯುತನ ಪಾತ್ರವೊಂದು ಕಣ್ಣಲ್ಲಿ ನೀರು ತರಿಸದೇ ಬಿಡದು. ಸ್ವಾತಂತ್ರ್ಯ, ದೇಶಭಕ್ತಿ, ಹೋರಾಟಗಳಿಂದ ಮಳಾ ದೂರವಿದ್ದ ಈತನದು ಅತಿ ಸರಳ ಜೀವನ ಮತ್ತು ಸರಳ ಖುಷಿ. ಅಪ್ಪ ರಾಮರಾಯರು ಹೇಳಿದಂತೆ ನೀಗಿದ ಅಭ್ಯಾಸ ಕಲಿತು, ನೌಕರಿ ಹಿಡಿದು, ಸರಳಜೀವನ ಧೋರಣೆಗಳನ್ನು ಇಟ್ಟುಕೊಂಡಾತ. ಅತಿ ವಿಜೃಂಭಣೆ, ತನ್ನದಲ್ಲದ ವಿಷಯಗಳ ಯೋಚನೆಯಂತೂ ಎಂದೂ ಇಲ್ಲ. ಈತನಂತೆಯೇ ಇದ್ದ ಗೆಳೆಯನೊಂದಿಗೆ ದೂರದ ಪುಣೆಯಲ್ಲಿದ್ದು ಪ್ರಸ್ತ ಕಾರ್ಯಕ್ಕೆ ಬರುವಾಗ, ವಚ್ಚಕ್ಕನಿಗೆ ಪ್ರೀತಿಯ ದ್ಯೋತಕವಾಗಿ ಕಾಣಿಕೆ ಕೊಳ್ಳುವಾಗ ವಿವಿಧ ವಸ್ತು ಗಳನ್ನು ಚರ್ಚಿಸಿ ಕೊನೆಗೆ ಅತ್ತರದಾನಿ ತೆಗೆದುಕೊಂಡು ಅತಿ ಮಧುರ ಮನೋಭಾವದಿಂದ ಪ್ರಯಾಣ ಬೆಳೆಸಿ, ಅಲ್ಲಿಯೇ ಗೈರ ಸಮಜೂತಿಯಿಂದ ಪೊಲೀಸರ ಗುಂಡೇಟಿಗೆ ಬಲಿಯಾದದ್ದು ಕ್ಷಣಹೊತ್ತು ಬೇಸರ ತರಿಸುತ್ತದೆ. ಎಷ್ಟೋ ದಿನಗಳಿಂದ ಕಂಡ ಯುವಕನ ಆಸೆಗಳು, ದಪ್ಪನೆ ಬೀಳುವ ಸಂದರ್ಭ ಮನ ಕಲಕುತ್ತದೆ. ಇನ್ನೂ ಬಾಲಕಿಯಾದ ವಚ್ಚಕ್ಕ ಮೈನೆರೆದು ಗಂಡನ ಬಗ್ಗೆ ಅದು ಇದು ಎಂದು ಆಸೆಯಿಟ್ಟುಕೊಂಡು ಮನೆಯವರ ತಿಳಿಹಾಸ್ಯಕ್ಕೆ ನಗುತ್ತಾ, ನಾಚುತ್ತಾ, ತನ್ನದೇ ಲೋಕ ನಿರ್ಮಿಸಿಕೊಂಡು ಬರುವಿಕೆಗಾಗಿ ಕಾದಾಗ ಬರ ಬಿಸಿಲಿನಲ್ಲೂ ಸಿಡಿಲು ಬಡಿದ ಅನುಭವ ಆಕೆಯದು. ಬಾಲ್ಯದ ಗೆಳೆಯನೂ ಆದ ಗಂಡನ ಸಾವನ್ನು ಕನಸಿನಲ್ಲೂ ನೆನೆಯದವಳಿಗೆ ದೇವರು ಕೊಟ್ಟ ಶಿಕ್ಷೆ ಜೀವನದುದ್ದಕ್ಕೂ ಪಸರಿಸುತ್ತದೆ. ಮಗಳು ಅಂಬಕ್ಕಾ ಮತ್ತು ಮೊಮ್ಮಗಳು ವಚ್ಚಕ್ಕಗೆ ಶ್ಯಾಮರಾಯರೇ ಆಶ್ರಯದಾತರಾಗಿದ್ದರು.ಅಚ್ಯುತನ ಮರಣದ ನಂತರ ಕಾಕಾ ಸತ್ಯಬೋಧರು ಅವರಿಬ್ಬರ ಜವಾಬ್ದಾರಿಯನ್ನು ಹೊತ್ತು ಐನಾಪುರಕ್ಕೆ ಕರೆದೊಯ್ದು ಮನಸ್ಸನ್ನು ನಿಯಂತ್ರಿಸಲು, ಜೊತೆಗೆ ಬಂದಂಥ ವೈಧವ್ಯವನ್ನು ಎದುರಿಸಲು ಸತ್ಯಬೋಧರು ಸಂಸ್ಕೃತ ಮತ್ತು ಕನ್ನಡವನ್ನು ಸ್ವಂತ ತಾವೇ ಆಕೆಗೆ ಕಲಿಸುತ್ತಾರೆ. ಓದಲು ಧಾರವಾಡದಿಂದ ಕಥೆ, ನಿಘಂಟು ಮತ್ತು ಇತರ ಪುಸ್ತಕಗಳನ್ನು ಹೊತ್ತುಕೊಂಡು ಓದಲು ಪ್ರಚೋದಿಸುತ್ತಾರೆ. ಚುರುಕಾದ ಎಲ್ಲವನ್ನೂ ಆಸಕ್ತಿಯಿಂದ ಕಲಿತು ಪುಸ್ತಕ ಓದುವಾಗ ಹೊಳೆದ ಪ್ರಶ್ನೆಗಳಿಗೆ ಉತ್ತರಗಳನ್ನು ಕಾಕಾರಿಂದ ಪಡೆಯುತ್ತಾಳೆ. ಈ ಓದು ಮುಂದೆ ವೈದ್ಯಕೀಯ ಪುಸ್ತಕಗಳುನ್ನು ಓದುವಂತೆ ಮಾಡಿ ಪ್ರಸೂತಿ ತಜ್ಞೆಯಾಗಿ ಹೊರಹೊಮ್ಮುತ್ತಾಳೆ. ಜಾತಿ ಧರ್ಮವನ್ನು ಮೀರಿ ಜನರ ಸೇವೆಯಲ್ಲಿ ತೊಡಗಿಕೊಳ್ಳುತ್ತಾಳೆ. ಆಕೆ ಪಡೆದ ಜೀವನಕ್ಕೆ ಇದು ಅವಶ್ಯವೂ ಆಗಿತ್ತು. ಸಾಮಾನ್ಯ ಸಂಸಾರಸ್ಥರ ಜೀವನ ಆಕೆಯದ್ದಲ್ಲ ಅಂದಾಗ ಈ ವೃತ್ತಿ ಎಷ್ಟೋ ಆನಂದವನ್ನು ನೀಡಿತ್ತು. ಆಕೆ ಕಲಿಯುವುದನ್ನು, ಓದುವುದನ್ನು, ಸೇವೆ ಮಾಡುವುದನ್ನು ಪೋಷಿಸಿದ ಸತ್ಯಬೋಧರದು ಪವಿತ್ರ ಆತ್ಮ. ಯಾವ ಸ್ವಾರ್ಥವೂ ಇಲ್ಲದೇ, ಜವಾಬ್ದಾರಿ ತೆಗೆದುಕೊಂಡು ಓದುಗರ ಮನಸ್ಸನ್ನು ಗೆಲ್ಲುತ್ತದೆ. ಅದೇ ರೀತಿ ಅವರ ಹತ್ಯೆಯೂ ತೀವ್ರ ನೋವನ್ನುಂಟು ಮಾಡುತ್ತದೆ. ಸತ್ಯಬೋಧರದು ಮರೆಯಲಾರದ ಅನನ್ಯ ಪಾತ್ರ; ಜೀವನೋತ್ಸಾಹದ ಪ್ರತಿಮೆ.
ಮನುಷ್ಯನಿಗೆ ಅತೀ ಕಠಿಣವಾದ ನಿಯಂತ್ರಣವೆಂದರೆ ದೈಹಿಕ ವಾಂಛೆಗಳು. ಅವುಗಳ ನಿಯಂತ್ರಣ ಅಷ್ಟು ಸುಲಭವೂ ಅಲ್ಲ. ಅಂಥದ್ದೇ ಸ್ಥಿತಿ ಯೌವ್ವನ ಸ್ಪುರಿಸುವ ವಚ್ಚಕ್ಕನದು.ಗಂಡ ಸತ್ತ ನಂತರವೂ ಕನಸಿನಲ್ಲಿ ಕಾಣುವ ದೃಶ್ಯಗಳು, ಬೆಳದಿಂಗಳನ್ನು ನೋಡುವ ಹಪಾಹಪಿ, ಚಂದ್ರನಲ್ಲಿ ಅಚ್ಯುತನನ್ನು ಕಾಣುವ ಭಾವ ದೈಹಿಕ ಮನೋಭಿಲಾಷೆಯನ್ನು ಸೂಚಿಸುತ್ತವೆ. ಬ್ರಾಹ್ಮಣರ ಮನೆಯಲ್ಲಿ ಉಳ್ಳಾಗಡ್ಡಿ ನಿಷಿದ್ಧ. ಅತಿಥಿಗಳಿಗಷ್ಟೇ ಮೀಸಲಿಡುವ ಉಳ್ಳಾಗಡ್ಡಿಯನ್ನು ವಚ್ಚಕ್ಕ ಅಡುಗೆಮನೆಯಲ್ಲಿ ಕಾಣುವುದು ವಿಭಿನ್ನ ರೀತಿಯಲ್ಲಿ ದೈಹಿಕ ವಾಂಛೆಯನ್ನು ಅಭಿವ್ಯಕ್ತಿ ಪಡಿಸಲಾಗಿದೆ. ಇದಕ್ಕೆ “ತಳಮಳ” ಅನ್ನೋ ಶಬ್ದ ಬಳಸುತ್ತಾಳೆ. ಈ ತಳಮಳವನ್ನು ಸತ್ಯಬೋಧ ಕಾಕಾರಿಗೆ ಹೇಳಿದಾಗ ಸೂಕ್ಷ್ಮ ಅರಿತ ಅವರು ನಾಳೆಯಿಂದಲೇ ಕಠೋಪನಿಷತ್ತು ಹೇಳುತ್ತೇನೆಂದು ತಯಾರಿ ನಡೆಸುತ್ತಾರೆ. ಈ ಕಠೋಪನಿಷತ್ತಿನ ಭಾಗವಾಗಿ ಗುರು ಕುಮಾರಿಲನಾಥರ ಕಥೆ ಮನಸ್ಥಿತಿಯನ್ನು ಸೀಮಿತಕ್ಕೆ ತರಲು ಪ್ರಯತ್ನಿಸುವುದು ಸ್ವಲ್ಪ ವಿಭಿನ್ನ ಕಾದಂಬರಿಯ ಸೂತ್ರ. ಕುಮಾರಿಲನಾಥರು ತಮ್ಮ ಗುರುಗಳ ಆಜ್ಞೆಯಂತೆ, ಸಂಸಾರ, ಹೆಂಡತಿ ಮಕ್ಕಳೆಂಬ ಮೋಹವೇ ಇರದಿದ್ದರೂ ಒಬ್ಬ ಕುಷ್ಟ ರೋಗಪಿಡಿತ ಸೂಳೆಯನ್ನು ಮದುವೆ ಮಾಡಿಕೊಳ್ಳುತ್ತಾರೆ. ಹೆಂಡತಿಯ ಮಗುವಿನ ಬಯಕೆಯನ್ನು ತೀರಿಸುವಾಗಲೂ ಗುರುಗಳ ಆಜ್ಞೆ ಕೆಲಸ ಮಾಡುತ್ತದೆ. ಈ ಕಥೆಯಲ್ಲಿ ಕುಮಾರಿಲನಾಥರು ಸೂಳೆಯನ್ನು ಮದುವೆಯಾದದ್ದು ಮತ್ತು ಅರೆ ಹುಚ್ಚ ಮಗುವನ್ನು ಪಡೆದದ್ದು ಕರ್ಮಫಲ. ಪ್ರತಿ ಜೀವಿಯೂ ತನ್ನ ಪೂರ್ವ ಕರ್ಮಗಳ ನಿವಾರಣೆಗೆ ಜನ್ಮತಾಳಿ ಪಾಪಗಳನ್ನು ತೊಳೆದುಕೊಳ್ಳಲು ಹೆಣಗಾಡುತ್ತಾನೆ. ಜೀವನ ಎನ್ನುವುದು ಬಂದಂತೆ ಸವಿಯ ಬೇಕೆನ್ನುವುದು ಇನ್ನೊಂದು ಉದ್ದೇಶ. ಪ್ರತಿ ಘಟನೆಯ ಹಿಂದೆ ಒಂದು ಉದ್ದೇಶ ಇದ್ದೇ ಇದೆ ಎಂಬುದು ಈ ಕತೆ ಸಾರುತ್ತದೆ. ಸನ್ಯಾಸಿಯ ಪರಿಶುದ್ಧ ಆತ್ಮ ಹೊಂದಿದ ಕುಮಾರಿಲನಾಥರು ಕರ್ಮಫಲದಿಂದ ಅನಿವಾರ್ಯಕ್ಕೆ ಒಳಗಾಗುವುದು ವಚ್ಚಕ್ಕನಿಗೆ ತುಸು ಸಮಾಧಾನವನ್ನು ನೀಡುತ್ತದೆ. ಜ್ಞಾನಿಗಳಾದವರಿಗೆ ಕರ್ಮಫಲಗಳು ಬೆಂಬಿಡದಿದ್ದಾಗ ಸಾಮಾನ್ಯರದು ಹೇಗೆ? ತಿಳಿದ ಆಕೆ ಜೀವನವನ್ನು ಬಂದಂತೆ ಎದುರಿಸಲು ನಿರ್ಧರಿಸುತ್ತಾಳೆ. ಸತ್ಯಬೋಧರು ಆಗಾಗ ಹೇಳುವ ಮಾತು ಯಾವುದೇ ಘಟನೆಗೆ ಅತಿ ಖುಷಿ ಅಥವಾ ಅತೀ ದುಃಖ ಪ್ರತಿಕ್ರಿಯೆ ಅವಶ್ಯವಿಲ್ಲ ಎನ್ನುವುದು ಸದಾ ಪ್ರತಿಧ್ವನಿಸುತ್ತಲೇ ಇರುತ್ತದೆ.ನಿಜ ಧೀರನಾದವನು ಅತಿ ಖುಷಿ ಅಥವಾ ಸಂತೋಷಕ್ಕೆ ಪ್ರತಿಕ್ರಿಯಿಸುವುದಿಲ್ಲ; ತಟಸ್ಥನಾಗಿರುತ್ತಾನೆ. ಕುಮಾರಿಲನಾಥರ ಕಥೆ ಮೊದಮೊದಲು ಉದ್ದ ಎನಿಸಿದರೂ ವಚ್ಚಕ್ಕನ ಜೀವನಕ್ಕೆ ಸಹಕರಿಸುವಲ್ಲಿ ಪ್ರಮುಖ ಘಟನಾವಳಿಯಾಗಿ ರೂಪಗೊಳ್ಳುತ್ತದೆ.
ಇದರ ಜತೆ ಅಜ್ಜ ಶಾಮರಾಯರು ಹೇಳುವ ಅವರ ಹಿರಿಯಜ್ಜಿ ಅಥವಾ ತಮ್ಮ ಮನೆತನದವರೇ ಆದ ರಾಧಾ ಕಾಕೂಳ ಜೀವನಗಾಥೆ ವಚ್ಚಕ್ಕನನ್ನು ಇನ್ನಷ್ಟು ವೈದ್ಯಕೀಯ ಪುಸ್ತಕಗಳನ್ನು ಓದುವಂತೆ ಸೆಳೆಯುತ್ತದೆ. ಆಗಿನ ಕಾಲದಲ್ಲೇ ರಾಧಾ ಕಾಕೂ ಜಾತಿಭೇದ ಬಿಟ್ಟು ಪ್ರಸೂತಿ ಕೆಲಸವನ್ನು ಮಾಡಿ ಹೌದೆನಿಸಿಕೊಂಡಿದ್ದರು. ಜಾತಿಯ ಗುರುಗಳಲ್ಲಿ ದೂರು ಹೋದಾಗಲೂ ಸರಿಯಾದ ಸಮಜಾಯಿಸಿ ಕೊಟ್ಟು ಧರ್ಮಗುರುಗಳೇ ಒಪ್ಪುವಂತಹ ಕೆಲಸ ಮಾಡುತ್ತಾರೆ. ಅದೇ ರೀತಿ ಕಾದಂಬರಿಯ ಕೊನೆಯ ಅಧ್ಯಾಯದಲ್ಲಿ ಅಥವಾ ಕೊನೆಯಲ್ಲಿ ಮುಸ್ಲಿಂ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಜಾತೀಯತೆಯ ವೈಷಮ್ಯದಿಂದ ಮಾಧವ ಹೋಗುವುದು ಬೇಡ ಅಂದಾಗ ಅದನ್ನು ಧಿಕ್ಕರಿಸಿ ಯಾವುದೇ ಮುಲಾಜಿಲ್ಲದೆ ಮನೆಯಿಂದ ಹೊರಬರುವುದು ವಚ್ಚಕ್ಕನ ಗಟ್ಟಿತನ ಮತ್ತು ಜೀವನ ಸಂಘರ್ಷವನ್ನು ಎತ್ತಿಹಿಡಿಯುತ್ತದೆ.
ಗೈರ ಸಮಜೂತಿಯ ಇನ್ನೊಂದು ವಿಶೇಷವೆಂದರೆ ಕಥೆ ಸಾಮಾಜಿಕ ಜೀವನವನ್ನಷ್ಟೇ ಒಳಗೊಳ್ಳದೆ ರಾಜಕೀಯ ವಿಚಾರಗಳನ್ನು ಹೊಂದಿದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳನ್ನು ಹೇಳುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಪರಿಣಾಮ ಮತ್ತು ಸ್ವಾತಂತ್ರಾನಂತರ ಧರ್ಮಗಳಲ್ಲಿ ಏಳುವ ವೈಷಮ್ಯಗಳು ಸಾಮಾನ್ಯ ಜನರ ಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸುತ್ತವೆ. ಎಲ್ಲೋ ನಡೆಯುವ ದೊಂಬಿಗಳು, ಸಂಬಂಧವೇ ಇರದ ಹಳ್ಳಿಗಳಲ್ಲಿ ಮುಂದುವರೆಸುವ ಭಾಗವಾಗಿ ಧರ್ಮದ ರಾಜಕೀಯ ಬೆಳೆಯುತ್ತದೆ. ಪ್ರಜ್ಞಾವಂತರಾದ ಕೆಲ ಮುಸ್ಲಿಮರು, ಹಾಡುಗಾರು, ಸತ್ಯಬೋಧರು ಮತ್ತು ವೈಚಾರಿಕ ನೆಲೆಯ ವಚ್ಚಕ್ಕ ವಿರೋಧಿಸುತ್ತಾಳೆ. ಕಾದಂಬರಿಕಾರರು ಇಸ್ವಿ ಸಮೇತ ಕೆಲ ಇತಿಹಾಸದ ಘಟನಾವಳಿಗಳ ಉಲ್ಲೇಖ ಮಾಡುತ್ತಾ ಕಥೆಗೆ ಸಹಕಾರಿಯಾಗುವಂತೆ ಹಣೆದಿದ್ದಾರೆ. ಗಾಂಧೀಜಿ ಹತ್ಯೆ ಸತ್ಯಬೋಧರ ಪ್ರಾಣದ ಮೇಲೆ ಪರಿಣಾಮ ಬೀರಿದರೆ, ಜಾತಿಯ ವೈಷಮ್ಯ ಮಾಧವ್ ತನ್ನ ಹಳ್ಳಿಯಲ್ಲಿ ನಡೆಯುವ ಮೊಹರಂ ಮೆರವಣಿಗೆಯನ್ನು ವಿರೋಧಿಸುವಂತೆ ಮಾಡುತ್ತದೆ. ಧರ್ಮಗಳು ನಾಡಿನ ಭೂಮಿಯಲ್ಲೇ ಬೇರೂರಿರುವುದರಿಂದ ಕಿತ್ತ ಹಾಕುವುದಂತೂ ಅಸಾಧ್ಯ. ಅದಕ್ಕೆ ಹೊಂದಾಣಿಕೆಯೊಂದೇ ಪರಿಣಾಮ ಅನ್ನೋದು ಕಾದಂಬರಿ ಹೇಳುತ್ತದೆ.
ಕಾದಂಬರಿಯಲ್ಲಿ ಬಳಸಿದ ಸಂಸ್ಕೃತ ಶ್ಲೋಕಗಳು ಮತ್ತು ಸಂಸ್ಕೃತ ಪುಸ್ತಕಗಳ ಉಲ್ಲೇಖ ಲೇಖಕರ ಸಂಸ್ಕೃತ ಜ್ಞಾನದ ಹರಿವನ್ನು ತೋರಿಸಿದರೆ ಮನೆಯಲ್ಲಿ ಹೆಣ್ಣುಮಕ್ಕಳು ಕಾರ್ಯಕ್ರಮಕ್ಕೆ ತಕ್ಕಂತೆ ಹಾಡುವ ಕೆಲ ಹಾಡುಗಳು ಸಂಗೀತದ ಒಲವನ್ನು ತೋರಿಸುತ್ತವೆ. ಮರಾಠಿಯಲ್ಲಿ ಬಳಸುವ ಕೆಲ ಅರ್ಥರಹಿತ ಒಡಪುಗಳನ್ನು ವಚ್ಚಕ್ಕನ ಮೂಲಕ ಅರ್ಥಪೂರ್ಣವಾಗಿ ಬರೆಯುವದರೊಂದಿಗೆ ಅರ್ಥಭರಿತ ಒಡುಪುಗಳಿಗೆ ತಳಪಾಯ ಹಾಕಿ ಕೊಟ್ಟಿದ್ದಾರೆ.
ವೈಧವ್ಯ ಪಾಲಿಸುವುದು ಒಂದು ತರಹದ ಶಿಕ್ಷೆ. ಅದರಲ್ಲೂ ಬಾಲ್ಯದಲ್ಲಿಯೇ ವೈಧವ್ಯವನ್ನು ಅನುಭವಿಸುವುದು ಇನ್ನೂ ಕಷ್ಟ. ಸಣ್ಣ ವಯಸ್ಸಿನಲ್ಲಿ ಇತರ ಸಣ್ಣ ಮಕ್ಕಳ ಜೊತೆ ಆಟವಾಡಬೇಕಾದ ಹುಡುಗಿ ಕೆಂಪು ಸೀರೆ ತೊಟ್ಟು, ತಲೆ ಬೋಳಿಸಿಕೊಂಡು, ಇತಿ ಮಿತಿಯ ಆಹಾರಸೇವನೆ ಮಡಿಯ ಹೆಸರಿನಲ್ಲಿ ಶಿಕ್ಷೆಯೇ ಸರಿ. ಅಚ್ಯುತನ ಜೊತೆ ಮದುವೆ ನಿಶ್ಚಯವಾದಾಗಲೂ ಕೂಡ ವೈವಾಹಿಕ ಜೀವನದ ಕಟ್ಟುಗಳ ಬೋಧನೆಯನ್ನು ಮನೆಯವರಲ್ಲೂ ಹೇಳಿದರೆ, ಅದೇ ಮುಂದುವರೆದು ಅಚ್ಯುತ ಸತ್ತನಂತರ ವೈಧವ್ಯವನ್ನು ಅನುಭವಿಸುತ್ತಿರುವ ಸ್ವಂತ ಅವ್ವ ಅಂಬಕ್ಕನಿಂದ ವೈಧವ್ಯದ ಬೋಧನೆ ಮುಂದುವರಿಯುತ್ತದೆ. ಹೊರಗೆ ಬಂದು ತನ್ನ ವಯಸ್ಸಿನ ಮಕ್ಕಳಾಟವನ್ನು ನೋಡುವುದರಿಂದ, ಹಿಡಿದು ರಾತ್ರಿ ಕಾಣುವ ಬೆಳದಿಂಗಳ ಚಂದ್ರನನ್ನು ನೋಡವುದು ನಿಷೇಧವೆಂಬಂತೆ ಆಕೆ ಗೆರೆ ಕೊರೆದುಕೊಳ್ಳುತ್ತಾಳೆ. ಬೆಳದಿಂಗಳ ಚಂದ್ರನನ್ನು ನೋಡುವ ಆಸೆಯಿಂದ ಹೊರ ಹೋಗಬೇಕೆಂದರೂ ಯಾರಾದರೂ ಏನೆಂದಾರು ಎಂಬ ಭಯದಲ್ಲಿ ಬೆಳಕಿಂಡಿಯ ಮೂಲಕ ಚಂದ್ರನನ್ನು ನೋಡಿ ಆನಂದಿಸುವುದು ನಿಜವಾಗಿಯೂ ಮನಕಲುಕುತ್ತದೆ. ಹೊರಗೆ ಹೋದಾಗ ಅಲ್ಲಿ ಇಲ್ಲಿ ಕೂತರೆ ಪದೇ ಪದೇ ಸ್ನಾನಮಾಡಿ ಮಡಿಯಾಗುವುದು ಮತ್ತು ಮಡಿಯಲ್ಲೇ ಆಹಾರ ತಯಾರಿಸಿಕೊಳ್ಳುವುದು ಜೊತೆಗೆ ರಾತ್ರಿ ಕೇವಲ ಮುಷ್ಟಿ ಅವಲಕ್ಕಿ ತಿನ್ನುವುದು ಆಗಿನ ಕಾಲದ ವೈಧವ್ಯದ ಕಷ್ಟಗಳನ್ನು ಮನಗಾಣಿಸುತ್ತದೆ. ಹೇಗೋ ತನ್ನ ಮನಸ್ಸು, ದೇಹವನ್ನು ದೇವರು, ಜಪ, ಓದು, ಪುಸ್ತಕ ಸಮಾಜಸೇವೆಗೆಂದು ನಿಯಂತ್ರಣದಲ್ಲಿಟ್ಟುಕೊಂಡಾಗ ಶೇಷಪ್ಪನ ಕ್ರೂರ ಕಣ್ಣು ಬಿದ್ದದ್ದು, ಬೇಂದ್ರೆಯವರ ಪುಟ್ಟವಿಧವೆಯಲ್ಲಿ ಗುಡಿಯಲ್ಲಿರುವ ಮುದ್ರೆ ಹಾಕುವ ಗುರು ವಕ್ರದೃಷ್ಟಿಯಿಂದ ನೋಡಿದ್ದನ್ನು ನೆನಪಿಸುತ್ತದೆ. ಪ್ರಚೋದನೆಯೇ ಇಲ್ಲದೆ ಹಿಂಸೆಗೆ ಗುರಿಯಾಗುವುದು ವಿಪರ್ಯಾಸ.
ಕಾದಂಬರಿಯ ಪಾತ್ರಗಳಲ್ಲಿ ವಿಶಿಷ್ಟವಾದ ಪಾತ್ರ ರಾಘಪ್ಪನದು. ಒಳ್ಳೆಯ ಶಿಕ್ಷಣದಿಂದ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡರೂ, ಆಫೀಸಿನ ವ್ಯವಹಾರದಲ್ಲಿ ವೃದ್ಧ ವಿಧವೆಗೆ ಆಸ್ತಿಯಲ್ಲಿ ಮಾಡಿದ ಅನ್ಯಾಯದಿಂದ ಶಾಪಪಡೆದು ಒಮ್ಮೆಲೆ ಭ್ರಮನಿರಸನವಾದಂತೆ ನೌಕರಿ ಬಿಟ್ಟು ಮನೆ ಸೇರಿಕೊಳ್ಳುತ್ತಾನೆ. ಅರೆಹುಚ್ಚನಂತೆ ವ್ಯವಹರಿಸುವ ರಾಘಪ್ಪ ಅತಿಯಾದ ತಿನ್ನುವಿಕೆಯಿಂದ ಗಮನ ಸೆಳೆದು, ಒಂದು ಘಟನೆಯಲ್ಲಿ ಅವಲಕ್ಕಿ ಕಡಿಮೆ ಕೊಟ್ಟಾರೆಂದು ಆರೋಪಿಸಿ, ರೂಂನಲ್ಲಿದ್ದ ಖಾರದ ಭರಣಿಯನ್ನು ಖಾಲಿ ಮಾಡಿದ್ದು ಆಶ್ಚರ್ಯವನ್ನುಂಟು ಮಾಡಿದರೂ ಕೊನೆಗೆ ತನ್ನ ಅಂತ್ಯಕಾಲದಲ್ಲಿ ತಿನ್ನುವುದರ ಹುಚ್ಚಾಟದಿಂದ ತೀರ ದೂರ ಸರಿದು ವೈರಾಗ್ಯ ಹೊಂದಿದಂತೆ ತುಸುವೇ ತಿನ್ನುತ್ತಾನೆ. ಯಾರೇ ಒತ್ತಾಯಿಸಿದರೂ ಮಾಡಿದ ಪಾಪ ಶಾಪದ ರೂಪದಲ್ಲಿ ತನ್ನ ಸ್ವಂತ ಮಗನಲ್ಲದಿದ್ದರೂ ತಮ್ಮನ ಮಗ ಅಚ್ಯುತನ ಸಾವಿಗೆ ಕಾರಣವಾಯಿತೆಂದು ತಿಳಿದು ಪಶ್ಚಾತಾಪ ರೂಪವಾಗಿ ಅನ್ನವನ್ನೇ ತ್ಯಾಗಮಾಡಿ ಕೃಶನಾಗುತ್ತಾನೆ. ರಾಘಪ್ಪನ ಪಾತ್ರ ಜೀವನ ನಶ್ವರ ಅನ್ನೋದನ್ನ ಬಹಳ ಸುಂದರವಾಗಿ ಪ್ರಸ್ತುತ ಪಡಿಸುತ್ತದೆ. ಬದುಕಿದ್ದೆ ತಿನ್ನೋದಕ್ಕೆ ಅನ್ನೋದು ಕೊನೆಗೆ ಆಹಾರವನ್ನೇ ಬಿಟ್ಟು ಇಚ್ಛಾಮರಣಿಯಂತೆ ಆಸ್ತಿಯನ್ನು ಪಾಲು ಮಾಡಿ ಸಾಯುತ್ತಾನೆ.
ಮೊದಲ ಗೈರ ಸಮಜೂತಿಗೆ ಕಾರಣನಾದ ಕೃಷ್ಣಾಜೀ ಬಗ್ಗೆ ಕಾದಂಬರಿಯ ಅಂತ್ಯದಲ್ಲಿ ಏನೂ ಗೊತ್ತಾಗುವುದಿಲ್ಲ. ಅಚ್ಯುತನ ಸಾವಿಗೆ ತಾನೇ ಕಾರಣನೆಂದು ತಿಳಿದು ದುಃಖಪಟ್ಟು, ಮನೆಗೆ ಭೇಟಿ ನೀಡಿದ್ದ. ಸಾವಿಗೆ ಸಂತಾಪ ಸೂಚಿಸಿದವನಿಗೆ ಅವ್ವನ ಸ್ಥಾನದಲ್ಲಿದ್ದ ವೈನಿ ಕೃಷ್ಣಾಬಾಯಿ ಊಟದ ಎಲೆ ಹಚ್ಚಿಕೊಟ್ಟು, ಅದೇ ಕೊನೆ ಊಟ ಎಂದೂ, ಮತ್ತೆಂದೂ ಮನೆ ಕಡೆ ಬರಬಾರದೆಂದು ಹೇಳುತ್ತಾಳೆ.ಕೃಷ್ಣಾಜೀ ಬಗ್ಗೆ ಅದುವೇ ಕೊನೆ ಸಂಭಾಷಣೆ. ದೇಶ ಸ್ವಾತಂತ್ರ್ಯವನ್ನು ಪಡೆದ ನಂತರವಾದರೂ ಕೆಲ ಮಾತುಗಳು ಕೃಷ್ಣಾಜೀ ಬಗ್ಗೆ ಲೇಖಕರು ಹೇಳಿದ್ದರೆ, ಪಾತ್ರಕ್ಕೂ ಒಂದು ಮುಕ್ತಿ ಒದಗಿಸಿದಂತಾಗುತ್ತಿತ್ತೇನೋ ಅಥವಾ ವೈನಿ ಕೃಷ್ಣಾಬಾಯಿ ಮತ್ತೆಂದೂ ಮನೆಗೆ ಬರಬಾರದೆಂದು ಹೇಳಿದ್ದನ್ನು ಓದುಗರು ಕೃಷ್ಣಾಜಿ ಭೂಗತನಾಗುತ್ತಾನೆಂದು ತಿಳಿದುಕೊಳ್ಳಲು ಲೇಖಕರು ಆಶಿಸುತ್ತಾರೆನೋ….. ಇಡೀ ಕಾದಂಬರಿಯ ಬೆಳವಣಿಗೆಗೆ ಕಾರಣನಾದವನ ಬಗ್ಗೆ ಇನ್ನೊಂದು ಚೂರು ವಿಷಯ ಇದ್ದಿದ್ದರೆ ಪಾತ್ರಕ್ಕೆ ಸಮಾಧಾನವಾಗುತ್ತಿತ್ತು.
ಮನುಷ್ಯ ತನ್ನ ಸಂವಹನೆಗೆ ಮನುಷ್ಯರನ್ನು ಅವಲಂಬಿಸಿದ್ದಾರೆಂಬುದು ಎಷ್ಟು ಸರಿಯೋ ಅದೇ ರೀತಿ ಎಷ್ಟೋ ಸಲ ಅದೇ ಸಂವಹನವನ್ನು ಪ್ರಕೃತಿ ಮತ್ತು ಮನುಷ್ಯರಲ್ಲದ ಮೂಕ ಪ್ರಾಣಿ ಪಕ್ಷಿಗಳೊಂದಿಗೆ ನಡೆಸುತ್ತಾನೆ. ವಚ್ಚಕ್ಕ ಮಧ್ಯಾಹ್ನದ ಮಟ ಮಟ ಬಿಸಿಲಲ್ಲೂ ದನಗಳಿಗೆ ನೀರು ಕುಡಿಸೋದು ಮತ್ತು ಪಕ್ಷಿಗಳಿಗೆ ತುಸು ಕಾಳನ್ನು ಹಾಕುವುದು ಈ ಸಂವಹನವನ್ನು ಎತ್ತಿ ತೋರಿಸುತ್ತದೆ. ಪ್ರತಿದಿನ ತಪ್ಪದೆ ಮಧ್ಯಾಹ್ನ ಪಕ್ಷಿಗಳಿಗೆ ಕಾಳು ಹಾಕಿ ಅವುಗಳೊಂದಿಗೆ ಮಾತಾಡಿ ಒಂದು ತರಹದ ಸಂಬಂಧವನ್ನು ಬೆಳೆಸಿಕೊಂಡಿರುತ್ತಾಳೆ. ಮಾಧವ ಕೊನೆಯಲ್ಲಿ ಮುಸ್ಲಿಂ ಮಹಿಳೆಯ ಹೆರಿಗೆಗೆ ಹೋಗಬಾರದೆಂದು ತಡೆಯುತ್ತಿದ್ದಾಗ ಬಾವಿ ಕಡೆಯಿಂದ ಒಂದು ಪಾರಿವಾಳ ಬಂದಾಗ, ಆ ದಿನ ಪಕ್ಷಿಗಳಿಗೆ ಕಾಳು ಹಾಕದ್ದನ್ನು ನೆನಪಿಸಿಕೊಳ್ಳುತ್ತಾಳೆ; ಮರುಗುತ್ತಾಳೆ. ಆದರೆ ಹೆರಿಗೆಗೆ ವಿಳಂಬವಾಗುತ್ತಿದ್ದರಿಂದ ಎರಡು ಜೀವಗಳ ಉಳಿಸುವಿಕೆ ಮುಖ್ಯವಾದುದರಿಂದ ಮುಂದೆ ನಡೆಯುತ್ತಾಳೆ. ಇದೇ ವೇಳೆಯಲ್ಲಿ ಒಮ್ಮೆಲೆ ಪಾರಿವಾಳಗಳ ಒಂದು ದೊಡ್ಡ ಹಿಂಡೇ ಆಕೆಯ ಹತ್ತಿರ ಬರುತ್ತದೆ.ವಚ್ಚಕ್ಕ ಹೋಗುತ್ತಿದ್ದರೆ ಆಕೆಯ ಎಡ ಮತ್ತು ಬಲ ಭುಜದ ಮೇಲೆ ಹಕ್ಕಿಗಳು ಕೂತರೆ, ಮಾಧವನ ಹಿಂಬಾಲಕರು ಆಕೆಯನ್ನು ತಡೆಯಲು ಯತ್ನಿಸಿದಾಗ ಇನ್ನುಳಿದ ಹಿಂಡು ಅವರನ್ನು ಕುಕ್ಕುವಂತೆ ಆಕ್ರಮಿಸುತ್ತ, ವಂಚಕನಿಗೆ ರಕ್ಷಣೆಯನ್ನು ನೀಡುತ್ತವೆ. ಒಳ್ಳೆಯ ಕೆಲಸಕ್ಕೆ ವಿರೋಧ ವ್ಯಕ್ತವಾದ ಮನುಷ್ಯರಿಂದ ಸಹಕಾರ ಸಿಗದಿದ್ದಾಗ ಅಸಮರ್ಥ, ಅಶಕ್ತ ಪಕ್ಷಿಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಕೆಯನ್ನು ಬೆಂಬಲಿಸುವುದು ಕಥೆಯನ್ನು ಹುರಿದುಂಬಿಸುತ್ತದೆ. ಆಕೆ ಮುಂದೆ ಮುಂದೆ ಹೋದರೆ… ಹಿಂದೆ ಹಿಂದೆ ಪಕ್ಷಿಗಳು… ಆ ದೃಶ್ಯವೇ ಕಣ್ಣ ಮುಂದೆ ಬಂದಂತೆ ಅನುಭವವಾಗುತ್ತದೆ.
ಒಟ್ಟಿನಲ್ಲಿ ಕಥೆ ಸಾಮಾನ್ಯ ಕುಟುಂಬದಿಂದ ಪ್ರಾರಂಭವಾಗಿ ನಂತರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವಿಷಯವನ್ನೊಳಗೊಂಡು ಸಮೃದ್ಧ ಕೃತಿಯಾಗಿ ಹೊರಹೊಮ್ಮಿದೆ.ವಚ್ಚಕ್ಕ ಎಲ್ಲವನ್ನೂ ತ್ಯಾಗ ಮಾಡಿ ಜೀವನ ಬಂದಂತೆ ಅನುಸರಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವುದು ಆದರ್ಶಮಯ.
ಮಾಲಾ.ಮ.ಅಕ್ಕಿಶೆಟ್ಟಿ. ಬೆಳಗಾವಿ.