ಪ್ರಶಸ್ತಿ – ಪುರಸ್ಕಾರಗಳು ಯಾರಿಗೆ ತಾನೇ ಬೇಡ? ದುಡ್ಡು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ವ್ಯಾಪಾರಿಗಳಿಗೆ ಮತ್ತು ಸಾಮಾನ್ಯ ಜನರಿಗೆ ಹೇಗೆ ಮುಖ್ಯವೋ ಹಾಗೆಯೇ ಕೆಲವು ಅಸಾಮಾನ್ಯರಿಗೆ (ಅಥವಾ ಹಾಗೆಂದು ಭ್ರಮಿಸಿ ಸ್ವಯಂಘೋಷಿಸಿಕೊಂಡ ಸಾಮಾನ್ಯರೂ ಇದರಲ್ಲಿ ಸೇರುತ್ತಾರೆ) ಈ ಪ್ರಶಸ್ತಿ – ಪುರಸ್ಕಾರಗಳು ಬೇಕೇ ಬೇಕು. ಕೆಲವರಂತೂ ಪ್ರಶಸ್ತಿ – ಪುರಸ್ಕಾರ ಪಡೆಯಲು ಯಾವ ಬೆಲೆಯನ್ನಾದರೂ ತೆರಲು ಸಿದ್ಧರಾಗಿರುತ್ತಾರೆ. ಯೋಗ್ಯರಿಗೆ ಪ್ರಶಸ್ತಿಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ. ಅಯೋಗ್ಯರು ತಾವಾಗಿಯೇ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಯೋಗ್ಯರಿಗೆ ಪ್ರಶಸ್ತಿ – ಪುರಸ್ಕಾರ ದೊರೆತಾಗ ನಾನೂ ಸಹ ಎಲ್ಲರಂತೆಯೇ ಸಂತಸಪಟ್ಟು ಅವರಿಗೆ ಶುಭಾಶಯ ಹೇಳಿ ಸುಮ್ಮನಾಗುತ್ತೇನೆ.
ಅಯೋಗ್ಯರಿಗೆ ಪ್ರಶಸ್ತಿ – ಪುರಸ್ಕಾರ ಬಂದಾಗ ಮಾತ್ರ ನನ್ನಂತಹ ಶ್ರೀಸಾಮಾನ್ಯನೊಳಗೆ ಸುಪ್ತವಾಗಿರುವ ಪತ್ತೇದಾರ ಜಾಗೃತನಾಗುತ್ತಾನೆ. ಅಯೋಗ್ಯರು ಪ್ರಶಸ್ತಿ ಪುರಸ್ಕಾರ ಪಡೆದಾಗ ಮೊದಮೊದಲು ನನಗೆ ತುಂಬ ದುಃಖವಾಗುತ್ತಿತ್ತು. ಇದೊಂದು ಆಕಸ್ಮಿಕವಿರಬಹುದೆಂದು ನನ್ನಷ್ಟಕ್ಕೆ ನಾನೇ ಸಮಾಧಾನ ಹೊಂದುತ್ತಿದ್ದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಪ್ರಶಸ್ತಿ ಸಿಗಲು ಯೋಗ್ಯತೆಗಿಂತ ಮಿಗಿಲಾಗಿ ಯೋಗ (ಯೋಗ=ಪ್ರಯತ್ನ+ಲಾಬಿ+ಕಾಮಿನಿ+ಕಾಂಚಾಣ) ಬಹುಮುಖ್ಯ ಪಾತ್ರ ವಹಿಸುವುದೆಂಬ ಸತ್ಯ ತಿಳಿದಾಗ ತುಂಬ ನಿರಾಶನಾದೆ. ಸತ್ಯ ಯಾವತ್ತಿಗೂ ಕಹಿ ಎಂಬುದು ತಿಳಿದ ಮೇಲೆ ನಿಜವಾಗಿಯೂ ಸಮಾಧಾನವಾಯಿತು.
ಅಯೋಗ್ಯರಿಗೆ ಪ್ರಶಸ್ತಿ – ಪುರಸ್ಕಾರ ಪಡೆದಾಗ ನನಗೆ ಇವರು ಹೇಗೆಲ್ಲ ಪ್ರಶಸ್ತಿ ಪಡೆದಿರಬಹುದೆಂಬ ಕುತೂಹಲ ಮೂಡುತ್ತದೆ. ಈ ಕುತೂಹಲದ ಬೆನ್ನಟ್ಟಿ ಹೋದಾಗ ಅನೇಕ ಸ್ವಾರಸ್ಯಕರ ಸಂಗತಿಗಳು ತಿಳಿಯುತ್ತವೆ. ಇಂತಹ ಸತ್ಯ ಸಂಗತಿಗಳು ಏಕಕಾಲದಲ್ಲಿ ನನಗೆ ಆಶ್ಚರ್ಯ, ದುಃಖ ಮತ್ತು ವಿನೋದವನ್ನುಂಟುಮಾಡುತ್ತವೆ. ಈ ಪ್ರಶಸ್ತಿಯ ಹಿಂದಿರುವ ಕಥೆಗಳು ನಿಜಕ್ಕೂ ನನಗೆ ಮನರಂಜನೆ ನೀಡುತ್ತವೆ.
ಹಿಂದಿನ ಕಾಲದಲ್ಲಿ ಪ್ರಶಸ್ತಿ ಪಡೆಯುವ ಯೋಗ್ಯತೆಯಿದ್ದ ಅನೇಕ ಜನ ಸಾಹಿತಿಗಳಿದ್ದರು. ದುರ್ದೈವವೆಂದರೆ ಆಗ ಈಗಿನಂತೆ ಹೆಚ್ಚು ಪ್ರಶಸ್ತಿಗಳಿರಲಿಲ್ಲ. ‘ಕರ್ನಾಟಕ ಸಾಹಿತ್ಯ ಅಕಾಡೆಮಿ’, ‘ಕೇಂದ್ರ ಸಾಹಿತ್ಯ ಅಕಾಡೆಮಿ’ ಮತ್ತು ‘ಜ್ಞಾನಪೀಠ ಪ್ರಶಸ್ತಿ’ ಮಾತ್ರ ಇದ್ದವು. ಇನ್ನೂ ಸಂತೋಷದ ಸಂಗತಿಯೆಂದರೆ ಆಗಿನ ಪ್ರಶಸ್ತಿಗಳಿಗೆ ತುಂಬ ಬೆಲೆಯಿದ್ದು, ಯೋಗ್ಯರಾದವರಿಗೆ ಮಾತ್ರ ಪ್ರಶಸ್ತಿ ಸಿಗುತ್ತಿತ್ತು. ಎಷ್ಟೋ ಜನ ಮಹಾನ್ ಲೇಖಕರಿಗೆ ಕೆಲವು ಪ್ರಶಸ್ತಿಗಳು ಸಿಗಲೇ ಇಲ್ಲವೆಂಬುದನ್ನು ನೆನೆದಾಗ ವಿಷಾದವಾಗುತ್ತದೆ.
ಶ್ರೀರಂಗ, ಪು.ತಿ.ನ., ಗೋಪಾಲಕೃಷ್ಣ ಅಡಿಗ, ಕೆ.ಎಸ್.ನರಸಿಂಹಸ್ವಾಮಿ, ಯಶವಂತ ಚಿತ್ತಾಲ ಮತ್ತು ಎಸ್.ಎಲ್.ಭೈರಪ್ಪನವರಿಗೆ ‘ಜ್ಞಾನಪೀಠ ಪ್ರಶಸ್ತಿ’ ಸಿಗಲಿಲ್ಲ. ಅದೇ ರೀತಿ ಆನಂದಕಂದ, ತೀ.ನಂ.ಶ್ರೀ., ರಾವ್ ಬಹದ್ದೂರ್, ಅ.ನ.ಕೃ., ನಿರಂಜನ, ಬಸವರಾಜ ಕಟ್ಟೀಮನಿ, ಯು.ಆರ್.ಆನಂತಮೂರ್ತಿ, ಎಂ.ಕೆ.ಇಂದಿರಾ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಬೆಸಗರಹಳ್ಳಿ ರಾಮಣ್ಣ ಮತ್ತು ನಿಸಾರ್ ಅಹಮದ್ ರಂತಹ ಸಾಹಿತಿಗಳಿಗೆ ಯೋಗ್ಯತೆಯಿದ್ದೂ ‘ಕೇಂದ್ರ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ಸಿಗಲಿಲ್ಲ.
ಇರಲಿ, ಇಂತಹವುಗಳ ಕುರಿತು ಬರೆಯುತ್ತ ಹೋದರೆ ಅದು ಮುಗಿಯುವುದೇ ಇಲ್ಲ. ನನ್ನ ಆಸಕ್ತಿಯಿರುವುದು ಮುಖ್ಯವಾಗಿ ಪ್ರಶಸ್ತಿಯ ಹಿಂದೆ ನಡೆದ ಸ್ವಾರಸ್ಯಕರ ಸಂಗತಿಗಳತ್ತ. ಅಂತಹ ಕೆಲವು ಘಟನೆಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ.
ಜಿಲ್ಲಾಮಟ್ಟದ ಟ್ಯಾಬ್ಲಾಯ್ಡ್ ಪತ್ರಿಕೆಯೊಂದರ ಸಂಪಾದಕರು ಕಳೆದ ಹನ್ನೆರಡು ವರ್ಷಗಳಿಂದ “ರಾಜ್ಯೋತ್ಸವ ಪ್ರಶಸ್ತಿ” ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೂ ‘ರಾಜ್ಯೋತ್ಸವ ಪ್ರಶಸ್ತಿ’ ಅವರಿಗೆ ಗಗನ ಕುಸುಮವಾಗಿಯೇ ಉಳಿದಿದೆ. ಫೈರ್ ಬ್ರ್ಯಾಂಡ್ ಪತ್ರಕರ್ತರಾದ ಆ ಮಹಾಶಯ ಇಂತಹ ಸಣ್ಣಪುಟ್ಟ ಹಿನ್ನಡೆಗಳಿಂದ ಕುಗ್ಗುವವರಲ್ಲ. ಪ್ರತಿ ಸಲ ಪ್ರಶಸ್ತಿ ಕೈ ತಪ್ಪಿದಾಗಲೂ ಅದನ್ನು ಪಡೆದೇ ತೀರಬೇಕೆಂಬ ಅವರ ಛಲ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಅವರು ಪ್ರಶಸ್ತಿ ಪಡೆಯಲು ಪಟ್ಟ ಪಾಡು ಕೇಳಿದರೆ ಯಾರಾದರೂ “ಶಹಬ್ಬಾಶ್ ಬಿಡ್ಡ!!” ಎನ್ನಲೇಬೇಕು.
ಪ್ರತಿ ವರ್ಷ ಆಗಷ್ಟ ತಿಂಗಳಲ್ಲೇ ಅವರ ಬೆಂಗಳೂರು ಯಾತ್ರೆ ಶುರುವಾಗುತ್ತದೆ. ಪ್ರಶಸ್ತಿ ಕೊಡಿಸಬಲ್ಲ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಬುದ್ಧಿಜೀವಿಗಳಿಗೆ ಅವರವರ ಯೋಗ್ಯತೆಗೆ ತಕ್ಕಂತೆ ಮರ್ಯಾದೆ ಮಾಡಿ ತೃಪ್ತಿ ಪಡಿಸುತ್ತಾರೆ. ಆದರೂ ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಘೋಷಣೆಯಾದಾಗ ಇವರ ಹೆಸರಿರುವುದಿಲ್ಲ. ಆ ವರ್ಷ ತಮ್ಮಿಂದ ಹಣ ಪಡೆದು ಮೋಸ ಮಾಡಿದ ಎಲ್ಲರನ್ನೂ ಬೈದುಕೊಂಡು ಸುಮ್ಮನಾಗುತ್ತಾರೆ. ಮತ್ತೆ ಮರುವರ್ಷ ಯಥಾರೀತಿ ಬೆಂಗಳೂರು ಯಾತ್ರೆ ಶುರುವಾಗುತ್ತದೆ. ಪ್ರಶಸ್ತಿಗೋಸ್ಕರ ಅವರಿಗಿರುವ ಮುಗಿಯದ ಹಂಬಲ ಹಲವರಿಗೆ ನಗು ತರಿಸಿದರೂ ಕೆಲವರಿಗಾದರೂ ಅವರ ಎಣೆಯಿಲ್ಲದ ಪ್ರಯತ್ನ ಕಂಡು ಮನಸ್ಸಿನಲ್ಲಿ ಮೆಚ್ಚುಗೆ ಮೂಡದೇ ಇರದು.
ಹಿರಿಯ ಹಿಂದೂಸ್ತಾನಿ ಸಂಗೀತಗಾರೊಬ್ಬರಿಗೆ ತುಂಬ ತಡವಾಗಿ ಭಾರತ ಸರ್ಕಾರದ ‘ಪದ್ಮಶ್ರೀ’ ಪ್ರಶಸ್ತಿ ದೊರೆಯಿತು. ಪ್ರಶಸ್ತಿ ಘೋಷಣೆಯಾದ ಮರುದಿನ ಮದುವಣಿಗನಂತೆ ತಯಾರಾದ ಆ ಹಿರಿಯರು ತುಂಬ ಸಂಭ್ರಮದಿಂದ ಅಭಿಮಾನಿಗಳು ಮತ್ತು ಹಿತೈಷಿಗಳಿಂದ ಶುಭಾಶಯಗಳನ್ನು ಸ್ವೀಕರಿಸುತ್ತಿದ್ದರು. ಇಂತಹ ಶುಭಾವಸರದಲ್ಲಿ ಯುವ ಪತ್ರಕರ್ತನೊಬ್ಬನ ಪ್ರವೇಶವಾಯಿತು.
“ಸರ್, ನಿಮಗೆ ‘ಪದ್ಮಭೂಷಣ’ ಸಿಗಬೇಕಿತ್ತು, ಆದರೆ ‘ಪದ್ಮಶ್ರೀ’ ಕೊಟ್ಟಿದ್ದಾರೆ ಅದೂ ತುಂಬ ತಡವಾಗಿ” ಎಂದು ಪ್ರಶ್ನಿಸಿದ.
ಕೂಡಲೇ ಆ ಹಿರಿಯರ ಮುಖದಲ್ಲಿನ ಮುಗ್ನುಳಗು ಮಾಯವಾಗಿ, ಹೇಳಲಾರದ ವೇದನೆಯೊಂದು ಮುಖದಲ್ಲಿ ಪ್ರಕಟವಾಯಿತು. ಪತ್ರಕರ್ತನ ಅಧಿಕ ಪ್ರಸಂಗದಿಂದ ಆ ಸಂಗೀತಗಾರರ ಅಭಿಮಾನಿಗಳು ಆ ಪತ್ರಕರ್ತನನ್ನು ಕೋಪದಿಂದ ದುರುಗಟ್ಟಿ ನೋಡತೊಡಗಿದರು. ಮುಂದಾಗಬಹುದಾದ ಅನಾಹುತವನ್ನು ಊಹಿಸಿದ ಆ ಹಿರಿಯರು ಕೂಡಲೇ ಮತ್ತೆ ಮುಗಳ್ನಗು ಧರಿಸಿ ಅದಕ್ಕೆ ಕೊಟ್ಟ ಉತ್ತರ ಎಂತಹ ಕಲ್ಲೆದೆಯವರನ್ನೂ ತಾಕುವಂತಹದು.
“ಅಯ್ಯಾ, ನಿನಗಿನ್ನೂ ಅನುಭವ ಸಾಲದು, ಕಳೆದ ಹದಿನೈದು ವರ್ಷಗಳಿಂದ ‘ಪದ್ಮಶ್ರೀ’ ಪಡೆಯಲು ಪಟ್ಟ ಪಾಡು ನನಗೇ ಗೊತ್ತು. ಇನ್ನು ‘ಪದ್ಮಭೂಷಣ’ ಪಡೆಯಲು ಇನ್ನೆಷ್ಟು ಭಂಗ ಪಡಬೇಕೋ? ಅಷ್ಟು ಶಕ್ತಿಯಾಗಲಿ, ಆಯುಷ್ಯವಾಗಲಿ ನನಗಿಲ್ಲವಪ್ಪ!” ಎಂದರು.
ಯುವ ಪತ್ರಕರ್ತನಿಗೆ ತಾನು ಯಾಕಾದರೂ ಅಂತಹ ಪ್ರಶ್ನೆ ಕೇಳಿದನೋ ಎನ್ನಿಸಿತು. ಅವನು ತನ್ನ ಅಧಿಕ ಪ್ರಸಂಗಕ್ಕೆ ಕ್ಷಮೆ ಕೇಳಿ, ಅವರನ್ನು ಅಭಿನಂದಿಸಿ, ಕಂಠಮಟ್ಟ ಊಟ ಮಾಡಿ ಸಂತೋಷದಿಂದ ಹಿಂದಿರುಗಿದ.
ಪ್ರಶಸ್ತಿ – ಪುರಸ್ಕಾರಗಳ ಹಂಬಲ ಪತ್ರಕರ್ತರು, ಸಂಗೀತಗಾರರು, ಕ್ರೀಡಾಪಟುಗಳು ಮತ್ತು ಸಿನಿಮಾ ನಟರಿಗಿಂತ ಅಧಿಕವಾಗಿ ಸಾಹಿತಿಗಳಲ್ಲಿ ಇರುತ್ತದೆ. ಇದನ್ನು ಕೆಲವು ಸಾಹಿತಿಗಳಾದರೂ ಖಂಡಿತ ಒಪ್ಪುತ್ತಾರೆ. ಪ್ರತಿಭೆಯಿಲ್ಲದಿದ್ದರೂ ಪ್ರಚಾರ, ಪ್ರಸಿದ್ಧಿ ಮತ್ತು ಪ್ರಶಸ್ತಿ ಪಡೆಯಬೇಕೆಂಬ ಅನೇಕ ಲೇಖಕ/ಲೇಖಕಿಯರ ಸಮೂಹವೇ ಕನ್ನಡದಲ್ಲಿದೆ. ಇಂತಹವರನ್ನು ನನ್ನ ಹಿತದೃಷ್ಟಿಯಿಂದ ಹೆಸರು ಹೇಳದೆ ಅತೃಪ್ತ ಸಾಹಿತಿಗಳು ಎಂದು ಕರೆದು ಸುಮ್ಮನಾಗುತ್ತೇನೆ.
ರಾಷ್ಟ್ರೀಯ ಸಂಸ್ಥೆಯೊಂದರ ಸದಸ್ಯನಾದ ಕನ್ನಡದ ಲೇಖಕನೊಬ್ಬ ಪ್ರಶಸ್ತಿಯ ಆಮಿಷವೊಡ್ಡಿ ಅತೃಪ್ತ ಲೇಖಕಿಯರನ್ನು ಹಳ್ಳಕ್ಕೆ ಬೀಳುಸುವುದರಲ್ಲಿ ತುಂಬ ಚತುರ. ಅತೃಪ್ತ ಲೇಖಕಿಯರು ತಾವಾಗಿಯೇ ಹಳ್ಳಕ್ಕೆ ಬೀಳಲು ತುದಿಗಾಲ ಮೇಲೆ ನಿಂತಿರುವಾಗ ಈ ಮಹಾಶಯನ ಕೆಲಸ ಇನ್ನೂ ಸುಲಭವಾಗುತ್ತದೆ. ಈ ಲೇಖಕನ ಇನ್ನೊಂದು ವಿಶೇಷವೆಂದರೆ ಈತ ಪುರುಷದ್ವೇಷಿ. ಗಂಡಸರೆಂದರೆ ಆತನಿಗೆ ಸುತರಾಂ ಆಗುವುದಿಲ್ಲ. ಗಂಡಸರ ಹೆಸರನ್ನು ಯಾವುದೇ ಪ್ರಶಸ್ತಿಗೂ, ಯಾವುದೇ ಕಾರಣಕ್ಕೂ ಶಿಫಾರಸ್ಸು ಮಾಡುವುದಿಲ್ಲವೆಂಬ ವಿಶಿಷ್ಟ ದಾಖಲೆ ಅವನ ಹೆಸರಲ್ಲಿದೆ. ಅದೇ ಲೇಖಕಿಯರಿಗೋಸ್ಕರ ಏನು ಮಾಡಲೂ ಹೇಸುವವನಲ್ಲ ಎಂಬ ಖ್ಯಾತಿಯೂ ಅವನಿಗಿದೆ.
ಈ ಮಹಾಶಯ ಯಾವುದೇ ಪ್ರಶಸ್ತಿ – ಪುರಸ್ಕಾರಗಳಿದ್ದರೂ ಅದಕ್ಕೆ ತನಗೆ ಬೇಕಾದ ಲೇಖಕಿಯರ ಹೆಸರನ್ನು ಮಾತ್ರ ಸೂಚಿಸುತ್ತಾನೆ. ತಾನು ಯಾರು, ತನ್ನ ಶಕ್ತಿಯೆಷ್ಟು, ತಾನು ಮನಸ್ಸು ಮಾಡಿದರೆ ಏನೇನು ಮಾಡಬಲ್ಲೆ ಮತ್ತು ಎಂಥೆಂಥ ಪ್ರಶಸ್ತಿ ಕೊಡಿಸಬಲ್ಲೆ ಎಂಬುದನ್ನು ತುಂಬ ವರ್ಣರಂಜಿತವಾಗಿ ಹೇಳುತ್ತಾನೆ. ಪ್ರಶಸ್ತಿಗಾಗಿ ಹಂಬಲಿಸುವ ಅತೃಪ್ತ ಲೇಖಕಿಯರು ಇವನ ಗಾಳಕ್ಕೆ ತುಂಬ ಸುಲಭವಾಗಿ ಸಿಕ್ಕಿಹಾಕಿಕೊಳ್ಳುತ್ತಾರೆ.
ಇತ್ತೀಚೆಗೆ ಒಬ್ಬ ಲೇಖಕಿಗೆ ಪ್ರಶಸ್ತಿ ಕೊಡಿಸುವ ಆಮಿಷ ತೋರಿಸಿ ಬಲೆಗೆ ಹಾಕಿಕೊಂಡ. ಇವನ ಮಾತಿನ ಮೋಡಿಗೆ ಮರುಳಾಗಿ ಮೋಸಹೋದ ಮಧ್ಯವಯಸ್ಕ ಅತೃಪ್ತ ಲೇಖಕಿಯೊಬ್ಬರು ಅವನನ್ನು ನಂಬಿ ಕೆಟ್ಟೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಇದು ಮೇಲ್ನೋಟಕ್ಕೆ ವಿನೋದದ ಸಂಗತಿಯಂತೆ ಕಂಡರೂ ಆ ಲೇಖಕಿಯ ಸ್ಥಿತಿ ನೆನೆದರೆ ವಿಷಾದವಾಗುತ್ತದೆ.
ಇನ್ನು ಈಗಿನ ಸಾಹಿತಿಗಳೇ ಭಾಗ್ಯವಂತರು ಏಕೆಂದರೆ ಪ್ರಶಸ್ತಿ ಪಡೆಯುವವರಿಗಿಂತ ಪ್ರಶಸ್ತಿ ಕೊಡುವವರು ಹೆಚ್ಚಾಗಿದ್ದಾರೆ. ಪ್ರಶಸ್ತಿಗೆ ಆಹ್ವಾನದಂತಹ ಜಾಹೀರಾತುಗಳು ದಿನಕ್ಕೊಂದಾದರೂ ಪತ್ರಿಕೆ, ಫೇಸ್ಬುಕ್, ವಾಟ್ಸಪ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಪ್ರಕಟವಾಗುತ್ತಿರುತ್ತವೆ. ಶೂನ್ಯದಿಂದ ಆರಂಭಿಸಿ ಸಾವಿರ, ಲಕ್ಷದವರೆಗೂ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಶಾಲು ಮತ್ತು ಹೂವು-ಹಣ್ಣು ಕೊಟ್ಟು ಸನ್ಮಾನಿಸುತ್ತಾರೆ. ಪ್ರಶಸ್ತಿಯ ಮೊತ್ತ ಪ್ರಶಸ್ತಿ ಪಡೆಯುವವರ ತಾಕತ್ತಿನ ಮೇಲೆ ಅವಲಂಬಿಸಿದೆ.
ನಕಲಿ ವಿ.ವಿ.ಗಳ ಹೆಸರಲ್ಲಿ ಗೌರವ ಡಾಕ್ಟರೇಟ್ ಕೊಡುವ ಹೊಸ ಪದ್ಧತಿಯೊಂದು ಇದೀಗ ಆರಂಭವಾಗಿದೆ. ಉತ್ತರ ಕರ್ನಾಟಕದ ಸಣ್ಣ ಪಟ್ಟಣದ ಲೇವಾದೇವಿ ಮಾಡುವವನೊಬ್ಬ ಮಾಧ್ಯಮಿಕ ಶಾಲಾ ಶಿಕ್ಷಣ ಪೂರೈಸದಿದ್ದರೂ ಸಹ ಒಂದು ಲಕ್ಷ ರೂಪಾಯಿ ಕೊಟ್ಟು ಗೌರವ ಡಾಕ್ಟರೇಟ್ ಪಡೆದಿದ್ದಾನೆ. ಆತನ ಯೋಗ್ಯತೆ ತಿಳಿದಿರುವ ಊರಜನ ಈಗ ಆತನಿಗೆ ವಿನೋದದಿಂದ ಡಾಕ್ಟರ್ ಎಂದೇ ಕರೆಯುತ್ತಾರೆ. ಇನ್ನೊಬ್ಬ ಕೆಎಸ್ಆರ್ಟಿಸಿ ಕಂಡಕ್ಟರ್ ಕೇವಲ ಮೂವತ್ತು ಸಾವಿರ ರೂಪಾಯಿಗಳಿಗೆ ಗೌರವ ಡಾಕ್ಟರೇಟ್ ಪಡೆದಿದ್ದಾನೆ. ಇವನು ಆ ಲೇವಾದೇವಿ ಮಾಡುವ ವ್ಯಕ್ತಿಗಿಂತ ಬುದ್ಧಿವಂತ ಏಕೆಂದರೆ ಕಡಿಮೆ ಖರ್ಚಿನಲ್ಲಿ ಡಾಕ್ಟರೇಟ್ ಪಡೆದಿದ್ದಾನೆ!
ಉದಯೋನ್ಮುಖ ಲೇಖಕರಲ್ಲೂ ತುಂಬ ಅಯೋಗ್ಯರಿದ್ದಾರೆ. ಇತ್ತೀಚೆಗೆ ಒಬ್ಬನ ಬಯೋಡಾಟಾ ನೋಡಿದೆ. ಆತನ ಒಂದೇ ಒಂದು ಕೃತಿಯೂ ಪ್ರಕಟವಾಗಿಲ್ಲ. ಆತನಿಗೆ ಬರೋಬ್ಬರಿ ಹತ್ತೊಂಬತ್ತು ಪ್ರಶಸ್ತಿಗಳು ದೊರೆತಿವೆ. ‘ಸಾಹಿತ್ಯರತ್ನವಿಭೂಷಣ’, ‘ಕವಿಭೂಷಣಶಿರೋಮಣಿ’ ಮತ್ತು ‘ಮಧ್ಯ ಕರ್ನಾಟಕ ಪದ್ಮಭೂಷಣ ಸಾಹಿತ್ಯಶ್ರೀ’ ಇದನ್ನು ಓದಿ ಮೊದಲು ನನಗೆ ಆಘಾತವಾದರೂ ಸಹ ಆತನ ಭಂಡಧೈರ್ಯಕ್ಕೆ “ಭಪ್ಪರೇ ಮಗನೇ!!” ಎನ್ನುವಂತಾದದ್ದು ಸುಳ್ಳಲ್ಲ.
ಇನ್ನೊಬ್ಬ ಉದಯೋನ್ಮುಖ ಲೇಖಕ ಆತನಿಗೆ ನೂರಾರು ಪ್ರಶಸ್ತಿಗಳು ಬಂದಿವೆಯೆಂದೂ, ಆತನ ಪುಸ್ತಕ ಪ್ರಕಟಿಸಿ ಪ್ರಕಾಶಕರು ಕೋಟ್ಯಾಧಿಪತಿಗಳಾಗಿದ್ದರೆಂದೂ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳಿದ. ನಾನು “ಇದಕ್ಕೆ ಏನಾದರೂ ಸಾಕ್ಷಿ, ಪುರಾವೆಗಳುಂಟೆ?” ಎಂದು ಕೇಳಿದ್ದಕ್ಕೆ ನನ್ನ ಸ್ನೇಹವನ್ನೇ ಕಡಿದುಕೊಂಡ. ಮತ್ತೊಬ್ಬ ಇಪ್ಪತ್ತೈದು ವರ್ಷದ ಲೇಖಕಿ ತನಗೆ ‘ಪಂಪ ಪ್ರಶಸ್ತಿ’ ಸಿಗಲು ಏನು ಮಾಡಬೇಕು? ಎಂದು ನನ್ನನ್ನು ಕೇಳಿದಾಗ ನಾನು “ನೀವು ಮುದುಕಿಯಾದ ನಂತರ ಅದರ ಬಗ್ಗೆ ಯೋಚಿಸಬಹುದು.” ಎಂದು ಉಡಾಫೆಯಿಂದ ಹೇಳಿ ಅವಳ ಸ್ನೇಹವನ್ನೂ ಕಳೆದುಕೊಳ್ಳಬೇಕಾಯಿತು. ಒಬ್ಬ ಅತೃಪ್ತ ಲೇಖಕಿಯಂತೂ ಕೃತಿಚೌರ್ಯ ಮಾಡಿದ್ದಷ್ಟೇ ಅಲ್ಲದೇ ಅದೇ ಕೃತಿಗೆ ಪ್ರಶಸ್ತಿ ಪಡೆದು ಬೀಗಿದಳು. ದೊಡ್ಡ ದೊಡ್ಡ ಲೇಖಕರ ಜೊತೆಗೆ ಒಳ್ಳೆಯ ಸ್ನೇಹ -ಸಂಬಂಧ ಇದ್ದುದ್ದರಿಂದ ಕೃತಿಚೌರ್ಯವನ್ನು ಕೃತಿಚೌರ್ಯವಲ್ಲ ಪ್ರಭಾವವೆಂದು ತಿಪ್ಪೆ ಸಾರಿಸಲಾಯಿತು. ಇಂತಹ ಲೇಖಕಿಯ ಬೆನ್ನಿಗೆ ಕೆಲವು ದೊಡ್ಡ ದೊಡ್ಡ ಲೇಖಕರೇ ನಿಂತದ್ದು ವಿಷಾದದ ಸಂಗತಿ. ಇದು ಎಂತಹ ಸಂದೇಶ ನೀಡುವುದೆಂಬುದರ ಕುರಿತು ಇಂತಹ ಲೇಖಕರಿಗೆ ತಿಳಿಯಲಿಲ್ಲವೇ ಅಥವಾ ತಿಳಿದೂ ಇಂತಹ ನೀಚ ಕೃತ್ಯಕ್ಕೆ ಇಳಿದರೆ? ಎಂಬ ಸಂಗತಿ ಮರ್ಯಾದಸ್ಥ ಸಾಹಿತಿಗಳಿಗೆ ಮುಜುಗರ ಉಂಟುಮಾಡುವಂತಹದು.
ಇನ್ನು ಕೆಲವು ಅತೃಪ್ತ ಲೇಖಕಿಯರ ಬಯೋಡಾಟಾದಲ್ಲಿರುವ ಪ್ರಶಸ್ತಿಗಳ ಹೆಸರನ್ನೇ ನಾನೆಲ್ಲೂ ಕೇಳಿಲ್ಲ. ಅವರು ಎಷ್ಟೊಂದು ಮುತುವರ್ಜಿಯಿಂದ ಬಯೋಡಾಟಾ ತಯಾರಿಸುತ್ತಾರೆಂದರೆ ಅದನ್ನು ನೋಡಿ ಒಂದು ಕ್ಷಣವಾದರೂ ಮೆಚ್ಚುಗೆ ಮೂಡದೇ ಇರದು. ಅತೃಪ್ತ ಲೇಖಕಿಯರ ಜೀವನ ವಿವರಗಳು (ಚಿಕ್ಕವರೆಂದು ತೋರಿಸಲು ಜನ್ಮದಿನಾಂಕ ಬದಲಾವಣೆ ಮಾಡಲಾಗುತ್ತದೆ), ಕೃತಿಗಳು (ಶೇ.80ರಷ್ಟು ಅಪ್ರಕಟಿತ), ಪ್ರಶಸ್ತಿಗಳು (ಅಹಂ ತೃಪ್ತಿಗಾಗಿ ದುಡ್ಡು ಕೊಟ್ಟು ಕೊಂಡವುಗಳು) ಮತ್ತು ಮುಖ್ಯವಾಗಿ ಮ್ಯಾಟ್ರಿಮೋನಿಗೆ ಕಳಿಸುವಂತಹ ಫೋಟೋಗಳು (ಬಹುತೇಕ ಲೈಕುಗಳು ಮತ್ತು ಕಮೆಂಟುಗಳು ಈ ಫೋಟೋ ನೋಡಿಯೇ ಬರುವುದು) ಇಂತಹ ಬಯೋಡಾಟಾಗಳು ಪ್ರಶಸ್ತಿ ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆಂಬುದು ಇತ್ತೀಚೆಗೆ ನನಗೆ ತಿಳಿಯಿತು.
ಇತ್ತೀಚೆಗೆ ಪ್ರಶಸ್ತಿ ಕೊಡುವುದು ಮತ್ತು ತೆಗೆದುಕೊಳ್ಳುವುದು ಒಂದು ಹೊಸ ವ್ಯಾಪಾರವಾಗಿದೆ. ಪ್ರಶಸ್ತಿ ಮಾರುವವರು ಹೆಚ್ಚಾಗಿದ್ದಾರೆ, ಪ್ರಶಸ್ತಿ ಕೊಳ್ಳುವವರು ಇನ್ನೂ ಹೆಚ್ಚಾಗಿದ್ದಾರೆ. ಇಂತಹ ವಿಷವರ್ತುಲದಲ್ಲಿ ಯೋಗ್ಯತೆಗೆ ತಕ್ಕಂತೆ ಅರ್ಹವಾಗಿಯೇ ಪ್ರಶಸ್ತಿ ದೊರೆತರೂ ಅನುಮಾನದಿಂದ ನೋಡುವ ಪರಿಸ್ಥಿತಿಯಿದೆ ಒಬ್ಬ ಶ್ರೇಷ್ಠ ಲೇಖಕರಿಗೆ ರಾಷ್ಟ್ರ ಮಟ್ಟದ ಪುರಸ್ಕಾರ ದೊರೆತಾಗ ಬಹುತೇಕ ಜನ ಅಭಿನಂದಿಸಿದರು. ಕೆಲವು ಲೇಖಕ ಮಹಾಶಯರು ಪದೇ ಪದೇ ಅವರಿಗೆ “ಸರ್, ನಿಮಗೆ ಈ ಪ್ರಶಸ್ತಿ ಹೇಗೆ ಬಂತು?” ಎಂದು ಕೇಳಿ ಅವರಿಂದ ಚೆನ್ನಾಗಿ ಉಗಿಸಿಕೊಂಡ ಪ್ರಸಂಗವೂ ನಡೆದಿದೆ.
ಈಗ ಕಾಲ ಎಷ್ಟು ಮುಂದುವರಿದೆದೆಯೆಂದರೆ ಪ್ರಶಸ್ತಿ ಕೊಡುವವರು ಪ್ರಶಸ್ತಿಗಾಗಿ ಹಂಬಲಿಸುವವರನ್ನು ಗುರುತಿಸಿ, ಅವರ ಸಾಮರ್ಥ್ಯಕ್ಕೆ ತಕ್ಕಂತೆ (ಸಾಮರ್ಥ್ಯ=ರೂಪಾಯಿಗಳಲ್ಲಿ ಪ್ರಶಸ್ತಿಯ ಮೌಲ್ಯ) ಪ್ರಶಸ್ತಿ ಕೊಡುತ್ತಾರೆ. ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಪ್ರಶಸ್ತಿಗಳಿಗಂತೂ ಲೆಕ್ಕವೇ ಇಲ್ಲ. ಕಳೆದ ವರ್ಷ ತಾಲ್ಲೂಕಾ ಕೇಂದ್ರವೊಂದರಲ್ಲಿ ದೊಡ್ಡ ಸಂತರೊಬ್ಬರ ಹೆಸರಿನಲ್ಲಿ ಒಟ್ಟು ಹದಿನೇಳು ಜನರಿಗೆ ಪ್ರಶಸ್ತಿ ಕೊಡಲಾಯಿತು. ನಗದು ಶೂನ್ಯ, ಪ್ರಶಸ್ತಿ ಪುರಸ್ಕೃತರಿಗೆ ನೀಡಿದ ಸ್ಮರಣಿಕೆ, ಶಾಲು ಮತ್ತು ಹೂವು-ಹಣ್ಣುಗಳಿಗೆ ಪ್ರಶಸ್ತಿ ಪಡೆದವರೇ ಹಣ ಪಾವತಿಸಿದ್ದರು ಎಂಬ ಸಂಗತಿ ನಂತರ ತಿಳಿಯಿತು.
ಮೇಲೆ ನಿರೂಪಿಸಿದ ಘಟನೆಗಳು ಇಂತಹ ಅಸಂಖ್ಯ ಘಟನೆಗಳಲ್ಲಿ ಕೆಲವೇ ಕೆಲವು. ಪ್ರಶಸ್ತಿ – ಪುರಸ್ಕಾರಗಳ ಕುರಿತು ಇರುವ ಆಸೆ ಗೀಳು ಎನ್ನುವ ಮಟ್ಟಕ್ಕೆ ಹೋಗಿದೆ. ಏನಾದರೂ ಮಾಡಿ, ಹೇಗಾದರೂ ಮಾಡಿ, ಪ್ರಶಸ್ತಿ ಪಡೆಯಬೇಕೆಂಬ ದುರಾಗ್ರಹ ಅಯೋಗ್ಯರಲ್ಲಿ ಹೆಚ್ಚಾಗುತ್ತದಿಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಆಗಾಗ ಕೆಲವೇ ಕೆಲವು ಯೋಗ್ಯರಿಗೆ ಅರ್ಹತೆಗೆ ತಕ್ಕಂತೆ ಪ್ರಶಸ್ತಿ ಸಿಗುತ್ತಿರುವುದು ಕೊಂಚವಾದರೂ ಸಮಾಧಾನ ನೀಡುವ ಸಂಗತಿ. “ಪ್ರಶಸ್ತಿ – ಪುರಸ್ಕಾರಗಳಿಗೂ ಸಹ ಒಳ್ಳೆಯ ದಿನಗಳು ಬರಲಿ!” ಎಂಬುದು ಆ ದಯಾಮಯನಾದ ಭಗವಂತನಲ್ಲಿ ನನ್ನ ಪ್ರಾರ್ಥನೆ.
6 thoughts on “‘ಪ್ರಶಸ್ತಿ’ ಪುರಾಣ”
ಚಿಂತನಾರ್ಹ ಬರಹ
ಒಂದು ಪ್ರಶಸ್ತಿಯ ಹಿಂದೆ ಇಷ್ಟು ಉದ್ದದ ಕತೆ ಇದೆಯೆಂಬುದು ತಿಳಿದಿರಲಿಲ್ಲ. ಚಂದವಾಗಿ ವಿವರಿಸಿದ್ದೀರಿ.
ಎಂಥೆಂಥ ಪುರಾಣಗಳ ಕುರಿತು ಕೇಳಿದ್ದೇವೆ. ಈ ಪ್ರಶಸ್ತಿ ಪುರಾಣ ಅವೆಲ್ಲಕ್ಕಿಂತ ಭಿನ್ನವಾಗಿದೆ. ಉತ್ತಮ ಲೇಖನ.
ಸಮಯೋಚಿತ ಲೇಖನ.
ಇತ್ತೀಚೆಗೆ whatsapp ನ status ಗಳಲ್ಲಿ ಕಾಣುತ್ತಿರುವ ಪ್ರಶಸ್ತಿ ಪತ್ರಗಳನ್ನು ಕಂಡು ಆಶ್ಚರ್ಯ ಪಟ್ಟಿದ್ದೆ.
ಪ್ರಶಸ್ತಿ ಪುರಾಣ ಲೇಖನ ತುಂಬಾ ಚೆನ್ನಾಗಿದೆ.
Very subtl
Article is an eye opener and also bold.