ಸಾಯಿಸುತೆ ನಮ್ಮ ಕಾಲದ ಅತ್ಯಂತ ಪ್ರಭಾವಿ ಕಾದಂಬರಿಕಾರರು.140ಕ್ಕೂ ಹೆಚ್ಚು ಕಾದಂಬರಿಗಳು ಅವರ ಸಾಹಿತ್ಯ ಪ್ರೀತಿಗೆ ನಿದರ್ಶನ.ಸಾಮಾಜಿಕ ಕಳಕಳಿ ಸಾರುವ ಕಾದಂಬರಿಗಳು ಎಂದೆಂದೂ ಓದುಗರಿಗೆ ಪ್ರಿಯವಾದವು.ನಿರಂತರವಾಗಿ ಬರೆದು ಓದುಗರ ಕಣ್ಣಲ್ಲಿ ಪ್ರಶಂಸೆ ಪಡೆದು, ಇನ್ನಷ್ಟು ಬರೆಯುವಂತೆ ಮಾಡುವ ಅವರ ಜೀವನದ ನಿರೀಕ್ಷಣೆ ಅದ್ಭುತ.ಯಾವ ಸಾಮಾಜಿಕ ಸಮಸ್ಯೆಯನ್ನು ಅವರ ಕಾದಂಬರಿ ಪ್ರತಿಫಲಿಸಲಿಲ್ಲ ಎಂದು ಹುಡುಕುವುದು ಕಷ್ಟಸಾಧ್ಯ. ಮಾನವನಿಗೆ ಬೇಕಾದ ಪ್ರೀತಿ, ವಿಶ್ವಾಸ, ಸಹಬಾಳ್ವೆ ,ಸಹಕಾರ, ಹೊಂದಾಣಿಕೆ, ಕ್ಷಮಾಗುಣ ಇತ್ಯಾದಿಗಳನ್ನು ಸಾರುತ್ತಾ ನೈತಿಕತೆಯ ದೊಡ್ಡ ದಾರಿಯನ್ನೇ ಅವರ ಕಾದಂಬರಿಗಳು ನಿರ್ಮಿಸಿವೆ.
ಅನ್ಯೋನ್ಯತೆಯಿಂದ ಇರಬೇಕಾದ ಗಂಡ ಹೆಂಡಿರ ಸಂಬಂಧ ಮುರಿದು ಬಿದ್ದು, ಸಂಸಾರ ಅಲ್ಲೋಲ ಕಲ್ಲೋಲವಾಗಿ, ನೆಮ್ಮದಿ ಶಾಂತಿ ಹಾಳಾಗಿ ಹೋಗುವುದರ ಉದಾಹರಣೆ “ಬಿರಿದ ನೈದಿಲೆ” ಕಾದಂಬರಿಯಲ್ಲಿದೆ. ಗಂಡ ಮತ್ತೊಬ್ಬಳ (ಪ್ರೇಮ) ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು, ಮೈ ಮರೆತು, ಹೆಂಡತಿ ಮಕ್ಕಳ (ಮಧು, ಮಾನಸ) ಆನಂದ ತಿರಸ್ಕರಿಸಿ, ಮಾನಸಿಕ ಹಿಂಸೆ ಅನುಭವಿಸುವದನ್ನು ಕಾಣುತ್ತೇವೆ.ಸೌಂದರ್ಯದ ಖಣಿಯಾದ ವಿಜಯಾ, ಪತ್ನಿಯಾಗಿ ಯಾವ ಕೊರತೆಯನ್ನು ಮಾಡದೇ, ಸರಿಯಾಗಿ ನಡೆದುಕೊಂಡರೂ ಹೆಣ್ಣಾಗಿ ಅನುಭವಿಸುವುದನ್ನು ಮನ ಕಲಕುತ್ತದೆ.ಹೆಣ್ಣಿನಲ್ಲಿರಬೇಕಾದ ಸೌಂದರ್ಯ,ಪ್ರೇಮ, ಕಾಳಜಿ,ಮಮತೆಯ ನದಿಯನ್ನೇ ಹರಿಸಿದರೂ ಗಂಡ ರಾಜೀವ್ ಪರ ಹೆಣ್ಣಿನ ಸಂಗ ಮಾಡುವುದು ಆಶ್ಚರ್ಯವನ್ನುಂಟುಮಾಡುತ್ತದೆ. “ಏನನ್ನು ಕಂಡು ಪ್ರೇಮಾಳಿಗೆ ಆಕರ್ಷಿತನಾದೆ:” ಎಂದು ಆತನೇ ಪ್ರಶ್ನಿಸಿಕೊಂಡಾಗ ಪಿಚ್ಚೆನಿಸುತ್ತದೆ. ಪ್ರೇಮಾ ತನ್ನದೇನೋ ಪರಿಸ್ಥಿತಿಗೆ ತುತ್ತಾಗಿ, ಪರ ಗಂಡಸರ ಸಂಗ ಮಾಡುವ, ಓಲೈಸುವ ಅನಿವಾರ್ಯ ಒತ್ತಡಕ್ಕೆ ಒಳಗಾದರೆ, ಅಂಥದ್ದೇನೂ ಪರಿಸ್ಥಿತಿ ಇರದೇ ರಾಜೀವ್ ಆಕೆಗೆ ಬಲಿಯಾಗುವುದು ಓದುಗನನ್ನು ಹೌಹಾರಿಸುತ್ತದೆ. ಹೆಣ್ಣು ದಾರಿ ತಪ್ಪುವುದಕ್ಕೂ ಗಂಡಸು ಎಂಬ ಪ್ರಾಣಿಯೇ ಕಾರಣವೆಂದು ಸ್ಪಷ್ಟವಾಗುತ್ತದೆ.ನಂತರದ ಜ್ಞಾನೋದಯದಿಂದ,ಮತ್ತು ಮಾವ ಅತ್ತಿಗೆಯ ಅನ್ಯೋನ್ಯತೆಯ ಕಂಡು ರಾಜೀವ್ ಸುಧಾರಿಸುತ್ತಾನೆ.ತನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸುತ್ತಾನೆ.ಆಗಲೇ ವಿವಾಹ ವಿಚ್ಛೇದನ ಪಡೆದ ಅಣ್ಣ ಅತ್ತಿಗೆಯ ಬಾಳು, ತಂದೆ ಹೇಳಿದ ಬುದ್ಧಿಮಾತುಗಳು, ಮಕ್ಕಳ ಮುಂದಿನ ಭವಿಷ್ಯ ಹಾಗೂ ತಪ್ಪನ್ನು ಒಪ್ಪಿಕೊಂಡ ಗಂಡನನ್ನು ಸ್ವಾಭಾವಿಕವಾಗಿಯೇ ಕ್ಷಮಿಸಲು ಮುಂದಾಗಿ ತನ್ನ ಬಾಳನ್ನು ಮುನ್ನಡೆಸಲು ನಿರ್ಣಯಿಸುತ್ತಾಳೆ ವಿಜಯ.ಕೊರತೆಯಿರದಿದ್ದರೂ ಪರಿಸ್ಥಿತಿಗೆ ಸಿಲುಕಿದ ಪರ ಹೆಣ್ಣನ್ನು ಉಪಯೋಗಿಸಿದ್ದು ರಾಜೀವನನ್ನು ದ್ವೇಷಿಸುವಂತೆ ಮಾಡುತ್ತದೆ.
ಅಣ್ಣ, ತಮ್ಮ, ತಂಗಿ ಮತ್ತು ಅವರ ಮಕ್ಕಳೊಡಗೂಡಿ ಹೆಣೆದ, ಸಂಸಾರದ ಏರು ಬೀಳು ಕಂಡ ಕಾದಂಬರಿ “ಮಿಂಚು”. ತಮ್ಮನಿಗೆ ಹೆಂಡತಿಯ ತಂಗಿಯನ್ನು ತೆಗೆದುಕೊಳ್ಳಬೇಕೆಂದಾಗ, ತಮ್ಮ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾದಾಗ ಅಣ್ಣನ ಸಿಟ್ಟು ಅಸೂಯೆಗೆ ಕಾರಣವಾಗುತ್ತದೆ. ತಮ್ಮನ ಮಕ್ಕಳಲ್ಲಿ ಒಬ್ಬ ವೈದ್ಯಕೀಯ ಕಲಿತರೆ, ಇನ್ನೊಬ್ಬ ಸ್ಪೋರ್ಟ್ಸ್ನಲ್ಲಿ ಮುಂದು, ಮಗಳು ಡಿಗ್ರಿ ಕಲಿತ, ಸುಂದರವಾದ ಸಂಸಾರವನ್ನು ಕಾಣುತ್ತೇವೆ.ಅದೇ ಅಣ್ಣನ ಮಕ್ಕಳಿಬ್ಬರೂ ದಾರಿತಪ್ಪುವ ಜೀವನ ನೋಡುತ್ತೇವೆ. ಅಣ್ಣ ಕಾಂಟ್ರ್ಯಾಕ್ಟರ್ ಇದ್ದು ಕಾನೂನುಬಾಹಿರ ಮತ್ತು ವಂಚನೆಯಂಥ ಕೆಲಸದಲ್ಲಿ ವ್ಯಸ್ತನಾದರೆ ಮಗನೂ ಒಂದು ಕೈ ಮುಂದುವರೆದು ಮೋಸ ಚಟುವಟಿಕೆಯಲ್ಲಿ ಭಾಗಿಯಾಗಿ, ಕಡೆಗೆ ಜೈಲು ಸೇರುವ ಪ್ರಸಂಗ ಒದಗುತ್ತದೆ. ಮಗಳು ವಿದ್ಯೆಯಲ್ಲಿ ಯಾವುದೇ ಇಚ್ಛೆ ಇರದೇ, ಅನ್ಯ ಜಾತಿಯ ಹುಡುಗನ ಜೊತೆ ಪಾರ್ಕ್, ಸಿನೆಮಾಯೆಂದು ಅಡ್ಡಾಡಿ, ಹೆಣ್ಣಿನ ಸರ್ವಸ್ವವೂ ಆದ ಶೀಲವನ್ನು ಕಳೆದುಕೊಂಡು, ಮೋಸಕ್ಕೊಳಗಾಗಿ, ಅಂತ್ಯದಲ್ಲಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾಳೆ.ತಂಗಿಯ ಮಗನಿಗೆ ಈಕೆಯನ್ನು ಕೊಡಬೇಕೆಂಬ ಆಸೆಯೂ ಮಣ್ಣಾಗುತ್ತದೆ, ಕಾರಣ ತಮ್ಮನ ಮಗಳು ಮತ್ತು ತಂಗಿಯ ಮಗನಿಗೆ ಮೊದಲೇ ಒಲವು ಮೂಡಿದ್ದು ಕಾಣುತ್ತದೆ. ಒಟ್ಟಿನಲ್ಲಿ ನ್ಯಾಯನೀತಿಯಿಂದ ನಡೆದ ತಮ್ಮನ ಸಂಸಾರ ಮತ್ತು ಮಕ್ಕಳು ಶ್ರೇಷ್ಠವಾದ ಜೀವನದ ಆದರ್ಶವನ್ನು ತೋರಿಸುತ್ತಾರೆ. ಅಪ್ಪನಂತೆ ಅಧರ್ಮದ ದಾರಿ ಹಿಡಿದ ಅಣ್ಣನ ಮಕ್ಕಳು ದುಃಖಾಂತ್ಯದ ಜೀವನವನ್ನು ಎದುರಿಸುತ್ತಾರೆ. ಅನ್ಯಾಯ, ಮೋಸ, ವಂಚನೆ, ಶೀಲ ಕಳೆದುಕೊಳ್ಳುವಂತಹ ಅನೈತಿಕತೆಯು ವಿಜೃಂಭಿಸಿ ಕೊನೆಗೆ ಅಂತ್ಯ ಕಾಣುವುದನ್ನು ಸಾಯಿಸುತೆಯವರ ಈ ಕಾದಂಬರಿಯಲ್ಲಿ ಕಾಣುತ್ತೇವೆ.
ಊರವರ ಸಹಾಯದಿಂದಲೇ ವಿದ್ಯಾಭ್ಯಾಸ ಕಲಿತು, ದೊಡ್ಡ ವ್ಯಕ್ತಿಯಾಗಿ ಬೆಳೆದು, ಸೊಕ್ಕಿನಿಂದ ನಡೆವ ಮಗನ ಬಗ್ಗೆ ” ಸಂಧ್ಯಾ ಗಗನ” ಕಾದಂಬರಿಯ ಸಾರ. ಅಪ್ಪ ಊರಲ್ಲಿದ್ದು, ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಆರಾಮದಾಯಕ ಜೀವನ ನಡೆಸುತ್ತಿದ್ದರೆ, ಮಗ ಸಿಟಿಯಲ್ಲಿ ಉನ್ನತ ಹುದ್ದೆ ಹೊಂದಿ ಶ್ರೀಮಂತಿಕೆಯನ್ನು ಪ್ರದರ್ಶಿಸಿ, ಊರೆಂದರೆ ಅಸಹ್ಯ ಅನ್ನೋವರೆಗೆ ತಾತ್ಸಾರವಿರುತ್ತದೆ. ಹಳ್ಳಿ, ಹಳ್ಳಿ ಜನ, ಸಂಪ್ರದಾಯಗಳು ಅಂದ್ರೆ ಒಂದು ತರ ರೋಗ ಮಗ ಮತ್ತು ಸೊಸೆಗೆ. ಮಗ ಭಾಸ್ಕರನ ಸ್ನೇಹಿತ ಸೂರ್ಯ, ಮಗನಷ್ಟೇ ಆತ್ಮೀಯ ಆಗಿದ್ದ ತಂದೆ ತಾಯಿಗೆ. ಇದು ಭಾಸ್ಕರನಲ್ಲಿ ಅಸೂಯೆ ಮೂಡಿಸಿ, ಅಪ್ಪ ಅಮ್ಮನನ್ನು ಊರು ಮತ್ತು ಊರಿನ ಜನ ತನ್ನಿಂದ ಬೇರ್ಪಡಿಸುತ್ತಿದ್ದಾರೆ ಎಂಬ ಭಯದಲ್ಲಿರುತ್ತಾನೆ. ಹಣದ ಮುಖಾಂತರ ಸುಖ ಕೊಡಲು ಪ್ರಯತ್ನಿಸಿದ ಮಗ, ನಿಜ ಪ್ರೀತಿಯನ್ನು ಹೆತ್ತವರಿಗೆ ಕೊಡಲು ಸೋಲುತ್ತಾನೆ. ಮಗನ ಪ್ರೀತಿಯನ್ನು ಸೂರ್ಯನಲ್ಲಿ ಆ ವೃದ್ಧ ದಂಪತಿಗಳು ಕಾಣುತ್ತಾರೆ. ಇತ್ತ ಸೊಸೆ ತನ್ನದೇ ಮಗನನ್ನು ತನ್ನದಲ್ಲೆಂದು ಭಾವಿಸಿ, ಕೊಡಬೇಕಾದ ಹಕ್ಕಿನ ಪ್ರೀತಿಯನ್ನು ಕೊಡಲು ಸೋಲುತ್ತಾಳೆ. ಮಗು ಚಿಕ್ಕದಿದ್ದಾಗ,ಎದೆಹಾಲನ್ನು ಉಣಿಸಲು ನಿರಾಕರಿಸಿದಾಗ, ಬೇರೆಯೊಬ್ಬ ತಮಿಳು ಮಹಿಳೆ ತನ್ನ ಎದೆಹಾಲನ್ನು ಕುಡಿಸಿದ್ದು ಆಕೆಯ ಸಂಶಯಕ್ಕೆ ಕಾರಣ. ತಮಿಳು ಮಹಿಳೆ ಹುಟ್ಟಿದ ತಕ್ಷಣ ತನ್ನ ಮಗುವನ್ನು ಕಳೆದುಕೊಂಡು ಹಾಲುಣಿಸುವುದರ ಮೂಲಕ ತಾಯ್ತನವನ್ನು ಅನುಭವಿಸುವಳು.ಅತ್ತೆ ಮಾವನ ಸಾಂತ್ವನದ ಮಾತುಗಳಿಂದ ತನ್ನ ಮಗನನ್ನು ಒಪ್ಪಿಕೊಂಡು ಪ್ರೀತಿ ತೋರಿಸುತ್ತಾಳೆ. ಕೊನೆಗೆ ಸಿಟಿ ಜೀವನ ಬೇಸತ್ತು ಹೆತ್ತವರು ಹಳ್ಳಿಗೆ ಬಂದಾಗ ಒಮ್ಮೆಲೆ ಜ್ಞಾನೋದಯವಾದಂತೆ ಮಗನೂ ಹಳ್ಳಿಗೆ ಬಂದು, ಜನರ ಜೊತೆ ಮತ್ತು ತನ್ನ ಆತ್ಮೀಯ ಸ್ನೇಹಿತನ ಜತೆ ಮತ್ತದೇ ಹಳೆಯ ಪ್ರೀತಿಯನ್ನು ಹಂಚಿಕೊಳ್ಳುತ್ತಾನೆ ಭಾಸ್ಕರ. ಜೀವನದ ಸಂಧ್ಯಾಕಾಲದಲ್ಲಿ ಹೆತ್ತವರಿಗೆ ಹಣಕ್ಕಿಂತ ಪ್ರೀತಿಯ ಅವಶ್ಯಕತೆ ಮತ್ತು ಇಷ್ಟವಾದ ವಾತಾವರಣದ ಬೇಡಿಕೆಯ ನೈತಿಕತೆಯನ್ನು ಈ ಕಾದಂಬರಿ ಸಾಧಿಸುತ್ತದೆ.
ಎರಡು ಎಸ್ಟೇಟ್ ಮಾಲೀಕರ ಜೀವನ ಮತ್ತು ಒಂದು ಎಸ್ಟೇಟ್ ಮಾಲೀಕನ ಮನೆಯಲ್ಲಿ ಕೆಲಸಗಾರಳೆಂದು ಸೇರಿದ ಬಡ ಅನಾಥ ಹುಡುಗಿಯ ಕಥೆ “ಗಂಧರ್ವಗಿರಿ” ಕಾದಂಬರಿಯಲ್ಲಿದೆ.ಎಸ್ಟೇಟ್ ಕಬಳಿಸುವ ಆಸೆಯಿಂದ ಪಕ್ಕದ ಎಸ್ಟೇಟನ ಮಾಲೀಕ,ಗಂಧರ್ವಗಿರಿ ಮಾಲೀಕನ ದೊಡ್ಡ ಮಗ ಮತ್ತು ಸೊಸೆಯನ್ನು ಸಂಚು ಹಾಕಿ ಕೊಲ್ಲಿಸುತ್ತಾನೆ. ತನಗಿರುವ ಒಬ್ಬಳೇ ಮಗಳನ್ನು ಇನ್ನೊಬ್ಬ ಮಗನಿಗೆ ಕೊಟ್ಟು ಇಡೀ ಎಸ್ಟೇಟನ್ನು ತನ್ನದಾಗಿಸಿಕೊಳ್ಳಬೇಕೆಂಬ ಉಪಾಯ ಮಾಡಿ ಸೋಲುತ್ತಾನೆ. ಈ ಎಲ್ಲ ಅಪಾಯಗಳನ್ನು ಮನೆಗೆ ಬಂದ ಆ ಬಡ ಹುಡುಗಿಯೇ ಇಲ್ಲವಾಗಿಸುತ್ತಾಳೆ. ಅಪ್ಪನಿಂದ ದೂರವಾಗಿ, ತಾಯಿಯನ್ನು ಕಳೆದುಕೊಂಡು, ಅಜ್ಜನ ರಕ್ಷಣೆಯಲ್ಲಿ ಬೆಳೆದಾಕೆಗೆ ಸೋದರಮಾವನಿಂದ ನಿತ್ಯ ದೌರ್ಜನ್ಯಕ್ಕೊಳಗಾಗುವ ಸಾಧ್ಯತೆ ಅರಿತ ಅಜ್ಜ ಗಂಧರ್ವಗಿರಿ ಎಸ್ಟೇಟ್ ಮನೆಗೆ ಸೇರಿಸಿ, ಆಕೆಯ ಮುಂದಿನ ಜೀವನ ನೋಡಿಕೊಳ್ಳಲು ಹೇಳುತ್ತಾರೆ. ಸತ್ತ ಮೊದಲನೇ ಮಗನ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಆಕೆಯದು. ತಂದೆ ತಾಯಿಯನ್ನು ಕಳೆದುಕೊಂಡು ಚಿಕ್ಕಮಕ್ಕಳು ನೇತ್ರಾಳಲ್ಲಿ, ತಾಯಿಯನ್ನು ಕಂಡು ತುಂಬ ಹೊಂದಿಕೊಳ್ಳುತ್ತಾರೆ. ಈ ಪ್ರೀತಿಯೇ ನೇತ್ರಾಳನ್ನು ಎರಡನೇ ಮಗನಿಗೆ ಹೆಂಡತಿಯ ಆಗುವಂತೆ ಮಾಡುತ್ತದೆ. ಮೋಸ ವಂಚನೆ ಸೋತು ಪ್ರೀತಿ ವಿಶ್ವಾಸ ಮತ್ತು ತಾಯಿಯ ಮಮತೆಯಂಥ ನೈತಿಕತೆಯನ್ನು ಈ ಕಾದಂಬರಿ ಎತ್ತಿ ತೋರಿಸುತ್ತದೆ.
“ಇಬ್ಬನಿ ಕರಗಿತು” ಕಾದಂಬರಿಯಲ್ಲಿ ತಂಗಿಯ ನೋವಿಗೆ ತನ್ನ ಹೆಂಡತಿಯ ಅಣ್ಣ ಕಾರಣವೆಂದು ತಿಳಿದು, ಅಣ್ಣನಿಗೆ ಕೊಡಬೇಕಾದ ಶಿಕ್ಷೆಯನ್ನು ಹೆಂಡತಿಗೆ ಕೊಡಲು ಪ್ರಯತ್ನಿಸಿ, ತಪ್ಪೆಂದು ತಿಳಿದು ಪಶ್ಚಾತಾಪಕ್ಕೆ ಒಳಗಾಗುತ್ತಾನೆ. ಹೆಂಡತಿಯ ಸಹನೆಯೇ ಗೆಲ್ಲುತ್ತದೆ. ಸಹನೆ ಎಂಬ ನೈತಿಕತೆ ಈ ಕಾದಂಬರಿಯ ಮೂಲ.” ಬಾಡದ ಹೂ”ಕಾದಂಬರಿಯಲ್ಲಿ ನಾಯಕ,ಸ್ನೇಹಿತರು ಕೊಟ್ಟ ಬೆಟ್ಸನ್ನು ನಿರ್ವಹಿಸಲು ಹೋಗಿ, ಕಾಲೇಜಿನಲ್ಲಿ ಅಪಮಾನಿತನಾಗುತ್ತಾನೆ.ಹೀಗಾಗಿ ನಾಯಕಿಯನ್ನು ತಪ್ಪಾಗಿ ಭಾವಿಸಿ ದ್ವೇಷಿಸಿ, ಕೊನೆಗೆ ಆಕೆಯನ್ನೇ ವಿವಾಹವಾಗುತ್ತಾನೆ.ಅಂತಸ್ತಿಗೆ ತಕ್ಕಂತೆ ಹೆಣ್ಣು ಹುಡುಕುವ ಭರದಲ್ಲಿ ಪ್ರೀತಿಸಿದವರನ್ನು ದೂರಮಾಡಿ, ಹುಡುಗಿಗೆ ದೊಡ್ಡ ಕಾಯಿಲೆಯೆಂದು ನಂಬಿಸಿ, ಆಕೆ ಅಗಲುವಂತೆ ಮಾಡಿ, ಪ್ರೇಮದ ಹಕ್ಕಿಗಳನ್ನು ಬೇರ್ಪಡಿಸುವ ಕಥೆ”ಮಿಡಿದ ಶೃತಿ ” ಕಾದಂಬರಿ. ಇದನ್ನೇ ತಪ್ಪು ತಿಳಿದ ಹುಡುಗ ಆಕೆಯಿಂದ ದೂರಾಗುತ್ತಾನೆ ಕೊನೆಗೆ ಎಲ್ಲಾ ತಿಳಿದು ಒಂದಾಗುತ್ತಾರೆ.
ನಾನು ಓದಿ ಮತ್ತು ನೆನಪಿದ್ದಷ್ಟೂ (ನೋಡಿದ ಕೆಲವು ಸಿನೆಮಾಗಳು, ಕಾದಂಬರಿಯಾಧಾರಿತ) ಕೇವಲ ಕೆಲ ಕಾದಂಬರಿಗಳನ್ನು ಉಲ್ಲೇಖ ಮಾಡಿದ್ದರೂ ನೈತಿಕತೆಯ ತುತ್ತತುದಿಯನ್ನು ಮುಟ್ಟುವಲ್ಲಿ ಈ ಎಲ್ಲ ಕಾದಂಬರಿಗಳು ಸಫಲವಾಗಿವೆ.ಬರೆಯುವವನಿಗೆ ಬೇಕಾದ ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿಯನ್ನು ಸಾಯಿಸುತೆಯವರು ಪ್ರತೀ ಕಾದಂಬರಿಯಲ್ಲಿ ಸಾಧಿಸಿದ್ದಾರೆ. ಮೋಸ, ವಂಚನೆ ಅಸೂಯೆ, ದ್ವೇಷ ಅಧರ್ಮ, ಕಾನೂನುಬಾಹಿರ ಕೆಲಸಗಳು, ದುಡ್ಡು ಅಂತಸ್ತಿನ ಹಪಾಹಪಿ, ಮಾನವೀಯ ಮೌಲ್ಯಗಳ ಅಧಃಪತನ ಇತ್ಯಾದಿಗಳಿಂದ ಹೊರಬರಬೇಕೆಂದು ಕಾದಂಬರಿಗಳು ಹೇಳಿವೆ ಮತ್ತು ಹೇಳುತ್ತಲೂ ಇವೆ.