ಕನ್ನಡದ ಖ್ಯಾತ ಕವಿ, ಕಾವ್ಯಮೀಮಾಂಸಕ ಎನ್.ಎಸ್.ಲಕ್ಷ್ಮೀನಾರಾಯಣಭಟ್ಟರು ಸಂಪಾದಿಸಿದ “ಪ್ರಾಯೋಗಿಕ ವಿಮರ್ಶೆ” ಒಂದು ವಿಶಿಷ್ಟ ಬಗೆಯ ಕೃತಿ. ಪಾಶ್ಚಾತ್ಯ ವಿಮರ್ಶಕ ಐ.ಎ.ರಿಚರ್ಡ್ಸನ ಖ್ಯಾತ ಕೃತಿ “Practical Criticism” ಈ ಸಂಪಾದಿತ ಕೃತಿಗೆ ಪ್ರೇರಣೆ. ಜ್ಞಾನದ ವಿವಿಧ ಶಾಖೆಗಳು ಮತ್ತು ಅಧ್ಯಯನದ ಶಿಸ್ತಿನ ನೆರವಿನೊಂದಿಗೆ ಕಾವ್ಯವನ್ನು ಎಳೆ ಎಳೆಯಾಗಿ ವಿಶ್ಲೇಷಣೆಗೊಳಪಡಿಸಿ ವಿಮರ್ಶಿಸುವ ಹೊಸ ವಿಧಾನವೊಂದನ್ನು ರಿಚರ್ಡ್ಸ್ ತನ್ನ “Practical Criticism” ಕೃತಿಯ ಮೂಲಕ ಮೊದಲ ಬಾರಿಗೆ ಪಾಶ್ಚಾತ್ಯ ಸಾಹಿತ್ಯಲೋಕಕ್ಕೆ ಪರಿಚಯಿಸಿದ. ಇಂದು ಜಗತ್ತಿನ ಬಹುತೇಕ ಭಾಷೆಗಳ ಸಾಹಿತ್ಯದಲ್ಲಿ ಅದರಲ್ಲೂ ಕಾವ್ಯ ವಿಮರ್ಶೆಯಲ್ಲಿ ರಿಚರ್ಡ್ಸನ ಪ್ರಾಯೋಗಿಕ ವಿಮರ್ಶಾ ವಿಧಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ.
“Practical Criticism” ಕೃತಿಯನ್ನು ಆದರ್ಶವಾಗಿರಿಸಿಕೊಂಡ “ಪ್ರಾಯೋಗಿಕ ವಿಮರ್ಶೆ” ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಸಂಪಾದಕತ್ವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ 1971ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು. “ಪ್ರಾಯೋಗಿಕ ವಿಮರ್ಶೆ”ಯ ವಿಸ್ತೃತ, ಪರಿಷ್ಕೃತ ಆವೃತ್ತಿ 2015ರಲ್ಲಿ ಪ್ರಕಟವಾಗಿದೆ.
ಪ್ರಸ್ತುತ ಕೃತಿಯಲ್ಲಿ ಆದಿಕವಿ ಪಂಪ, ಜನ್ನ, ಬಸವಣ್ಣ, ಕುಮಾರವ್ಯಾಸ, ಬೇಂದ್ರೆ, ಕುವೆಂಪು, ಪು.ತಿ.ನ, ಕೆ.ಎಸ್.ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗ, ಬಿ.ಸಿ.ರಾಮಚಂದ್ರ ಶರ್ಮ, ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ ಮತ್ತು ಎ.ಕೆ.ರಾಮಾನುಜನ್ ರಂತಹ ಖ್ಯಾತ ಕವಿಗಳ ಕೆಲವು ಕವನಗಳ ಕುರಿತು ಟಿ.ಎಸ್.ವೆಂಕಣ್ಣಯ್ಯ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಯು.ಆರ್.ಅನಂತಮೂರ್ತಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಜಿ.ಎಚ್.ನಾಯಕ, ಸುಮತೀಂದ್ರ ನಾಡಿಗ ಮತ್ತು ಎಂ.ಜಿ.ಕೃಷ್ಙಮೂರ್ತಿಯಂತಹ ಖ್ಯಾತ ಲೇಖಕರು ಬರೆದ ವಿಮರ್ಶಾ ಲೇಖನಗಳಿವೆ. ನಂತರದ ಮುದ್ರಣದಲ್ಲಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ತಮ್ಮ “ದೀಪಿಕಾ” ಕವನದ ಕುರಿತು ಬಂದ ಲೇಖನವನ್ನು ಸೇರಿಸಿದ್ದಾರೆ.
ಸಂಪಾದಕರಾದ ಲಕ್ಷ್ಮೀನಾರಾಯಣ ಭಟ್ಟರು ಎಂಟು ಪುಟಗಳಷ್ಟಿರುವ ಪೀಠಿಕೆಯಲ್ಲಿ ಪ್ರಾಯೋಗಿಕ ವಿಮರ್ಶೆ ಕನ್ನಡದಲ್ಲಿ ಬೆಳೆದು ಬಂದ ಬಗೆ ಮತ್ತು ಅದರ ಅಗತ್ಯದ ಕುರಿತು ಚರ್ಚಿಸಿದ್ದಾರೆ. ಕನ್ನಡದಲ್ಲಿ ಹೊರಬಂದ ಮೊದಲ ಪೂರ್ಣಪ್ರಮಾಣದ ಪ್ರಾಯೋಗಿಕ ವಿಮರ್ಶಾ ಲೇಖನವೆಂದರೆ ಗೋಪಾಲಕೃಷ್ಣ ಅಡಿಗರ “ಭೂತ” ಕವನದ ಕುರಿತು ಅನಂತಮೂರ್ತಿಯವರು ಮಾಡಿದ ವಿಶ್ಲೇಷಣೆ ಎಂದು ಲಕ್ಷ್ಮೀನಾರಾಯಣ ಭಟ್ಟರು ಸಾಧಾರವಾಗಿ ಗುರುತಿಸಿದ್ದಾರೆ. ಹಿಂದೆ ಕನ್ನಡದಲ್ಲಿ ಆಂಶಿಕವಾಗಿ ಅಲ್ಲಲ್ಲಿ ಉಪಯೋಗಿಸಲ್ಪಟ್ಟ ಪ್ರಾಯೋಗಿಕ ವಿಮರ್ಶಾ ವಿಧಾನಗಳ ಮೇಲೆಯೂ ಸಂಪಾದಕರು ಬೆಳಕು ಚೆಲ್ಲುವ ಕಾರ್ಯ ಮಾಡಿದ್ದಾರೆ.
ಟಿ.ಎಸ್.ವೆಂಕಣ್ಣಯ್ಯನವರ “ಪಂಪನ ಎರಡು ಪದ್ಯಗಳು”, ಕುವೆಂಪು ಅವರ “ಸರೋವರದ ಸಿರಿಗನ್ನಡಿ”, ಜಿ.ಎಸ್.ಸಿದ್ಧಲಿಂಗಯ್ಯನವರ “ಯಶೋಧರ ಚರಿತೆಯಿಂದ” ಮತ್ತು ಅ.ರಾ.ಮಿತ್ರರ “ಕುಮಾರವ್ಯಾಸ – ಮೂರು ಪದ್ಯಗಳು” ಆಂಶಿಕವಾಗಿ ಪ್ರಾಯೋಗಿಕ ವಿಮರ್ಶಾ ವಿಧಾನಗಳನ್ನು ಉಪಯೋಗಿಸಿಕೊಂಡ ಬರಹಗಳಾಗಿವೆ. ಈ ಬರಹಗಳು ಪರಿಚಯಾತ್ಮಕವಾಗಿದ್ದು ಓದುಗರಿಗೆ ಕಾವ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಮಹಾಕವಿ ಕುವೆಂಪು ಅವರ “ಸರೋವರದ ಸಿರಿಗನ್ನಡಿ” ಲೇಖನವಂತೂ ತನ್ನ ಪ್ರಬುದ್ಧ ವಿಚಾರ ಸರಣಿ, ಸ್ವಾರಸ್ಯಕರ ನಿರೂಪಣಾ ಶೈಲಿ ಮತ್ತು ಕಾವ್ಯಮಯ ಭಾಷೆಯಿಂದ ಗಮನ ಸೆಳೆಯುತ್ತದೆ.
ಪೂರ್ಣಚಂದ್ರ ತೇಜಸ್ವಿಯವರ ಆದಿಕವಿ ಪಂಪನ ಕುರಿತ “ಪಂಪ – ಒಂದು ಮೌಲ್ಯ ವಿವೇಚನೆ” ಲೇಖನ ಪಂಪನ ಕೃತಿಗಳು ಪ್ರತಿಪಾದಿಸುವ ಸಾರ್ವಕಾಲಿಕ ಮಾನವೀಯ ಮೌಲ್ಯಗಳು ಮತ್ತು ಅವುಗಳ ಪ್ರಸ್ತುತತೆಯ ಕುರಿತು ಅನೇಕ ಒಳನೋಟಗಳನ್ನು ನೀಡುತ್ತದೆ. ಪಂಪನ ಕೃತಿಗಳ ಮರು ಓದು ಮತ್ತು ಅಧ್ಯಯನದ ಅವಶ್ಯಕತೆಯ ಕುರಿತ ತೇಜಸ್ವಿಯವರ ಅಭಿಪ್ರಾಯಗಳು ಗಮನಾರ್ಹವಾಗಿವೆ.
ನವ್ಯ ವಿಮರ್ಶಕ ಎಂ.ಜಿ.ಕೃಷ್ಣಮೂರ್ತಿಯವರ “ಐದು ವಚನಗಳು – ಒಂದು ವಿಶ್ಲೇಷಣೆ” ವಚನಗಳ ಅರ್ಥವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ ಬರಹ. ಎಂ.ಜಿ.ಕೃಷ್ಣಮೂರ್ತಿಯವರು ಇಲ್ಲಿ ವಚನಗಳನ್ನು ಅರ್ಥೈಸುವುದರೊಂದಿಗೆ ವಿಮರ್ಶೆಗೊಳಪಡಿಸಿದ್ದಾರೆ. ಎಚ್.ಎಂ.ಚೆನ್ನಯ್ಯನವರ “ಬಸವಣ್ಣನವರ ನಾಲ್ಕು ವಚನಗಳು” ಲೇಖನಕ್ಕಿಂತ ಎಂ.ಜಿ.ಕೃಷ್ಣಮೂರ್ತಿಯವರ ಲೇಖನ ಹೆಚ್ಚು ಪ್ರಬುದ್ಧ ಮತ್ತು ವಿಶ್ಲೇಷಣಾತ್ಮಕವಾಗಿದೆ.
ವರಕವಿ ಬೇಂದ್ರೆಯವರ “ಜೋಗಿ” ಕವಿತೆಯ ಬಗ್ಗೆ ಸುಮತೀಂದ್ರ ನಾಡಿಗರು ಬರೆದ ಬರಹ “ಜೋಗಿ” ಕವನಕ್ಕೆ ಉತ್ತಮ ಪ್ರವೇಶವನ್ನು ಒದಗಿಸುತ್ತದೆ. ಜನಪ್ರಿಯ ಶೈಲಿಯಲ್ಲಿ ಬರೆದ ಅನುಭಾವ ಗೀತೆಯಂತಿರುವ “ಜೋಗಿ” ಹಲವು ಅರ್ಥಗಳನ್ನು ಹೊಂದಿರುವ ಸೊಗಸಾದ ಕವಿತೆ. ಇಂತಹ ಮಹತ್ವದ ಕವನವನ್ನು ತುಂಬ ಚೆನ್ನಾಗಿ ಗ್ರಹಿಸಿ, ಅರ್ಥೈಸಿರುವ ನಾಡಿಗರ ಲೇಖನ ಚೆನ್ನಾಗಿ ಮೂಡಿ ಬಂದಿದೆ.
ಕವಿ ಮತ್ತು ಕಾವ್ಯಮೀಮಾಂಸಕರಾದ ಜಿ.ಎಸ್.ಶಿವರುದ್ರಪ್ಪನವರು ಖ್ಯಾತ ಕವಿ ಪು.ತಿ.ನ. ಅವರ “ಪ್ರತೀಕ್ಷೆ” ಕವನದ ಕುರಿತ ಲೇಖನದಲ್ಲಿ ಪು.ತಿ.ನ. ಅವರ ಕಾವ್ಯದ ಕೆಲವು ವಿಶೇಷತೆಗಳನ್ನು ಗುರುತಿಸಿದ್ದಾರೆ. ಪು.ತಿ.ನ. ಅವರ “ಪ್ರತೀಕ್ಷೆ” ಕವನ ಹೇಗೆ ನವೋದಯ ಪರಂಪರೆಯಲ್ಲಿ ಬಂದ ಶ್ರೇಷ್ಠ ಕವನಗಳಲ್ಲೊಂದು ಎಂಬುದನ್ನು ಜಿ.ಎಸ್.ಶಿವರುದ್ರಪ್ಪ ತಮ್ಮ ಲೇಖನದಲ್ಲಿ ಸಾಧಾರವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡದ ಅತ್ಯಂತ ಜನಪ್ರಿಯ ಕವಿಯಾದ ಕೆ.ಎಸ್.ನರಸಿಂಹಸ್ವಾಮಿಯವರ ಪ್ರಮುಖ ಕವನಗಳಾದ “ಗಡಿಯಾರದಂಗಡಿಯ ಮುಂದೆ” ಮತ್ತು “ಬಿಳಿಯ ಹೂಗಳ ಕವಿತೆ ಗೋರಿಗಳ ಮೇಲೆ” ಕುರಿತ ಚನ್ನಯ್ಯನವರ ಬರಹದಲ್ಲಿ ಕವಿತೆಗಳನ್ನು ಪದಶಃ ಅರ್ಥೈಸಲು ಯತ್ನಿಸಿರುವುದನ್ನು ಕಾಣಬಹುದು. ನವ್ಯ ಮಾರ್ಗದಲ್ಲಿ ಬಂದ ಅತ್ಯುತ್ತಮ ಕವಿತೆಗಳಲ್ಲೊಂದಾದ “ಗಡಿಯಾರದಂಗಡಿಯ ಮುಂದೆ” ಹಲವು ಅರ್ಥಗಳನ್ನು ಧ್ವನಿಸುವ ಸಂಕೀರ್ಣ ರಚನೆ. ನವ್ಯ ಲೇಖಕರಾದ ಚನ್ನಯ್ಯನವರು ತಮ್ಮ ಬರಹದಲ್ಲಿ ಕವಿತೆಯ ಕುರಿತು ತುಂಬ ಉತ್ಸಾಹದಿಂದ ಚರ್ಚಿಸಿದ್ದಾರೆ.
ಕನ್ನಡದ ಮೊದಲ ಪೂರ್ಣ ಪ್ರಮಾಣದ ಪ್ರಾಯೋಗಿಕ ವಿಮರ್ಶಾ ಲೇಖನವೆಂಬ ಹೆಗ್ಗಳಿಕೆ ಪಡೆದ ಗೋಪಾಲಕೃಷ್ಣ ಅಡಿಗರ “ಭೂತ” ಕವನದ ಕುರಿತ ಅನಂತಮೂರ್ತಿಯವರ “ಅಡಿಗರ ಭೂತ ಒಂದು ವಿಶ್ಲೇಷಣೆ” ಬರಹ ಅಡಿಗರ ಪದ್ಯವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂಬಂತಹ ಕಾಲದಲ್ಲಿ ಬಂದದ್ದು. ತುಂಬ ಕ್ಲಿಷ್ಟ ಮತ್ತು ಸಂಕೀರ್ಣ ರಚನೆಯಾದ “ಭೂತ” ಕವಿತೆಯನ್ನು ತಮ್ಮ ಪ್ರಖರವಾದ ವಿಮರ್ಶನ ಪ್ರತಿಭೆಯಿಂದ ತುಂಬಾ ಚೆನ್ನಾಗಿ ಅರ್ಥೈಸಿ ವಿಮರ್ಶಿಸಿದ್ದಾರೆ. “ಭೂತ” ಎಂದರೆ ಇಲ್ಲಿ ಭೂತಕಾಲ, ಭೂತ ಮತ್ತು ಪ್ರಜ್ಞಾರಹಿತ ಪಾತಾಳ ಎಂದು ವಿಶ್ಲೇಷಿಸುವ ಮೂಲಕ ಆ ಕವಿತೆಯ ಮಹತ್ವವನ್ನು ಮನಗಾಣಿಸಿದ್ದಾರೆ. ಉತ್ತಮ ಕವಿತೆಯೊಂದರ ಕುರಿತು ಬಂದ ಉತ್ತಮ ವಿಮರ್ಶಾ ಲೇಖನಕ್ಕೆ ಅನಂತಮೂರ್ತಿಯವರ “ಅಡಿಗರ ಭೂತ ಒಂದು ವಿಶ್ಲೇಷಣೆ” ಲೇಖನ ಒಂದು ಒಳ್ಳೆಯ ಉದಾಹರಣೆಯಾಗಿದೆ.
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ “ಅಡಿಗರ ವರ್ಧಮಾನ” ಮತ್ತು ಎಂ.ಜಿ.ಕೃಷ್ಣಮೂರ್ತಿಯವರ “ಗೋಪಾಲಕೃಷ್ಣ ಅಡಿಗರ ಭೂಮಿಗೀತ” ಲೇಖನಗಳು ಅಡಿಗರ ಪ್ರಖ್ಯಾತ ಕವಿತೆಗಳಾದ “ವರ್ಧಮಾನ” ಮತ್ತು “ಭೂಮಿಗೀತ” ಪದ್ಯಗಳು ಏಕೆ ಕನ್ನಡದ ಮಹತ್ವದ ಕವನಗಳು ಎಂಬುದನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಣೆಗೊಳಪಡಿಸಿ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿವೆ.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ “ಮಬ್ಬಿನಿಂದ ಮಬ್ಬಿಗೆ” ಕವನದ ಕುರಿತ ಲೇಖನದಲ್ಲಿ ಜಿ.ಎಚ್.ನಾಯಕರು ಕವಿತೆಯನ್ನು ತುಂಬ ಗಂಭೀರವಾಗಿ ಅಭ್ಯಸಿಸಿ ಈ ಕವನ ಹೇಗೆ ಕವಿ ಶಿವರುದ್ರಪ್ಪನವರ ಕಾವ್ಯಪ್ರಯೋಗ ಮತ್ತು ಕಾವ್ಯಸಿದ್ಧಿಯ ಪ್ರಾತಿನಿಧಿಕ ಕವಿತೆಯೆಂದು ವಿವರವಾದ ವಿಶ್ಲೇಷಣೆಯ ಮೂಲಕ ಸಾಬೀತು ಪಡಿಸಿದ್ದಾರೆ.
ಜಿ.ಎಸ್.ಶಿವರುದ್ರಪ್ಪನವರ ಖ್ಯಾತ ಕವನಗಳಲ್ಲೊಂದಾದ “ಮುಂಬೈ ಜಾತಕ”ದ ಕುರಿತ ಚಂದ್ರಶೇಖರ ಕಂಬಾರರ ಲೇಖನ ಪರಿಚಯಾತ್ಮಕ ಸ್ವರೂಪದ ಬರಹವಾಗಿದೆ. ಈ ಲೇಖನ ಒಳ್ಳೆಯ ಕನ್ನಡ ಅಧ್ಯಾಪಕರೊಬ್ಬರು ಕವಿತೆಯೊಂದರ ಕುರಿತು ತಮ್ಮ ವಿದ್ಯಾರ್ಥಿಗಳಿಗೆ ತುಂಬ ಚೆನ್ನಾಗಿ ವಿವರಣೆ ನೀಡುವಂತಿದೆ. ಇಲ್ಲೆಲ್ಲೂ ಕವಿತೆಯ ಕುರಿತು ವಿಮರ್ಶಾತ್ಮಕ ಒಳನೋಟಗಳು ಕಂಡು ಬರುವುದಿಲ್ಲ.
ನವ್ಯದ ಪ್ರಮುಖ ಕವಿ ಬಿ.ಸಿ.ರಾಮಚಂದ್ರ ಶರ್ಮರ “ಏಳು ಸುತ್ತಿನ ಕೋಟೆ” ಕವನದ ಕುರಿತ ದೇಶ ಕುಲಕರ್ಣಿಯವರ ಬರಹ ಆಸಕ್ತಿದಾಯಕವಾಗಿದೆ. ರಾಮಚಂದ್ರ ಶರ್ಮರ ಕಾವ್ಯದಲ್ಲಿ ಪ್ರತಿಮೆಗಳ ಬಳಕೆಯ ಕುರಿತ ಚರ್ಚೆ ಗಮನಾರ್ಹವಾಗಿದೆ. ರಾಮಚಂದ್ರ ಶರ್ಮರ ಕಾವ್ಯದಲ್ಲಿ ಸಂಕೇತಗಳ ಬಳಕೆ ಯಾವ ರೀತಿ ಯಶಸ್ವಿಯಾಗುವಂತೆ ಮಿತಿಯೂ ಆಗುತ್ತದೆಯೆಂಬುದರ ಬಗೆಗೆ ಹೊಸ ಹೊಳಹುಗಳಿವೆ.
ಲಕ್ಷ್ಮೀನಾರಾಯಣ ಭಟ್ಟರು ಮೆಲುದನಿಯ ಕವಿಯಾದ ಎ.ಕೆ.ರಾಮಾನುಜನ್ನರ “ತಿರುಗಿ ಬಂದೆ” ಕವನದ ಬಗ್ಗೆ ಬರೆಯುತ್ತ ಸಂಕೀರ್ಣ ವಸ್ತುವೊಂದನ್ನು ಇಷ್ಟು ಸರಳವಾಗಿಯೂ ಹೇಗೆ ಹೇಳಬಹುದೆಂಬುದನ್ನು ರಾಮಾನುಜನ್ ಯಶಸ್ವಿಯಾಗಿ ತೋರಿಸಿದ್ದನ್ನು ಗುರುತಿಸಿದ್ದಾರೆ.
ಡಿ.ಎ.ಶಂಕರರ “ಎ.ಕೆ.ರಾಮಾನುಜನ್ನರ ಕಾವ್ಯ – ಒಂದು ವಿವೇಚನೆ” ಲೇಖನದಲ್ಲಿ ರಾಮಾನುಜನ್ನರ “ನಲವತ್ತರ ನೆರಳು” ಕವನವನ್ನು ವಿಶ್ಲೇಷಿಸುತ್ತಾ ರಾಮಾನುಜನ್ನರ ಕಾವ್ಯದ ಮಹತ್ವ ಮತ್ತು ಮಿತಿಗಳನ್ನು ಗುರುತಿಸಲು ಯತ್ನಿಸಿದ್ದಾರಾದರೂ ಅದರಲ್ಲಿ ಅವರು ಸಫಲವಾಗಿಲ್ಲ. ಡಿ.ಎ.ಶಂಕರರ ಬರಹ ರಾಮಾನುಜನ್ನರ ಕಾವ್ಯದ ಕುರಿತು ಹೊಸ ಒಳನೋಟಗಳನ್ನೇನೂ ಕೊಡುವುದಿಲ್ಲ.
ಈ ಸಂಕಲನದ ಚರ್ಚಾಸ್ಪದ ಲೇಖನಗಳೆಂದರೆ ಮಹಾಕವಿ ಕುವೆಂಪು ಅವರ “ದೇವರ ರುಜು ಮಾಡಿದನು” ಕವನದ ಕುರಿತು ಎಂ.ಎಸ್.ಜಯರಾಂ ಮತ್ತು ಚೆನ್ನವೀರ ಕಣವಿಯವರ “ಕಾಲ ನಿಲ್ಲುವುದಿಲ್ಲ” ಕವನದ ಕುರಿತು ಆರ್.ಸಿ.ಕುಲಕರ್ಣಿಯವರ ಲೇಖನಗಳು.
ಕುವೆಂಪು ಮತ್ತು ಚೆನ್ನವೀರ ಕಣವಿಯವರ ಅತ್ಯುತ್ತಮ ಕವಿತೆಗಳಾದ “ದೇವರು ರುಜು ಮಾಡಿದನು” ಮತ್ತು “ಕಾಲ ನಿಲ್ಲುವುದಿಲ್ಲ” ಕುರಿತ ಜಯರಾಂ ಮತ್ತು ಕುಲಕರ್ಣಿಯವರ ಲೇಖನಗಳು ಈ ಕವಿತೆಗಳನ್ನು ಟೀಕಿಸಲೆಂದೇ ಬರೆದಂತಿವೆ. ಇಂತಹ ಒಳ್ಳೆಯ ಕವಿತೆಗಳಲ್ಲೂ ಇಲ್ಲಸಲ್ಲದ ದೋಷಗಳನ್ನು ಹುಡುಕಿ ಪಟ್ಟಿ ಮಾಡಿ ಇದು ಕವನವೇ ಅಲ್ಲ ಎಂಬಂತಹ ನಿಲುವುಗಳು ತಳೆಯುವುದು ವಿಮರ್ಶೆಯಾಗಲಾರದು. ಈ ಕವನಗಳನ್ನು ಹಲವು ಕೋನಗಳಿಂದ ಗ್ರಹಿಸಿ ಅರ್ಥಮಾಡಿಕೊಳ್ಳಲು ವಿಫಲರಾಗಿರುವ ಲೇಖಕರು ಪೂರ್ವಾಗ್ರಹಪೀಡಿತರಾಗಿ ಕವನಗಳನ್ನು ಟೀಕಿಸುವುದೇ ವಿಮರ್ಶೆ ಎಂದು ಬಗೆದಂತಿದೆ. ನವ್ಯ ಪಂಥದ ಲೇಖಕರಾದ ಜಯರಾಂ ಮತ್ತು ಕುಲಕರ್ಣಿ ನವ್ಯೇತರ ಕವಿಗಳಾದ ಕುವೆಂಪು ಮತ್ತು ಚೆನ್ನವೀರ ಕಣವಿಯವರ ಕುರಿತು ಉದ್ದೇಶಪೂರ್ವಕವಾಗಿಯೇ ಇಂತಹ ಲೇಖನ ಬರೆದಿರುವಂತೆ ಕಾಣುತ್ತದೆ.
ನವ್ಯ ಲೇಖಕರಿಗೆ ನವ್ಯೇತರ ಲೇಖಕರ ಕುರಿತು ಇದ್ದ ಅಸಹನೆ ಮತ್ತು ವಿಮರ್ಶೆಯ ಹೆಸರಲ್ಲಿ ನವ್ಯರು ತೋರಿಸಿದ ಸಣ್ಣತನ ಮತ್ತು ಅವರು ಮಾಡಿದ ಕೀಳುಮಟ್ಟದ ರಾಜಕೀಯ ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಹ ವಿಮರ್ಶಾ ರಾಜಕೀಯಕ್ಕೆ ಒಳ್ಳೆಯ ಉದಾಹರಣೆಯೆಂದರೆ ಈ ಸಂಕಲನದ ಜಯರಾಂ ಮತ್ತು ಕುಲಕರ್ಣಿಯವರ ಕಳಪೆ ಲೇಖನಗಳು. ಕುವೆಂಪು ಅವರ “ದೇವರು ರುಜು ಮಾಡಿದನು” ಮತ್ತು ಚೆನ್ನವೀರ ಕಣವಿಯವರ “ಕಾಲ ನಿಲ್ಲುವುದಿಲ್ಲ” ಕನ್ನಡದ ಅತ್ಯುತ್ತಮ ಕವಿತೆಗಳು. ಜಯರಾಂ ಮತ್ತು ಕುಲಕರ್ಣಿಯಂತಹ ರೋಗಗ್ರಸ್ತ ಮನಸ್ಥಿತಿಯ ಲೇಖಕರ ಕಳಪೆ ವಿಮರ್ಶೆಯಿಂದ ಈ ಕವನಗಳ ಮಹತ್ವ ಕಡಿಮೆಯಾಗುವುದಿಲ್ಲ. ತಮ್ಮ ಅಂತಃಸತ್ವದಿಂದಲೇ ಬಹುಕಾಲ ಬಾಳಬಲ್ಲ ಶಕ್ತಿ ಈ ಕವಿತೆಗಳಿಗಿದೆ. ಲಕ್ಷ್ಮೀನಾರಾಯಣ ಭಟ್ಟರು “ಪ್ರಾಯೋಗಿಕ ವಿಮರ್ಶೆ”ಯ ಪರಿಷ್ಕೃತ, ವಿಸ್ತೃತ ಆವೃತ್ತಿಯಲ್ಲಿ ಇಂತಹ ಕಳಪೆ ಗುಣಮಟ್ಟದ ಲೇಖನಗಳನ್ನು ಬಿಟ್ಟಿದ್ದರೆ ಸಂಕಲನದ ಮೌಲ್ಯ ಹೆಚ್ಚುತ್ತಿತ್ತು.
“ಪ್ರಾಯೋಗಿಕ ವಿಮರ್ಶೆ”ಯಲ್ಲಿ ಒಟ್ಟು ಇಪ್ಪತ್ಮೂರು ವಿಮರ್ಶಾ ಲೇಖನಗಳಿವೆ. ಒಂದೆರಡು ಕಳಪೆ ಮತ್ತು ಕೆಲವು ಸಾಧಾರಣ ಲೇಖನಗಳಿದ್ದರೂ ಸಹ ಬಹುತೇಕ ಲೇಖನಗಳು ಪ್ರಾಯೋಗಿಕ ವಿಮರ್ಶೆಯ ಮೂಲಕ ಕಾವ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವಾಗುವಂತಿವೆ. ಕೆಲವು ಅತ್ಯುತ್ತಮ ವಿಮರ್ಶೆಯ ಲೇಖನಗಳು ಸಂಕಲನದ ಮಹತ್ವ ಹೆಚ್ಚಿಸಿರುವುದನ್ನು ಮರೆಯುವಂತಿಲ್ಲ.
“ಪ್ರಾಯೋಗಿಕ ವಿಮರ್ಶೆ” ಕನ್ನಡದಲ್ಲಿ ಪ್ರಕಟವಾದ ಆ ಬಗೆಯ ಮೊದಲ ವಿಮರ್ಶಾ ಕೃತಿ. ಹಲವು ಮಿತಿಗಳ ನಡುವೆಯೂ ಐವತ್ತು ವರ್ಷಗಳ ಹಿಂದೆ ಪ್ರಕಟವಾಗಿದ್ದ ಈ ಪುಸ್ತಕಕ್ಕೆ ಚಾರಿತ್ರಿಕ ಮಹತ್ವವಿದೆ. “ಪ್ರಾಯೋಗಿಕ ವಿಮರ್ಶೆ” ಉದಯೋನ್ಮುಖ ಸಾಹಿತಿಗಳು, ಕಾವ್ಯಾಭ್ಯಾಸಿಗಳು ಮತ್ತು ಸಾಹಿತ್ಯಾಸಕ್ತರು ಅಗತ್ಯವಾಗಿ ಓದಲೇಬೇಕಾದ ಸಂಗ್ರಹಯೋಗ್ಯ ಕೃತಿ.*
ಅಡಿಟಿಪ್ಪಣಿಗಳು
* ಸದ್ಯ ಬರೆಯುತ್ತಿರುವ ಅನೇಕ ಉದಯೋನ್ಮುಖ ಸಾಹಿತಿಗಳಲ್ಲಿ ಶೇ.75ರಷ್ಟು ಜನರಿಗೆ ಕನ್ನಡ ಸಾಹಿತ್ಯ ಪರಂಪರೆಯ ಬಗೆಗೆ ಅರಿವೇ ಇಲ್ಲ. ನಮ್ಮ ಬಹುತೇಕ ಮಹತ್ವದ ಸಾಹಿತಿಗಳನ್ನು ಇಂತಹವರು ಓದಿರುವುದೇ ಇಲ್ಲ. ಇನ್ನು ಅನೇಕ ಉದಯೋನ್ಮುಖ ಸಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿಯೇ ಹುಟ್ಟಿ, ಬೆಳೆದು, ಖ್ಯಾತರಾಗಿ ಕೊನೆಗೆ ಅಲ್ಲಿಯೇ ಸಾಯುತ್ತಾರೆ. ಪ್ರಕಟಣೆ ಸುಲಭವಾಗಿರುವ ಪ್ರಸ್ತುತ ದಿನಗಳಲ್ಲಿ ನಾಲ್ಕು ಸಾಲು ಬರೆಯುವವರೆಲ್ಲ ಸಾಹಿತಿಗಳೆಂದು ಸ್ವಯಂ ಘೋಷಿಸಿಕೊಳ್ಳುತ್ತಾರೆ. ಇಂತಹ ಸ್ವಯಂಘೋಷಿತ ಸಾಹಿತಿಗಳು ಪುಸ್ತಕ ಪ್ರಕಟಣೆ, ಗಲ್ಲಿ ಗಲ್ಲಿಗಳಲ್ಲಿ ಉಡುಪಿ ಹೊಟೇಲುಗಳಂತೆ ತಲೆಯೆತ್ತಿರುವ ಪ್ರತಿಷ್ಠಾನಗಳು ನೀಡುವ ಪ್ರಶಸ್ತಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಲೈಕು, ಕಮೆಂಟು ಮತ್ತು ಶೇರುಗಳನ್ನು ಸಂಭ್ರಮಿಸಿ ಸುಖಿಸುತ್ತಾರೆ. ಅನೇಕ ಉದಯೋನ್ಮುಖ ಲೇಖಕ/ಲೇಖಕಿಯರಲ್ಲಿ ಈ ಗೀಳು ಹೆಚ್ಚಾಗಿಯೇ ಕಂಡು ಬರುತ್ತದೆ. ಸದ್ಯ ಕನ್ನಡ ಸಾಹಿತ್ಯದಲ್ಲಿ ಮಾನ ಬಿಟ್ಟು ಸನ್ಮಾನ ಪಡೆಯುವ ಇಂತಹ ಸಾಹಿತಿಗಳು ಮತ್ತು ಕೃತಿಗಳ ಸಂಖ್ಯೆ ಪ್ಲಾಸ್ಟಿಕ್ ಕಸದಂತೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ನಿಯಂತ್ರಣ ಎಷ್ಟು ಕಷ್ಟವೋ ಇಂತಹ ಸ್ವಯಂಘೋಷಿತ ಸಾಹಿತಿಗಳ ಕಳಪೆ ಬರಹಗಳ ನಿರ್ಮೂಲನೆ ಮತ್ತು ನಿಯಂತ್ರಣ ಅಷ್ಟೇ ಕಷ್ಟ.