ಬಂದಿನ್ನೂ ರಾತ್ರಿಯು ಕಳೆದಿಲ್ಲ ಹೋಗುವ ಮಾತೇಕೆ ಸಖಿ ಮಧು ಬಟ್ಟಲು ತುಟಿ ಸೋಕಲಿಲ್ಲ ಹೋಗುವ ಮಾತೇಕೆ ಸಖಿ ತಂದಿಟ್ಟ ಸವಿಜೇನು ಸವಿದಿಲ್ಲ ಹಣ್ಣುಗಳ ರುಚಿ ನೋಡಿಲ್ಲ ಮುಡಿದ ಮಲ್ಲಿಗೆಯ ಕಂಪು ಹರಡಿಲ್ಲ ಹೋಗುವ ಮಾತೇಕೆ ಸಖಿ ಹಚ್ಚಿಟ್ಟ ಹಣತೆಯ ಎಣ್ಣೆ ತೀರಿಲ್ಲ ಬೆಳಗಲಿಲ್ಲ ಮನ ಮನೆ ಸೂರ್ಯನಿನ್ನೂ ತೆಕ್ಕೆಗೆ ಸೇರಲಿಲ್ಲ ಹೋಗುವ ಮಾತೇಕೆ ಸಖಿ ಕೆನ್ನೆರಂಗು ಕರಗಿಲ್ಲ ಗುಲಾಬಿಯ ಪಕಳೆಗಳು ಉದುರಲಿಲ್ಲ ವೀಣೆಯಲಿ ಹೊಸರಾಗ ನುಡಿಸಲಿಲ್ಲ ಹೋಗುವ ಮಾತೇಕೆ ಸಖಿ ಏಸೋ ದಿನಗಳ ಮೇಲೆ ಬಂದಿರುವಿ ಕನಸಿನ್ನೂ ನನಸಾಗಿಲ್ಲ ಮೌನ ಮುರಿದು ಮನಸು ಬೆರೆಯಲಿಲ್ಲ ಹೋಗುವ ಮಾತೇಕೆ ಸಖಿ ಶಬರಿಯಾಗಿ ಕಾದೆ,ಕಲ್ಲಾದ ಅಹಲ್ಯೆಯ ಶಾಪ ವಿಮೋಚನೆ ಇಲ್ಲ 'ಹೊನ್ನಸಿರಿ' ಮಾತೇ ಮುತ್ತಾಗಿಲ್ಲ ಹೋಗುವ ಮಾತೇಕೆ ಸಖಿ @@@@@@@
ಗಜಲ್
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಸಿದ್ಧರಾಮ ಹೊನ್ಕಲ್
ಸಿದ್ಧರಾಮ ಹೊನ್ಕಲ್
ಮೂಲ ಯಾದಗಿರಿ ಜಿಲ್ಲೆ.ವಾಸ ಶಹಾಪುರ.ಜನ್ಮ ಸ್ಥಳ:-ಸಗರನಾಡಿನ ಕೇಂದ್ರ ಸ್ಥಳ-ಸಗರ. ತಾ.ಶಹಾಪುರ. ಯಾದಗಿರಿ ಜಿಲ್ಲಾ
ಓದು; ಎಂ.ಎ,ಎಲ್ ಎಲ್ ಬಿ.,ಡಿಎನ್ಎಚ್ಇ., ಪಿಜಿಡಿಎಂಸಿಜೆ.
(ಹುದ್ದೆ; ವಿಭಾಗೀಯ ಆರೋಗ್ಯ ಶಿಕ್ಷಣಾಧಿಕಾರಿ,ಕಲಬುರ್ಗಿ ವಿಭಾಗ.ಸಮಾನಾಂತರ ಹುದ್ದೆ ಸಮಾಜಶಾಸ್ತ್ರ ಬೋಧಕರು ಆಗಿ ಸೇವೆ ಸಲ್ಲಿಸಿರುವರು)
ಗುಲ್ಬರ್ಗಾ ವಿವಿಯ ರಾಜಪುರೋಹಿತ ಕಥಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಸತತವಾಗಿ ಆರು ಸಲ ಕಥಾ ಪುರಸ್ಕಾರ. ಇದೇ ವಿ ವಿ ಯಿಂದ ನೆಲದ ಮರೆಯ ನಿಧಾನ..ಕಥಾ ಸಂಕಲನಕ್ಕೆ೨೦೦೬ ರಲ್ಲಿ, ಹಾಗೂ "ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ.." ೨೦೦೨ ರಲ್ಲಿ, ಮತ್ತು ೨೦೧೯ ರ ಸಾಲಿನಲ್ಲಿ "ಮೂರು ದೇಶ ನೂರೊಂದು ಅನುಭವ" ಹೀಗೆ ಎರಡು ಪ್ರವಾಸ ಕೃತಿಗೆ, ಒಂದು ಕಥಾ ಸಂಕಲನ ಸೇರಿ ಒಟ್ಟು ಮೂರುಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಒಂದೇ ವರ್ಷದಲ್ಲಿ ನಾಲ್ಕು ಉತ್ಕೃಷ್ಟವಾದ, ಅತ್ಯಂತ ಪ್ರೇಮೋನ್ಮಾದದ ಗಜಲ್ ಸಂಕಲನ ಪ್ರಕಟಿಸುವ ಮೂಲಕ ಗಜಲ್ ಸಾಹಿತ್ಯ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. *ಆಕಾಶಕ್ಕೆ ಹಲವು ಬಣ್ಣಗಳು,ಹೊನ್ನ ಮಹಲ್,ನಿನ್ನ ಪ್ರೇಮವಿಲ್ಲದೇ ಹಾಕಿ,ಆತ್ಮಸಖಿಯ ಧ್ಯಾನದಲಿ..*ಇವು ಅವರ ಪ್ರಕಟಿತ ಕೃತಿಗಳು.
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ಪಂಚನದಿಗಳ ನಾಡಿನಲ್ಲಿ ಪ್ರವಾಸ ಕಥನಕ್ಕೆ ಅದೇ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ,. ಇದೇ ಕೃತಿ ಕ್ಹೋಲಾಪುರ ವಿವಿಯಲ್ಲಿ ಎಂ.ಎ.ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಗಾಂಧಿಯ ನಾಡಿನಲ್ಲಿ ಕೃತಿಗೆ ಶ್ರೀ ವಿಜಯ ಹಾಗೂ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಈ ಕೃತಿ ಸೋಲಾಪುರ ವಿ ವಿ ಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಕಾಡು ಕಥೆ ಹಾಗೂ ಕತ್ತಲ ನೆಲದ ಕಪ್ಪು ಕಥೆ,ಒಟ್ಟು ಎರಡು ಕಥೆಗಳು, ಪರದೆ ಸುರಿಯುವ ಮುನ್ನ ಮತ್ತು ಬಯಲಾಟಗಳ ಸುತ್ತಮುತ್ತ.. ಹೀಗೆ ಎರಡು ಲಲಿತ ಪ್ರಬಂಧಗಳು ಗುಲ್ಬರ್ಗ ವಿವಿ, ಕೆಲವು ಕೃಷ್ಣದೇವರಾಯ ವಿವಿಯಲ್ಲಿ ಪದವಿಗಳಿಗೆ ಪಠ್ಯವಾಗಿ ಬೋಧಿಸಲ್ಪಟ್ಟಿವೆ.
ಕಥೆಗೆ ಸಂಚಯ ಸಾಹಿತ್ಯ ಪ್ರಶಸ್ತಿ, ಲಲಿತ ಪ್ರಬಂಧಕ್ಕೆ ಸಂಕ್ರಮಣ ಸಾಹಿತ್ಯ ಪುರಸ್ಕಾರ, ಕಲ್ಬುರ್ಗಿಯಿಂದ ಕಾಠಮಂಡುವಿನವರೆಗೆ ಪ್ರವಾಸ ಕೃತಿಗೆ ವಿಶ್ವಜೋತಿ ಪ್ರತಿಷ್ಠಾನದ ವಿಶ್ವ ಪ್ರಶಸ್ತಿ, ನೆಲದ ಮರೆಯ ನಿಧಾನ ಕಥಾಸಂಕಲನಕ್ಕೆ ಅಕ್ಷರಲೋಕದ ನಕ್ಷತ್ರ ಪುರಸ್ಕಾರ, ಅಮ್ಮ ಗೌರವ ಪುರಸ್ಕಾರ,ಕಲ್ಯಾಣರತ್ನ ಪ್ರಶಸ್ತಿ, ಸಗರನಾಡ ಸಿರಿ, ಕುಂವಿ ಕಥಾ ಪುರಸ್ಕಾರ, ಲಿಂ.ರೇವಣಸಿದ್ದಯ್ಯ ರುದ್ರಸ್ವಾಮಿ ಮಠರ ಸಾಹಿತ್ಯ ಪುರಸ್ಕಾರ, ಶ್ರೀ ಕೋರಿ ಸಿದ್ದೇಶ್ವರ ಕೃಪಾರತ್ನ ಪುರಸ್ಕಾರ, ಯಾದಗಿರಿ ಜಿಲ್ಲಾಡಳಿತದ ಹೆಮ್ಮೆಯ ಸಾಹಿತಿ ಗೌರವ ಪುರಸ್ಕಾರ, ಸುರಪುರದ "ಬಲವಂತ ಬಹರಿ ಬಹಾದ್ಧೂರ ಸಂಸ್ಥಾನದ ವತಿಯಿಂದ "ಡಾ.ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿ", ಸಾಹಿತ್ಯ ಸಾರಥಿ ಸಾಹಿತ್ಯ ಮಾಸಿಕದ "ಸಾಹಿತ್ಯ ಸಾರಥಿ" ಪುರಸ್ಕಾರ, ಕಸಾಪ ಕಲಬುರ್ಗಿ ತಾಲೂಕುದವರ ಸಾಹಿತ್ಯ ಪುರಸ್ಕಾರ, ಶ್ರೀ ಶರಣಗೌಡ ಪಾಟೀಲ ಸ್ಮರಣಾರ್ಥ ಜನಕಲ್ಯಾಣ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಬಸವ ಪುರಸ್ಕಾರ,ಮಹಾ ತಪಸ್ವಿ ಪರಮಪೂಜ್ಯ ಶ್ರೀ ಕುಮಾರಸ್ವಾಮಿ ಮಹಾಸ್ವಾಮಿಗಳು ಧಾರವಾಡ ಅವರ ಪೀಠಾಧಿಪತಿಗಳಾದ ಗೌರವಯುತ ಶ್ರೀ ಮುಕ್ಕಣ್ಣ ಕರಿಗಾರ ಅನುಭಾವಿಕ ಅಧಿಕಾರಿಗಳು ಕೊಡ ಮಾಡಿದ ಸಾಹಿತ್ಯ ಭೂಷಣ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಸಾಧಕ ಪುರಸ್ಕಾರ, ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಹಾಗೂ ಸಾಂಸ್ಕೃತಿಕ ನೃತ್ಯ ಸಂಘ ಕಲಬುರ್ಗಿ ಅವರಿಂದ ಸಂದಿದೆ. ಹೀಗೆ ಸುಮಾರು ೩೦ ಕಿಂತ ಹೆಚ್ಚು ಪುರಸ್ಕಾರಗಳು ಸಂದಿವೆ.
ಶ್ರೀ ಮಾನಯ್ಯ ಗೋನಾಲರು ಇವರ ಒಟ್ಟು ಕಥೆಗಳ ಮೇಲೆ ಅಧ್ಯಯನ ಮಾಡಿ ಎಂ.ಫಿಲ್ ಪದವಿ ಗುಲಬರ್ಗಾ ವಿವಿಯಿಂದ ಪಡೆದಿದ್ದಾರೆ. ಕಥೆ,ಲಲಿತ ಪ್ರಬಂಧ, ಕಾವ್ಯ,ಹೈಕು,ಗಜಲ್,ಸಂಪಾದನೆ, ಜೀವನ ಚಿತ್ರ, ಪ್ರವಾಸ ಕಥನ ಹೀಗೆ ಸುಮಾರು ೪೫ ಮೌಲ್ವಿಕ ಕೃತಿಗಳು ಪ್ರಕಟ ಆಗಿ ಜನ ಮನ ತಲುಪಿ ನಾಡಿನ ಹೆಸರಾಂತರ ಪಟ್ಟಿಯಲ್ಲಿ ಗುರ್ತಿಸಿಲಾಗುತ್ತಿದೆ.
ಯಾದಗಿರಿಯಲ್ಲಿ ೨೦೧೩ ರಲ್ಲಿ ನಡೆದ ಪ್ರಥಮ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ೨೦೧೭ ರಲ್ಲಿ ಶಹಾಪುರದಲ್ಲಿ ನಡೆದ ೨ನೇ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ೨೦೧೮ ರಲ್ಲಿ ಯಾದಗಿರಿಯಲ್ಲಿ ನಡೆದ ೪ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಗಳು ಸಂದಿವೆ.
ಗುಲಬರ್ಗಾ ವಿವಿಯಿಂದ ಕಾಯಕ ದಾಸೋಹಿ ಚರಬಸವ ಶರಣರು,ಜ್ಞಾನ ಗಂಗೋತ್ರಿ ಮೈಸೂರು ವಿವಿಯ ಬಸವ ಅಧ್ಯಯನ ಪೀಠದಿಂದ ಸಕಲೇಶ ಮಾದರಸ ಕೃತಿಗಳು ಪ್ರಕಟಗೊಂಡಿವೆ.ನಾಲ್ಕು ಕಥಾ ಸಂಕಲನ,ಆರು ಪ್ರವಾಸ ಕಥನ,ನಾಲ್ಕು ಲಲಿತ ಪ್ರಬಂಧ ಸಂಕಲನ, ಐದು ಕವನ ಸಂಕಲನ,ಈ ಮೂಲಕ ನಾಲ್ಕು ಗಜಲ್ ಸಂಕಲನ, ಒಂದು ಹೈಕು ಸಂಕಲನ ಹೀಗೆ ಇತರೆ ಸೇರಿ ಒಟ್ಟು ನಲವತ್ತೈದಕಿಂತ ಹೆಚ್ಚು ಕೃತಿಗಳ ಗಡಿ ದಾಟಿದ್ದಾರೆ. ನಾಡಿನ ಎಲ್ಲ ದೈನಿಕ,ಮಾಸಿಕ, ಕೆಲವು ಸಾಹಿತ್ಯಿಕ, ವಾರಪತ್ರಿಕೆಗಳು ಸೇರಿ ಇಲ್ಲಿಯವರೆಗೆ ನೂರಾರು ಬರಹಗಳು, ಪ್ರಕಟಗೊಂಡಿವೆ. ಅಷ್ಟೆ ಸಂಖ್ಯೆಯ ಉಪನ್ಯಾಸಗಳು, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.ಹವ್ಯಾಸಿ ಪತ್ರಕರ್ತರು ಹೌದು.ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರು. *ಹೊಸದಿಕ್ಕು* ಎನ್ನುವ ದ್ವೈಮಾಸಿಕ ಸಾಹಿತ್ಯ ಪತ್ರಿಕೆಯನ್ನು ಸಹ ಹಲವು ವರ್ಷಗಳ ಕಾಲ ನಡೆಯಿಸಿ ನೂರಾರು ಬರಹಗಾರರನ್ನು ಹುಟ್ಟುಹಾಕಿ, ನೂರಾರು ಕೃತಿಗಳಿಗೆ ಮುನ್ನುಡಿ,ಬೆನ್ನುಡಿ,ಅನಿಸಿಕೆ ಬರೆದು ಯುವ ಲೇಖಕರ ಬೆನ್ನುತಟ್ಟುವ ಕೆಲಸದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವದು ವಿಶೇಷ. ಸಾಹಿತ್ಯ ಪರಿಚಾರಕರು ಹೌದು. ಶಹಾಪುರ ತಾಲೂಕಾ ಕಸಾಪ ಗೌರವ ಕಾರ್ಯದರ್ಶಿಯಾಗಿ, ತಾಲೂಕಾ ಕಸಾಪ ಅಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲವಾಗಿ ಹಿಂದೆ ಕಾರ್ಯ ನಿರ್ವಹಿಸಿದ್ದಾರೆ. ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ 2020 ರಲ್ಲಿ ಸ್ಥಾಪಿಸಿ ರಾಜ್ಯ ಮಟ್ಟದ ಸಾಹಿತ್ಯ ಪುರಸ್ಕಾರ ಸಹ ಕುಟುಂಬದ ಹೆಸರಿನಲ್ಲಿ ನೀಡಿ ಅನೇಕ ಶ್ರೇಷ್ಠ ಲೇಖಕರಿಗೆ ಗೌರವಿಸುವ ಕೆಲಸ ಮಾಡುತ್ತಿದ್ದಾರೆ.
All Posts
3 thoughts on “ಗಜಲ್”
ಸೂಪರ್. ಮತ್ತೆ ಮತ್ತೆ ಓದಬೇಕೆನಿಸುತ್ತದೆ.. ಚೆನ್ನಾಗಿದೆ…
,ಅರ್ಥ ಗರ್ಭಿತ, ಭಾವ ಪೂರ್ಣ ಪದಗಳು.
ಓದಿ ಆನಂದಿಸುವಂತಿವೆ.
ಸುಂದರ ಭಾವಯಾನ. ಚಂದದ ಸಂಗ್ರಹಯೋಗ್ಯ ಗಜಲ್. ಭಾವಗಳು ತೊನೆದಾಡಿವೆ.