ಉತ್ತರಾಯಣ ಒಂದು ವಿಮರ್ಶೆ

  “ಉತ್ತರಾಯಣ” ವ್ಯಾಸರಾಯ ಬಲ್ಲಾಳರು ಬರೆದ ಅತ್ಯಂತ ಪ್ರಮುಖ ಕಾದಂಬರಿಗಳಲ್ಲಿ ಒಂದು. ಅವರ ಮೊದಲ ಮೂರು ಕಾದಂಬರಿಗಳು ಪ್ರಕಟವಾಗಿ ಎಷ್ಟೋ ವರ್ಷಗಳು ಕಳೆದ ನಂತರ ಉತ್ತರಾಯಣ ಪ್ರಕಟವಾಗಿದೆ. ಬೆಂಗ್ಳೂರು ವಿಶ್ವವಿದ್ಯಾಲಯವೂ ಸೇರಿದಂತೆ ಒಂದೆರಡು ವಿಶ್ವವಿದ್ಯಾಲಯಗಳಲ್ಲಿ ಅವಿಸ್ತಾರ ಪಠ್ಯವಾಗಿಯೂ ಈ ಕಾದಂಬರಿ ಅಪಾರ ಜನಮನ್ನಣೆಯನ್ನು ಪಡೆಯಿತು. ಏಕೀಕೃತ ಕರ್ನಾಟಕ ಐವತ್ತು ವರ್ಷಗಳ ಸಂಭ್ರಮಾಚರಣೆ ಸ್ಮರಣೆಯ ಸಂದರ್ಭದಲ್ಲಿ ಕನ್ನಡದ ಉತ್ತಮ ಕೃತಿಗಳನ್ನು ಸುಲಭ ಬೆಲೆಯಲ್ಲಿ ಸಾಹಿತ್ಯಾಭಿಮಾನಿಗಳಿಗೆ ನೀಡಬಯಸಿ ಸುವರ್ಣ ಸಾಹಿತ್ಯ ಗ್ರಂಥಮಾಲೆಯಡಿ ಈ ಕೃತಿಯನ್ನು ಜನರಿಗೆ ನೀಡಲಾಯಿತು.ಉತ್ತಮವಾದದ್ದು ಎಲ್ಲರಿಗೂ ದೊರಕುವಂತಾಗಲಿ ಎನ್ನುವ ಆಶಯ.

        ಲೇಖಕರೇ ಹೇಳುವಂತೆ ಉತ್ತರಾಯಣ ಹೆಸರು ಹಿಂದೂ ಪಂಚಾಂಗದೊಂದಿಗೆ ಥಳಕುಗೊಂಡಿದೆ. ಸೂರ್ಯನ ಚಲನೆಯನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂದು ವಿಭಾಗಿಸಲಾಗಿದೆ. ಉತ್ತರಾಯಣದಲ್ಲಿ ಸೂರ್ಯನು ಉತ್ತರ ಧ್ರುವರೇಖೆಯಲ್ಲಿ ಕಾಣಿಸುವ ಕಾಲ. ಡಿಸೆಂಬರ್ 22 ರಿಂದ ಜೂನ್ 21ರವರೆಗೆ ಉತ್ತರಾಯಣ ಚಲನೆ ಮತ್ತು ಜೂನ್ 21 ರಿಂದ ಡಿಸೆಂಬರ್ 22 ವರೆಗೆ ದಕ್ಷಿಣಾಯನ ಚಲನೆ ಎನ್ನುತ್ತಾರೆ. ಉತ್ತರಾಯಣವನ್ನು ಮಕರ ಸಂಕ್ರಮಣವೆಂದೂ ಕರೆಯುತ್ತಾರೆ.ಇದು ಅತಿ ಒಳ್ಳೆಯ ಕಾಲ ಮತ್ತು ಆ ವೇಳೆಯಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ. ಈ ವೇಳೆಯಲ್ಲೇ ಸಾವು ಸಂಭವಿಸಿದರೆ ನೇರ ಸ್ವರ್ಗಕ್ಕೆ ಹೋಗುತ್ತಾರೆಂಬ ಪ್ರತೀತಿ. ಮಹಾಭಾರತದಲ್ಲಿ ಭೀಷ್ಮನು ಶರಶಯ್ಯೆಯಲ್ಲಿದ್ದಾಗ, ಜೊತೆಗೆ ಇಚ್ಛಾ ಮರಣಿಯಾಗಿದ್ದರಿಂದ ಸಾವಿಗಾಗಿ ಉತ್ತರಾಯಣವನ್ನು ಕಾಯುತ್ತಾನೆ ಎಂದು ಹೇಳಲಾಗುತ್ತದೆ.ಅದಕ್ಕಾಗಿಯೇ ಈ ಕಾದಂಬರಿಯಲ್ಲಿ ಸಂಭವಿಸುವ ಸರಣಿ ಸಾವುಗಳು ಸ್ವರ್ಗಕ್ಕೆ ದಾರಿಯಾದವು ಎನ್ನುವುದನ್ನು ಸಾಧಿಸಲು ಲೇಖಕರೇ ಉತ್ತರಾಯಣ ಎಂದು ಹೆಸರಿಸಿದೆ ಎನ್ನುತ್ತಾರೆ. ಕಾದಂಬರಿಯ ಮುಖ್ಯ ಭೂಮಿಕೆಯಲ್ಲಿರುವ ರುಕ್ಮಿಣಿಯ ಆತ್ಮಹತ್ಯೆಯು ಅಪರಾಧವೆಂದು ಕಾಣದೇ, ಸ್ವರ್ಗಕ್ಕೆ ಹೋಗುವ ಒಳ್ಳೆ ದಾರಿಯನ್ನು ಹುಡುಕಿಕೊಂಡಿದ್ದಾಳೆ ಎಂಬಂತೆ ಚಿತ್ರಿಸಲಾಗಿದೆ. ತಮ್ಮ ಮುನ್ನುಡಿಯಲ್ಲಿ “ಉತ್ತರಾಯಣ ಬಂದಾಗ ಸ್ವರ್ಗದ ಬಾಗಿಲು ತೆರೆಯುವುದರಿಂದ ಸಾವು ಉತ್ತರಾಯಣದಲ್ಲೇ ಬರಬೇಕು ಎನ್ನುವ ಸಾಮಾನ್ಯವಾದ ನಂಬಿಕೆಯನ್ನು, ನೋವನ್ನು, ಸಾವಿನಂತೆ ಕಾಣಬೇಕಾಗಿ ಬರುವ ಈ ಕಾದಂಬರಿಯ ಹೆಚ್ಚಿನ ಪಾತ್ರಗಳ ಮಾನಸಿಕ ಕ್ರಿಯೆಯನ್ನು ಚಿತ್ರಿಸಲು ಸಂಕೇತವಾಗಿ ನಾನು ಬಳಸಿಕೊಂಡಿದ್ದೇನೆ.ಒಂದು ಕಾರಣದಿಂದ ಜೀವನದ ಕುರಿತಾದ ರುಚಿಯನ್ನೂ, ಶ್ರದ್ಧೆಯನ್ನೂ, ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾದರೂ ಅಂಥ ಅತೃಪ್ತಿಯ ಆಳದಲ್ಲೂ ಸುಖದ, ಸ್ವರ್ಗದ ಕನಸು ಪ್ರಕಟವಾಗುವುದು ಎಂಬುದನ್ನು ತೋರಿಸುವ ಯತ್ನ ನನ್ನದು” ಎಂದು ಲೇಖಕರೇ ಹೇಳುತ್ತಾರೆ.

        ಮಧ್ಯಮ ಮತ್ತು ಮಧ್ಯಮೋತ್ತಮ ವರ್ಗಗಳ ಜೀವನ ಸಂಕೀರ್ಣತೆ ಮತ್ತು ಅವುಗಳಿಂದ ಬಿಡುಗಡೆ ಹೊಂದಲು ಪಡುವ ಯತ್ನಗಳನ್ನು ಈ ಕಾದಂಬರಿ ಸಾರುತ್ತದೆ. ಅಕ್ಕ ತಂಗಿಯರಾದ ರುಕ್ಮೀಣಿ ಮತ್ತು ಹೇಮಾಳ ಜೀವನದ ಅಂತರ್ಯವನ್ನು ಹೇಳುತ್ತಲೇ ಅವರೊಂದಿಗೆ ಬರುವ ತಂದೆ, ತಾಯಿ, ಅಣ್ಣ ತಂಗಿಯ ಕ್ಲಿಷ್ಟ ಸಂದರ್ಭಗಳನ್ನು ಪ್ರದರ್ಶಿಸುತ್ತ ಹೋಗುತ್ತದೆ. ಕೊನೆಯದಾಗಿ ಹೇಮಾಳ ಒಮ್ಮೆಲೇ ಕಾಣೆಯಾಗುವಿಕೆ ಮತ್ತು ರುಕ್ಮೀಣಿಯ ಆತ್ಮಹತ್ಯೆಯೊಂದಿಗೆ ಕೊನೆಗೊಳ್ಳುತ್ತದೆ. ಬರುವ ಪಾತ್ರಗಳನ್ನು ವಿಶ್ಲೇಷಿಸುತ್ತಾ ಹೋದರೆ ಯಾವ ಪಾತ್ರ ಸುಖವನ್ನು ಪಡೆಯುತ್ತಿದೆ ಎಂದು ಯೋಚಿಸಿದಾಗ, ರುಕ್ಮಿಣಿ ಗಂಡ ಮತ್ತು ತನ್ನ ಎಳೆ ಗಂಡು ಮಗುವನ್ನು ಕಳೆದುಕೊಂಡ ವಿಧವೆ; ಹೇಮಾ ಮದುವೆಯಾಗಿ ಗಂಡನ ಪ್ರೀತಿ ಪಡೆಯುತ್ತಿದ್ದರೂ ಏನೋ ಅತೃಪ್ತಿ; ಇವರಿಬ್ಬರ ಜೀವನದಲ್ಲಿ ಬರುವ ರುಕ್ಮೀಣಿಯ ಮೇಲಾಧಿಕಾರಿ ಮೋಹನ್ ರಾವ್, ಮುದ್ದಿನ ಹೆಂಡತಿ ಕರ್ಪೂರದ ಗೊಂಬೆ ಯನ್ನು ಕಳೆದುಕೊಂಡ ವಿದುರ; ಆನಂದ ಮಾವ ಹೆಂಡತಿಯನ್ನು ಕಳೆದುಕೊಂಡು, ಮನೆ ಬಿಟ್ಟು ಹೋದ ಮಗನ ದುಃಖವನ್ನು ಸಹಿಸುತ್ತಿರುವ ವಿದುರ; ಅಣ್ಣ ಗೋವಿಂದ ಅರೆಹುಚ್ಚ; ತಂದೆ ಕೇಶವರಾಯ ಇಳಿವಯಸ್ಸಿನಲ್ಲೂ ದುಡಿಯುವ ಅನಿವಾರ್ಯತೆ; ತಾಯಿ ಸಾವಿತ್ರಮ್ಮ ಇದನ್ನೆಲ್ಲ ನೋಡಿಕೊಂಡು ದಿನಾ ಕಣ್ಣೀರಾಗುವ ಗೃಹಿಣಿ; ಇನ್ನೂ ಸಣ್ಣ ತಂಗಿ ಗೌರಾ ಇವನ್ನೆಲ್ಲ ನೋಡುವಂತಹ ಕರ್ಮಿ. ಸಣ್ಣ ಪಾತ್ರವಾದ ಮೈರಾ ಕೂಡ ದುಃಖದಲ್ಲಿ ಮುಳುಗಿದ ಪಾತ್ರವೆಂದು ತಿಳಿಯುತ್ತದೆ. ಒಂದರ್ಥದಲ್ಲಿ ಎಲ್ಲರೂ ಅತೃಪ್ತ ಆತ್ಮಗಳೇ. ಇದ್ದುದರಲ್ಲಿ ಅವಿನಾಶ್ ಮತ್ತು ಜ್ಯೋತ್ಸ್ನಾ ಜೀವನ ಸಂತೃಪ್ತಿಯದಾಗಿದೆ.

     ಲೇಖಕರು ಮುಂಬಯಿಯಲ್ಲಿ ಕೆಲಸ ಮಾಡಿದ್ದರ ಫಲವೋ, ಕಾದಂಬರಿಯಲ್ಲಿ ಮುಂಬೈ ಸಿಟಿಯ ವರ್ಣನೆ ಮನಸೆಳೆಯುತ್ತದೆ. ಬೀದಿಗಳು, ವಾಹನ ಸಂಚಾರ, ಜನಜಂಗುಳಿ, ಭಿಕ್ಷುಕರ ಪರದಾಟ, ವೇಗದ ಜೀವನ, ತುಂಬಿದ ಹೊಟೇಲ್ಗಳು, ಬಸ್ಸುಗಳು, ಒಂದು ಕ್ಷಣವೂ ಮುಖ್ಯ ಎನ್ನುವ ಅವಸರ, ಕಾರ್ಖಾನೆಗಳಲ್ಲಿ ನಿಯಮಿತ ಶಬ್ದ, ನಿಶ್ಶಬ್ದವನ್ನು ಹುಡುಕಿದರೂ ಸಿಗದಂತಹ ಸಿಟಿ, ಯಾರು, ಯಾರಿಗಾಗಿ, ಏತಕೆ ಅನ್ನೋದೇ ಮರೆತಂತೆ ಯಂತ್ರದ ಹಾಗೆಯೇ ಜೀವನ ಕಾದಂಬರಿ ಪೂರ್ತಿ ಸೆಳೆಯುತ್ತದೆ.ಈ ಸಿಟಿಯಲ್ಲೇ ಹುಟ್ಟಿ, ಬೆಳೆದು ಜೀವನ ನಡೆಸುವ ಜೀವಗಳ ಪ್ರೀತಿ, ನಿರಾಕರಣೆ, ಹತಾಶೆ, ಸೋಲು, ನೋವು, ದುಃಖ, ಏಕತಾನತೆ, ಒಂಟಿತನ, ಆತ್ಮೀಯರ ಸರಣಿ ಸಾವುಗಳು, ಜೀವನದ ಗುರಿಯೇನು ಎಂದು ಕಾಣದ ಆತ್ಮಗಳ ಬಗ್ಗೆ ಕುತೂಹಲದ ಜೊತೆಗೆ ಬೇಸರವನ್ನುಂಟುಮಾಡುತ್ತವೆ.

     ಮುಂಬಯಿ ಶಹರಕ್ಕೆ ಹೊಂದುವಂತೆ ಕಾದಂಬರಿ ಯಂತ್ರ ಎನ್ನುವ ಶೀರ್ಷಿಕೆಯೊಂದಿಗೆ ಕಂಪನಿಯ ಆಫೀಸ್ ನಲ್ಲಿ ಪ್ರಾರಂಭವಾಗುತ್ತದೆ. ಇಬ್ಬರ ಹೆಣ್ಣಿನ ಜೀವನದಲ್ಲಿ ನುಸುಳುವ ಮೋಹನ್ ರಾವ್ ಬಿಸಿನೆಸ್ ನ ಸಂಬಂಧ, ಬೇಕಾಗುವ ಪತ್ರದ ಟೈಪ್ ಅರ್ಜೆಂಟಾಗಿ ಬೇಕೆನ್ನುವದರ ಜೊತೆಗೆ ಆರಂಭಿಸಿ, ರುಕ್ಮಿಣಿಯ ಕುಟುಂಬದ ಸುತ್ತ ಕಥೆ ಪಸರಿಸಿ ಕೊಳ್ಳುತ್ತ ಸಾಗುತ್ತದೆ. ಪ್ರೀತಿ ಮತ್ತು ಮೆಚ್ಚುಗೆ ನಡುವಿನ ಅಂತರವನ್ನು ಅರಿಯದ ರುಕ್ಮೀಣಿ ಪ್ರೀತಿಯ ಹತಾಶೆಯಲ್ಲೇ ಜೀವನವನ್ನು ಕೊನೆಗೊಳಿಸುತ್ತಾಳೆ. ಸ್ವಾತಂತ್ರ್ಯ, ಬೇಡಿಕೆ, ಆಸೆಗಳು, ನನ್ನ ಜೀವನ ಎನ್ನುವ ಲೋಲುಪತೆಯಲ್ಲಿ ತಂಗಿ ಹೇಮಾ ಮುಳುಗಿ ಜೀವನದ ಗುರಿಯನ್ನು ಅರಸುತ್ತಲೇ ಕಾಣೆಯಾಗುವುದು, ಓದುಗರಿಗೆ ಕೆಲವೊಮ್ಮೆ ಜೀವನದ ಸತ್ಯದ ದರ್ಶನವನ್ನು ತೋರಿದರೂ, ಮನದಾಳದಲ್ಲಿ ಬೇಸರವಾಗಿರುವುದಂತೂ ನಿಜ.

       ಮದುವೆಯಾಗಿ ಹೊಸದರಲ್ಲೇ ಅತಿ ಪ್ರೀತಿಸುವ ಗಂಡನನ್ನು ಕಳೆದುಕೊಂಡ ನತದೃಷ್ಟೆ ರುಕ್ಮೀಣಿ. ಪಾಲಿಗೆ ಬಂದದ್ದೆಂದು ತಿಳಿದು,ಮಗ ಭಾಸ್ಕರ ಜೊತೆಗಿದ್ದಾನೆ  ಎಂದು ನಿರಾಳವಾಗಿದ್ದಾಗ, ಮಗುವನ್ನೂ ಕಳೆದುಕೊಂಡು, ತಳ ಒಡೆದ ದೋಣಿಯಂತೆ ಜೀವನ ರುಕ್ಮೀಣಿಯದು.ಈ ಮಧ್ಯೆ ತಂಗಿ ಹೇಮಾಳ ಮದುವೆಯೊಂದೇ ಶುಭಕಾರ್ಯ.ಅದನ್ನು ಬಿಟ್ಟರೆ ಯಾವ   ಸಂತೋಷದ ಗಳಿಗೆಯನ್ನು ಕುಟುಂಬ ಕಂಡಿರಲ್ಲ. ಏತಕ್ಕಾಗಿ ಜೀವನ? ಮುಂದಿನ ಗುರಿಯೇನು? ಅನ್ನೋವಾಗ ಇಬ್ಬರು ತಂಗಿಯರ, ಮತ್ತು ಅಣ್ಣನ ಜವಬ್ದಾರಿ ರುಕ್ಮೀಣಿಯನ್ನು ಆವರಿಸುತ್ತದೆ. ಹೇಮಾಳ ಕೌಟುಂಬಿಕ ಜೀವನದ ಅಸ್ತವ್ಯಸ್ತತೆಯನ್ನು ತಾಳಲಾರದೇ ರುಕ್ಮೀಣಿಯ ತಂದೆ ಕೇಶವರಾಯರು ಸ್ವರ್ಗದ ದಾರಿಯನ್ನು ಕಂಡುಕೊಳ್ಳುತ್ತಾರೆ. ಅಣ್ಣ ಗೋವಿಂದ ಇಂಟರ್ ಸೈನ್ಸ್ ನಲ್ಲಿ ಫೇಲ್ ಆಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ತೊರೆದು, ಮುಂದೆ ಓದಲು ಸಾಧ್ಯವೇ ಇಲ್ಲವೆಂದು ಘೋಷಿಸಿ, ಮುನ್ಸಿಪಲ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ಒಬ್ಬ ಮದುವೆಯಾದ ಹೆಣ್ಣನ್ನು ಬೆನ್ನುಹತ್ತಿ, ಅದು ಸಫಲ ಆಗದಿದ್ದಾಗ ಅದೇ ಕಾರಣದಿಂದ ಇತ್ತ ಹುಚ್ಚನೂ ಅಲ್ಲದ ಜಾಣನೂ ಅಲ್ಲದ ಅರೆಹುಚ್ಚನ ಪಾತ್ರವನ್ನು ಹೊಂದುತ್ತಾನೆ.ಸಣ್ಣತಂಗಿ ಗೌರಾ ಮೆಟ್ರಿಕ್ ಪಾಸಾದಾಕೆ. ಅವಳ ಜವಾಬ್ದಾರಿಯೂ ಇವಳ ಮೇಲೆಯೇ. ಒಬ್ಬನೇ ಮಗನ ಮೇಲೆ ಆಸೆಯಿಟ್ಟು, ಒಳ್ಳೆಯ ನೌಕರಿ ಹಿಡಿದಾನೆಂದು ತಿಳಿದ ಅಪ್ಪನಿಗೆ ಗೋವಿಂದನ ಹುಚ್ಚು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಸಾವಿನ ಕೊನೆಯ ದಿನದವರೆಗೂ ಕೇಶವರಾಯ ದುಡಿಯಲೇ ಬೇಕಾದ ಸಂದರ್ಭ. ಒಬ್ಬ ಮಗಳು ವಿಧವೆ, ಇನ್ನೊಬ್ಬಳದು ಹೊಂದಾಣಿಕೆಯಾಗದ ಸಂಸಾರ, ಹುಚ್ಚ ಮಗ ಇವೆಲ್ಲವುಗಳ ಸಮ್ಮಿಶ್ರಣದಿಂದ ಹತಾಶೆಯಾದಾಗ ಕೇಶವರಾಯ ಎಲ್ಲ ಜವಾಬ್ದಾರಿಯನ್ನು ರುಕ್ಮೀಣಿಯ ಮೇಲೆ ಹೊರಿಸಿ ಕಣ್ಮುಚ್ಚಿದರು.ಮುಂದೆ ಏನು ಅನ್ನುವ ಪ್ರಶ್ನೆಗೆ ರುಕ್ಮೀಣಿಗೆ ಉತ್ತರ ಸಿಕ್ಕಿತ್ತು. ಮನೆಯ ಜವಾಬ್ದಾರಿ ರುಕ್ಮೀಣಿಗೆ ಕೆಲಸಕ್ಕೆ ಹೋಗುವ ಅನಿವಾರ್ಯತೆಯೊಂದಿಗೆ, ಒಂಟಿತನದಿಂದ, ಬೇಸರದಿಂದ ತುಸು ಮುಕ್ತಿ ಹೊಂದುವಂತೆ ಮಾಡಿತ್ತು. ಗಂಡಸಿನ ಆಶ್ರಯವಿಲ್ಲದ ಹೆಣ್ಣನ್ನು ಸಮಾಜ ಹೇಗೆ ನೋಡಿಕೊಳ್ಳುತ್ತದೆಂಬುದು ಸುಬ್ರಹ್ಮಣ್ಯಂ ಪಾತ್ರದಿಂದ ತಿಳಿಯುತ್ತದೆ. ಆಫೀಸ್ನಲ್ಲಿ ಪದೇ ಪದೇ ಕೊಡುವ ತೊಂದರೆ, ದೇಹ ಸ್ಪರ್ಶಿಸಲು ಹಾತೊರೆಯುವ ಕ್ಷುದ್ರ ಮನಸ್ಸನ್ನು ಸುಬ್ರಹ್ಮಣ್ಯಂ ಪ್ರತಿನಿಧಿಸುತ್ತಾನೆ.ಬೇಂದ್ರೆಯವರ ಕವಿತೆ “ಪುಟ್ಟ ವಿಧವೆ”ಯಲ್ಲಿ ವಿಧವೆಯನ್ನು ಕ್ಷುದ್ರ ಕಣ್ಣುಗಳಿಂದ ನೋಡುವ ಮುದ್ರೆ ಹಾಕುವ ಗುರುವನ್ನು ಸುಹ್ಮಣ್ಯಂ ನೆನಪಿಸುತ್ತಾನೆ.

        ಮೊದ ಮೊದಲು ಮೋಹನ್ ರಾವ್ ಎಂದರೆ ಅತಿ ಶಿಸ್ತು, ಹೇಳಿದ ಕೆಲಸ ಆಗಲೇಬೇಕು ಎನ್ನುವ ಮನೋಭಾವವನ್ನು ಕಂಡ ರುಕ್ಮಿಣಿ  ಹೆದರುತ್ತಿದ್ದರೂ ಕೆಲ ದಿನಗಳ ಸಂಪರ್ಕ, ಒಡನಾಟ, ವ್ಯಕ್ತಿಯ ತೊಂದರೆ ಅರ್ಥಮಾಡಿಕೊಳ್ಳವ ಸ್ವಭಾವ ಮೋಹನ ರಾವ್ ದೆಂದು ತಿಳಿದ ರುಕ್ಮಿಣಿ ಸ್ವಲ್ಪ ಚೇತರಿಸಿಕೊಂಡು ಲವಲವಿಕೆಯಿಂದ ಇರಲು ಪ್ರಾರಂಭಿಸುತ್ತಾಳೆ. ಆಕೆಯ ಸಂಯಮ, ಕೆಲಸದ ಕಟ್ಟುನಿಟ್ಟು, ಪ್ರಾಮಾಣಿಕತನ, ಮೋಹನನ ಮೆಚ್ಚುಗೆಗೆ ಪಾತ್ರವಾಗಿ ಸೆಕ್ರೆಟರಿಯನ್ನಾಗಿ ಮಾಡಿಕೊಳ್ಳುತ್ತಾನೆ.ನೋಡಲು ಸುಂದರವಾಗಿಯೂ ಇದ್ದ ರುಕ್ಮಿಣಿ, ಸಣ್ಣ ವಯಸ್ಸಿನಲ್ಲಿ ವಿಧವೆಯಾದರೂ, ಯಾರನ್ನಾದರೂ ಆಕರ್ಷಿಸುವ ಮೈಮಾಟವೂ ಅವಳದಿತ್ತು. ಮೋಹನನ ಅನಾರೋಗ್ಯದ ಕಾರಣ ರುಕ್ಮೀಣಿ ಆತನ ಮನೆಯಲ್ಲೇ ಡಿಕ್ಟೇಷನ್ ತೆಗೆದುಕೊಂಡು ಆಫೀಸಿನ ಅರ್ಜೆಂಟ್ ಕೆಲಸವನ್ನು ನಿರ್ವಹಿಸಿದ್ದಳು.ಅಲ್ಲಿ ಪಡೆದ ಆತಿಥ್ಯ, ವೈಯಕ್ತಿಕ ಸಮಸ್ಯೆಗಳಿಗೆ ಸ್ಪಂದಿಸುವ ಸ್ವಭಾವ ಮತ್ತು ತಾಯಿ ಸಾವಿತ್ರಮ್ಮ ಸತ್ತಾಗ ಮನೆಗೆ ಬಂದದ್ದು, ಸಾಂತ್ವನದ ಮಾತು ಹೇಳಿದ್ದು, ಗೆಳತಿ ಪಿಲ್ಲೂ “ಬಾಸ್ ನಿನ್ನ ಪ್ರೀತಿಸುತ್ತಾರೆ ಅನಿಸುತ್ತೆ” ಅಂದದ್ದು, ರುಕ್ಮೀಣಿ ಬೇರೆಯವರ ಸೆಕ್ರೆಟರಿಯಾಗಿ ಕೆಲಸ ಮಾಡುವಾಗ ಮೋಹನ ಆಕೆಯ ಬದಲಾವಣೆಗೆ ಕಾರಣ ಕೇಳಿ ಜಗಳ ಮಾಡಿದ್ದು, ಕೊನೆಗೆ ಕೆಲಸಕ್ಕೇನೆ ಇದೇ ಬದಲಾವಣೆಯ ಕಾರಣದಿಂದ ರಾಜೀನಾಮೆ ಕೊಡುವ ಸಂಗತಿಗಳು ರುಕ್ಮಿಣಿಗೆ ನಿಜವಾಗಿಯೂ ಮೋಹನ್ ರಾವ್ ತನ್ನನ್ನು ಪ್ರೀತಿಸುತ್ತಿರಬಹುದೆಂಬ ಒಯಾಸಿಸ್ನ ಆಸೆಯನ್ನು ಕಾಣುತ್ತಾಳೆ. ಇನ್ನೇನು ಜೀವನ ಸರಿ ಹೊಂದುವುದಿದೆ ಅನ್ನೋವಾಗ ಮೋಹನ್ ತನ್ನನ್ನು ಪ್ರೀತಿಸದೇ ತಂಗಿ ಹೇಮಾಳನ್ನು ಪ್ರೀತಿಸುತ್ತಿದ್ದಾನೆಂದು ತಿಳಿದಾಗ ಹತಾಶೆಯ ಕಟ್ಟ ಕಡೆಯ ಕಟ್ಟೆ ಒಡೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

        ರುಕ್ಮೀಣಿಯಷ್ಟೇ ಪ್ರಮುಖ ಪಾತ್ರ ಹೇಮಾಳದ್ದು. ಅಕ್ಕ, ಮಾವ, ತಂದೆ, ತಾಯಿಯ ಒತ್ತಾಸೆಯೋ ಅಥವಾ ಸಂದರ್ಭದ ನಿರ್ಣಯವೋ ಆಕೆ ಗಿರೀಶನನ್ನು ಮದುವೆಯಾಗುತ್ತಾಳೆ.ಗಿರೀಶ್ ಕಾರ್ಕೂನ; ಸಂಬಳದಷ್ಟೇ ಕಾಲು ಚಾಚುವ ವ್ಯಕ್ತಿ. ತಮ್ಮಂದಿರ, ಪಾಲಕರ ಜವಾಬ್ದಾರಿಯ ಕೂಡು ಕುಟುಂಬ ಹೇಮಾಳಿಗೆ ಹೊಂದುವುದೇ ಇಲ್ಲ. ಎಲ್ಲವನ್ನೂ ಅಪ್ಪನನ್ನು ಕೇಳಿ ಹೇಳುವೆ ಎನ್ನುವ ಗಂಡನನ್ನು ಆಕೆ ಸಹಿಸುವುದೇ ಇಲ್ಲ. ಗಿರೀಶ್ ಒಳ್ಳೆಯ ವ್ಯಕ್ತಿತ್ವ ಅಂದುಕೊಂಡರೂ,ಆತನ ಹಸಿವು ಹೇಮಾಳ ಬಗ್ಗೆ ಅತಿಯೇ ಅನ್ನಿಸುವಂತಿದೆ. ಏರ್ ಹೋಸ್ಟೆಸ್ ಗಿರುವ ಲಕ್ಷಣ ಇರುವ ಹೇಮಾ ಹೆಂಡತಿಯಾಗಿ ಬಂದದ್ದು ತನ್ನ ಹೆಮ್ಮೆ ಎಂದೇ ಭಾವಿಸಿದ್ದ. ಆಕೆಯನ್ನು ಯಾವ ಕಾಲದಲ್ಲೂ ಬಿಡುವ ಯೋಚನೆಯನ್ನು ಆತ ಮಾಡಿದ್ದಿಲ್ಲ. ಆಕೆಯ ಸೌಂದರ್ಯ ಇರುವುದೇ ಗಂಡನಾದ ತನಗೇ ಎನ್ನುವಂತೆ ಅನುಭವಿಸುತ್ತಿದ್ದ. ಇದೇ ವಿಷಯ ಹೇಮಾಳನ್ನು ಕೊಲ್ಲುತ್ತಿತ್ತು. ಹೆಣ್ಣೆಂದರೆ ಬರೀ ಮಕ್ಕಳು ಹಡೆಯುವ ಯಂತ್ರವೇ? ಕಾಮತೃಷೆ ನೀಗಿಸುವ ದೇಹವೇ? ಅನ್ನೋದು ಆಕೆಯದು. ಹೇಮಾ ಸ್ವತಂತ್ರ, ಭಿನ್ನ ವ್ಯಕ್ತಿತ್ವದ ಹೆಣ್ಣು. ಆಧುನಿಕತೆಗೆ ತಕ್ಕಂತೆ ವಿಭಿನ್ನ ಯೋಚನಾ ಲಹರಿ, ಕೂಡು ಕುಟುಂಬ, ಗಂಡನ ಸ್ವಭಾವ ಮತ್ತು ತನ್ನದೇ ಆದ ವಿಚಾರಗಳಿಂದ ಸಂಸಾರವನ್ನು ನಡೆಸದೇ ತವರು ಮನೆಗೆ ಬಂದಾಗ, ತಂದೆ ತಿಳಿಹೇಳಲು ಪ್ರಯತ್ನಪಟ್ಟು ವಿಫಲರಾದಾಗ ಸಾವನ್ನು ಅಪ್ಪಿಕೊಂಡಿದ್ದರು. ಮುಂದೆ ಇದೇ ತೆರನಾದ ಹೊಂದಾಣಿಕೆ ಕಾರಣದಿಂದ ಗಂಡನ ಮನೆ ಬಿಟ್ಟು ಹೋದ ಸುದ್ದಿ ತಾಯಿಯ ಕೊರಗನ್ನು ಹೆಚ್ಚಿಸಿತ್ತು. ಅದೇ ನೋವಿನಲ್ಲೇ ಸಾವಿತ್ರಮ್ಮನವರ ಕೊನೆಯುಸಿರೆಳೆಯುತ್ತಾರೆ. ನಂತರ ಹುಚ್ಚ ಅಣ್ಣನನ್ನು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುಸುತ್ತೇನೆಂದು ಕರೆದುಕೊಂಡು ಹೋಗಿ, ಕೊನೆಗೆ ಅವನ ಮರಣವೂ ಸಂಭವಿಸುತ್ತದೆ. ಅಂತಿಮವಾಗಿ ತನ್ನ ಕೆಲಸಕ್ಕೆ ಸಂಬಂಧವೇ ಇಲ್ಲದ ಅಕ್ಕನ ಮೇಲಾಧಿಕಾರಿಯ ಪರಿಚಯದಿಂದ ಅವನ ಸಲುಗೆ ಬೆಳೆಸಿಕೊಂಡು ಹತ್ತಿರವಾಗಿ ಎಲ್ಲವನ್ನೂ ಕಳೆದುಕೊಂಡು, ಮೋಹನ್ ಪ್ರೀತಿಸುತ್ತಿದ್ದನೆಂದು ತಿಳಿದ ರುಕ್ಮಿಣಿಯ ಸಾವಿಗೂ ಕಾರಣವಾಗುತ್ತಾಳೆ. ನೇರವಾಗಿ ಅಪ್ಪ ,ಅಮ್ಮ, ಅಕ್ಕ ಮತ್ತು ಪರೋಕ್ಷವಾಗಿ ಅನ್ನ ಗೋವಿಂದನ ಸಾವಿಗೆ ಹೇಮಾಳೇ ಕಾರಣವಾಗುತ್ತಾಳೆ. ನಸೀಬ್ ಎನ್ನುವುದರ ಮೇಲೆ ಇದನ್ನೆಲ್ಲಾ ಎಳೆದರೂ ಓದುಗರಿಗೆ ಈಕೆಯೇ ಕಾರಣ ಎನ್ನುವುದು ಮನದಟ್ಟಾಗುತ್ತದೆ. ಅಪ್ಪನ ಸಾವಿನ ನಂತರ ಬದಲಾಗದೇ ಇದ್ದದ್ದು, ತಾಯಿ ಸಾವಿನ ದಿನವೂ ಮನೆಯಲ್ಲಿರದೇ, ಮೋಹನ್ ಜೊತೆ ಕಾರಿನಲ್ಲಿ ಹೋದದ್ದು, ತನ್ನ ವೈಯಕ್ತಿಕ ಜೀವನದ ಬಗ್ಗೆಯೇ ಯೋಚಿಸುವ ಆಕೆಯ ವಿಚಿತ್ರ ವ್ಯಕ್ತಿತ್ವ ಎನಿಸದೇ ಇರದು. ಸ್ವತಂತ್ರ ಎನ್ನುವ ಹೆಸರಿನಲ್ಲಿ ಕಂಡ ಕಂಡವರ ಜೊತೆ ಓಡಾಡುವುದು, ಹುಚ್ಚನಂತೆ ಪ್ರೀತಿಸುವ ಗಂಡನನ್ನು ನಿರ್ದಾಕ್ಷಿಣ್ಯವಾಗಿ ತೊರೆಯುವುದು, ಅಕ್ಕನ ಮಾತನ್ನು ಕೇಳದೇ ಇರುವುದು ಹೇಮಾಳನ್ನು ಕ್ಷಣ ಹೊತ್ತು ದ್ವೇಷಿಸುವಂತೆ ಮಾಡುತ್ತದೆ.

            ಇನ್ನು ಮೋಹನ್ ರಾವ್ ನ ಪಾತ್ರ ಹೇಮಾಳಿಗಿಂತಲೂ ವಿಚಿತ್ರ ಮತ್ತು ವಿಭಿನ್ನ. ಪ್ರೀತಿಯ ಹೆಂಡತಿಯನ್ನು ಕಳೆದುಕೊಂಡು, ಮಗುವನ್ನು ತಾಯಿ ಹತ್ತಿರ ಬಿಟ್ಟು, ವ್ಯಸ್ತ ಕೆಲಸದಲ್ಲಿ ಆನಂದವನ್ನು ಹುಡುಕುವ ವಿಭಿನ್ನ ಪಾತ್ರ. ಹೆಂಡತಿಯನ್ನು ನೆನೆಸುತ್ತಲೇ ರುಕ್ಮೀಣಿ ಹತ್ತಿರವಾಗುವುದು, ತಾನಾಗಿಯೇ ಬೆನ್ನುಬಿದ್ದ ಹೇಮಾಳನ್ನು ಪ್ರೀತಿಸುವುದು ಮತ್ತು ಹೆಂಡತಿ ಸತ್ತ ನಂತರ ಎಲ್ಲ ಸುಖವನ್ನೂ ಡೋರಿಸ್ ಎಂಬುವಳಿಂದ ಪಡೆದುದು ಮತ್ತು ಗೆಳತಿಯೆಂದು ಹೇಳುತ್ತಲೇ ಜ್ಯೋತ್ಸ್ನಾ ಜೊತೆ ಆತ್ಮೀಯವಾಗಿರುವುದು ಓದಿಗರಲ್ಲಿ ಒಂದು ತರಹದ ಸಂಶಯವನ್ನು ಹುಟ್ಟಿಸುತ್ತದೆ ಮೋಹನನ್ನು ಹೇಗೆ ಅರ್ಥೈಸುವುದೆಂದು?. ತನ್ನ ಕಣ್ಣ ಮುಂದೆಯೇ ಹೇಮಾಳ ಬಾಳು ಮುರಿದುಬೀಳುತ್ತಿದೆ ಎಂದು ತಿಳಿದಾಗೂ, ಅದನ್ನು ಸರಿಪಡಿಸುವಂತಹ ಯಾವ ಮಾತನ್ನೂ ಆಡುವುದಿಲ್ಲ. ಹೇಮಾ ಬಂದಾಗ ಕಾರ್ ತೆಗೆದುಕೊಂಡು ಹೇಳಿದ್ದಲ್ಲಿ ಸುತ್ತಾಡಿ, ವೇಳೆ ಕಳೆಯುವುದನ್ನು ನೋಡಿದರೆ ಹೇಮಾಳ ತುಕ್ಕು ಹಿಡಿದ ಸಂಸಾರದ ಬಗ್ಗೆ ಸ್ವಲ್ಪವು ಕನಿಕರ ಇಲ್ಲವೆನಿಸುತ್ತದೆ. ಕಿಂಚಿತ್ತೂ ಮಾತನಾಡದೇ ಹೇಮಾಳನ್ನು ಬೇರೆಯದೇ ವ್ಯಕ್ತಿತ್ವ ಎಂದು ಆಕೆಯೊಂದಿಗೆ ಸಲುಗೆಯನ್ನು ಹೊಂದಿ ಎಲ್ಲತರ ಹತ್ತಿರವಾಗುತ್ತ ಹೋಗುತ್ತಾನೆ. ತನ್ನನ್ನೇ ಪ್ರೀತಿಸುತ್ತಿದ್ದಾನೆಂದು ತಿಳಿದ ರುಕ್ಮೀಣಿಯನ್ನು ಕೊನೆ ಕೊನೆಗೆ ಲಕ್ಷ್ಯ ಕೊಡದೇ ತನ್ನ ಮತ್ತು ಹೇಮಾಳ ಸಂಬಂಧದ ಬಗ್ಗೆಯೂ ಏನೂ ಹೇಳದೇ ಒಂದು ಥರಾ ಗುಪ್ತವಾಗಿಯೇ ಇಟ್ಟು, ಏನನ್ನೂ ತಿಳಿಯದ ರುಕ್ಮೀಣಿಗೆ ಸಂಬಂಧದ ಶಾಕ್ ಕೊಟ್ಟು ಆಕೆಯ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣನಾಗುತ್ತಾನೆ. ಕಾದಂಬರಿಯ ಸನ್ನಿವೇಶ ಮಾತುಗಳು ಮೋಹನ್ ಮತ್ತು ರುಕ್ಮಿಣಿ ಒಂದಾಗಬಹುದೆಂದು ತಿಳಿಯುತ್ತಿರುವಾಗಲೇ ಅನಿರೀಕ್ಷಿತ ತಿರುವು ಪಡೆದು ಮೋಹನ್ ಹೇಮಾಳ ಕಡೆಗೆ ವಾಲಿರುವುದು ಓದುಗರಿಗೂ ಆಶ್ಚರ್ಯವನ್ನುಂಟುಮಾಡುತ್ತದೆ. ಮೋಹನ್ ಎಲ್ಲಿಯೂ ಪ್ರೀತಿ ಎನ್ನುವ ಶಬ್ದ ಬಳಸದಿದ್ದರೂ, ಆತನ ನಡಾವಳಿಕೆ ಪ್ರೀತಿಸಬಹುದೇನೋ ಅನ್ನೋ ಸಂಶಯ ಹುಟ್ಟಿಸಿ ಕೊನೆಗೆ ಆಶ್ಚರ್ಯಪಡುವಂತೆ ಮಾಡುತ್ತದೆ.

           ಈ ಕಾದಂಬರಿಯ ವಿಶೇಷವೇ ಸಾವು ಮತ್ತು ಅದರ ಶೀರ್ಷಿಕೆ ಉತ್ತರಾಯಣ. ಹಿಂದೂ ಪಂಚಾಂಗದ ನಂಬಿಕೆಗಳು ಪುಷ್ಟಿಕೊಡುವಂತೆ ಉತ್ತರಾಯಣದಲ್ಲಿ ನಡೆಯುವ ಸರಣಿ ಸಾವುಗಳು ಮತ್ತು ನಾಯಕಿಯ ಆತ್ಮಹತ್ಯೆಯನ್ನು ಲೇಖಕರು ಸಮರ್ಥಿಸಿಕೊಳ್ಳುವ ಭಾವ ಸ್ಪಷ್ಟವಾಗುತ್ತದೆ.ಸಾವು ಜೀವನದ ಅತೀ ಕಠಿಣ ಮತ್ತು ಕಹಿ ಸತ್ಯವೆಂದು ಗೊತ್ತಿದ್ದರೂ ಅದರಿಂದ ಪಲಾಯನ ಮಾಡುವ ಮತ್ತು ಮುಂದೂಡುವ ಪ್ರಯತ್ನದಲ್ಲಿ ಅದನ್ನು ಎದುರಿಸಬೇಕಾಗುವ ಸಂದರ್ಭ ಬಹಳ ಕ್ಲಿಷ್ಟವಾದುದು. ಗಂಡ, ಮಗು, ತಂದೆ, ತಾಯಿಯ ಸಾವು ರುಕ್ಮಿಣಿಯನ್ನು ಜರ್ಜರಿತಗೊಳಿಸಿದಾಗ ಆಕೆಗೆ ಕಂಡದ್ದು ಸಾವು ಮಾತ್ರ. ಅದೇ ಆಕೆಗೆ ಸಮಾಧಾನ ಮಾಡುವ ಅನನ್ಯ ಮಾರ್ಗವಾಗಿ ಕಾದಂಬರಿಯಲ್ಲಿ ಕಾಣುತ್ತದೆ. ಉತ್ತರಾಯಣ ಎಂಬ ಶೀರ್ಷಿಕೆಯೂ ಅದನ್ನು ಬೆಂಬಲಿಸುತ್ತದೆ ಜೊತೆಗೆ ವ್ಯಾಸರಾಯ ಬಲ್ಲಾಳರು ರುಕ್ಮಿಣಿಯ ಸಾವನ್ನು ಸಮರ್ಥಿಸುತ್ತಾರೆ. ಅದನ್ನು ತಮ್ಮ ಮುನ್ನುಡಿಯಲ್ಲೂ ಬರೆದುಕೊಂಡಿದ್ದಾರೆ. ಓಶೋ ಹೇಳುವ ಹಾಗೆ ಹುಟ್ಟಿನಂತೆ ಸಾವನ್ನು ಸಂಭ್ರಮಿಸುಬೇಕೆಂಬುದನ್ನು ಕಾದಂಬರಿ ಸಾಧಿಸುತ್ತದೆ. ಜೀವನವೇ ಪ್ರಶ್ನೆಯಾದಾಗ, ಸಾವೊಂದೇ ಉತ್ತರ ಎನ್ನುವಂತಿದೆ. ಪಿ.ಲಂಕೇಶರ ಇಂಗ್ಲಿಷ್ ಕತೆ ಗಾರ್ಡ್ನರ್ (ಕನ್ನಡದಿಂದ ಇಂಗ್ಲಿಷಿಗೆ ಅನುವಾದವಾದ ಕಥೆ) ನಲ್ಲಿ ಒಬ್ಬ ವ್ಯಕ್ತಿಗೆ ವೈರಿ, ರಿವೇಂಜ್ ಅಥವಾ ಚಾಲೆಂಜ್ ಜೀವನದಲ್ಲಿ ಬಹಳ ಮುಖ್ಯ. ಇವೆಲ್ಲ ಸಾಧಿಸುವದಕ್ಕಾದರೂ ವ್ಯಕ್ತಿ ಜೀವಿಸುತ್ತಾನೆ, ತನ್ನಲ್ಲಿ ಜೀವನದ ಉತ್ಸಾಹವನ್ನು ತುಂಬಿಕೊಳ್ಳುತ್ತನೆಂದು ಹೇಳುತ್ತದೆ. ಯಾವಾಗ ಇವೆಲ್ಲ ಇಲ್ಲದೆ ಜೀವನ ಶೂನ್ಯ, ನಶ್ವರ ಎಂದೂ, ಗುರಿಯೇನು? ಯಾರಿಗಾಗಿ ಜೀವನ? ಏತಕ್ಕೆ ಜೀವನ? ಎಂದಾಗ ಜೀವನ ತಟಸ್ಥವಾಗಿ ಜುಗುಪ್ಸೆ ಹೊಂದಿ ಸಾವನ್ನು ಪ್ರೀತಿಸಲು ಪ್ರಾರಂಭಿಸುತ್ತಾನೆ. ಇದೇ ತರಹದ ಸನ್ನಿವೇಶ ರುಕ್ಮೀಣಿಯದು.
“ತಾನು ಯಾಕಾಗಿ ಬದುಕಬೇಕು!
ವಸಂತ ಬದುಕಿದ್ದು, ತಾನು ಆತನಿಗಾಗಿ, ಆತ ತನಗಾಗಿ ಬದುಕಲು ಸಾಧ್ಯವಾಗಲಿಲ್ಲ. ಭಾಸ್ಕರಿನಿಗಾಗಿ ಬದುಕಲು ಸಾಧ್ಯವಾಗಲಿಲ್ಲ….. ತಾಯಿಯಾಗಿ ಅಣ್ಣ ಗೋವಿಂದನಿಗಾಗಿ, ಮುಗ್ದೆ ಗೌರಾಳಿಗಾಗಿ ಬದುಕಿರಬೇಕು ಎಂದು ತನ್ನ ಜೀವನಕ್ಕೆ ಅರ್ಥ ಕೊಡಲು ಎಷ್ಟು ಯತ್ನಿಸಿದರೂ, ಇನ್ನೂ ಅದು ಪ್ರಶ್ನಾರ್ಥಕ ಚಿಹ್ನೆಯೇ…..(ಪು.ಸಂ.266) ರುಕ್ಮೀಣಿ ಆಡಿದ ಮಾತುಗಳು.

        ತಾಯಿ ಸಾವಿತ್ರಮ್ಮಗೆ ಜ್ವರ ಬಂದಾಗ ರುಕ್ಮಿಣಿ ಹೆದರದೇ ಗುಣಪಡಿಸಬಹುದು ಎಂದು ನಂಬಿದ್ದಳು. ಆದರೆ ಜ್ವರ ಉಲ್ಭಣಾವಸ್ಥೆಗೆ ಹೋದಾಗ ಮತ್ತು ಗೋವಿಂದನ ಆರೋಗ್ಯದಲ್ಲೂ ಏರುಪೇರಾಗುವುದು ಅವ್ವ ಮಗನ ಅನ್ಯೋನ್ಯ ಸಂಬಂಧವನ್ನು ತೋರುತ್ತದೆ. ಆರೋಗ್ಯವಾಗಿದ್ದರೆ ಗೋವಿಂದನೂ ಆರೋಗ್ಯವಂತ, ಆಕೆ ನರಳುತ್ತಿದ್ದರೆ ಗೋವಿಂದನೂ ನರಳುತ್ತಾನೆ. ಇದು ಅನನ್ಯ  ಸಂಬಂಧದ ದೃಷ್ಟಾಂತ.ಈ ಮಾಹಿತಿ(ಪು.ಸಂ.131) ಸಾವಿತ್ರಮ್ಮನ ಸಾವಿನೊಂದಿಗೆ ಗೋವಿಂದನ ಸಾವು ಸಂಭವಿಸಬಹುದೆಂದು ಓದುಗರು ಮೊದಲೇ ಗ್ರಹಿಸುತ್ತಾರೆ. ಆಸ್ಪತ್ರೆಗೆ ಸೇರಿಸುವಾಗ ಗೋವಿಂದ್ ಅಮ್ಮನ ಬಗ್ಗೆ ಕೇಳಿದಾಗ ಅಮ್ಮ ಮೊದಲೇ ಪೂನಾಕ್ಕೆ ಹೋಗಿದ್ದಾಳೆ ನೀನೂ ಅಲ್ಲಿಗೆ ಕಾರಿನಲ್ಲಿ ಹೋಗುತ್ತಿದ್ದಿ ಅಂದಾಗ,…..
“ಹೋಗೋಣ…ನನ್ನನ್ನು ಬಿಟ್ಟೇ ಹೋಗಿಬಿಟ್ಟಳಲ್ಲ. ಅಮ್ಮ…. ಹೋಗೋಣ…. ಅವಳಿದ್ದಲ್ಲಿಗೇ; ನನ್ನನ್ನು ಬಿಟ್ಟೇ ಹೋಗಿಬಿಟ್ಟಾಳಲ್ಲ….. ನಾನು ಅವಳನ್ನು ಹಾಗೆಯೇ ಬಿಡುತ್ತೇನೆಯೇ?” (ಪ.ಸಂ.272)       ಗೋವಿಂದ ಅನ್ನೋ ಮಾತುಗಳು ಸಾವಿನ ಮುನ್ಸೂಚನೆಯನ್ನು ಕೊಡುತ್ತವೆ. ಅದೇ ರೀತಿ ರುಕ್ಮೀಣಿ ಕಾರನಲ್ಲಿ ಗೋವಿಂದ ಹೋಗುತ್ತಿದ್ದರೆ ತಾಯಿ ಶವವನ್ನು ಕಂಡಾಗ ಉಂಟಾದ ನೋವಿನಂತೆ ರುಕ್ಮಿಣಿಯು ಎದೆಯಲ್ಲಿ ನೋವನ್ನು ಅನುಭವಿಸುತ್ತಾಳೆ. ಗೋವಿಂದನನ್ನು ಮತ್ತೆ ಕಾಣುತ್ತೇನೆಯೇ? ಆತ ಗುಣಮುಖವಾಗಿ ಬರುತ್ತಾನೆಯೇ? ಎಂದು ಆನಂದ ಮಾವನನ್ನು ಕೇಳಿದ್ದು ಗೋವಿಂದನ ಸಾವು ಖಚಿತ ಅನ್ನೋದನ್ನ ಸಾರುತ್ತಲೇ ಹೋಗುತ್ತದೆ.ತಂದೆ, ತಾಯಿ, ಗಂಡ, ಮಗು, ಅಣ್ಣ ಮತ್ತು ಕೊನೆಗೆ ಆಕೆಯ ಸಾವು ಮನದಲ್ಲಿ ಝಲ್ ಎನಿಸುವ ಭಾವವನ್ನು ಹುಟ್ಟಿಸುತ್ತದೆ.

      ಸಾವಿನ ಜೊತೆ ಇನ್ನೊಂದು ಆಕರ್ಷಣೆಯ ವಿಷಯ ಹೇಮಾಳ ಸ್ವಭಾವ. ತಂದೆಯ ಸಾವಿಗೆ ಕಾರಣ ತಾನೆಂದು ಗೊತ್ತಾದ ಮೇಲೂ ಸುಧಾರಣೆ ಆಗದೇ ಇರುವುದು, ತಾಯಿ ಸಾವಿನ ದಿನ ಅಕ್ಕನಿಗೆ ಸಾಂತ್ವನವನ್ನು ಹೇಳದೇ ಹಾಸ್ಟಲ್ ಗೆ ಹೋಗುವುದು ಮತ್ತು ಸ್ವಾತಂತ್ರ್ಯದ ಹೆಸರಿನಲ್ಲಿ ಚೆಲ್ಲುಚೆಲ್ಲು ಸ್ವಭಾವದ ಅನಾವರಣ ಕ್ಲಿಷ್ಟ ವ್ಯಕ್ತಿತ್ವದ ಪರಿಚಯವನ್ನು ಮಾಡಿಸುತ್ತದೆ. ಮೋಹನ್ ರಾವ್ ಕೂಡ ಅದೇ ಸಂದರ್ಭದಲ್ಲಿ ಹೇಮಾಳನ್ನು ತಲೆಯಿಂದ ಪಾದದವರೆಗೆ ನೋಡುವುದು, ಸೌಂದರ್ಯವನ್ನು ಕಣ್ಣಿಂದಲೇ ಅಳೆಯುವುದು, ಸಾವಿಗೆ ನಿಷ್ಟುರ ಸ್ವಭಾವದ ಪ್ರದರ್ಶನವನ್ನು ಮನದಲ್ಲಿ ಮೆಚ್ಚುವ ಆತನ ಭಾವ, ಮನುಷ್ಯ ಸ್ವಭಾವಕ್ಕೆ ತೀರದೂರ. ತಾಯಿಯ ಅನಾರೋಗ್ಯ ಮತ್ತು ಅಣ್ಣನ ಊಟ ಔಷಧಿಯ ನಿರ್ವಹಣೆ ಸಣ್ಣತಂಗಿ ಗೌರಳಿಗೆ ಅಸಾಧ್ಯ, ಸಾಧ್ಯವಾದರೆ ಆಫೀಸಿನಲ್ಲಿ ಹಕ್ಕಿನ ರಜೆ ತೆಗೆದುಕೊ ಎಂದು ಆನಂದ ಮಾವ ಪದೇ ಪದೇ ರುಕ್ಮೀಣಿಗೆ ಹೇಳಿದರೂ, ಆಕೆ ರಜೆ ತೆಗೆದುಕೊಳ್ಳದೆ ಇರುವುದು ಆಶ್ಚರ್ಯವನ್ನುಂಟುಮಾಡುತ್ತದೆ. ಕಾರ್ಯದರ್ಶಿಯಾಗಿ ಹೆಚ್ಚಿನ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದ್ದದ್ದು ನಿಜವಾದರೂ, ಮೋಹನನ ಅತಿ ಶಿಸ್ತಿನಲ್ಲಿ ರುಕ್ಮೀಣಿ ರಜೆಯನ್ನು ಪಡೆಯುವುದು ಅಸಾಧ್ಯವೆನಿರಲಿಲ್ಲ. ಅದಾಗಲೇ ಮೋಹನ್ ಆಕೆಯ ಕಷ್ಟಗಳಿಗೆ ಸ್ಪಂದಿಸುತ್ತ ಧೈರ್ಯ ಮತ್ತು ಕನಿಕರವನ್ನು ತೋರಿಸುತ್ತಲಿದ್ದ. ಹೇಳಿದರೂ ರಜೆ ತೆಗೆದುಕೊಳ್ಳುದ ಮನೋಭಾವ,ಎಲ್ಲಿ ಸಾವಿತ್ರಮ್ಮ ಕೊನೆಯಾಗುವಳೊ ಅನ್ನೋ ಸಂಶಯ ಬಂದೇ ಬರುತ್ತದೆ. ಹೀಗೆ ಬಲ್ಲಾಳರು ಸಾವಿನ ಮುನ್ಸೂಚನೆಯನ್ನು ಪ್ರಸಂಗ ಮತ್ತು ಮಾತುಗಳ ಮೂಲಕ ತೋರಿದ್ದಾರೆ.

        ರುಕ್ಮೀಣಿ ತನ್ನ ಕಾರ್ಯದರ್ಶಿಯಾಗಿ ಇರದೇ ಇದ್ದರೆ ರಾಜೀನಾಮೆ ಕೊಡುವೆ ಎನ್ನುವ ಮತ್ತು ಹೇಮಾಳನ್ನು ಹತ್ತಿರಕ್ಕೆ ಬರಸೆಳೆಯುವ ಮನೋಭಾವ ಮೋಹನ್ ನಿಜವಾಗಲೂ ಯಾರನ್ನು ಪ್ರೀತಿಸಿದ ಎಂದು ಸಂಶಯವಾಗುತ್ತದೆ. ಗೆಳತಿ ಡೋರಿಸ್ ಹಣ ಪಡೆದು ದೂರವಾದರೆ, ರುಕ್ಮೀಣಿ ಆತ್ಮಹತ್ಯೆ ಮಾಡಿಕೊಂಡು ಮತ್ತು ಹೇಮಾ ಅಣ್ಣ ಮತ್ತು ಅಕ್ಕನ ಸಾವಿನಿಂದ ಊರನ್ನೇ ಬಿಟ್ಟು ಕಾಣೆಯಾಗುವ ಪರಿಸ್ಥಿತಿ, ಮೋಹನ್ ಯಾರ ಪ್ರೀತಿಯನ್ನು ಪಡೆಯಲು ಸಮರ್ಥನಾಗಿ ಉಳಿಯುವುದೇಯಿಲ್ಲ.
             ಹೀಗೆ ಕಾದಂಬರಿಯುದ್ದಕ್ಕೂ ಕಷ್ಟ ಕಾರ್ಪಣ್ಯಗಳೇ ಜೀವಾಳವಾಗಿ ಅದು ಅನಿವಾರ್ಯವೆಂದು ಅಭಿಪ್ರಾಯಕ್ಕೆ ಬರುತ್ತೇವೆ. ಸುಖವೋ ದುಃಖವೋ ಪ್ರತಿ ಜೀವಿಯೂ ಕೂಡ ಅಂತಿಮವಾಗಿ ಸಾವನ್ನೇ ಕಾಣಬೇಕಾಗಿರುವುದು ಜೀವನದ ಮರ್ಮ. ಅದನ್ನು ಸಾಧಿಸುವಲ್ಲಿ ಉತ್ತರಾಯಣ ಕಾದಂಬರಿ ಬಹಳವೇ ಯಶಸ್ವಿಯಾಗಿದೆ.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಉತ್ತರಾಯಣ ಒಂದು ವಿಮರ್ಶೆ”

  1. Vishwanath Karnad

    Kadambariya sarasatvave vimarsheyalli bandiruvudarinda idudhirgavaitu.ballalara typical nagra prajneya family dramadalli silukikonda Rukmini Hema awara manodisheya maru odu madidantayitu.but it’s quite gripping.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter