“ನಾನೊಂದು ಕವಿತೆ ಹಾಕಿದ್ದೇನೆ ಫೇಸ್ಬುಕ್ಕಿನಲ್ಲಿ, ಓದು” ಎಂದವನ ಕವಿತೆಯನ್ನಾಗಲೇ ನೂರಾರು ಜನ ಲೈಕ್ ಮಾಡಿ ಕಾಮೆಂಟುಗಳನ್ನು ಹಾಕಿ ಆಗಿತ್ತು. “ಇದೇನು ಕೆಸುವಿನ ಸೊಪ್ಪಿನ ಚಟ್ನಿಯಾ ಅಥವಾ ಕರಕಲಿಯಾ, ಕವಿತೆಯಂತೂ ಅಲ್ಲ” ಎಂದು ಕಾಮೆಂಟು ಮಾಡಬೇಕೆಂದು ಕೊಂಡವಳು ಒಂದು ಲೈಕ್ ಒತ್ತಿ, “ಚೆನ್ನಾಗಿದೆ” ಎಂದು ಟೈಪ್ ಮಾಡಿ ಸುಮ್ಮನಾದೆ. ದಿನಕ್ಕೊಂದು ಕವಿತೆ ಬರೆದು ಪೋಸ್ಟ್ ಮಾಡುವುದನ್ನು ಚಟವೆಂದುಕೊಳ್ಳುವುದೋ, ಹುಚ್ಚುತನವೆನ್ನಲೋ ಗೊತ್ತಾಗಲಿಲ್ಲ. ಎಲ್ಲ ಕವಿತೆಗಳಲ್ಲೂ ಭಾವಾತಿರೇಕದ ನಾಲ್ಕು ಸಾಲುಗಳನ್ನು ಬಿಟ್ಟು ಬೇರೆ ಯಾವ ಸಹಜವಾದ ಭಾವವೂ ಕಾಣಿಸುತ್ತಿರಲಿಲ್ಲ. ಅಸಲಿಗೆ ಅವನ ನಿಜಬಣ್ಣವೇನೆಂದು ನನಗೆ ಗೊತ್ತಾಗಿರಲೇ ಇಲ್ಲ. ಗೊತ್ತಾಗದಿರುವುದೇ ಒಳ್ಳೆಯದೇನೋ ಎಂದು ನಿರ್ಲಕ್ಷ್ಯ ಮಾಡಿಬಿಟ್ಟಿದ್ದೆ ಕೂಡಾ!
ಆತನ ಭೇಟಿಯಾಗಿದ್ದು ಕೂಡಾ ಅನಿರೀಕ್ಷಿತವಾಗಿ. ಅವನನ್ನು ಭೇಟಿಯಾಗುವ ಉದ್ದೇಶವಾಗಲೀ, ಆಸೆಯಾಗಲೀ ನನಗಂತೂ ಇರಲಿಲ್ಲ. ಹೋಗಲಿ, ಆತನ ಬರೆವಣಿಗೆಯೆಡೆಗೊಂದು ಕುತೂಹಲವೂ ಇರಲಿಲ್ಲ. ಹುಟ್ಟಿದ ನಾಲ್ಕು ಸಾಲುಗಳನ್ನೇ ಆಚೀಚೆ ತಿರುಗಿಸಿ ನಲವತ್ತು ಸಾಲುಗಳಿಗೆ ಎಳೆಯುವ ಅವನ ಕವಿತೆಗಳಿಗೆ “ಕರಕಲಿ” ಎಂದು ಹೆಸರಿಟ್ಟು ಕರೆಯುತ್ತಿದ್ದೆ. “ಬೆಳ್ಳುಳ್ಳಿ ಒಗ್ಗರಣೆಯೊಂದು ಕಡಿಮೆಯಿದೆ ನೋಡು ನಿನ್ನ ಕವಿತೆಗೆ” ಎಂದು ಒಮ್ಮೆ ಹೇಳಿಯೂಬಿಟ್ಟಿದ್ದೆ. ನನ್ನ ಆ ಮಾತಿನಿಂದ ಅವನಿಗೆ ಬೇಸರವಾದಂತೇನೂ ನನಗೆ ಅನ್ನಿಸಿರಲಿಲ್ಲ. ಯಥಾಪ್ರಕಾರ ಒಂದರ ಮೇಲೊಂದು ಕವಿತೆಗಳು ಕಸದ ರಾಶಿಯಂತೆ ಫೇಸ್ಬುಕ್ಕನ್ನು ತುಂಬಿಕೊಳ್ಳುತ್ತಲೇ ಇದ್ದವು. ಒಮ್ಮೆಯಂತೂ “ನಾನು ಮೋಡ, ನೀನು ಭೂಮಿ, ಮಳೆಯಾಗಿ ಸುರಿಯುತ್ತೇನೆ” ಎನ್ನುವ ಅಸಂಬದ್ಧ ಸಾಲುಗಳನ್ನು ಬರೆದು ಕಿರಿಕಿರಿ ಹುಟ್ಟಿಸಿಬಿಟ್ಟಿದ್ದ.
“ಒಮ್ಮೆ ನಿಮ್ಮ ಮನೆಗೆ ಕರೆದುಕೊಂಡು ಹೋಗು” ಎಂದು ದುಂಬಾಲು ಬಿದ್ದವನನ್ನು ಬಸ್ಸು ಹತ್ತಿಸಿ ಮನೆಗೆ ಕರೆದುಕೊಂಡು ಹೋಗಿದ್ದೆ. ಬಸ್ಸಿಳಿದವನೇ ಬಸ್ ಸ್ಟಾಪನ್ನು ಕಣ್ಣರಳಿಸಿಕೊಂಡು ನೋಡುತ್ತ, “ಇಲ್ಲಿ ಕುಳಿತು ಒಂದು ಸಾಲಿಡ್ ಆದ ಕವಿತೆ ಬರೆಯಬಹುದು ನೋಡು” ಎಂದಿದ್ದ. “ನಿನ್ನ ಕವಿತೆ ಮನೆ ಬಂಗಾರ ಆಗ, ಆಯಿ ಕರಕಲಿ ಮಾಡಿರ್ತಾಳೆ ಬಾ” ಎಂದು ಮನೆಯವರೆಗೂ ನಡೆಸಿಕೊಂಡೇ ಹೋದೆ. ಅವನ ಸರಳ ಸ್ವಭಾವ ನೋಡಿ ಖುಷಿಯಾಗಿದ್ದ ಆಯಿ ಎರಡು ಸೌಟು ಕರಕಲಿಯನ್ನು ಜಾಸ್ತಿಯೇ ಬಡಿಸಿದ್ದಳು. ಅವಳ ಹತ್ತಿರ ಕರಕಲಿಯ ರೆಸಿಪಿಯನ್ನು ಕೇಳಿ ಮೊಬೈಲಿನಲ್ಲಿ ಟೈಪ್ ಮಾಡಿಕೊಂಡು, ಟೆರೆಸಿನಲ್ಲಿ ಬೆಳೆಸುತ್ತೇನೆ ಎಂದು ಹೇಳಿ ಎರಡು ಕೆಸುವಿನಗೆಡ್ಡೆಗಳನ್ನು ಪ್ಯಾಕ್ ಮಾಡಿಸಿಕೊಂಡು ಬ್ಯಾಗಿನಲ್ಲಿ ಭದ್ರವಾಗಿ ಇಟ್ಟುಕೊಂಡಿದ್ದ. “ಈ ಕರಕಲಿಯ ಮೇಲೊಂದು ಕವಿತೆ ಬರೆಯಬೇಕು ನಾನು” ಎಂದವನಿಗೆ, “ಬೆಳ್ಳುಳ್ಳಿ ಒಗ್ಗರಣೆ ಮಾತ್ರ ಮರೆಯಬೇಡ” ಎಂದು ಮತ್ತೆ ನೆನಪಿಸಿ ನಕ್ಕಿದ್ದೆ.
ನನ್ನ ಟೀಕೆಗಳು ಅವನಿಗೆ ಅರ್ಥವಾಗುತ್ತಿರಲಿಲ್ಲವೋ ಅಥವಾ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲವೋ ಗೊತ್ತಿಲ್ಲ, ಒಟ್ಟಿನಲ್ಲಿ ದಿನ ಬೆಳಗಾದರೆ ಅವನ ಕರಕಲಿಯಂತಹ ಕವಿತೆಗಳು ಫೇಸ್ಬುಕಿನ ಜೊತೆಜೊತೆಗೇ ವಾಟ್ಸಾಪ್ಪಿಗೂ ಬಂದು ಬೀಳತೊಡಗಿದವು. ಕೆಲವೊಮ್ಮೆ ಓದಿ ಉತ್ತರಿಸಿದರೆ, ಇನ್ನೂ ಕೆಲವು ಸಲ ಓದದೆಯೇ ಏನೋ ಒಂದು ರಿಪ್ಲೈ ಮಾಡಿ ಸುಮ್ಮನಾಗುತ್ತಿದ್ದೆ. ಇದರ ಮಧ್ಯೆ ಆಯಿಗೆ ತಿರುಪತಿ ನೋಡಬೇಕೆನ್ನುವ ಆಸೆಯಾಯಿತು. “ಅಯ್ಯೋ ತಿರುಪತಿಗೆ ಹೋಗಬೇಕೆಂದರೆ ಮೊದಲೇ ದರ್ಶನದ ಟಿಕೆಟ್ ಬುಕ್ ಆಗಬೇಕು, ಇಲ್ಲವಾದರೆ ಕ್ಯೂದಲ್ಲಿ ನಿಂತು ತಿರುಪತಿಯ ಸಹವಾಸವೇ ಸಾಕು ಎನ್ನುವಂತಾಗುತ್ತದೆ” ಎಂದು ಏನೆಲ್ಲ ಕಾರಣಗಳನ್ನು ಕೊಟ್ಟರೂ ಅವಳ ಬಯಕೆ ಕಡಿಮೆಯಾಗುವಂತೆ ಕಾಣಿಸಲಿಲ್ಲ. “ನನ್ನ ಕನಸಿನಲ್ಲಿ ತಿಮ್ಮಪ್ಪ ಬಂದು ಈ ವರ್ಷ ದರುಶನಕ್ಕೆ ಬರದಿದ್ದರೆ ಬೇಸಿಗೆ ಶುರುವಾಗುತ್ತಿದ್ದಂತೆಯೇ ಬಾವಿಯ ನೀರು ಬತ್ತಿ ಕುಡಿಯಲೂ ನೀರು ಸಿಗುವುದಿಲ್ಲ ಎಂದ” ಎಂದು ಹೇಳಿದ ಅಮ್ಮನ ಮಾತಿಗೆ ನಗು ಬಂದಂತಾದರೂ, ಬೇಸಿಗೆಯ ನೀರಿನ ಬವಣೆ ನೆನಪಾಗಿ ಮೊಬೈಲಿನಲ್ಲಿದ್ದ ದೇವರ ಫೋಟೋವೊಂದಕ್ಕೆ ಕೈ ಮುಗಿದಿದ್ದೆ. ಇದನ್ನೆಲ್ಲ ಕರಕಲಿ ಕವಿತೆಯವನಿಗೆ ಹೇಳಲೋ ಬೇಡವೋ ಎಂದು ಯೋಚಿಸಿದವಳು, ಹೇಳಿದರೆ ತಿರುಪತಿಯ ಮೇಲೆಯೂ ಕವಿತೆ ಬರೆದುಬಿಟ್ಟಾನು ಎನ್ನುವ ಭಯದಲ್ಲಿ ಬಾಯಿ ಮುಚ್ಚಿಕೊಂಡೆ.
ಆದರೂ ನಾನು ತಿರುಪತಿಗೆ ಹೋಗುವ ತಯಾರಿಯಲ್ಲಿರುವುದು ಅವನಿಗೆ ತಿಳಿದು, ತಾನೂ ಜೊತೆಗೆ ಬರುತ್ತಿರುವುದಾಗಿ ನನಗೆ ಹೇಳಿದ್ದಲ್ಲದೇ ಆಯಿಗೂ ಫೋನ್ ಮಾಡಿ ಹೇಳಿಬಿಟ್ಟ. ತಾನು ಕಳೆದ ಸಲ ತಂದಿದ್ದ ಕೆಸುವಿನ ಗೆಡ್ಡೆಗಳನ್ನು ಹೆಗ್ಗಣ ಬಂದು ಕೆರೆದು ಹಾಕಿದ್ದ ಕತೆಯನ್ನು ಹೇಳಿ ಇನ್ನೊಂದೆರಡು ಗೆಡ್ಡೆಗಳನ್ನು ತಂದು ಕೊಡಬೇಕೆಂದೂ, ಈ ಸಲ ಹೆಗ್ಗಣಕ್ಕೆ ಮದ್ದುಹಾಕಿ ಸಾಯಿಸಿದ ಮೇಲೆಯೇ ಗೆಡ್ಡೆಯನ್ನು ನೆಡುವುದಾಗಿಯೂ ಆಯಿಗೆ ಹೇಳಿ ಅವಳ ತಿರುಪತಿಯ ಸಂಭ್ರಮವನ್ನು ಜಾಸ್ತಿ ಮಾಡಿದ್ದ. “ನಾನು ಬರುವುದೇ ಇಲ್ಲ, ನೀವಿಬ್ಬರೇ ಹೋಗಿ ಆರಾಮಾಗಿ ದರ್ಶನ ಮಾಡಿಕೊಂಡು ಬನ್ನಿ” ಎಂದವಳಿಗೆ, “ಅದ್ಹೇಗೆ ಸಾಧ್ಯ, ನೀ ಬರದೇ ಹೋದರೆ ನನ್ನ-ಆಯಿಯ ಸಂಭಾಷಣೆಗಳನ್ನು ಕೇಳಲಿಕ್ಕೆ ಜನ ಎಲ್ಲಿಂದ ಸಿಗ್ತಾರೆ?” ಎಂದು ಪೆಕ್ರನಂತೆ ನಕ್ಕು “ಲಡ್ಡು-ಗಡ್ಡೆ” ಎಂದೇನೋ ಕವಿತೆ ಬರೆಯಲಾರಂಭಿಸಿದ. ಅವನ ನಗು ಸುಂದರವಾಗಿದೆ ಎಂದು ಮೊದಲ ಸಲ ನನಗೆ ಅನ್ನಿಸಿದ್ದು ಆವಾಗಲೇ! “ನೀನು ನಗುವಿನ ಕುರಿತಾಗಿ ಯಾಕೆ ಒಂದು ಕವಿತೆ ಬರೆಯ ಬಾರದು?” ಎಂದಿದ್ದಕ್ಕೆ, “ಅಯ್ಯೋ ಬೇಕಾದಷ್ಟು ಬರೆದಿದ್ದೇನೆ, ಇರು ಎಲ್ಲವನ್ನೂ ಸೆಂಡ್ ಮಾಡ್ತೀನಿ, ಯಾವುದು ಇಷ್ಟವಾಗುತ್ತೋ ಹೇಳು ಫೇಸ್ಬುಕ್ಕಿಗೆ ಹಾಕ್ತೀನಿ” ಎಂದು ಹತ್ತಾರು ಕವಿತೆಗಳನ್ನು ಕಳಿಸಿದ್ದ.
ಅವನಿಂದಾಗಿಯೇ ತಿರುಪತಿಯ ಯಾತ್ರೆ ಬೇಸರವಿಲ್ಲದೇ ಕಳೆಯಿತು ಎಂದರೂ ತಪ್ಪಾಗಲಿಕ್ಕಿಲ್ಲ. ಬಸ್ಸು ಆಕಡೆ ಈಕಡೆ ವಾಲುತ್ತ ಬೆಟ್ಟ ಹತ್ತುತ್ತಿರುವಾಗ ನನಗೆ ತಲೆ ಸುತ್ತುತ್ತಿದ್ದರೆ ಆತ ಮಾತ್ರ ಮುಂದಿನ ಸೀಟಿನಲ್ಲಿ ಕುಳಿತಿದ್ದವ ಹಿಂದಕ್ಕೆ ತಿರುಗಿ ಆಯಿಯ ಹತ್ತಿರ ಆ ಬೆಟ್ಟಗಳಲ್ಲಿರುವ ಸಸ್ಯಗಳ ಬಗ್ಗೆ, ಪ್ರಾಣಿ-ಪಕ್ಷಿಗಳ ಬಗ್ಗೆ ಕತೆ ಹೇಳುತ್ತಿದ್ದ. ತಾನು ಚಿಕ್ಕವನಿದ್ದಾಗ ಅಮ್ಮನೊಂದಿಗೆ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿಕೊಂಡು ಹೋಗಿ ದರ್ಶನ ಮಾಡಿದ್ದಾಗಿಯೂ, ಈಗ ಆಯಿ ಸಿಕ್ಕಿರುವುದು ತನ್ನ ಅಮ್ಮನ ಜಾಗವನ್ನು ತುಂಬಿದ ಅನುಭವವಾಗುತ್ತಿರುವುದಾಗಿಯೂ ಹೇಳಿ ಆಯಿಯ ಕಣ್ಣಲ್ಲಿ ಎರಡು ಹನಿ ನೀರನ್ನೂ ತರಿಸಿಬಿಟ್ಟ. ಕ್ಯೂದಲ್ಲಿ ನಿಂತಾಗಲೂ ಅಕ್ಕಪಕ್ಕದಲ್ಲಿದ್ದವರ ಮೇಲೆ ನಾಲ್ಕಾರು ಸಾಲುಗಳ ಕವಿತೆ ಬರೆದು, ಓದಿಹೇಳಿ ಆಯಿಗೆ ಬೇಜಾರಾಗದಂತೆ ದೇವರ ದರ್ಶನ ಮಾಡಿಸಿದ. ಮನೆಗೆ ಹೋಗುವಾಗ ಕೆಸುವಿನ ಗೆಡ್ಡೆಗಳನ್ನು ಮರೆಯದೇ ಕೊಡಬೇಕೆಂದು ಮತ್ತೆ ಮತ್ತೆ ನೆನಪಿಸಿದ; ಹೆಗ್ಗಣದ ಕಾಟದಿಂದ ಹೇಗೆ ಗೆಡ್ಡೆಗಳನ್ನು ಕಾಪಾಡಿ ಕೊಳ್ಳುವುದೆಂದು ಕೇಳಿ ತಿಳಿದುಕೊಂಡ. ಆಯಿಯಂತೂ ಸರಾಗವಾಗಿ ದರ್ಶನ ಭಾಗ್ಯ ಸಿಕ್ಕಿದ್ದಕ್ಕೆ ನಾಲ್ಕು ಹನಿ ಕಣ್ಣೀರನ್ನೂ ಹಾಕಿ, ಬೇಸಿಗೆಗಾಲದ ನೀರಿನ ತೊಂದರೆಯನ್ನು ಆತನಲ್ಲಿ ಹೇಳಿಕೊಂಡು ಸಮಾಧಾನ ಪಟ್ಟುಕೊಂಡಳು. ಮನೆಗೆ ವಾಪಸ್ಸಾಗುವಾಗ ತನ್ನ ಪಾಲಿನ ಪ್ರಸಾದವನ್ನೂ ಆಯಿಗೇ ಕೊಟ್ಟು, ಮುಂದಿನ ವರ್ಷ ಕಾಶಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಅವಳು ಮತ್ತೆ ಕಣ್ಣೀರು ಹಾಕುವಂತೆ ಮಾಡಿದ.
ತಿರುಪತಿಯಿಂದ ವಾಪಸ್ಸು ಬಂದ ಮೇಲೆ ಅವನಿಂದ ಯಾವ ಕವಿತೆಗಳೂ ಬರಲಿಲ್ಲ. ತಿರುಪತಿ ದರ್ಶನದಿಂದಾಗಿ ಈತನಿಗೆ ಜ್ಞಾನೋದಯವಾಗಿರ ಬೇಕೆಂದುಕೊಂಡು ನಾನೂ ಸುಮ್ಮನಾಗಿಬಿಟ್ಟೆ. ಒಗ್ಗರಣೆಗೆಂದು ಬೆಳ್ಳುಳ್ಳಿ ಸುಲಿಯುವಾಗಲೆಲ್ಲ ಅವನ ಕವಿತೆಯ ಯಾವುದೋ ಒಂದು ಅಸಂಬದ್ಧ ಸಾಲು ಆಗಾಗ ನೆನಪಾಗುತ್ತಿತ್ತು. ಸರಿ, ತಿರುಪತಿಯ ಮೇಲೆನಾದರೂ ಕವಿತೆ ಬರೆದಿರಬಹುದೇನೋ ಎಂದುಕೊಂಡು ಫೇಸ್ಬುಕ್ಕಿನಲ್ಲಿ ಹುಡುಕಿದರೆ ಆತನ ಪ್ರೊಫೈಲ್ ಕಾಣೆಯಾಗಿತ್ತು. “ಕೆಸುವಿನ ಗೆಡ್ಡೆ ಮೊಳಕೆ ಬಂದಿದೆಯೇ?” ಎಂದು ವಾಟ್ಸಾಪ್ಪಿನಲ್ಲಿ ಕಳುಹಿಸಿದ ಮೆಸೇಜ್ ಕೂಡಾ ಡಿಲೆವರಿಯಾಗದೆ, ಕಾಲ್ ಕೂಡಾ ಮಾಡಿ ನೋಡಿಯಾಯಿತು. ಅರ್ಧದಿನವೂ ಮೊಬೈಲ್ ಬಿಟ್ಟಿರದಿದ್ದ ಮನುಷ್ಯ ಹೀಗೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು ಕಳವಳ ಉಂಟುಮಾಡಿತು. ಅವನ ಹತ್ತಿರದವರ್ಯಾರೂ ಪರಿಚಯವೂ ಇರಲಿಲ್ಲ. ಆಯಿಯ ಹತ್ತಿರ ವಿಚಾರಿಸಿದ್ದಕ್ಕೆ ತಿರುಪತಿಯಿಂದ ವಾಪಸ್ಸಾದ ಮೂರನೆಯ ದಿನ ತನಗೆ ಫೋನ್ ಮಾಡಿದ್ದಾಗಿಯೂ, ಕರಕಲಿಯನ್ನು ತಿನ್ನುವುದಕ್ಕೆ ಮತ್ತೊಮ್ಮೆ ನಿಮ್ಮ ಮನೆಗೆ ಬರುವುದಾಗಿ ಹೇಳಿದ್ದಾಗಿಯೂ ತಿಳಿಯಿತು. ಹೀಗೆ ಅಚಾನಕ್ಕಾಗಿ ಒಂದು ಮೆಸೇಜ್ ಕೂಡಾ ಮಾಡದೆ ಕಾಣೆಯಾಗಿರುವುದಕ್ಕೆ ತುಂಬಾ ದಿನಗಳವರೆಗೆ ಕಾರಣ ಹುಡುಕಿ ಸುಸ್ತಾಗಿ ನಿಧಾನಕ್ಕೆ ಅವನನ್ನು ಮರೆಯಲಾರಂಭಿಸಿದ್ದೆ. ಆಯಿ ಮಾತ್ರ ಅವನ ಬಗ್ಗೆ ಆವಾಗಾವಾಗ ವಿಚಾರಿಸುತ್ತ, ಮುಂದಿನವರ್ಷ ಕಾಶಿಗೆ ಹೋಗುವ ವಿಷಯವನ್ನು ಆಗಾಗ ನೆನಪಿಸುತ್ತ, ಅವನಿಗೆಂದು ನಾಲ್ಕು ಕೆಸುವಿನ ಗೆಡ್ಡೆಗಳನ್ನು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ನೆಟ್ಟಿರುವ ವಿಷಯವನ್ನು ಅವನಿಗೆ ತಿಳಿಸಬೇಕೆಂದೂ ನನ್ನಲ್ಲಿ ಹೇಳಿದಳು. ನಾನು ಅವನ ಕವಿತೆಗಳನ್ನು ಬೇಕಾಬಿಟ್ಟಿಯಾಗಿ ಟೀಕಿಸಿದ್ದೇ ಅವನು ಹೀಗೆ ಕಾಣೆಯಾಗಲು ಕಾರಣವಿರಬಹುದೇ ಎನ್ನುವ ಸಣ್ಣದೊಂದು ಪಾಪಪ್ರಜ್ಞೆಯೂ ನನ್ನನ್ನು ಆಗಾಗ ಕಾಡುತ್ತಿತ್ತು.
ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇತ್ತು! ನಲವತ್ತಡಿ ಆಳದ ಬಾವಿ ತುಂಬಿ ಕಟ್ಟೆಯಿಂದಾಚೆಗೆ ನೀರು ಹರಿಯುತ್ತಿತ್ತು. ಆಯಿ ಕೆಸುವಿನ ಗೆಡ್ಡೆಗಳಿದ್ದ ಪ್ಲಾಸ್ಟಿಕ್ ಕೊಟ್ಟೆಗಳನ್ನು ಬಾವಿಕಟ್ಟೆಯ ಪಕ್ಕದಲ್ಲಿ ಮಳೆ ನೀರು ತಾಗದಂತೆ ಕಾಪಾಡಿ ಕೊಂಡಿದ್ದಳು. ನೆಲದಲ್ಲಿದ್ದ ಗೆಡ್ಡೆಗಳಲ್ಲಿ ಅರ್ಧ ಮಣ್ಣಿನೊಂದಿಗೆ ಕೊಚ್ಚಿಕೊಂಡು ಹೋಗಿದ್ದರೆ, ಇನ್ನರ್ಧ ಕೊಳೆತು ರಾಡಿಯಾಗಿದ್ದವು. “ಮುಂದಿನವರ್ಷ ಕರಕಲಿಗೆ ಕೆಸುವಿನ ಸೊಪ್ಪು ಎಲ್ಲಿ ಹುಡುಕುವುದೋ ಗೊತ್ತಿಲ್ಲ” ಎಂದು ಆಯಿ ಅಲವತ್ತುಕೊಂಡರೆ, “ತಿಮ್ಮಪ್ಪ ನಿನ್ನ ಮೊರೆ ಕೇಳಿಸಿಕೊಂಡಿದ್ದಾನೆ ನೋಡು, ಮುಂದಿನ ವರ್ಷ ಬೇಸಿಗೆಗೆ ಬಾವಿಯಲ್ಲಿ ನೀರು ಬತ್ತುವುದಿಲ್ಲ, ಕೆಸುವಿನಸೊಪ್ಪು ಮತ್ತೆ ಬೆಳೆಯಬಹುದು” ಎಂದು ಸಮಾಧಾನಮಾಡಿದ್ದೆ.
ಆಶ್ಚರ್ಯಕರವಾಗಿ ಈಸಲ ಬೇಸಿಗೆಯಲ್ಲಿ ಬಾವಿಯಲ್ಲಿ ಸಾಕಷ್ಟು ನೀರಿತ್ತು. ಕೊಟ್ಟೆಗಳಲ್ಲಿಯೇ ಬೆಳೆದುನಿಂತಿದ್ದ ಕೆಸುವಿನ ಗಿಡಗಳನ್ನು ಆಯಿ ಬಾವಿಯ ಹಿಂದಿದ್ದ ಹಿತ್ತಿಲಿನಲ್ಲಿ ನೆಟ್ಟು ಬೇಕಾದಷ್ಟು ಸೊಪ್ಪು ಬೆಳೆದುಕೊಂಡಿದ್ದಳು. ಕಾಶಿಯ ಕನಸು ಕನಸಾಗಿಯೇ ಉಳಿದಿತ್ತು. ವಿಶ್ವನಾಥನೇನಾದರೂ ಆಯಿಯ ಕನಸಿನಲ್ಲಿ ಬಂದುಬಿಟ್ಟರೆ ಎನ್ನುವ ಕಳವಳದಲ್ಲಿಯೇ ನಾನು ದಿನಗಳನ್ನು ಕಳೆಯುತ್ತಿದ್ದೆ. ಒಮ್ಮೆ ಕರಕಲಿ ಮಾಡಿದ್ದಾಗ ತಿರುಪತಿಯನ್ನು ನೆನಪಿಸಿಕೊಳ್ಳುತ್ತ, “ಒಂದೂವರೆ ವರ್ಷವಾಯಿತು ಕಾರ್ತಿಕನ ಸುದ್ದಿಯೇ ಇಲ್ಲ, ಒಂದು ಸಲ ಮನೆಗೆ ಕರೆದುಕೊಂಡು ಬಾ” ಎಂದಳು. ಅವನ ಹೆಸರಿನ ಬಗ್ಗೆ ಕೂಡಾ ಲಕ್ಷ್ಯ ಕೊಡದಿದ್ದ ನನಗೆ ಆಯಿ ಅವನನ್ನು ನೆನಪಿಸಿಕೊಂಡಾಗ ಮಾತ್ರ ಫೇಸ್ಬುಕ್ಕಿನಲ್ಲಿದ್ದ “ಕಾರ್ತಿಕ್ ಪದ್ಮನಾಭನ್” ಹೆಸರು ನೆನಪಾಗುತ್ತಿತ್ತು. ಈ ಮಧ್ಯೆ ಆಯಿ ವಿಪರೀತ ತಲೆನೋವೆಂದು ಮಣಿಪಾಲದಲ್ಲಿ ಅಡ್ಮಿಟ್ ಆದಾಗ, “ನಾನು ಸತ್ತೆ ಹೋಗ್ತೀನೋ ಏನೋ, ಸಾಯುವ ಮೊದಲು ಒಮ್ಮೆಯಾದರೂ ಕಾರ್ತಿಕನನ್ನು ನೋಡುವ ಆಸೆಯಾಗಿದೆ” ಎಂದು ಹೇಳಿದಾಗ ಸಣ್ಣದೊಂದು ಸಂಕಟವಾಗಿತ್ತು. ನನ್ನ ಕೈಯನ್ನು ಬಿಗಿಯಾಗಿ ಹಿಡಿದು ಕೊಂಡಿದ್ದವಳ ಭಾವನೆಗಳನ್ನು ಅಲ್ಲಗಳೆಯಲಾಗದೇ, ಅವನು ತಿರುಪತಿಯ ನಂತರ ನಾಪತ್ತೆಯಾಗಿರುವ ಸತ್ಯವನ್ನು ಹೇಳಬೇಕಾಗಿ ಬಂತು. ಆ ಸಮಯದ ಅವಳ ನಿಟ್ಟುಸಿರಿನಲ್ಲಿ ನಿರಾಸೆಯಿತ್ತೋ, ಕೋಪವಿತ್ತೋ ಅಥವಾ ದುಃಖವೋ ಒಂದೂ ಅರ್ಥವಾಗಲಿಲ್ಲ.
ಆಯಿ ಆಸ್ಪತ್ರೆಯಲ್ಲಿದ್ದಾಗಲೇ ತಕ್ಷಣವೇ ಆಫೀಸಿಗೆ ಬರಲು ಕರೆ ಬಂದಾಗಿತ್ತು. ನಾನು ಕೆಲಸ ಮಾಡುತ್ತಿದ್ದ ಕಂಪನಿ ಒಂದು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿತ್ತು. ಆಯಿಯನ್ನು ಗಡಿಬಿಡಿಯಲ್ಲಿ ಮನೆಗೆ ಸೇರಿಸಿ ವಾಪಸ್ಸು ಬರುವ ಹೊತ್ತಿಗಾಗಲೇ ಎಲ್ಲರ ಕೆಲಸಗಳನ್ನು ಅಸೈನ್ ಮಾಡಿಯೂ ಆಗಿತ್ತು. ನನಗೆ ಫೀಲ್ಡ್ ವರ್ಕ್ ಇಷ್ಟವಿಲ್ಲವೆಂದರೂ ಕೇಳದೇ ಅದೇ ಕೆಲಸವನ್ನು ವಹಿಸಿದ ಪ್ರಾಜೆಕ್ಟ್ ಮ್ಯಾನೇಜರ್ ಮೇಲೆ ವಿಪರೀತ ಕೋಪ ಬಂದು ಆವತ್ತೇ ಕೆಲಸ ಬಿಟ್ಟುಬಿಡಬೇಕೆಂದು ಕೊಂಡವಳು ಸೊಸೈಟಿಯಿಂದ ಸಾಲ ತಂದು ಕಟ್ಟಿಸಿದ್ದ ಕೊಟ್ಟಿಗೆ ನೆನಪಾಗಿ, ಈ ಪ್ರಾಜೆಕ್ಟ್ ಮುಗಿದ ತಕ್ಷಣವೇ ಬೇರೆ ಕೆಲಸ ಹುಡುಕಿ ಕೊಳ್ಳಬೇಕೆಂದು ನಿರ್ಧರಿಸಿ ಮರುದಿನದ ಕೆಲಸದ ಸಲುವಾಗಿ ಟಿಪ್ಪಣಿಗಳನ್ನು ಮಾಡಿಕೊಳ್ಳತೊಡಗಿದೆ. ಟೆರೆಸ್ ಗಾರ್ಡನ್ನಿನ ಕುರಿತಾದ ಉಪಯುಕ್ತ ಹಾಗೂ ಆಸಕ್ತಿದಾಯಕವಾದ ಮಾಹಿತಿಗಳನ್ನು ಕಲೆಹಾಕಿ ಒಂದು ವಿಸ್ತೃತವಾದ ರಿಪೋರ್ಟ್ ತಯಾರು ಮಾಡಬೇಕಾಗಿದ್ದ ಆ ಪ್ರಾಜೆಕ್ಟಿನ ರೂಪುರೇಷೆಗಳನ್ನು ಆಕರ್ಷಕವಾಗಿ ರೆಡಿಮಾಡಿ, ಅದಕ್ಕಾಗಿ ಭೇಟಿಮಾಡಬೇಕಾಗಿದ್ದ ಮನೆಗಳ ವಿಳಾಸಗಳನ್ನು ನಮೂದಿಸಿದ್ದ ಫೈಲುಗಳನ್ನು ಭೇಟಿಯ ದಿನಾಂಕ-ಸಮಯದ ಸಮೇತ ಒಪ್ಪಿಸಿದ್ದರು. ಹೇಗೂ ಡ್ರೈವರನ್ನು ಗೊತ್ತು ಮಾಡಿರುತ್ತಾರೆನ್ನುವ ಸಮಾಧಾನದಲ್ಲಿ ಅಲಾರ್ಮ್ ಇಟ್ಟು ನೆಮ್ಮದಿಯಿಂದ ನಿದ್ರಿಸಿದೆ.
ಬೆಳಗ್ಗೆ ಒಂಬತ್ತೂವರೆಗೆ ಸರಿಯಾಗಿ ನಾವು ಚಿಕ್ಕಬಾಣಾವರದ ಹೊಸ ಬಡಾವಣೆಯೊಂದರ ಆ ಮನೆಯೆದುರು ನಿಂತಾಗಿತ್ತು. ಕಾಲಿಂಗ್ ಬೆಲ್ ಒತ್ತಲೆಂದು ಕೈ ಎತ್ತಿದವಳಿಗೆ, ಬಾಗಿಲ ಪಕ್ಕ ಚಿಕ್ಕದೊಂದು ಗಾಜಿನ ನೇಮ್ ಪ್ಲೇಟ್ ಮೇಲೆ ಬರೆದಿದ್ದ “ಕಾರ್ತಿಕ್ ಪದ್ಮನಾಭನ್” ಹೆಸರು ಕಾಣಿಸಿತು. ಕರಕಲಿಯ ಕವಿತೆಯವನೇ ಈ ಟೆರೆಸ್ ಗಾರ್ಡನ್ನಿನ ಕಾರ್ತಿಕನಾಗಿರಬಹುದೇ ಎಂದು ಒಂದು ಕ್ಷಣ ಯೋಚಿಸಿ, ಇರಲಿಕ್ಕಿಲ್ಲ ಎಂದು ನನ್ನಷ್ಟಕ್ಕೆ ನಾನೇ ನಿಶ್ಚಯಿಸಿ ಕಾಲಿಂಗ್ ಬೆಲ್ ಒತ್ತಿದ ಹತ್ತೇ ಸೆಕೆಂಡುಗಳಲ್ಲಿ ಬಾಗಿಲು ತೆರೆದು ನನ್ನೆದುರು ನಿಂತಿದ್ದ! ನೆರಿಗೆ ಬಿದ್ದ ಹಣೆಯನ್ನು ಒತ್ತಿಕೊಳ್ಳುತ್ತ ಕೊಟ್ಟಿಗೆಗೆ ಓಡುವ ಆಯಿ, ಬೆವರು ಸುರಿಸುತ್ತ ತಿಮ್ಮಪ್ಪನ ದರ್ಶನಕ್ಕೆಂದು ಕ್ಯೂದಲ್ಲಿ ಕಾಯುತ್ತಿರುವ ಭಕ್ತರು, ಇಷ್ಟವಿರದಿದ್ದ ಫೀಲ್ಡ್ ವರ್ಕಿಗೆ ನನ್ನನ್ನು ಕಳುಹಿಸಿದ ಮ್ಯಾನೇಜರು ಎಲ್ಲರೂ ಒಟ್ಟೊಟ್ಟಿಗೇ ನೆನಪಾದರು. ಕಣ್ಣು ಕೂಡಾ ಮಿಟುಕಿಸದೇ ಬಾಯಿ ತೆರೆದುಕೊಂಡು ನಾನು ಅವನನ್ನೇ ನೋಡುತ್ತಿದ್ದರೆ, ಆತ ಮಾತ್ರ ಮುಖದಲ್ಲಿ ಯಾವ ಭಾವನೆಯನ್ನೂ ತೋರಿಸದೆ ಸೀದಾ ಟೆರೆಸಿಗೆ ಕರೆದುಕೊಂಡು ಹೋದ. ಮೆಟ್ಟಿಲುಗಳನ್ನು ಹತ್ತುವಾಗ ತಾನು ತೀರಾ ಇತ್ತೀಚೆಗೆ ಇದನ್ನು ಆರಂಭಿಸಿರುವುದಾಗಿಯೂ, ಕೆಲವೇ ತಿಂಗಳುಗಳಲ್ಲಿ ಮನೆಗೆ ಬೇಕಾದ ತರಕಾರಿ-ಸೊಪ್ಪುಗಳನ್ನೆಲ್ಲ ತಾನೇ ಬೆಳೆದು ಕೊಳ್ಳುತ್ತಿರುವುದಾಗಿಯೂ, ರಾಸಾಯನಿಕಗಳಿಲ್ಲದೇ ಬೆಳೆದ ಆಹಾರವನ್ನು ತಿನ್ನುವ ಸಮಾಧಾನವೇ ಬೇರೆ ತೆರನಾದದ್ದು ಎಂದೆಲ್ಲ ಮಾತನಾಡುತ್ತಲೇ ಇದ್ದ.
ಅವನ ಮಾತುಗಳಿಗೆ ಏನನ್ನೂ ಪ್ರತಿಕ್ರಿಯಿಸದೆ ಟೆರೆಸಿಗೆ ಕಾಲಿಟ್ಟವಳಿಗೆ ಇನ್ನಿಲ್ಲದ ಆಶ್ಚರ್ಯ ಕಾದಿತ್ತು. ನಲವತ್ತಡಿಯ ಟೆರೆಸಿನ ಉದ್ದಕ್ಕೂ ಸಾಲಾಗಿ ಕೆಸುವಿನ ಗಿಡಗಳು ಬೆಳೆದು ನಿಂತಿದ್ದವು. ಹಸಿರು ಪ್ಲಾಸ್ಟಿಕ್ ಬ್ಯಾಗುಗಳಲ್ಲಿ ಮಕ್ಕಳು, ಮರಿಮಕ್ಕಳೊಂದಿಗೆ ಚಿಗುರುತ್ತಿದ್ದ ಎಲೆಗಳನ್ನು ಮೆಲ್ಲಗೆ ಮುಟ್ಟಿದರೆ ಆಯಿಯ ಬೆಚ್ಚನೆಯ ಕೈಗಳನ್ನು ಸ್ಪರ್ಶಿಸಿದ ಅನುಭವವಾಯಿತು. ಉದುರಿದ ಕಣ್ಣೀರ ಹನಿಗಳು ಕೆಸುವಿನೆಲೆಯ ಮೇಲೆ ಬಿದ್ದು ಅತ್ತಿತ್ತ ಸರಿದಾಡಿ ಮೆತ್ತಗೆ ಮಣ್ಣಿಗಿಳಿದವು. ತಲೆಯೆತ್ತಿದರೆ ಕೈಕಟ್ಟಿಕೊಂಡು ನನ್ನನ್ನೇ ನೋಡುತ್ತಿದ್ದ ಕಾರ್ತಿಕನ ಕಣ್ಣುಗಳಲ್ಲಿ ಕೊನೆಗೂ ತಾನೇನನ್ನೋ ಮಹತ್ತರವಾದದ್ದನ್ನು ಸಾಧಿಸಿದ ತೃಪ್ತಿಯನ್ನು ಕಂಡಂತಾಯಿತು. ನನ್ನ ಪಕ್ಕ ಮಂಡಿಯೂರಿ ಕುಳಿತವನೇ, “ಈ ಗಿಡಗಳಿಗೆ ನೀರು ಹಾಕುವಾಗಲೆಲ್ಲ ಆಯಿಯ ಕರಕಲಿ ನೆನಪಾಗುತ್ತದೆ, ನನ್ನ ಕನಸಿನಲ್ಲಿ ವಿಶ್ವನಾಥ ಬರುವುದರೊಳಗಾಗಿ ಕಾಶಿಗೆ ಹೋಗಬೇಕು ನಾವು” ಎಂದ. ಇಷ್ಟು ದಿನ ಆತ ನಾಪತ್ತೆಯಾಗಿದ್ದಕ್ಕೆ ಕಾರಣವನ್ನಾಗಲೀ, ಅಚಾನಕ್ಕಾಗಿ ಹೀಗೆ ಭೇಟಿಯಾಗದಿದ್ದರೆ ಅವನು ನನ್ನನ್ನು ಹುಡುಕಿಕೊಂಡು ಬರುತ್ತಿದ್ದನಾ ಎನ್ನುವ ಪ್ರಶ್ನೆಯನ್ನಾಗಲೀ ನಾನು ಕೇಳಲಿಲ್ಲ. ಅಷ್ಟಕ್ಕೂ ಅವನ ಕಿರಿಕಿರಿಯ ಕವಿತೆಗಳನ್ನು ನಾನೇಕೆ ಕರಕಲಿಯೊಂದಿಗೆ ಹೋಲಿಸುತ್ತಿದ್ದೆ ಎನ್ನುವ ಪ್ರಶ್ನೆಗೆ ನನ್ನಲ್ಲಿಯೇ ಉತ್ತರವಿರಲಿಲ್ಲ.
10 thoughts on “ಕರಕಲಿ”
Super
Thank u Yashoda!!!
‘ಕರಕಲಿ ‘ ಇದು ಹೊಸ ಶಬ್ದ ಬಿಸಿಲು ನಾಡಿನ ನಮಗೆ. ಕಥೆ ಓದುತ್ತಾ ಅದರ ಒಳ ಅರ್ಥ ಕೂಡ ತಿಳಿಯಿತು. ಕಥೆ ಚಂದಾಗಿದೆ. ಲೇಖಕಿಗೆ ಅಭಿನಂದನೆಗಳು.
ಧನ್ಯವಾದಗಳು ರಾಘವೇಂದ್ರ ಅವರಿಗೆ!!
ಲವಲವಿಕೆಯ ಬರಹ.
ಧನ್ಯವಾದಗಳು ಲಿಂಗರಾಜ್ ಅವರಿಗೆ
ಕತೆ ಚೆನ್ನಾಗಿದೆ ಅಂಜನಾ..
ಧನ್ಯವಾದಗಳು ಕಲಾ..
ಉತ್ತಮ ಕಥೆ.
ಕಾರ್ತಿಕ್ ನನ್ನು ಪರಿಚಿಸುವ ತಂತ್ರ ಇಷ್ಟ ಆಯಿತು.
ಧನ್ಯವಾದಗಳು ರಾಜೇಂದ್ರ ಅವರಿಗೆ.