ನಮ್ಮೂರ ಮಡಿವಾಳಪ್ಪ ಮುತ್ಯಾನ ಜಾತ್ರೆಯೆಂದರೆ ನಮಗೆಲ್ಲ ಹಂಡೆ ಹಾಲು ಕುಡಿದ ಖಂಡುಗ ಖಂಡುಗ ಖುಷಿ. ಜಾತ್ರೆಗೆ ತಿಂಗಳೊಪ್ಪತ್ತು ಮೊದಲೇ ಊರಿಗೂರೇ ಸಿಂಗಾರ, ಸಂಭ್ರಮದ ಸಿದ್ಧತೆಗಳು. ಅಪ್ಪ ತರುವ ಯಡ್ರಾಮಿಸಂತೆ ಗುಡಾರದಂಗಡಿಯ ಹೊಸ ಅಂಗಿಯಿಂದ ಹಿಡಿದು ಮಠಕ್ಕೆ ಅವ್ವ ಮಾಡಿಕೊಡುವ ಸಜ್ಜೆಹಿಟ್ಟಿನ ರೊಟ್ಟಿವರೆಗೆ ಎಡಬಿಡದ ಸಡಗರಗಳು.
ಗವಿ ಭೀಮಾಶಂಕರ ಅವಧೂತರ ಧುನಿಯ ಏಕತಾರಿ ನಾದಮೇಳದ ಸಂವೇದನೆ ಉಕ್ಕಿಸುವ ಉಮೇದುಗಳು. ಬನ್ನಿ ಮಹಾಂಕಾಳಿಯ ಅಗ್ರಪೂಜೆ. ಮರುದಿನ ಮುಂಜಾನೆ ಪುರವಂತರಾಟ. ಪಾಲಕಿ ಉತ್ಸವದೊಂದಿಗೆ ಅಗ್ಗಿ ತುಳಿಯುವ, ಸಂಜೆಯ ಗೋಧೂಳಿಯಲಿ ತೇರು ಎಳೆಯುವ ದಾಂಗುಡಿಯ ಧಾವಂತಗಳು. ರಾಜಕಾರಣಿ, ಹರಗುರು ಚರಮೂರ್ತಿಗಳ ಧರ್ಮಸಭೆ. ಆಹೋರಾತ್ರಿ ಭಜನೆ, ತತ್ವಪದ ಸಂಗೀತದ ಆರೋಗಣೆ. ಸಕ್ಕರಿ ಸಿಣ್ಣಿ, ಬೆಲ್ಲದ ಜಿಲೇಬಿ, ಬೆಂಡು ಬತ್ತಾಸಿನ ಹಿಂಡು ಹಿಂಡು ಅಂಗಡಿಗಳು. ಥ್ರೀಡಿ ಎಫೆಕ್ಟಿನ ಮೂಕ ಸಿನೆಮಾದ ಗರ್ದಿಗಮ್ಮತ್ತು… ಹೀಗೆ ಒಂದೆರಡಲ್ಲ ಹತ್ತುಹಲವು ಸಹಸ್ರ ಸಹಸ್ರ ಸಂಭ್ರಮ, ಸಡಗರಗಳ ಸರಮಾಲೆಯೇ ನಮ್ಮೂರ ಮಡಿವಾಳಪ್ಪನ ಜಾತ್ರೆ.
ಮುತ್ಯಾನ ಜಾತ್ರೆಯ ಕಜ್ಜಭಜ್ಜಿಯ ಮಹಾಪ್ರಸಾದವೆಂದರೆ ನಮಗೆ ಮೃಷ್ಟಾನ್ನ ಭೋಜನ. ಆಹಾ.. ಅದೆಷ್ಟು ಕಾಯಿಪಲ್ಯ, ದವಸ ಧಾನ್ಯಗಳ ಮಿಸಾಳಭಾಜಿ ಭಜ್ಜಿಯದು. ಅಲಸಂದಿ, ಹೆಸರು, ಕಡಲೆ, ಹುರುಳಿ, ತೊಗರಿ, ಸಜ್ಜೆ, ನವಣಿ ಹೀಗೆ ಎಲ್ಲಾ ಬಗೆಯ ದವಸ ಧಾನ್ಯಗಳು. ಅವು ಸೇರುಗಟ್ಟಲೇ ಅಲ್ಲ ಮಣಗಟ್ಟಲೇ, ಒಮ್ಮೊಮ್ಮೆ ಅದಕ್ಕು ಮಿಕ್ಕಿದ ವ್ಯಂಜನ ವೆಚ್ಚಗಳು. ಪುಂಡಿಪಲ್ಯ, ಮೆಂತೆಪಲ್ಯ, ಗೊರಜಿ, ಸಬಸಿ.. ಹೀಗೆ ಎಲ್ಲಬಗೆಯ ತಪ್ಪಲು ಪಲ್ಯ. ನೆನಪಿರಲಿ ಶಾಸ್ತ್ರಕ್ಕೆಂಬಂತೆ ಬೇವಿನ ಸೊಪ್ಪನ್ನು ಮರೆಯದೇ ಸೇರಿಸುತ್ತಾರೆ. ಹಸಿರು ಸೊಪ್ಪು ಸಿವಡುಗಟ್ಟಲೇ ಅಲ್ಲ ಬಂಡಿಗಟ್ಟಲೇ ಬೇಕು. ಮಣಗಟ್ಟಲೇ ಹಸಿ ಮೆಣಸಿನಕಾಯಿ, ಚಕ್ಕಡಿಗಾಡಿ ತುಂಬಾ ಕುಂಬಳಕಾಯಿಗಳು ಬೇಕು.
ಹೀಗೆ ಹತ್ತು ಹಲವು ಸಿರಿಧಾನ್ಯಗಳು, ಹಸಿರು ತರಕಾರಿಗಳು ಬೇಯುವ ಸೊಂಟದೆತ್ತರದ ನಾಕೈದು ಕಡಾಯಿಗಳಲ್ಲಿ ಮಾಡುವ ಅಡಿಗೆಯೇ ಭಜ್ಜಿ. ಅದು ಬಟಾಬಯಲಲ್ಲಿ ಒಲೆ ಹೂಡಿ ತಯಾರಿಸುವ ಮಹಾಬಯಲ ಮಹಾಂತ ಮಡಿವಾಳನ ಮಹಾಪ್ರಸಾದ. ಅಷ್ಟಿಷ್ಟಲ್ಲ ಅದಕ್ಕೆ ಪೌಷ್ಟಿಕ ಆಹಾರತಜ್ಞರೇ ಸರ್ಟಿಫಿಕೇಟ್ ಕೊಡುವಷ್ಟು ಅಮೋಘ ರುಚಿ. ಚಿಣಮಗೇರಿ ಗುರುಮಠದ ಭಜ್ಜಿಗೂ ಅಂಥ ರುಚಿ ಸಾಧ್ಯವಾಗಿಲ್ಲ. ಕಡಕೋಳ ಜಾತ್ರೆಯ ಕಜ್ಜಭಜ್ಜಿಯೆಂಬುದು ಖುದ್ದು ಮಡಿವಾಳಪ್ಪನವರ ಮಹಾಪಾಕ. ಅದು ಮಡಿವಾಳಪ್ಪನ ಪ್ರೀತಿಯ ಮಹಾಪ್ರಸಾದ. ಅಂತೆಯೇ ಅದಕ್ಕೆ ಮಡಿವಾಳತನದ ಅನನ್ಯತೆಯ ಗುಣವಿದೆ. ಇದು ಹಿರಿಯರನೇಕರ ಅನುಭವದ ಮಾತು. ಕಜ್ಜಭಜ್ಜಿ ಕೇವಲ ರೊಟ್ಟಿ ಪಲ್ಯದ ರುಚಿಯಲ್ಲ ಅದರೊಂದಿಗೆ ಜವಾರಿ ಅನುಭಾವದ ಅನುಸಂಧಾನವಿದೆ.
ಉಲ್ಲೇಖಿಸಲೇ ಬೇಕಾದ ಮತ್ತೊಂದು ಮಹತ್ವದ ಸಂಗತಿ ಇಲ್ಲಿದೆ. ಬೇರೆ, ಬೇರೆ ಊರುಗಳಿಂದ ಆಗಮಿಸಿದ ದಲಿತರಾದಿಯಾಗಿ ಎಲ್ಲ ಸಮುದಾಯದ ಸಾಮಾನ್ಯರು ಸೇರಿ ತಯಾರಿಸುವ ಅಸಾಮಾನ್ಯ ಭಜ್ಜಿ ಅದು. ನಮ್ಮೂರಿನ ಕರೆಪ್ಪಗೌಡ, ಹಂದಿಗನೂರಿನ ಗೊಲ್ಲಾಳಪ್ಪ ಗೌಡ, ಚೌಧರಿ ಮಡಿವಾಳಪ್ಪ ಮತ್ತವರ ತಂಡ, ವರವಿಯ ಅಂದಿನ ಬಾಳಾರಾಮ ದಾದಾ ಇಂದು ಅವನ ಮಗ ಸಂಜೀವ ದಾದಾ ಹೀಗೆ ಭಜ್ಜಿ ತಯಾರಿಸುವ ಪರಿಣತರ ಸಮೂಹವೇ ಇದೆ.
ಅವರು ತಯಾರಿಸುವ ಭಜ್ಜಿ ಅಪ್ರತಿಮ ರುಚಿಯ ಆರೋಗ್ಯಕರ ವ್ಯಂಜನ. ಜಾತ್ರೆಯ ಮೊದಲ ದಿನದ ರಾತ್ರಿಯೇ ಖಾಂಡ. ಖಾಂಡದ ರಾತ್ರಿ ಶ್ರೀಮಠದ ಪೂಜ್ಯರಾದ ಡಾ. ರುದ್ರಮುನಿ ಶಿವಾಚಾರ್ಯರೇ ಖುದ್ದು ಮಹಾಪ್ರಸಾದ ವಿತರಣೆಗೆ ಚಾಲನೆ ನೀಡುತ್ತಾರೆ. ಕಜ್ಜಭಜ್ಜಿಯ ಜಾತ್ರೆಗೆ ಆಗಮಿಸುವ ಸಮಾಜದ ಎಲ್ಲಾ ಜಾತಿ, ವರ್ಗಗಳ ಸಹಸ್ರಾರು ಮಂದಿ ನೆಲದ ಮೇಲೆ ಏಕಪಂಕ್ತಿಯಲ್ಲೇ ಕುಂತು ಸಾಮೂಹಿಕವಾಗಿ ಪ್ರಸಾದ ಸೇವಿಸುತ್ತಾರೆ. ಅಂಗೈಯಲ್ಲಿ ಕಜ್ಜಗಳು, ಕಜ್ಜಗಳ ಮೇಲೆ ಭಜ್ಜಿ ಬಡಿಸಿಕೊಂಡು ಉಣ್ಣುವ ಪ್ರೀತಿ ಬಣ್ಣಿಸಲಸದಳ. ಅಕ್ಷರಶಃ ಬಹುಳಪ್ರಜ್ಞೆಯ ಜೀವಬಾಹುಳ್ಯದ ಪಂಕ್ತಿ ಭೋಜನವದು. ಜಾತ್ರೆಗೆ ಆಮಂತ್ರಿತ ಸ್ವಾಮೀಜಿಗಳು ಸಹಿತ ಖಾಯಷ್ ಪಟ್ಟು ಇದೇ ಕಜ್ಜಭಜ್ಜಿಯ ಪ್ರಸಾದವನ್ನು ಪ್ರೀತಿಯಿಂದ ಸೇವಿಸುತ್ತಾರೆ. ಅದನ್ನೆಲ್ಲ ಕೇಳುವುದಕ್ಕಿಂತ ನೋಡಿಯೇ ಸಂಭ್ರಮಿಸುವುದು ಲೇಸು.
ಭಜ್ಜಿಯ ಸಂಕ್ಷಿಪ್ತ ಕಥನ ಹೀಗಿದ್ದರೆ, ಕಜ್ಜದ ಕಥನ ಇನ್ನೂ ಅನ್ಯೋನ್ಯವಾದುದು. ಮುತ್ಯಾನ ಜಾತ್ರೆ ಹತ್ತಿರ ಬರುತ್ತಿದ್ದಂತೆ ಕಜ್ಜದ ಕಟಿಬಿಟಿ. ನೂರಾರು ಊರುಗಳಲ್ಲಿ ಸಜ್ಜೆ, ಮುಂಗಾರಿ, ಹಿಂಗಾರಿ ಬಿಳಿಜೋಳದ ಕಜ್ಜ(ರೊಟ್ಟಿ) ತಯಾರಿ ಆರಂಭ. ಪಟಪಟ ಅಂತ ಎರಡೂ ಕೈಗಳಿಂದ ಬಡಿದು, ರುಚಿ ಬರುವಂತೆ ತಟ್ಟಿ ಹಂಚಿನ ಮೇಲೆ ಸುಟ್ಟು ಸಿದ್ಧಗೊಳಿಸಿದ ರಾಶಿ, ರಾಶಿ ರೊಟ್ಟಿಗಳು. ಮಡಿವಾಳಪ್ಪನ ಜಾತ್ರೆಗೆಂದೇ ಹತ್ತಾರು ಊರುಗಳಿಂದ ಭಕ್ತರು ಕಜ್ಜಗಳನ್ನು ತಯಾರಿ ಮಾಡಿಕೊಂಡು ತರುತ್ತಾರೆ.
ಬಡವರು ಬಟ್ಟೆಯ ಪಾವಡದಲ್ಲಿ ಕಟ್ಟಿಕೊಂಡು ತಲೆ ಮೇಲೆ ಹೊತ್ತು ತರುವರು. ಇನ್ನು ಕೆಲವರು ಎತ್ತಿನಗಾಡಿ, ಟ್ರ್ಯಾಕ್ಟರುಗಳಲ್ಲಿ ಚೀಲಗಟ್ಟಲೇ ಒಣಗಿದ ರೊಟ್ಟಿಗಳನ್ನು ತಂದು ಮುತ್ಯಾ ಮಡಿವಾಳಪ್ಪನ ಮಠಕ್ಕೆ ಸಲ್ಲಿಸುವರು. ತನ್ಮೂಲಕ ಪುನೀತರಾದ ಸಂತೃಪ್ತಿ ಸಾರ್ವಜನಿಕ ಭಕ್ತ ಮಹಾಶಯರದು. ಜಾತ್ರೆಗೆ ಒಂದೆರಡು ದಿನಕ್ಕೆ ಮುನ್ನ ಮಠದ ಉಗ್ರಾಣದಂತಹ ಖೋಲಿಗಳ ತುಂಬಾ ಕಜ್ಜದ ಹೆಸರಿನ ಯಥೇಚ್ಛ ರೊಟ್ಟಿಗಳು.
ಕೊರೆವ ಚಳಿಗಾಲದ ಥಂಡಿಗೆ ಹೆದರದೇ ಸಹಸ್ರ ಸಹಸ್ರ ಸಂಖೆಯಲ್ಲಿ ಜನರು ಜಾತ್ರೆಗೆ ಆಗಮಿಸತ್ತಾರೆ. ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದಲೂ ಬರುತ್ತಾರೆ. ಹಾಗೆ ಬಂದವರು ಖಾಂಡ, ರಥೋತ್ಸವ ಎರಡು ದಿನವೂ ನಿವಾಂತವಾಗಿ ಜಾತ್ರೆಯ ಸಂಭ್ರಮ ಸವಿಯುತ್ತಾರೆ. ತೇರಿನ ರಾತ್ರಿ ಒಮ್ಮೊಮ್ಮೆ ಇಂಗ್ರೇಜಿ ಸೀಮೆಯ ಪಾರಿಜಾತದ ಆಟಗಳು. ಇಲ್ಲವೇ ಊರವರೇ ಕಲಿತ ನಾಟಕಗಳು. ಜಾತ್ರೆಗೆ ಠಿಕಾಣಿ ಹಾಕಿದ ಗೋಲಗೇರಿಯವರ ಅಂಗಡಿ ತೇರಿನ ಕಳಸ ಇಳಿಸುವವರೆಗೂ ಖಾಯಂ. ಬೆಂಡು ಬತ್ತಾಸು, ಬೆಲ್ಲದ ಜಿಲೇಬಿ, ಸಕ್ರಿಸಿಣ್ಣಿ, ಬಿಸಿ ಬಿಸಿ ಖಾಂದಾಭಜಿ ಮತ್ತು ಜಿಲೇಬಿಯ ರುಚಿ ಇವತ್ತಿಗೂ ಗೋಲಗೇರಿ ಅಂಗಡಿ ಉಳಿಸಿಕೊಂಡು ಬಂದಿದೆ.
ಮಡಿವಾಳಪ್ಪನ ಅನುಭಾವ ಜಾತ್ರೆಯ ಜೀವಾಳವೆಂದರೆ ತತ್ವಪದಗಳ ಮಹಾಸಂಗಮ. ಈ ಮಹಾಸಂಗಮವೇ ಗವಿ ಭೀಮಾಶಂಕರ ಅವಧೂತರ ಫೌಳಿಯ ಸಾಧುರ ಮೇಳ ಮತ್ತು ಅವರ ಅವತಾರಗಳು. ನಿಗಿ ನಿಗಿ ಕೆಂಡದ ಧುನಿಯ ಸುತ್ತಲೂ ಗಾಂಜಾ ಚಿಲುಮೆ ಸೇದುತ್ತಾ ಓಂಕಾರ ನಾದೋನ್ಮಾದದ ಹೊಗೆ ಹೊರಡಿಸುವುದನ್ನು ನೋಡುವುದೇ ರೋಮಾಂಚನ. ಮತ್ತೊಂದೆಡೆ ಏಕತಾರಿ, ಚಿನ್ನಿ, ತಾಳ, ದಮಡಿಗಳ ಝೇಂಕಾರ. ಗುರುಧ್ಯಾನ ಮಾಧುರ್ಯದ ಘಮಲು. ಅಲ್ಲಿ ಮಡಿವಾಳಪ್ಪನ ತತ್ವಪದಗಳು ಮಾತ್ರ ಪ್ರಸ್ತುತವಲ್ಲ.
ಶಿಶುನಾಳ ಶರೀಫ, ನವಲಗುಂದದ ನಾಗಲಿಂಗ, ಶಿರಹಟ್ಟಿಯ ಫಕೀರೇಶ, ರಾಂಪುರದ ಬಕ್ಕಪ್ಪ ಹೀಗೆ ಒಬ್ರೆ ಇಬ್ರೆ ಹತ್ತಾರು ಮಂದಿಯ ತತ್ವಪದಗಳ ಸವಾಲ್ ಜವಾಬಿನಂತೆ ಮೇಲಾಟದ ಮೇಲೆ ರಾಶಿ ರಾಶಿ ಪದಗಳ ಹಂತಿ ಹೂಡಿದ್ದೇ ಹೂಡಿದ್ದು. ಕನ್ನಡದ ಜತೆಗೆ ಕೆಲವರು ಮರಾಠಿ, ಉರ್ದು, ತೆಲುಗಿನಲ್ಲಿ ತತ್ವಪದಗಳಿಗೆ ಪದಾರ್ಥ ಜ್ಞಾನದ ಟೀಕು ಹೇಳುತ್ತಿರುತ್ತಾರೆ. ಭಾಷೆ ಅಲ್ಲಿ ಯಾರಿಗೂ ತೊಡಕಾಗಿ ಕಾಡುವುದೇ ಇಲ್ಲ. ಅದು ಅಕ್ಷರಶಃ ಸಂವೇದನಾಶೀಲ ಸಂವಾದ. ಒಮ್ಮೊಮ್ಮೆ ತಾರಕದ ಶಿಖರ ಏರುತ್ತದೆ. ಉತ್ತುಂಗ ಅನುಭಾವದ ಉನ್ಮನಿಯ ಉನ್ಮೇಷಣೆಗೆ ಭಾಷೆ, ವೇಷ, ಬಣ್ಣ, ಸಂತಸ, ಸಂಕಟ ಯಾವುದರ ಅರಿವು – ಪರಿವು, ಹಂಗು – ಹರಕತ್ತು ಇರುವುದಿಲ್ಲ.
ಪ್ರಾಯಶಃ ಇದೆಲ್ಲ ಹಿಂದಿನ ಮಠಾಧೀಶರಾಗಿ ಅವಧೂತ ಪ್ರೀತಿಯನ್ನೇ ಬದುಕಿದ ವೀರಯ್ಯ ಮುತ್ಯಾ ಅವರ ಅವಧಿಯ ಪಾರಮ್ಯಕಾಲ. ಗ್ಲೋಬೀಕರಣದ ದೆವ್ವಗಾಳಿ ಎಲ್ಲಕಡೆಗೂ ಬೀಸಿದಂತೆ ಸಂತ ಮಹಾಂತರ ಮಠ, ಜಾತ್ರೆಗಳ ಮೇಲೂ ಬೀಸಿ ಜಾತ್ರೆಯ ಚೆಹರೆಗಳು ಸ್ಥಿತ್ಯಂತರ ಗೊಂಡಿವೆ. ಮತ್ತೆ ಕೆಲವು ಜಾತ್ರೆಗಳು ಆಧುನಿಕತೆಗೆ ರೂಪಾಂತರಗೊಂಡಿವೆ. ಅವು ನೆಲಧರ್ಮದಿಂದ ದೂರ ಸಾಗುತ್ತಿವೆ. ನನ್ನ ಅಪ್ಪ ಅವ್ವನ ಕಾಲದ ಜನಸಂಸ್ಕೃತಿ ಪ್ರೀತಿ ಪರಂಪರೆಯ ಬೇರುಗಳು ಒಣಗಿ ಹೋಗಿವೆ. ಬತ್ತಿ ಹೋದ ಹಳೆಯ ಬೇರುಗಳಿಂದ ಮತ್ತೆ ಹೊಸಜೀವ ಚಿಗುರು ಬರುವುದು ಸಾಧ್ಯವೇ.? ಸಾಂಸ್ಥಿಕಗೊಂಡ ಧರ್ಮ ಸಂಪ್ರದಾಯಗಳು ಜನಸಂಸ್ಕೃತಿ ಐಕ್ಯತೆಯ ಜೀವಸಂವೇದನೆಗಳನ್ನು ಕದಡಿವೆ. ಜಾತ್ರೆಗಳಿಗೆ ಮೊದಲಿನ ಜೀವಪ್ರೀತಿ ಮತ್ತೆ ಮರು ಕಳಿಸಲಿ. ಜನಪದರ ಅಂತಃಕರಣ ಮರು ಪೂರಣಗೊಳ್ಳಲಿ.
*ಮರೆತಮಾತು* :
ಡಿಸೆಂಬರ್ ೨೬ ಮತ್ತು ೨೭ ರಂದು ಕಡಕೋಳದಲ್ಲಿ ಮುತ್ಯಾ ಮಡಿವಾಳಪ್ಪನವರ ಜಾತ್ರೆ.
ಕಡಕೋಳ ಜಾತ್ರೆಯ ಕಜ್ಜಭಜ್ಜಿ, ಏಕತಾರಿಯ ಘಮಲಿನಲಿ….
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಮಲ್ಲಿಕಾರ್ಜುನ ಕಡಕೋಳ
ಇವರ ಹುಟ್ಟೂರು ಕಲಬುರ್ಗಿ ಜಿಲ್ಲೆಯ ಕಡಕೋಳ. ಆರೋಗ್ಯ ಇಲಾಖೆಯಲ್ಲಿ, ಬೋಧಕರಾಗಿ, ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಪ್ರಕಟಿಸಿದ ಸಾಹಿತ್ಯ ಕೃತಿಗಳು :
ಫಲ್ಗುಣಿಯಲಿ ಕೇಳಿಬಂದ ರುದ್ರವೀಣೆ (ವೈಚಾರಿಕ ಲೇಖನಗಳು)
ಅವಳ ಸನ್ನಿಧಿಯಲಿ...(ಅಂಕಣ ಬರಹ)
ರಂಗ ಸುನೇರಿ ( ವಿಮರ್ಶಾ ಸಂಕಲನ)
ದ್ರುಪದ (ಶಾಸ್ತ್ರೀಯ ಸಂಗೀತ ಕೃತಿ )
ಕಡಕೋಳ ಮಡಿವಾಳಪ್ಪನವರ ತತ್ವಜ್ಞಾನ ಪದಗಳು - ಎರಡು ಆವೃತ್ತಿಗಳು (ಸಂಪಾದಿತ ಕೃತಿಗಳು)
ಜೀವನ್ಮುಖಿ (ಸಂ : ಅಭಿನಂದನ ಗ್ರಂಥ)
ರಂಗ ವಿಹಂಗಮ (ಕ. ನಾ. ಅಕಾಡೆಮಿ ಪ್ರಕಟಣೆ)
ದಾವಣಗೆರೆ ಜಿಲ್ಲೆ ರಂಗಭೂಮಿ (ಕ. ನಾ. ಅಕಾಡೆಮಿ ಪ್ರಕಟಣೆ)
ಕಂಚಿಕೇರಿ ಶಿವಣ್ಣ (ಜೀವನ ಚರಿತ್ರೆ - ಕ. ನಾ. ಅಕಾಡೆಮಿ ಪ್ರಕಟಣೆ)
ರಂಗ ಬಾಸಿಂಗ (ಡಾ. ರಾಜಕುಮಾರ ಬಿಡುಗಡೆ ಮಾಡಿದ ಕೃತಿ)
ರಂಗ ಕಂಕಣ (ಸಂಪಾದಿತ ಕೃತಿ)
ರಂಗ ಮಲ್ಲಿಗೆ (ಕ. ನಾ. ಅಕಾಡೆಮಿ ಪ್ರಕಟಣೆ)
ಲಾಸ್ಟ್ ಬೆಲ್ (ಮಾನವಿಕ ಕೃತಿ)
ತೆನೆ ತೇರು (ದಾವಣಗೆರೆ ಜಿಲ್ಲಾಡಳಿತ ಪ್ರಕಟಣೆ)
ಕಾಯಕ (ಸರ್ಕಾರಿ ನೌಕರರ ಸ್ಮರಣ ಸಂಚಿಕೆ, ಸಂ.)
ನೌಕರ ಬಂಧು (ಸರ್ಕಾರಿ ನೌಕರರ ಸ್ಮರಣ ಸಂಚಿಕೆ, ಸಂ.)
ಸಂವೇದನೆ (ಸರ್ಕಾರಿ ನೌಕರರ ಸ್ಮರಣ ಸಂಚಿಕೆ, ಸಂ.)
ಯಡ್ರಾಮಿ ಸೀಮೆ ಕಥನಗಳು (ಜಿಂದಾ ಮಿಸಾಲ್ ಕಹಾನಿ)
ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳು ಏರ್ಪಡಿಸಿದ ರಾಜ್ಯ ಹಾಗೂ ಹೊರ ರಾಜ್ಯದ ಅನೇಕ ಕಡೆಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ಮೆಚ್ಚುಗೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ. ಪ್ರಬಂಧ ಮಂಡನೆ.
ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಸುಧಾ, ತರಂಗ, ತುಷಾರ, ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರ್, ಕರ್ಮವೀರ, ಅನ್ವೇಷಣೆ, ಸಂಕ್ರಮಣ... ಮೊದಲಾದ ಪತ್ರಿಕೆಗಳಲ್ಲಿ ಕತೆ, ಕವನ, ಸಂದರ್ಶನ, ಲೇಖನಗಳು ಪ್ರಕಟ. ಕನ್ನಡಪ್ರಭ, ತುಷಾರಗಳಿಗೆ ಆಮಂತ್ರಿತ ಕತೆ, ಲೇಖನಗಳ ಪ್ರಕಟಣೆ. ತುಷಾರದಲ್ಲಿ ಈಗ್ಗೆ 35 ವರ್ಷಗಳಷ್ಟು ಹಿಂದೆ ಪ್ರಕಟವಾದ ನನ್ನ ಕತೆಯೊಂದರ ಕುರಿತು ಐದು ತಿಂಗಳ ಕಾಲ ಚರ್ಚೆಯಾಗಿ ಹೆಸರಾಂತ ಕತೆಗಾರ ಡಾ. ಶಾಂತಿನಾಥ ದೇಸಾಯಿ ಅವರು ಚರ್ಚೆಯಲ್ಲಿ ಪಾಲ್ಗೊಂಡು ಅಪಾರ ಮೆಚ್ಚುಗೆ ತೋರಿದ್ದರು.
ಕೆಂಡ ಸಂಪಿಗೆ ಬ್ಲಾಗ್ ಹಾಗೂ ಜನತಾವಾಣಿ, ಪತ್ರಿಕೆಗಳಿಗೆ ನಾಲ್ಕೂವರೆ ವರ್ಷಕಾಲ ಅಂಕಣ ಬರಹಗಳ ಪ್ರಕಟನೆ.
ಪ್ರಶಸ್ತಿ, ಪುರಸ್ಕಾರ ಗಳು :
ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ
ದಾವಣಗೆರೆ ಮಹಾನಗರಪಾಲಿಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಕೈವಾರ ನಾರಾಯಣ ತಾತ ಪ್ರಶಸ್ತಿ
ಮೈಸೂರಲ್ಲಿ ಜರುಗಿದ 83 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ. ...ಇನ್ನೂ ಅನೇಕ ಪ್ರಶಸ್ತಿಗಳು.
ಯಡ್ರಾಮಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ - 2019
ಎರಡು ಅವಧಿಗೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯನಾಗಿ "ಬಾ ಅತಿಥಿ" ಯಂತಹ ಅಪರೂಪದ ಕಾರ್ಯಕ್ರಮ ನಡೆಸುವ ಮೂಲಕ ರಂಗ ಸಂಸ್ಕೃತಿಗೆ ಹೊಸ ಆಯಾಮ ದಕ್ಕಿಸಿದ್ದಾರೆ. ಕರ್ನಾಟಕ ರಂಗ ಸಮಾಜ ನಿಕಟಪೂರ್ವ ಸದಸ್ಯ.
ಇವರ ಬದುಕು ಮತ್ತು ಸಾಧನೆ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೂರದರ್ಶನ ಸಾಕ್ಷ್ಯಚಿತ್ರ ತಯಾರಿಸಿವೆ. ಕುವೆಂಪು ವಿ.ವಿ.ಯ ಶಶಿಕುಮಾರ್ ಎಂಬುವರು ಇವರ ಸಾಧನೆಗಳ ಕುರಿತು ಎಂ.ಫಿಲ್. ಮಾಡಿದ್ದಾರೆ.
All Posts
1 thought on “ಕಡಕೋಳ ಜಾತ್ರೆಯ ಕಜ್ಜಭಜ್ಜಿ, ಏಕತಾರಿಯ ಘಮಲಿನಲಿ….”
ಗ್ರಾಮೀಣ ಬದುಕಿನ ಸಾರವನ್ನು ಉಣಿಸಿದಿರಿಲ್ಲಿ. ತುಂಬಾ ಸೊಗಸಾಗಿದೆ ಆದರೆ ಕೊನೆಯಲ್ಲಿ ನಿಮ್ಮ ಮನಸಿನ ದುಗುಡ ಸಹಜವೆ, ಅದಕ್ಕೆ ಡಿ ವಿ ಜಿ ಯ ಕಗ್ಗ ಉಸುರುವುದು “ ಬದುಕು ಜಟಕಾ ಬಂಡಿ………………….। ಪದ ಕುಸಿಯೆ ನೆಲವಿಹುದು- ಮಂಕುತಿಮ್ಮ☺️