ವ್ಯವಸ್ಥೆ ಮತ್ತು ಔದ್ಯಮಿಕ ಜಗತ್ತಿನ ಕುತಂತ್ರ, ಮಹಾನಗರದ ಕ್ರೌರ್ಯ, ನಗರದ ಸ್ವಾರ್ಥ ಬದುಕಿನೊಂದಿಗೆ ಮಾನವ ಸಂಬಂಧಗಳ ಪೊಳ್ಳುತನವನ್ನು ಚಿತ್ರಿಸುವ ಚಿತ್ತಾಲರ `ಶಿಕಾರಿ’ ಕಾದಂಬರಿಯ ಕೇಂದ್ರ ಪಾತ್ರವಾದ ನಾಗಪ್ಪ ಆಧುನಿಕತೆ ಹಾಗೂ ಬಂಡವಾಳಶಾಹಿಯ ಪರಿಣಾಮ ಅನುಭವಿಸುವ ತುಮುಲಗಳನ್ನು ಮತ್ತು ಆತನ ಬಾಲ್ಯದ ಅನುಭವಗಳ ಮೂಲಕ ನಿಯಂತ್ರಿಸಲ್ಪಡುವ ಆತ ಇತರರೊಂದಿಗೆ ಹೊಂದುವ ಸಂಬಂಧವನ್ನು, ಆ ಮೂಲಕ ಕೊನೆಗೆ ತಲುಪುವ ತೀರ್ಮಾನವನ್ನು ವಿಶ್ಲೆಷಣೆಗೊಳಪಡಿಸುವ ಮೂಲಕ ನಗರ ಬದುಕಿನ ಸಂಕೀರ್ಣತೆ, ಯಾಂತ್ರಿಕತೆ, ವಿಕೃತತೆ, ಆಧುನಿಕತೆಯ ತೊಂದರೆ, ದುಷ್ಪರಿಣಾಮಗಳನ್ನು ಅರಿಯ ಬಹುದು.
ಮನುಷ್ಯ ಮನುಷ್ಯನೊಡನೆ ಸಹಜವಾಗಿ ಮಾತನಾಡದೆ ಇನ್ನೊಬ್ಬರ ಒಳ್ಳೆಯ ಮನಸ್ಸನ್ನು ಅರಿಯಲು ವಿಫಲನಾಗಿ ಪರಸ್ಪರರಲ್ಲಿ ನಂಬಿಕೆಯ ಬದಲಾಗಿ ಭೀತಿಯನ್ನು ಹೊಂದುತ್ತಿದ್ದಾನೆ. ಪರಿಣಾಮವಾಗಿ ಹುಟ್ಟಿಕೊಂಡ ಮನುಷ್ಯ ಸಂಬಂಧಗಳ ಮನೋ ನೆಲೆಗಳ ಅಂತರಂಗದ ಭಯದ ಸ್ವರೂಪವನ್ನು ಇಲ್ಲಿ ಕಾಣಬಹುದು.
ತಮ್ಮ ಸ್ವಾರ್ಥ ಸಾಧನೆಗಾಗಿ ಸಂಘಟಿತರಾದ ಬೇಟೆಗಾರರ ತಂಡವು ಕಾದಂಬರಿಯ ನಾಯಕನಾದ ನಾಗಪ್ಪನನ್ನು ಬೇಟೆಯಾಡುತ್ತದೆ.ಕಂಪನಿಯ ರಾಸಾಯನಿಕ ಘಟಕವೊಂದಕ್ಕೆ ಬಿದ್ದ ಬೆಂಕಿಯ ಗಂಭೀರ ಆಪಾದನೆಯೊಂದನ್ನು ಕಾರಣವಾಗಿಟ್ಟುಕೊಂಡು ನಾಗಪ್ಪನನ್ನು ಸಸ್ಪೆಂಡ್ ಮಾಡುವುದರೊಂದಿಗೆ ಕಾದಂಬರಿ ಆರಂಭವಾಗುತ್ತದೆ.
ವ್ಯಕ್ತಿಯು ಬೆಳೆದ ಪರಿಸರ, ಆತನ ಚಿಂತನಕ್ರಮ ಹಾಗೂ ಜೀವನಾನುಭವಗಳು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಬೀರುವ ಪ್ರಭಾವವನ್ನು ನಾಗಪ್ಪನ ಪಾತ್ರವನ್ನು ವಿಶ್ಲೇಷಿಸುವ ಮೂಲಕ ಕಂಡು ಕೊಳ್ಳಬಹುದಾಗಿದೆ.ಇಲ್ಲಿಆತನ ಬಾಲ್ಯಾನುಭವವು ಆತನ ವರ್ತನೆಯನ್ನು ನಿಯಂತ್ರಿಸುವುದನ್ನು ನೋಡಬಹುದು.ಉದ್ಯೋಗದ ಪರಿಸರದಲ್ಲೂ ಆತನಿಗೆ ಬಾಲ್ಯದ ಅನುಭವದೊಡನೆ ಮುಖಾಮುಖಿ ಹೊಂದಲು ಸಾಧ್ಯವಾಗುತ್ತಿಲ್ಲ.
ನಾಗಪ್ಪ ಅಂತರ್ಮುಖಿಯಾದಾಗ ಟಿಪ್ಪಣಿ ಬರೆಯುತ್ತಾನೆ. ಹೊರಜಗತ್ತಿನೊಂದಿಗೆ ಸಂಪರ್ಕಕ್ಕೆ ಬಂದಾಗ ಆತ ಟಿಪ್ಪಣಿ ಬರೆಯುವುದು ಕಡಿಮೆಯಾಗುತ್ತದೆ.ನಾಗಪ್ಪ ಟಿಪ್ಪಣಿ ಬರೆಯುವುದು ಶಬ್ದಗಳ ಮೂಲಕ ಆತನ ಭಯವನ್ನು ಅಡಗಿಸಿಡುವ ಒಂದು ಪ್ರಯತ್ನ.ಕತೆ ಬರೆಯುವುದರ ಮೂಲಕ ಅಲ್ಲದೇನೇ ಬೇರೆಯಾವುದೇ ರೀತಿಯಿಂದ ಉಳಿದವರೊಡನೆ ಮಾತನಾಡುವ ಕಲೆಯೇ ಗೊತ್ತಿಲ್ಲವೆಂದು ಹೇಳುವ ನಾಗಪ್ಪ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲಿ; ಬೆಳೆದದ್ದು ಕೋಳಿ ಗಿರಿಯಣ್ಣನ ಕೇರಿಯಲ್ಲಿ.ಆತನ ಬಾಯಿಯಲ್ಲಿರುವ ಬೈಗುಳಗಳು ಈ ಕೋಳಿ ಗಿರಿಯಣ್ಣನಿಂದಲೇ ಕಲಿತಂತವುಗಳು.ಬಾವಿಯಲ್ಲಿ ಬಿದ್ದು ಸತ್ತ ತಂದೆಯ ನೆನಪು, ಎಂದೂ ನೋಡದೆ ಇದ್ದ ಅಣ್ಣ, ಮುಂಬಯಿಯ ಸದ್ದುಗದ್ದಲದಲ್ಲಿ ಕಳೆದು ಹೋದ ತಂಗಿ, ತಂದೆ ಆತನಿಗೆ ಬೆಂಕಿ ಹಚ್ಚಿಕೊಲ್ಲಲು ಮಾಡಿದ ಪ್ರಯತ್ನ ಇವುಗಳಿಂದಾಗಿ ನಾಗಪ್ಪ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಆತನ ಅಂತರ್ಮುಖಿ ವ್ಯಕ್ತಿತ್ವ ಹಾಗೂ ಏಕಾಂಗಿತನದ ಮೂಲ ಬೇರು ಆತನ ವ್ಯಕ್ತಿತ್ವದಲ್ಲೇ ಅಡಗಿದೆ.ಈ ಅಂತರ್ಮುಖತೆಯೇ ಕೊನೆಯಲ್ಲಿ ಆತನಿಗೆ ನೈಜ ಸಂಬಂಧದ ಮೂಲ ಶೋಧನೆಯ ನಿರ್ಣಯಕ್ಕೆ ಬರಲು ಸಹಕರಿಸುತ್ತದೆಯೇನೋ? ಮದುವೆಯ ವಯಸ್ಸು ಮೀರಿದ್ದರೂ ಮದುವೆಯಾಗದ ಈತ ಹುಡುಗಿಯರೊಂದಿಗೆ (ನೇಪಾಳಿ ರಾಣಿ, ಮೇರಿ) ಲೈಂಗಿಕ ಸಂಬಂಧವನ್ನೂ ಹೊಂದಿರುತ್ತಾನೆ. ವೃತ್ತಿಯಲ್ಲಿ ಭಡ್ತಿಯನ್ನು ಪಡೆದು ಅಮೇರಿಕಾಕ್ಕೆ ತೆರಳುವ ತಯಾರಿಯಲ್ಲಿದ್ದಾಗ ಸಸ್ಪೆಂಡ್ ಆದೇಶ ಬಂದುದು ನಾಗಪ್ಪನನ್ನು ದಿಗ್ಭ್ರಮೆಗೊಳಿಸುತ್ತದೆ. ಈ ಕೃತ್ಯಕ್ಕೆ ಡಿ.ಎಂ.ಡಿ, ಫಿರೋಜ್ ಬಂದೂಕವಾಲಾ, ಸೌಶೀರ್ ಪಟೇಲ್, ದಸ್ತೂರ್, ಹನೇಹಳ್ಳಿಯ ಶ್ರೀನಿವಾಸ, ಪತ್ರಕರ್ತ ಅರ್ಜುನ ರಾವ್, ಆಫೀಸಿನ ಮೇರಿ, ವಿಮಾನ ಪರಿಚಾರಿಕೆಯರಾದ ಡಯಾನಾ ಡ್ರೈವರ್, ಥ್ರೀಟಿ ಇರಾನೀ, ಆಂಗ್ಲೋ-ಇಂಡಿಯನ್‍ಟೆಲಿಫೋನ್ ಆಪರೇಟರ್ ರೀನಾ ಇವರ ವಿಶ್ವಾಸ ದ್ರೋಹವೇ ಕಾರಣವೆಂದು ತಿಳಿದಾಗ ಮನುಷ್ಯರ ಬಗೆಗಿನ ವಿಶ್ವಾಸವನ್ನೇ ನಾಗಪ್ಪ ಕಳೆದುಕೊಳ್ಳುತ್ತಾನೆ. ಪರಿಣಾಮ ತನ್ನನ್ನು ಶಿಕಾರಿ ಮಾಡಿದವರನ್ನು ಶಿಕಾರಿ ಮಾಡುವ ಹಂಬಲ ಈತನಲ್ಲಿ ಹುಟ್ಟಿಕೊಳ್ಳುತ್ತದೆ. ಈ ಸುಳ್ಳು ಸಂಬಂಧಗಳಿಂದ ಹೊರಬರಲು ಮಾನಸಿಕ ಹಾಗೂ ನೈತಿಕ ತಯಾರಿ ನಡೆಸುತ್ತಾನೆ. ಪ್ರತಿಯಾಗಿ ಫಿರೋಜ್ ಬಂದೂಕವಾಲ ಮತ್ತು ಶ್ರೀನಿವಾಸ ನಾಗಪ್ಪನ ಶಿಕಾರಿಗೆ ತೊಡಗುತ್ತಾರೆ. ಫಿರೋಜನು ಶ್ರೀನಿವಾಸ, ರೀನಾ, ಇರಾನೀ ಥ್ರೀಟಿ, ಮೊದಲಾದವರ ಮೂಲಕ ನಾಗಪ್ಪನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ಸಂಗ್ರಹಿಸಿ ಆ ಮೂಲಕ ನಾಗಪ್ಪನ ಮನೋಬಲವನ್ನೇ ನಾಶಪಡಿಸುತ್ತಾನೆ. ನಾಗಪ್ಪನ ತಾಂತ್ರಿಕ ಪರಿಣತಿ ಹಾಗೂ ಹದಿಮೂರು ದಿನಗಳಲ್ಲಿ ಆತ ಗಳಿಸಿಕೊಂಡ ಆತ್ಮವಿಶ್ವಾಸ ಬಂಡವಾಳಶಾಹಿ ಜಗತ್ತಿನಲ್ಲಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.
ನಾಗಪ್ಪ ಶ್ರೀನಿವಾಸನ ತಂದೆಯ ಷಂಡತನ, ನೇತ್ರಾವತಿಯ ಸಾವಿನ ಆರೋಪ ಮತ್ತು ಶಾರದೆಯ ಚೊಚ್ಚಲ ಮಗುವಿನ ಜನ್ಮರಹಸ್ಯವನ್ನು ಕಾದಂಬರಿಯ ಮೂಲಕ ಅನಾವರಣಗೊಳಿಸಲು ಸಿದ್ಧನಾದಾಗ ಶ್ರೀನಿವಾಸ ತನ್ನ ಘನತೆಗೆ ಕುಂದು ಬರುವುದನ್ನು ತಪ್ಪಿಸಲು ಆಕ್ರಮಣವೇ ಆತ್ಮ ರಕ್ಷಣೆಯ ಮಾರ್ಗವೆಂದು ತಿಳಿದು ನಾಗಪ್ಪನ ಭೂತಕಾಲವನ್ನು ಶೋಧಿಸಿ ಫಿರೋಜನೊಂದಿಗೆ ಸೇರಿ ಅವನ ಮೇಲೆ ಸಂಚನ್ನು ಹೂಡುತ್ತಾನೆ. ಎರಿಕ್ ಫ್ರಾಂನ `ವ್ಯಕ್ತಿಯ ಕ್ರೌರ್ಯಕ್ಕೆ ಅವನ ಅಂತರಂಗದ ಅಭದ್ರತೆ (ಎಲ್ಲಿ ತನಗೆ ಅಪಾಯವಾಗುವುದೋ ಎಂಬ ಭಯ), ಪ್ರೀತಿಯ ಅವಶ್ಯಕತೆ(ತನಗೆ ಯಾರೂ ಇಲ್ಲ ಎಂಬ ಅಭದ್ರತೆ) ಮತ್ತು ಭಾವ ಶೂನ್ಯತೆಗಳೇ ಕಾರಣ’ ಎಂಬ ವಿಚಾರ ಇಲ್ಲಿ ಪುಷ್ಟೀಕರಣಗೊಳ್ಳುತ್ತದೆ. ತನ್ನ ವಿವರಗಳನ್ನು ಎಲ್ಲಿ ನಾಗಪ್ಪ ಹೊರ ಹಾಕುವನೋ ಎಂದು ಅಂತರಂಗದಲ್ಲಿ ಭಯ ಪಡುವ ಶ್ರೀನಿವಾಸ ಹಾಗೂ ತಂತ್ರಜ್ಞಾನದ ಬಗೆಗೆ ಅರಿವಿನ ಕೊರತೆಯನ್ನು ಹೊಂದಿದ ಫಿರೋಜ್‍ಜೊತೆಯಾಗಿ ನಾಗಪ್ಪನ ವಿರುದ್ಧ ಸಂಚು ರೂಪಿಸುತ್ತಾರೆ.
ಆತನಿಗೆ ತನಿಖೆಯ ಸಂದರ್ಭದಲ್ಲಿ ಹಿತೈಷಿಯೆಂದು ತಿಳಿದ ಮೇರಿಗಿಂತ ಗಗನಸಖಿ ಥ್ರೀಟಿ ಇರಾನಿ ಹೆಚ್ಚು ಉತ್ತಮಳೆನಿಸುತ್ತದೆ.ಶ್ರೀನಿವಾಸನ ತಾಯಿ ಪದ್ದಕ್ಕ, ಮೇರಿ, ರೀನಾ, ಥ್ರೀಟಿ ಇರಾನಿ, ಡಯಾನಾರಿಂದಾದ ವಿಶ್ವಾಸಘಾತವು ಬಂಡವಾಳಶಾಹಿ ವ್ಯವಸ್ಥೆಯು ಗಂಡು-ಹೆಣ್ಣು ಎಂಬ ಭಿನ್ನತೆಯಿಲ್ಲದೆ ಎಲ್ಲರನ್ನೂ ಹೃದಯಶೂನ್ಯರನ್ನಾಗಿಸುತ್ತದೆ ಎಂಬ ಅರಿವನ್ನು ಮೂಡಿಸುತ್ತದೆ.ಆತನನ್ನು ಸಸ್ಪೆಂಡ್ ಮಾಡಲು ನಡೆಸಿದ ವಿಚಾರಣೆಯ ನಾಟಕ ಅವನಲ್ಲಿ ಧೈರ್ಯವನ್ನು ಮೂಡಿಸುತ್ತದೆ.ಆತ ಮೇರಿ ಜೊತೆ ಹೇಳುವ “ನಾನು ರಾಜೀನಾಮೆಯನ್ನು ಕೊಟ್ಟಿದ್ದು ಬರೀ ನೌಕರಿಗಲ್ಲ ಮೇರೀ. ಹೀಗೆ ಬರಿಯೆ ನಮ್ಮ ನಮ್ಮ ಸ್ವಾರ್ಥಕ್ಕಾಗಿ, ಭಯಗಳಿಗಾಗಿ ಒಬ್ಬರನ್ನೊಬ್ಬರು ಉಪಯೋಗಿಸಿ ಕೊಳ್ಳುವಂತೆ ಮಾಡುವ ಈ ವ್ಯಾವಹಾರಿಕ ಲೋಕಕ್ಕೆ!” (ಪು. 240) ಎಂದು ತಾನು ರಾಜೀನಾಮೆ ಕೊಟ್ಟದ್ದು ಕೇವಲ ಕೆಲಸಕ್ಕಲ್ಲ; ಬದಲಾಗಿ ಆ ಕೆಲಸವು ಪ್ರತಿನಿಧಿಸುವ ಸ್ವಾರ್ಥ ಮೂಲವಾದ ವ್ಯಾವಹಾರಿಕ ಜಗತ್ತಿಗೆಂದು ಸಮಾಧಾನಪಟ್ಟು ಕೊಳ್ಳುತ್ತಾನೆ. ಈ ಮೂಲಕ ನಾಗಪ್ಪನು ಮಾನಸಿಕ ರಕ್ಷಣಾ ತಂತ್ರವಾದ `ತರ್ಕೀಕರಣ’ (Rationalization)’ದ ಮೊರೆ ಹೋಗುವುದನ್ನು ಗುರುತಿಸ ಬಹುದಾಗಿದೆ. ಹೀಗೆ ಆತನು ತನ್ನ ನಡತೆಯನ್ನು ಸಮರ್ಥಿಸಿಕೊಂಡು ಮಾನಸಿಕ ಒತ್ತಡದಿಂದ ಹೊರಬಂದು ಮಾನಸಿಕ ಸ್ಥಿಮಿತತೆಯನ್ನು ಉಳಿಸಿಕೊಳ್ಳುತ್ತಾನೆ.
ಎಂ.ಡಿಯ ಕಾರ್ಯದರ್ಶಿಯಾದ ಮೇರಿಯು ಮೊದಲು ನಾಗಪ್ಪನ ಹಿತಚಿಂತಕಳಾಗಿದ್ದರೂ ಕೊನೆಯಲ್ಲಿ ಫಿರೋಜನವರೊಂದಿಗೆ ಸೇರಿಕೊಂಡು ನಾಗಪ್ಪನ ನಂಬಿಕೆಗೆ ದ್ರೋಹವನ್ನು ಬಗೆಯುತ್ತಾಳೆ.ಬಂಡವಾಳಶಾಹಿ ಜಗತ್ತಿನಲ್ಲಿ ಹಣವೇ ಪ್ರಧಾನವಾದುದು ಹಾಗೂ ಅದಕ್ಕಾಗಿ ವ್ಯಕ್ತಿ ಏನು ಬೇಕಾದರೂ ಮಾಡುತ್ತಾನೆ ಎಂಬುದನ್ನು ನಾಗಪ್ಪನಿಗೆ ಆತನ ಸುತ್ತಲಿನ ಸಂಬಂಧಗಳು ತಿಳಿಸಿಕೊಡುತ್ತವೆ. ಇದರಿಂದಾಗಿ ನಾಗಪ್ಪನು ತನ್ನಂತರಂಗದ ಭಾವನೆಗಳನ್ನು ಹೇಳಿಕೊಳ್ಳಬಲ್ಲ ಆತ್ಮೀಯರಿಲ್ಲದ ಕೊರತೆಯಿಂದ ಯಾತನೆಯನ್ನು ಅನುಭವಿಸುತ್ತಾನೆ.
ಕಾದಂಬರಿಯ ಕೇಂದ್ರ ಪಾತ್ರವಾದ ನಾಗಪ್ಪನು ಬಾಲ್ಯದ ಅನುಭವಗಳಿಂದ ಪ್ರತಿಭಟನೆಗೆ ಬೇಕಾದ ಪ್ರಬಲ ನೈತಿಕ ಧೈರ್ಯವನ್ನು ಹೊಂದಿರುವುದಿಲ್ಲ. ಹೀಗಿರುವಾಗ, ಆತನು ಬಲಿಯಾದ ಸಂಚು ಈ ಮೂಲಕ ಆತ ಅನುಭವಿಸುವ ಮಾನಸಿಕ ಯಾತನೆ, ಒತ್ತಡ, ತಳಮಳ, ನೋವು, ಆತಂಕ ಹಾಗೂ ಸೋಲಿನ ಭಯಗಳು ಆತನು ಮನುಷ್ಯರಲ್ಲಿ ನಂಬಿಕೆ ಕಳೆದುಕೊಂಡು ಯಾರನ್ನೂ ನಂಬಲಾರದ ಸ್ಥಿತಿಯನ್ನು ತಲುಪುವಂತೆ ಮಾಡುತ್ತದೆ.
ನಾಗಪ್ಪನಅಂತರ್ಮುಖಿ ವ್ಯಕ್ತಿತ್ವ ಅಥವಾ ಏಕಾಂಗಿತನಕ್ಕೆ ಆತನ ತಂದೆಯ ಹೇಡಿತನ, ವಿಕ್ಷಿಪ್ತ ಪ್ರವೃತ್ತಿ, ಅಸ್ತಿತ್ವವನ್ನೇ ಅಳಿಸ ಹೊರಟ ಅಪ್ಪನ ಕೃತ್ಯ, ಬಾಲ್ಯದ ಅನುಭವ ಮತ್ತು ಪರಿಸರ, ಬಾಲ್ಯದಲ್ಲಿ ನಡೆದ ಬೆಂಕಿಯ ಅಪಘಾತದ ಪ್ರಭಾವ; ಇದು ಆತನಲ್ಲಿ ಬೆಂಕಿಯ ಬಗ್ಗೆ ಭಯವನ್ನು ಮೂಡಿಸಿದ್ದು., ಬಾಲ್ಯದ ಸಂಬಂಧಗಳ ಅಸ್ಪಷ್ಟತೆ, ಮಹಾನಗರದ ಕ್ರೌರ್ಯ, ಸಂಬಂಧಗಳ ಪೊಳ್ಳುತನ, ಔದ್ಯಮಿಕ ಜಗತ್ತಿನ ಕುತಂತ್ರ, ಹುಟ್ಟು ಹಾಗೂ ಜಾತಿಯ ಕಾರಣದಿಂದಾಗಿ ಆತ ಎದುರಿಸುವ ಸಮಸ್ಯೆಗಳೇ ಕಾರಣ.
ಹೀಗೆ ನಾಗಪ್ಪನನ್ನು ಸುತ್ತುವರಿದಿರುವ ಸುಳ್ಳು ಸಂಬಂಧಗಳು ಹಾಗೂ ಆ ಮೂಲಕ ಹುಟ್ಟುವ ಸ್ವಾರ್ಥದ ಪರಿಣಾಮಗಳನ್ನು ಚಿತ್ರಿಸುವ ಈ ಕಾದಂಬರಿಯು ಎರಿಕ್ ಫ್ರಾಂನ `ಮನುಷ್ಯ ಮೂಲಭೂತವಾಗಿ ಸ್ವಾರ್ಥಿಯಲ್ಲ. ಆದರೆ ಆಧುನಿಕ ಬದುಕಿನಲ್ಲಿ ಮನುಷ್ಯಜೀವಂತ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗದೆ ಏಕಾಂಗಿತನವನ್ನು ಅನುಭವಿಸುತ್ತಾನೆ. ಈ ಸಮಸ್ಯೆಗೆ ಒಂದೇ ಪರಿಹಾರ ಮನುಷ್ಯ ಪ್ರೀತಿಸುವುದನ್ನು ಕಲಿಯುವುದು’ ಎನ್ನುವುದನ್ನು ಕಾದಂಬರಿಯ ಕೊನೆಯಲ್ಲಿ ನಾಗಪ್ಪ ತೆಗೆದು ಕೊಳ್ಳುವ ನಿರ್ಧಾರ ದೃಢೀಕರಿಸುತ್ತದೆ. “ನನ್ನ… ಮಟ್ಟಿಗೆ… ಇನ್ನೂ… ಕಂಡಿರದ… ಅಣ್ಣನನ್ನು… ಕಾಣೆಯಾದ… ತಂಗಿಯನ್ನು ಹುಡುಕಿ ತೆಗೆಯುವದೇ… ನನ್ನ… ಇನ್ನು ಮುಂದಿನ… ಆಯುಷ್ಯದ… ಗುರಿಯಾಗಬೇಕು…” (ಪು. 248) ಈ ಮೂಲಕ ನಾಗಪ್ಪ ಸುಳ್ಳು ಸಂಬಂಧಗಳ ಸಿಕ್ಕುಗಳನ್ನು ಬಿಡಿಸಿಕೊಂಡು ಸ್ವಾರ್ಥದ ವ್ಯವಸ್ಥೆಯನ್ನೇ ತಿರಸ್ಕರಿಸಿ ಪ್ರೀತಿಯ ಮೇಲೆ ನಿಂತ ನೈಜ ಸಂಬಂಧಗಳನ್ನು ಹುಡುಕುತ್ತ ಹೊರಡುತ್ತಾನೆ. ಹೀಗೆ ತನ್ನ ಇರವಿನ ಪ್ರಸ್ತುತತೆಯನ್ನು ಹುಡುಕಿ ಹೊರಟ ನಾಗಪ್ಪನ ನಿರ್ಧಾರ ಆಧುನಿಕ ನಗರದಲ್ಲಿ ಸಂಬಂಧಗಳ ಬೆಸುಗೆ ಹಾಕಬೇಕಾದ ಅನಿವಾರ್ಯತೆಯನ್ನೂ ಸೂಚಿಸುತ್ತದೆ.
ನಾಗಪ್ಪನ ಯೋಚನೆಯಲ್ಲಿ ಹಾದು ಹೋಗುವ “ಈ ಎಲ್ಲ ಸುಳ್ಳು ಸಂಬಂಧಗಳನ್ನು, ಮನುಷ್ಯನನ್ನೇ ಸುಳ್ಳುಮಾಡುವ ಈ ಸಂಬಂಧಗಳನ್ನು ಕಡಿಯುತ್ತ ಹೋಗಬೇಕು ಅಂದರೇನೇ ನಿಜವಾದ ನಿಃಸ್ಪøಹವಾದ ಸಂಬಂಧಗಳು ಹುಟ್ಟ ಬಹುದೇನೋ.ಯಾವುದೋ ರೀತಿಯ ಸ್ವಾರ್ಥಕ್ಕೆ, ಹಿತಾಸಕ್ತಿಗಳ ರಕ್ಷಣೆಗೆ ಕಟ್ಟಿಬಿದ್ದಿರದ ಸಂಬಂಧಗಳು ಇದ್ದಲ್ಲಿ ಮಾತ್ರ ಮನುಷ್ಯನೇ ಮನುಷ್ಯನ ಹಿಂಸೆಗೆ ಕಾರಣವಾಗುವುದು ತಪ್ಪಬಹುದೇನೋ…” (ಪು. 106-107) ಮತ್ತು “ದೀರ್ಘಕಾಲದ ಸಂಬಂಧವೆಂದರೆ ಯಾವುದಾದರೂ ವ್ಯಾವಹಾರಿಕ ಸನ್ನಿವೇಶದಲ್ಲಿ ಬೇರು ಬಿಟ್ಟದ್ದೇನೋ. ಸ್ವಾರ್ಥದ ಸಂರಕ್ಷಣೆಯ ಗರಜಿನಿಂದ ಸುಳ್ಳಾದದ್ದೇನೋ…” (ಪು. 124) ಎಂಬ ಮಾತುಗಳು ಆಧುನಿಕ ಜಗತ್ತಿನಲ್ಲಿ ವ್ಯಕ್ತಿ-ವ್ಯಕ್ತಿಯು ಹೊಂದಬೇಕಾಗಿರುವ ಸಂಬಂಧಗಳ ಸ್ವರೂಪದ ಪೂರ್ಣ ಹೊಳಹನ್ನು ನೀಡುತ್ತವೆ ಎಂದು ಕೊಳ್ಳ ಬಹುದೆಂದೆನಿಸುತ್ತದೆ.