ದುರ್ಗಪ್ಪ ಕೋಟಿಯವರ್ ಅವರಿಗೆ ಡಾಕ್ಟರೇಟ್ ಪದವಿ
ಮುಂಬಯಿ: ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ದುರ್ಗಪ್ಪ ಯ. ಕೋಟಿಯವರ್ ಅವರು ಬರೆದು ಸಲ್ಲಿಸಿದ ಪಿಎಚ್.ಡಿ ಮಹಾಪ್ರಬಂಧ ʼಮುಂಬಯಿ ಕನ್ನಡ ಗದ್ಯ ಸಾಹಿತ್ಯʼ ಎಂಬ ವಿಷಯಕ್ಕೆ ಮುಂಬಯಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ದುರ್ಗಪ್ಪ ಅವರು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಸಿದ್ಧಪಡಿಸಿ ಮುಂಬಯಿ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಪದವಿಗಾಗಿ ಸಾದರ ಪಡೆಸಿದ್ದರು.
ಸಾಹಿತ್ಯವಲಯವಾಗಿ ಮುಂಬಯಿ ನಾಡಿನ ಗಮನ ಸೆಳೆದಿದ್ದು ಕಳೆದ 150ವರ್ಷಗಳಲ್ಲಿ ರಚನೆಯಾದ ಗದ್ಯ ಕೃತಿಗಳ ಮೇಲೆ ಬೆಳಕು ಚೆಲ್ಲಿರುವುದು ಈ ಮಹಾಪ್ರಬಂಧದ ವೈಶಿಷ್ಟ್ಯವೆಂದು ಮಾರ್ಗದರ್ಶಕರು ಸಂತಸ ವ್ಯಕ್ತ ಪಡಿಸಿದ್ದಾರೆ.
ದುರ್ಗಪ್ಪಕೋಟಿಯವರ್ ಅವರು ಸೊಲ್ಲಾಪುರ ಜಿಲ್ಲೆಯವರು. ಸೊಲ್ಲಾಪುರ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಇವರು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥರಾದ ಡಾ.ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಎಂ.ಫಿಲ್ ಪದವಿ ಪಡೆದು, ಆ ಸಂಪ್ರಬಂಧವನ್ನು ಅಭಿಜಿತ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ದುರ್ಗಪ್ಪ ಅವರು ಒಳಹೊರನಾಡಿನ ಪತ್ರಿಕೆಗಳಿಗೆ ಅನೇಕ ಲೇಖನಗಳನ್ನು ಬರೆದು ಪ್ರಕಟಿಸುತ್ತಾ ಬಂದಿರುತ್ತಾರೆ. ಮುಂಬಯಿಯ ಸಂಘಸಂಸ್ಥೆಗಳಲ್ಲಿ ಸದಸ್ಯರಾಗಿ ಕನ್ನಡದ ಕೈಂಕರ್ಯಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದ್ಯ ಅವರು ಮುಂಬಯಿ ಮಹಾನಗರ ಪಾಲಿಕೆಯ ಶಿವಡಿ ಮುನ್ಸಿಪಲ್ ಕನ್ನಡ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.